“ನಿನ್ನ ಪ್ರೇಮದ ಒಂದು ಹನಿ, ನನ್ನೊಳಗೆ ಬೆರೆತುಹೋಗಿತ್ತು”

“ನಿನ್ನ ಪ್ರೇಮದ ಒಂದು ಹನಿ, ನನ್ನೊಳಗೆ ಬೆರೆತುಹೋಗಿತ್ತು”


              ಅಮೃತಾರ ಕವಿತೆಗಳನ್ನು ಆ ಕಾಲ ಪ್ರವಾಹದ ವಿಪ್ಲವದ ನೆಲೆಯಲ್ಲಿ ವಿಕಸನಗೊಂಡ ಕಾವ್ಯಭಾಷೆಯ ದೃಷ್ಟಿಯಿಂದಲೇ ಓದಬೇಕು. ಅಮೃತಾರ ಭಾಷೆ ಪ್ರೇಮ ಭಾಷೆ. ಪ್ರೇಮವೇ ಅವರ ಗುಣ. ಭಾಷೆ ಪ್ರತಿಮೆ ರೂಪಕಗಳಿಂದ ಅಲಂಕೃತವಾದುದು,  ಅಲ್ಲಿ ಹೃದಯವನ್ನು ಸೂರೆಗೊಳ್ಳುವಂಥ ಸಮ್ಮೋಹಕ ಪದಲಾಲಿತ್ಯದ ಲಯವಿದೆ, ಸೊಬಗಿದೆ, ಗಾಢವಾದ ಬದುಕಿನ ಅನುಭವವಿದೆ ಎನ್ನುತ್ತಾರೆ ಲೇಖಕಿ ಪ್ರಿಯಾಂಕ. ಕಳೆದ ವಾರ ಅಮೃತಾ ಪೀತಂ ಬದುಕಿನ ಕುರಿತು ಓದಿದ್ದ ನೀವು  ಈ ವಾರದ ‘ಕಿನ್ನರಿ’ಯಲ್ಲಿ ಆಕೆಯ ಸೃಜನಶೀಲ ಬರೆಹದತ್ತ ಗಮನ ಹರಿಸಿ- ಸಂಪಾದಕ 

ಡಾ.ಪ್ರಿಯಾಂಕ ಎಂ.ಜಿ
ಅಮೃತಾ ಪ್ರೀತಂ : ಬದುಕು-ಬರಹ
“ನಿನ್ನ ಪ್ರೇಮದ ಒಂದು ಹನಿ, ನನ್ನೊಳಗೆ ಬೆರೆತುಹೋಗಿತ್ತು”

            ಪಂಜಾಬಿ ಸಾಹಿತ್ಯದ ಸಂದರ್ಭವನ್ನು ಸ್ವಾತಂತ್ರö್ಯ ಪೂರ್ವ ಸಾಹಿತ್ಯ ಮತ್ತು ಸ್ವಾತಂತ್ರೊö್ಯÃತ್ತರ ಸಾಹಿತ್ಯವೆಂದು ನೋಡಬಹುದು. 1947 ಸ್ವಾತಂತ್ರö್ಯ ಪ್ರಾಪ್ತಿಯ ಕಾಲ ವಿಭಜನೆಯ ಹಿಂಸಾಚಾರ, ದಂಗೆ, ನರಮೇಧದ ಕರಾಳಕಾಲವೂ ಹೌದು. ಈ ವಿಭಜನೆ ಪಂಜಾಬನ್ನು ಎರಡು ಹೋಳಾಗಿಸಿತು. ಪಂಜಾಬಿನ ಸಾಮಾಜಿಕ ಜನಜೀವನ, ಸಂಸ್ಕೃತಿಯನ್ನು ಗಾಢವಾಗಿ ಪ್ರಭಾವಿಸಿತು. ವಿಭಜನೆಯ ಭೀಕರತೆ, ಗಾಯ ಮತ್ತು ಯಾತನೆಗಳನ್ನು ಸೂಸಿದ ಸಂವೇದನಶೀಲ ಸಾಹಿತ್ಯ ಆ ಕಾಲದಲ್ಲಿ ವಿಪುಲವಾಗಿ ನಿರ್ಮಿತವಾಗಿತ್ತು. 
