ನಕ್ಸಲ್ ವಿದ್ಯಮಾನ-ಬೇಸರದ ಟಿಪ್ಪಣಿಗಳು

ಕಟುಸತ್ಯ ಏನೆಂದರೆ ನಕ್ಸಲರು ಮುಖ್ಯವಾಹಿನಿಗೆ ಬಂದದ್ದು ಅವರದ್ದೇ ಒಂದು ರಾಜಕೀಯ ತೀರ್ಮಾನವಾಗಿತ್ತೇ ವಿನ: ಅದರಲ್ಲಿ ನಮ್ಮಗಳ ಪಾತ್ರ ನಿಮಿತ್ತವಾಗಿರುತ್ತದೆ ಎಂಬುದು ನಮಗೆ ತಿಳಿದಿತ್ತು.ನಾವು ಸೇತುವೆಯಂತೆ ಕ್ಯೆಜೋಡಿಸಿದ್ದೆವಷ್ಟೆ.

ನಕ್ಸಲ್ ವಿದ್ಯಮಾನ-ಬೇಸರದ ಟಿಪ್ಪಣಿಗಳು

ಪಾರ್ವತೀಶ ಬಿಳಿದಾಳೆ

 

 

     ಪಶ್ಚಿಮ ಘಟ್ಟದ ದಟ್ಟಾರಣ್ಯದಲ್ಲಿ ಅಡಗಿ ಭೂಗತ ಸಶಸ್ತ್ರ ಹೋರಾಟ ನಡೆಸುತ್ತಿದ್ದ ಮಾವೋವಾದಿ ನಕ್ಸಲರು ಮುಖ್ಯ ವಾಹಿನಿಗೆ ಬಂದು ಇಲ್ಲಿಗೆ 10 ತಿಂಗಳಾಯಿತು.( 8-1-2025 ರಂದು ಹೊರಬಂದದ್ದು ). ಕರ್ನಾಟಕ ಸರ್ಕಾರ 14-3-2024 ರಲ್ಲಿ ರಚಿಸಿದ ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಸಮಿತಿಯ ಸದಸ್ಯನಾಗಿ ನಾನು, ಬಂಜಗೆರೆ ಜಯಪ್ರಕಾಶ್ ಮತ್ತು ಶ್ರೀಪಾಲ್  ಅದಕ್ಕಾಗಿ ಒಂದೂವರೆ ವರ್ಷ ಕೆಲಸ ಹಂಚಿಕೊಂಡು ಓಡಾಡಿದ್ದೆವು. ನಾನೂ,  ಬಂಜಗೆರೆ ಈ ನಕ್ಸಲರ ಜಾಡು ಹಿಡಿದು ಕೇರಳ ರಾಜ್ಯದ ಹಲವೆಡೆ ಓಡಾಡಿ ಬಂದೆವು. ಮ್ಯೆಸೂರಿನ ಸ್ವಾಮಿ ಆನಂದ್, ಕೊಡಗಿನ ಗೆಳೆಯ ಆಲಿ ಒಂದೆರಡು ಬಾರಿ ಜೊತೆಗಿದ್ದರು.

    ನಮ್ಮ ಕೆಲಸದಲ್ಲಿ ಜ್ಯೆಲುಗಳಲ್ಲಿದ್ದ ನಕ್ಸಲರನ್ನು ಭೇಟಿಯಾದೆ. ಅಂಡರ್ ಗ್ರೌಂಡ್ ಕೇಡರ್ ಗಳು, ನಕ್ಸಲರ ಸಂಪರ್ಕವಿದ್ದ ನಾಗರಿಕರು, ಸಹಾನುಭೂತಿ ಇದ್ದವರು,  ವಿಮರ್ಶೆ - ಬೆಂಬಲ ಜೊತೆಯಾಗಿ ಒದಗಿಸುತ್ತಿದ್ದವರು, ನಕ್ಸಲರ ಚಲನವಲನಗಳ ಬಗ್ಗೆ ಮಾಹಿತಿ ಇದ್ದರೂ ಅವರಿಂದ ಅಂತರ ಕಾಯ್ದುಕೊಂಡು ಪೊಲೀಸರಿಗೂ ಏನು ಹೇಳದೆ ಇದ್ದವರು, ಹೀಗೆ ಹಲವು ಸ್ತರದ, ವಿಧವಿಧ ವಿನ್ಯಾಸದ ಜನರನ್ನು ನಾವು ಹಾದು ಬಂದೆವು.

