ಜೀವನವೆಂಬ ಕಡಲು ಮತ್ತೆ ಮತ್ತೆ ತಂದು ಎಸೆಯುತ್ತಿರುವ ದಡದಲ್ಲಿ ನಿಂತು..,
ನನ್ನ ಕುಟುಂಬ ಮತ್ತು ಖಾಸಗಿ ಸುಖಗಳನ್ನೆಲ್ಲ ಒಂದು ಬದಿಗಿಟ್ಟು ಹಗಲಿರುಳೂ ಪತ್ರಿಕೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದ ನನ್ನ ಮನಸಿಗೆ ಸಂಪಾದಕರ ಆ ಹೆಗಲು ಜಾರಿಸಿಕೊಳ್ಳುವ ನಡವಳಿಕೆೆ ಶಾಕಿಂಗ್ ಆಗಿತ್ತು.

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ಇದೇ ಜುಲೈ 31ಕ್ಕೆ ನಾನು ವಿಧಾನಸೌಧದ ಉದ್ಯೋಗ ತೊರೆದು ಹೊರ ಬಂದು ಎಂಟು ವರ್ಷ ತುಂಬಿತು. ಎಂಟು ವರ್ಷಕ್ಕೆ ನನ್ನ ಮಗ ದಂಟು’ ಅನ್ನೋ ಗಾದೆ ನೆನಪಿಗೆ ಬಂತು.
“ಬುದ್ದಿ ಇರಲಿಲ್ವ , ತಿಂಗಳು ತುಂಬುವ ಐದಾರು ದಿನ ಮೊದಲೇ ಅಕೌಂಟಿಗೆ ಬಂದು ಬೀಳುವ ಸಂಬಳ, ಕ್ಯಾಲೆಂಡರಿನಲ್ಲಿ ಕೆಂಪು ಬಣ್ಣದ ಅಂಕಿಗಳ ಹಿಂದೆ ಮುಂದೆ ಒಂದೊಂದು ಸಿಎಲ್ ಹಾಕಿ ಸೂಟ್‌ಕೇಸಿಗೆ ಬಟ್ಟೆ ತುಂಬಿಕೊಂಡು ಊರೂರು ಸುತ್ತುತ್ತ, ಸುಖವಾಗಿದ್ದ ಸರ್ಕಾರಿ ಕೆಲಸ ಯಾಕೆ ಬಿಟ್ಟು ಬಂದೆ” ಅಂತ ಬೈಯ್ಯಬೇಡಿ, 2001ರ ಸೆಪ್ಟೆಂಬರ್ 27ರಿಂದ ಹದಿನಾರು ವರ್ಷಗಳನ್ನು ಅದು ಹೇಗೆ ಪೂರೈಸಿದೆನೋ ನನಗೇ ಅಚ್ಚರಿಯಾಗುತ್ತದೆ. ಇರಲಿ ಬಿಡಿ, ಅದಾಗಿ ಎಂಟು ವರ್ಷವೇ ಕಳೆದು ಹೋಯಿತು. 2017ರ ಏಪ್ರಿಲ್‌ನಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತೇನೆ ಅಂತ ಬರೆದುಕೊಟ್ಟು ಮೂರು ತಿಂಗಳು ರಜಾ ಹಾಕಿ, ಪತ್ರಿಕೆ ಪ್ರಕಟಿಸುವ ತಯಾರಿಯಲ್ಲಿ ತೊಡಗಿದ್ದೆ. ಪತ್ರಕರ್ತನ ವೃತ್ತಿ ತೊರೆದು 17 ವರ್ಷಗಳೇ ಆಗಿದ್ದರೂ ಎರಡು ಪುಸ್ತಕ ಬರೆದು, ಆಗಾಗ ಲೇಖನಗಳನ್ನು ಬರೆಯುತ್ತ ಕೀ ಬೋರ್ಡಿನ ಮೇಲೆ ಬೆರಳುಗಳನ್ನು ಸದಾ ಮಸೆದುಕೊಂಡೇ ಇದ್ದೆ. ಆದರೂ ವಿಧಾನಸೌಧದ ಎರಡನೇ ಮಹಡಿಯಲ್ಲಿದ್ದುಕೊಂಡು ಮೂರನೇ ಮಹಡಿಗೆ ಹೋಗಿ ಬರುತ್ತಿದ್ದ ಹಿರಿಯರು ಹಿತೈಷಿ ಅಂತ ಭಾವಿಸಿಕೊಂಡಿದ್ದ ದಿನೇಶ್ ಅಮೀನ್ ಮಟ್ಟು , “ಇದೆಲ್ಲ ಯಾಕ್ರೀ, ನೆಮ್ಮದಿಯಾಗಿ ಇರೋದು ಬಿಟ್ಟು”ಅಂತ ಹೇಳುತ್ತಲೇ ಇದ್ದರು. ಜೊತೆಗೆ “ನೋಡ್ರೀ, ಆರೇ ತಿಂಗಳಲ್ಲಿ ರಿಟೈರ್‌ಮೆಂಟ್ ದುಡ್ಡನ್ನು ಖಾಲಿ ಮಾಡಿ, ಮತ್ತೆ ನನ್ನ ಹತ್ರಾನೇ ಬಂದು ಯಾವುದಾದರೂ ಪೇಪರ್‌ನಲ್ಲೋ ಟೀವಿನಲ್ಲೋ ಕೆಲಸ ಕೊಡಿಸಿ ಅಂತ ಬರ‍್ತೀರಾ” ಅಂತಾನೂ ಹುಸಿ ಬೆದರಿಕೆ ಹಾಕಿದ್ದರು.
****
ಪದವಿ ಓದು ಮುಗಿಸಿ, ತುಮಕೂರಿಗೆ ಐದು ಮೈಲುಗಳಷ್ಟು ಹತ್ತಿರವಿರುವ ಕುಚ್ಚಂಗಿಯಲ್ಲಿ ಪೂರ್ವಜರು ಸಂಪಾದಿಸಿದ ಜಮೀನಿನಲ್ಲಿ ಮಾಡುತ್ತಿದ್ದ ಚೂರು ಪಾರು ಬೇಸಾಯ ತೊರೆದು ಬಂದು, 1988ರ ಜನವರಿ ತಿಂಗಳ ಕೊನೇ ದಿನಗಳಲ್ಲಿ ತುಮಕೂರಿನ ದಿನಪತ್ರಿಕೆಯೊಂದರಲ್ಲಿ ವರದಿಗಾರ ಅಂತ ಕೆಲಸ ಮಾಡತೊಡಗಿದ ದಿನಗಳು ನೆನಪಾದವು . ಆಗ ಅಚ್ಚು ಮೊಳೆ ಜೋಡಣೆಯ ಎರಡು ಪುಟಗಳ ಜಿಲ್ಲಾ ಮಟ್ಟದ ಪತ್ರಿಕೆಯಲ್ಲಿ ನನ್ನ ಪತ್ರಿಕಾ ವೃತ್ತಿ ಪ್ರಾರಂಭಗೊAಡಿತ್ತು. ಆ ಪತ್ರಿಕೆ ನನ್ನ ಜೀವನದ ಹೆಚ್ಚೂ ಕಮ್ಮಿ ಎಂಟು ವರ್ಷ ನನ್ನನ್ನು ಆವರಿಸಿಕೊಂಡು ಬಿಟ್ಟಿತು. ಎಷ್ಟರ ಮಟ್ಟಿಗೆ ಎಂದರೆ ಹಗಲು ಯಾವುದು ಇರುಳು ಯಾವುದು ಅಂತಾನೇ ಲೆಕ್ಕೆಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಸದಾ ಮನೆಯಿಂದ ಹೊರಗೇ, ರ‍್ರೆಂದು ಸೈಕಲ್ ತುಳಿಯುತ್ತ ಸಂಚರಿಸುತ್ತಿದ್ದ ನನ್ನನ್ನು ದೆವ್ವ ಅಂತ ಕರೆದವರೂ ಉಂಟು.
