ಮಗಳೇ ಎನ್ನುವ ಅಪ್ಪನ ಮಾತು ನೆಮ್ಮದಿ ಕೊಡುತ್ತದೆ

ಸಂದರ್ಶನ : ಡಾ. ಬಿ.ಸಿ. ಶೈಲಾ ನಾಗರಾಜ್

ಮಗಳೇ ಎನ್ನುವ ಅಪ್ಪನ ಮಾತು ನೆಮ್ಮದಿ ಕೊಡುತ್ತದೆ

       

    ಪ್ರತಿ ಮನೆಯ ಹೆಣ್ಣುಮಗಳಿಗೆ ಅವರ ಅಪ್ಪನೆಂದರೆ ಪ್ರಾಣ. ಅಪ್ಪನೇ ಅವರ ಹೀರೋ, ಅಪ್ಪನ ಬಗೆಗಿನ ಮಧುರ ಅನುಭೂತಿ ಪ್ರತಿ ಹೆಣ್ಣು ಮಗಳ ಕಣ್ಣಲ್ಲಿ ಅಭಿಮಾನದ ಹೊಳೆಯಾಗಿ ಹರಿಯುತ್ತದೆ. ಅಪ್ಪನೆಂದರೆ, ಆಕಾಶ, ಎತ್ತರದ ವ್ಯಕ್ತಿತ್ವ, ಯಾವಾಗಲು ಹೆಣ್ಣು ಮಕ್ಕಳು ಅಪ್ಪನ ಪರವಾಗಿಯೇ ನಿಲ್ಲುತ್ತಾರೆ. ಅಪ್ಪಂದಿರೂ ಹಾಗೆ ಹೆಣ್ಣುಮಕ್ಕಳ ಪರವಾಗಿಯೇ ಅವರ ನಿಲುವು ಇರುತ್ತದೆ. ಅಪ್ಪನೆಂದರೆ ಎಲ್ಲ ಹೆಣ್ಣುಮಕ್ಕಳಿಗೆ ಆಲದಮರ ಹಾಗೆಯೇ ಅಪ್ಪ ಸದಾ ಗೆಲ್ಲುವ ವೀರ. ಹೆಣ್ಣುಮಕ್ಕಳು ಮದುವೆಯಾಗಿ ಬೇರೆ ಮನೆಗೆ ಹೋದಾಗಲೂ ಅಲ್ಲಿಯೂ ಅವರಿಗೆ ಅಪ್ಪನ ನೆನಪೇ ಆಪ್ಯಾಯಮಾನ.

    ಹೆಣ್ಣುಮಕ್ಕಳು ಹತ್ತಿರವಿರಲಿ, ದೂರವಿರಲಿ, ಎಲ್ಲಾ ಅಪ್ಪಂದಿರೂ ಅವರಿಗಾಗಿ ತುಡಿಯುತ್ತಾರೆ. ಮಿಡಿಯುತ್ತಾರೆ. ಮಗಳಿಗಾಗಿ ಕನವರಿಸುತ್ತಾರೆ. ಅಪ್ಪ ಮಗಳ ಸಂಬಂಧವೇ ಹಾಗೆ ಪ್ರತಿ ಹೆಣ್ಣು ಮಗಳ ಮಾರ್ಗದರ್ಶಿ ಮತ್ತು ಆದರ್ಶ. ಅಪ್ಪ ಮಗಳಿಗೆ ಇಡೀ ಲೋಕವನ್ನು ಪರಿಚಯಿಸುವ ಅಪ್ಪನ ಪರಿ ಅನನ್ಯ. ಮಗಳಿಗಾಗಿ ಖರ್ಚು ಮಾಡುವ ಸಾಹುಕಾರ. ಅದೇ ಅಪ್ಪನಿಗೂ ಮಗಳೆಂದರೆ ಪ್ರೀತಿ ಮತ್ತು ಧೈರ್ಯ, ಅಪನ ಶ್ರಮದ ಕೆಲಸ ಹಾಗೂ ಸಾಧನೆ ಮಗಳಿಗೆ ಜಾದೂ ಇದ್ದಂತೆ. ಅದು ವಿಸ್ಮಯ. ಅದಕ್ಕೆ ಹೆಣ್ಣುಮಕ್ಕಳು ಅವರ ಅಪ್ಪನನ್ನು "ಗ್ರೇಟ್" ಎಂತಲೇ ಅನ್ನುತ್ತಾರೆ.