    ಹಾಗೆ ಭೇಟಿಯಾದವರಲ್ಲಿ ಕೆಲವರು ನಮ್ಮದೇ ಸುತ್ತಲಿನ ಜನಜೀವನದ  ಜನಪ್ರಿಯ ಮಾಸ್ ಲೀಡರ್ ಗಳೂ ಇದ್ದರು.ಉಡುಪಿ ಜಿಲ್ಲೆಯ ಹೆಬ್ರಿಯ ಸೀತಾ ನದಿ ರಮೇಶ ಹೆಗ್ಡೆ ಅವರಲ್ಲೊಬ್ಬರು.  ಅವರೀಗ ಇಲ್ಲ.ಕಳೆದ ಸೆಪ್ಟೆಂಬರ್ 24 ರಂದು ಹೆಬ್ರಿಯ ಕೈಕಂಬದ ಬಳಿಯ ತಮ್ಮ ತೋಟದ ಮನೆಯಲ್ಲಿ ರಮೇಶ್ ಹೆಗ್ಡೆ ಯಾವ ಪೂರ್ವ ಸೂಚನೆಯೂ ಇರದೆ, ಸಾವಿನ ಮನೆಯತ್ತ ಹೋಗಬೇಕಾದ ವಯಸ್ಸು ಅಲ್ಲದ ಸಮಯದಲ್ಲಿ ಹೃದಯಸ್ತಂಬನದಿಂದ ಜೀವ ಚೆಲ್ಲಿದ್ದಾರೆ.

 

ಸೀತಾ ನದಿ ರಮೇಶಣ್ಣ (58)

      ಬಂಟ ಸಮುದಾಯದ ಸೀತಾ ನದಿ ರಮೇಶ ಹೆಗ್ಡೆ ತನ್ನ ಊರಿನ ಆಸುಪಾಸಿನ ಜನರಿಗೆ ಮಾತ್ರವಲ್ಲ ಮ್ಯೆಲುಗಳಾಚೆಯ ಎಲ್ಲರಿಗೂ ಬೇಕಾದಂತಹ ದೊಡ್ಡ ಮಟ್ಟದ ನಾಯಕರಾಗಿದ್ದರು.  ದೃಢ ನಿರ್ಧಾರ ಮಾಡಿ ನೇರ ಅಖಾಡಕ್ಕೆ ಇಳಿದಿದ್ದರೆ ಇವತ್ತು ಕಾರ್ಕಳದಲ್ಲಿ ಸುನೀಲ್ ಕುಮಾರ್ ಬದಲಿಗೆ ಕಾಂಗ್ರೆಸ್ ಶಾಸಕರೂ ಆಗಿರಬಹುದಿತ್ತೇನೊ.

     2024 ರ ಡಿಸೆಂಬರ್ 28 ನೇ ತಾರೀಕು  ಹೆಬ್ರಿಗೆ ಹೋದ ನಾನು  ರಮೇಶ ಹೆಗ್ಡೆ ಅವರನ್ನು ಭೇಟಿಯಾಗಿದ್ದೆ.  ನಕ್ಸಲರ ಜೊತೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಬಂಧ ಹೊಂದಿರುವ ಅಥವಾ ಚಲನವಲನಗಳ ಬಗ್ಗೆ ಮಾಹಿತಿ ಇರಬಹುದಾದವರ ಪಟ್ಟಿಯೊಂದನ್ನು ರಾಜ್ಯ ಪೋಲಿಸ್ ಗೂಢಚರ್ಯೆ ವಿಭಾಗದ ಉನ್ನತ  ಅಧಿಕಾರಿಯೊಬ್ಬರು  ನನಗೆ ನೀಡಿದ್ದರು.  ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಿಗೆ ಸೇರಿದ ಹಲವು ಜನರ ಹೆಸರು ವಿವರಗಳು ಅದರಲ್ಲಿದ್ದವು.  ಪಟ್ಟಿಯಲ್ಲಿದ್ದ ಹಲವರನ್ನು ನಾನು ಭೇಟಿ ಮಾಡಿದ್ದೇನೆ.  ಅಂತವರಲ್ಲಿ ಸೀತಾ ನದಿ ರಮೇಶ್ ಹೆಗ್ಡೆಯವರು ಒಬ್ಬರಾಗಿದ್ದರು.

