ತುಂಗಭದ್ರೆಯಲ್ಲಿ ಕಂಡ ನೀರು ನಾಯಿ ಹಿಂಡು- ಮಲ್ಲಿಕಾರ್ಜುನ ಹೊಸಪಾಳ್ಯ

ತುಂಗಭದ್ರೆಯಲ್ಲಿ ಕಂಡ ನೀರು ನಾಯಿ ಹಿಂಡು ಮಲ್ಲಿಕಾರ್ಜುನ ಹೊಸಪಾಳ್ಯ

ತುಂಗಭದ್ರೆಯಲ್ಲಿ ಕಂಡ ನೀರು ನಾಯಿ ಹಿಂಡು-    ಮಲ್ಲಿಕಾರ್ಜುನ ಹೊಸಪಾಳ್ಯ

ತುಂಗಭದ್ರೆಯಲ್ಲಿ ಕಂಡ ನೀರು ನಾಯಿ ಹಿಂಡು
ಮಲ್ಲಿಕಾರ್ಜುನ ಹೊಸಪಾಳ್ಯ


ಅದು 2020ರ ಆರಂಭ. ವಿಜಯನಗರ ಅರಸರ ಕಾಲದ ನೀರಾವರಿ ಕಾಲುವೆಗಳ ಪುನಶ್ಚೇತನ ಕೆಲಸದ ಪ್ರಯುಕ್ತ ಹೊಸಪೇಟೆಯಲ್ಲಿ ವಾಸ್ತವ್ಯ ಹೂಡಿದ್ದೆ. ರಾಯ, ಬಸವ, ಕಾಳಘಟ್ಟ, ಹುಲಿಗಿ ಮುಂತಾದ ಕಾಲುವೆಗಳ ದಾಖಲಾತಿಗೆ ಹೋದಾಗ ಅಲ್ಲೆಲ್ಲಾ ‘ಇದು ನೀರುನಾಯಿಗಳ ಸಂರಕ್ಷಣಾ ವಲಯ’ ಎಂಬ ಮಾಹಿತಿ ಫಲಕ ಹಾಕಿದ್ದರು. ಸಿನಿಮಾಗಳಲ್ಲಿ, ವೀಡಿಯೋಗಳಲ್ಲಿ ನೋಡಿದ್ದ ಈ ಅಪರೂಪದ ಜೀವಿಗಳನ್ನು ಹತ್ತಿರದಲ್ಲೇ ನೋಡುವ ಅವಕಾಶ ಸಿಕ್ಕಿತಲ್ಲಾ ಎಂದು ಭಾರೀ ಖುಷಿ. 


ಇಂಥಾ ವಿಷಯಗಳಲ್ಲಿ ತಡವನ್ನೇ ಮಾಡದೆ ಮುಂದಿನ ಭಾನುವಾರವೇ ಹೊರಟುಬಿಟ್ಟೆವು. ಹೊಸಪೇಟೆಯಲ್ಲಿದ್ದ ಪರಿಸರ ಕಾರ್ಯಕರ್ತ ಸಮದ್ ಕೊಟ್ಟೂರು ಅವರಿಂದ ನೀರು ನಾಯಿಗಳು ಎಲ್ಲೆಲ್ಲಿ ಹೆಚ್ಚಾಗಿರುತ್ತವೆ ಎಂಬ ಮಾಹಿತಿ ಪಡೆದು ಹೊಸಪೇಟೆಯಿಂದ ಗಂಗಾವತಿಗೆ ಹೋಗುವ ದಾರಿಯಲ್ಲಿ ಬುಕ್ಕಸಾಗರ ಸೇತುವೆ ಬಳಿ ನಮ್ಮ ತಂಡ ಹಾಜರು. ಆಗಿನ್ನೂ ಬೆಳಿಗ್ಗೆ 8 ಗಂಟೆ. ಅಷ್ಟೊತ್ತಿಗಾಗಲೇ ನಮ್ಮ ಗಂಗಾವತಿ ಕಛೇರಿಯಿಂದ ಸಹೋದ್ಯೋಗಿಗಳು ಬಂದು ಸೇತುವೆ ಮೇಲಿಂದಲೇ ನದಿ ನೋಡುತ್ತಿದ್ದರು. 


