ಪ್ರಜಾಪ್ರಭುತ್ವಕ್ಕೆ ನ್ಯಾಯಾಂಗದ ಶ್ರೀರಕ್ಷೆ
ನ್ಯಾಯಾಂಗದ ಇತ್ತೀಚಿನ ಕೆಲವು ತೀರ್ಪುಗಳು ಪ್ರಜಾತಂತ್ರದ ಬಗ್ಗೆ ವಿಶ್ವಾಸ ಹೆಚ್ಚಿಸುವಂತಿದೆ
ನಾ ದಿವಾಕರ
ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ಆಶಯಗಳು ಹಂತಹಂತವಾಗಿ ಶಿಥಿಲವಾಗುತ್ತಿರುವ ಹೊತ್ತಿನಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆ ಜನಸಾಮಾನ್ಯರಲ್ಲಿ ವಿಶ್ವಾಸ-ಭರವಸೆ ಮೂಡಿಸುವ ರೀತಿಯಲ್ಲಿ ತನ್ನ ತೀರ್ಪುಗಳನ್ನು ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ. ಅಧಿಕಾರ ರಾಜಕಾರಣವು ನ್ಯಾಯಾಂಗ ವ್ಯವಸ್ಥೆಯನ್ನೂ ಆವರಿಸಿಕೊಂಡು, ನಿವೃತ್ತ ನ್ಯಾಯಮೂರ್ತಿಗಳನ್ನಷ್ಟೇ ಅಲ್ಲದೆ ಸೇವೆಯಲ್ಲಿರುವ ನ್ಯಾಯಾಧೀಶರನ್ನೂ ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ ಭಾರತದ ಸುಪ್ರೀಂಕೋರ್ಟ್ ಜನತೆಯ ಸಾರ್ವಭೌಮತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಆದರಣೀಯ ತೀರ್ಪುಗಳನ್ನು ನೀಡುತ್ತಿರುವುದು ನೆಮ್ಮದಿಯ ವಿಚಾರ.
ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿರುವುದಾಗಿ ಘೋಷಿಸಿದ್ದಾರೆ. ಮತ್ತೊಂದೆಡೆ ವಾರಣಾಸಿಯ ಗ್ಯಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರನ್ನು ಲಕ್ನೋದ ವಿಶ್ವವಿದ್ಯಾಲಯವೊಂದರ ಲೋಕಪಾಲ್ ಆಗಿ ಆಗಿ ನೇಮಕ ಮಾಡಲಾಗಿದೆ. ನಿವೃತ್ತ ನ್ಯಾಯಮೂರ್ತಿಗಳು ಸಾರ್ವಜನಿಕ ಹುದ್ದೆಗಳನ್ನು ಸ್ವೀಕರಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಇದು ಸಾಂವಿಧಾನಿಕ ನೆಲೆಯಲ್ಲೂ ನಿಷ್ಕರ್ಷೆಗೊಳಗಾಗುತ್ತಿದೆ. ದೇಶದ ಪ್ರಜಾಸತ್ತಾತ್ಮಕ ಬುನಾದಿಗೆ ಧಕ್ಕೆಯಾದಾಗಲೆಲ್ಲಾ ನೆರವಿಗೆ ಧಾವಿಸಿರುವ ನ್ಯಾಯಾಂಗ ವ್ಯವಸ್ಥೆಯಲ್ಲಿನ ಈ ಅತಿರೇಕಗಳ ನಡುವೆಯೇ, ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪುಗಳು ಭರವಸೆದಾಯಕವಾಗಿ ಕಾಣುತ್ತವೆ.
