ಜಮ್ಮು ಮತ್ತು ಕಾಶ್ಮೀರ ರೂಪುಗೊಂಡ ಬಗೆ

ಮಹಾರಾಜ ಹರಿಸಿಂಗ್‌ ತನ್ನೊಂದಿಗೆ ಮಾಡಿಕೊಂಡಿರುವ ವ್ಯಾಪಾರ, ಪ್ರಯಾಣ ಒಪ್ಪಂದ ಜಾರಿಯಲ್ಲಿರುವಾಗಲೇ ಆತ ಇಂಡಿಯಾ ಜೊತೆ ಸೇರುವ ಒಪ್ಪಂದಕ್ಕೆ ಸಹಿ ಹಾಕಲು ಆತನಿಗೆ ಅಧಿಕಾರವಿಲ್ಲ, ಇದು ಮೋಸ ಎಂದು ಪಾಕಿಸ್ಥಾನ ಹೇಳುತ್ತದೆ. ಇದನ್ನೇ ಕಾಶ್ಮೀರ ಬಿಕ್ಕಟ್ಟು ಎಂದು ಕರೆಯುತ್ತ ಬರಲಾಗಿದೆ.

ಜಮ್ಮು ಮತ್ತು ಕಾಶ್ಮೀರ ರೂಪುಗೊಂಡ ಬಗೆ

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

     ಏಶ್ಯಾ ಖಂಡದಲ್ಲಿ ಇಂಡಿಯಾ ಅಥವಾ ಭಾರತ ಒಂದು ಉಪಖಂಡ ಎನಿಸಿಕೊಂಡಿದೆ. ಈ ಭೂಖಂಡವನ್ನು ಬಹುಪಾಲು ಬ್ರಿಟಿಷ್‌ ಹಾಗೂ ಚೂರುಪಾರು ಫ್ರೆಂಚರು ಮತ್ತು ಪೋರ್ಚುಗೀಸರು ಆಳುತ್ತಿರುವಾಗಲೇ ಇಲ್ಲಿ 565 ರಾಜರು ಆಳುತ್ತಿದ್ದ ಕೆಲವು ಸ್ವತಂತ್ರ ಹಾಗೂ ಬಹುಪಾಲು ಮೈಸೂರಿನಂತ ಮೇಲ್ನೋಟಕ್ಕೆ ಸ್ವತಂತ್ರ ಎಂಬಂತಿದ್ದ ಪರತಂತ್ರ ರಾಜ್ಯಗಳಿದ್ದವು. ಇವುಗಳಲ್ಲಿ ಜಮ್ಮು ಮತ್ತು ಕಾಶ್ಮೀರವೂ ಒಂದು.

    ಜಮ್ಮು ಮತ್ತು ಕಾಶ್ಮೀರ ಎಂಬ ರಾಜ್ಯ ಸೃಷ್ಟಿಯಾದದ್ದು ಹೇಗೆ ಗೊತ್ತಾ. 2500 ವರ್ಷಗಳ ಪ್ರಾರಂಭದಿಂದಲೂ ಕಾಶ್ಮೀರ ಕಣಿವೆಯಲ್ಲಿ ಭಾರತದ ಎಲ್ಲ ಪುರಾತನ ಪ್ರದೇಶಗಳಂತೆ ಬೌದ್ಧರು, ಬ್ರಾಹ್ಮಣರು ಹಾಗೂ ಶೈವರ ನೆಲೆಗಳಿದ್ದವು. ಕಾಶ್ಮೀರ ಕಣಿವೆ 1320ರಲ್ಲಿ ರಿಂಚನ್‌ ಶಾ ಎಂಬ ಮುಸ್ಲಿಮ್‌ ರಾಜನ ಆಳ್ವಿಕೆಗೆ ಒಳಪಡುತ್ತದೆ. ಅಲ್ಲಿಂದ ನಾಲ್ಕು  ಶತಮಾನ ಕಾಶ್ಮೀರಿ ಸುಲ್ತಾನರು ಆಳ್ವಿಕೆ ನಡೆಸುತ್ತಾರೆ. 1586ರಿಂದ 1751ರವರೆಗೆ ಮೊಘಲರು ಈ ಕಾಶ್ಮೀರವನ್ನು ಆಳುತ್ತಾರೆ. ಮೊಘಲರ ಅಕ್ಬರ್‌ ಕಾಶ್ಮೀರದ ಆಡಳಿತವನ್ನು ವಿದ್ಯಾವಂತ ಹಾಗೂ ಲೆಕ್ಕದಲ್ಲಿ ಅತಿ ಬುದ್ದಿವಂತರಾಗಿದ್ದ ಮಾಂಸಹಾರಿ ಬ್ರಾಹ್ಮಣರಿಗೆ ವಹಿಸಿ ಅವರನ್ನು ಪಂಡಿತ್‌ ಎಂದು ಬಿರುದುಕೊಟ್ಟು ಗೌರವಿಸುತ್ತಾನೆ. ನಮ್ಮ ಮೊದಲ ಪ್ರಧಾನಿ ಪಂಡಿತ್‌ ಜವಹರಲಾಲ್‌ ನೆಹರೂ ಇದೇ ಸಮುದಾಯದವರು. 1751ರಿಂದ 1820ರವರೆಗೆ ಈ ಪ್ರದೇಶ  ಆಫ್ಘಾನಿಸ್ಥಾನದ ದುರ್ರಾನಿ ಸಾಮ್ರಾಜ್ಯದ ವಶವಾಗಿಬಿಡುತ್ತದೆ. 1819ರಲ್ಲಿ ಪಂಜಾಬ್‌ನ ರಾಜ ರಂಜಿತ್‌ ಸಿಂಗ್‌ನ ಸೇನೆ ಕಾಶ್ಮೀರ ಕಣಿವೆಯನ್ನು ಆಫ್ಘನ್ನರ ಹಿಡಿತದಿಂದ ಬಿಡಿಸಿ ತನ್ನದನ್ನಾಗಿ ಮಾಡಿಕೊಳ್ಳುತ್ತದೆ. ಆಗ ಪಂಜಾಬಿನ ಸಿಖ್ಖರ ರಾಜಧಾನಿ ಲಾಹೋರ್‌ ಆಗಿದ್ದು ಆಡಳಿತ ಕೇಂದ್ರಕ್ಕೆ ಕಾಶ್ಮೀರ ಕಣಿವೆ ಬಹಳ ದೂರ ಎನ್ನುವಂತಿರುತ್ತದೆ. ನಾಲ್ಕು ಶತಮಾನಗಳ ಮುಸ್ಲಿಮ್‌ ಆಳ್ವಿಕೆಯ ನಂತರ  ಸಿಖ್‌ ಆಳ್ವಿಕೆಯಲ್ಲಿ ಮುಸ್ಲಿಮರನ್ನು ಹತ್ತಿಕ್ಕಲಾಗುತ್ತದೆ. ಕಾಶ್ಮೀರ ಕಣಿವೆ ಈ ಹಂತದಲ್ಲಿ ಬ್ರಿಟಿಷರೂ ಸೇರಿದಂತೆ ಯೂರೋಪಿನ ಪ್ರವಾಸಿಗರನ್ನು ಆಕರ್ಷಿಸತೊಡಗುತ್ತದೆ.

