ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ  ಈ ದೇಶದಲ್ಲಿ ಮುಸ್ಲಿಮರಿಗೆ ಒಂದು ದನಿ ಬೇಕಿದೆ , 

ಆ ದನಿ ರಾಜಕೀಯ ವಿಶಾಲ ಹಂದರದಿಂದ ಬರಬೇಕಿದೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ  ಈ ದೇಶದಲ್ಲಿ ಮುಸ್ಲಿಮರಿಗೆ ಒಂದು ದನಿ ಬೇಕಿದೆ , 


    

        ಭಾರತದಲ್ಲಿ ಹಿಂದುತ್ವ ರಾಜಕಾರಣವು ಉಚ್ಚ್ರಾಯ ಹಂತವನ್ನು ತಲುಪುತ್ತಿರುವುದರ ಬಗೆಗೆ ಅತಿ ಹೆಚ್ಚಿನ ಕಳಕಳಿ, ಆತಂಕ ವ್ಯಕ್ತಪಡಿಸುವ ಹಕ್ಕು ಯಾವುದೇ ಸಮುದಾಯಕ್ಕೆ ಇರುವುದೇ ಆದರೆ ಅದು ಮುಸ್ಲಿಂ ಸಮುದಾಯಕ್ಕೆ ಮಾತ್ರ ಎನ್ನುವುದು ನಿಶ್ಚಿತ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಬಹುತ್ವ ರಾಜಕಾರಣದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರಿಗೂ ಈ ಕಾಳಜಿ, ಕಳಕಳಿ ಮತ್ತು ಆತಂಕ ಕಾಡುತ್ತಿದೆ. ಅಸ್ಸಾಂ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ಗಮನಿಸಿದರೆ, ಆಡಳಿತಾರೂಢ ಪಕ್ಷ ಬಿಜೆಪಿಯ 102 ಶಾಸಕರ ಪೈಕಿ ಮುಸ್ಲಿಂ ಶಾಸಕರ ಅನುಪಸ್ಥಿತಿ ಎದ್ದು ಕಾಣುತ್ತದೆ. ಇದು ಖಂಡಿತವಾಗಿಯೂ ವಿಚಲಿತಗೊಳಿಸುವ ಸಂಗತಿ. ಆದರೆ ಈ ಬೆಳವಣಿಗೆ ಅನಿರೀಕ್ಷಿತವೇನೂ ಅಲ್ಲ ಏಕೆಂದರೆ, ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ, ಕೇಂದ್ರ ಸರ್ಕಾರದಲ್ಲಿ ಒಬ್ಬ ಮುಸ್ಲಿಂ ಸಂಸದರಾಗಲೀ, ಸಚಿವರಾಗಲೀ ಇಲ್ಲದಿರುವುದು ಒಂದು ವಿಶಿಷ್ಟ ದಾಖಲೆಯನ್ನೇ ನಿರ್ಮಿಸಿದೆ.