ಭಾನುವಾರವೆಂದರೆ ‘ಹೊಟ್ತುಂಬಾ ಮುದ್ದೆ ಕಣ್ತುಂಬಾ ನಿದ್ದೆ’ ಸೂತ್ರವನ್ನು ತಪ್ಪದೇ ಪಾಲಿಸುತ್ತಿದ್ದ ಬಾಲಕೃಷ್ಣರಾಜ್ (ಬಾಲ್ಕಿ) ಇವತ್ತು ಉಳಿದವರ ಬಲವಂತಕ್ಕೆ ಹೊರಟು ಬಂದಿದ್ದರು. ನಮ್ಮ ಮುಖ ಕಂಡಿದ್ದೇ ತಡ ‘ಇಷ್ಟೊತ್ತಲ್ಲಿ ಕಾಣಲ್ವಂತೆ ಕಣ್ರೀ, ಬೆಳಿಗ್ಗೆ ಆರ್ ಗಂಟೆ ಒಳಗೇ ಬರಬೇಕಂತೆ, ಬನ್ನಿ ವಾಪಸ್ ಹೋಗೋಣ ಲಕ್ಷ್ಮಮ್ಮ ನೀರ್ ದೋಸೆ, ಮೀನ್ ಸಾರ್ ಮಾಡಿರ‍್ತಾರೆ’ ಎಂದು ಉತ್ತೇಜಿಸಿದರು. ಅವರ ಸ್ವಭಾವದ ಬಗ್ಗೆ ತಿಳಿದಿದ್ದ ನಾವೆಲ್ಲಾ ಜೋರಾಗಿ ನಕ್ಕು ನದಿಯೊಳಕ್ಕೆ ಇಳಿದೆವು. 


ಫೆಬ್ರವರಿ ತಿಂಗಳಾದ್ದರಿಂದ ತುಂಗಭದ್ರೆಯ ನೀರು ತೆಳುವಾಗಿ ಹರಿಯುತ್ತಿತ್ತು. ಹಾಸು ಬಂಡೆಗಳು, ಜೊಂಡು ಇತ್ಯಾದಿ ದಾಟಿಕೊಂಡು ನದಿ ಮಧ್ಯಭಾಗ ತಲುಪಿದೆವು. ಅಲ್ಲೊಂದು ವಿಶಾಲ ಬಂಡೆಯ ಮೇಲೆ ಒಂದು ಕುಟುಂಬ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿತ್ತು. ಅವರು ಮೀನು ಹಿಡಿಯುವವರು. ಅಲ್ಲೇ ಅಡುಗೆ, ಅಲ್ಲೇ ವಾಸ. ಬಲೆಗಳು, ತೆಪ್ಪಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಒಂದು ಹೆಣ್ಣು ಮಗಳು ಅಡುಗೆಗೆ ತಯಾರಿ ನಡೆಸಿತ್ತು, ಮಕ್ಕಳು ಅಲ್ಲೇ ಅಡ್ಡಾಡಿಕೊಂಡಿದ್ದವು. 


