ತುಮಕೂರು ವಿವಿಯಲ್ಲಿ ಮಲ್ಲಿಕಾರ್ಜುನನಿಗೆ ನಿಜಕ್ಕೂ ನ್ಯಾಯ ಸಿಗುವುದೇ ?

ಕನ್ನಡ ವಿಭಾಗದಲ್ಲಿ ಆಗಿರುವ ಪ್ರಕರಣ ಗಂಭೀರ ಸ್ವರೂಪದ್ದುಎಂದು ವಿವಿ ಆಡಳಿತ ಮಂಡಳಿ ಇನ್ನಾದರೂ ಪರಿಗಣಿಸಿ, ನಿಯಮಾನುಸಾರ ಪಾರದರ್ಶಕ ಇಲಾಖಾ ವಿಚಾರಣೆ ನಡೆಸಿ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಅಥವಾ ದಂಡನೆ ವಿಧಿಸಿ, ಮಲ್ಲಿಕಾರ್ಜುನನಿಗೆ ಆತನ ಪಿಹೆಚ್.ಡಿ. ವಾಪಸ್ ಕೊಡಿಸಬೇಕಿದೆ.

ತುಮಕೂರು ವಿವಿಯಲ್ಲಿ ಮಲ್ಲಿಕಾರ್ಜುನನಿಗೆ ನಿಜಕ್ಕೂ ನ್ಯಾಯ ಸಿಗುವುದೇ ?


99% ಲೋಕಲ್ 


ಕುಚ್ಚಂಗಿ ಪ್ರಸನ್ನ

   ತುಮಕೂರು: ವಿವೇಚನೆಯೇ ಇಲ್ಲದೆ ಮಲ್ಲಿಕಾರ್ಜುನ ಎಂಬ ಸಂಶೋಧನಾರ್ಥಿಯ ಪಿಹೆಚ್.ಡಿ. ನೊಂದಣಿ ರದ್ದುಪಡಿಸಿದ ತುಮಕೂರು ವಿಶ್ವವಿದ್ಯಾನಿಲಯವು ಆತನಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಮತ್ತೆ ಕಣ್ಣಾ ಮುಚ್ಚಾಲೆ ಆಡತೊಡಗಿದೆಯೇ. ಹೌದು ಎನ್ನುತ್ತಿದೆ ವಿವಿಯ ಪಿಹೆಚ್.ಡಿ ಸೆಕ್ಷನ್ ನಡವಳಿಕೆ.


    ಕನ್ನಡ ವಿಭಾಗದ ಅಧ್ಯಾಪಕರು ಮಲ್ಲಿಕಾರ್ಜುನನ ಭವಿಷ್ಯದ ವಿಚಾರದಲ್ಲಿ ಈಗಾಗಲೇ ಒಂದು ಸಲ ಮಾಡಿದ ಅಧಿಕ ಪ್ರಸಂಗವನ್ನು ವಿವಿ ಆಡಳಿತ ವಿಭಾಗ ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸಬೇಕಿತ್ತಲ್ಲವೇ, ಇಲ್ಲ, ಅದರ ಬದಲಿಗೆ ತನಗೆ ಅನ್ಯಾಯ ಮಾಡಿದವರನ್ನು ಅಮಾನತು ಮಾಡಿ, ನನಗೆ ನ್ಯಾಯ ಕೊಡಿ ಎಂದು ದೂರಿರುವ ಮಲ್ಲಿಕಾರ್ಜುನನೊಂದಿಗೆ ವಿವಿ ಕಣ್ಣಾ ಮುಚ್ಚೇ ಕಾಡೇ ಗೂಡೇ ಆಟದಲ್ಲಿ ತೊಡಗಿದೆ. 


   ಯುವತಿಯೊಬ್ಬಳು ಗರ್ಭಿಣಿಯಾಗಲು ಈ ಮಲ್ಲಿಕಾರ್ಜುನ ಕಾರಣ ಎಂದು ವಿಷಯ ತಿಳಿದ ಎರಡು ಗಂಟೆ ಅವಧಿಯೊಳಗೇ ವಿಭಾಗದೊಳಗೇ ಕುಳಿತು ಅಂತಿಮ ತೀರ್ಮಾನಕ್ಕೆ ಬಂದ ವಿವಿ ಕನ್ನಡ ವಿಭಾಗದ ಅಧಿಕ ಪ್ರಸಂಗಿ ಅಧ್ಯಾಪಕರು, ಆಕೆಯನ್ನು ಮದುವೆ ಆಗು ಎಂದು ಪಟ್ಟು ಹಿಡಿಯುತ್ತಾರೆ, ಒತ್ತಡಕ್ಕೆ ಮಣಿದ ಆತನಿಂದ, “ಸರಿ ಆಕೆಯನ್ನು ಮದುವೆ ಆಗುತ್ತೇನೆ” ಎಂದು ಡಿಕ್ಟೇಶನ್ ಕೊಟ್ಟು ಪತ್ರ ಬರೆಸಿಕೊಳ್ಳುತ್ತಾರೆ, ಆತನ ಬ್ಯಾಂಕ್ ಖಾತೆಯಿಂದ ಐವತ್ತು ಸಾವಿರ ರೂಪಾಯಿ ಹಣವನ್ನೂ ಆ ಹುಡುಗಿಗೆ ಸಂಬಂಧಿಸಿದ ಯಾರಿಗೋ ಫೋನ್‌ಪೇ ಮಾಡಿಸುತ್ತಾರೆ. ಅಷ್ಟೂ ಸಾಲದು ಎಂಬಂತೆ ಆತನ ಮೇಲೆ ಮತ್ತಷ್ಟು ಒತ್ತಡ ಹೇರಿ, “ನನಗೆ ಪಿಹೆಚ್.ಡಿ ಮಾಡಲು ಆಸಕ್ತಿ ಇಲ್ಲ, ನನ್ನ ಪಿಹೆಚ್.ಡಿ ನೊಂದಣಿಯನ್ನು ರದ್ದು ಮಾಡಿ”ಎಂಬ ಒಕ್ಕಣೆಯ ಪತ್ರವನ್ನೂ ಆತನಿಂದ ಬರೆಸಿಕೊಂಡು ವಿವಿಯ ವಿಸಿಗೆ ತಲುಪಿಸಿಬಿಡುತ್ತಾರೆ. ವಿವಿಯ ವಿಸಿಯವರೋ ಯಾಕೆ ಏನು ಅಂತಲೂ ಯಾರನ್ನೂ ಕೇಳದೇ “ ಎತ್ತು ಈಯಿತು ಎಂದರೆ ಕಟ್ಟು ಕೊಟ್ಟಿಗೆಗೆ, ಕರು ಬಿಡು, ಹಾಲು ಕರಿ” ಎಂಬ ಗಾದೆಯಂತೆ ಮಲ್ಲಿಕಾರ್ಜುನನ ಪಿಹೆಚ್.ಡಿ ನೋಂದಣಿಯನ್ನು ರದ್ದುಪಡಿಸಿಬಿಡುತ್ತಾರೆ.


     ಅಲ್ರೀ, ನಿಮ್ಮ ಒತ್ತಡಕ್ಕೆ ಮಣಿದು ಆ ಗರ್ಭಿಣಿ ಯುವತಿಯನ್ನು ಮದುವೆ ಆಗಲು ಆ ಮಲ್ಲಿಕಾರ್ಜುನ ಲಿಖಿತ ಒಪ್ಪಿಗೆ ನೀಡಿದ ಮೇಲೂ, ಆತನ ಪಿಹೆಚ್.ಡಿಯನ್ನು ರದ್ದು ಪಡಿಸುವಂತೆ ಬರೆಸಿಕೊಳ್ಳಲು ಕಾರಣವೇನು? ವಿವಿ ಸ್ನಾತಕೋತ್ತರ ಕನ್ನಡ ವಿಭಾಗದ ನಿತ್ಯಾನಂದಶೆಟ್ಟಿ, ಅಣ್ಣಮ್ಮ, ನಾಗಭೂಷಣ ಬಗ್ಗನಡು, ಮತ್ತಿತರ ಅಧ್ಯಾಪಕರೇ,  ಆ ಯುವತಿ ಗರ್ಭ ಧರಿಸಲು ಮಲ್ಲಿಕಾರ್ಜುನನೇ ಕಾರಣ ಎಂಬ ತೀರ್ಮಾನ ಮಾಡಿ, ಆಕೆಯೊಂದಿಗೆ ಆತನಿಗೆ ಮದುವೆ ಮಾಡಿಸಲು ಸಜ್ಜಾಗಿದ್ದರಲ್ಲ, ಮದುವೆ ಆದ ಮೇಲೆ ಆತ ತನ್ನ ಪಿಹೆಚ್.ಡಿ. ಮುಂದುವರೆಸಿದ್ದರೆ ನಿಮಗೆ ಏನೆಲ್ಲ ತೊಂದರೆ ಆಗುತ್ತಿತ್ತು? ಉತ್ತರ ಕೊಡಿ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಮಲ್ಲಿಕಾರ್ಜುನನ ಮೇಲೆ ಏನಾದರೊಂದು ತಪ್ಪು ಹೊರಿಸಿ ಆತ ಸಂಶೋಧನೆ ಮುಂದುವರೆಸದಂತೆ ತಡೆಯುವುದೇ ಇಡೀ ಕನ್ನಡ ವಿಭಾಗದ ಉದ್ದೇಶವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.