   ತನ್ನ ಅಪ್ಪನ ಬಗೆಗೆ ಇದೇ ಅನುಭವ ಅನುಭೂತಿ, ಸಹಕಾರ ಸಚಿವರಾದ ಕೆ.ಎನ್. ರಾಜಣ್ಣನವರ ಒಬ್ಬಳೇ ಮಗಳು ರಶ್ಮಿಯವರದು. ಸ್ನಾತಕೋತ್ತರ ಕಾನೂನು ಪದವೀಧರೆಯಾದ (LLM) ರಶ್ಮಿಯವರು ನಮ್ಮ ನಡುವಿನ ಪ್ರತಿಭಾವಂತ ಹೆಣ್ಣುಮಗಳು, ಸಾಮಾಜಿಕ ಚಿಂತಕಿಯಾದ ಇವರು ಮನೆ ಹಾಗೂ ಸಮಾಜವನ್ನು ಜವಾಬ್ದಾರಿಯಿಂದ ನಿರ್ವಹಿಸುವ ಚತುರೆ, ಪತಿ ಗಿರೀಶ್ ಪೊಲೀಸ್ ಅಧಿಕಾರಿ (DCP) ಹಾಗೂ ಎರಡು ಹೆಣ್ಣುಮಕ್ಕಳ ತಾಯಿ.

  ಇವರ ಅಪ್ಪನ ಬಗೆಗಿನ ಇವರ ಮಾತುಗಳನ್ನು ಕೇಳೋಣ.

ಪ್ರಶ್ನೆ : ಕೆ.ಎನ್.ಆರ್ ಮನೆಮಗಳು ಜಾಣೆ ರಶ್ಮಿಯವರಿಗೆ

ರಶ್ಮಿ : ನಮಸ್ಕಾರ ನಮಸ್ಕಾರ ಶೈಲಾ ಆಂಟಿ.

ಪ್ರಶ್ನೆ : ನಿಮ್ಮ ಅಪ್ಪನೆಂದರೆ ನಿಮ್ಮ ಕಣ್ಣಲ್ಲಿ ಅವರ ಬಗೆಗಿನ ಪ್ರೀತಿ ಅಭಿಮಾನ ಎಂತಹುದು? ನನ್ನ ಅಪ್ಪ ನನಗೆ ಒಂದು ಸ್ಕೂಲ್ ಇದ್ದಂತೆ.

ರಶ್ಮಿ : ಅಪ್ಪ ನನ್ನ ಮೇಷ್ಟ್ರು, ಮಾರ್ಗದರ್ಶಿ, ಅಪ್ಪನ ವ್ಯಕ್ತಿತ್ವ ನನಗೆ ಸದಾ ಮಾದರಿ, ಅವರೇ ನನ್ನ ಆದರ್ಶ. ಸಣ್ಣ ಕೆಲಸದಿಂದ, ದೊಡ್ಡ ಕೆಲಸದವರೆಗೂ ಅಪ್ಪ ನನಗೆ ಮಾರ್ಗದರ್ಶನ ಮಾಡುತ್ತಾರೆ. ಅವರೊಂದಿಗೆ ಇರುವುದು ನನಗೆ ಹೆಚ್ಚು ಆಪ್ತ, ಅವರೇ ನನ್ನ ರೋಲ್ ಮಾಡಲ್ ಮತ್ತು ನನ್ನ ಫ್ರೆಂಡ್ ನನ್ನ ಹೀರೋ ಅವರೇ. ಅಪ್ಪನ ಜೊತೆ ಇರುವುದು ನನಗೆ ಸದಾ ಸಂತೋಷ ಮತ್ತು ಹೆಮ್ಮೆ. ಅವರ ಮುಖ ನೋಡುದ್ರೆ ಸಾಕು ನನ್ನ ಬೇಸರವೆಲ್ಲಾ ಹೋಗಿಬಿಡುತ್ತೆ.