     ಆದರೆ ದುಃಖಕರ ವಿಚಾರ ಎಂದರೆ ಅಸ್ಸಾಂ ರಾಜ್ಯದ ಪ್ರಸಕ್ತ ವಿಧಾನಸಭೆಯಲ್ಲಿ ಢಾಳಾಗಿ ಕಾಣುವ ಕೋಮುವಾರು ಪ್ರತ್ಯೇಕತೆ. ಆಡಳಿತಾರೂಢ ಪಕ್ಷದಲ್ಲಿ ಶೇಕಡಾ 34ರಷ್ಟು ಜನಸಂಖ್ಯೆ ಇರುವ ರಾಜ್ಯದ ಮುಸ್ಲಿಂ ಜನತೆಗೆ ಆಡಳಿತದಲ್ಲಿ ಭಾಗವಹಿಸುವ ಅವಕಾಶವೇ ಇಲ್ಲವಾಗಿದೆ. ಮತ್ತೊಂದೆಡೆ ವಿರೋಧ ಪಕ್ಷಗಳು ವಿರುದ್ಧ ದಿಕ್ಕಿನಲ್ಲಿ ಸಾಗಿವೆ. ಪ್ರಧಾನ ವಿರೋಧ ಪಕ್ಷ ಕಾಂಗ್ರೆಸ್ ವಿಧಾನಸಭೆಯಲ್ಲಿ 19 ಶಾಸಕರನ್ನು ಹೊಂದಿದ್ದು, ಅವರ ಪೈಕಿ 18 ಮುಸ್ಲಿಂ ಶಾಸಕರಿದ್ದಾರೆ. ಇವರೊಂದಿಗೆ ಇಬ್ಬರು ಶಾಸಕರನ್ನು ಹೊಂದಿರುವ ರಾಯ್ಜೊರ್ ದಳದ ಮುಸ್ಲಿಂ ಶಾಸಕ, ಎಐಯುಡಿಎಫ್ ಪಕ್ಷದ ಇಬ್ಬರು ಶಾಸಕರು, ತೃಣಮೂಲ ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕರನ್ನು ಸೇರಿಸಿ ನೋಡಿದಾಗ, ವಿಚಲಿತಗೊಳಿಸುವ ದೃಶ್ಯ ಕಣ್ಣಿಗೆ ರಾಚುತ್ತದೆ. ಆಡಳಿತ ಪಕ್ಷದ ಕುರ್ಚಿಗಳಲ್ಲಿ ಕೇವಲ ಹಿಂದೂ ಶಾಸಕರು ಕಾಣುತ್ತಾರೆ, ವಿರೋಧ ಪಕ್ಷದ ಕುರ್ಚಿಗಳಲ್ಲಿ ಬಹುತೇಕವಾಗಿ, 22 ಶಾಸಕರು, ಮುಸ್ಲಿಮರೇ ಕಾಣುತ್ತಾರೆ. ಈ ಸನ್ನಿವೇಶದ ಬಗ್ಗೆ ಬರೆಯುವುದೂ ಸಹ ಅಸಹ್ಯಕರ, ದುಃಖಕರ ಎನಿಸುತ್ತದೆ ಆದರೆ ಇದು ನವ ಭಾರತದ ವಾಸ್ತವ. ಭಾರತದ ನಗರಗಳಲ್ಲಿರುವ ನಿರ್ದಿಷ್ಟ ಧಾರ್ಮಿಕ ಸಮುದಾಯಗಳ ವಸತಿ ಸಮುಚ್ಚಯಗಳಿಂದ , ಇತರ ಪ್ರದೇಶಗಳಲ್ಲಿರುವ ಘೆಟ್ಟೋಗಳವರೆಗೆ ಗಮನಿಸುತ್ತಾ ಬಂದರೆ, ಈಗ ರಾಜ್ಯ ವಿಧಾನಸಭೆಯಲ್ಲಿ ಧರ್ಮಾಧಾರಿತವಾದ ಕಠೋರ ಪ್ರತ್ಯೇಕತೆ ಇರುವುದು ಕಣ್ಣಿಗೆ ರಾಚುವಂತಿದೆ. 