    ಇದೆಲ್ಲ ನಡೆದದ್ದು 1.12.2022ರಂದು ತುಮಕೂರು ವಿವಿಯ ಕನ್ನಡ ವಿಭಾಗದಲ್ಲಿ, ಅದಾದ ಮೇಲೆ ಪೊಲೀಸ್ ಠಾಣೆಯಲ್ಲಿ ಆ ಗರ್ಭಿಣಿ ಯುವತಿ ಮಲ್ಲಿಕಾರ್ಜುನನ ವಿರುದ್ಧ ದೂರು ನೀಡಿದ್ದು, 19.12.2022ರಂದು ಆತನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತದೆ, ಅಷ್ಟೊತ್ತಿಗೆ ಆತ ನಾಪತ್ತೆಯಾಗಿರುತ್ತಾನೆ. ಹೀಗೆ ನಾಪತ್ತೆಯಾದ ಎಷ್ಟೋ ತಿಂಗಳ ಬಳಿಕ ಆತನನ್ನು ಪೊಲೀಸರು ಹುಡುಕಿ ಹಿಡಿದು ತಂದು ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತಾರೆ. ಘನ ನ್ಯಾಯಾಲಯ ಮಲ್ಲಿಕಾರ್ಜುನನ್ನು ನ್ಯಾಯಾಂಗ ಬಂಧನಕ್ಕೂ ಕಳಿಸುತ್ತದೆ. 


    ಅಷ್ಟು ಹೊತ್ತಿಗೆ ಆಕೆಗೆ ಮಗುವೂ ಜನಿಸಿರುತ್ತದೆ. ನ್ಯಾಯಾಲಯದ ಆದೇಶದ ಮೇರೆಗೆ ಆ ಯುವತಿ, ಆಕೆಯ ಮಗು ಹಾಗೂ ಮಲ್ಲಿಕಾರ್ಜುನನ ಡಿಎನ್‌ಎ ಹಾಗೂ ರಕ್ತ ಪರೀಕ್ಷೆ ನಡೆದು ಮಲ್ಲಿಕಾರ್ಜುನ ಆ ಮಗುವಿನ ಜೈವಿಕ ತಂದೆ ಅಲ್ಲ ಎಂದು ಸಾಬೀತಾಗಿ ಆತನನ್ನು ನ್ಯಾಯಾಲಯ ದೋಷ ಮುಕ್ತ ಗೊಳಿಸಿದೆ. 2022ರ ಡಿಸೆಂಬರ್ ಹಾಗೂ 2024ರ ಜನವರಿಯೊಳಗೆ ಇಷ್ಟೆಲ್ಲ ನಡೆದಿದೆ.


   ಮಲ್ಲಿಕಾರ್ಜುನನಿಗೂ ಆ ಯುವತಿ ಗರ್ಭಿಣಿಯಾಗುವುದಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದು ಹೀಗೆ ವೈಜ್ಞಾನಿಕವಾಗಿ ಸಾಬೀತಾಗುವ ಮೊದಲೇ ಆತನೇ ಆಕೆಯ ಹೊಟ್ಟೆಯಲ್ಲಿರುವ ಮಗುವಿನ ತಂದೆ ಎಂದು ಜಡ್ಜ್ಮೆಂಟ್ ಕೊಡುವ ಹಕ್ಕನ್ನು ವಿವಿ ಕನ್ನಡ ವಿಭಾಗದ ಅಧ್ಯಾಪಕರಿಗೆ ಕೊಟ್ಟವರು ಯಾರು? ಜೊತೆಗೆ ಮಲ್ಲಿಕಾರ್ಜುನನ ಮೇಲೆ ಅನಪೇಕ್ಷಿತ ಒತ್ತಡ ಹೇರಿ “ ನನಗೆ ಪಿಹೆಚ್.ಡಿಯೇ ಬೇಡ” ಎಂದು ಬರೆಸಿಕೊಳ್ಳಲು ಈ ಪಂಚಾಯಿತಿ ನಡೆಸಿದ ನಿತ್ಯಾನಂದಶೆಟ್ಟರು ಹಾಗೂ ಗೈಡ್ ನಾಗಭೂಷಣ ಬಗ್ಗನಡು ಅವರಿಗೆ ಅಧಿಕಾರ ಕೊಟ್ಟವರು ಯಾರು? 


    ಈ ಎಲ್ಲ ಅಂಶಗಳ ಕುರಿತು ಕನ್ನಡ ವಿಭಾಗದ ಮೇಲ್ಕಂಡ ಅಧ್ಯಾಪಕರ ವಿರುದ್ಧ ವಿವಿ ಅನುಸರಿಸುತ್ತಿರುವ ಕರ್ನಾಟಕ ನಾಗರಿಕ ಸೇವಾ ನಿಯಮಗಳು ಹಾಗೂ ಸಿಸಿಎ ನಿಯಮಗಳ ಅನ್ವಯ ಇಲಾಖಾ ವಿಚಾರಣೆ ನಡೆಸಲು ಮುಂದಾಗಿಲ್ಲವೇಕೆ.


     ಬದಲಿಗೆ ವಿವಿಯ ಸಂಶೋಧನಾ ನಿರ್ದೇಶನಾಲಯದ ಮುಖ್ಯಸ್ಥರು ದೂರುದಾರ ಮಲ್ಲಿಕಾರ್ಜುನನಿಗೆ ವಿಚಾರಣೆಗೆ ಹಾಜರಾಗುವಂತೆ ಲಿಖಿತ ಮೆಮೊ ಅಥವಾ ನೋಟಿಸ್ ಕಳಿಸದೇ ಕೇವಲ ದೂರವಾಣಿ ಕರೆ ಮೂಲಕ ದೂರದ ಪಾವಗಡದಿಂದ ಜು.18ರ ಗುರುವಾರ ಖಾಸಗಿಯಾಗಿ ಕರೆಸಿಕೊಂಡು , ಆತನಿಗೆ ಏನೇನೋ ಸೂಚನೆಗಳನ್ನು ನೀಡಿ, ಪಿಹೆಚ್.ಡಿ. ಸೆಕ್ಷನ್‌ನಲ್ಲಿ ನಡೆದ ಯಾವ ಸಂಗತಿಯನ್ನೂ ಯಾರಿಗೂ ತಿಳಿಸಬೇಡ ಎಂದು ಗುಟ್ಟು ಕಾಪಾಡುವಂತೆ ತಾಕೀತು ಪಡಿಸಿ ವಾಪಸ್ ಕಳಿಸಲು ಕಾರಣವೇನು?


    ತುಮಕೂರು ವಿವಿಯಲ್ಲಿ ಮಲ್ಲಿಕಾರ್ಜುನನ ಪ್ರಕರಣದಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎಂಬುದು ಬಹಿರಂಗ ಗೊಳ್ಳಬೇಕಿದೆ. ತುಮಕೂರು ವಿವಿ ಯಾರ ಉಂಬಳಿ ಎಂಬುದನ್ನೂ ವಿವಿ ವಿಸಿ ಬಿಡಿಸಿ ಹೇಳಬೇಕಿದೆ.


    ತುಮಕೂರು ವಿಶ್ವ ವಿದ್ಯಾಲಯ ಅಸ್ತಿತ್ವಕ್ಕೆ ಬಂದು 20 ವರ್ಷಗಳಾಗಿವೆ. ಈವರೆಗೆ ನಾಲ್ವರು ಪೂರ್ಣಾವಧಿ ವಿಸಿಗಳು ಬಂದು ಹೋಗಿದ್ದಾರೆ. ಒಂದು ಅವಧಿಗೆ ಶರ್ಮಾ ಎಂಬ ಮೆಕಾನಿಕಲ್ ಇಂಜಿನಿಯರ್ ಕೈಗೆ ಸಿಕ್ಕಿ ಈ ವಿವಿ ಎಷ್ಟರ ಮಟ್ಟಿಗೆ ನರಳಿತು ಎಂಬುದಕ್ಕೆ ಇಡೀ ತುಮಕೂರಿಗೆ ತುಮಕೂರೇ ಸಾಕ್ಷಿ ಹೇಳುತ್ತದೆ. ಯಾವ ರೋಸ್ಟರ್ ನಿಯಮಗಳನ್ನೂ ಅನುಸರಿಸದೇ 30 ಕುಲ ಬಾಂಧವರನ್ನು ಶರ್ಮಾ ಈ ವಿವಿಯಲ್ಲಿ ನೆಲೆಗೊಳಿಸಿದರೆ, ಶಿವಲಿಂಗಯ್ಯ ಎಂಬಾತ ತನ್ನ ಜಾತಿಯ ಅಷ್ಟೇ ಸಂಖ್ಯೆಯ ಅಧ್ಯಾಪಕರನ್ನು ನೇಮಿಸಿಕೊಂಡಿರುವುದೂ ಸತ್ಯ ಸಂಗತಿ. 