ಮೂರು ಆಶಾದಾಯಕ ತೀರ್ಪುಗಳು
ಶೇಕಡಾ 90ರಷ್ಟು ವಿಕಲಾಂಗರಾಗಿದ್ದರೂ ಯುಎಪಿಎ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಮತ್ತು ಅವರ ಸಂಗಡಿಗರಿಗೆ ಮುಂಬೈನ ಹೈಕೋರ್ಟ್ ಬಿಡುಗಡೆಯ ಭಾಗ್ಯ ಕಲ್ಪಿಸಿದೆ. ಮಾವೋವಾದಿಗಳೊಡನೆ ಸಂಪರ್ಕ ಇರುವ ಆರೋಪದ ಮೇಲೆ 2014ರಲ್ಲಿ ಬಂಧನಕ್ಕೊಳಗಾದ ಪ್ರೊ. ಸಾಯಿಬಾಬಾ ಅವರ ಪ್ರಕರಣದಲ್ಲಿ ಸುದೀರ್ಘ ವಿಚಾರಣೆಯ ನಂತರ 2022ರಲ್ಲಿ ಮುಂಬೈನ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಸಾಯಿಬಾಬಾ ಅವರ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿತ್ತು. ಕಳೆದ ವಾರ ಹೈಕೋರ್ಟ್‌ನ ನಾಗಪುರ ಪೀಠವೂ ಇದೇ ತೀರ್ಪನ್ನು ಪುನರುಚ್ಚರಿಸಿದ್ದು ಆರೋಪಿಗಳ ವಿರುದ್ಧ ಅಪರಾಧವನ್ನು ನಿರೂಪಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತೀರ್ಪು ನೀಡಿ ಸಾಯಿಬಾಬಾ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು.
ಹೈಕೋರ್ಟ್‌ನ ಖುಲಾಸೆ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್ “ ಸಾಯಿಬಾಬಾ ಅವರು ಬಹಳ ಪರಿಶ್ರಮದ ನಂತರ ಪಡೆದಿರುವ ಬಿಡುಗಡೆಯ ಆದೇಶಕ್ಕೆ ತಡೆಯಾಜ್ಞೆ ನೀಡಲಾಗುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ. ನಾಗಪುರ ಹೈಕೋರ್ಟ್ ಪೀಠದ ತೀರ್ಪನ್ನು ಅತ್ಯಂತ ತರ್ಕಬದ್ಧ ಎಂದು ಬಣ್ಣಿಸಿರುವ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಸುಪ್ರೀಂ ನ್ಯಾಯಪೀಠ, ಆರೋಪಿಗೆ ಶಿಕ್ಷೆಯಾಗಿರುವುದನ್ನು ರದ್ದುಪಡಿಸಿರುವ ಹೈಕೋರ್ಟ್ ಆದೇಶವನ್ನು ತಿರಸ್ಕರಿಸಲು ಅವಸರ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಎರಡು ಬಾರಿ ಆರೋಪಿಗಳನ್ನು ಖುಲಾಸೆಗೊಳಿಸಿರುವ ಹೈಕೋರ್ಟ್ ಆದೇಶವನ್ನು ಪುರಸ್ಕರಿಸುವುದು ನ್ಯಾಯಾಲಯದ ಆದ್ಯತೆಯಾಗಿದ್ದು ಸಾಧಾರಣ ಸನ್ನಿವೇಶದಲ್ಲಿ ಮಹಾರಾ಼ಷ್ಟ್ರ ಸರ್ಕಾರದ ಮೇಲ್ಮನವಿ ಅರ್ಜಿಯನ್ನೇ ಸ್ವೀಕರಿಸಬೇಕಿರಲಿಲ್ಲ ಎಂದೂ ಹೇಳಿದೆ. ಹತ್ತು ವರ್ಷಗಳ ಜೈಲುವಾಸದ ನಂತರ ಪ್ರೊ. ಸಾಯಿಬಾಬಾ ತಮ್ಮನ್ನು ಕಾಡಿದ್ದ ಕಳಂಕವನ್ನು ತೊಡೆದುಹಾಕಿ ಹೊರಬಂದಿರುವುದು ಪ್ರಜಾಸತ್ತೆಯ ಗೆಲುವು ಎಂದೇ ಹೇಳಬಹುದು. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನ ನಡೆ ಶ್ಲಾಘನೀಯ.