 ಅಪಾಯಕಾರಿ ಪೂರ್ವನಿದರ್ಶನ

       ಮುಸ್ಲಿಂ ಅಭ್ಯರ್ಥಿಯೊಬ್ಬರು ಹಿಂದೂ ಬಾಹುಳ್ಯವಿರುವ ಕ್ಷೇತ್ರವೊಂದರಲ್ಲಿ ಚುನಾವಣೆ ಗೆಲ್ಲುವುದು ಸಾಧ್ಯವೇ ಇಲ್ಲ ಎನ್ನುವುದನ್ನು ನಾವು ಹಲವು ವರ್ಷಗಳಿಂದ ಕೇಳುತ್ತಾ, ಕಾಣುತ್ತಾ, ಅನುಭವಿಸುತ್ತಾ ಬಂದಿದ್ದೇವೆ. ಉದಾಹರಣೆಗೆ 2024ರ ಲೋಕಸಭಾ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಾಗಿ ಗೆಲುವು ಸಾಧಿಸಿದ ಮುಸ್ಲಿಂ ಸಂಸದರೆಲ್ಲರೂ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವ ಕ್ಷೇತ್ರಗಳಲ್ಲೇ ಸ್ಪರ್ಧಿಸಿದ್ದರು. ಹಾಗೆಯೇ ಗಮನಿಸಬೇಕಿರುವ ಅಂಶ ಎಂದರೆ, ಬಿಜೆಪಿ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ನಿರಾಕರಿಸಿದ್ದು, ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ. ಈಗ ನಾವು ಅದಲು ಬದಲಾದ ಸನ್ನಿವೇಶದ ಕಡೆಗೆ ಚಲಿಸುತ್ತಿದ್ದೇವೆ ಅನ್ನಿಸುತ್ತಿದೆ. ಹಿಂದೂಗಳು ಹಿಂದೂ ಪ್ರತಿನಿಧಿಗಳನ್ನು ಮಾತ್ರ ಚುನಾಯಿಸಬಹುದು. 


     ಇನ್ನೂ ದುರದೃಷ್ಟಕರ ಅಂಶವೆಂದರೆ, ಅನೇಕರು ಸ್ಪಷ್ಟವಾಗಿ ಆ ರೀತಿ ಕಾಣುವವರನ್ನು ಮಾತ್ರ ಆಯ್ಕೆ ಮಾಡಲಾರಂಭಿಸಿದ್ದಾರೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳು ದ್ವೇಷ ಭಾಷಣಗಳಿಂದ ಉತ್ತೇಜಿತರಾಗಿ, ಅನೇಕ ದೇವಾಲಯಗಳನ್ನು ಸಂದರ್ಶಿಸುವ ಮೂಲಕ ಗೆಲುವು ಸಾಧಿಸುತ್ತಿದ್ದಾರೆ. ಹಿಂದೂಗಳು ಹಿಂದೂ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು, ಮುಸ್ಲಿಮರು ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಸಹಜ ಪ್ರಕ್ರಿಯೆಯಾಗಿಬಿಡುತ್ತದೆ. ಪಕ್ಷಗಳೂ ಸಹ ಜನಸಂಖ್ಯಾಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡೇ ಟಿಕೆಟ್ ನೀಡುವುದು ಸ್ವಾಭಾವಿಕವಾಗುತ್ತದೆ. ಎಲ್ಲ ಮತ ಧರ್ಮಗಳನ್ನೂ ಮೀರಿದ ಸಾಮಾನ್ಯ ಮತದಾರರ ಅಡಿಪಾಯದ ಮೇಲೆ ಕಟ್ಟಲಾಗಿರುವ ದೇಶದ ಮುನ್ನಡೆಯಲ್ಲಿ ಇದು ದೊಡ್ಡ ತಡೆಗೋಡೆಯಾಗಲಿದೆ.