    ಸಿಖ್‌ ಆಡಳಿತಗಾರರ ಅತಿಯಾದ ತೆರಿಗೆಯ ಹೊರೆಯಿಂದಾಗಿ ನಿರ್ಗತಿಕರಾಗಿಬಿಟ್ಟ ಕಾಶ್ಮೀರಿ ರೈತರು ಕ್ರಮೇಣ ಪಂಜಾಬಿನ ನದಿ ಬಯಲು ಪ್ರದೇಶಗಳಿಗೆ ವಲಸೆ ಬರತೊಡಗುತ್ತಾರೆ. 1832ರ ಕ್ಷಾಮದ ಬಳಿಕ ಸಿಖ್‌ ದೊರೆಗಳು ತೆರಿಗೆ ಪ್ರಮಾಣವನ್ನು ಅರ್ಧಕ್ಕೆ ಇಳಿಸುತ್ತಾರೆ ಜೊತೆಗೆ ಬಡ್ಡಿಯಿಲ್ಲದ ಸಾಲಗಳನ್ನೂ ರೈತರಿಗೆ ಕೊಡತೊಡಗುತ್ತಾರೆ. ಹೀಗಾಗಿ ಸಿಖ್‌ ಸಾಮ್ರಾಜ್ಯದ ಅರ್ಧ ವರಮಾನವನ್ನು ಕಾಶ್ಮೀರವೇ ಸೃಷ್ಟಿಸಿಕೊಡತೊಡಗುತ್ತದೆ. ಈ ಅವಧಿಯಲ್ಲಿ ಕಾಶ್ಮೀರಿ ಉಣ್ಣೆಯ ಶಾಲುಗಳು ಜಗತ್‌ ಪ್ರಸಿದ್ದಿ ಪಡೆಯುತ್ತವೆ. ಕಾಶ್ಮೀರದ ಜೊತೆಗೆ ಜಮ್ಮು ರಾಜ್ಯವೂ 1808ರಲ್ಲಿ ಅಂತಿಮವಾಗಿ ಮಹಾರಾಜ ರಂಜಿತ್‌ ಸಿಂಗ್‌ ವಶವಾಗುತ್ತದೆ. ಜಮ್ಮು ಅರಮನೆಯ ಸೇನೆಯಲ್ಲಿ ಯೋಧನಾಗಿದ್ದ ಗುಲಾಬ್‌ ಸಿಂಗ್‌ ತನ್ನ ಶೌರ್ಯ ಸಾಹಸಗಳ ಕಾರಣಕ್ಕೆ ಹೆಸರು ಮಾಡುತ್ತ ಕಡೆಗೆ ತಾನೇ ಜಮ್ಮುವಿನ ರಾಜ ಎಂದೂ 1822ರಲ್ಲಿ ಘೋಷಿಸಿಕೊಳ್ಳುತ್ತಾನೆ. ಕ್ರಮೇಣ ಕಾಶ್ಮೀರ ಕಣಿವೆಯನ್ನು ಸುತ್ತುವರೆದ ಲಡಾಖ್‌ ಸೇರಿದಂತೆ ಎಲ್ಲ ಪ್ರದೇಶಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡು ಸಿಖ್‌ ಸಾಮ್ರಾಜ್ಯದ ಆಸ್ತಾನದಲ್ಲಿ ಅತ್ಯಂತ ಸಿರಿವಂತ ಮತ್ತು ಪ್ರಭಾವಿ ಎನಿಸಿಕೊಳ್ಳುತ್ತಾನೆ.

    ಮಹಾರಾಜ ರಂಜಿತ್‌ ಸಿಂಗ್‌ ಅಳಿದ ನಂತರ 1845-46ರಲ್ಲಿ ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪನಿ ಸಿಖ್‌ ರಾಜರ ವಿರುದ್ದ ಯುದ್ದಕ್ಕೆ ಇಳಿಯುತ್ತಾರೆ. ಸಿಖ್ಖರ ಸೇನೆ ಅರೆ ಬರೆ ಸೋತು ಗುಲಾಬ್‌ ಸಿಂಗ್‌ ರಾಜಿ ಮಾಡಿಕೊಳ್ಳುತ್ತಾನೆ. ಆಗ ನಡೆದ ಎರಡು ರಾಜೀ ಕಬೂಲಿಗಳನ್ನು ಅಮೃತಸರ್‌ ಒಪ್ಪಂದ ಎಂದು ಕರೆಯಲಾಗುತ್ತದೆ. ಆ ಪ್ರಕಾರ ಪಶ್ಚಿಮ  ಪಂಜಾಬಿನ ಫಲವತ್ತಾದ ಬಯಲು ಪ್ರದೇಶವಿದ್ದ ಲಾಹೋರ್‌ ರಾಜ್ಯವನ್ನು ಒಂದುಕೋಟಿ ರೂಪಾಯಿಗಳ ಲೆಕ್ಕಕ್ಕೆ ಬ್ರಿಟಿಷರಿಗೆ ಹಸ್ತಾಂತರ ಮಾಡಲಾಗುತ್ತದೆ. ಪರ್ವತ ಶ್ರೇಣಿ, ಗುಡ್ಡಗಾಡು ಪ್ರದೇಶಗಳೇ ಇದ್ದ ಜಮ್ಮು ಮತ್ತು ಕಾಶ್ಮೀರ 75 ಲಕ್ಷ ರೂಪಾಯಿಗಳ ಲೆಕ್ಕದಲ್ಲಿ ಗುಲಾಬ್‌ ಸಿಂಗ್‌ ಪಾಲಿಗೆ ದಕ್ಕುತ್ತದೆ. ಗುಲಾಬ್‌ ಸಿಂಗ್‌ ಬ್ರಿಟಿಷರ ಸೆರೆಯಿಂದ ಬಿಡುಗಡೆ ಹೊಂದಿ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಆಗಿಬಿಡುತ್ತಾನೆ. ಈ ರಾಜ್ಯವನ್ನು ತಾನು ಖರೀದಿಸಿದ್ದು ಎಂದು ಹೆಮ್ಮೆ ಪಡತೊಡಗುತ್ತಾನೆ. ಹೀಗಾಗಿ 1857ರ ಸಿಪಾಯಿ ಕ್ರಾಂತಿಯಲ್ಲಿ ಈತ ತನ್ನ ಸೇನೆಯನ್ನು ಬ್ರಿಟಿಷರ ಪರ ಹೋರಾಡಲು ಕಳಿಸುತ್ತಾನೆ. ಕ್ರಾಂತಿಕಾರಿಗಳಿಗೆ ನೆಲೆ ಕೊಡಲು ನಿರಾಕರಿಸುತ್ತಾನೆ ಜೊತೆಗೆ ಬ್ರಿಟಿಷರ ಕುಟುಂಬಗಳಿಗೆ ಕಾಶ್ಮೀರದಲ್ಲಿ ಸುರಕ್ಷಿತ ನೆಲೆ ಕಲ್ಪಿಸಿಕೊಡುತ್ತಾನೆ. ಅದೇ ವರ್ಷ ಗುಲಾಬ್‌ ಸಿಂಗ್‌ ಮರಣಾನಂತರ ಆತನ ಮಗ ರಣಬೀರ್‌ ಸಿಂಗ್‌ ಹುಂಜಾ, ಗಿಲ್ಗಿಟ್‌ ಹಾಗೂ ನಗರಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುತ್ತಾನೆ. ಹೀಗೆ 1828ರಿಂದ 1858ರ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ರೂಪುಗೊಳ್ಳುತ್ತದೆ.