            ಭಾಯೀ ವೀರ್ ಸಿಂಗ್, ಪ್ರೊ.ಮೋಹನ್ ಸಿಂಗ್, ಅಮೃತಾ ಪ್ರೀತಂ, ಗೋಪಾಲ ಸಿಂಗ್ ‘ದರ್ದಿ’, ಹರಿಂದರ್ ಸಿಂಗ್ ನೂರ್  “ಕಂವರ್”; ಮುಂತಾದ ಕವಿಗಳು ಭಾರತ ವಿಭಜನೆಯ ದುರಂತದ ದುರ್ದಿನಗಳಿಗೆ ಸಾಕ್ಷಿಯಾದವರು ಮತ್ತು ಆ ಎಲ್ಲ ಸಂಕಟಗಳನ್ನು ಸ್ವತಃ ಅನುಭವಿಸಿದವರು. ಅಂಥ ಸಂದರ್ಭದಲ್ಲಿ ಅಮೃತಾ ಪ್ರೀತಂ ‘ಆಜ್ ಅಖ್ಕಾಂ ವಾರಿಸ್ ಶಾಹ್ ನೂ’ ಬರೆದು ಉಭಯ ದೇಶಗಳ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿಹೋದರು. “ಶವಗಳ ರಾಶಿಯನ್ನಷ್ಟೇ ಅಲ್ಲ, ಶವಗಳಂಥ ಜನರನ್ನೂ ಕಂಡಿದ್ದೇನೆ” ಎಂದು ತಮ್ಮ ಆತ್ಮಕಥೆ – ‘ರಶೀದಿ ಟಿಕೇಟ್’ ನಲ್ಲಿ ಬರೆದಿದ್ದಾರೆ. ವಿಭಜನೆಯ ನರಕಯಾತನೆಯೇ ಆ ಕಾಲದ ಪಂಜಾಬಿ ಸಾಹಿತ್ಯದ ಕೇಂದ್ರಬಿAದು ಆಗಿತ್ತು. 
             ಹಿಂದೂ – ಮುಸ್ಲಿಂ ದ್ವಿಸಂಸ್ಕೃತಿಯ ಫಲವಾಗಿ ಅರಬ್ಬಿ ಮತ್ತು ಫಾರ್ಸಿ ಭಾಷೆಗಳ ಪ್ರಭಾವಕ್ಕೊಳಗಾಗಿದ್ದ ಪಂಜಾಬಿ ಸಾಹಿತ್ಯ, ವಿಭಜನೆಯ ನಂತರ ಆ ಪ್ರಭಾವದಿಂದ ಮುಕ್ತವಾಗಿ ಭಾರತೀಯ ಸಂಸ್ಕೃತಿ, ಭಾರತೀಯ ಭಾಷೆಗಳಿಗೆ ಹೆಚ್ಚು ಹತ್ತಿರವಾಯಿತು ಎನ್ನುತ್ತಾರೆ ಚಿಂತಕರು. ಹೊಸದಾಗಿ ಕಟ್ಟಿಕೊಂಡ ನಗರಗಳು ಜನಜೀವನವನ್ನು ಬದಲಿಸಿದವು. ವಿಕಾಸದ ಹೊಸ ಆಯಾಮಗಳು ಪಂಜಾಬಿ ಸಾಹಿತ್ಯ ಮತ್ತು ಭಾಷೆ ಎರಡಕ್ಕೂ ತೆರೆದುಕೊಂಡವು. ಹೊಸ ಉತ್ಸಾಹ, ಹೊಸ ಚೈತನ್ಯದಿಂದ ಸಾಹಿತ್ಯ ರಚನೆಯಾಗತೊಡಗಿತು. ಅಮೃತಾ ಪ್ರೀತಂ, ದೇವೇಂದ್ರ ಸತ್ಯಾರ್ಥಿ, ಬಾಬಾ ಬಲವಂತರ ಕಾವ್ಯರಚನೆಯಲ್ಲಿ ಈ ಹೊಸ ಪ್ರವೃತ್ತಿ ಎದ್ದು ಕಾಣುತ್ತದೆ ಎನ್ನುತ್ತಾರೆ ವಿಮರ್ಶಕರು.
              ಅಮೃತಾರ ಕವಿತೆಗಳನ್ನು ಆ ಕಾಲ ಪ್ರವಾಹದ ವಿಪ್ಲವದ ನೆಲೆಯಲ್ಲಿ ವಿಕಸನಗೊಂಡ ಕಾವ್ಯಭಾಷೆಯ ದೃಷ್ಟಿಯಿಂದಲೇ ಓದಬೇಕು. ಅಮೃತಾರ ಭಾಷೆ ಪ್ರೇಮ ಭಾಷೆ. ಪ್ರೇಮವೇ ಅವರ ಗುಣ. ಭಾಷೆ ಪ್ರತಿಮೆ ರೂಪಕಗಳಿಂದ ಅಲಂಕೃತವಾದುದು,  ಅಲ್ಲಿ ಹೃದಯವನ್ನು ಸೂರೆಗೊಳ್ಳುವಂಥ ಸಮ್ಮೋಹಕ ಪದಲಾಲಿತ್ಯದ ಲಯವಿದೆ, ಸೊಬಗಿದೆ, ಗಾಢವಾದ ಬದುಕಿನ ಅನುಭವವಿದೆ. 