    ಕಿರಿಯ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿದ್ದ ವ್ಯಕ್ತಿಯನ್ನು ನೇರಾನೇರ ವಿವಿಯ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಿಸಿಕೊಳ್ಳಲಾಗಿದೆ. ಈತನ ಕಿರುಕುಳದಿಂದಾಗಿ ಹತ್ತಾರು ಸಂಶೋಧನಾರ್ಥಿಗಳು ಪಿಹೆಚ್.ಡಿ. ಬಿಟ್ಟು ಹೋಗಿದ್ದಾರಂತೆ. ಮೊನ್ನೆ ಮೊನ್ನೆ ಕೂಡಾ ಒಬ್ಬ ಹೆಣ್ಣು ಮಗಳು ನೇರಾ ನೇರ ವಿಸಿಗೆ ಲಿಖಿತ ದೂರು ನೀಡಿದ್ದಾರೆ. ಮತ್ತೊಬ್ಬ ಪ್ರತಿಭಾನ್ವಿತ ಪಿಹೆಚ್.ಡಿ. ಅಭ್ಯರ್ಥಿ ಲಿಖಿತ ಪರೀಕ್ಷೆಯಲ್ಲಿ ವಿವಿಗೆ ಎರಡನೇ ಸ್ಥಾನ ಪಡೆದರೂ ವೈವಾದಲ್ಲಿ 30 ಅಂಕಗಳಿಗೆ ಕೇವಲ ಎಂಟು ಅಂಕ ಕೊಟ್ಟು ಆತನಿಗೆ ಪಿಹೆಚ್.ಡಿ. ತಪ್ಪಿಸಿರುವ ದೂರಿದೆ.


    ತಾನು ಮಾತ್ರ ವಿವಿಯ ಏಕೈಕ ದಲಿತ ಪರ ಅಧ್ಯಾಪಕ ಎಂದು ಬೊಗಳೆ ಬಿಡುವವರಿಗೆ ಮಲ್ಲಿಕಾರ್ಜುನನ್ನು ಬಲಿಪಶು ಮಾಡುವ ವಿಫಲ ಪ್ರಯತ್ನದಲ್ಲಿ ನಿಜಕ್ಕೂ ಅನ್ಯಾಯವಾಗಿರುವುದು ಮದುವೆ ಆಗದೇ ಮಗು ಹೆತ್ತ ಯುವತಿಗೆ ಎಂದು ಅರ್ಥವಾಗಿಲ್ಲವೇಕೆ. ಮದುವೆ ಮಾಡಿಸಲು ಅಷ್ಟೊಂದು ಉತ್ಸುಕತೆ ತೋರುವವರಿಗೆ ಈಕೆಯ ಮಗುವಿನ ನಿಜವಾದ ತಂದೆ ಯಾರೆಂದು ಹುಡುಕಿ ನ್ಯಾಯ ಕೊಡಿಸುವ ಆಸಕ್ತಿ ಇಲ್ಲವೇಕೆ? 


    ಇದೇ ವಿವಿಯಲ್ಲಿ ಒಂದು ಅವಧಿಗೆ ರಿಜಿಸ್ಟ್ರಾರ್ ಆಗಿದ್ದ ಹಾಲಿ ವಿಸಿಯವರಿಗೆ ಇದೆಲ್ಲ ತಿಳಿಯದ ಸಂಗತಿಯೇನಲ್ಲ. ವಿವಿಯೊಳಗೆ ಸದಾ ದಿನಕ್ಕೆರಡು ಭಾಷಣ, ಉಪನ್ಯಾಸ ಸಮಾರಂಭಗಳಲ್ಲಿ ಬಿಡುವಿಲ್ಲದೇ ತೊಡಗಿಸಿಕೊಳ್ಳುವ ಇವರಿಗೆ ಆಡಳಿತದ ವಿಚಾರದಲ್ಲಿ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲವೇಕೋ?


    ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳದೇ ಹೋದರೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವರ್ಷಕ್ಕೊಬ್ಬರು ಮಲ್ಲಿಕಾರ್ಜುನಂತೆ ಭವಿಷ್ಯ ಕಳೆದುಕೊಂಡು ಬೀದಿ ಪಾಲಾಗುವುದನ್ನು ಯಾರೂ ತಪ್ಪಿಸಲಾರರು.


     ಕನ್ನಡ ವಿಭಾಗದಲ್ಲಿ ಆಗಿರುವ ಪ್ರಕರಣ ಗಂಭೀರ ಸ್ವರೂಪದ್ದುಎಂದು ವಿವಿ ಆಡಳಿತ ಮಂಡಳಿ ಇನ್ನಾದರೂ ಪರಿಗಣಿಸಿ, ನಿಯಮಾನುಸಾರ ಪಾರದರ್ಶಕ ಇಲಾಖಾ ವಿಚಾರಣೆ ನಡೆಸಿ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಅಥವಾ ದಂಡನೆ ವಿಧಿಸಿ, ಮಲ್ಲಿಕಾರ್ಜುನನಿಗೆ ಆತನ ಪಿ.ಹೆಚ್.ಡಿ. ವಾಪಸ್ ಕೊಡಿಸಬೇಕಿದೆ.

ಹಿಂದಿನ ಸಂಚಿಕೆಯ ಈ ಲೇಖನವನ್ನೂ ಓದಿ

ತುಮಕೂರು ವಿವಿಯ ಈ ಮಲ್ಲಿಕಾರ್ಜುನನಿಗೆ ನ್ಯಾಯ ಕೊಡಿಸುವುದು ಹೇಗೆ ?!

ನೀವು ಮುಂದಿನ ಪ್ಯಾರಾಗಳಲ್ಲಿ ಓದಲಿರುವುದು ದಿನಾಂಕ 01.12.2022ರಂದು ಮಧ್ಯಾಹ್ನ ತುಮಕೂರು ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ನಡೆದ ವಿಲಕ್ಷಣ ಘಟನೆಯ ಲಭ್ಯವಿರುವಷ್ಟು ಆಡಿಯೋ ದಾಖಲೆಯ ಅಕ್ಷರ ರೂಪ.

    ಸಂದರ್ಭ: ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸಂಶೋಧನಾರ್ಥಿಯಾಗಿದ್ದ  ಮಲ್ಲಿಕಾರ್ಜುನ.ಎನ್.‌ ಎಂಬಾತ ತರುಣಿಯೊಬ್ಬಳು ಗರ್ಭಿಣಿಯಾಗಲು ಕಾರಣ ಎಂದು ಆ ಯುವತಿಯ ಕುಟುಂಬದ ಸದಸ್ಯರು ನೀಡಿದ ಮೌಖಿಕ ದೂರು. ಮತ್ತು ಆ ದೂರನ್ನು ಆಧರಿಸಿ, ಆ ವಿಭಾಗದ ಅಧ್ಯಾಪಕರಾದ ಮತ್ತು ಈಗ ಅಧ್ಯಕ್ಷರಾಗಿರುವ ನಿತ್ಯಾನಂದ ಬಿ.ಶೆಟ್ಟಿಯವರು ಆಪಾದಿತ ಮಲ್ಲಿಕಾರ್ಜುನನ್ನು ಹಾಗೂ ಆತನ ಗೈಡ್‌ ಆಗಿದ್ದ ನಾಗಭೂಷಣ ಬಗ್ಗನಡು ಅವರನ್ನು ಕರೆಸಿ ನಿಲ್ಲಿಸಿ ಅಂದು ಆ ವಿಭಾಗದ ಅಧ್ಯಕ್ಷರಾಗಿದ್ದ ಅಣ್ಣಮ್ಮನವರು ಮತ್ತು ಇತರ ಅಧ್ಯಾಪಕರು, ಸಿಬ್ಬಂದಿ ಹಾಗೂ ಸಂಶೋಧನಾರ್ಥಿಗಳ ಸಮಕ್ಷಮ ನಡೆಸಿದ ನ್ಯಾಯ ಪಂಚಾಯಿತಿ.