   ಈ ರಣಬೀರ್‌ ಸಿಂಗನ ಮೊಮ್ಮಗ ಮಹಾರಾಜ ಹರಿಸಿಂಗ್‌ 1925ರಲ್ಲಿ ಪಟ್ಟಕ್ಕೆ ಬರುತ್ತಾನೆ ಹಾಗೂ ಬ್ರಿಟಿಷರ ಆಡಳಿತ ಅಂತ್ಯಗೊಂಡ 1947ರವರೆಗೂ ಆತನೇ ಜಮ್ಮು ಮತ್ತು ಕಾಶ್ಮೀರವನ್ನು ಆಳುತ್ತಾ ಇರುತ್ತಾನೆ. ಸ್ವಾತಂತ್ರ್ಯವು ನೇರಾ ನೇರ ದಕ್ಕದೇ ಬ್ರಿಟಿಷ್‌ ಆಳ್ವಿಕೆಯ ಇಂಡಿಯಾ ವಿಭಜನೆಗೊಳ್ಳುತ್ತದೆ. ಈ ಉಪಖಂಡದ ಬಹುಪಾಲು ರಾಜರು ಸ್ವತಂತ್ರ ಇಂಡಿಯಾ ಜೊತೆಗೆ ಸೇರಲು ಒಪ್ಪಿ ಸಹಿ ಹಾಕುತ್ತಾರೆ. ಜಮ್ಮು ಮತ್ತು ಕಾಶ್ಮೀರದ ರಾಜ ಹರಿಸಿಂಗ್‌ ಇಂಡಿಯಾ ಜೊತೆ ಸೇರಲು ಒಪ್ಪುವುದಿಲ್ಲ , ಅದೇ ಸಮಯಕ್ಕೆ ಆತನ ಅತಿಯಾದ ತೆರಿಗೆಯಿಂದ ನೊಂದ ಜನರು ಪೂಂಚ್‌ ಪ್ರದೇಶದಲ್ಲಿ ಪ್ರತಿಭಟನೆ ಆರಂಭಿಸುತ್ತಾರೆ. ಜನರ ಹೋರಾಟವನ್ನು ದಂಗೆ ಎಂದು ಪರಿಗಣಿಸುವ ರಾಜ ಅವರನ್ನು ಹತ್ತಿಕ್ಕಲು ಸೇನೆ ರವಾನಿಸುತ್ತಾನೆ. ಸೇನೆ ಜನರನ್ನು ಕೊಂದು ಹಳ್ಳಿಗಳನ್ನು ಸುಟ್ಟು ಹಾಕುತ್ತದೆ. ಬಂಡುಕೋರರು ಪೂಂಚ್‌ ಪ್ರದೇಶವನ್ನು ಅಕ್ಟೋಬರ್‌ 24ರಂದು "ಸ್ವತಂತ್ರ ಕಾಶ್ಮೀರ” ಅಂತ ಘೋಷಿಸಿಕೊಂಡು ಬಿಡುತ್ತಾರೆ. ಈ ಜನರು ಕಾಶ್ಮೀರ ಪಾಕಿಸ್ತಾನದ ಜೊತೆ ಸೇರಬೇಕು ಎಂದು ಬಯಸಿದ್ದರು ಎನ್ನಲಾಗಿದೆ. 77% ಮುಸ್ಮಿಮರು ಹಾಗೂ 20% ಹಿಂದೂಗಳಿದ್ದ ರಾಜ್ಯವನ್ನು ಇಂಡಿಯಾ ಜೊತೆಗೆ ಸೇರಿಸಬೇಕೇ ಬೇಡವೇ ಎಂಬ ಸ್ಪಷ್ಟ ನಿರ್ಧಾರಕ್ಕೆ ಬರಲಾಗದೇ ಹರಿಸಿಂಗ್‌ ಪಾಕಿಸ್ತಾನದ ಜೊತೆ ವ್ಯಾಪಾರ, ಪ್ರಯಾಣ ಮೊದಲಾದ ಸೇವೆಗಳಿಗಾಗಿ ಒಂದು ಒಪ್ಪಂದಕ್ಕೆ ಬರುತ್ತಾನೆ. ಇಂಡಿಯಾ ಜೊತೆ ಅಂತ ಒಪ್ಪಂದ ಮಾಡಿಕೊಳ್ಳುವ ಮೊದಲೇ ಪೂಂಚ್‌ ಬಂಡುಕೋರರಿಂದ ಪ್ರೇರಿತರಾದ ಪಶ್ಚೂನ್‌ ಬುಡಕಟ್ಟು ಜನರು ಜಮ್ಮುವಿನಲ್ಲಿ ದಂಗೆ ಏಳುತ್ತಾರೆ. ಬಂಡುಕೋರರು ಕಾಶ್ಮೀರವನ್ನೂ ಆಕ್ರಮಿಸಿಕೊಳ್ಳುತ್ತಾರೆ. ಆಗ ಹರಿಸಿಂಗ್‌ ಇಂಡಿಯಾ ನೆರವು ಕೋರುತ್ತಾನೆ. ಸನ್ನಿವೇಶದ ಅವಕಾಶ ಬಳಸಿಕೊಂಡ ಗವರ್ನರ್‌ ಜನರಲ್‌ ಮೌಂಟ್‌ ಬ್ಯಾಟನ್‌ ಮೊದಲು ಇಂಡಿಯಾ ಜೊತೆ ಸೇರುವುದಾಗಿ ಬರೆದು ಕೊಡು ಎಂಬ ಒತ್ತಡ ಹಾಗಿ ಹರಿಸಿಂಗ್‌ ಸಹಿ ಹಾಕಿಸುತ್ತಾನೆ ನಂತರ ಸೇನೆ ಬರುತ್ತದೆ.  ಭಾರತದ ಯೋಧರು ಬಂಡುಕೋರರನ್ನು ಹಿಮ್ಮೆಟ್ಟಿಸುತ್ತಾರಾದರೂ ಒಂದು ಭಾಗ ಅವರ ಕೈಯಲ್ಲೇ ಉಳಿದು ಬಿಡುತ್ತದೆ. ಕಾಶ್ಮೀರದ ಆ ಭಾಗವನ್ನೇ ಇವತ್ತು ಪಾಕ್‌ ಆಕ್ರಮಿತ ಕಾಶ್ಮೀರ ಎಂದು ಅವರು ಕರದುಕೊಳ್ಳುತ್ತಾರೆ. ಕಾಶ್ಮೀರಿ ಜನರ ಅಂದಿನ ಜನಪ್ರಿಯ ನಾಯಕ ಶೇಕ್‌ ಅಬ್ದುಲ್ಲಾ ಜಮ್ಮು ಮತ್ತುಕಾಶ್ಮೀರದ ಜನತೆ ಅಂತಿಮ ತೀರ್ಮಾನ ಕೈಗೊಳ್ಳಲಿ ಎನ್ನುತ್ತಾನೆ.