ನಾವು ಹಾಗೇ ನದಿಯಲ್ಲಿ ಮುಂದುವರಿದೆವು. ಒಂದು ಗಂಟೆ ಅಡ್ಡಾಡಿದರೂ ನೀರು ನಾಯಿಗಳ ದರ್ಶನವಾಗಲಿಲ್ಲ. ಅಲ್ಲಿನ ದೊಡ್ಡ ಬಂಡೆ ಏರಿ ದಣಿವಾರಿಸಿಕೊಳ್ಳಲು ಕುಳಿತೆವು. ಅಲ್ಲಿಂದ ಇಡೀ ನದಿ ಚೇತೋಹಾರಿಯಾಗಿ ಕಾಣುತ್ತಿತ್ತು. ದೂರದಲ್ಲಿ ದಕ್ಷಿಣ ದಿಕ್ಕಿಗೆ ವಿಜಯನಗರ ಅರಸರ ಮೊದಲ ರಾಜಧಾನಿ ಆನೆಗುಂದಿ, ಋಷ್ಯಮೂಕ ಪರ್ವತದ ಅಂಚು, 60 ಕಂಬಗಳ ಮಂಟಪಗಳು ಕಾಣುತ್ತಿದ್ದವು. ಉತ್ತರಕ್ಕೆ ನೋಡಿದರೆ ಒಂದು ಕಿಲೋಮೀಟರ್ ಉದ್ದದ ಬುಕ್ಕಸಾಗರ ಸೇತುವೆ, ನದೀ ದಡದಲ್ಲಿ ಕಬ್ಬಿನ ಗದ್ದೆಗಳು, ಅಲ್ಲೊಂದಿಲ್ಲೊAದು ತಾಳೆ ಮರಗಳ ನೋಟ. ‘ಎಷ್ಟ್ ಚಂದೈತ್ರೀ ಸರ ನದಿ, ನಾವ್ ಬಂದ್ ಕಿಸಿಂದ ಏನೂ ನೋಡೆ ಇಲ್ಲ, ಬರೀ ಆಫೀಸು, ಕೆಲಸ ಇಷ್ಟೇ ಆತು, ವಾಪಸ್ ಹೋದ್ ಕಿಸಿಂದ ಮನಿಯವರನ್ನೂ ಕರಕೊಂಬರ‍್ತೀನಿ” ಎಂದರು ಸೂರ್ಯಕಾಂತ್. ಅವರದು ಬಾಗಲಕೋಟೆಯ ನೇಟಿವ್ ಮಾತು. ಕೇಳಲು ಚಂದ.


ಕಿಷ್ಕಿಂದೆ, ಅಂಜನಾದ್ರಿ ಹಾಗೂ ಋಷ್ಯಮೂಕ ಪರ್ವತಗಳಿಗೆ ತುಸುವೇ ದೂರದಲ್ಲಿ ನಾವು ಕುಳಿತಿದ್ದರಿಂದ ನನಗೆ ಒಂದುಕಥೆ ನೆನಪಾಯಿತು. ಆಂಜನೇಯ ತಾನು ಸಂಜೀವಿನಿ ಪರ್ವತಕ್ಕೆ ಹೋಗಿಬಂದ ಟ್ರಾವೆಲ್ ವೆಚ್ಚವನ್ನು ರಿಅಂಬರ್ಸ್ ತೆಗೆದುಕೊಳ್ಳಲು ಅಯೋಧ್ಯೆಯ ರಾಮರಾಜ್ಯದ ಕಛೇರಿಯಲ್ಲಿ ಪಟ್ಟ ಪಡಿಪಾಟಲಿನ ಈ ಕಥೆಯನ್ನು ನಾನು ಹೇಳಿದೆ. ಅದನ್ನು ಕೇಳಿ ಸ್ವತಃ ಅಕೌಂಟೆಂಟ್ ಆದ ಸೂರ್ಯಕಾಂತ್ ಬಿದ್ದೂ ಬಿದ್ದೂ ನಕ್ಕರು. ಉಳಿದವರು ನಮ್ಮ ಈಗಿನ ಆಫೀಸಿನಲ್ಲಿ ಯಾರು ರಾಮ, ಯಾರು ಹನುಮಂತ, ಯಾರು ಲೆಕ್ಕಿಗ ಎಂದು ಪಾತ್ರಗಳನ್ನು ಆವಾಹಿಸಿಕೊಂಡು ನಗುವೋ ನಗು. ಬಾಲ್ಕಿಯವರು ‘ರೀ ನಡಿರಿ ಓಗನ ನೀರ್‌ದೋಸೆ ಬಿಸಿ ಇರೋವಾಗಲೇ ಚೆಂದ, ಆಮೇಲೆ ಲಕ್ಷ್ಮಮ್ಮ ಹೊರಟೋಗ್ತಾರೆ’ ಅನ್ನುತ್ತಾ ಎದ್ದು ಹಿಂಭಾಗದ ಧೂಳು ಕೊಡವಿಕೊಂಡು ಹೊರಟೇಬಿಟ್ಟರು. ಸರಿ, ಬಿಸಿಲಾದ ಮೇಲೆ ನೀರು ನಾಯಿಗಳು ಸಿಗುವುದು ಅನುಮಾನ ಎಂದು ಎಲ್ಲರೂ ಎದ್ದೆವು.


