ತುಮಕೂರು ನಾಗರಿಕರ ಪರವಾಗಿ ‘ಸ್ಮಾರ್ಟ್ ಸಿಟಿ ಕಂಪನಿ’ಗೆ ಆರು ಪ್ರಶ್ನೆಗಳು  ‘ಸ್ಮಾರ್ಟ್ ಸಿಟಿ’ ಸ್ಪೆಷಲ್ ಕುಚ್ಚಂಗಿ ಪ್ರಸನ್ನ

kuchangi prasanna

ತುಮಕೂರು ನಾಗರಿಕರ ಪರವಾಗಿ ‘ಸ್ಮಾರ್ಟ್ ಸಿಟಿ ಕಂಪನಿ’ಗೆ ಆರು ಪ್ರಶ್ನೆಗಳು    ‘ಸ್ಮಾರ್ಟ್ ಸಿಟಿ’ ಸ್ಪೆಷಲ್ ಕುಚ್ಚಂಗಿ ಪ್ರಸನ್ನ

ತುಮಕೂರು ನಾಗರಿಕರ ಪರವಾಗಿ ‘ಸ್ಮಾರ್ಟ್ ಸಿಟಿ ಕಂಪನಿ’ಗೆ ಆರು ಪ್ರಶ್ನೆಗಳು 


‘ಸ್ಮಾರ್ಟ್ ಸಿಟಿ’ ಸ್ಪೆಷಲ್
ಕುಚ್ಚಂಗಿ ಪ್ರಸನ್ನ


ತುಮಕೂರು: ಹರಪ್ಪ ಮತ್ತು ಮೊಹೆಂಜದಾರೋ ನಾಗರಿಕತೆ ಕುರಿತು ಕೇಳಿದ್ದೀರಾ, ಸುಮಾರು ಮರ‍್ನಾಲ್ಕು ಸಾವಿರ ವರ್ಷಗಳ ಹಿಂದೆ ಈಗಿನ ಪಾಕಿಸ್ತಾನಕ್ಕೆ ಸೇರಿರುವ ಈ ಪ್ರದೇಶಗಳಲ್ಲಿ ಮನುಷ್ಯ ನಗರಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದ, ಆಗ ಯಾವ ಇಂಜನಿಯರಿಂಗ್ ಕಾಲೇಜುಗಳಿರಲಿ ಪ್ರಾಥಮಿಕ ಶಾಲೆಗಳೂ ಇರಲಿಲ್ಲ, ಆದರೂ ಅಂದಿನ ಮನುಷ್ಯ ನಿರ್ಮಿಸಿಕೊಂಡಿದ್ದ ನಗರಗಳಲ್ಲಿ ಒಳಚರಂಡಿ ವ್ಯವಸ್ಥೆ ಇತ್ತು, ಅಚ್ಚುಕಟ್ಟಾದ ರಸ್ತೆಗಳಿದ್ದವು ಎಂಬುದು ಉತ್ಖನನಗಳಿಂದ ಬೆಳಕಿಗೆ ಬಂದಿದೆ.