              ಕಟು ವಾಸ್ತವತೆ, ಸಂಘರ್ಷಮಯ ಬದುಕು ಕಲಿಸಿದ ಪಾಠಗಳು ಅವರನ್ನು ಗಟ್ಟಿಗೊಳಿಸಿವೆ ಎನ್ನಬಹುದು. ಇವತ್ತೇನಾದರೂ ಅವರು ಗಂಗಾಜಲದಿAದ ವೋಡ್ಕಾವರೆಗಿನ ಕವಿತೆ ಬರೆದಿದ್ದರೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರೋ ಏನೋ. ಬದಲಾವಣೆಯೇ ಕಾಲದ ನಿಯಮವೆಂದಾದರೆ ಬದಲಾವಣೆಯನ್ನು ಕೇಡುಗಾಲವೆಂದು ಗ್ರಹಿಸಿ ನಿಕಷಕ್ಕೊಡ್ಡುವ ಸಮಾಜ. ಮುಳ್ಳುಗಳಂತೆ ಚುಚ್ಚುವ ಸಮಾಜ - ಸಂಸ್ಕಾರದ ರೀತಿ ರಿವಾಜುಗಳನ್ನು, ಧಾರ್ಮಿಕ ಪರಂಪರೆಗಳನ್ನು ದಿಕ್ಕರಿಸಿದ ಅಮೃತಾ ಎಲ್ಲ ಕಟ್ಟಳೆಗಳನ್ನು ಮುರಿದು ತಮ್ಮದೇ ಆದ ಲೋಕವೊಂದನ್ನು ಕಟ್ಟಿಕೊಳ್ಳುತ್ತಾರೆ.  ಹೀಗೆ ಕಾಲಾಂತರದಲ್ಲಿ ಅವರ ಉತ್ಕಟ ಪ್ರೇಮ ಮಾನವೀಯ ಪ್ರೇಮವಾಗಿ, ಮನುಷ್ಯ ಕಾರುಣ್ಯದ ಸಂವೇದನೆಯಾಗಿ ಲೋಕೋತ್ತರವಾಗುತ್ತದೆ. 
               1947 ರ ಜುಲೈ 3 ರಂದು ಗಂಡು ಮಗುವಿಗೆ ಜನ್ಮ ನೀಡುತ್ತಾರೆ ಅಮೃತಾ. ಮುಂದೆ 14 ಆಗಸ್ಟ್ ವಿಭಜನೆಯ ದಂಗೆ ಶುರುವಾಗುತ್ತದೆ. ತಿಂಗಳ ಹಸುಳೆಯನ್ನು ಉಡಿಯಲ್ಲಿಟ್ಟುಕೊಂಡು ಜೀವ ಉಳಿಸಿಕೊಂಡು ದೆಹರಾಡೂನಿಗೆ ಗಡಿಪಾರಾಗುವ ದೃಶ್ಯಯವನ್ನು ನಾವಿಂದು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ವಿಭಜನೆ ಮತ್ತು ಕೋಮುವಾದದ ಕರಾಳ ಕಷ್ಟಗಳ ಝಳವನ್ನು ಉಂಡ ಜೀವ – ಘಾಸಿಗೊಂಡ ಹೃದಯ ಯಾತನೆಯನ್ನೇ ಕಾವ್ಯವಾಗಿಸುತ್ತದೆ. ಕಣ್ಣಿಗೆ ರಾಚುವ ಜಾತಿ, ಮತ, ಧರ್ಮದ ಸೋಗಲಾಡಿತನ ಸಮಾಜದ ಓರೆ ಕೋರೆಗಳನ್ನು, ಉಳ್ಳವರ ದರ್ಪ, ಬಡವ, ಶೋಷಿತರ ಅಸಹಾಯಕತೆಯನ್ನು, ವಿಭಜನೆಯ ದ್ವಾಶ ಅತ್ಯಾಚಾರ ಅನಾಚಾರಗಳಿಗೆ ಬಲಿಯಾದ ನೊಂದ ಹೆಣ್ಣು ಮಕ್ಕಳ ದನಿಯಾಗಿ ಅವರ ಕಾವ್ಯ ಸಶಕ್ತ ಅಭಿವ್ಯಕ್ತಿಯಾಗಿದೆ. ವೈಯಕ್ತಿಕವೂ ರಾಜಕೀಯವಾಗಿ ಲೇಖನಿ ಹರಿತವಾದ ಅಸ್ತçವಾಗುತ್ತದೆ ಮತ್ತು ಶಸ್ತçವಾಗುತ್ತದೆ. 