 

ಪ್ರಶ್ನೆ : ನಿಮ್ಮ ಬಾಲ್ಯ ಮತ್ತು ನಿಮ್ಮ ತಂದೆಯವರ ಪ್ರೀತಿ ಹೇಗೆ ನಿಮ್ಮನ್ನು ಬೆಳೆಸಿತು?

ರಶ್ಮಿ : ನಾನು ನನ್ನ ತಂದೆಯನ್ನು ಅಪ್ಪಾಜಿ, ಪಿತಾಶ್ರೀ ಎನ್ನುತ್ತೇನೆ. ಅವರು ನನ್ನನ್ನು ಮಗಳ, ಪಾಪು, ಕೋತಿ ಇನ್ನು ಏನೇನೋ ಪ್ರೀತಿಯಿಂದ ಕರೆಯುತ್ತಾರೆ. ಬಾಲ್ಯದಿಂದಲೂ ನನ್ನ ಅಪ್ಪಾಜಿಯವರ ಸಂಭಂಧ, ಆಪ್ತತೆ, ಬೇರೆಯವರಿಗೆ ವಿಶೇಷ ಅನ್ನಿಸುತ್ತಿತ್ತು. ನನ್ನ ತಂದೆಯವರು ಸದಾ "ಅನ್ನದೇವರು' ಎಂದು ನಮಗೆಲ್ಲಾ ಮಕ್ಕಳಿಗೆ ಹೇಳುತ್ತಾರೆ. ಬಾಲ್ಯದಲ್ಲಿ ನಮ್ಮನ್ನೆಲ್ಲಾ ಕೂರಿಸಿಕೊಂಡು, ಕಥೆ ಹೇಳುತ್ತಿದ್ದರು. ಬುದ್ಧಿ ಹೇಳುತ್ತಿದ್ದರು. ಮೂರೂ ಮಕ್ಕಳನ್ನು ಸರಿಸಮನಾಗಿ ಆಟ ಆಡಿಸಿದ್ದಾರೆ. ಕೂಸುಮರಿ ಆಡಿಸಿದ್ದಾರೆ. ನನ್ನನ್ನು ಹೆಚ್ಚು "ಕೂಸುಮರಿ" ಆಡಿಸಿದ್ದಾರೆ. ನಾನು ಹುಟ್ಟಿದಾಗ ಅಪ್ಪಾಜಿಗೆ ಹೆಚ್ಚು ಸಂತೋಷವಾಗಿತ್ತು. ಅಮ್ಮ ಬೈದಾಗ ಅಪ್ಪಾಜಿ ಯಾವಾಗಲೂ ಸಪೋರ್ಟಾಗಿ ಬರ್ತಿದ್ರು. ಅಪ್ಪಾಜಿ ನಿಮ್ಮ ಕೆಲಸ ನೀವು ಮಾಡಬೇಕು. ಶಿಸ್ತು ತುಂಬಾ ಮುಖ್ಯ,ಚಿಕ್ಕವರಿಂದಲೂ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಪ್ರಾಮಾಣಿಕವಾಗಿರಬೇಕು ಎಂದು ಎಲ್ಲ ಮಕ್ಕಳನ್ನು ಕೂರಿಸಿಕೊಂಡು ಹೇಳುತ್ತಿದ್ದರು.