      ಅದೇ ತಾನೆ 2024 ರ ನವೆಂಬರ್ ಕೊನೆಯ ವಾರದಲ್ಲಿ ನಕ್ಸಲ್ ವಿಕ್ರಂ ಗೌಡ್ಲು ಎನ್ಕೌಂಟರ್ ಹತ್ಯೆ ಸಂಭವಿಸಿತ್ತು. ಕಾಡಿನೊಳಗಿದ್ದ ಉಳಿದ  ನಕ್ಸಲರೊಂದಿಗೆ ಸಂಪರ್ಕ ಸಾಧಿಸಿ ಅವರನ್ನು ಮುಖ್ಯ ವಾಹಿನಿಗೆ ಕರೆತರುವ ನಮ್ಮ ಪ್ರಯತ್ನ  ತೀವ್ರಗೊಂಡಿತ್ತು.  ಆ ವಿಚಾರದಲ್ಲಿ ರಮೇಶ್ ಹೆಗ್ಡೆಯವರ ಸಹಾಯ ಮತ್ತು ಮಾರ್ಗದರ್ಶನ ಕೇಳಲು ನಾವು  ಹೋಗಿದ್ದೆವು. ನಾವು ಮಾತಿಗೆ ಕುಳಿತಾಗ ರಮೇಶ್ ಹೆಗ್ಡೆಯವರು ಒಂದು ಕ್ಷಣವೂ ಹಿಂಜರಿಯದೆ, ಯಾವುದೇ ಮುಚ್ಚು ಮರೆ ಮಾಡದೆ ತಮಗೆ ನಕ್ಸಲರ ಚಲನವಲನಗಳ ಬಗ್ಗೆ ಮಾಹಿತಿ ಇರುವುದನ್ನು ಒಪ್ಪಿಕೊಂಡರು. ಅದರರ್ಥ ಅವರು ನಕ್ಸಲ್ ಸಶಸ್ತ್ರ ಹೋರಾಟದ ಬೆಂಬಲಿಗರಾಗಿದ್ದರು ಎಂದಲ್ಲ.  ಹೆಬ್ರಿ- ಕಾರ್ಕಳದ ಸುತ್ತಮುತ್ತ ದಟ್ಟ ಅರಣ್ಯದ ಒಳಗಿನ ಅಧಿವಾಸಿಗಳ ಪ್ರತಿ ಮನೆಯವರ ಒಡನಾಟ ಅವರಿಗಿತ್ತು. ಆದಿವಾಸಿಗಳ ಎಲ್ಲಾ ಕಷ್ಟ ಸುಖಗಳಿಗೆ, ಅರಣ್ಯ ಇಲಾಖೆಯವರೊಂದಿಗಿನ ನಿತ್ಯ ಜಗಳಗಳಿಗೆ, ಅನಾರೋಗ್ಯ, ಉದ್ಯೋಗ, ಕೃಷಿ ಕಷ್ಟಗಳು, ರಸ್ತೆ, ಶಾಲೆ ಹೀಗೆ ಯಾವುದೇ ಸಮಸ್ಯೆಗಳು ಬಂದರೂ ಅಲ್ಲಿನ ಜನ ಮೊದಲು ನೆನಪಿಸಿಕೊಳ್ಳುವುದು ರಮೇಶ್ ಹೆಗ್ಡೆ ಅವರನ್ನು.

     ಅವತ್ತು ರಮೇಶ್ ಹೆಗ್ಡೆ  ಮನೆಯ ಪಡಸಾಲೆಯಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಾ ತಾನು ನಕ್ಸಲರೊಂದಿಗೆ ಮಾತನಾಡಿದ ಹಲ ಸಂದರ್ಭ ವಿವರಿಸಿದ್ದರು. ತೋಟದ ಕೆಲಸಗಾರನಂತೆ ನಕ್ಸಲ್ ವಿಕ್ರಂ ಗೌಡ್ಲು ಉಡುಪು ಧರಿಸಿ  ಬಂದು  ಗುಟ್ಟಾಗಿ ಅವರನ್ನು ಭೇಟಿ ಮಾಡಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ ಹೋಗಿದ್ದ ಒಂದೆರಡು ಘಟನೆಗಳನ್ನು ವಿವರಿಸಿದ್ದರು.

   ವಿಕ್ರಂ ಗೌಡ್ಲು ಸಾವಿನ ಸಮಯದಲ್ಲಿ ಮಹಜರ್, ಪೋಸ್ಟ್ ಮಾರ್ಟಂನಿಂದ ಹಿಡಿದು ಅಂತಿಮ ಸಂಸ್ಕಾರ ನಡೆಯುವವರೆಗೂ  ಕುಟುಂಬದವರೊಂದಿಗೆ ಇದ್ದದ್ದು ಇದೇ ರಮೇಶ್ ಹೆಗ್ಡೆ.  ಅರಣ್ಯದೊಳಗೆ ಅಡಗಿದ್ದ ನಕ್ಸಲರನ್ನು ಸಂಪರ್ಕಿಸಲು ನಾವು ಕ್ರಮಿಸಬೇಕಾದ ಹಾದಿ, ಕಾಣಬೇಕಾದ  ಹಲವು ಜನರ ವಿವರಗಳನ್ನು ಅಂದು ಒದಗಿಸಿದ್ದರು. ಎಲ್ಲರೂ ಸುರಕ್ಷಿತವಾಗಿ ಮುಖ್ಯ ವಾಹಿನಿಗೆ ಬಂದು ಬಿಡಲಿ ಎಂದು ಮನ:ಪೂರ್ವಕವಾಗಿ ಆಶಿಸಿದ್ದರು.