              ತಂದೆ ಕರ್ತಾರ್ ಸಿಂಗ್ ಮಗಳು ಅಮೃತಾಗೆ ಲಯ-ಛಂದಸ್ಸು-ನಿಯಮ ಮುಂತಾದ ಕಾವ್ಯರಚನೆಯ ಸೂಕ್ಷö್ಮಗಳನ್ನು ಹೇಳಿಕೊಟ್ಟು ಪದ್ಯ ಬರೆಯಲು ಪ್ರೋತ್ಸಾಹಿಸಿದರು. ಮೊದ ಮೊದಲು ಕೇವಲ ಪಂಜಾಬಿ ಮತ್ತು ಉರ್ದುವಿನಲ್ಲಿ ಧಾರ್ಮಿಕ ಕವಿತೆಗಳನಷ್ಟೇ ಬರೆಯುತ್ತಿದ್ದ ಅಮೃತಾ, ವಿಭಜನೆಯ ನಂತರ ದೆಹಲಿಯಲ್ಲಿ ನೆಲಸಿ ಹಿಂದಿಯಲ್ಲೂ ಬರೆಯಲು ತೊಡಗುತ್ತಾರೆ.
            ಕವಿತೆಗಳೇ ಅವರ ಬದುಕಿನ ಹಲವು ಘಟ್ಟಗಳನ್ನು ಬಿಂಬಿಸುವ ಅದ್ಭುತ ಕಾವ್ಯಕಥನಗಳೆಸುತ್ತವೆ. ಲಾಹೋರಿನ ದಿನಗಳಿಂದಲೇ ಸಾಹಿರ್ ಲೂಧಿಯಾನ್ವಿ ಜೊತೆ ಮೊಳೆತಿದ್ದ ಪ್ರೇಮ ಕೈಗೂಡಲಿಲ್ಲ. ಆದರೆ ಆಕೆಯ ಜೀವಿತಕಾಲದುದಕ್ಕೂ ಆಕೆಯ ಎದೆಯಲ್ಲಿ ಉಳಿದುಹೋಯಿತು. ವಿರಹ, ವಿಷಾದದ ಛಾಯೆಯನ್ನು ಅವರ ಕವಿತೆಗಳಲ್ಲಿ ಕಾಣುತ್ತೇವೆ. 
ಸಾಹಿರ್‌ಗಾಗಿ ಅಮೃತಾ ಬರೆದ ಎರಡು  ಪದ್ಯ ಹೀಗೆದೆ- 
ಸಿಗರೇಟಿನಂತೆ ನಾನು ಮೌನವಾಗಿ ನೋವನ್ನು ಕುಡಿಯುತ್ತಿದ್ದೆ.
ಸಿಡಿಸಿದ ಬೂದಿಯಿಂದ ಕೆಲವು ಕವಿತೆಗಳು ಉದುರಿದವು! 
ಇನ್ನೊಂದು ಪದ್ಯ ಹೀಗಿದೆ-
ಆಯುಷ್ಯದ ಸಿಗರೇಟು ಉರಿದುಹೋಯಿತು
ನನ್ನ ಪ್ರೇಮದ ಗಂಧ ಒಂದಿಷ್ಟು ನಿನ್ನುಸಿರಲ್ಲಿ
ಒಂದಷ್ಟು ಗಾಳಿಯಲ್ಲಿ ಬೆರೆಯಿತು! ಎಂದು.
“ನಿನ್ನ ಪ್ರೇಮದ ಒಂದು ಹನಿ, ನನ್ನೊಳಗೆ ಬೆರೆತುಹೋಗಿತ್ತು.
ಅದಕ್ಕೇ ನಾನು ಆಯುಷ್ಯದ ಎಲ್ಲ ಕಹಿಯನ್ನೂ ನುಂಗಿಕೊAಡೆ...” ಅಂತ ಹೇಳಿ ಸಾಹಿರ್‌ಗಾಗಿ ಅಮೃತಾ ಈ ಕವಿತೆಗಳನ್ನು ಬರೆಯುತ್ತಾರೆ.