ವಾಪಸಾಗುವಾಗ ಮೀನು ಸಂಸಾರದ ಬಳಿ ಈಗ ಗಂಡಸರೂ ಇದ್ದರು. ಮೀನು ಮಾರಿಕೊಂಡು ಹಿಂತಿರುಗಿದ್ದ ಅವರನ್ನು ಮಾತಿಗೆಳೆದೆವು. ನೀರುನಾಯಿಗಳ ಹೆಸರು ಕೇಳಿದೊಡನೇ ಎಗರಿಬಿದ್ದರಲ್ಲದೇ ‘ಅವಕ್ಕೇನು, ಮಸ್ತಾಗಿದ್ದಾವೆ ಕಳ್ ನನ್ ಮಗನವು’ ಎಂದು ಗೊಣಗಿದರು. ಅವರು ನೀರುನಾಯಿಗಳ ಮೇಲೆ ದ್ವೇಷಕಾರಲು ಹೇಳಿದ ಕಾರಣ ಮಾತ್ರ ಮಜಬೂತಾಗಿತ್ತು. ಏನೆಂದರೆ; ಇವರು ಹಾಕಿದ್ದ ಬಲೆಯಲ್ಲಿ ಸಿಕ್ಕಿಕೊಂಡ ಮೀನುಗಳನ್ನೆಲ್ಲಾ ಹಿಂಡುಹಿಂಡಾಗಿ ಬಂದು ನೀರು ನಾಯಿಗಳು ಕಬಳಿಸುತ್ತವಂತೆ. ಒಮ್ಮೊಮ್ಮೆ ಬಲೆ ಎಳೆಯುವಾಗಲೂ ಬಂದು ತಿನ್ನುತ್ತವಂತೆ. 


ನೀರು ನಾಯಿಗಳು ತುಂಬಾ ಸಾಧು ಪ್ರಾಣಿಗಳೆಂದುಕೊಂಡಿದ್ದ ನಮಗೆ ಅವುಗಳ ಮತ್ತೊಂದು ಸ್ವಭಾವ ಕೇಳಿ ಒಳಗೊಳಗೇ ಖುಷಿಯಾಯಿತು. ಬಹಿರಂಗವಾಗಿ ಖುಷಿಪಟ್ಟರೆ ಪಾಪ ಮೀನುಗಾರರಿಗೆ ಬೇಸರ. ನದಿಯಲ್ಲಿನ ಮೀನುಗಳು ನೀರು ನಾಯಿಗಳಿಗೇ ಹೊರತು ಮನುಷ್ಯರ ವ್ಯಾಪಾರಕ್ಕಲ್ಲ ಎಂಬುದು ನಮ್ಮ ಖುಷಿಗೆ ಕಾರಣ.


‘ಈಗ ನದಿ ಒಳಗ ಹೋದ್ರಿಕಿಸಿಂದ ನೀರ್ ನಾಯಿಗಳು ಸಿಗತಾವೇನ್ರಿ ನೋಡಾಕ’ ಸೂರ್ಯಕಾಂತ್ ಒಂದು ಕೊನೆಯ ಟ್ರೆöಕ್ ಮಾಡಿದರು.  