ಮತ್ತೊಂದು ಕುತೂಹಲಕರ ಪ್ರಕರಣದಲ್ಲಿ 2022ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಪೊಲೀಸರು ಪ್ರೊ. ಜಾವೆದ್ ಅಹಮದ್ ಹಜಮ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಐಪಿಸಿ ಸೆಕ್ಷನ್ 153-ಎ ಅಡಿಯಲ್ಲಿ ಮೊಕದ್ದಮೆ ಹೂಡಿದ್ದರು. ಪ್ರೊ. ಜಾವೆದ್ ಅವರು ಮಾಡಿದ್ದ ಅಪರಾಧ ಎಂದರೆ ಅವರ ವಾಟ್ಸಾಪ್ ಸ್ಟೇಟಸ್‌ನಲ್ಲಿ " ಆಗಸ್ಟ್ 5 ಜಮ್ಮು ಕಾಶ್ಮೀರಕ್ಕೆ ಕರಾಳ ದಿನ – ಅನುಚ್ಛೇದ 370ರ ರದ್ದತಿ ವಿಷಾದಕರ – “ ಎಂದು ಪೋಸ್ಟ್ ಮಾಡಿದ್ದರು. ಮತ್ತೊಂದು ಪೋಸ್ಟ್‌ನಲ್ಲಿ “14ರ ಅಗಸ್ಟ್ ಪಾಕಿಸ್ತಾನದ ಸ್ವಾತಂತ್ರ್ಯ ದಿನದ ಶುಭಾಶಯಗಳು ” ಎಂದು ಪೋಸ್ಟ್ ಮಾಡಿದ್ದರು. ಈ ಎರಡೂ ಪೋಸ್ಟ್‌ಗಳ ವಿರುದ್ಧ ಕೊಲ್ಲಾಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಪ್ರೊ. ಜಾವೆದ್ ಹೈಕೋರ್ಟ್‌ನಲ್ಲಿ ನ್ಯಾಯ ಕೋರಿದ್ದರು. ಆದರೆ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು.
ಇತ್ತೀಚಿನ ತೀರ್ಪೊಂದರಲ್ಲಿ ಸುಪ್ರೀಂಕೋರ್ಟ್ ಪ್ರೊ ಜಾವೆದ್ ವಿರುದ್ಧ ಪ್ರಕರಣವನ್ನು ಅಸಿಂಧುಗೊಳಿಸಿದೆ. “ಸರ್ಕಾರಗಳ ಉಪಕ್ರಮಗಳ ವಿರುದ್ಧದ ಪ್ರತಿಯೊಂದು ಟೀಕೆ ಅಥವಾ ಪ್ರತಿರೋಧವನ್ನೂ ಸೆಕ್ಷನ್ 153-ಎ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸುವುದಾದರೆ, ಭಾರತದ ಸಂವಿಧಾನದ ಅಂತಃಸತ್ವವಾಗಿರುವ ಪ್ರಜಾಪ್ರಭುತ್ವವೇ ಉಳಿಯುವುದಿಲ್ಲ. ನ್ಯಾಯಸಮ್ಮತವಾದ ಪ್ರತಿರೋಧ ಸಂವಿಧಾನ ಅನುಚ್ಛೇದ 19(1)ರ ಅಡಿ ಜನರ ಹಕ್ಕು ಆಗಿರುತ್ತದೆ ” ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಜನತೆಯ ಸಾರ್ವಭೌಮತ್ವ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ಅನುಚ್ಚೇದ 370ರ ಬಗ್ಗೆ ಅರ್ಜಿದಾರನ ಅಭಿಪ್ರಾಯವನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, ಅನುಚ್ಛೇದ 370 ರದ್ದುಪಡಿಸುವ ಸರ್ಕಾರದ ನೀತಿಯನ್ನ ಟೀಕಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರಷ್ಟೆ, ಈ ರೀತಿಯ ಸರಳ ಪ್ರತಿರೋಧದ ಹಕ್ಕು ಸಂವಿಧಾನದ ಅನುಚ್ಛೇದ 19(1)ಎ ಅಡಿಯಲ್ಲಿ ಜನತೆಗೆ ಇದೆ ಎಂದು ಪುನರುಚ್ಚರಿಸಿದೆ.