     ಪಂಚಾಯಿತಿಯ ಅಂತಿಮ ತೀರ್ಮಾನದಂತೆ ಆಪಾದಿತ ಮಲ್ಲಿಕಾರ್ಜುನ ಆ ಗರ್ಭಿಣಿ ತರುಣಿಯನ್ನು ಆ ತಕ್ಷಣವೇ ಮದುವೆ ಆಗಬೇಕೆಂದು ಒತ್ತಾಯಿಸಲಾಗುತ್ತದೆ ಹಾಗೂ ಅದೇ ರೀತಿ ಆತನಿಂದ ಪತ್ರ ಬರೆಸಿದ ಪ್ರಸಂಗ, ಆತ ಆ ಪತ್ರವನ್ನು ಹೇಗೆ ಬರೆಯಬೇಕೆಂದು ಉಕ್ತಲೇಖನ ಕೊಟ್ಟದ್ದು ನಿತ್ಯಾನಂದ ಬಿ.ಶೆಟ್ಟಿಯವರು .

****

     ಲಭ್ಯ 11 ನಿಮಿಷಗಳ ಆಡಿಯೋ ರೆಕಾರ್ಡಿಂಗ್‌ ಇದ್ದಕ್ಕಿದ್ದಂತೆ ನಡುವಲ್ಲೇ ಆರಂಭಗೊಂಡಿದೆ.  

     “ಈಗಾಗ್ಗೆ ಏಳು ತಿಂಗಳ ಗರ್ಭಿಣಿಯಾಗಿರುತ್ತಾಳೆ, ಈ ಹಿನ್ನೆಲೆಯಲ್ಲಿ ಆಕೆಯ ರಕ್ತ ಸಂಬಂಧಿಗಳಾದ ಶ್ರೀಮತಿ …, ಶ್ರೀಮತಿ …, ಶ್ರೀಮತಿ ….., ಇವರ ಸಮಕ್ಷಮದಲ್ಲಿ ಮತ್ತು ವಿಭಾಗದ ಅಧ್ಯಕ್ಷರೂ ನನ್ನ ಸಂಶೋಧನಾ ಮಾರ್ಗದರ್ಶಕರೂ (ನೆಕ್ಸ್ಟ್‌ ಪೇಜ್‌ಗೋಗು ಏನು ತೊಂದ್ರೆ ಇಲ್ಲ) ನನ್ನ ಸಂಶೋಧನಾ ಮಾರ್ಗದರ್ಶಕರೂ ಹಾಗೂ ವಿಭಾಗದ ಉಳಿದ ಅಧ್ಯಾಪಕರ ಸಮ್ಮುಖದಲ್ಲಿ ಸದರಿ ಹುಡುಗಿಯನ್ನು ಕಾನೂನು ರೀತ್ಯಾ ವಿವಾಹವಾಗುವುದಾಗಿ ಈ ಮೂಲಕ ಪ್ರಮಾಣ ಮಾಡುತ್ತಿದ್ದೇನೆ.ನೆಕ್ಸ್ಟ್‌ ಪ್ಯಾರಾ.

     ಗುಜು ಗುಜು

     ವಿವಾಹವಾದ ನಂತರ ……. ಎಂಬ ಈ ಹುಡುಗಿಗೆ ಯಾವುದೇ ರೀತಿಯ (ಅದನ್ನೇ ಅವರ ಸಂಬಂಧಿಕರು ಬಂದು ಹೇಳಿದ್ದು) ದೈಹಿಕ ಅಥವಾ ಮಾನಸಿಕ ( ಮತ್ತೊಂದು ದನಿ ಪಿ.ಎಂ.ಗಂಗಾಧರಯ್ಯನವರದು “ಜೀವಹಿಂಸೆಯನ್ನು” ಎಂದು ಸೇರಿಸುತ್ತದೆ) ಕಿರುಕುಳ ಬಾರ್‌ ಜೀವ ಹಿಂಸೆಯನ್ನು ನೀಡುವುದಿಲ್ಲ ಎಂದು  ಈ ಮೂಲಕ ಪ್ರಮಾಣ ಮಾಡುತ್ತೇನೆ.

     ವಂದನೆಗಳು”

    “ಅದನ್ನು ಓದು ಈಗ ಗಟ್ಟಿಯಾಗಿ ಓದು, ಇಲ್ಲೇ ಹತ್ರ ನಿಂತ್ಕೋ, ಎನ್ನುತ್ತಾರೆ ಶೆಟ್ಟರು.

     ಈಗ ಅವನು ಅದನ್ನು ಓದಿ ಹೇಳುತ್ತಾನೆ, ಆತ  ವಿವಿಯ ಕುಲಸಚಿವರಿಗೆ ಬರೆದ ಪತ್ರವನ್ನು ಓದತೊಡಗುತ್ತಾನೆ.

    ಆ ಪತ್ರದ ಉಲ್ಲೇಖದಲ್ಲಿ ತನ್ನ ಮಾರ್ಗದರ್ಶಕರ ಹೆಸರನ್ನು ಬರೆದಿರುವುದನ್ನು ಕೇಳಿ, ನಾಗಭೂಷಣ ಬಗ್ಗನಡು ತೀವ್ರವಾಗಿ ಆಕ್ಷೇಪಿಸಿ ತೆಗೆಸುತ್ತಾರೆ.

    ಆಪಾದಿತ ಮಲ್ಲಿಕಾರ್ಜುನ ಪತ್ರ ಓದಿ ಮುಗಿಸಿದ ನಂತರ “ ಸರಿ” ಎನ್ನುವ ನಿತ್ಯಾನಂದ ಶೆಟ್ಟರು “ ಅರವಿಂದ” ಅಂತ ಮತ್ತೊಬ್ಬ ಸಂಶೋಧನಾರ್ಥಿಯನ್ನು ಕೂಗಿ ಕರೆದು “ ಇದರ ಒಂದು ಕ್ಸೆರಾಕ್ಸ್‌ ಮಾಡು ಬ್ಯಾಕ್‌ ಟು ಬ್ಯಾಕ್” ಎನ್ನುತ್ತಾರೆ.‌” ಸರಿ ಸರ್”

    ಶೆಟ್ಟಿ: ಈಗ ಮುಂದಿನ ವಿಷಯ ಏನು ಅಂತ ಹೇಳಿ

    ಮಹಿಳಾ ದನಿ (ಅಣ್ಣಮ್ಮ): ಅವರ ಗೈಡ್‌ ಹೇಳಲಿ, ಅದು ತಾತ್ವಿಕವಾಗಿ ಅವರು ಹೇಳಲಿ

   ಬಗ್ಗನಡು: ಏನು ಹೇಳಲಿ ಮೇಡಂ

    (ಅಣ್ಣಮ್ಮ): ಕ್ರಮ ಇಲ್ಲಿಂದಾನೇ ಶುರುವಾಗಬೇಕು, ಅದಕ್ಕೆ ಕಾಲಾವಕಾಶ ಇಲ್ಲ, ಅಲ್ಲಿಗೆ ಹೋದರೆ ರಿಜಿಸ್ಟ್ರಾರ್‌ ಆಫೀಸ್‌ಗೆ  ಹೋದರೆ  ಒಂದು ತಿಂಗಳೋ ಎರಡು ತಿಂಗಳೋ ಕಾಲಾವಕಾಶ ಬೇಕು, ಅಲ್ಲವಾ

   ಬಗ್ಗನಡು: ಹೂಂ ಮತ್ತೆ

    ಶೆಟ್ಟಿ: ಹಾಗಾದರೆ ಅಷ್ಟೊತ್ತಿಗೆ ಡೆಲಿವರಿ(ಹೆರಿಗೆ) ಆಗಿಬಿಟ್ಟಿರುತ್ತೆ.( ಎಲ್ಲರೂ ಡೆಲಿವರಿ ಎನ್ನುವ ಪದ ಹಿಡಿದು ಹೌದು ಹೌದು ಎನ್ನುತ್ತಾರೆ)

   ಶೆಟ್ಟಿ: ಪತ್ರ ಗಿತ್ರ ಕೊಟ್ಟು (ರಿಜಿಸ್ಟ್ರಾರ್‌ ಆಫೀಸ್‌ಗೆ) ಅದರ ಇದೆಲ್ಲ ಮಾಡೋಕೆ ಹೋದರೆ ಡೆಲಿವರಿ ಆಗಿಬಿಟ್ಟಿರುತ್ತದೆ.