‘ಸಿಗ್ತಾವೆ, ಆದ್ರೆ ಇಷ್ಟೊತ್ನಲ್ಲಿ ಕಮ್ಮಿ’ ಎಂಬ ವಾಕ್ಯ ಅವರ ಬಾಯಿಂದ ಬಂದಿದ್ದೇ ತಡ ಕಳೆದುಹೋಗಿದ್ದ ನಮ್ಮ ಉಮೇದು ಮರಳಿಬಂದಿತು. ಆದರೆ ತೆಪ್ಪದಲ್ಲಿ ಕರೆದೊಯ್ಯಲು ತಲೆಗೆ ನೂರೈವತ್ತು ಎಂದರು. ಚೌಕಾಸಿ ಮಾಡಲು ಸೂರ್ಯಕಾಂತರನ್ನು ಮುಂದೆ ಬಿಟ್ಟೆವು. ಆತ ತನ್ನ ಬಾಗಲಕೋಟೆ ನೇಟಿವ್ ಮಾತಿನಲ್ಲಿ ಕನ್ವಿನ್ಸ್ ಮಾಡಿದನೋ ಕನ್ಫೂಸ್ ಮಾಡಿದನೋ ಗೊತ್ತಿಲ್ಲ ತಲಾ ಐವತ್ತು ರೂಪಾಯಿಯಂತೆ ಒಪ್ಪಂದವಾಯಿತು. ಬಾಲ್ಕಿ ಮತ್ತೊಮ್ಮೆ ‘ನೀರ್‌ದೋಸೆ-ಮೀನ್ ಸಾರು’ ಅಂದಾಗ ವೀರೇಶ್ ‘ಇವತ್ತೊಂದಿನ ನಿಮ್ಮ ವ್ರತ ತಪ್ಪಿದ್ರೆ ಏನೂ ಆಗಲ್ಲ ನಡೀರಿ ಸಾರ್’ ಅನ್ನುತ್ತಾ ಅವರನ್ನು ಅನಾಮತ್ ತೆಪ್ಪದೊಳಕ್ಕೆ ತಳ್ಳಲಾಯಿತು.


ಎರಡು ತೆಪ್ಪಗಳಲ್ಲಿ ಹೊರಟೆವು. ನಾವು ಕಿಷ್ಕಿಂದಾ ಕೋತಿಗಳ ತರಹ ನೀರೆರಚುತ್ತಾ ಗಲಾಟೆ ಶುರು ಹಚ್ಚಿದಾಗ ತೆಪ್ಪದವರು ‘ಶ್’ ಅಂತ ತುಟಿ ಮೇಲೆ ಬೆರಳಿಟ್ಟರು. ಸೋ ಗಪ್‌ಚುಪ್. ತೆಪ್ಪವನ್ನು ನೂಕುವ ಹುಟ್ಟಿನ ಬುಳಕ್ ಬುಳಕ್ ಸದ್ದು ಬಿಟ್ಟರೆ ಮತ್ತೇನಿಲ್ಲ.