ಪ್ರೊ. ಜಾವೆದ್ ಬಳಸಿರುವ ಪದಗಳು ಯಾವುದೇ ಧರ್ಮ, ಜನಾಂಗ, ಭಾಷೆ, ಜಾತಿ ಅಥವಾ ಸಮುದಾಯವನ್ನು ಉಲ್ಲೇಖಿಸುವುದಿಲ್ಲ ಹಾಗಾಗಿ ಅವರ ಸಂದೇಶವೂ ಸಹ ಸಮಾಜದಲ್ಲಿ ಯಾವುದೇ ಪ್ರಕ್ಷೋಭೆಯನ್ನು ಸೃಷ್ಟಿಸುವುದಿಲ್ಲ ಎಂದು ಹೇಳಿರುವ ನ್ಯಾಯಪೀಠ, ಒಂದೆರಡು ವ್ಯಕ್ತಿಗಳ ಮೇಲೆ ಪ್ರಭಾವ ಬೀರಿದರೂ ಈ ಕಾರಣಗಳಿಗಾಗಿಯೇ ವ್ಯಕ್ತಿಯನ್ನು ಐಪಿಸಿ ಸೆಕ್ಷನ್ 153ಎ-ಉಪನಿಯಮ (ಎ) ಉಪಸೆಕ್ಷನ್ (1) ಅಡಿಯಲ್ಲಿ ಶಿಕ್ಷೆಗೊಳಪಡಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅಷ್ಟೆ ಅಲ್ಲದೆ ಪೊಲೀಸ್ ಸಿಬ್ಬಂದಿಗೆ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕುರಿತಂತೆ ಸಂವಿಧಾನದ ಅನುಚ್ಚೇದ 19(1)ಎ ಕುರಿತು ಅರಿವು ಮೂಡಿಸಬೇಕಿದೆ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ತಮ್ಮ ವಾಟ್ಸಾಪ್ ಅಥವಾ ಸಾಮಾಜಿಕ ತಾಣಗಳ ಪೋಸ್ಟ್‌ಗಳಿಂದಾಗಿಯೇ ಶಿಕ್ಷೆ ಎದುರಿಸುತ್ತಿರುವ ಅಸಂಖ್ಯಾತ ಜನರ ವಿಶ್ವಾಸ ಗಳಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯ ಸಾಂವಿಧಾನಿಕ ಹಕ್ಕುಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನ ಈ ತೀರ್ಪು ಮಹತ್ವ ಗಳಿಸುತ್ತದೆ.
ಚುನಾವಣಾ ಬಾಂಡ್ ಮತ್ತು ಎಸ್‌ಬಿಐ
ಪ್ರಜಾತಂತ್ರದಲ್ಲಿ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನ ಮತ್ತೊಂದು ತೀರ್ಪನ್ನು ಚುನಾವಣಾ ಬಾಂಡ್ ಪ್ರಕರಣದಲ್ಲಿ ಗುರುತಿಸಬಹುದು. 2018ರಲ್ಲಿ ಜಾರಿಯಾದ ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನೇ ನಿರಾಕರಿಸಿರುವ ಸುಪ್ರೀಂಕೋರ್ಟ್ ತನ್ನ ಫೆಬ್ರವರಿ 15ರ ತೀರ್ಪಿನಲ್ಲಿ ಮಾರ್ಚ್ 6ರ ಒಳಗೆ ಬ್ಯಾಂಕಿನಿಂದ ವಿತರಿಸಲಾದ ಹಾಗೂ ನಗದೀಕರಿಸಲಾದ ಬಾಂಡ್‌ಗಳ ವಿವರವನ್ನು ಸಲ್ಲಿಸುವಂತೆ ಎಸ್‌ಬಿಐಗೆ ಆದೇಶಿಸಿತ್ತು. ವಿವರಗಳನ್ನು ಒದಗಿಸಲು ಜೂನ್ 30ರವರೆಗೆ ಕಾಲಾವಕಾಶ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ಮತ್ತೊಮ್ಮೆ ತಿರಸ್ಕರಿಸಿರುವ ಸುಪ್ರೀಂಕೋರ್ಟ್ ನ್ಯಾಯಪೀಠ ಮಾರ್ಚ್ 12ರ ಒಳಗೆ ನ್ಯಾಯಾಲಯ ಕೋರಿರುವ ಸಕಲ ವಿವರಗಳನ್ನು ಸಲ್ಲಿಸುವಂತೆ ಆದೇಶಿಸಿದೆ. ಈ ವಿವರಗಳನ್ನು ಚುನಾವಣಾ ಆಯೋಗವು ಮಾರ್ಚ್ 15ರ ಒಳಗೆ ತನ್ನ ವೆಬ್ ಸೈಟ್‌ನಲ್ಲಿ ಪ್ರಕಟಿಸುವಂತೆಯೂ ಆದೇಶಿಸಿದೆ. ಈ ಆದೇಶವನ್ನು ಪಾಲಿಸದಿದ್ದರೆ ಬ್ಯಾಂಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೋರ್ಟ್ ಹೇಳಿದೆ.