   ಕಾಶ್ಮೀರ ಭಾರತ ಅಥವಾ ಪಾಕ್‌ ಯಾರ ಜೊತೆ ಹೋದರೂ ಇಲ್ಲಿ ಶಾಂತಿ ನೆಲೆಸುವುದಿಲ್ಲ. ನಾವು ಇಬ್ಬರಿಂದಲೂ ಸಮಾನ ಅಂತರ ಕಾಯ್ದು ಸ್ವತಂತ್ರವಾಗೇ ಉಳಿದರೆ ನಮಗೆ ಅಮೆರಿಕಾ ಸಾಕಷ್ಟು ನೆರವು ನೀಡುತ್ತದೆ, ಕಾಶ್ಮೀರ ಏಶ್ಯಾದ ಸ್ವಿಟ್ಸರ್‌ ಲ್ಯಾಂಡ್‌ ಆಗಬೇಕು ಎಂಬುದು ಶೇಕ್‌ ಅಬ್ದುಲ್ಲಾ ಕನಸಾಗಿತ್ತು,  ಕಮ್ಯುನಿಸ್ಟರೂ ಶೇಕ್‌ ಅಬ್ದುಲ್ಲಾ ಹೋರಾಟಕ್ಕೆ ಬೆಂಬಲ ನೀಡಿದ್ದರು. ಸೋವಿಯತ್‌ ರಶ್ಯಾ ನಾಯಕ ಸ್ಟಾಲಿನ್‌ ಕೂಡಾ ಕಾಶ್ಮೀರದ ಈ ಹೋರಾಟಕ್ಕೆ ಬೆಂಬಲ ನೀಡಿತ್ತೆನ್ನಲಾಗಿದೆ. ಆದರೆ ಹಾಗಾಗಲೇ ಇಲ್ಲ.

   ಮಹಾರಾಜ ಹರಿಸಿಂಗ್‌ ತನ್ನೊಂದಿಗೆ ಮಾಡಿಕೊಂಡಿರುವ ವ್ಯಾಪಾರ, ಪ್ರಯಾಣ ಒಪ್ಪಂದ ಜಾರಿಯಲ್ಲಿರುವಾಗಲೇ ಆತ ಇಂಡಿಯಾ ಜೊತೆ ಸೇರುವ ಒಪ್ಪಂದಕ್ಕೆ ಸಹಿ ಹಾಕಲು ಆತನಿಗೆ ಅಧಿಕಾರವಿಲ್ಲ, ಇದು ಮೋಸ ಎಂದು ಪಾಕಿಸ್ಥಾನ ಹೇಳುತ್ತದೆ. ಇದನ್ನೇ ಕಾಶ್ಮೀರ ಬಿಕ್ಕಟ್ಟು ಎಂದು ಕರೆಯುತ್ತ ಬರಲಾಗಿದೆ.

    ಆನಂತರದ ವರ್ಷಗಳಲ್ಲಿ ವಿಶ್ವ ಸಂಸ್ಥೆ ಮಧ್ಯಸ್ಥಿಕೆಯಲ್ಲಿ ಕಾಶ್ಮೀರ ಬಿಕ್ಕಟ್ಟನ್ನು ಬಗೆಹರಿಸುವ ಎಲ್ಲ ಪ್ರಯತ್ನಗಳು ಆಜಾದ್‌ ಕಾಶ್ಮೀರ ಅಥವಾ ಪಾಕ್‌ ಆಕ್ರಮಿಕ ಪ್ರದೇಶದಿಂದ ಪಾಕ್‌ ಸೇನೆಯನ್ನು ಹಿಂತೆಗೆದುಕೊಳ್ಳದ ಕಾರಣ ವಿಫಲಗೊಂಡಿವೆ. 1949ರಲ್ಲಿ ರಾಜ ಹರಿಸಿಂಗ್‌ ಮಗ ಕರಣ್‌ ಸಿಂಗ್‌ರನ್ನು ರೀಜೆಂಟ್‌ ಎಂದು ನಾಮ ನಿರ್ದೇಶನ ಮಾಡಿ ಅಮೆರಿಕಕ್ಕೆ ಹೋಗುತ್ತಾನೆ. ಶೇಕ್‌ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಯಾಗುತ್ತಾನೆ. ಆನಂತರ ಈ ಹುದ್ದೆಯನ್ನು ಮುಖ್ಯಮಂತ್ರಿ ಎಂದು ಮರುನಾಮಕರಣ ಮಾಡಲಾಗುತ್ತದೆ. ಜನವರಿ 26, 1950ರಲ್ಲಿ ಸಂವಿಧಾನವನ್ನು ಒಪ್ಪಿಕೊಂಡಾಗ, 370ನೇ ಆರ್ಟಿಕಲ್‌ ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ತಾತ್ಕಾಲಿಕವಾಗಿ ನೀಡುತ್ತದೆ. ಈ ನಡುವೆ ಪಾಕಿಸ್ಥಾನ  1965, 1971 ಹಾಗೂ 1999ರಲ್ಲಿ ಇಂಡಿಯಾ ಮೇಲೆ ಯುದ್ದವನ್ನೂ ಮಾಡಿದೆ. ಗುಲಾಬ್‌ ಸಿಂಗ್‌ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅರ್ಧದಷ್ಟು ಭಾಗವನ್ನು ಇಂಡಿಯಾ ಕಳೆದುಕೊಂಡಿದೆ. ಪಾಕ್‌ ಆ ಪ್ರದೇಶದ ಮೂರನೇ ಒಂದು ಭಾಗವನ್ನು ಗಿಲ್ಗಿಟ್‌ – ಬಾಲ್ಟಿಸ್ತಾನ್‌ ಮತ್ತು ಆಜಾದ್‌ ಕಾಶ್ಮೀರ್‌ ಎಂಬ ಹೆಸರಿನಲ್ಲಿ ಕೈಗೊಂಬೆ ಆಡಳಿತಗಾರರನ್ನು ಇಟ್ಟು ಕೊಂಡು ನಿಯಂತ್ರಿಸುತ್ತಿದೆ.

    ಪಾಕಿಸ್ಥಾನದಲ್ಲಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಕುಸಿದು ಸೇನಾ ಮುಖ್ಯಸ್ಥರೇ ಪದೇ ಪದೇ ಆಡಳಿತ ಚುಕ್ಕಾಣಿ ಹಿಡಿಯುತ್ತ ಬಂದ ಕಾರಣವಾಗಿ, ಆ ದೇಶ ಅಲ್ಲಿನ ಬಡತನ, ನಿರುದ್ಯೋಗ, ಆರ್ಥಿಕ ದುಸ್ಥಿತಿಗಳಿಂದ ತನ್ನ ಪ್ರಜೆಗಳ ಗಮನವನ್ನು ಭಾವನಾತ್ಮಕವಾಗಿ ಕಾಶ್ಮೀರದ ಕಡೆ ತಿರುಗಿಸುತ್ತ ನುಸುಳುಕೋರರನ್ನು ಇಂಡಿಯಾ ಗಡಿಯೊಳಕ್ಕೆ ನುಗ್ಗಿಸುತ್ತ, ಉಗ್ರರಿಗೆ ಶಸ್ತ್ರಗಳನ್ನು ಮದ್ದು ಗುಂಡು ಹಾಗೂ ಹಣಕಾಸಿನ ನೆರವು ಮತ್ತು ತರಬೇತಿ ನೀಡುತ್ತ 1980ರ ನಂತರ ಭಯೋತ್ಪಾದಕರನ್ನು ಸೃಷ್ಟಿಸತೊಡಗಿತು.