ಆದರೆ ಈಗ ನಾವು ಮಾನವ ನಾಗರಿಕತೆಯ ಅತ್ಯಂತ ತುತ್ತ ತುದಿಗೆ ತಲುಪಿದ್ದೇವೆ. ನಾವು ಇಡೀ ದಿನದಲ್ಲಿ ಎಷ್ಟು ಹೆಜ್ಜೆ ನಡೆದಿದ್ದೇವೆ ಎಂಬುದನ್ನು ನಮ್ಮ ಜೇಬಿನಲ್ಲಿರುವ ಫೋನುಗಳೇ ವರದಿ ಮಾಡುತ್ತವೆ. ಅತ್ಯಾಧುನಿಕ ವೇಗದ ಕಂಪ್ಯೂಟರ್‌ಗಳನ್ನು ಬಳಸಿ ನಮ್ಮ ಇಂಜಿನಿಯರ್‌ಗಳು ಪ್ಲಾನ್ ಮತ್ತು ಎಸ್ಟಿಮೇಟ್‌ಗಳನ್ನು ತಯಾರಿಸುತ್ತಾರೆ, ಆದರೆ ಆ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವಾಗ ಮಾತ್ರ ಶಿಲಾಯುಗದ ಜನರೂ ಅಷ್ಟು ಕೆಟ್ಟದಾಗಿ ಮಾಡುವುದಿಲ್ಲ ಅಷ್ಟು ಅದ್ವಾನದ ರಸ್ತೆಗಳನ್ನು ,ಫುಟ್ ಪಾತ್‌ಗಳನ್ನು ನಿರ್ಮಿಸಿದ್ದಾರೆ ಎಂಬುದು ತುಮಕೂರು ನಗರದಲ್ಲಿ ಕೆಲವು ವರ್ಷಗಳಿಂದ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ನೋಡಿದಾಗ ಅರ್ಥವಾಗುತ್ತದೆ, ಕೇವಲ ಅರ್ಥವಾಗುವುದಲ್ಲ ನೀವು ಆ ರಸ್ತೆಗಳಲ್ಲಿ ನಡೆಯುತ್ತ ಹೋದರೆ ಖುದ್ದು ಅನುಭವಕ್ಕೂ ಬರುತ್ತದೆ.


ಸದ್ಯಕ್ಕೆ ಈ ವರದಿಯಲ್ಲಿ ಭದ್ರಮ್ಮ ಛತ್ರದ ಎದುರಿಗೆ ಶಂಕರ ಮಠದಿಂದ ಬೆಂಗಳೂರಿನತ್ತ ಸಾಗುವ ಬಿಹೆಚ್ ರಸ್ತೆಯಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿಗೆ ತಿರುಗಿಕೊಳ್ಳುವ ಸುಮಾರು ಮುಕ್ಕಾಲು ಕಿಲೋಮೀಟರ್ ರಸ್ತೆಯ ಫೋಟೋಗಳನ್ನು ನಿಮ್ಮ ಮುಂದೆ ಇರಿಸಿದ್ದೇವೆ.


ಚಿತ್ರ(1) : ಶಂಕರಮಠದ ಮಗ್ಗುಲಿನ ಫುಟ್‌ಪಾತ್ ಮೇಲೆ ಸುಮಾರು ಒಂದು ಅಡಿ ಎತ್ತರದ ಸಿಮೆಂಟ್ ಬಾಕ್ಸ್ ನಿರ್ಮಿಸಿ ಬಿಡಲಾಗಿದೆ. ಈ ಬಾಕ್ಸ್ ಏನು, ಯಾಕೆ ಹೀಗೆ ಬಿಡಲಾಗಿದೆ, ಇದನ್ನು ಫುಟ್‌ಪಾತ್ ಸಮಕ್ಕೇ ಇಳಿಸಲು ಯಾಕೆ ಆಗಿಲ್ಲ? ಎನ್ನುವುದನ್ನು ನಮ್ಮ ಘನ ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳು ವಿವರಣೆ ನೀಡಬಲ್ಲರೇ?


ಚಿತ್ರ (2) ಶಂಕರಮಠದಿAದ ಮುಂದಕ್ಕೆ ನಾಲ್ಕು ಮಾರು ನಡೆದಾಗ ಕಾಣುವ ದೃಶ್ಯವಿದು. ಮಳೆ ನೀರನ್ನು ದೊಡ್ಡ ಮೋರಿಯೊಳಕ್ಕೆ ಕಳಿಸಲು ನಮ್ಮ ಸ್ಮಾರ್ಟ್ ಸಿಟಿಯ ಜೀನಿಯಸ್ ಇಂಜಿನಿಯರ್‌ಗಳು ಕಂಡುಕೊAಡಿರುವ ಅತ್ಯಾಧುನಿಕ ತಂತ್ರಜ್ಞಾನವಿದು. ಫುಟ್‌ಪಾತ್‌ನಲ್ಲಿ ಎದುರಿನಿಂದ ನಡೆದು ಬರುವ ಪಾಪಿ ನಾಗರಿಕರು ಕಾಣದೇ ಬಿದ್ದುಬಿಟ್ಟಾರು ಎಂದು ಬ್ಯಾರಿಕೇಡ್ ಒಂದನ್ನೂ ಇದೇ ಸ್ಮಾರ್ಟ್ ಸಿಟಿ ತಂದು ಪ್ರತಿಷ್ಟಾಪಿಸಿದೆ. ಸ್ಮಾರ್ಟ್ ಸಿಟಿ ಕಂಪನಿಯ ಇಂಜಿನಿಯರ್‌ಗಳ ಮಾನವೀಯತೆಗೆ ಈ ಬ್ಯಾರಿಕೇಡ್ ಸಾಕ್ಷಿಯಾಗಿದೆ ಅಲ್ವಾ.


