ಮುಮ್ಮಟ್ಟಿ ಅಭಿನಯದ ಮಲಯಾಳಂ ಸಿನಿಮಾ  'ಕಾಥಲ್- ದಿ ಕೋರ್' 

ಜನಪ್ರಿಯ ಸಿನಿಮಾಗಳ ಸಿದ್ಧ ಮಾದರಿಗಳನ್ನು ಬಿಟ್ಟು ಪ್ರಯೋಗ ಮಾಡುವುದಕ್ಕೆ ತಮ್ಮ ಅಭಿಮಾನಿ, ಪ್ರೇಕ್ಷಕರ ಹೆಸರಿನಲ್ಲಿ ಪಲಾಯನ ಮಾಡುವ ಸ್ಟಾರ್ ನಟರು ಮುಮ್ಮಟ್ಟಿ ತರದ ನಟರಿಂದ ಕಲಿಯುವುದು ತುಂಬಾ ಇದೆ.

ಮುಮ್ಮಟ್ಟಿ ಅಭಿನಯದ ಮಲಯಾಳಂ ಸಿನಿಮಾ  'ಕಾಥಲ್- ದಿ ಕೋರ್' 

ಬಯಾಸ್ಕೋಪ್ 


ವಿ.ಎಲ್.ನರಸಿಂಹಮೂರ್ತಿ

ಸಲಿಂಗಕಾಮಿಯಾಗಿರುವ ಗಂಡೊಬ್ಬ ತಾನು 'coming out' ಆಗಲು ಅನುಭವಿಸುವ ಆತಂಕ, ತೊಳಲಾಟ, ತಲ್ಲಣದ ಕುರಿತದ್ದು. ಲೈಂಗಿಕತೆಯಂತಹ ಸೂಕ್ಷ್ಮ ವಿಷಯದ ಕುರಿತ ಸಿನಿಮಾದ ಬರವಣಿಗೆಯಲ್ಲಿ ಇರುವ ಎಚ್ಚರ ಅಲ್ಲಿನ ಪಾತ್ರಗಳಿಗೆ ಘನತೆ ತಂದುಕೊಟ್ಟಿದೆ. 


ಸಲಿಂಗಕಾಮದ ಕುರಿತ ಈ ಸಿನಿಮಾ patriarchy (ಗಂಡಾಳ್ವಿಕೆ) ಕುರಿತು ಹೊಸ ನೋಟವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಪೆಟ್ರಿಯಾರ್ಕಿ ಕುರಿತ ಸಿನಿಮಾದ ದೃಷ್ಟಿಕೋನ ಕೇವಲ ಅoಟಿಣesಣ ಮಾಡುವ ಮಾದರಿಯಲ್ಲಿಲ್ಲ. ಬೆಲ್ ಹುಕ್ಸ್ ತರದ ಚಿಂತಕಿ 'The will to change' ಪುಸ್ತಕದಲ್ಲಿ ಕಟ್ಟಿಕೊಡುವ ಚಿಕಿತ್ಸಕ ಮಾದರಿಯದ್ದು. ಪೆಟ್ರಿಯಾರ್ಕಿ ಕೇವಲ ಹೆಣ್ಣಿಗೆ ಮಾತ್ರ ಅಪಾಯಕಾರಿಯಾಗಿರುವುದಿಲ್ಲ ಗಂಡು ಕೂಡ ಅದರಿಂದ ತನ್ನನ್ನ ತಾನು ಹಿಂಸೆಗೆ ಒಳಪಡಿಸಿಕೊಳ್ಳುತ್ತಿರುತ್ತಾನೆ ಅನ್ನುವುದನ್ನು ಬೆಲ್ ಹುಕ್ಸ್ ಮಂಡಿಸುತ್ತಾರೆ. 