       ಇದು ನಮ್ಮನ್ನು 1909ರ ಮಾರ್ಲೆ-ಮಿಂಟೋ ಸುಧಾರಣೆಗಳ ಸಂದರ್ಭಕ್ಕೆ ಮರಳುವಂತೆ ಮಾಡುತ್ತದೆ. ಈ ಸುಧಾರಣಾ ಕ್ರಮಗಳ ಮೂಲಕ ಕೋಮುವಾರು ಮತದಾರರ ಕಲ್ಪನೆಗೆ ಚಾಲನೆ ನೀಡಲಾಗಿತ್ತು. ಉಲ್ಬಣಿಸುತ್ತಿದ್ದ ರಾಷ್ಟ್ರೀಯವಾದದ ಅಲೆಯನ್ನು ಮತ್ತು ಸ್ವಾತಂತ್ರ‍್ಯದ ಆಗ್ರಹವನ್ನು ದಮನಿಸುವುದು ಬ್ರಿಟೀಷ್ ಸರ್ಕಾರದ ಉದ್ದೇಶವಾಗಿತ್ತು. ಚುನಾವಣೆಗಳಿಗೆ ಕೋಮುಗಳ ಆಧಾರದಲ್ಲಿ ಕ್ಷೇತ್ರಗಳನ್ನು ನಿಗದಿಪಡಿಸಲಾಯಿತು. ಸಾವಿರಾರು ಭಾರತೀಯರು ಇದರ ವಿರುದ್ಧ ಪ್ರತಿಭಟಿಸಿದರು, ಆದರೆ ಪ್ರಾಂತೀಯ ಚುನಾವಣೆಗಳಲ್ಲಿ ಪ್ರತ್ಯೇಕ ಮತದಾರ ವ್ಯವಸ್ಥೆಯು ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸುವವರೆಗೂ ಮುಂದುವರೆದಿತ್ತು. 1946ರ ಪ್ರಾಂತೀಯ ಚುನಾವಣೆಗಳು ಸಂವಿಧಾನ ರಚನಾ ಸಭೆಯನ್ನು ರೂಪಿಸಲು ನಡೆದ ಮಾತುಕತೆಗಳ ದೃಷ್ಟಿಯಿಂದ ನಿರ್ಣಾಯಕವಾಗಿದ್ದವು. ಈ ಪ್ರಕ್ರಿಯೆಯೇ ಶೀಘ್ರದಲ್ಲೇ ಸ್ವಾತಂತ್ರ‍್ಯ ಗಳಿಸಲಿದ್ದ ದೇಶಕ್ಕೆ ಸಂವಿಧಾನ ರಚನೆಗೂ ಚಾಲ್ತಿ ನೀಡಿತ್ತು. ಇದೇ ವೇಳೆ, ಮುಸ್ಲಿಂ ಲೀಗ್‌ನಿಂದ ಪ್ರತ್ಯೇಕ ಪಾಕಿಸ್ತಾನಕ್ಕಾಗಿ ಬೇಡಿಕೆಯೂ ಸಹ ಜೋರಾಗುತ್ತಿತ್ತು. 


     ಇನ್ನೂ ದುಃಖಕರ ವಿಷಯ ಎಂದರೆ ಮುಸ್ಲಿಮರು ಮುಸ್ಲಿಂ ಲೀಗ್ ಅಭ್ಯರ್ಥಿಗಳಿಗೇ ಮತ ನೀಡುವಂತೆ ಆಗ್ರಹಿಸಲಾಯಿತು, ಕಾರಣವೇನೆಂದರೆ “ ಲೀಗ್ ಮತ್ತು ಪಾಕಿಸ್ತಾನಕ್ಕೆ ನೀಡುವ ಪ್ರತಿಯೊಂದು ಮತವೂ ಇಸ್ಲಾಂಗೆ ನೀಡಿದ ಮತ ” ಎಂದು ಪ್ರಚಾರ ಮಾಡಲಾಗಿತ್ತು. ಕಾಂಗ್ರೆಸ್‌ನೊಡನೆ ಮುಸ್ಲಿಂ ಲೀಗ್ ಪಕ್ಷದ ಸಂಘರ್ಷವನ್ನು ಇಸ್ಲಾಂ ಮತ್ತು ಕಾಫಿರ (ನಂಬಿಕೆ ಇಲ್ಲದವರು) ನಡುವಿನ ಸಂಘರ್ಷ ಎಂದು ಬಿಂಬಿಸಲಾಗಿತ್ತು. ಕೋಮುವಾದಿ ಅನ್ಯೀಕರಣ ಇಷ್ಟು ನಿರ್ದಿಷ್ಟವಾಗಿ ಎಂದೂ ಆಗಿರಲಿಲ್ಲ. ಎಂ.ಎಸ್. ಗೋಲ್ವಾಲ್‌ಕರ್ ರಾಷ್ಟ್ರೀಯವಾದಿ ಭಾರತೀಯರನ್ನು “ ನಮ್ಮ ಅತ್ಯಂತ ಕ್ರೂರ ಶತ್ರುಗಳನ್ನು (ಮುಸ್ಲಿಮರನ್ನು) ಎದೆಗವುಚಿಕೊಳ್ಳುವ ಮೂಲಕ ನಮ್ಮ ಅಸ್ತಿತ್ವವನ್ನೇ ಅಪಾಯಕ್ಕೀಡುಮಾಡಿದ್ದಾರೆ ” ಎಂದು ಖಂಡಿಸಿದ್ದರು. ರಾಷ್ಟ್ರೀಯವಾದಿ ಆಗಬೇಕೆಂದರೆ ನೀವು ಮುಸ್ಲಿಂ ವಿರೋಧಿ ಆಗಬೇಕು ಎನ್ನುವ ದೃಢ ನಂಬಿಕೆ ಬಲಪಂಥೀಯ ಹಿಂದೂಗಳ ಒಂದು ವರ್ಗದಲ್ಲಿ ಆಳವಾಗಿ ಬೇರೂರಿತ್ತು. 