 

      ಅವರನ್ನು ಭೇಟಿ ಮಾಡಿದ ಹತ್ತೇ ದಿವಸದಲ್ಲಿ ನಕ್ಸಲರು ಮುಖ್ಯ ವಾಹಿನಿಗೆ ಬಂದೇ ಬಂದರು.  ಆಗ ನಾನು ರಮೇಶ್ ಹೆಗ್ಡೆಯವರನ್ನು ಸಂಪರ್ಕಿಸಿ ನಡೆದ ವಿದ್ಯಮಾನಗಳನ್ನು ವಿವರಿಸಿ ಅವರ ನೆರವಿಗೆ ಥ್ಯಾಂಕ್ಸ್ ಹೇಳಿದ್ದೆ.

     ರಮೇಶ್ ಹೆಗ್ಡೆ ಹೃದಯಪೂರ್ವಕವಾಗಿ ಸ್ಪಂದಿಸಿದರು. ಮುಖ್ಯ ವಾಹಿನಿಗೆ ಬಂದವರ ಆರೋಗ್ಯದ ಸ್ಥಿತಿ, ಯೋಗ ಕ್ಷೇಮ, ಅವರ ಕುಟುಂಬದವರ ಬಗೆಗಿನ ವಿವರ,  ಸಿಗಬಹುದಾದ ಕಾನೂನಿನ ನೆರವು ಮುಂತಾದ ವಿಚಾರಗಳ ಬಗ್ಗೆ  ಮಾಹಿತಿಗಳನ್ನು ಕೇಳಿ ತಿಳಿದುಕೊಂಡಿದ್ದರು. ಜನರ ನೋವಿಗೆ ಮಿಡಿಯುತ್ತಿದ್ದ ರಮೇಶ್ ಹೆಗ್ಡೆ ಅವರ ಹೃದಯ ಅದೆಷ್ಟು ಬಳಲಿತ್ತೋ....

 ಅವರ ಸಾವು ಹೆಬ್ರಿ-ಕಾರ್ಕಳ ಸುತ್ತಲಿನ ಸಾವಿರಾರು ಜನ ಆದಿವಾಸಿಗಳಿಗೆ ಅಪಾರ ನೋವು  ಮಾಡಿದೆ. ಅನಾಥ ಭಾವನೆಯನ್ನು ತಂದಿದೆ.

ಮದುವೆಯ ಮನೆಯಲ್ಲಿ ಕಂಡ ಕ್ರಾಂತಿಕಾರಿಗಳು

      ಕಳೆದ ಆಗಸ್ಟ್ ಕೊನೆಯಲ್ಲಿ ನಾನು ಬಹಳ ಇಷ್ಟಪಡುವ ಗೆಳೆಯನ ಮಗನ ಮದುವೆಗೆಂದು ಮಂಡ್ಯಕ್ಕೆ ಹೋಗಿದ್ದೆ. ಮದುವೆಯ ಜೋಡಿ ಭಿನ್ನ ಜಾತಿ. ಸರಳ ಮದುವೆಯದು. ಸಾಹಿತಿಗಳು, ಪ್ರಗತಿಪರರು, ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಅಂತೆಯೇ ಹಿಂದೆ ನಕ್ಸಲ್ ಚಳುವಳಿಯಲ್ಲಿದ್ದು ಅರೆಸ್ಟ್ ಆಗಿ ಜೈಲಲ್ಲಿ ಇದ್ದವರು, ನಕ್ಸಲ್ ಸಹಾನುಭೂತಿಪರರು ಹೋರಾಟಗಾರರು ಸಹ ಅಲ್ಲಿ ಬಂದಿದ್ದರು.  (ಕರ್ನಾಟಕದ ನಕ್ಸಲ್ ಪಾರ್ಟಿಯು ಒಡೆದುಹೋದಾಗ ಇವರನ್ನು ಮೆಜಾರಿಟಿ ಬಣ ಎಂದು ಗುರುತಿಸಲಾಗುತ್ತದೆ. ನೂರ್ ಶ್ರೀಧರ-ಡಾ. ವಾಸುನ ಜನಶಕ್ತಿ ಗುಂಪನ್ನು ಮ್ಯೆನಾರಿಟಿ ಬಣ ಎನ್ನುತ್ತಾರೆ).

     2025ರ ಜನವರಿಯಲ್ಲಿ ಭೂಗತ ನಕ್ಸಲರನ್ನು ಮುಖ್ಯ ವಾಹಿನಿಗೆ ಕರೆತಂದ ನಂತರ ಅಂದರೆ ಆರೆಂಟು ತಿಂಗಳ ನಂತರ ಮಾಜಿ ನಕ್ಸಲರೊಂದಿಗಿನ  ನನ್ನ ಮೊದಲ ಭೇಟಿ ಅದಾಗಿತ್ತು. ಬಹಳ ಹಿರಿಯ ಹೋರಾಟಗಾರರಾದ ಕಾಮ್ರೆಡ್ ವೀರಮಣಿ, ಶಿವಮೊಗ್ಗದ ದೇವೇಂದ್ರ, ರಾಯಚೂರಿನ ಚಂದ್ರಶೇಖರ ಗೊರಬಾಳ್ ಕೊಪ್ಪದ ನಂದಕುಮಾರ್, ಬೆಳಗಾಂನಿಂದ ಮಾರುತಿ ಢಗಣ್ಣವರ್ ಮುಂತಾದವರು ಮದುವೆಗೆ ಬಂದಿದ್ದರು.