   1986ರಲ್ಲಿ ಅಂದಿನ ಮುಖ್ಯಮಂತ್ರಿ ಗುಲ್‌ ಶಾ ಜಮ್ಮುವಿನಲ್ಲಿ ದೇವಾಲಯವೊಂದರ ಜಾಗದಲ್ಲಿ ಮಸೀದಿಕಟ್ಟಲು ಆದೇಶ ಕೊಟ್ಟಿದ್ದೇ ಕಾರಣವಾಗಿ ಅನಂತನಾಗ್‌ನಲ್ಲಿ ದಂಗೆ ಗಲಭೆ ಉಂಟಾಯಿತು. ಬಾಬರಿ ಮಸೀದಿಯಲ್ಲಿ ರಾಮಲಲ್ಲಾ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೊಟ್ಟ ಕಾರಣವೂ ಈ ದಂಗೆಗೆ ನೆಪವಾಗಿತ್ತು. 1987ರ ವಿಧಾನ ಸಭಾ ಚುನಾವಣೆಯಲ್ಲಿ ವ್ಯಾಪಕ ರಿಗ್ಗಿಂಗ್‌ ನಡೆದು ಪ್ರಜಾಸತ್ತಾತ್ಮಕ ವ್ಯವಸ್ಥೆ ಕುಸಿದು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್‌ ಫ್ರಂಟ್‌ ಸಕ್ರಿಯಗೊಂಡಿತು. ಈ ದುರ್ಬಲ ದಿನಗಳನ್ನು ಬಳಸಿಕೊಂಡು ಆಫ್ಘಾನಿಸ್ಥಾನದ ಮುಜಾಹಿದ್ದೀನ್‌ಗಳು ದೇಶದೊಳಕ್ಕೆ ನುಸುಳಿ ಸಾವು ನೋವು ಸಂಭವಿಸಿತು. 1990ರಲ್ಲಿ ಕಾಶ್ಮೀರದಲ್ಲಿದ್ದ ಪಂಡಿತರನ್ನು ಜೀವ ಬೆದರಿಕೆ ಹಾಕಿ ರಾತ್ರೋರಾತ್ರಿ ಹೊರಗಟ್ಟಲಾಯಿತು. ಈ ಪಂಡಿತರು 35 ವರ್ಷಗಳಿಂದ ವಾಪಸ್‌ ಊರಿನ ತಮ್ಮ ದೊಡ್ಡ ಮನೆಗಳ, ಸೇಬಿನ ತೋಟಗಳ, ಬಾದಾಮಿ ಮರಗಳ , ಕೇಸರಿ ಹೊಲಗಳ, ಬತ್ತದ ಗದ್ದೆಗಳ ಕನಸು ಕಾಣುತ್ತಾ ಜಮ್ಮು ಹೊರವಲಯದ ನಿರಾಶ್ರಿತ ಶಿಬಿರಗಳಲ್ಲೇ ನರಳುತ್ತಿದ್ದಾರೆ. ಅವರ ಹೊಲ ಗದ್ದೆಗಳನ್ನು ಸ್ಥಳೀಯರೇ ಉತ್ತುಕೊಂಡಿದ್ದಾರಾದರೂ ಪಂಡಿತರ ಮನೆಗಳತ್ತ ಮಾತ್ರ ಹೊರಳಿಯೂ ನೋಡುವುದಿಲ್ಲ. ದಶಕಗಟ್ಟಲೇ ಹೊಗೆಯಾಡದ ಮನೆಗಳು ಗೆದ್ದಲು ಹತ್ತಿ ಮಣ್ಣಾಗದೇ ಇನ್ನೇನಾಗುತ್ತವೆ.

“ಕಾಶ್ಮೀರಿಗಳಿಗೇ ಕಾಶ್ಮೀರ”- ಕರಗಿಹೋದ ಕನಸು

    ಸಂವಿಧಾನದ ಆರ್ಟಿಕಲ್‌ -370ರಲ್ಲಿ  ನೀಡಿದ ವಿಶೇಷ ಸ್ಥಾನಮಾನದಿಂದಾಗಿ ಜಮ್ಮು ಮತ್ತು ಕಾಶ್ಮೀರ 1951ರಲ್ಲಿ ಭಾರತದ ಸಂವಿಧಾನದ ತತ್ವಗಳನ್ನೇ ಒಳಗೊಂಡ ತನ್ನದೇ ಆದ ಸಂವಿಧಾನವನ್ನು ಸೃಜಿಸಿಕೊಂಡಿತು ಹಾಗೂ 17.11.1956ರಂದು ಅಳವಡಿಸಿಕೊಂಡಿತು.26.01.1957ರಿಂದ ಜಾರಿಗೆ ಬಂದಿತು.  ಜಮ್ಮು ಮತ್ತುಕಾಶ್ಮೀರಕ್ಕೆ ಸಂವಿಧಾನದ 35-ಎನಲ್ಲಿ ಪ್ರದತ್ತವಾದ ಅವಕಾಶಗಳ ಪ್ರಕಾರ ಆ ರಾಜ್ಯದ ಭೂಮಿಯನ್ನು ಅಲ್ಲಿ ತಲೆತಲಾಂತರದಿಂದ ನೆಲೆಸಿರುವವರ ಹೊರತು ಇತರ ಯಾವ ಅನ್ಯರೂ ಹೊಂದುವಂತಿರಲಿಲ್ಲ . ಈ ಅವಕಾಶದ ಪ್ರಕಾರ 14 ಮೇ 1954ರ  ಮುಂಚೆ ನಿರಂತರ 10 ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸವಿದ್ದ ಹಾಗೂ ಆ ದಿನಕ್ಕೆ 18 ವರ್ಷ ತುಂಬಿರುವ ಎಲ್ಲರೂ ಆ ರಾಜ್ಯದ ಶಾಶ್ವತ ನಿವಾಸಿಗಳು ಎಂದು ಪರಿಗಣಿಸಿ ಅವರೆಲ್ಲರಿಗೂ ಅಲ್ಲಿ ಆಸ್ತಿ ಹೊಂದುವ ಹಕ್ಕು ನೀಡಲಾಯಿತು. ಆದರೆ ಒಂದು ವೇಳೆ ಅಲ್ಲಿನ ಮಹಿಳೆ ಹೊರ ರಾಜ್ಯದ ಯಾರನ್ನಾದರೂ ಮದುವೆಯಾಗಿ ಹೋದಲ್ಲಿ ಆಕೆ ಆ ರಾಜ್ಯದಲ್ಲಿನ ಶಾಶ್ವತ ನಿವಾಸಿ ಎಂಬ ಹಕ್ಕನ್ನುಕಳೆದುಕೊಳ್ಳುತ್ತಿದ್ದಳು.