ಚಿತ್ರ (3) “ ಚಿನ್ನದಂತ ಊರಿಗೇ ರನ್ನದಂತ ರಾಜ, ರನ್ನದಂತ ರಾಜನಿಗೆ ಮುತ್ತಿನಂಥ ರಾಣಿ, ಆ ರಾಣಿ ಹೆತ್ತ ಮಕ್ಕಳು ಏಳು, ಆ ಏಳರಲ್ಲಿ ಯಾವುದೂ ಏಳಿಗೆಗಿಲ್ಲ” ಎನ್ನುವ ಬ್ಲಾಕ್ ಅಂಡ್ ವೈಟ್ ಜಮಾನಾದ ಹಾಡು ಕೇಳಿದ್ದೀರಾ ಅಲ್ವಾ, ಹೀಗೆ ಇದೇ ದಿಕ್ಕಿನಲ್ಲಿ ತುಸು ಸಾಗಿದರೆ, ಚಂದದ ಫುಟ್‌ಪಾತ್‌ಗೆ ಅಂದದ ಪಾರ್ಕಿಂಗ್ ಪಾತ್, ಇಲ್ಲಿ ಸಣ್ಣದೊಂದು ಮಳೆಗೇ ತುಂಬಿ ನಿಲ್ಲುವಂಥ ಸುಂದರವಾದ ಪುಟ್ಟ ಕೊಳವನ್ನು ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳು ಖುದ್ದು ನಿಂತು ನಿರ್ಮಿಸಿಕೊಟ್ಟಿದ್ದಾರೆ ನೋಡಿ. ಎದುರಿನ ಹಾಸ್ಟೆಲ್ ಕಟ್ಟಡದ ಪ್ರತಿಬಿಂಬ ಅದೆಷ್ಟು ಸುಂದರವಾಗಿ ಈ ನೀರಿನಲ್ಲಿ ಮೂಡಿದೆ ನೋಡಿ. 


ಚಿತ್ರ(4) “ ಇದು ಕನಕನ ಕಿಂಡಿ ಅಲ್ಲ ಕಾಂತಾ”! - ಸ್ಮಾರ್ಟ್ ಸಿಟಿ ಕಂಪನಿ ತನ್ನ ಇಂಜಿನಿಯರ್‌ಗಳನ್ನು ವಿದೇಶಗಳಿಗೆ ಕಳಿಸಿ ಅಲ್ಲಿನ ತಾಂತ್ರಿಕತೆಯನ್ನು ಅರಿತು ಬಂದು ಮಾಡಿರುವ ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಚರಂಡಿಗೆ ಕಳಿಸುವ ವಿಶಿಷ್ಟ ವಿಧಾನ, ಇಂಥ ಅಭೂತಪೂರ್ವ ತಂತ್ರಜ್ಞಾನ ಬಳಕೆ ಕುರಿತು  ಎಮ್‌ಡಿ ಸಾಹೇಬರು ಏನು ಹೇಳುತ್ತಾರೋ ನೀವೇ ಕೇಳಿ.