    ಶಿವು: ನಾಳೆ ಬೆಳಿಗ್ಗೆ ರೆಡಿ ಆದರೆ ಅಲ್ಲೇ ರಿಜಿಸ್ಟರ್‌ ಆಗುತ್ತೆ , ಕ್ಲೋಸ್‌

   ಶೆಟ್ಟಿ: ನಾಳೆ ಬೆಳಿಗ್ಗೆ ಅಂತೆ

   ಅಣ್ಣಮ್ಮ: ಈಗ ಏನು ಮಾಡಬೇಕಾಗಿದೆ.  ಹುಡುಗ ಹುಡುಗಿ ಸ್ನಾನ ಮಾಡಕೋತಾರೆ, ಅವರಿಗೆ ಬೇಕಾದ ಸರಳವಾದ ಬಟ್ಟೆ ಹಾಕ್ಕೋತಾರೆ, ಹಾರ ಬದಲಾಯಿಸ್ತಾರೆ, ತಾಳಿ ಕಟ್ಟಿಸಿ

   ಶಿವು: ಲಗ್ನ ಪತ್ರಿಕೆ, ಆಧಾರ್‌ ಕಾರ್ಡ್‌ , ಮೂರ್‌ ಸಾವಿರ ಫೀಸ್‌ ತಗೋತಾರೆ,

   ಶೆಟ್ಟಿ: ಲಗ್ನಪತ್ರಿಕೆ ಎಲ್ಲಿ

   ಶಿವು: ಇಪ್ಪತ್ತು ನಿಮಿಷದಲ್ಲಿ ರೆಡಿ ಆಗುತ್ತೆ , ಕಲರ್‌ ಪ್ರಿಂಟ್‌

  ಮೂರು ನಾಲ್ಕು ದನಿಗಳು ಸೇರಿ ಲಗ್ನಪತ್ರಿಕೆ ಪ್ರಿಂಟ್‌ ಹಾಕಿಸುವ ಬಗ್ಗೆ ಗುಜುಗುಜು ಮಾತನಾಡಿಕೊಳ್ಳುತ್ತಾರೆ.

   ಬಗ್ಗನಡು: ಇಲ್ಲಿಗೆ ನಮ್ಮದೊಂದು ಹಂತ ಮುಗೀತು, ಇಷ್ಟು ಅವನು ಉಲ್ಲಂಘಿಸಿದಾ ಅಂದ್ರೆ..,

   ಅಣ್ಣಮ್ಮ: ಅಲ್ಲಿ (ರಿಜಿಸ್ಟ್ರಾರ್‌ ಕಚೇರಿಯಲ್ಲಿ) ಹತ್ತು ನಿಮಿಷ ವೇಟ್‌ ಮಾಡು, ಇವನು ಅಲ್ಲಿಗೆ ಬರಲಿಲ್ಲ ಅಂದ್ರೆ ಈ ಎಲ್ಲ ದಾಖಲೆಗಳನ್ನಾ ತಗೊಂಡು ಹೋಗಿ..,

    ಶಿವು: ಅದು ನನಗೆ ಗೊತ್ತು.”

   ******

   ಹಿನ್ನೆಲೆ:  ತುಮಕೂರು ವಿವಿಯ ಕನ್ನಡ ವಿಭಾಗದಲ್ಲಿ ನಾಗಭೂಷಣ ಬಗ್ಗನಡು ಎಂಬ ಅಧ್ಯಾಪಕರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ವಾಂಸನಾಗಿದ್ದ ಮಲ್ಲಿಕಾರ್ಜುನ್‌ ಎನ್‌ ಎಂಬ ಪಾವಗಡ ತಾಲೂಕಿನ ಹಳ್ಳಿಯಿಂದ ಬಂದಿದ್ದಾತ, ಮನೆ ಕೆಲಸಕ್ಕೆಂದು ಆತನ ರೂಮಿಗೆ ಬರುತ್ತಿದ್ದ ಅಪ್ರಾಪತ್ತ ತರುಣಿಯೊಬ್ಬಳನ್ನು ಪುಸಲಾಯಿಸಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದಾನೆ, ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ, ಆಕೆ ಗರ್ಭಿಣಿಯಾಗಿ ಆರೇಳು ತಿಂಗಳು ತುಂಬುವ ಸಮಯದಲ್ಲಿ ಆಕೆ ಮತ್ತು ಆಕೆಯ ಕುಟುಂಬದ ಇತರ ಮೂವರು ಮಹಿಳೆಯರು ವಿವಿಯ ಕನ್ನಡ ವಿಭಾಗಕ್ಕೆ ಬಂದು ಅಲ್ಲಿ ಅಧ್ಯಾಪಕರಾಗಿರುವ ನಿತ್ಯಾನಂದ ಶೆಟ್ಟಿಯವರ ಮುಂದೆ ನಡೆದದ್ದನ್ನೆಲ್ಲ ಹೇಳಿಕೊಳ್ಳುತ್ತಾರೆ. ಅವರ ಜೊತೆಗೆ ಆ ಕುಟುಂಬದ ಪರಿಚಿತ ಹಾಗೂ ಅದೇ ಕನ್ನಡ ವಿಭಾಗದಲ್ಲಿ ಎಂಎ ಓದುತ್ತಿದ್ದ ಶಿವು( ಶಿವಕುಮಾರ್)‌ ಎಂಬಾತನೂ ಬಂದಿರುತ್ತಾನೆ. ಸಬ್‌ ರಿಜಿಸ್ಟ್ರಾರ್‌ ಆಫೀಸಿನಲ್ಲಿ ಲಗ್ನಪತ್ರಿಕೆ, ಆಧಾರ್‌ ಕಾರ್ಡ್‌ ಜೊತೆಗೆ 3 ಸಾವಿರ ರೂ. ಫೀಸ್‌ ಕೊಟ್ಟರೆ ಮದುವೆ ಆಗಿಬಿಡುತ್ತೆ ಎಂದು ಐಡಿಯಾ ಕೊಡುವಾತನೇ ಈ ಶಿವು ಎಂಬಾತ.

     ತಮ್ಮಲ್ಲಿಗೆ ಬಂದು ಬಾಯಿ ಮಾತಿನಲ್ಲಿ ದೂರು ಹೇಳಿಕೊಂಡ ಮಹಿಳೆಯರನ್ನು ಅಲ್ಲೇ ತಮ್ಮ ಡಿಪಾರ್ಟ್‌ಮೆಂಟ್‌ ಚೇಂಬರ್‌ನಲ್ಲಿ ಇರಿಸಿಕೊಂಡು ಮತ್ತೊಬ್ಬ ಸಂಶೋಧನಾರ್ಥಿ ಮುಖಾಂತರ ಫೋನ್‌ ಕರೆ ಮಾಡಿಸಿ ಆಕೆ ತಾನು ಗರ್ಭ ಧರಿಸಲು ಕಾರಣನಾದ ಎಂದು ದೂರಿದ ಸಂಶೋಧನಾರ್ಥಿ ಮಲ್ಲಿಕಾರ್ಜುನ. ಎನ್‌ ಎಂಬಾತನನ್ನು ಅಲ್ಲಿಗೇ ಕರೆಸಿಕೊಳ್ಳುತ್ತಾರೆ ನಿತ್ಯಾನಂದ ಶೆಟ್ಟರು. ನಂತರ ಎಲ್ಲೋ ಭಾಷಣ ಮಾಡುತ್ತಿದ್ದ ಮಲ್ಲಿಕಾರ್ಜುನನ ಪಿಹೆಚ್‌.ಡಿ. ಗೈಡ್‌ ನಾಗಭೂಷಣ ಬಗ್ಗನಡು ಅವರನ್ನೂ ಇದೇ ಶೆಟ್ಟರೇ ಕರೆಸಿಕೊಳ್ಳುತ್ತಾರೆ. ಜೊತೆಗೆ ಕನ್ನಡ ವಿಭಾಗದ ಅಂದಿನ ಅಧ್ಯಕ್ಷರಾಗಿದ್ದ ಡಾ.ಅಣ್ಣಮ್ಮನವರು, ಇತರ ಅಧ್ಯಾಪಕರನ್ನೂ ನಿತ್ಯಾನಂದ ಶೆಟ್ಟರು ಕರೆಸಿಕೊಂಡು ಸುಮಾರು ಎರಡು ಗಂಟೆ   ಕಾಲ ವಿಚಾರಣೆ ನಡೆಸುತ್ತಾರೆ. ಮಲ್ಲಿಕಾರ್ಜುನ ತಪ್ಪಿತಸ್ಥ ಎಂಬ ತೀರ್ಮಾನಕ್ಕೆ ಸ್ಥಳದಲ್ಲಿದ್ದ ಎಲ್ಲರೂ ಬಂದು ಬಿಡುತ್ತಾರೆ. ಹಾಗಾಗಿ ಆಪಾದಿತ ಮಲ್ಲಿಕಾರ್ಜುನ ಅಲ್ಲೇ ಆಕೆಯನ್ನು ಮದುವೆ ಆಗಿಬಿಡುವುದೇ ಪರಿಹಾರ ಅಂತಲೂ ತೀರ್ಪು ನೀಡಿಬಿಡುತ್ತಾರೆ. ಮದುವೆಯನ್ನು ಮಾಡಿಸುವ ವಿಧಾನದ ಕುರಿತೂ ನಿಷ್ಕರ್ಷೆ ನಡೆಯುತ್ತದೆ. ಕಡೆಗೆ, ಆ ಶಿವು ಎಂಬಾತನ ಮೂಲಕ ಮಲ್ಲಿಕಾರ್ಜುನನ ಫೋನ್‌ ಪೇ ಯಿಂದ 50 ಸಾವಿರ ರೂಪಾಯಿಗಳನ್ನು ಮತ್ಯಾರದೋ ಫೋನ್‌ ಪೇ ಖಾತೆಗೆ ಹಾಕಿಸಿಕೊಡುತ್ತಾರೆ.