ಸಿನಿಮಾದ ನಾಯಕ ಗೇ. 'ಗಂಡು' ಆಗಿ ಹುಟ್ಟಿರುವ ತನ್ನ ಮಗ ಸಮಾಜದ ಕಣ್ಣಿನಲ್ಲಿ 'ಗಂಡು' ಆಗಿಯೇ ಉಳಿಯಲಿ ಅಂತ ಬಯಸುವ ನಾಯಕನ ತಂದೆ ಈ ವಿಷಯನ್ನು ಮುಚ್ಚಿಟ್ಟು ನಾಯಕನಿಗೆ ಮದುವೆ ಮಾಡುತ್ತಾನೆ. ಮದುವೆಯಾದರೆ 'ಈ ಸಮಸ್ಯೆ' ಸರಿಹೋಗುತ್ತದೆ ಎನ್ನುವುದು ನಾಯಕನ ತಂದೆ ತನಗೆ ತಾನೆ ಮಾಡಿಕೊಳ್ಳುವ ಸಮಾಧಾನ. ಆದರೆ ಇದರ ಹಿಂದಿರುವುದು ಸಮಾಜ ಒಬ್ಬ ಗಂಡಾಗಿ ಹುಟ್ಟಿದವನಿಂದ ಬಯಸುವ ಗಂಡಸುತನದ ಕಾರಣ. ಇದಕ್ಕೆ ಪೂರಕವೆನ್ನುವಂತೆ ನಾಯಕಿಯ ಒತ್ತಾಯದಿಂದ ಮಾಡಿಕೊಂಡ ಒಂದು ಮಗುವಿದೆ. ಮದುವೆ, ಹೆಂಡತಿ ಮತ್ತು ಮಗು ಒಂದು ಸಮಾಜದ ಕಣ್ಣಲ್ಲಿ ಗಂಡು ಅಂತ ಅನಿಸಿಕೊಳ್ಳಲು ಸಾಕಾಗುವ ಲಕ್ಷಣಗಳು. ಈ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯನ್ನೆ ಸಮಾಜ ಬಯಸುವುದು. ಆದರೆ ಕುಟುಂಬದ ಒಳಗೆ ನಡೆಯುತ್ತಿರುವುದೇ ಬೇರೆ. ಅಲ್ಲಿ ತಂದೆ-ಮಗ, ಗಂಡ-ಹೆಂಡತಿಯ ನಡುವೆ ಸಂವಾದವೇ ಇಲ್ಲ. 


ಮದುವೆಯಾದ ಇಪ್ಪತ್ತು ವರ್ಷಗಳ ನಂತರ ಡೈವೋರ್ಸಿಗಾಗಿ ಕೋರ್ಟಿನ ಮೆಟ್ಟಿಲೇರುವ ನಾಯಕಿ ಕೋರ್ಟಿನ ವಿಚಾರಣೆಯಲ್ಲಿ ಇಡೀ ಇಪ್ಪತ್ತು ವರ್ಷಗಳ ದಾಂಪತ್ಯ ಜೀವನದಲ್ಲಿ ತಮ್ಮಿಬ್ಬರ ಮಧ್ಯೆ ಗಂಡಹೆಂಡತಿಯ ನಡುವೆ ಇರಬೇಕಾದ ಸಾಂಗತ್ಯದ ಸಂಬಂಧವೇ ಇಲ್ಲ ಅಂದಾಗ ತನ್ನದಲ್ಲದ ಕಾರಣಕ್ಕೆ ಆಕೆ ಅನುಭವಿಸಿರುವ 'ಹಿಂಸೆ'ಯ ಪ್ರಮಾಣ ಎಷ್ಟು ಎನ್ನುವ ಅರಿವಾಗುತ್ತದೆ. 