ಹತ್ತು ನಿಮಿಷ ಆಗಿರಬಹುದು. ಒಂದು ಮಧ್ಯಮ ಗಾತ್ರದ ನಡುಗಡ್ಡೆಯನ್ನು ಬಳಸಿಕೊಂಡು ಹೋಗುವಾಗ ತೆಪ್ಪದ ಮಾಲೀಕ ಅಗೋ ಅಂತ ಕೈಮಾಡಿದ. ಚಕ್ಕಂತ ತಿರುಗಿದರೆ ನಾಲ್ಕೆöದು ನೀರು ನಾಯಿಗಳು!. ಒಂದು ದೊಡ್ಡದು, ಉಳಿದವು ಸಣ್ಣವು. ಬಹುಶಃ ಅಮ್ಮ-ಮಕ್ಕಳೆನಿಸುತ್ತದೆ. ಸಣ್ಣವು ನಮ್ಮನ್ನು ಕಂಡ ತಕ್ಷಣ ಪುಳಕ್ಕನೆ ಜೊಂಡಿನ ಪೊದೆ ಒಳಕ್ಕೆ ಹೋದವು. ದೊಡ್ಡದು ಮಾತ್ರ ಮುಂಗಾಲುಗಳನ್ನು ಎತ್ತಿ ನಮ್ಮನ್ನು ದಿಟ್ಟಿಸಿತು. ಕಂದು ಮೈಬಣ್ಣ, ಚೂಪು ಮೀಸೆಗಳು ಸ್ಪಷ್ಟವಾಗಿ ಕಂಡವು. ನಮಗಿಂತ ತುಸು ಹಿಂದೆ ಬರುತ್ತಿದ್ದ ಮತ್ತೊಂದು ತೆಪ್ಪ ನಾವಿದ್ದ ಸ್ಥಳಕ್ಕೆ ಬರುವ ಹೊತ್ತಿಗೆ ಅವೆಲ್ಲಾ ಪೊದೆಯೊಳಗೋ ನೀರೊಳಗೋ ಮಾಯವಾದವು. ನಾವು ತೆಗೆದಿದ್ದ ಫೋಟೋ, ವೀಡಿಯೋಗಳನ್ನು ತೋರಿಸಿ ಅವರಿಗೆ ಸಮಾಧಾನ ಮಾಡಿದೆವು.
ಇನ್ನೂ ಅರ್ಧಗಂಟೆ ಅಲ್ಲೆಲ್ಲಾ ಸುತ್ತಿದೆವು, ಆದರೆ ಅವುಗಳ ಸುಳಿವಿಲ್ಲ. ಅಷ್ಟರಲ್ಲಾಗಲೇ ಗಂಟೆ ಹನ್ನೊಂದು ಮೀರಿತ್ತು. ಬಿಸಿಲಲ್ಲಿ ಅವು ನೀರೊಳಗೇ ಇರುತ್ತವೆ, ಹೊರಗೆ ಕಾಣುವುದಿಲ್ಲ, ಸಂಜೆ ಐದು ಗಂಟೆ ಹೊತ್ತಿಗೆ ಮತ್ತೆ ಓಡಾಡಲು ಶುರು ಮಾಡುತ್ತವೆ ಎಂದು ತೆಪ್ಪದವರು ಹೇಳಿದರು. ಈಗೀಗ ಎಲ್ಲರಿಗೂ ನೀರ್‌ದೋಸೆ, ಮೀನ್ ಸಾರು ಕಾಡತೊಡಗಿತು. ತೆಪ್ಪದವರಿಗೆ ಧನ್ಯವಾದ ಸಲ್ಲಿಸಿ ಹೊರಟೆವು.


ಗಂಗಾವತಿ ಆಫೀಸ್ ಕಮ್ ಗೆಸ್ಟ್ ಹೌಸಿನಲ್ಲಿ ನಮಗಾಗಿಯೇ ಕಾಯುತ್ತಿದ್ದ ಲಕ್ಷಮ್ಮ ಹೆಂಚಿನ ಮೇಲೆ ಬಿಸಿ ಬಿಸಿ ದೋಸೆ ಹುಯ್ದು ಕೊಡುತ್ತಿದ್ದರೆ, ನಾವು ಎಡಗೈಯಲ್ಲಿ ಮಿಂಚುಳ್ಳಿ ಹಿಡಿದು ಬಲಗೈಯಲ್ಲಿ ಮೀನುಳಿ ನೆಂಚಿಕೊಂಡು ತಿಂದಿದ್ದೇ ತಿಂದಿದ್ದು. ತಿಂದಾದ ನಂತರ ಹಾಗೇ ನೆಲದ ಮೇಲೆ ಅಡ್ಡಾಗಿ ವಿಕಿಪೀಡಿಯಾ ತೆರೆದಾಗ ಅಲ್ಲಿ ನೀರು ನಾಯಿಗಳ ಬಗ್ಗೆ ಇನ್ನಷ್ಟು ಮಾಹಿತಿ ಸಿಕ್ಕಿತು.