    ಇವರಲ್ಲಿ ಯಾರೂ ಸಹ ಮುಖ್ಯವಾಹಿನಿಗೆ ಬಂದು ಈಗ ಸೆರೆಮನೆಯಲ್ಲಿರುವ ನಕ್ಸಲರ ಬಗ್ಗೆ ಒಂದೇ ಒಂದು ಪ್ರಶ್ನೆಯನ್ನು ನನ್ನ ಬಳಿ ಕೇಳಲಿಲ್ಲ. ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಕಾಳಜಿ ತೋರಲಿಲ್ಲ. ಅವರಿಗೆ ಸಿಗುತ್ತಿರುವ ಕಾನೂನಿನ ನೆರವು, ಜಾಮೀನಿನ ವಿಚಾರ, ಅವರುಗಳ ಕುಟುಂಬದವರ ಸ್ಥಿತಿಗತಿ ಬಗ್ಗೆ ಏನೆಂತಲೂ ಪ್ರಶ್ನೆ ಕೇಳಲಿಲ್ಲ. ಅಷ್ಟು ಮಾತ್ರವಲ್ಲ ಶರಣಾಗಿ ಮುಖ್ಯ ವಾಹಿನಿಗೆ ಬರುವಂತಹ ಸ್ಥಿತಿ ಅವರಿಗೆ ಏಕೆ ನಿರ್ಮಾಣವಾಯಿತು,  ಹೋರಾಟಗಾರರಿಗೆ ಜನಬೆಂಬಲ ಮೊದಲಿನಂತೆ ಇತ್ತೆ, ಇಲ್ಲವೇ, ಊಟ -ವಸತಿ -ಹಣಕಾಸಿನ ಕೊರತೆ ಎದುರಾಗಿತ್ತೆ ಎಂತಲೂ ತಿಳಿಯುವ ಕುತೂಹಲ ತೋರಲಿಲ್ಲ. ಆದರೆ ಹಲವು ವರ್ಷಗಳ ಕಾಲ ಇವರೆಲ್ಲರೂ ಹೋರಾಟದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಜೊತೆಯಲ್ಲಿದ್ದವರಲ್ಲವೆ?ಈಗ  ಹೋರಾಟವನ್ನು ತ್ಯಜಿಸಿದರು ಎಂಬ ಒಂದೇ ಕಾರಣಕ್ಕೆ ನಿಕೃಷ್ಟವಾಗಿ ನೋಡುವುದು  ಮಾನವೀಯತೆ ಅಲ್ಲ ಅಂತ ಅನಿಸಿತು.

   ಸತ್ತುಹೋಗುವುದೇ ಶ್ರೇಷ್ಟ ತ್ಯಾಗವೆಂಬ ಮಂಕುತನ ಕೆಲವರಲ್ಲಿರುತ್ತದೆ. ಅವರವರ ನಂಬಿಕೆ ಸಿದ್ಧಾಂತಗಳು ಅದೇನೆ ಇರಬಹುದು, ಆದರೆ  ನ್ಯಾಯ ಕೇಳುವ ಹೋರಾಟದಲ್ಲಿ ಜೊತೆಗಿದ್ದವರನ್ನು ಅದು ಅದಷ್ಟೇ ಅಲ್ಪಕಾಲೀನ  ಕೊಡುಗೆಯಾಗಿದ್ದರೂ ಸಹ ಅದನ್ನು ನಾವು ಗೌರವಿಸಬೇಕು.  ತಿರಸ್ಕಾರದಿಂದ ನೋಡಬಾರದು. ಮುಖ್ಯ ವಾಹಿನಿಗೆ ಬಂದು ಸೆರೆಮನೆಯಲ್ಲಿರುವ ಹೋರಾಟಗಾರರು ಒಂದಷ್ಟು ಕಾಲ ಜೈಲುಗಳಲ್ಲಿ ಇರಬೇಕಾಗಿ ಬರಬಹುದು.  ಕಾನೂನು ಹೋರಾಟ ಹಲವು ವರ್ಷಗಳ ಕಾಲ ನಡೆಯಬಹುದು.  ಅವರಿಗೆ ಈಗ ಕುಟುಂಬದವರ ಬೆಂಬಲ ಮಾತ್ರವಲ್ಲದೆ ಹೋರಾಟದ ಸಂಗಾತಿಗಳ, ಸಮಾಜದ ಬೆಂಬಲ ಅಗತ್ಯವಿದೆ.

