ಪ್ರಬಲ ಜಾತಿ ರಾಜಕಾರಣ ಅಂಚಿಗೆ ಸರಿಯುತ್ತಿದೆಯೇ?

ವಿವಿಧ ಜನವರ್ಗಗಳ ಸಮುಚ್ಛಯವಾಗಿರುವ ಅಹಿಂದ, ಸಂವಿಧಾನದ ಆಶಯಗಳ ಸೈದ್ಧಾಂತಿಕ ನೆಲೆಯೊಂದಿಗೆ ಮುಖ್ಯ ವಾಹಿನಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ಪ್ರಬಲರ ಬಳಿ ಈಗ ಇರುವ ಏಕೈಕ ಅಸ್ತ್ರವೆಂದರೆ ಜಾತಿ.

ಪ್ರಬಲ ಜಾತಿ ರಾಜಕಾರಣ ಅಂಚಿಗೆ ಸರಿಯುತ್ತಿದೆಯೇ?

ವಿಶ್ಲೇಷಣೆ

ಸಿ.ರುದ್ರಪ್ಪ

 

 

ಜಾತಿ ಮತ್ತು ವರ್ಗಗಳನ್ನು ಬಿಟ್ಟು ರಾಜಕಾರಣವನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ.ರಾಜ್ಯದಲ್ಲಿ ಮೊದಲಿನಿಂದಲೂ ಬೈ ಪೋಲಾರ್ ಅಥವಾ ಎರಡು ಧ್ರುವೀಯ ರಾಜಕಾರಣ.ಒಕ್ಕಲಿಗರು ಮತ್ತು ಲಿಂಗಾಯತರ ನಡುವೆಯೇ ಪೈಪೋಟಿ.

1956 ರ ರಾಜ್ಯ ಏಕೀಕರಣದ ಮೊದಲು ಒಕ್ಕಲಿಗರದ್ದೇ ರಾಜ್ಯಭಾರ.ನಂತರ 1972 ರ ವರೆಗೂ ಅಧಿಕಾರದ ಚುಕ್ಕಾಣಿ ಹಿಡಿದವರು ಲಿಂಗಾಯತರು.ಆದರೆ ಹೀಗೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದ  ಒಕ್ಕಲಿಗರು ಮತ್ತು ಲಿಂಗಾಯತರು ಸಮಾನ ರಾಜಕೀಯ ವೈರಿಗಳ ವಿರುದ್ಧ ಹೋರಾಡಲು ಒಂದಾಗಿರುವುದೂ ಉಂಟು.

ವಿವಿಧ ಅವಕಾಶ ವಂಚಿತ ಸಮುದಾಯಗಳಿಗೆ ರಾಜಕೀಯ ಅಧಿಕಾರವನ್ನು ಹಂಚಲು ಪ್ರಯತ್ನಿಸಿದ್ದ ದೇವರಾಜ ಅರಸು ವಿರುದ್ಧ ರಾಜಕೀಯ ಪಿತೂರಿಯನ್ನು ಮಾಡಲು ಪ್ರಬಲ ಜಾತಿಗಳ ನಾಯಕರು ಸೇರಿಕೊಂಡಿದ್ದರು..ಎಸ್.ಬಂಗಾರಪ್ಪ  ಮತ್ತು ವೀರಪ್ಪ ಮೊಯ್ಲಿ ವಿರುದ್ಧ ಭಿನ್ನಮತೀಯ ಚಟುವಟಿಕೆಗಳ ನೇತೃತ್ವವನ್ನು ವಹಿಸಿದವರು ಈ ಎರಡು ಪ್ರಬಲ ಸಮುದಾಯಗಳ ನಾಯಕರೇ.

ಈ ಬಲಾಢ್ಯ ಸಮುದಾಯಗಳ ರಾಜಕೀಯ ಪ್ರಾಬಲ್ಯದ ವಿರುದ್ಧ ಸುಮಾರು 20 ವರ್ಷಗಳ ಹಿಂದೆ ಅಹಿಂದ ಚಳುವಳಿ ಮೂಲಕ ಸಿದ್ದರಾಮಯ್ಯ ಸಡ್ಡು ಹೊಡೆಯಲು ಪ್ರಯತ್ನಿಸಿದಾಗ ಈ ಪ್ರಬಲ ಜಾತಿಗಳ ಮುಖಂಡರು ಒಂದಾಗಿದ್ದರು.ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಸಮಾನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರು.ಕಳೆದ ವಿಧಾನ ಸಭೆ ಚುನಾವಣೆಯಲ್ಲಿ 135 ಸೀಟುಗಳನ್ನು ಗೆದ್ದು ಮತ್ತೆ ಮುಖ್ಯಮಂತ್ರಿಯಾಗುವ ಮೂಲಕ ಸಿದ್ದರಾಮಯ್ಯ ಬಲಶಾಲಿ ನಾಯಕರಾಗಿ ಹೊರಹೊಮ್ಮಿದ್ದರು. ಇದು ಸಹಜವಾಗಿ ಅವರ ವಿರೋಧಿಗಳ ಮನಸ್ಸಿನಲ್ಲಿ ಅಸ್ಥಿರತೆಯ ಭಾವನೆಯನ್ನು ಸೃಷ್ಟಿಸಿತ್ತು.ಆಗ ಮತ್ತೆ ಪ್ರಬಲ ಜಾತಿಗಳು ರಾಜಕೀಯವಾಗಿ ಒಂದಾಗಿದ್ದವು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿತ್ತು. ಪ್ರಬಲ ಜಾತಿಗಳ ಈ ಸಮೀಕರಣದಿಂದಾಗಿಯೇ ಹಳೇ  ಮೈಸೂರು ಪ್ರಾಂತ್ಯದಲ್ಲಿ ಚಾಮರಾಜನಗರ ಮತ್ತು ಹಾಸನ ಬಿಟ್ಟು ಉಳಿದ ಕಡೆ ಎನ್ ಡಿ ಎ ಜಯಭೇರಿ ಬಾರಿಸಲು ಸಾಧ್ಯವಾಯಿತು ಎನ್ನುವ ವಿಶ್ಲೇಷಣೆಗಳು ಬಂದಿದ್ದವು. ಆದರೆ ಇದು ಒಂದು ತಾತ್ಕಾಲಿಕ ವಿದ್ಯಮಾನ ಎನ್ನುವುದು ಉಪಚುನಾವಣೆಯಲ್ಲಿ ಸ್ಪಷ್ಟವಾಗಿದೆ. ವಿವಿಧ ಜನವರ್ಗಗಳ ಸಮುಚ್ಛಯವಾಗಿರುವ ಅಹಿಂದ, ಸಂವಿಧಾನದ ಆಶಯಗಳ ಸೈದ್ಧಾಂತಿಕ ನೆಲೆಯೊಂದಿಗೆ ಮುಖ್ಯ ವಾಹಿನಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ಪ್ರಬಲರ ಬಳಿ ಈಗ ಇರುವ ಏಕೈಕ ಅಸ್ತ್ರವೆಂದರೆ ಜಾತಿ.