    ಅಲ್ಲಿಗೆ ಅವತ್ತಿನ ಎಪಿಸೋಡ್‌ ಮುಗಿಯಿತು ಅಂತ ಅಂದುಕೊಳ್ಳಬೇಡಿ. ಅದೇ ಕ್ಷಣದಲ್ಲಿ ಮಲ್ಲಿಕಾರ್ಜುನನಿಂದ ಮತ್ತೊಂದು ಪತ್ರವನ್ನೂ ಬರೆಸಿಕೊಳ್ಳಲಾಗುತ್ತದೆ. ಮಲ್ಲಿಕಾರ್ಜುನ, “ತಾನು ಸ್ವ ಇಚ್ಚೆಯಿಂದ ತನ್ನ ಸಂಶೋಧನೆಯನ್ನು ಸ್ಥಗಿತಗೊಳಿಸುತ್ತಿದ್ದೇನೆ “ ಎಂಬ ಒಕ್ಕಣೆಯ ಪತ್ರವನ್ನು ವಿವಿ ವಿಸಿ/ ರಿಜಿಸ್ಟ್ರಾರ್‌ ಅವರಿಗೆ ಬರೆದು, ತನ್ನ ಗೈಡ್‌ ಹಾಗೂ ವಿಭಾಗದ ಅಧ್ಯಕ್ಷರಿಗೆ ಹಸ್ತಾಂತರಿಸಿ,ವಿವಿಯಿಂದ ಹೊರಡುತ್ತಾನೆ. 03.12.2022ರ ದಿನಾಂಕಿತ ಈ ಪತ್ರ ಹಾಗೂ ಕನ್ನಡ ವಿಭಾಗದ ಅಧ್ಯಕ್ಷರ ದಿನಾಂಕ 01.04.2023ರ ಪತ್ರಗಳನ್ನು ಉಲ್ಲೇಖಿಸಿ ವಿವಿಯ ಕುಲಸಚಿವರು ಮೇ26ರಂದು ಕಚೇರಿ ಆದೇಶವೊಂದನ್ನು ಹೊರಡಿಸಿ, ಸಂಶೋಧನಾರ್ಥಿಯ ಕೋರಿಕೆ ಹಾಗೂ ವಿಭಾಗದ ಮುಖ್ಯಸ್ಥರ ಶಿಫಾರಸಿನಂತೆ ಮಲ್ಲಿಕಾರ್ಜುನನ ಪಿಹೆಚ್.ಡಿ ನೊಂದಣಿಯನ್ನು  ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.

     ಇನ್ನೇನು ಎಲ್ಲ ಸರಿಹೋಯಿತಲ್ಲ, ಆ ತರುಣಿಯನ್ನು ನಂಬಿಸಿ ದೈಹಿಕ ಸಂಬಂಧ ಹೊಂದಿ ಗರ್ಭಿಣಿ ಮಾಡಿದ ಮಲ್ಲಿಕಾರ್ಜುನ ಕಡೆಗೆ ಆ ತರುಣಿಯನ್ನೇ ಮದುವೆ ಆದನಲ್ಲ, ಜೊತೆಗೆ ಆತನ ದುರ್ನಡತೆಗಾಗಿ ಆತನ ಪಿಹೆಚ್.ಡಿ. ನೊಂದಣಿಯನ್ನೇ ರದ್ದುಪಡಿಸಲಾಯಿತಲ್ಲ , ಇನ್ನೇನು ಆಗಬೇಕಿತ್ತು. ವಿವಿ ಕನ್ನಡ ವಿಭಾಗವೇ ಸ್ವಯಂಸ್ಪೂರ್ತಿಯಿಂದ ತಾನೇ ಕೇವಲ ಎರಡು ಗಂಟೆಯಲ್ಲಿ ಎಷ್ಟು ಚೆನ್ನಾದ ವಿಚಾರಣೆ ನಡೆಸಿ, ಯಾವ ಸುಪ್ರೀಂ ಕೋರ್ಟ್‌ ಸಹಾ ನೀಡಲಾಗದಂತ ತೀರ್ಪು ಕೊಟ್ಟುಬಿಟ್ಟಿತಲ್ಲ. ಅಂತ ನೀವು ಹೇಳಬಹುದು. ಆದರೆ ಮುಂದೆ ನಡೆದದ್ದೇ ಬೇರೆ!?

    ಇಡೀ ಕನ್ನಡ ವಿಭಾಗದ ಅಧ್ಯಕ್ಷರು ,ಅಧ್ಯಾಪಕರು ಹಾಗೂ ನಿತ್ಯಾನಂದ ಶೆಟ್ಟಿ ಅವರ ನಿರ್ದೇಶನದಂತೆ ಪತ್ರ ಬರೆದುಕೊಟ್ಟ ಮಲ್ಲಿಕಾರ್ಜುನ ಆ ತರುಣಿಯನ್ನು ಮದುವೆಯಾಗಲು ಬರುವುದಿಲ್ಲ ಮತ್ತು ನಾಪತ್ತೆಯಾಗಿಬಿಡುತ್ತಾನೆ. ಅದೇ ತಿಂಗಳ 19ರಂದು ಆತನ ವಿರುದ್ಧ ತುಮಕೂರು ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಕೇಸು ದಾಖಲಾಗುತ್ತದೆ. ಅದಾದ ಆರು ತಿಂಗಳ ನಂತರ ಮಲ್ಲಿಕಾರ್ಜುನ ಬಂಧನಕ್ಕೊಳಗಾಗಿ ಜೈಲು ಸೇರುತ್ತಾನೆ, ಕೆಲ ತಿಂಗಳ ನಂತರ ಜಾಮೀನು ಪಡೆದು ಹೊರಬರುತ್ತಾನೆ. ಈ ಮಧ್ಯೆ ದೂರು ನೀಡಿದ್ದ ಗರ್ಭಿಣಿ ತರುಣಿಗೆ ಹೆರಿಗೆಯಾಗಿ ಮಗು ಜನಿಸುತ್ತದೆ.

    ಪ್ರಕರಣದ ವಿಚಾರಣೆ ನಡೆದು ತುಮಕೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಫಾಸ್ಟ್ರಾಕ್‌ ಸಿ-1)ವು  ದಿನಾಂಕ 27.01.2024ರಂದು ತೀರ್ಪು ನೀಡುತ್ತದೆ. ಘನ ನ್ಯಾಯಾಲಯದ ತೀರ್ಪಿನ ಪ್ರಕಾರ ಮಲ್ಲಿಕಾರ್ಜುನ ತನ್ನ ವಿರುದ್ಧ ದೂರು ನೀಡಿದ ತರುಣಿಗೆ ಜನಿಸಿರುವ ಮಗುವಿನ ಜೈವಿಕ ತಂದೆ ಅಲ್ಲ!?

     ಯಾವ ವ್ಯಕ್ತಿಯ ವಿರುದ್ಧ ಅಕ್ರಮ ಲೈಂಗಿಕ ಸಂಬಂಧ ಹಾಗೂ ಆಕೆ ಗರ್ಭಿಣಿಯಾಗಲು ಕಾರಣ ಎಂದು ನೀಡಿದ ದೂರಿನಲ್ಲಿ ಸತ್ಯಾಂಶವಿಲ್ಲ, ಮಲ್ಲಿಕಾರ್ಜುನ ನಿರ್ದೋಷಿ ಅಂತ ಆಯಿತಲ್ವ. ಮುಂದೇನು ಮಾಡುವುದು ನೀವೇ ಹೇಳಿ.