ಜೈಲಿನಲ್ಲಿ ನಕ್ಸಲರ ಭೇಟಿಯಾಗಿ ಬಂದೆ

     ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಹೋಗಿ ಮುಖ್ಯವಾಹಿನಿಗೆ ಬಂದಿರುವ ನಕ್ಸಲರನ್ನು ಭೇಟಿಯಾಗಿ ಬಂದೆ. ಮುಂಡಗಾರು ಲತಾ, ಬಾಳೆಹೊಳೆಯ ವನಜಾಕ್ಷಿ, ಬೆಂಗಳೂರಿನ ಲಕ್ಷ್ಮಣ ನಗರದ ರಮೇಶ್ ಭೇಟಿ ಸಾಧ್ಯವಾಯಿತು. ಕೆಲವರನ್ನು  ಕೇರಳ ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದರು.

     ಮುಂಡಗಾರು ಲತಾರವರು ಮಾತನಾಡುತ್ತ, 'ಜೈಲಿಗೆ ಬಂದು 8 ತಿಂಗಳಾದರೂ ಕಾನೂನಿನ ಪ್ರಕ್ರಿಯೆಗಳು ಶುರುವಾಗಿದೆಯಾ ಇಲ್ಲವೊ ಎಂಬುದು ತಿಳಿಯುತ್ತಿಲ್ಲ, ಹೊರಗಡೆ ಏನಾಗುತ್ತಿದೆ ಎಂಬ ಮಾಹಿತಿಯು ಇಲ್ಲ.  ಕುಟುಂಬದವರು ಒಂದೆರಡು ಬಾರಿ ನೋಡಿಕೊಂಡು ಹೋಗಿದ್ದಾರೆ,   ಶಾಂತಿ ವೇದಿಕೆಯವರು ಮತ್ತು ಇನ್ನೊಬ್ಬರು ಹಿತ್ಯೆಷಿ ಬಟ್ಟೆಗಳನ್ನು ಕಳುಹಿಸಿದ್ದನ್ನು ಬಿಟ್ಟರೆ, ಉಳಿದವರು ಯಾರು ಬಂದು ನಮ್ಮ ಬಗ್ಗೆ ವಿಚಾರಿಸಲಿಲ್ಲ' ಎಂದರು. ಮುಖ್ಯ ವಾಹಿನಿಗೆ ಬಂದ ನಕ್ಸಲರನ್ನು ಜೈಲಿನಲ್ಲಿ ಭೇಟಿಯಾಗಲು ಪುನರ್ ವಸತಿ ಸಮಿತಿಯವರಿಗೆ ಅನುಮತಿ ನೀಡುವಂತೆ ನಾವು ಕಳೆದ ಕೆಲಕಾಲದಿಂದ  ಪ್ರಯತ್ನ ನಡೆಸಿದ್ದನ್ನು ತಿಳಿಸಿದೆ.

 

     ಈ ನಡುವೆ ಸೆಪ್ಟೆಂಬರ್ ಆರರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಗೃಹ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಪುನರ್ವಸತಿ ಸಮಿತಿ ಸದಸ್ಯರ ಸಭೆ ನಡೆದ  ವಿಚಾರವನ್ನು ಅವರಿಗೆ ತಿಳಿಸಿದೆ.

 ಹಣದ ನೆರವು

ಮುಖ್ಯ ವಾಹಿನಿಗೆ ಬಂದ ನಕ್ಸಲರಿಗೆ ನೆರವಾಗುವ  ಚರ್ಚೆ ಕೆಲವೆಡೆ ನಡೆದಿದೆ. ನನ್ನ ವ್ಯೆಯಕ್ತಿಕ ಅಭಿಪ್ರಾಯ ಏನೆಂದರೆ ಹಣದ ನೆರವು ನೀಡುವುದಾದರೆ ನೇರವಾಗಿ ಅವರ ಕುಟುಂಬದವರಿಗೆ ನೀಡಬಹುದು.  ಇಲ್ಲವೇ ಜೈಲಿನಲ್ಲಿ ಇರುವ ನಕ್ಸಲರ ವಿಳಾಸಕ್ಕೆ  ಮನಿ ಆರ್ಡರ್ ಸಹ ಮಾಡಬಹುದು. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಹಾಗೂ ಉದ್ದೇಶಿತ ನೆರವು  ಮಧ್ಯವರ್ತಿಗಳ ಬದಲಾಗಿ ಸಂಬಂಧಪಟ್ಟ ವ್ಯಕ್ತಿಗಳಿಗೆ   ನೇರವಾಗಿ ತಲುಪುತ್ತದೆ. ಆಸಕ್ತರಿದ್ದಲ್ಲಿ ಹಣ ಕಳಿಸುವ ವಿವರ ಇಲ್ಲೇ ಒದಗಿಸುವೆ.