ಚಿತ್ರ(5) ರಲ್ಲಿ ಎರಡು ಮುಖ್ಯ ಅಂಶಗಳಿವೆ, ಒಂದು ಸುಮಾರು ಒಂದೂವರೆ ಅಡಿ ಎತ್ತರದ ರೌಂಡಾದ ನಿರ್ಮಾಣ, ಇದು ಏನು, ಇದೇಕೆ ಹೀಗೆ ಜನಸಾಮಾನ್ಯರು ಸಂಚರಿಸುವ ಫುಟ್ ಪಾತ್‌ನಲ್ಲಿ ಧುತ್ತೆಂದು ಎದ್ದು ನಿಂತಿದೆ. ಈ ಕುರಿತು ಮೇಲಿನ ಎಲ್ಲ ಅಂಶಗಳಿಗೆ ಉತ್ತರಿಸುವ ಇಂಜಿನಿಯರ್‌ಗಳೇ ಸಮಜಾಯಿಷಿ ನೀಡಬೇಕಿದೆ.
ಎರಡನೆಯದು, ನೇರವಾಗಿ ಸಾಗುತ್ತಿದ್ದ ಫುಟ್‌ಪಾತ್ ಇದ್ದಕ್ಕಿದ್ದಂತೆ ಪಕ್ಕಕ್ಕೆ ಹೊರಳಿ ಚಿಕ್ಕದಾಗಿಬಿಡಲು ಏನು ಕಾರಣ? ಇದನ್ನೇ ಸ್ಮಾರ್ಟ್ ಫುಟ್‌ಪಾತ್ ಅಂತಾರ, ಏನೋ ಅಪ್ಪ, ನಮಗೆ ಗೊತ್ತಿಲ್ಲ ಅಂತ ನೀವು ಹೇಳಬಹುದು. ಆದರೆ ಹತ್ತಾರು ಜೂನಿಯರ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಸೂಪರಿಂಟೆAಡಿAಗ್ ಇಂಜಿನಿಯರ್‌ಗಳನ್ನು ನೇಮಿಸಿಕೊಂಡು ಅವರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಚೀಫ್ ಇಂಜಿನಿಯರ್ ಏನು ಹೇಳುತ್ತಾರೆ ಕೇಳಿ,
ಈ ಸ್ಮಾರ್ಟ್ ಸಿಟಿ ಕಚೇರಿ ಎಲ್ಲಿದೆ ಗೊತ್ತಾ, ಅದೇ ಭದ್ರಮ್ಮ ಛತ್ರದ ಪಕ್ಕದಿಂದ ಸೋಮೇಶ್ವರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಭೈರವೇಶ್ವರ ಸಹಕಾರ ಬ್ಯಾಂಕ್ ಪಕ್ಕದ ಕಮರ್ಶಿಯಲ್ ಕಾಂಪ್ಲೆಕ್ಸ್ನ ಒಂದನೇ ಮಹಡಿಯಲ್ಲಿದೆ. ನೀವು ಅಲ್ಲಿಗೆ ಹೋಗಿ ಕೇಳಲು ಆಗುತ್ತೋ ಇಲ್ಲವೋ ಅಂತಲೇ ನಾವು ನಿಮ್ಮ ಪರವಾಗಿ ಈ ವರದಿ ಮಾಡಿದ್ದೇವೆ. ಅಂದ ಹಾಗೆ ಈ ಸ್ಮಾರ್ಟ್ ಸಿಟಿ ಕಂಪನಿ ಶಾಶ್ವತವಾಗಿ ಇಲ್ಲೇ ಈ ಊರಿನಲ್ಲಿ ಗೂಟ ಹೊಡೆದುಕೊಂಡು ಇರುವುದಿಲ್ಲ, ರಾಜ್ಯಮತ್ತು ಕೇಂದ್ರ ಸರ್ಕಾರಗಳು ಬಿಡುಗಡೆ ಮಾಡಿದ ಹಣವೆಲ್ಲ ಖಾಲಿ ಆದ ಮೇಲೆ ಟೆಂಟೆತ್ತಿಕೊAಡು ಹೋಗಿಬಿಡುತ್ತದೆ. ಒಟ್ಟಾರೆ ಇದೊಂದು ಟೂರಿಂಗ್ ಟಾಕೀಸು, ಈ ಟೂರಿಂಗ್ ಟಾಕೀಸು ತೋರಿಸುತ್ತಿರುವ ‘ ಮಾಯಾ ಬಜಾರು’ ಸಿನಿಮಾನೇ ಈ ಕಾಮಗಾರಿಗಳು.