ಫೆಬ್ರವರಿ 15ರಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜಿ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಮುಖ್ಯನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ನೀಡಿದ್ದ ಆದೇಶದಂತೆ ಎಸ್‌ಬಿಐ ಮಾರ್ಚ್ 6 ಒಳಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ದಿನಾಂಕ, ಖರೀದಿಸಿದವರ ಹೆಸರು, ಬಾಂಡ್‌ಗಳ ಮುಖಬೆಲೆ, ನಗದೀಕರಿಸಲಾದ ದಿನಾಂಕ ಮತ್ತು ಮೊತ್ತವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಆದರೆ ಕಾಲಾವಕಾಶ ಕೋರಿದ ಅರ್ಜಿಯಲ್ಲಿ ಎಸ್‌ಬಿಐ ಈ ಅಪೇಕ್ಷಿತ ವಿವರಗಳೊಂದಿಗೆ ಯಾವ ಪಕ್ಷ ಯಾವ ದಿನಾಂಕದಂದು ನಗದೀಕರಿಸಿದೆ ಎನ್ನುವ ವಿವರಗಳನ್ನೂ ಕ್ರೋಢೀಕರಿಸಬೇಕಿರುವುದರಿಂದ ಹೆಚ್ಚಿನ ಸಮಯ ಬೇಕೆಂದು ಆಗ್ರಹಿಸಿತ್ತು. ಆದರೆ ಸುಪ್ರೀಂಕೋರ್ಟ್ ಈ ವಿವರಗಳನ್ನು ಕೇಳಿಯೇ ಇರಲಿಲ್ಲ. ಫೆಬ್ರವರಿ 15ರ ತೀರ್ಪಿನ ದಿನದಿಂದ 26 ದಿನಗಳ ಕಾಲ ಏನು ಮಾಡುತ್ತಿದ್ದಿರಿ ಎಂದು ಸುಪ್ರೀಂಕೋರ್ಟ್ ಬ್ಯಾಂಕನ್ನು ತರಾಟೆಗೆ ತೆಗೆದುಕೊಂಡಿರುವುದು ಭಾರತದ ಪ್ರತಿಷ್ಠಿತ ಬ್ಯಾಂಕಿಗೆ ನೈತಿಕ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಚುನಾವಣಾ ಬಾಂಡ್‌ಗಳ ಮೂಲಕ ಅತಿ ಹೆಚ್ಚು ದೇಣಿಗೆ ಬಂದಿರುವುದು ಬಿಜೆಪಿಗೆ ಎಂದು ಸ್ಪಷ್ಟವಾಗಿದ್ದು ಯಾವ ಉದ್ದಿಮೆದಾರರಿಂದ ಆಡಳಿತಾರೂಢ ಪಕ್ಷಕ್ಕೆ ಯಾವ ಸಮಯದಲ್ಲಿ ಎಷ್ಟು ದೇಣಿಗೆ ಬಂದಿದೆ ಎಂಬುದು ಬಹಿರಂಗವಾದರೆ, ಈಗ ದೇಶದಲ್ಲಿ ಚಾಲ್ತಿಯಲ್ಲಿರುವ ಆಪ್ತ ಬಂಡವಾಳಶಾಹಿಯ ಸ್ವರೂಪವೂ ಬಯಲಾಗುತ್ತದೆ. ಇದು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ತೊಡಕಾಗಿಯೂ ಪರಿಣಮಿಸಲಿದೆ. ಏನೇ ಆದರೂ ಸಾಮಾನ್ಯ ಜನತೆಯ ಮೂಲಭೂತ ಹಕ್ಕುಗಳನ್ನು ನಿರಾಕರಿಸಿ, ರಾಜಕೀಯ ಪಕ್ಷಗಳು ಉದ್ಯಮಿಗಳಿಂದ ಪಡೆಯುವ ದೇಣಿಗೆಯ ವಿವರಗಳನ್ನು ಗೋಪ್ಯವಾಗಿಡುವ ಚುನಾವಣಾ ಬಾಂಡ್ ಯೋಜನೆಯನ್ನು ಅಸಿಂಧುಗೊಳಿಸಿರುವುದೇ ಪ್ರಜಾಪ್ರಭುತ್ವದ ಗೆಲುವು ಎನ್ನಬಹುದು. ಈ ತೀರ್ಪಿನ ಮೂಲಕ ದೇಶದ ಸರ್ವೋಚ್ಛ ನ್ಯಾಯಾಲಯವು ಜನಸಾಮಾನ್ಯರ ಮಾಹಿತಿ ಹಕ್ಕನ್ನು ಕಾಪಾಡಿರುವುದೇ ಅಲ್ಲದೆ, ಆಡಳಿತ ವ್ಯವಸ್ಥೆಯಲ್ಲಿ ಇರಲೇಬೇಕಾದ ಪಾರದರ್ಶಕತೆಯನ್ನೂ ಎತ್ತಿಹಿಡಿದಿದೆ.