      ಆ ತರುಣಿಯ ಬಾಯಿ ಮಾತಿನ ದೂರು ನೀಡಿದ್ದನ್ನೇ ನಿಜವೆಂದು ನಂಬಿ ವಿಚಾರಣೆ ನಡೆಸಿ,  ಆಕೆಯನ್ನೇ ಮದುವೆ ಆಗುವಂತೆ ಮಲ್ಲಿಕಾರ್ಜುನನ ಮೇಲೆ ಒತ್ತಡ ಹೇರಿದ್ದಲ್ಲದೇ ಆತನಿಂದ ಹಾಗೆಂದು ಪತ್ರವನ್ನೂ ಬರೆಸಿಕೊಂಡು, ಮದುವೆ ತಯಾರಿಯನ್ನೂ ಮಾಡಿಬಿಟ್ಟಿದ್ದ ವಿವಿ ಕನ್ನಡ ವಿಭಾಗದ ಅಧ್ಯಕ್ಷರು, ಅಧ್ಯಾಪಕರಾದ ನಿತ್ಯಾನಂದ ಶೆಟ್ಟಿ ಹಾಗೂ ಇತರರು ಮತ್ತು ಆತನ ಗೈಡ್‌ ನಾಗಭೂಷಣ ಬಗ್ಗನಡು ಅವರು ಈಗ ಏನು ಹೇಳಬಹುದು ನೀವೇ ಕೇಳಿ ನೋಡಿ.

     ಒಂದು ವೇಳೆ ಆ ಮಲ್ಲಿಕಾರ್ಜುನ ಆ ಗರ್ಭಿಣಿ ತರುಣಿಯನ್ನು ಅಧ್ಯಾಪಕರು ಹಾಗೂ ಗೈಡ್‌ ಒತ್ತಡದಂತೆ ಮದುವೆಯನ್ನೂ ಆಗಿಬಿಟ್ಟಿದ್ದರೆ, ಮದುವೆ ಆದನಲ್ಲ ಎಂಬ ಕಾರಣಕ್ಕೆ ಆಕೆ ಪೊಲೀಸರಿಗೇ ದೂರು ಕೊಡದೇ ಹೋಗಿದ್ದರೆ, ಇಷ್ಟೊತ್ತಿಗೆ ಆ ಮಲ್ಲಿಕಾರ್ಜುನ ಒಂದು ಮಗುವಿನ ತಂದೆಯಾಗಿ ಗೃಹಸ್ಥನಾಗಿ ಬಿಟ್ಟಿರುತ್ತಿದ್ದ, ಜೊತೆಗೆ ಅದೇ ಅಧ್ಯಾಪಕರ ಗ್ಯಾಂಗು ಈತನಿಂದ ಪಿಹೆಚ್‌,ಡಿ ರದ್ದತಿಗೂ ಸ್ವಯಂ ಬದ್ಧತೆಯ ಪತ್ರವನ್ನೂ ಬರೆಸಿಕೊಂಡು ಬಿಟ್ಟಿತ್ತಲ್ಲ, ಹಾಗಾಗಿ ಪಿಹೆಚ್‌,ಡಿಯೂ ಆತನ ಪಾಲಿಗೆ ಇಲ್ಲವಾಗಿಬಿಡುತ್ತಿತ್ತು ಅಲ್ವ.

    ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಮಲ್ಲಿಕಾರ್ಜುನ ದೋಷ ಮುಕ್ತನಾದರೂ ರೋಷ ಮುಕ್ತನಾಗಲಿಲ್ಲ. ತನಗೆ ಅಧ್ಯಾಪಕರಾದ ನಿತ್ಯಾನಂದಶೆಟ್ಟಿ ಅವರಿಂದ ಅನ್ಯಾಯವಾಗಿದೆ ವಿವಿ ವಿಸಿಯವರಿಗೆ ಜೂನ್‌ ಮೊದಲ ವಾರದಲ್ಲಿ ದೂರು ನೀಡಿದ, ನಂತರ ನಿತ್ಯಾನಂದ ಶೆಟ್ಟಿ ಅವರ ವಿರುದ್ಧ ಜಾತಿ ನಿಂದನೆ ದೂರನ್ನೂ ಪೊಲೀಸರಿಗೆ ನೀಡಿದ. ತುಮಕೂರು ಜಿಲ್ಲೆಯ ಕೆಲ ದಲಿತ ಮುಖಂಡರು ಠಾಣೆಗೆ ಬಂದು ಖಾಜಿ ನ್ಯಾಯ ಮಾಡಿದ್ದರ ಪರಿಣಾಮ ನಿತ್ಯಾನಂದ ಶೆಟ್ಟರ ಮೇಲೆ ಜಾತಿನಿಂದನೆ ಕೇಸು ದಾಖಲಾಗಿಲ್ಲ.

     ಮಲ್ಲಿಕಾರ್ಜುನ ಮತ್ತೆ ಅಷ್ಟಕ್ಕೇ ಸುಮ್ಮನಾಗಿಲ್ಲ, ಆತ ಮತ್ತೆ ವಿಸಿ ಅವರನ್ನು ಎರಡು ದಿನದ ಹಿಂದೆ ಭೇಟಿ ಮಾಡಿ ಮತ್ತೊಂದು ಲಿಖಿತ ಮನವಿ ಸಲ್ಲಿಸಿ, ತನಗೆ ಪಿಹೆಚ್‌.ಡಿ ಅಧ್ಯಯನ ಅವಕಾಶ ಮರಳಿ ಕೊಡಿಸಿ ಹಾಗೂ ನಿತ್ಯಾನಂದ ಶೆಟ್ಟಿ ಅವರನ್ನು ಅಮಾನತು ಮಾಡಿ ಎಂದು ಕೋರಿದ್ದಾನೆ.

     ಈ ಪ್ರಕರಣ ಕುರಿತಂತೆ , ವಿವಿ ವಿಸಿ ಪ್ರೊ. ವೆಂಕಟೇಶ್ವರಲು ಅವರು ಪತ್ರಿಕೆಯೊಂದಿಗೆ ಮಾತನಾಡಿ, ಮಲ್ಲಿಕಾರ್ಜುನನ ದಿನಾಂಕ 03.12.2022ರ ಮನವಿ ಹಾಗೂ ಕನ್ನಡ ವಿಭಾಗದ ಡಾಕ್ಟರಲ್‌ ಕಮಿಟಿ ಶಿಫಾರಸಿನಂತೆ ಪಿಹೆಚ್.ಡಿ ನೊಂದಣಿ ರದ್ದುಪಡಿಸಲಾಗಿದೆ. ಈತ ಈತನ ಕಳೆದ ತಿಂಗಳ ಮನವಿ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮತ್ತೊಂದು ವಿಭಾಗಕ್ಕೆ ಸೂಚನೆ ನೀಡಿದ್ದೇನೆ. ಅವರು ಸಲ್ಲಿಸುವ ವರದಿಯನ್ನು ಸಿಂಡಿಕೇಟ್‌ ಮುಂದೆ ಇಟ್ಟು ಸಿಂಡಿಕೇಟ್‌ ತೀರ್ಮಾನದಂತೆ ಕ್ರಮ ಜರುಗಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

    ಇಷ್ಟೆಲ್ಲ ಆದ ಮೇಲೂ, ಉಳಿದುಕೊಳ್ಳುವ ಪ್ರಶ್ನೆಗಳೇನೆಂದರೆ:

  • ದಿನಾಂಕ 01.12.2022ರ ಶನಿವಾರ ಯುವತಿಯೊಬ್ಬಳು ತನ್ನ ಕುಟುಂಬದ ಸದಸ್ಯರೊಂದಿಗೆ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಬಂದು ನಿತ್ಯಾನಂದ ಶೆಟ್ಟಿ ಅವರನ್ನು ಭೇಟಿ ಮಾಡಿ, ವಿವಿ ಕ್ಯಾಂಪಸ್‌ ಹೊರಗೆ ಸಂಶೋಧನಾರ್ಥಿ ಮಲ್ಲಿಕಾರ್ಜುನನ ವಾಸದ ರೂಮಿನಲ್ಲಿ ಆತ ತನ್ನನ್ನು ಪುಸಲಾಯಿಸಿ, ನಂಬಿಸಿ ಹಲವಾರು ಬಾರಿ ದೈಹಿಕ ಸಂಬಂಧ ಬೆಳೆಸಿದ್ದಾನೆ, ಅದರಿಂದಾಗಿ ನಾನು ಗರ್ಭಿಣಿಯಾಗಿದ್ದೇನೆ ಎಂದು ಹೇಳಿಕೊಂಡ ತಕ್ಷಣವೇ , ಸದರಿ ಅಧ್ಯಾಪಕರೇ ನಾಯಕತ್ವ ವಹಿಸಿಕೊಂಡು, ಮಲ್ಲಿಕಾರ್ಜುನ ಹಾಗೂ ಆತನ ಗೈಡ್‌ ಅನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ವಿಭಾಗದ ಅಧ್ಯಕ್ಷರು ಹಾಗೂ ಇತರ ಅಧ್ಯಾಪಕರನ್ನು ಕರೆಸಿಕೊಂಡು ನ್ಯಾಯ ಪಂಚಾಯಿತಿ ಮಾಡುವ ಅವಶ್ಯಕತೆ ಇತ್ತೇ,ಮತ್ತು ಹಾಗೆ ಪಂಚಾಯಿತಿ ನಡೆಸಿ, ಮದುವೆ ಮಾಡಿಸಲೂ ಮುಂದಾಗುವಷ್ಟು ಅಧಿಕಾರ ಶೆಟ್ಟರಿಗಿತ್ತೇ, ಅಂಥ ಅಧಿಕ ಪ್ರಸಂಗ ತನಕ್ಕೆ ಶೆಟ್ಟರು ಮುಂದಾದರೇಕೆ?