ಪ್ರಬಲ ಜಾತಿ ನಾಯಕರು ಅಧಿಕಾರ ಹಂಚಿಕೆ ವಿಷಯದಲ್ಲಿ ಯಾವತ್ತೂ ಔದಾರ್ಯದಿಂದ ನಡೆದುಕೊಂಡಿಲ್ಲ.ಬಿಜೆಪಿ ಮತ್ತು ಜನತಾ ದಳದಿಂದ ಹಿಂದುಳಿದ ಮತ್ತು ದಲಿತ ಮುಖ್ಯಮಂತ್ರಿಗಳು ಇನ್ನೂ ಬಂದಿಲ್ಲ.ಯಾವುದೇ ಅಭ್ಯರ್ಥಿಯನ್ನು ಅಹಿಂದ ಮತಗಳನ್ನು ವರ್ಗಾಯಿಸಿ ಗೆಲ್ಲಿಸಿಕೊಂಡು ಬರುವ ರಾಜಕೀಯ ಶಕ್ತಿಯನ್ನು ಸಿದ್ದರಾಮಯ್ಯ ಗಳಿಸಿಕೊಂಡಿರುವುದನ್ನು ಚುನಾವಣೆ ವಿದ್ಯಮಾನಗಳ ವಿಶ್ಲೇಷಣೆಗಳು ಸ್ಪಷ್ಟಪಡಿಸಿವೆ.ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಈ ಹೊಸ ರಾಜಕೀಯ ಶಕ್ತಿ ತಾವು ಮಾತ್ರ ಯಾವತ್ತೂ ರೂಲಿಂಗ್ ಕ್ಲಾಸ್ ಅಥವಾ ಆಡಳಿತ ವರ್ಗ ಎನ್ನುವ ಪ್ರಬಲ ಜಾತಿಗಳ ನಾಯಕರ ಭ್ರಮೆಯನ್ನು ಕಳಚುವಲ್ಲಿ ಕೂಡಾ ಯಶಸ್ವಿಯಾಗಿದೆ .ಸಿ.ಪಿ.ಯೋಗೀಶ್ವರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಬಹುತೇಕ ಒಕ್ಕಲಿಗ ಮತ್ತು ಲಿಂಗಾಯತ ಶಾಸಕರು ಗೆಲುವಿನ ದಡ ತಲುಪಲು ಸಾಧ್ಯವಾಗಿದ್ದು ಅಹಿಂದ ಬೆಂಬಲದಿಂದಲೇ.ಅಂದರೆ ಅಹಿಂದ ಜತೆ ಗುರ್ತಿಸಿಕೊಂಡವರು ಮಾತ್ರ ರಾಜಕೀಯವಾಗಿ ಚಲಾವಣೆಯಲ್ಲಿ ಇರಲು ಸಾಧ್ಯ ಎನ್ನುವುದು ಸ್ಪಷ್ಟವಾಗಿದೆ.ವಿಶಾಲ ತಳಹದಿಯ ಅಹಿಂದ ರಾಜಕಾರಣದ ಮುಂದೆ ಯಾವುದೇ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದ ಪ್ರಬಲ ಜಾತಿಗಳ ರಾಜಕಾರಣ ಸಂಕುಚಿತಗೊಳ್ಳುತ್ತಿದೆಯೇ ಮತ್ತು ಬಲಾಢ್ಯ ಜಾತಿಗಳ ರಾಜಕಾರಣ ಮುಖ್ಯ ವಾಹಿನಿಯ ಅಂಚಿಗೆ ಸರಿಯುತ್ತಿದೆಯೇ? ಎನ್ನುವ ಪ್ರಶ್ನೆಗಳು ಸಹಜವಾಗಿ ಉದ್ಭವಿಸಿವೆ.