ತಾವು straight ಆಗಿಲ್ಲದಿದ್ದರೂ ಮನೆ ಮತ್ತು ಸಮಾಜದ ಒತ್ತಡಕ್ಕೆ ಒಳಗಾಗಿ ಗಂಡ ಮತ್ತು ಗಂಡಿನ Role  ಗಳನ್ನು play ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ಅದರಿಂದ ಹೆಣ್ಣು ಅನುಭವಿಸಬೇಕಾದ ಹಿಂಸೆ ಅಗಾಧವಾದುದು. ಈ ಹಿಂಸೆಯ ಹಿಂದಿರುವುದು ಗಂಡು ತನಗೆ ಆರೋಪಿಸಿರುವ ಲಕ್ಷಣಗಳನ್ನು ಬಿಟ್ಟು ಬದುಕುವುದನ್ನು ಪೆಟ್ರಿಯಾರ್ಕಲ್ ಸಮಾಜ ಒಪ್ಪಿಕೊಳ್ಳುವುದಿಲ್ಲ. ಇಂತಹ ಸನ್ನಿವೇಶಗಳಲ್ಲಿ ಪೋಷಕರು, ಸಮಾಜದ ಕಾರಣಕ್ಕೆ ಹೆಣ್ಣಿಗೆ ಆಯ್ಕೆಯ ಸ್ವಾತಂತ್ರ‍್ಯ ಕಳೆದುಹೋಗುತ್ತದೆ. ಜೊತೆಗೆ ಗಂಡಿಗೆ ತನ್ನ ನಿಜವಾದ Identity  ಏನು ಅಂತ ಅರಿವಿಗೆ ಬಂದರೂ ಅದನ್ನು ತೋರಿಸಿಕೊಳ್ಳಲು ಇದೆ ಪೆಟ್ರಿಯಾರ್ಕಿ ಅಡ್ಡ ಬರುತ್ತದೆ. ಅದಕ್ಕಾಗಿಯೇ ತನ್ನಿಂದ ಇನ್ನೊಂದು ಹೆಣ್ಣಿಗೆ ಆಗುವ ಹಿಂಸೆಯನ್ನು ತಡೆಯುವ ಪ್ರಯತ್ನವನ್ನು ಗಂಡು ಮಾಡುವುದಿಲ್ಲ. ಬದಲಾಗಿ ಅದನ್ನು normalize  ಮಾಡುವುದಕ್ಕೆ ಪ್ರಯತ್ನಿಸುತ್ತಾನೆ. 


ಹಾಗಾಗಿಯೇ ತಮ್ಮ Gender Identity ಯನ್ನು ಅರ್ಥಮಾಡಿಕೊಂಡು 'coming out' ಆಗುವ ಪ್ರಕ್ರಿಯೆ ಕೇವಲ ಗೇ ಆಗಿರುವ ಗಂಡನ್ನು ಮದುವೆಯಾದ ಹೆಣ್ಣಿಗೆ ಮಾತ್ರ ಬಿಡುಗಡೆಯಾಗುವುದಿಲ್ಲ. ಬದಲಾಗಿ ಆ ಗಂಡು ಕೂಡ ಬಿಡುಗಡೆಯಾಗುತ್ತಾನೆ. ಇದು ಪರಸ್ಪರ   liberate ಆಗುವ ಪ್ರಕ್ರಿಯೆಯಾಗುತ್ತದೆ. 


ಪೆಟ್ರಿಯಾರ್ಕಲ್ ಆಗಿರುವ ಗಂಡು ಹೆಣ್ಣಿನ ಮೇಲೆ ಎಸಗುವ ಹಿಂಸೆ ಹಾನಿಕಾರಕ. ಅದೇ ಸಮಯದಲ್ಲಿ ಗಂಡಾಗಿ ಹುಟ್ಟಿ humane  ಆಗಲು ಇದೆ ಪೆಟ್ರಿಯಾರ್ಕಿ ಅಡ್ಡಿಯಾಗಿ ಸೃಷ್ಟಿಸುವ ಹಿಂಸೆ ಇದೆಯಲ್ಲ ಅಲ್ಲಿ ಅಸಹಾಯಕ. ಇದು ಗಂಡು ತನ್ನ ವಿರುದ್ಧ ತಾನೇ ಸೃಷ್ಟಿಸಿಕೊಂಡಿರುವ ಹಿಂಸಾ ವಲಯ. ಹಾಗಾಗಿ ಪೆಟ್ರಿಯಾರ್ಕಿಯನ್ನು ಕಳಚಿಕೊಳ್ಳುವುದು ಕೇವಲ ಹೆಣ್ಣಿಗೆ ಮಾತ್ರ ಅಗತ್ಯವಲ್ಲ. ತಾನು ಮನುಷ್ಯನಾಗುವುದಕ್ಕಾಗಿ ಗಂಡಿಗೂ ಅಗತ್ಯ. 