     ಇದೇ ರೀತಿಯಲ್ಲಿ ಬಲಪಂಥೀಯ ಮುಸ್ಲಿಮರೂ ಸಹ ಕಾಂಗ್ರೆಸ್‌ಗೆ ನೀಡಿದ ಪ್ರತಿಯೊಂದು ಮತವೂ ಇಸ್ಲಾಂಗೆ ವಿರುದ್ಧವಾದ ಮತ ಎಂದೇ ಪರಿಗಣಿಸಿದ್ದರು. ಚುನಾವಣೆಗಳಲ್ಲಿ ಮುಸ್ಲಿಂ ಲೀಗ್ ಮುಸ್ಲಿಂ ಕ್ಷೇತ್ರಗಳಲ್ಲಿ ಶೇಕಡಾ 87ರಷ್ಟನ್ನು ಗೆದ್ದುಕೊಂಡಿತ್ತು. ಮುಸ್ಲಿಮೇತರರನ್ನು ಪ್ರತಿನಿಧಿಸುತ್ತಿರುವುದಾಗಿ ಭಾವಿಸಲಾಗಿದ್ದ ಕಾಂಗ್ರೆಸ್ ಶೇಕಡಾ 90ರಷ್ಟು ಮುಸ್ಲಿಮೇತರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇಲ್ಲಿ ಹೂಡಲಾಗಿತ್ತು. ಮುಸ್ಲಿಂ ಲೀಗ್ ಮುಸ್ಲಿಂ ಜನತೆಯ ಗಟ್ಟಿ ದನಿಯಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ ದನಿಯಾಗಿತ್ತು. ಈ ಸನ್ನಿವೇಶದಲ್ಲೇ ಮೊಹಮ್ಮದ್ ಅಲಿ ಜಿನ್ನಾ, ಖಾನ್ ಅಬ್ದುಲ್ ಗಫಾರ್ ಖಾನ್ ಅವರನ್ನು ʼ ವಿರೋಧಿ ʼ ಎಂದೂ ಮೌಲಾನ ಅಬುಲ್ ಕಲಂ ಅಜಾದ್ ಅವರನ್ನು ʼ ಕಾಂಗ್ರೆಸ್‌ನ ಷೋಬಾಯ್ ʼಎಂದೂ ಖಂಡಿಸಿದ್ದರು. ಮರುವರ್ಷವೇ ಏನಾಯಿತು ಎನ್ನುವುದು ತಿಳಿದೇ ಇದೆ. 