ನೀರುನಾಯಿಗಳು (oಣಣeಡಿ)ಭಾರತದಲ್ಲಿ ಕಾಶ್ಮೀರ, ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿವೆ. ನದಿಗಳ ಸಮೀಪ ಬಂಡೆಗಳ ಪೊಟರೆಗಳಲ್ಲಿ ವಾಸಿಸುತ್ತವೆ. ನೀಳ ದೇಹ, ನೀರಿನಲ್ಲಿ ತೋಯದ ತುಪ್ಪಳದ ಚರ್ಮ, ಚಪ್ಪಟೆಯಾದ ತಲೆ, ಬಲವಾದ ಬಾಲ, ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶ ಸೂಕ್ಷ್ಮ ಮೀಸೆಗೂದಲು ಇವು ನೀರುನಾಯಿಗಳ ಮುಖ್ಯ ಲಕ್ಷಣ. ಮೀನು, ಏಡಿ, ಕಪ್ಪೆ, ಬಾತುಕೋಳಿ, ನೀರುಕೋಳಿ ಹಾಗೂ ಕೆಲವೊಮ್ಮೆ ಎಲೆಗಳನ್ನು ತಿನ್ನುತ್ತವೆ. 


ಕರ್ನಾಟಕದಲ್ಲಿ ತುಂಗಭದ್ರಾ, ಭದ್ರಾ ನದಿಗುಂಟ ಅಪಾರ ಸಂಖ್ಯೆಯಲ್ಲಿ ಈ ಅಪರೂಪದ ‘ನೀರುನಾಯಿ’ಗಳಿವೆ. ಅದರಲ್ಲಿಯೂ ತುಂಗಭದ್ರಾ ನದಿಯ ಹರಿವಿನ ಹೊಸಪೇಟೆಯಿಂದ ಕಂಪ್ಲಿ ಪಟ್ಟಣದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೀರುನಾಯಿಗಳನ್ನು ಕಾಣಬಹುದು. ಸ್ಥಳೀಯ ವನ್ಯಜೀವಿ ಮತ್ತು ಪರಿಸರ ಪ್ರೇಮಿಗಳ ಸತತ ಪ್ರಯತ್ನದಿಂದ 2015ರ ಏಪ್ರಿಲ್‌ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯು 34 ಕಿ.ಮೀ. ಪ್ರದೇಶವನ್ನು ‘ನೀರು ನಾಯಿ ಸಂರಕ್ಷಿತ ಪ್ರದೇಶ’ ಎಂದು ಘೋಷಿಸಿದೆ.


‘ನದಿಯ ಎರಡೂ ಕಡೆ ಅಪಾರ ಸಂಖ್ಯೆಯಲ್ಲಿ ನೀರುನಾಯಿಗಳಿವೆ. ಆದರೆ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಮೀನುಗಾರಿಕೆ, ಮರಳುಗಾರಿಕೆಯಿಂದ ಅವುಗಳಿಗೆ ತೊಂದರೆ ಆಗುತ್ತಿದೆ. ತುಂಗಭದ್ರಾ ಕಾಲುವೆಗಳಲ್ಲೂ ನೀರುನಾಯಿಗಳು ಸುರಕ್ಷಿತವಿಲ್ಲ. ಮೀನುಗಾರಿಕೆಯೇ ಇದಕ್ಕೆಲ್ಲ ಕಾರಣ. ಮೀನುಗಾರಿಕೆಗೆ ನಿರ್ದಿಷ್ಟ ಜಾಗ ಗೊತ್ತು ಮಾಡಬೇಕು’ ಎಂಬುದು ವನ್ಯಜೀವಿ ತಜ್ಞ ಸಮದ್ ಕೊಟ್ಟೂರು ಅಭಿಪ್ರಾಯ.