ನ್ಯಾಯಾಂಗದ ಶ್ರೀರಕ್ಷೆ
ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ಉಂಟಾದಾಗಲೆಲ್ಲಾ ಭಾರತದ ನ್ಯಾಯಾಂಗ ವ್ಯವಸ್ಥೆ ಸಾರ್ವಭೌಮ ಜನತೆಯಲ್ಲಿ ಸಂವಿಧಾನ ಹಾಗೂ ಪ್ರಜಾತಂತ್ರದ ಬಗ್ಗೆ ವಿಶ್ವಾಸ ಹೆಚ್ಚಿಸುವ ರೀತಿಯಲ್ಲಿ ಮಧ್ಯಪ್ರವೇಶ ಮಾಡಿದೆ. ಕೆಲವು ಸಂದರ್ಭಗಳಲ್ಲಿ ನ್ಯಾಯಾಂಗದ ತೀರ್ಪುಗಳು ಅನಪೇಕ್ಷಣೀಯವಾಗಿ ಕಂಡರೂ ಬಹುತೇಕ ಸನ್ನಿವೇಶಗಳಲ್ಲಿ ನ್ಯಾಯ ವ್ಯವಸ್ಥೆಯು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಲು ಮುಂದಾಗಿದೆ. ಆಡಳಿತಾರೂಢ ಪಕ್ಷಗಳು ಸಂಸದೀಯ ಬಹುಮತವನ್ನು ಆಧರಿಸಿ ಕೈಗೊಳ್ಳುವ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಜಾರಿಗೊಳಿಸುವ ಕಾಯ್ದೆ ಕಾನೂನುಗಳು ಸಂವಿಧಾನದ ಚೌಕಟ್ಟಿನೊಳಗೆ ಇರಬೇಕಾದುದು ಅವಶ್ಯವಾದರೂ, ಕಳೆದ ಹತ್ತು ವರ್ಷಗಳಲ್ಲಿ ಈ ಅವಶ್ಯಕತೆಯನ್ನು ಕಡೆಗಣಿಸಿರುವ ಪ್ರಸಂಗಗಳೇ ಹೆಚ್ಚಾಗಿ ಕಂಡಿವೆ. ನಿನ್ನೆ ಜಾರಿಗೊಳಿಸದ ಪೌರತ್ವ ತಿದ್ದುಪಡಿ ಕಾಯ್ದೆ ಒಂದು ನಿದರ್ಶನ.
ಆದಾಗ್ಯೂ ಭಾರತದ ಸಾಮಾನ್ಯ ಜನತೆಯ ನೆಮ್ಮದಿಯ ಬದುಕಿಗೆ ಅತ್ಯವಶ್ಯವಾದ ಪ್ರಜಾಪ್ರಭುತ್ವದ ಬುನಾದಿಯನ್ನು ಸುಸ್ಥಿತಿಯಲ್ಲಿಡುವಲ್ಲಿ ದೇಶದ ನ್ಯಾಯಾಂಗ ಆಗಾಗ್ಗೆ ಮಧ್ಯಪ್ರವೇಶ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಮೌಲ್ಯಗಳು ಶಿಥಿಲವಾಗುತ್ತಿರುವ ದುರಿತ ಕಾಲದಲ್ಲಿ ಸಂವಿಧಾನದ ಒಂದು ಪ್ರಧಾನ ಅಂಗವಾಗಿ ನ್ಯಾಯಾಂಗವು ಜನತೆಯ ಆಶೋತ್ತರಗಳಿಗೆ ಸ್ಪಂದಿಸುವುದು ಅಂಧಕಾರದ ಹಾದಿಯಲ್ಲಿ ಬೆಳಕಿಂಡಿಯನ್ನು ಕಂಡಂತಾಗುತ್ತದೆ. ಈ ವಿಷಮ ಸನ್ನಿವೇಶದಲ್ಲೂ ನ್ಯಾಯಾಂಗ ನಮ್ಮೊಂದಿಗಿದೆ ಎಂಬ ಆತ್ಮವಿಶ್ವಾಸದೊಡನೆ ಭಾರತದ ಜನತೆ ಮುನ್ನಡೆಯಬಹುದು.
-೦-೦-೦-