    ಇಂಥ ಒಂದು ಕಾನೂನು ಅಲ್ಲಿ ಅಸ್ತಿತ್ವಕ್ಕೆ ಬರಲೂ ಒಂದು ಇತಿಹಾಸವಿದೆ. ಜಮ್ಮು ಮತ್ತು ಕಾಶ್ಮೀರದ ಮಹಾರಾಜ 1912, 1932 ಹಾಗೂ 1927ರಲ್ಲಿ ಜಾರಿಗೆ ತಂದ ಕಾನೂನುಗಳ ಪ್ರಕಾರ ಆ ರಾಜ್ಯದಲ್ಲಿ ತಲೆ ತಲೆಮಾರುಗಳಿಂದ ವಾಸಿಸುತ್ತ ಬಂದವರಿಗೆ ಮಾತ್ರವೇ  ಭೂ ಬಳಕೆ, ಭೂ ಮಾಲಿಕತ್ವ ಹಾಗೂ ಸರ್ಕಾರಿ ನೌಕರಿ ಪಡೆಯಲು ಅವಕಾಶವಿತ್ತು. ಇತರರು ಖರೀದಿ ಮಾತಿರಲಿ ಗುತ್ತಿಗೆ ಹಾಕಿಸಿಕೊಳ್ಳಲೂ ಅವಕಾಶವಿರಲಿಲ್ಲ ಹಾಗೂ ಭೂ ಸುಧಾರಣೆಯ ಕಾರಣವಾಗಿ ಉಳುವವನೇ ಹೊಲದೊಡೆಯ ಕಾನೂನು ಸಹಾ ಜಾರಿಯಲ್ಲಿತ್ತು. ಜೊತೆಗೆ ರಾಜ್ಯದ ಕೃಷಿ ಉತ್ಪತ್ತಿಯನ್ನು ಹೆಚ್ಚು ಮಾಡುವ ಸಲುವಾಗಿ ಯಾರು ಬೇಕಾದರೂ ಸರ್ಕಾರಿ ಭೂಮಿಯನ್ನು ಉತ್ತು ಬೆಳೆ ಬೆಳೆಯಬಹುದಾಗಿತ್ತು, ಜೊತೆಗೆ ಮನೆಗಳನ್ನೂ ಕಟ್ಟಿಕೊಳ್ಳಬಹುದಾಗಿತ್ತು. ಸಿಖ್‌ ದೊರೆಗಳ ಆಡಳಿತದಲ್ಲೂ ರಾಜ ಒಡೆತನದ ಭೂಮಿ ಖಾಲ್ಸಾ ಅನ್ನು ಯಾರು ಬೇಕಾದರೂ ಉಳಬಹುದಿತ್ತು. ಜನರು ಇದೇ ರೀತಿ ರಿವಾಜುಗಳಲ್ಲೇ ಮನೆ ಕಟ್ಟಿಕೊಂಡು, ಉಳುಮೆ ಮಾಡಿಕೊಂಡು ಬಂದಿದ್ದರು.

     ಹೊರ ರಾಜ್ಯಗಳಿಂದ ಬಂದು ನೆಲೆಸಿದವರಿಗೆ ಈ ಅವಕಾಶವಿರಲಿಲ್ಲ. ಅಲ್ಲದೇ ಅಲ್ಲಿನ ಪಂಡಿತ ಸಮುದಾಯ ಕೂಡಾ 1947ಕ್ಕೆ ಮೊದಲು “ಕಾಶ್ಮೀರ ಕಾಶ್ಮೀರಿಗಳಿಗೇ” ಎಂಬ ಚಳವಳಿಯನ್ನೂ ನಡೆಸಿತ್ತು. ಹೀಗೆ ತಲೆಮಾರುಗಳಿಂದ ಅಲ್ಲೇ ಇದ್ದವರನ್ನುಮಾತ್ರವೇ ಶಾಶ್ವತ ನಿವಾಸಿಗಳು ಎಂದು ಪರಿಗಣಿಸಲಾಯಿತು.  ಈ ಕುರಿತು ಅಂದಿನ ಪ್ರಧಾನಿ ನೆಹರೂ ಕೂಡಾ ಪಾರ್ಲಿಮೆಂಟಿನಲ್ಲಿ ಹೇಳಿಕೆ ನೀಡಿ, ಹಿಂದೆ ಇದ್ದ ರಾಜ ತನ್ನ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಇಂಗ್ಲಿಷರು ಅಲ್ಲೇ ನೆಲೆಸಿಬಿಟ್ಟರೆ ಎಂಬ ಆತಂಕದಿಂದ ಇಂತ ಕಾನೂನು ಮಾಡಿದ್ದ ಅಂತ ಕಾಣುತ್ತದೆ. ಇರಲಿ ಆ ರಾಜ್ಯದ ನಾಗರಿಕರು ಯಾರು ಎಂಬುದನ್ನು ಆ ರಾಜ್ಯವೇ ನಿರ್ಧರಿಸಿಕೊಳ್ಳಲಿ ಎಂದಿದ್ದರು.

    ಆದರೆ ಬಿಜೆಪಿ ಸರ್ಕಾರ 5.08.2019ರಂದು ಆರ್ಟಿಕಲ್‌ 370 ಹಾಗೂ 35ಎ ಅನ್ನು ರದ್ದು ಪಡಿಸಿದ ಕ್ಷಣದಿಂದ 2020ರ ಮಾರ್ಚಿ 31ರವರೆಗೆ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು ಹಾಗೂ ಮಾ.31ರಂದು ಗೃಹ ಸಚಿವ ಅಮಿತ್‌ ಶಾ ಪಾರ್ಲಿಮೆಂಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಮರುರಚನೆ ಆದೇಶ-2020 ಮಂಡಿಸಿ ಅನುಮೋದನೆ ಪಡೆದರು. ಆಗ ಅಲ್ಲಿವರೆಗೆ ಅಸ್ತಿತ್ವದಲ್ಲಿದ್ದ ಹಾಗೂ ಜಾರಿಯಲ್ಲಿದ್ದ 109 ತಿದ್ದುಪಡಿಗಳ ಸಹಿತ 29 ರಾಜ್ಯ ಕಾನೂನುಗಳೆಲ್ಲ ನಿರಸನಗೊಂಡವು. ಅಂದಿನಿಂದ, ಜಮ್ಮು ಮತ್ತು ಕಾಶ್ಮೀರದಲ್ಲಿ 15 ವರ್ಷಗಳ ಕಾಲ ವಾಸವಿರುವ ಅಥವಾ 10/12ನೇ ತರಗತಿ ಸೇರಿದಂತೆ ಏಳು ವರ್ಷ ಕಾಲ ವ್ಯಾಸಂಗ ಮಾಡಿರುವ ಮತ್ತು 10 ವರ್ಷ ಆ ರಾಜ್ಯದಲ್ಲಿ ಸೇವೆ ಸಲ್ಲಿಸಿರುವ ಕೇಂದ್ರ ಸರಕಾರಿ ನೌಕರರು ಹಾಗೂ ಅವರ  ಮಕ್ಕಳೂ ಸಹ ನಿವಾಸಿ ಎಂಬ ಸ್ಥಾನ ಪಡೆಯುತ್ತಾರೆ.  ವಲಸೆ ಆಯುಕ್ತರಲ್ಲಿ ನೊಂದಣಿ ಮಾಡಿಸಿರುವ ವಲಸಿಗನೂ ಈ ನಿವಾಸಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಬಹುದು ಎಂದಾಯಿತು.

     ಈ ಮೇಲಿನ ಷರತ್ತುಗಳನ್ನು ಪೂರೈಸುವ ಯಾರಿಗೇ ಆದರೂ ಆ ಪ್ರದೇಶದಲ್ಲಿನ ಸರ್ಕಾರಿ ನೌಕರಿಗಳಲ್ಲಿ 3 ಮತ್ತು 4ನೇ ದರ್ಜೆಯ ನೌಕರಿಗಳನ್ನು ಮೀಸಲಿಡಬೇಕು ಎಂದು ಆದೇಶಿಸಲಾಗಿತ್ತು. ಆದರೆ ಜನರ ಪ್ರತಿಭಟನೆಯಿಂದಾಗಿ ಮತ್ತೆ ಏಪ್ರಿಲ್‌ 3ರಂದು ತಿದ್ದುಪಡಿ ಮಾಡಿ ಉನ್ನತ ವೃಂದ ಸೇರಿ ಎಲ್ಲ ಆ ಕೇಂದ್ರಾಡಳಿತ ಪ್ರದೇಶದ ಸರಕಾರಿ ಹುದ್ದೆಗಳನ್ನು ಈ ನಿವಾಸಿಗಳಿಗೆ ಮೀಸಲಿಡಲಾಗಿದೆ. ಎಲ್ಲೆಡೆ ಆಡಳಿತ ಸುಧಾರಣೆ ಹೆಸರಲ್ಲಿ ಖಾಸಗೀಕರಣಗೊಳ್ಳುತ್ತಿರುವ ಈ ಕಾಲದಲ್ಲಿ ಸರ್ಕಾರಿ ಕೆಲಸಗಳು ಎಷ್ಟರ ಮಟ್ಟಿಗೆ ದೊರಕಬಲ್ಲವು.