ನನಗೆ ಇನ್ನೊಮ್ಮೆ ಹಂಪಿಯ ವಿರುಪಾಕ್ಷ ದೇವಾಲಯದ ಬಳಿಯೇ ನೀರು ನಾಯಿ ಹಿಂಡುಗಳ ದರ್ಶನವಾಯಿತು. 2020ರ ಅಕ್ಟೋಬರ್ ತಿಂಗಳು. ಕೊರೊನಾ ಇದ್ದುದರಿಂದ ಕೇವಲ ಒಂದು ದಿನದ ಹಂಪಿ ಉತ್ಸವ ಇತ್ತು. ಸ್ಮಾರಕಗಳಿಗೆ ದೀಪಾಲಂಕಾರ ಇದ್ದುದರಿಂದ ನೋಡಲು ಹೋಗಿದ್ದೆ. ವಿರೂಪಾಕ್ಷ ದೇವಾಲಯದ ಹಿಂಭಾಗದ ನದಿ ತಟದಲ್ಲಿ ತುಂಗಾರತಿ ಕಾರ್ಯಕ್ರಮ ಇತ್ತು. ಅದನ್ನು ನೋಡಲು ಕಾಯುತ್ತಿದ್ದಾಗ ನದಿಯ ಒಂದು ಕಡೆ ಒಮ್ಮೆಗೇ ಸಪ್ಪಳ ಹೆಚ್ಚಾಯಿತು. ಜೊತೆಗೆ ನೀರಿನಲ್ಲಿ ನೊರೆ ಎದ್ದಿತು. ಸ್ಥಳೀಯರಿಗೆ ಗೊತ್ತಿದ್ದರಿಂದ ‘ಗಾಬರಿಯಾಗಬೇಡಿ ನೀರು ನಾಯಿಗಳು’ ಎಂದರು. ನಸು ಕತ್ತಲಲ್ಲಿ ಸದ್ದು ಮಾಡಿಕೊಂಡು ಓಡಾಡುತ್ತಿದ್ದವು. ಯಾವಾಗ ಮೈಕಿನ ಶಬ್ದ ಹೆಚ್ಚಾಯಿತೋ ಅವು ಕಾಣದಾದವು. 


ಹಂಪಿಗೆ ಪ್ರವಾಸ ಹೋಗುವವರು ಈ ಅಪರೂಪದ ಜೀವಿಯನ್ನು ನೋಡಲು ಮರೆಯಬೇಡಿ. ತಾಳ್ಮೆಯಿಂದ ಕಾಯಬೇಕು. ಜನ ಇಲ್ಲದ ಕಡೆ ಕಾದು ಕುಳಿತರೆ ಅಥವಾ ತೆಪ್ಪದಲ್ಲಿ ಹೋದರೆ ನೋಡಬಹುದು. ಈ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ತುರ್ತಾ ಅಣೆಕಟ್ಟು ಬಳಿ, ಹರಿಗೋಲು ಬೈಲ್ ಹಳ್ಳಿಯ ಹತ್ತಿರ, ಹೊಸೂರು ಗ್ರಾಮದ ಬಳಿ, ಬುಕ್ಕಸಾಗರ ಸೇತುವೆ ಆಸು-ಪಾಸು, ಆನೆಗುಂದಿ ಹತ್ತಿರದ ಸಣಾಪುರ ಅಣೆಕಟ್ಟು ಬಳಿ, ಗಂಗಾವತಿ ಬಳಿಯ ದೇವಘಾಟ್ ಹತ್ತಿರ ನೀರು ನಾಯಿಗಳು ಹೆಚ್ಚು ಕಾಣುತ್ತವೆ. 
ನೀರು ನಾಯಿಗಳೇನು ನಾಯಿ ಜಾತಿಗೆ ಸೇರಿದವಲ್ಲ, ಅವುಗಳ ಮುಖ ನಾಯಿಯನ್ನು ಹೋಲುವುದರಿಂದ ಆ ಹೆಸರು.