ಲೋಕಲ್ ಪೇಪರ್‌ಗಳಲ್ಲಿನ ಕೆಲಸವೇ ಹಾಗೆ, ಕೇವಲ ವರದಿಗಾರರಾಗಿ ಸುದ್ದಿಗೋಷ್ಟಿಗೋ ಸಮಾರಂಭಗಳಿಗೋ ಹೋಗಿ ಬಂದು ವರದಿ ಬರೆದಿಟ್ಟು ಮನೆಗೆ ಹೋಗುವ ರಾಜ್ಯ ಮಟ್ಟದ ದಿನಪತ್ರಿಕೆಗಳ ವರದಿಗಾರನಿಗೆ ದೊರಕುವ ಸುಖ, ವರದಿ ಬರೆಯುವ ಜೊತೆಗೆ ಕರಡು ತಿದ್ದುವ, ಕೆಲವೊಮ್ಮೆ ಮೊಳೆಯನ್ನೂ ಜೋಡಿಸಬೇಕಾಗಿ ಬರುವ ಜಿಲ್ಲಾ ಪತ್ರಿಕೆಯ ವರದಿಗಾರನಿಗೆ ದಕ್ಕುವುದಿಲ್ಲ. ಜೊತೆಗೆ ಆ ಪತ್ರಿಕೆಯನ್ನು ಸಮಗ್ರವಾಗಿ ಬೆಳೆಸುವ ನಿಟ್ಟಿನಲ್ಲಿ ನಾನೇ ನನ್ನ ಮೇಲೆ ಎಳೆದುಕೊಂಡ ಕೆಲಸಗಳು ನನ್ನ ವೈಯಕ್ತಿಕ ಬದುಕನ್ನು ನಾಶ ಮಾಡಿಬಿಟ್ಟವು.
“ ನೋಡಿ ಪ್ರಸನ್ನ, ಈ ಊರಲ್ಲಿ ಪತ್ರಿಕೆ ಮಾರಾಟ ಮಾಡಿ ಪತ್ರಿಕೆ ನಡೆಸೋದು ಆಗದ ಕೆಲಸ, ಜಾಬ್ ವರ್ಕ್ಗಳಲ್ಲಿ ಏನೂ ಉಳಿಯದೇ ಇದ್ದಾಗ, ನನ್ನ ವೈನ್ ಶಾಪಿಗೆ ಚೀಟಿ ಬರೆದುಕೊಡುತ್ತೇನೆ, ಹೋಗಿ ತಿಂಗಳ ಸಂಬಳ ಇಸಕೊಳ್ಳಿ, ಹೆಂಗೋ ಹಂಗೆ ನಡೆದುಕೊಂಡು ಹೋಗಲಿ , ಹೆಚ್ಚಿಗೆ ರಿಸ್ಕ್ ತೆಗೆದುಕೊಳ್ಳಬೇಡಿ” ಅಂತ ಮಠದ ಶಿಕ್ಷಕ ವೃತ್ತಿ ಮರೆತು, ಮದ್ಯದ ಅಂಗಡಿಗಳನ್ನು ನಡೆಸುತ್ತ, ಜಿಪಿಎ ಹಾಕಿಸಿಕೊಂಡು ಲೇಔಟ್‌ಗಳನ್ನು ಮಾಡುತ್ತ ಪ್ರೆಸ್ಸು ಮತ್ತು ಪತ್ರಿಕೆಯನ್ನೂ ನಡೆಸುತ್ತಿದ್ದ ಮಾಲೀಕ ಹೇಳಿದ್ದನ್ನು ಕೇಳುವ ವಯಸ್ಸು ಮತ್ತು ವ್ಯಾವಹಾರಿಕ ತಿಳುವಳಿಕೆ ಆಗ ನನ್ನದಾಗಿರಲಿಲ್ಲ. ಆತನೊಂದಿಗೆ ಎಂಟು ವರ್ಷ ಇದ್ದರೂ ಅಂತ ದಗಲಬಾಜಿ ಬುದ್ದಿಯನ್ನು ಕಲಿಯಲು ನನಗೆ ಇಷ್ಟವಾಗಲಿಲ್ಲ . ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡರು ಅನ್ನುತ್ತಾರಲ್ಲ ಅದಕ್ಕಿಂತ ಹೆಚ್ಚಾಗಿ ಮಸೀದಿ ಮೈಮೇಲೆ ಕೆಡವಿಕೊಳ್ಳಲೆಂದೇ ನಮಾಜು ಮಾಡಲು ಹೋದೆ ಎನ್ನುವ ಹಂಗಾಗಿಬಿಟ್ಟಿತು.