ಪ್ರಶ್ನೆ : ಮಗಳೊಂದಿಗಿನ ಹಾಗೂ ಮಕ್ಕಳೊಂದಿಗಿನ ಕೆಎನ್ಆರ್. ಅವರ ವರ್ತನೆ, ಪ್ರೀತಿ, ಹೊಂದಾಣಿಕೆ ಅವರ ವ್ಯಕ್ತಿತ್ವ ಹೇಗಿದೆ?

ರಶ್ಮಿ : ನಾವು ಐದೂ ಜನ ಒಟ್ಟಿಗೆ ಊಟ ಮಾಡುತ್ತೇವೆ. ಅಪ್ಪಾಜಿ ಎಲ್ಲ ಮಕ್ಕಳನ್ನೂ ಸಮನಾಗಿ ಕಾಣುತ್ತಾರೆ. ಕೇರಂ ಅಪ್ಪಾಜಿಗೆ ಇಷ್ಟ, ಮಕ್ಕಳ ಜೊತೆ ಆಡೋರು. ಮನೆಗಾಗಿ, ಮಕ್ಕಳಿಗಾಗಿ ಸದಾ ತುಡಿತ ಅವರದು. ಅವರು ಎಷ್ಟೇ ಒತ್ತಡದಲ್ಲಿದ್ದರೂ ಅವರ ಕಣ್ಣಿನ ಪ್ರೀತಿಯಲ್ಲಿ ನಮಗೆಲ್ಲಾ ಸಮಾಧಾನ ತರುವಂತೆ, ಅವರ ವರ್ತನೆ ಇರುತ್ತದೆ. ನಾವೆಲ್ಲಾ ಮಲಗುವವರೆಗೂ ಚಿಕ್ಕಂದಿನಲ್ಲಿ ನಮ್ಮ ಜೊತೆ ಇದ್ದು ಆಮೇಲೆ ಅವರು ಮಲಗುತ್ತಿದ್ದರು. ಈಗ ನಾವೆಲ್ಲಾ ಮದುವೆಯಾದ ಮೇಲೆ ಅಪ್ಪನನ್ನು ಹೆಚ್ಚು ನೇರವಾಗಿ ವಿಚಾರಿಸಿಕೊಳ್ಳಲು ಆಗುತ್ತಿಲ್ಲ. ಮಗಳ ಮೇಲೆ ಇರುವ ಅವರ ಪ್ರೀತಿ ಎಂದೂ ಕಮ್ಮಿಯಾಗಿಲ್ಲ. ಎಲ್ಲೇ ಇದ್ದರೂ ಅಪ್ಪ ಎಂದರೆ ನನ್ನ ಹೃದಯ ತುಂಬಿ ಬರುತ್ತೆ.

ಪ್ರಶ್ನೆ : ನಿಮ್ಮ ತಂದೆ ಜನಪ್ರಿಯ ರಾಜಕಾರಣಿ. ಈಗ ಮಂತ್ರಿಗಳಾಗಿದ್ದಾರೆ. ಅವರು ಇಷ್ಟು ಒತ್ತಡದ ಕೆಲಸದಲ್ಲಿ ಮಗಳಿಗೆ ಹೇಗೆ ಸಮಯ ಕೊಡುತ್ತಾರೆ? ಅಪ್ಪನಾಗಿ ಕಳೆದುಹೋಗಿದ್ದಾರೆ ಎನ್ನಿಸುತ್ತದೆಯೆ?