ಇನ್ನೊಂದು ಕವಿತೆ ಇಮ್ರೋಜರಿಗೆ ಅಮೃತಾ ತನ್ನ ಕೊನೆಯ ದಿನಗಳಲ್ಲಿ  ಬಹಳ ಪ್ರೀತಿಯಿಂದ ಬರೆದ ಕವಿತೆ-
ನಾ ನಿನಗೆ ಮತ್ತೆ ಸಿಗುವೆ ಎಲ್ಲಿ? ಹೇಗೆ? ಗೊತ್ತಿಲ್ಲ
ಬಹುಶಃ ನಿನ್ನ ಕಲ್ಪನೆಯ ಕಿಡಿಯಾಗಿ, 
ನಿನ್ನ ಕ್ಯಾನವಾಸಿಗೆ ಇಳಿಯುವೆ ಅಥವಾ ಬಹುಶಃ ನಿನ್ನ ಕ್ಯಾನವಾಸಿನ ಮೇಲೆ
ಒಂದು ರಹಸ್ಯಮಯ ಗೆರೆಯಾಗಿ, ಮೌನವಾಗಿ ನಿನ್ನನ್ನು ನೋಡುತ್ತಾ ಇರುವೆ...” ಎಂದು.
              ಇವಿಷ್ಟೂ ವಯಕ್ತಿಕವಾಗಿ ನಾನು ಇಷ್ಟ ಪಟ್ಟ ಹಾಗೂ ನನ್ನನ್ನು ಗಾಢವಾಗಿ ಪ್ರಭಾವಿಸಿದ ಅಮೃತಾರ ಕವಿತೆಗಳು. ತಮ್ಮ ಜೀವಿತದ ಕೊನೆಗಾಲದಲ್ಲಿ ಸಂಗಾತಿ ಇಮ್ರೋಜ್ ಅವರಿಗೆ “ನಾ ನಿನಗೆ ಮತ್ತೆ ಸಿಗುವೆ” ಎಂದು ವಚನವಿತ್ತು ಲೋಕದಿಂದ ತೆರಳಿದ ಅಮೃತಾರ ಈ ಪದ್ಯ ಓದುಗರನ್ನು ವಿಚಲಿತಗೊಳಿಸುತ್ತದೆ. ಇದು ಇಡೀ ಬದುಕಿನ ನಿರ್ಣಾಯಕ ಅಭಿವ್ಯಕ್ತಿ ಕವಿತೆ. ಅವರ ಎಲ್ಲಾ ಕವಿತೆಗಳೂ ದೇಶ ಕಾಲಾತೀತ ಮೌಲ್ಯಗಳಿಂದ ಮಹತ್ವ ಪೂರ್ಣವೆನಿಸುತ್ತದೆ. ಹೃದಯವನ್ನು ವಿಹ್ವಲಗೊಳಿಸುವ ಅನುಕ್ತ ವ್ಯಥೆಯಲ್ಲಿ ಮೀಯುತ್ತಲೇ ಪ್ರೇಮ ಮತ್ತು ಸೌಂದರ್ಯದ ಬಿಸಿಲು ನೆರಳಿನ ಬೀದಿಯಲ್ಲಿ ವಿಹರಿಸಿದಂತಹ ಮಧುರಾನುಭವ. ಈ ಕವಿತೆಗಳಿಂದ ಹಿಂದಿ ಕಾವ್ಯ ಶ್ರೀಮಂತವೂ, ಶಿಲ್ಪ ಸಮೃದ್ಧವೂ ಆಗುವುದು ಎಂದು ಅಮೃತಾ ಪ್ರೀತಂ ಅವರ ಕವಿತೆಗಳ ಕುರಿತು ಹಿಂದಿ ಪ್ರಖ್ಯಾತ ಕವಿ ಸುಮಿತ್ರಾನಂದನ್ ಪಂತ್ ಭವಿಷ್ಯ ನುಡಿದಿದ್ದರು. 