ಇದನ್ನು ಈ ಸಿನಿಮಾ ಗಟ್ಟಿಯಾಗಿ ಧ್ವನಿಸುತ್ತದೆ. ತಾನು ಅನುಭವಿಸುತ್ತಿರುವ ನೋವು, ಹಿಂಸೆಯಿಂದ ಬಿಡುಗಡೆ ಬಯಸುತ್ತಲೆ ಸಿನಿಮಾದ ನಾಯಕಿ ಪೆಟ್ರಿಯಾರ್ಕಿಯ ವಿಕ್ಟಿಮ್‌ಗಳೇ ಆಗಿರುವ ತನ್ನ ಗಂಡ ಮತ್ತು ಮಾವನ ಬಗ್ಗೆಯೂ ಮಾನವೀಯವಾಗಿ ಯೋಚಿಸುತ್ತಾಳೆ. ತಾನೂ ಬಿಡುಗಡೆಗೊಂಡು ಅವರಿಗೂ ಬಿಡುಗಡೆಯಾಗುವ ದಾರಿ ಹುಡುಕಿಕೊಡುತ್ತಾಳೆ.


ಹಾಗಾಗಿಯೇ ಇಲ್ಲಿ feminism  ತುಂಬಾ subtle ಆಗಿ, ಹೆಚ್ಚು inclusive ಆಗಿದೆ.

 
ತುಂಬಾ ಒಳ್ಳೆಯ ಸಿನಿಮಾ..,

ಈ ಸಬ್ಜೆಕ್ಟ್ ಇಟ್ಟುಕೊಂಡು ಮುಮ್ಮಟ್ಟಿ ತರದ ಸ್ಟಾರ್ ಜೊತೆ ಸಿನಿಮಾ ಮಾಡುವುದಕ್ಕೆ ನಿರ್ದೇಶಕನಿಗೆ ತುಂಬಾ ಧೈರ್ಯ ಬೇಕು.


ಜನಪ್ರಿಯ ಸಿನಿಮಾಗಳ ಸಿದ್ಧ ಮಾದರಿಗಳನ್ನು ಬಿಟ್ಟು ಪ್ರಯೋಗ ಮಾಡುವುದಕ್ಕೆ ತಮ್ಮ ಅಭಿಮಾನಿ, ಪ್ರೇಕ್ಷಕರ ಹೆಸರಿನಲ್ಲಿ ಪಲಾಯನ ಮಾಡುವ ಸ್ಟಾರ್ ನಟರು ಮುಮ್ಮಟ್ಟಿ ತರದ ನಟರಿಂದ ಕಲಿಯುವುದು ತುಂಬಾ ಇದೆ.


ಯಾವುದೇ ಸಬ್ಜೆಕ್ಟ್ ಆಗಲಿ, ತಾನು ಯಾವುದೇ ಪಾತ್ರ ಮಾಡಲಿ ತನ್ನ ಪ್ರೇಕ್ಷಕರು ನೋಡುತ್ತಾರೆ ಎನ್ನುವ ವಿಶ್ವಾಸ ಒಬ್ಬ ನಟನಿಗೆ ಇದ್ದಾಗ ಮಾತ್ರ ಮುಮ್ಮಟ್ಟಿ ತರದ ಸ್ಟಾರ್ ಈ ತರದ ಸಿನಿಮಾದಲ್ಲಿ ನಟಿಸಬಲ್ಲ..
ಯಾಕೆ ತಮಿಳು-ಮಲಯಾಳಂನಲ್ಲಿ ಈ ತರದ ಜೀವಂತ ಸಿನಿಮಾಗಳು ಬರುತ್ತವೆ, ಯಶಸ್ವಿಯಾಗುತ್ತವೆ ಅಂದರೆ ಜನರಿಗೆ ಸಿನಿಮಾ ನೋಡುವ ಅಭಿರುಚಿ ತಾನಾಗಿಯೇ ಬರುವುದಿಲ್ಲ ಅದನ್ನ ಕಲಿಸುವ ಜವಾಬ್ದಾರಿ ನಟರು, ನಿರ್ದೇಶಕರಿಗೆ ಇರುತ್ತೆ. ಅದನ್ನ ಅಲ್ಲಿನವರು ಮಾಡುತ್ತಿದ್ದಾರೆ ಅನಿಸುತ್ತೆ.