ರಶ್ಮಿ : ಖಂಡಿತಾ ಇಲ್ಲ. ಅಪ್ಪಾಜಿಯ ಜನಪ್ರಿಯತೆ, ಜನಸೇವೆ, ಬಡವರ ಪರವಾದ ನಿಲುವು ನನಗೆ ಹೊಸದಲ್ಲ. ಅವರು ಆ ಸೇವೆಯಲ್ಲಿಯೇ ನೆಮ್ಮದಿ ಕಾಣುತ್ತಾರೆ. ಕುಟುಂಬದ ಜವಾಬ್ದಾರಿಯನ್ನು ಎಂದೂ ಮರೆತಿಲ್ಲ. ಅದರಲ್ಲೂ ಮಕ್ಕಳ ಹಾಗೂ ಮಗಳ ವಿಷಯದಲ್ಲಿ ಪ್ರೀತಿ ಕಡಿಮೆಯಾಗಿಲ್ಲ, ಎಂತಹ ಒತ್ತಡವಿದ್ದರೂ ಅವರಿಗೆ ಮನೆಯಲ್ಲೇ ಸಮಾಧಾನ, ಮಗಳೆಂದರೆ ಅವರಿಗೆ ಸಾಂತ್ವನ. ಒಮ್ಮೊಮ್ಮೆ ಕೆಲವು ವಿಚಾರದಲ್ಲಿ ಬೇಸರವಾಗಿ, ಊಟ ಮಾಡದೆ ಮಲಗಿಬಿಡುತ್ತಾರೆ. ಆಗ ನಾನೇ ಅವರನ್ನು ಸಮಾಧಾನ ಮಾಡಿ ಎಬ್ಬಿಸಿ ಊಟ ಮಾಡಿಸಬೇಕು. ಆಗ ಅವರಿಗೆ ಸಮಾಧಾನವಾಗುತ್ತದೆ. ನಾನು ಊರಿನಿಂದ ಬಂದಿದ್ದಾಗ, ಎಲ್ಲೇ ಇದ್ದರೂ ಅವರು ಎಷ್ಟೇ ತಡವಾಗಿ ಮನೆಗೆ ಬಂದರೂ ನನ್ನನ್ನು ಕರೆಸಿಕೊಂಡು ಮಾತನಾಡಿಸಿದರೆ ಅವರಿಗೆ ಸಮಾಧಾನ. ಇಷ್ಟು ಜವಾಬ್ದಾರಿಯಲ್ಲೂ ಅಪ್ಪ ನನಗೆಂದೂ ಅಪ್ಪನಾಗಿ ಕಳೆದುಹೋಗಿಲ್ಲ. ಅಪ್ಪ ನನ್ನ ಶಕ್ತಿ ನನ್ನ ಪತಿಗಂತೂ ನನ್ನ ಅಪ್ಪನೆಂದರೆ, ಅತಿಹೆಚ್ಚು ಅಭಿಮಾನ ಮರ್ಯಾದೆ ಗೌರವ, ಅಪ್ಪನಿಗೆ ಸ್ವೀಟ್ ಇಷ್ಟ, ಜಾಮೂನು, ಜಿಲೇಬಿ, ಐಸ್‌ಕ್ರೀಂ ಇತ್ಯಾದಿ. ಅವರನ್ನು ಎಲ್ಲದರಲ್ಲೂ ಪ್ರೀತಿಯಿಂದ ಗದರುತ್ತಾ ಕಂಟ್ರೋಲ್ ಮಾಡೋಳು ನಾನು. ನಾನೇ ಅವರಿಗೆ ಭರವಸೆ ಮತ್ತು ಸಾಂತ್ವನ. ಅಪ್ಪ ಬಿಜಿಯಾಗಿದ್ದಾರೆ ಅಷ್ಟೆ ನನಗಂತೂ ಎಲ್ಲೂ ಕಳೆದುಹೋಗಿಲ್ಲ.

ಪ್ರಶ್ನೆ : ಕೆಎನ್ಆರ್ರವರ ಸಾಮಾಜಿಕ ಚಿಂತನೆಗಳು ನಿಮ್ಮನ್ನು ಹೇಗೆ ಪ್ರಭಾವಿಸಿವೆ?