ತಮ್ಮದೇ ದನಿಯನ್ನು ಮೀರಿ 


      ಅಸ್ಸಾಂ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಹಿಂದೂಗಳನ್ನು ಮಾತ್ರ ಆಳುವ ಕೂಟದಲ್ಲಿಟ್ಟು ವಿರೋಧ ಪಕ್ಷವಾಗಿ ಮುಸ್ಲಿಮರನ್ನು ಮಾತ್ರ ಕೂರಿಸಿವೆ. ಇದು ಭಾರತದ ಕಲ್ಪನೆಯನ್ನು ಹೊತ್ತ ಪ್ರತಿಯೊಬ್ಬರನ್ನೂ ಭಯಭೀತಿಗೆ ಒಳಪಡಿಸುತ್ತದೆ. ಕ್ಷೇತ್ರ ಪುನರ್ ವಿಂಗಡನೆ ಆಗಲಿ ಬಿಡಲಿ ಪ್ರತ್ಯೇಕ ಮತದಾರ ವ್ಯವಸ್ಥೆಯು ಮಾರುವೇಷದಲ್ಲಿ ಒಳಗೆ ಪ್ರವೇಶಿಸುವುದನ್ನೂ ಯಾರೂ ಸಹ ಒಪ್ಪಲಾಗುವುದಿಲ್ಲ. ನಿಜ, ಬಿಜೆಪಿ ಮುಸ್ಲಿಮರನ್ನು ಪ್ರಾತಿನಿಧಿಕ ರಾಜಕಾರಣದಲ್ಲಿ ಅಪ್ರಸ್ತುತಗೊಳಿಸುವ, ಅಂಚಿಗೆ ತಳ್ಳುವ ನಿರ್ಧಾರವನ್ನು ತನ್ನ ನೀತಿ ಎಂದೇ ಪರಿಪಾಲಿಸುತ್ತಿದೆ. ಆದರೆ ಕಾಂಗ್ರೆಸ್ ಮುಸ್ಲಿಮರ ಪರವಾದ ಏಕೈಕ ವಕ್ತಾರ ಎಂದು ನಿರ್ಧರಿಸುವುದು ಅನುಚಿತವಷ್ಟೇ ಅಲ್ಲ ಗ್ರಹಿಸಲಸಾಧ್ಯವಾದ ಕಲ್ಪನೆ. ಬಂಗಾಳದಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಪರಾಭವ ಮತ್ತು ಅಸ್ಸಾಂನಲ್ಲಿ ಬದ್ರುದ್ದೀನ್ ಅಜ್ಮಲ್ ಅವರ ಅತ್ಯಂತ ಸೀಮಿತ ಯಶಸ್ಸು ತನ್ನದೇ ಆದ ದನಿಯನ್ನು ಮೀರಿದ ದನಿಗಳನ್ನು ಹುಡುಕುತ್ತಿರುವ ಒಂದು ಸಮುದಾಯವನ್ನು ಸೂಚಿಸುತ್ತದೆ. ವಿರೋಧ ಪಕ್ಷಗಳಲ್ಲಿ ಬಹುತೇಕವಾಗಿ ಮುಸ್ಲಿಮರು ಮಾತ್ರವೇ ಇರುವುದು ಸಮುದಾಯದ ʼ ರಾಜಕೀಯ ಪ್ರತ್ಯೇಕೀಕರಣʼ (Political Ghettoisation) ಆಗುತ್ತದೆ. ಮುಸ್ಲಿಮರಿಗೆ ಒಂದು ದನಿ ಬೇಕಿದೆ, ಆದರೆ ಈ ದನಿ ಒಂದು ಪಕ್ಷದಿಂದ ಮಾತ್ರ ಮೂಡದೆ, ಇಡೀ ರಾಜಕೀಯ ವಲಯದ ವಿಶಾಲ ಹಂದರದೊಳಗಿಂದ ಮೂಡಿಬರಬೇಕಿದೆ. 


ಮೂಲ : ಝಿಯಾ ಉಸ್ ಸಲಾಂ
ಕನ್ನಡಕ್ಕೆ : ನಾ ದಿವಾಕರ 


(ಆಧಾರ The insidious return of separate electorates Zia us Salam ಹಿಂದೂ 11-05-2026)