    ಆದರೆ ಈಗ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಸರಕಾರದ್ದೇ ಆದ ಕೈಗಾರಿಕಾ ಅಭಿವೃದ್ಧಿ ನಿಗಮ (ಸಿಡ್‌ಕೊ) ಸಕ್ರಿಯಗೊಂಡಿದೆ. ಎಲ್ಲ ಸರ್ಕಾರಿ ಭೂಮಿಯನ್ನು ತನ್ನದೆಂದು ದಾಖಲಿಸುವ ಜೊತೆಗೆ ಅಲ್ಲಿ ತಲೆ ತಲಾಂತರದಿಂದ ಕೃಷಿ ಮಾಡುತ್ತಿದ್ದ ಹಾಗೂ ವಾಸಿಸುತ್ತಿದ್ದವರನ್ನು ಒಕ್ಕಲೆಬ್ಬಿಸತೊಡಗಿದೆ. ಕೇಂದ್ರಾಡಳಿತ ನಡೆಸುತ್ತಿರುವ ಲೆಫ್ಟಿನೆಂಟ್‌ ಗವರ್ನರ್‌ ಭೂ ಬ್ಯಾಂಕ್‌ಗಳನ್ನು ಸೃಷ್ಟಿಸಿ ಆನ್‌ಲೈನ್‌ನಲ್ಲಿ ಅದರ ಆಸ್ತಿಗಳನ್ನು ದಾಖಲಿಸತೊಡಗಿದ್ದಾರೆ. ಖಾಸಗಿ ಭೂ ಬ್ಯಾಂಕ್‌ಗಳ ಸ್ಥಾಪನೆಗೂ ಅವಕಾಶ ನೀಡಲಾಗಿದೆ.  ಹೊಸ ಕೈಗಾರಿಕಾ ನೀತಿ ಜಾರಿಗೆ ಬಂದಿದೆ. 2021-2030ರ ಅವಧಿಯ ಖಾಸಗಿ ಕೈಗಾರಿಕಾ ಅಭಿವೃದ್ದಿ ನೀತಿ ರೂಪಿಸಿ ಜಾರಿಗೆ ತರಲಾಗಿದೆ.  ಕೈಗಾರಿಕಾ ಭೂ ಹಂಚಿಕೆ ನೀತಿ ಜಾರಿಗೆ ಬಂದಿದೆ ಎಂದು 2022ರ ಏಪ್ರಿಲ್‌ 6ರಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯ ಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಭೂಮಿಯ ಹಕ್ಕು ಇಂಡಿಯಾದ ಇತರ ರಾಜ್ಯಗಳಲ್ಲಿ ಇರುವಂತಿಲ್ಲ .  ಕಳೆದ ಮಾರ್ಚಿ3ರಂದು ಆರಂಭಗೊಂಡ ವಿಧಾನ ಸಭಾ ಅಧಿವೇಶನದಲ್ಲಿ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಜಮ್ಮು ಮತ್ತು ಕಾಶ್ಮೀರದ ( ಸಾರ್ವಜನಿಕ ಭೂಮಿಯಲ್ಲಿನ ನಿವಾಸಿಗಳ ಆಸ್ತಿ ಹಕ್ಕು ಮಾನ್ಯತೆ ಹಾಗೂ ಸಕ್ರಮ) ಮಸೂದೆ -2025 ಎಂಬ ಖಾಸಗಿ ಮಸೂದೆಯೊಂದನ್ನು ಮಂಡಿಸಿತು. ರಾಜ್ಯದಲ್ಲಿ ಸರ್ಕಾರಕ್ಕೆ ಸೇರಿದ ಹಾಗೂ ಅನ್ಯ ಭೂಮಿಯಲ್ಲಿ   ದಶಕಗಳಿಂದಲೂ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ಆಸ್ತಿ ಹಕ್ಕು ನೀಡಬೇಕೆಂಬುದು ಆ ಮಸೂದೆಯ ಮುಖ್ಯವಾದ ಅಂಶವಾಗಿತ್ತು.

    ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಅದೇಶ ಹೊರಡಿಸಿದ ಬಳಿಕ ಅಂದರೆ ಕೇಂದ್ರದ ಆಡಳಿತ ಜಾರಿಗೆ ಬಂದ ಮೇಲೆ ದೊಡ್ಡ ಪ್ರಮಾಣದ ಭೂಮಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳ ಹೆಸರಿಗೆ ವರ್ಗಾಯಿಸಲಾಗಿದೆ. ಸ್ಯಾಟಲೈಟ್‌ ಟೌನ್‌ ಶಿಪ್‌, ರೈಲ್ವೆ ಹಾಗೂ ಇನ್ನಿತರ ಹೊಸ ಯೋಜನೆಗಳಿಗೆಂದು ಲಕ್ಷಾಂತರ ಎಕರೆ ಭೂಮಿಯನ್ನು ವರ್ಗಾಯಿಸುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗುತ್ತಿದೆ.  ಮುಸ್ಲಿಮ್‌ ಜನರಿರುವ ಪ್ರದೇಶಗಳಲ್ಲಿ ಬಿಜೆಪಿಯ ಬುಲ್‌ಡೋಜರ್‌ಗಳು ಸದ್ದು ಮಾಡತೊಡಗಿವೆ. ಕಾಶ್ಮೀರಿಗಳನ್ನು ಈ ಬೆಳವಣಿಗೆ ಆತಂಕ ಹಾಗೂ ಚಿಂತೆಗೆ ಕಾರಣವಾಗಿದೆ. ಕೆಲವು ಭೂರಹಿತರಿಗೆ ಸರ್ಕಾರದ ಯೋಜನೆಯಡಿ ಭೂಮಿ ಹಂಚಿಕೆ ಮಾಡಲಾಗಿದೆಯಾದರೂ ಸ್ವಂತ ಮನೆಗಳಲ್ಲಿ ವಾಸವಿರುವ ಜನರನ್ನು ಅವರವರ ಮನೆಗಳಿಂದ ತೆರವುಗೊಳಿಸುತ್ತಿರುವುದರಿಂದ ಈ ಮಸೂದೆ ತರಬೇಕಾಗಿದೆ ಎಂದು ಪಿಡಿಪಿ ಎಂಪಿ ವಹೀದ್‌ ಉರ್‌ ರೆಹಮಾನ್‌ ಪಾರ್ರಾ ಹೇಳುತ್ತಾರೆ.