 

ರಶ್ಮಿ : ಅಪ್ಪ ಪ್ರಾಮಾಣಿಕರು. ಅವರು ಶಿಕ್ಷಣ, ಸ್ವಾತಂತ್ರ್ಯ ಹಾಗೂ ಸ್ವಾವಲಂಭಿ ಬದುಕಿನ ಬಗ್ಗೆ ಅತ್ಯಂತ ಕಾಳಜಿಯಿಂದ ಮಾತನಾಡುತ್ತಾರೆ. ಹಾಗೆಯೇ ಯೋಜನೆಗಳನ್ನು ರೂಪಿಸುತ್ತಾರೆ. ಅವರಿಗೆ ಹೆಣ್ಣುಮಕ್ಕಳ ಬಗ್ಗೆ ಅವರಿಗೆ ಅತ್ಯಂತ ಗೌರವ ಸಮಯಕ್ಕೆ ಬೆಲೆಕೊಡುತ್ತಾರೆ. ಹಾಗೆಯೇ ಒಳ್ಳೆತನಕ್ಕೆ ಗೌರವ ಕೊಡುತ್ತಾರೆ. ಅಪ್ಪ ಪ್ರಾಮಾಣಿಕವಾಗಿರುವುದರಿಂದ ಅವರು ನೇರ ಹಾಗೂ ನಿಷ್ಟುರ ವ್ಯಕ್ತಿತ್ವ ಅವರದು. ಬಡವರ ಪರವಾದ ಅವರ ಚಿಂತನೆಗಳು ಅತ್ಯಂತ ಪರಿಣಾಮಕಾರಿ, "ಗೌರವ ಕೊಟ್ಟು ಗೌರವ ತೆಗೆದುಕೊಳ್ಳಿ' ಎಂದು ಎಲ್ಲರಿಗೂ ಹೇಳುತ್ತಾರೆ.ಜನರ ಕಣ್ಣಲ್ಲಿ ಅಪ್ಪ ದೇವರಾಗಿದ್ದಾರೆ. ಮಧುಗಿರಿ ಜನರ ಕಣ್ಣಲ್ಲಿ ಅಪ್ಪನ ವ್ಯಕ್ತಿತ್ವ ಮೇರುಮಟ್ಟದ್ದು, ನನಗಂತೂ ಅತ್ಯಂತ ಹೆಮ್ಮೆ ಎನಿಸುತ್ತದೆ. ಅಪ್ಪ ವ್ಯಕ್ತಿ ಶಕ್ತಿಯಾಗಿ ಬೆಳೆದು ನಿಂತಿದ್ದಾರೆ. ರಾಜಕಾರಿಣಿಯಾಗಿ ಅವರ ಜನಪ್ರಿಯತೆ ನನಗೆ ಅತ್ಯಂತ ವಿಸ್ಮಯ ತರಿಸುತ್ತದೆ.

 

ಪ್ರಶ್ನೆ : ನಿಮ್ಮ ತಂದೆ ನಿಮ್ಮನ್ನು ತಿದ್ದಿ ತೀಡಿ, ವ್ಯಕ್ತಿತ್ವಪೂರ್ಣವಾಗಿ ನಿಮ್ಮ ಬದುಕನ್ನು ಕಟ್ಟಿಕೊಟ್ಟಿರುವ ಬಗ್ಗೆ ತಿಳಿಸಿ.

 