ಉದಾಹರಣೆಗೆ

ಮುಂಡಗಾರು ಲತಾ ಹೆಸರಿಗೆ ಮನಿ ಆರ್ಡರ್ ಮಾಡುವುದಾದಲ್ಲಿ ವಿಳಾಸ

1) ಮುಂಡಗಾರು ಲತ,  (ನಕ್ಸಲ್ ವಿಚಾರಣಾಧೀನ ಖ್ಯೆದಿ ),   UTP ನಂ. 205/2025, ಸೆಂಟ್ರಲ್ ಜ್ಯೆಲ್, ಪರಪ್ಪನ ಅಗ್ರಹಾರ, ಬೆಂಗಳೂರು-560100 ಎಂದು ಕಳಿಸಬಹುದು.

ನೂರ್ ಶ್ರೀಧರ್‌ ಗುಂಪಿನ ಶಾಂತಿ ವೇದಿಕೆಯವರು ಮುಖ್ಯ ವಾಹಿನಿಗೆ ಬಂದ ನಕ್ಸಲರಿಗೆ ಕಾನೂನಿನ ನೆರವು ಒದಗಿಸಲು ತಾವು ಸಿದ್ದರಿದ್ದು ಅದಕ್ಕಾಗಿ ಸರ್ಕಾರವು 30 ರಿಂದ 40 ಲಕ್ಷ ರೂಪಾಯಿಗಳನ್ನು ನಿಗದಿ ಮಾಡುವಂತೆ ಕೇಳಲು ಹೊರಟಿರುವ ಬಗ್ಗೆ ಸುದ್ದಿಯಿದೆ.

     ಈ ಶಾಂತಿ ವೇದಿಕೆಯವರು  ನಕ್ಸಲರು ಮುಖ್ಯ ವಾಹಿನಿಗೆ ಬಂದು ಶರಣಾಗುವ ಕೊನೆಯ ದಿನಗಳಲ್ಲಿ ಮಾತ್ರ ಕಾಣಿಸಿಕೊಂಡವರು. ಒಂದೆರಡು ವರ್ಷ ಕಾಡುಮೇಡೆನ್ನದೆ ತಿರುಗುತ್ತಿದ್ದ ನಮ್ಮನ್ನು ನಿರ್ಲಕ್ಷಿಸಿ ಎಲ್ಲವನ್ನು ತಾವೇ ಸಾಧಿಸಿದೆವೆಂಬಂತೆ ಈ ಶಾಂತಿ ವೇದಿಕೆಯ ಮೂವರು ಗರ್ಭಗುಡಿ ಪ್ರಗತಿಪರರು ಪೋಸ್ ಕೊಟ್ಟಿದ್ದು ನನಗೆ ಇನ್ನೂ ನೆನಪಿದೆ.

    ನೂರ್ ಶ್ರೀಧರ್‌ ಆತುರಪಟ್ಟು ವಿಕ್ರಂ ಗೌಡ್ಲುನನ್ನು ಹಿಡಿಸಿಕೊಡುವ ಬದಲಾಗಿ ಸ್ವಲ್ಪ ವಿವೇಚನೆ ತೋರಿದಿದ್ದರೆ ವಿಕ್ರಂ ಸಹ ಇವತ್ತು ಬದುಕುಳಿದಿರುತ್ತಿದ್ದ.ಈ ಗುಂಪಿನವರಿಗೆ ಪ್ರಚಾರದ ಹಂಬಲ ಎಷ್ಟಿತ್ತೆಂದರೆ ನಕ್ಸಲರ ಶರಣಾಗತಿಯು ಘಟಿಸುವ ಮೊದಲೇ ಅದರ ಕ್ರೆಡಿಟ್ ಪಡೆಯಲು,ತರಾತುರಿಯಿಂದ  ಪತ್ರಿಕಾಗೋಷ್ಟಿ ನಡೆಸಲು ಹಾಲ್ ಬುಕ್ ಮಾಡಿಟ್ಟಿದ್ದರು !

    ನಕ್ಸಲರು ಶರಣಾದದ್ದು ಜನವರಿ 8ರಂದು.ಆದರೆ, ಆದಾದ ಮರುದಿನ ಅಂದರೆ ಜನವರಿ 9 ರಂದೇ ಪತ್ರಿಕಾಗೋಷ್ಟಿ ನಡೆಸಲು ನೂರ್ ಶ್ರೀಧರ & ವಿ. ಎಸ್.ಶ್ರೀಧರ ಗುಂಪು ಜನವರಿ 6 ರಂದೇ ಬೆಂಗಳೂರು   ಪ್ರೆಸ್ ಕ್ಲಬ್ ಗೆ ಪತ್ರ ನೀಡಿ  ಬುಕ್ ಮಾಡಿಕೊಂಡಿದ್ದರು. ಶರಣಾಗತಿಯ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಈ ನಿರ್ಲಜ್ಜರು ಪತ್ರಿಕಾಗೋಷ್ಠಿಗೆ ಹಾಲ್ ಅನ್ನು ಬುಕ್ ಮಾಡಿಕೊಂಡಿದ್ದಕ್ಕೆ ಇಲ್ಲೊಂದು ದಾಖಲೆ ನೀಡಿರುವೆ.