    ಲೆಫ್ಟಿನೆಂಟ್‌ ಗವರ್ನರ್‌ ಆಡಳಿತವು 2020ರಿಂದ ಈವರೆಗೆ ಸಾರ್ವಜನಿಕ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಅನಧಿಕೃತ ವಾಸವಿರುವ ಜನರನ್ನು ಒಕ್ಕಲೆಬ್ಬಿಸಿ  70 ಸಾವಿರದಿಂದ 75 ಸಾವಿರ ಹೆಕ್ಟೇರ್‌ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ. ದಶಕಗಳಿಂದಲೂ ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಿರುವ ಹತ್ತಾರು ಸಾವಿರ ಕುಟುಂಬಗಳನ್ನು ತೆರವುಗೊಳಿಸುವ ಬದಲಿಗೆ ಸಂವಿಧಾನದ ಅರ್ಟಿಕಲ್‌ -21ರ ಪ್ರಕಾರ ಜೀವಿಸುವ ಹಕ್ಕನ್ನು ನೀಡಬೇಕೆಂದು ಪಿಡಿಪಿ ಒತ್ತಾಯಿಸಿದೆ.

    1976ರ ಜಮ್ಮು ಮತ್ತು ಕಾಶ್ಮೀರ ಕೃಷಿ ಸುಧಾರಣಾ ಕಾಯ್ದೆ ಪ್ರಕಾರ 20 ವರ್ಷಗಳಿಗೂ ಹೆಚ್ಚು ಕಾಲ ಸರ್ಕಾರಿ ಅಥವಾ ಸಾರ್ವಜನಿಕ ಭೂಮಿಗಳಲ್ಲಿ ವಸತಿ ಮಾಡಿಕೊಂಡಿರುವವರಿಗೆ ಸಕ್ರಮಗೊಳಿಸಿಕೊಡಬೇಕಾಗಿದೆ. ಸ್ಥಳೀಯರನ್ನು ಗುರುತಿಸಿ ನೆಲೆ ಕಲ್ಪಿಸಿಕೊಡಬೇಕಿದೆ ಎಂದು ಪಿಡಿಪಿ ಒತ್ತಾಯಿಸಿದೆ.

     ಗುಲಾಂ ನಬಿ ಆಜಾದ್‌ ಅವರ ಸರ್ಕಾರವು 2001ರ ರೋಶ್ನಿ ಕಾಯ್ದೆಯಡಿ ಜಮ್ಮುವಿನಲ್ಲಿ 71,401 ಎಕರೆ ಹಾಗೂ ಕಾಶ್ಮೀರದಲ್ಲಿ 4174 ಎಕರೆ ಭೂಮಿಯನ್ನು ಸಕ್ರಮಗೊಳಿಸಿಕೊಟ್ಟಿತ್ತು, ಆದರೆ 2018ರಲ್ಲಿ ಅಂದಿನ ರಾಜ್ಯಪಾಲ ಸತ್ಯಪಾಲ ಮಲಿಕ್‌ ಈ ರೋಶ್ನಿ ಕಾಯ್ದೆಯನ್ನು ನಿರಸನಗೊಳಿಸಿಬಿಟ್ಟರು. ನಂತರ 2020ರಲ್ಲಿ  ಹೈ ಕೋರ್ಟ್‌ ಕೂಡಾ ಈ ಕಾಯ್ದೆಯನ್ನು ರದ್ದುಪಡಿಸಿತಲ್ಲದೇ ಫಲಾನುಭವಿಗಳಿಂದ ಈ ಭೂಮಿ ಕಿತ್ತು ಕೊಂಡಿದೆ ಎಂದು ಪಿಡಿಪಿ ದೂರುತ್ತದೆ.

    1956ರಿಂದ ಜಮ್ಮು ಮತ್ತು ಕಾಶ್ಮೀರದ ಜನತೆಗೆ ಹಾಗೂ ರೈತರಿಗೆ ಭೂಮಿ ಒದಗಿಸಲು ಅವಕಾಶವಿದ್ದ ಎಲ್ಲ ರೀತಿಯ ಕಾನೂನುಗಳನ್ನು ಲೆಫ್ಟಿನೆಂಟ್‌ ಗವರ್ನರ್‌ ನಿರಸನಗೊಳಿಸಿದ್ದಾರೆ.  1948ರಿಂದ ಈವರೆಗೆ ಜಮ್ಮು ಮತ್ತು ಕಾಶ್ಮೀರವನ್ನು  ಆಳಿದವರೆಲ್ಲರೂ 370 ವಿಧಿಯ ದುರ್ಬಳಕೆ ಮಾಡಿಕೊಂಡು ಅಪಾರ ಪ್ರಮಾಣದ ಭ್ರಷ್ಟಾಚಾರ  ಹಾಗೂ ಸ್ವಜನ ಪಕ್ಷಪಾತದಲ್ಲಿ ತೊಡಗಿ ಜನರನ್ನು ನಿರ್ಲಕ್ಷಿಸಿವೆ ಎಂಬ ದೂರು ಸುಳ್ಳಲ್ಲ. ಜೊತೆಗೆ ಇಂಡಿಯಾದ ಸರಾಸರಿ ನಿರುದ್ಯೋಗ ಪ್ರಮಾಣ 6-7 % ಇದ್ದರೆ ಅದು ಜಮ್ಮು ಮತ್ತು ಕಾಶ್ಮೀರದಲ್ಲಿ 26% ಇದೆ. ಕಳೆದ ಐದು ವರ್ಷಗಳಿಂದ ಭಾರತ ಸರ್ಕಾರ ಆಫ್ಘಾನಿಸ್ಥಾನದ ಅಗ್ಗದ ಸೇಬನ್ನು ಆಮದು ಮಾಡಿಕೊಳ್ಳಲು ಮುಕ್ತ ಅವಕಾಶ ನೀಡಿರುವುದರಿಂದಾಗಿ ಕಾಶ್ಮೀರದ ಬಹು ಮುಖ್ಯ ವರಮಾನದ ಬೆಳೆಯಾಗಿದ್ದ ಸೇಬು ಉದ್ಯಮ ನೆಲಕಚ್ಚಿದೆ. ರಾಜ್ಯದಲ್ಲಿ ಸುಮಾರು 9 ಲಕ್ಷ ಜನರು ಮಾದಕ ವ್ಯಸನಿಗಳಿದ್ದಾರೆ ಎಂಬ ಮಾಹಿತಿ ಇದೆ. ಧಾರ್ಮಿಕ ಮುಖಂಡರು ದೊಡ್ಡ ದೊಡ್ಡ ಪ್ರಾರ್ಥನಾ ಸಮಾವೇಶಗಳಲ್ಲಿ ಡ್ರಗ್‌ ವ್ಯಸನ ತೊರೆಯುವಂತೆ ಮಾಡುವ ಭಾಷಣಗಳೇ ಈ ಮಾಹಿತಿಗೆ ಸಾಕ್ಷಿಯಾಗಿದೆ.  ಎಲ್ಲಿ ಇಂಗ್ಲಿಷ್‌ ಜೆಂಟಲ್‌ಮೆನ್‌ಗಳು ನಿರಂತರ ವಲಸೆ ಬಂದು ನೆಲೆಸಿಬಿಟ್ಟಾರು ಎಂಬ ಸಿಖ್‌ ರಾಜರ ಶತಮಾನಗಳ ಆತಂಕವು ಇವತ್ತು ನಿಜವಾಗಿದೆ. ಆದರೆ ಇಂಗ್ಲಿಷ್‌ ಜೆಂಟಲ್‌ಮ್ಯಾನ್‌ಗಳ ಬದಲಿಗೆ ದಿಲ್ಲಿ ದೊರೆಗಳು ಈ ಜಾಗವನ್ನು ಅಕ್ರಮಿಸಿಕೊಂಡಿದ್ದಾರೆ.

****