ರಶ್ಮಿ : ಅಪ್ಪ ನನಗೆ ಮೊದಲು ಕಲಿಸಿದ್ದು ಒಳ್ಳೆಯ ಮನುಷ್ಯರಾಗುವ ಬಗ್ಗೆ. ಬಡವರ ಪರವಾಗಿ ಕೆಲಸ ಮಾಡಲು, ದೀನದಲಿತರ ಬಗ್ಗೆ ಇರಬೇಕಾದ ಅಂತಃಕರಣವನು ಕಲಿಸಿದರು. ಇತರರನ್ನು ಸಮಾಧಾನವಾಗಿ, ಪ್ರೀತಿಯಿಂದ ಹೇಗೆ ನೋಡಬೇಕೆಂದು ತಿಳಿಸಿಕೊಟ್ಟರು. ಅವರು ಎಂಎಲ್‌ಸಿ ಆಗಿದ್ದಾಗನಾಗೆ ರಾಜಕೀಯ ವೆಂದರೆ ಏನೆಂದು ಗೊತ್ತಾಗುತ್ತಾ ಹೋಯಿತು. ಆಗ ನನಗೆ 12 ವರ್ಷ. ನಂತರ ನನಗೆ ರಾಜಕೀಯವಾಗಿ, ಅಭಿವೃದ್ಧಿಯ ಬಗ್ಗೆ ಚಿಂತನೆ ಪ್ರಾರಂಭವಾಗಿ ಪಾಸಿಟಿವಿಟಿ, ನೆಗೆಟಿವಿಟಿಯನು ಅರ್ಥಮಾಡಿಕೊಳ್ಳುತ್ತಾ ಹೋದೆ.

 

ಅಪ್ಪನ ಇಚ್ಛಾಶಕ್ತಿ, ಮುಂದಾಲೋಚನೆಗಳು, ಆರ್ಥಿಕ ಚಿಂತನೆಗಳು, ಅವರ ಒಳ್ಳೆಯತನ, ಖಡಕ್ ವ್ಯಕ್ತಿತ್ವ ನನಗೆ ಮಾದರಿಯಾಗತೊಡಗಿತು. ಅಪ್ಪ ಎಂದೂ ನನ್ನ ಓದಿನ ಬಗ್ಗೆಯಾಗಲಿ, ಹೆಚ್ಚು ಅಂಕ ತೆಗೆಯುವ ಬಗ್ಗೆಯಾಗಲಿ ನನಗೆ ಎಂದೂ ಒತ್ತಡವನ್ನು ಹೇರಿಲ್ಲ. ಆದರೆ ಶಿಕ್ಷಣದ ಮೌಲ್ಯಗಳ ಬಗ್ಗೆ ಹೇಳುತ್ತಾ ಒಳ್ಳೆಯ ಶಿಕ್ಷಣ, ಒಳ್ಳೆಯ ಮನುಷ್ಯರನ್ನಾಗಿ ರೂಪಿಸುತ್ತದೆ. ಮಾನವೀಯ ಶಿಕ್ಷಣದ ಮುಖ್ಯಭಾಗ ಎಂದು ತಿಳಿಸುತ್ತಿದ್ದರು. ಯಾರನ್ನು ಇವರು ಮೇಲು, ಕೀಳು ಎಂದು ಕಾಣಬಾರದು. ಅವರನ್ನು ಪ್ರೀತಿಯಿಂದ ಆಧರಿಸಬೇಕು. ಅವರು ಕಾರ್ಯಕ್ರಮಗಳಿಗೆ ಕರೆದಾಗ ಹೋಗಬೇಕು ಎಂದು ತಿಳಿಸುತ್ತಿದ್ದರು. ಅಪ್ಪನ ಮುಂದಾಲೋಚನೆ, ಯೋಚನೆಗಳು, ಚಿಂತನೆಗಳು ನನ್ನನ್ನು ಹೆಚ್ಚು ಬೆಳೆಸಿದೆ. ಅವರ ಜನಪ್ರಿಯತೆ, ತಳಮಟ್ಟದಿಂದ ಹೇಗೆ ನಾಯಕರಾಗಬೇಕೆಂಬ ಅವರ ಧೈಯವೂ ನನಗೆ ಮಾದರಿಯಾಗಿದೆ. ಅವಿಭಕ್ತ ಕುಟುಂಬದ ಒಗ್ಗಟ್ಟು, ಪ್ರೀತಿ, ಹೊಂದಾಣಿಕೆ, ಅಣ್ಣ, ತಮ್ಮ, ತಂಗಿ ಇವರನ್ನು ಬಂಧುಗಳನ್ನು ಪ್ರೀತಿಯಿಂದ ಕಾಣುವುದನ್ನು ನನ್ನಪ್ಪನಿಂದ ಕಲಿತದ್ದು ನನ್ನ ತಮ್ಮನ ಕ್ರಿಯಾಶೀಲತೆ, ಕುಟುಂಬ ಪ್ರೀತಿಯೂ ನನಗೆ ಕಲಿಸಿದೆ. ನಾನು ಒಳ್ಳೆಯ ಗೃಹಿಣಿಯಾಗಲು ಪ್ರೇರೇಪಿಸಿದೆ. ನನ್ನ ಅಪ್ಪ ನೀಡುವ ಧೈರ್ಯ, ತಪ್ಪನ್ನು ತಪ್ಪು ಎಂದು ಹೇಳುವ ಎದೆಗಾರಿಕೆ, ತಿದ್ದಿ ತಿಳಿಹೇಳುವ ವ್ಯಕ್ತಿತ್ವ, ಕರುಣೆ, ಪ್ರೀತಿ, ಅಂತಃಕರಣ ನಮ್ಮನ್ನೆಲ್ಲಾ ನೋಡಿಕೊಳ್ಳುವ ಪರಿ ಆಗೆ ಸದಾ ಮಾದರಿ. ನಾನು ನಿನ್ನಂತ ಅಪ್ಪ ಇಲ್ಲ ಎಂದು ಹೇಳಿಕೊಳ್ಳುತ್ತಾ ಮನೆಯಲ್ಲೇ ಓಡಾಡುತ್ತಿರುತ್ತೇನೆ. ಅಪ್ಪ ಯಾವಾಗಲೂ ಗ್ರೇಟ್. ನನಗೆ ಚಂದದ, ಅನುರೂಪದ ಬದುಕು ಕಟ್ಟಿಕೊಟ್ಟಿದ್ದಾರೆ. ನೆಮ್ಮದಿಯ ಜೀವನವನು ಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ.