  ನಕ್ಸಲರನ್ನು ಪತ್ತೆಹಚ್ಚಿ  ಮನ ಒಲಿಸಿ ಕರೆತರಲು ಎರಡು ವರ್ಷ ಕಾಲ ಕೆಲಸ ಮಾಡಿದ್ದ ಸಮಿತಿಯ ನಾವು ಶರಣಾಗತಿ ಪ್ರಕ್ರಿಯೆ ಮುಗಿದ ನಂತರ  ಪತ್ರಿಕಾಗೋಷ್ಟಿ ನಡೆಸಲಿಲ್ಲ. ಒಂದು ಪತ್ರಿಕಾ ಹೇಳಿಕೆಯನ್ನಷ್ಟೇ ಬಿಡುಗಡೆ ಮಾಡಿ ಸುಮ್ಮನಾದೆವು, ಬದಿಗೆ ಸರಿದೆವು.

  ಕಟುಸತ್ಯ ಏನೆಂದರೆ ನಕ್ಸಲರು ಮುಖ್ಯವಾಹಿನಿಗೆ ಬಂದದ್ದು ಅವರದ್ದೇ ಒಂದು ರಾಜಕೀಯ ತೀರ್ಮಾನವಾಗಿತ್ತೇ ವಿನ: ಅದರಲ್ಲಿ ನಮ್ಮಗಳ ಪಾತ್ರ ನಿಮಿತ್ತವಾಗಿರುತ್ತದೆ ಎಂಬುದು ನಮಗೆ ತಿಳಿದಿತ್ತು.ನಾವು ಸೇತುವೆಯಂತೆ ಕ್ಯೆಜೋಡಿಸಿದ್ದೆವಷ್ಟೆ.

    ಈಗ  ಪುನರ್ ವಸತಿ ಸಮಿತಿಯ ಕೆಲಸ,  ಜವಾಬ್ದಾರಿ ಮುಂದುವರಿಯುತ್ತಿದೆ. ಈ ಹೋರಾಟದಲ್ಲಿದ್ದು ಮತ್ತೆ ಬದುಕು ಕಟ್ಟಿಕೊಳ್ಳಲು ಬಯಸುವವರು  ಸರ್ಕಾರದ ಸೌಲಭ್ಯಗಳಿಗಾಗಿ ಸಮಿತಿಯ ಮೂವರಲ್ಲಿ  ಯಾರಿಗಾದರೂ ಲಿಖಿತ ಮನವಿ ಪತ್ರ ಕಳುಹಿಸಬಹುದು.

    ಜೊತೆಗಿದ್ದವರೇ ಈಗ ಪರಸ್ಪರರ ಬಗ್ಗೆ ಕಾಳಜಿ ಇರದಂತಾಗಿದ್ದಾರೆ.- ಒಂದು ಗುಂಪು ಪ್ರಚಾರದ ಹಣದ ಲಾಭ ಹುಡುಕುತ್ತಿದೆ.* ಸೆರೆಮನೆ ಸೇರಿರುವವರ ಮುಂದಿನ ಬದುಕು, ಕುಟುಂಬದ ಸ್ಥಿತಿಗತಿಗಳು, ಆರೋಗ್ಯ, ಕೋರ್ಟ್ ಕೇಸ್ ಗಳ ತ್ವರಿತ ವಿಚಾರಣೆ , ಅವರಿಗೆ ತಜ್ಞ  ವಕೀಲರ ತಂಡದ ಅಗತ್ಯವಿರುವ ಸಂಗತಿ. ಇವುಗಳ ಹೊಣೆಯು ಬಂಧಿಗಳ ಕುಟುಂಬದವರು ಸರ್ಕಾರ ಸಮಾಜ ಇವರೆಲ್ಲರದ್ದೂ ಆಗಬೇಕಿದೆ.

 (ಲೇಖಕರು ಹಿರಿಯ ಪತ್ರಕರ್ತರು ಹಾಗೂ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಸಮಿತಿಯ ಸದಸ್ಯರು)

2025ರ ಜನವರಿ 8 ರಂದು ಮುಖ್ಯಮಂತ್ರಿಗಳ ಎದಿರು ಸಶಸ್ತ್ರ ಹೋರಾಟ ತ್ಯಜಿಸಿ ಮುಖ್ಯವಾಹಿನಿಗೆ ಬಂದ ನಕ್ಸಲರು.