                            ಮುಂದೆ ಒಂದು ದಿನ ಅಮೃತಾ ಮತ್ತು ಇಮ್ರೋಜ್ ದಕ್ಷಿಣ ದೆಹಲಿಯ ಗ್ರೀನ್ ಪಾರ್ಕಿನ ಬ್ಯಾಂಕಿನ ಕೆಲಸಕ್ಕೆಂದು ಹೋದರೆ ಸಾಕು, ಎಲ್ಲರ ನೋಟಗಳು ಅವರನ್ನೇ ಇರಿಯುತ್ತಿದ್ದವಂತೆ. ಇಂತಹ ಕಹಿ ಘಟನೆಗಳು ಅನಂತ ನೋವಿನ ಸಾಂಗತ್ಯ ಅಮೃತಾರನ್ನು ಕೊನೆತನಕವೂ ಕೈಬಿಡಲಿಲ್ಲ. ಈಗ ಸುಲಭ ಸಾಧ್ಯವಾಗಿರುವ ಲಿವ್-ಇನ್-ಸಂಬAಧವನ್ನು ಅಮೃತಾ- ಇಮ್ರೋಜ್ 60ರ ದಶಕದಲ್ಲಿಯೇ ಬದುಕಿ ತೋರಿಸಿದ್ದಾರೆ. ಇಮ್ರೋಜ್‌ರ ಮಾತಿನಲ್ಲಿ ಹೇಳುವುದಾದರೆ- ‘ನೀನು ನನ್ನ ಸಮಾಜ, ನಾನು ನಿನ್ನ ಸಮಾಜ, ಇದೇ ಸತ್ಯ ಬಾಕಿ ಎಲ್ಲ ಮಿಥ್ಯ’ ಎಂದು. ಇಮ್ರೋಜ್ ಇಲ್ಲಿ ಸಮಾಜದ ಪರಿಭಾಷೆಯನ್ನೇ ಬದಲಿಸಿಬಿಡುತ್ತಾರೆ. ತುಂಬು ಪ್ರೇಮದ ಈ ಅನುಭಾವವೇ ಅವರ ನಾಕು ದಶಕಗಳ ಸಾಂಗತ್ಯವನ್ನು ಗಟ್ಟಿಗೊಳಿಸಿ ಬಾಳಿಸುತ್ತದೆ. 1966 ರಿಂದ 2002ರವರೆಗಿನ ಮೂರು ದಶಕಗಳ ಕಾಲ “ನಾಗಮಣಿ” ಎಂಬ ಪಂಜಾಬಿ ಸಾಹಿತ್ಯಿಕ ಪತ್ರಿಕೆಯನ್ನು ಈ ಜೋಡಿ ನಡೆಸುತ್ತದೆ.  ಅನೇಕ ಯುವಕವಿಗಳನ್ನು, ಬರಹಗಾರರನ್ನು ಪೋಷಿಸಿ ಬೆಳೆಸಿದ ಪತ್ರಿಕೆಯೆಂಬ ಹೆಗ್ಗಳಿಕೆ ನಾಗಮಣಿಯದು. 


             ಅಮೃತಾರ ಕವಿತೆಗಳು ಬಿಂಬವಾದ ವಿಧಾನದಲ್ಲಿ ಹೊಸ ಭಾಷೆ, ಹೊಸ ರೂಪಕ, ನವನವೀನ ಪರಿಕರಗಳನ್ನು ಅಮೃತಾ ಬಳಸುತ್ತಾರೆ. ಅಲ್ಲಿ ಭಾಷೆಯ ಲಾಲಿತ್ಯವಿದೆ, ಚೆಲುವಿದೆ, ದರ್ಶನವಿದೆ, ಆಧ್ಯಾತ್ಮವಿದೆ, ಸತ್ಯದ ಶೋಧನವೂ ಇದೆ. ಆಕೆ ಬಳಸುವ ಅನೇಕ ರೂಪಕಗಳು ಪ್ರತಿಮೆಗಳನ್ನು ಕನ್ನಡದ ಸಾಹಿತ್ಯದ ಸಂದರ್ಭದಲ್ಲಿಟ್ಟು ನೋಡಿದರೆ ಹೊಸ ಹೊಳಹುಗಳನ್ನು ಮೂಡಿಸುತ್ತವೆ. ವಾರಿಸ್ ಷಾ, ಬುಲ್ಲೇ ಷಾ ಸೂಫಿ ಸಂತರ ಪ್ರಭಾವವನ್ನೂ ಅವರ ಕೃತಿಗಳಲ್ಲಿ ಕಾಣುತ್ತೇವೆ. ಕವಿತೆ ಹುಟ್ಟಲು ಕವಿಯ ದೇಹದ ಅಗತ್ಯವಿದೆ ಎನ್ನುವ ಅಮೃತಾ, ಸ್ವಯಂ ದೇಹವಾಗಿ ಕವಿತೆಗಳಿಗೆ ಜನ್ಮ ನೀಡಿದ್ದಾರೆ. ಅಪ್ಪಟ ಸ್ತಿçà ಸಂವೇದನೆಗಳನ್ನು ಕಾದಂಬರಿಗಳಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ತಮ್ಮ ಸಮಾಕಾಲೀನರಲ್ಲಿ ಭಿನ್ನರಾಗಿ ಗುರುತಿಸಲ್ಪಡುತ್ತಾರೆ. ವಿಭಜನೆ ದೇಶದ್ದಾಯಿತು ಆದರೆ ಬಲಿಯಾಗಿದ್ದು, ಉಲ್ಲಂಘನೆಯಾಗಿದ್ದು ಹೆಣ್ಣುದೇಹಗಳು. ಎಲ್ಲ ಯುದ್ಧ, ಎಲ್ಲ ಸಾಮ್ರಾಜ್ಯಗಳ ವಿಜಯೋತ್ಸವಕ್ಕೂ ಬಲಿಯಾಗಿದ್ದು ಹೆಣ್ಣು ದೇಹಗಳೇ. ಈ ಮಾತಿಗೆ ಅವರ ‘ಪಿಂಜರ್’ ಕಾದಂಬರಿ ಸುಡು ಸುಡುವ ಉದಾಹರಣೆಯಾಗಿ ನಮ್ಮ ಮುಂದೆ ಇದೆ.