ನಾನು ದೇವರಲ್ಲಿ ಕೇಳುವುದೊಂದೇ ನನಗೆ ಏಳೇಳು ಜನ್ಮಕ್ಕೂ ಇಂತಹ ಅಪ್ಪ ಸಿಗಲಿ. ಅವರ ನೆರಳಲ್ಲಿ ಬದುಕುವ ಸೌಭಾಗ್ಯ, ಪುಣ್ಯ ನನ್ನದಾಗಲಿ ಎಂದು. ಅವರು 'ಮಗಳೇ' ಎನ್ನುವ ಒಂದು ಪದ ಸಾಕು ನನಗೆ ನೆಮ್ಮದಿ, ಸ್ವಸ್ಥತೆ, ಆಪ್ತತೆ ದೊರಕಲು. ನನ್ನ ಅಪ್ಪನಿಗೆ ನೂರಾರು ವರ್ಷ ಆಯಸ್ಸನ್ನು ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಅಪ್ಪನ ಮಡಿಲಲ್ಲಿ ನನಗೆ ನೆಮ್ಮದಿಯಿಂದ ಬದುಕಲು ಪ್ರೀತಿ ನೀಡಲು. ಅಪ್ಪನ ವ್ಯಕ್ತಿತ್ವಕ್ಕೆ ಅವರೇ ಸಾಟಿ. ಹ್ಯಾಟ್ಸ್ ಆಫ್ ಅಪ್ಪಾ!. ಅದೇ ಕೇಳಿದ್ದೀರಲ್ಲ ಅಪ್ಪ.....ಅಪ್ಪಾ.... ಐ ಲವ್ ಯು ಪಾ.......... ಈ ಹಾಡಿಗೆ ಪ್ರತಿರೂಪ ನನ್ನ ಅಪ್ಪ!