  • ಡಿ.1.12.2022ರಂದು ಕನ್ನಡ ವಿಭಾಗದಲ್ಲಿ ಇಷ್ಟೆಲ್ಲ ಅರಳಿಕಟ್ಟೆ ನ್ಯಾಯಪಂಚಾಯಿತಿ ಮಾಡುವ ಮುನ್ನ ಕೂಗಳತೆ ದೂರದಲ್ಲಿದ್ದ ವಿಸಿ ಅಥವಾ ಮತ್ತು ರಿಜಿಸ್ಟ್ರಾರ್‌ ಅವರನ್ನಾಗಲೀ ಸಂಪರ್ಕಿಸಿ ವಿಷಯ ತಿಳಿಸಲಿಲ್ಲವೇಕೆ?

  • ನಿತ್ಯಾನಂದ ಶೆಟ್ಟರಂತೆಯೇ ಅದೇ ವಿವಿಯಲ್ಲಿ ಅಧ್ಯಾಪಕರಾಗಿರುವ ಹಾಗೂ ಮಲ್ಲಿಕಾರ್ಜುನನ ಗೈಡ್‌ ಆಗಿದ್ದ ನಾಗಭೂಷಣ ಬಗ್ಗನಡು ಅವರಾದರೂ ಶೆಟ್ಟರ ಒತ್ತಡಕ್ಕೆ ಮಣಿಯದೇ, ಇದು ಮಲ್ಲಿಕಾರ್ಜುನನ ಖಾಸಗಿ ಸಂಗತಿ, ಇದು ವಿವಿಗಳ ವಿಭಾಗದಲ್ಲಿ ಇತ್ಯರ್ಥ ಮಾಡುವಂತ ಅಕಾಡೆಮಿಕ್‌ ಸ್ವರೂಪದ ದೂರಲ್ಲ , ಇದು ಕ್ರಿಮಿನಲ್‌ ಸ್ವರೂಪದ ದೂರು, ನಾನು ಈ ಖಾಸಗಿ ನ್ಯಾಯ ಪಂಚಾಯಿತಿಯಲ್ಲಿ ಭಾಗಿಯಾಗುವುದಿಲ್ಲ ಎಂದು ದೂರ ನಿಲ್ಲಲಿಲ್ಲವೇಕೆ?

  • ನಿತ್ಯಾನಂದ ಶೆಟ್ಟಿ ಹಾಗೂ ನಾಗಭೂಷಣ ಬಗ್ಗನಡು ಅವರಿಬ್ಬರೂ ಕೇವಲ ಅಧ್ಯಾಪಕರು ಹೌದು ತಾನೇ, ಇಡೀ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದ ಅಣ್ಣಮ್ಮನವರಾದರೂ ಈ ಇಬ್ಬರು ಅಧ್ಯಾಪಕರು ಹೇಳಿದಂತೆ ಕೇಳಿದ್ದೂ ಅಲ್ಲದೇ, ಮದುವೆ ಮಾಡಿಸುವ ವಿಧಾನವನ್ನೂ ಸೂಚಿಸುತ್ತಾರಲ್ಲ, ಇವರಿಗೆಲ್ಲ ವಿವೇಕ, ವಿವೇಚನೆ ಎನ್ನುವುದೆಲ್ಲ ಇರಲೇ ಇಲ್ಲವಾ ?

  • ತಾನು ಈ ಪ್ರಕರಣದಲ್ಲಿ ತಪ್ಪಿತಸ್ಥನಲ್ಲ ಎಂದು ಬಲವಾಗಿ ಪ್ರತಿಪಾದಿಸುವ ಬದಲು ತಪ್ಪೊಪ್ಪಿಕೊಂಡದ್ದೂ ಅಲ್ಲದೇ ನಿತ್ಯಾನಂದ ಶೆಟ್ಟರು ಡಿಕ್ಟೇಟ್‌ ಮಾಡಿದಂತೆಯೇ ಆಕೆಯನ್ನು ಮದುವೆಯಾಗುವುದಾಗಿ ಹಾಗೂ ತನಗೆ ಪಿಹೆಚ್‌.ಡಿ ಅಧ್ಯಯನವೂ ಬೇಡ ಎಂದು ಪತ್ರಗಳನ್ನು ಬರೆದುಕೊಟ್ಟ ಮಲ್ಲಿಕಾರ್ಜುನ ಎಂಬ ಅಂದಿನ ಆಪಾದಿತ ಸಂಶೋಧನಾರ್ಥಿ 50 ಸಾವಿರ ಮೊತ್ತವನ್ನು ತನ್ನ ಖಾತೆಯಿಂದ ಶೆಟ್ಟರ ಶಿಷ್ಯನೆಂದು ಗುರುತಿಸಲಾಗಿರುವ ಶಿವು ಎಂಬಾತ ಹೇಳಿದವರ ಖಾತೆಗೆ ವರ್ಗಾಯಿಸಿ, ನಾಪತ್ತೆಯಾಗಲು ಬಲವಾದ ಕಾರಣವೇನಿತ್ತು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

  • ತಾವೇ ಮುಂದೆ ನಿಂತು ಹಳ್ಳಿ ಅರಳಿಕಟ್ಟೆ ನ್ಯಾಯ ಪಂಚಾಯಿತಿ ಮಾಡಿದ ನಿತ್ಯಾನಂದ ಶೆಟ್ಟರು, ಈ ಶೆಟ್ಟರೊಂದಿಗೆ ಕೈ ಜೋಡಿಸಿದ ಗೈಡ್‌ ನಾಗಭೂಷಣ್‌ ಮತ್ತು ಅಣ್ಣಮ್ಮನವರು, ಈಗ ಮಲ್ಲಿಕಾರ್ಜುನ ದೋಷಿ ಅಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿರುವುದರಿಂದ ತಮ್ಮ ದುಡುಕು ಕ್ರಮದಿಂದಾಗಿ ಮಲ್ಲಿಕಾರ್ಜುನನಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಡಲೇಕೆ ಮುಂದಾಗುತ್ತಿಲ್ಲ, ಮಲ್ಲಿಕಾರ್ಜುನನಿಗೆ ಪಿಹೆಚ್‌.ಡಿ ಮರಳಿ ಕೊಡಿಸುವ ಜೊತೆಗೆ ಆತನಿಂದ ಯಾರಿಗೋ ಕೊಡಿಸಿಕೊಟ್ಟ ರೂ.50 ಸಾವಿರ ಮೊತ್ತವನ್ನೂ ವಾಪಸ್‌ ಕೊಡಿಸುವುದಲ್ಲದೇ  ಆತನಿಗೆ ಉಂಟು ಮಾಡಿದ ಮುಜುಗರವನ್ನೂ ಸರಿಪಡಿಸಿಕೊಡಬೇಕಲ್ಲವೇ.

     ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಕೇವಲ ವಿದ್ಯೆ ಕಲಿತು ಪದವಿಗಳನ್ನು ಪಡೆದು ಮುಂದೆ ಸಾಗುತ್ತಿಲ್ಲ, ಸಂಶೋಧನಾರ್ಥಿಗಳು ಅಧ್ಯಯನ ಪೂರೈಸಿ ಡಾಕ್ಟರೇಟ್‌ ತೆಗೆದುಕೊಂಡು ಉದ್ಯೋಗ ಅರಸಿ ಮುಂದೆ ಹೋಗುತ್ತಿಲ್ಲ. ಅಧ್ಯಾಪಕರೂ ಅಷ್ಟೇ, ತಾವಾಯಿತು, ತಮ್ಮ ಪಾಠ ಪ್ರವಚನಗಳನ್ನು ಮಾಡುತ್ತ ಉದ್ಯೋಗ ಮಾಡಲು ಸಿದ್ಧರಿಲ್ಲ. ʼ ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಯೊಳಕ್ಕೆ ಕರೆದು ಕೂರಿಸಿಕೊಂಡಂತೆʼ ಎಂಬ ಗಾದೆ ಮಾತಿಗೆ ತಕ್ಕಂತೆ  ಮಾಡಿಕೊಂಡು ನೆಮ್ಮದಿ ಕಳೆದುಕೊಂಡಿದ್ದಾರೆ ಅಂತ ಹೇಳಬೇಕಾಗಿದೆ.