            ತೀರಾ ಅನಾರೋಗ್ಯದಲ್ಲಿ ಬಳಲುವಾಗಲೂ ಅಮೃತಾ ಇಮರೋಜರನ್ನು ತಮ್ಮ ಹತ್ತಿರವೇ ಕೂರಲು ಆಗ್ರಹ ಪಡಿಸುತ್ತಿದ್ದರು. ಯಾವ ಆಸ್ಪತ್ರೆಗೂ ದಾಖಲಾಗಲು ಇಷ್ಟಪಡದೆ ಕೊನೆಗಾಲದಲ್ಲಿ ಅವರು ತಮ್ಮ ಪ್ರಿಯ ಇಮರೋಜರಿಗೆ ಮತ್ತೆ ನಾನು ನಿನಗೆ ಸಿಗುತ್ತೇನೆ ಎಂದು ಪದ್ಯ ಬರೆದಾಗ, ಆ ಪದ್ಯಕ್ಕೆ ಪ್ರತ್ಯುತ್ತರವಾಗಿ ಇಮರೋಜ್ ಕೂಡ ಒಂದು ಪದ್ಯ ಬರೆದು ಉತ್ತರಿಸೋದು ಹೀಗೆ-
ನಮ್ಮ ಗೂಡೀಗ ನಲವತ್ತು ವರ್ಷದ್ದಾಯಿತು.
 ನೀನು ಹಾರುವ ತಯಾರಿಯಲ್ಲಿದ್ದೀಯಾ,
 ಇಂದು ಈ ಹಾರುವಿಕೆಗೂ, ಈ ಹೋಗುವಿಕೆಗೂ, 
ಈ ಮನೆಯ ಕಣ ಕಣವೂ ನಿನಗೆ ವಿದಾಯ ಹೇಳುತ್ತಿದೆ. ಎಂದು ಇಮರೋಜ್ ಅವರು ಅಮೃತಾರನ್ನು ಬಹಳ ಪ್ರೀತಿಯಿಂದ ಕೊನೆ ಪಯಣಕ್ಕೆ ಪ್ರೀತಿಯಿಂದ ವಿದಾಯ ಹೇಳುವ ಈ ಸಾಲುಗಳನ್ನು ಓದುಗನ ಕಣ್ಣು ಮಂಜಾಗಿಸುತ್ತವೆ.
                          ಅವರ ಆತ್ಮಕಥೆ ರಶೀದಿ ಟಿಕೀಟು ಬದುಕು-ಬರಹಗಳ ನಡುವೆ ಅಂತರವಿಲ್ಲದ ಪ್ರಾಮಾಣಿಕ ಅಂತರAಗದ ಅನಿಸಿಕೆಯಾಗಿದೆ. ಈ ಕೃತಿ ಕನ್ನಡವಲ್ಲದೆ ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದೆ. 
           ದೆಹಲಿಯಲ್ಲಿದ್ದ ಅಮೃತ ಪ್ರೀತಂರವರ ನಿವಾಸ ಕೇವಲ ಅವರ ವಾಸಸ್ಥಳವಾಗಿರಲಿಲ್ಲ. ಅದೊಂದು ಸಾಂಸ್ಕೃತಿಕ ಕೇಂದ್ರವಾಗಿತ್ತು. ಲೇಖಕರು, ಕಲಾವಿದರು, ಸಂಗೀತಗಾರರು, ನಾಟಕಕಾರರು ಇವರೆಲ್ಲರಿಗೂ ಅಮೃತಾರವರ ನಿವಾಸದ ಬಾಗಿಲು ಸದಾ ತೆರೆದೇ ಇರುತ್ತಿತ್ತು. ದಂಪತಿಗಳಿಬ್ಬರೂ ಅತಿಥಿಗಳಿಗೆ ಚಹಾ ನೀಡಿ ಸತ್ಕರಿಸುತ್ತಿದ್ದ ಬಗೆ ಈಗ ಕೇವಲ ನೆನಪು ಮಾತ್ರ. 
               ಧರ್ಮಾತೀತವಾಗಿ ಬದುಕಿದ ಅಮೃತಾ ಅವರು ಸಾಹಿತ್ಯಕ್ಕೆ ಜಾತಿ ಧರ್ಮದ ಗಡಿರೇಖೆಗಳಿಲ್ಲ ಎಂದು ನಂಬಿದ್ದವರು ಅದರಂತೆ ಬದುಕಿದವರು.    ತಮ್ಮ ಕೊನೆಯ ದಿನಗಳಲ್ಲಿ ಮನೆಯನ್ನು ಮಾರಾಟ ಮಾಡದೆ ತಮ್ಮ ನೆನಪಿಗಾಗಿ ಮ್ಯೂಜಿಯಂ ಮಾಡಬೇಕೆಂದು ಉಯಿಲು ಬರೆದಿಟ್ಟರೂ ಸಹ, ಅಮ್ಮನ ಖ್ಯಾತಿ ಗೌರವಗಳ ಬಗ್ಗೆ ಅರಿವಿಲ್ಲದ ಮಗ ಹಣದಾಸೆಗಾಗಿ ಮಾರಾಟ ಮಾಡುವುದರ ಮೂಲಕ ಅಮೃತಾ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾನೆ. ಈ ನೋವಿನ ನಡುವೆಯೂ ಸಮಾಧಾನಕರ ಸಂಗತಿ ಎಂದರೆ, ಈಗಲೂ ಬದುಕುಳಿದಿರುವ ಅಮೃತಾರವರ ಸಂಗಾತಿ ಇಮ್ರೋಜ್ ಅವರ ಎಲ್ಲಾ ಪುಸ್ತಕ ಹಾಗೂ ಅಪರೂಪದ ಕಲಾಕೃತಿಯನ್ನು ತಾವು ಈಗ ವಾಸವಾಗಿರುವ ದೆಹಲಿಯ ಗ್ರೇಟರ್ ಕೈಲಾಸ್ ಬಡಾವಣೆಯ ಮನೆಯೊಂದರಲ್ಲಿ ಸಂರಕ್ಷಿಸಿದ್ದಾರೆ. 
                  1919 ರಲ್ಲಿ ಲಾಹೋರ್ ನಗರದಲ್ಲಿ ಜನಿಸಿದ ಇವರು 28 ಕಾದಂಬರಿ, 18 ಕಾವ್ಯ ಸಂಕಲನ, 5 ಕಥಾಸಂಕಲನ ಹಾಗೂ 16 ಪ್ರಬಂಧ ಮತ್ತು ಗದ್ಯ ಲೇಖನಗಳನ್ನು ಹೊರತಂದು 2005ರಲ್ಲಿ ಇನ್ನಿಲ್ಲವಾದರು.  ಆಕ್ಟೋಬರ್ 31 ಅವರ ಪುಣ್ಯತಿಥಿ. 2018 ರಲ್ಲಿ ಅಮೃತಾರ ಜನ್ಮ ಶತಮಾನೋತ್ಸವ ಆಚರಿಸಲಾಯಿತು. ಬದುಕ್ಕಿದ್ದರೆ ಇಂದಿಗೆ 103 ವರ್ಷ ಆಕೆಗೆ. ನನ್ನ ಪ್ರೀತಿಯ ಅಮೃತಾ ಈಗಿಲ್ಲ ಆದರೆ ಆಕೆ ಇಲ್ಲೇ ನಮ್ಮೊಳಗೇ, ಅನಂತವಾದ ಪ್ರೇಮವನ್ನೂ, ವಿರಹವನ್ನೂ ಅನುಭವಿಸುವ ಪ್ರತಿ ಪ್ರೇಮಿಯ ಹೃದಯದಲ್ಲೂ ಜೀವಂತವಿದ್ದಾರೆ. ಅವಳು ಶರೀರ ತ್ಯಜಿಸಿದ್ದಾಳೆ, ಸಾಂಗತ್ಯವನ್ನಲ್ಲ!’ ಎನ್ನುವ ಇಮರೋಜರ ದನಿ ಕೇಳಿದರೆ ಎದೆ ಭಾರವಾಗುತ್ತದೆ.