1994ರ ವಿಧಾನ ಸಭಾ ಚುನಾವಣೆ, ತುಮಕೂರು ಕ್ಷೇತ್ರದಲ್ಲಿ ಭಾರೀ ಹಣಾಹಣಿ ನಡೆದಿತ್ತು. ತುಮಕೂರು ಮತ್ತು ತುಮಕೂರು ಗ್ರಾಮಾಂತರ ಅಂತ ಆಗಿನ್ನೂ ಆಗಿರಲಿಲ್ಲ. ತುಮಕೂರು ನಗರದ ಜೊತೆಗೆ ಸುತ್ತಮುತ್ತಲ ಹಳ್ಳಿಗಳನ್ನೂ ಆ ಕ್ಷೇತ್ರ ಒಳಗೊಂಡಿತ್ತು. ನಮ್ಮೂರು ಕುಚ್ಚಂಗಿಯೇ ಆ ದಿಕ್ಕಿನಲ್ಲಿ ತುಮಕೂರು ವಿಧಾನ ಸಭಾ ಕ್ಷೇತ್ರದ ಗಡಿ, ಮುಂದಿನ ರಾಮಗೊಂಡನಹಳ್ಳಿ, ಚಿಕ್ಕ ತೊಟ್ಟಿಲುಕೆರೆ, ಮೆಳೆಹಳ್ಳಿ, ಬ್ರಹ್ಮಸಂದ್ರಗಳೆಲ್ಲ ಪಕ್ಕದ ಬೆಳ್ಳಾವಿ ಕ್ಷೇತ್ರಕ್ಕೆ ಲಗತ್ತಾಗಿದ್ದವು.
ತುರ್ತು ಪರಿಸ್ಥಿತಿ ವಿರೋಧಿಸಿ ಒಂದೂವರೆ ವರ್ಷ ಮೀಸಾ ಬಂದಿಯಾಗಿ ಜೈಲು ವಾಸ ಅನುಭವಿಸಿ ಬಂದಿದ್ದ ಕಟ್ಟಾ ಆರ್. ಎಸ್. ಎಸ್ ಕಾರ್ಯಕರ್ತ, ಸೊಗಡು ದಿನಪತ್ರಿಕೆಯ ಸಂಪಾದಕರೂ ಆಗಿದ್ದ ಸೊಗಡು ಶಿವಣ್ಣ ಎರಡನೇ ಸಲ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 1985ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 4252 ಓಟು ಪಡೆದಿದ್ದ ಶಿವಣ್ಣ ಈ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿಬಿಡುತ್ತೇನೆ ಅಂತ ಅಂದುಕೊಂಡಿರಲಿಲ್ಲ ಅನಿಸುತ್ತೆ. ಬೇಕಿದ್ದರೆ ಅವರನ್ನೇ ಅಥವಾ ಅವರ ಎಲೆಕ್ಷನ್ ಮ್ಯಾನೇಜರ್ ಅಗಿದ್ದ ಗಡ್ಡದ ಬಸವರಾಜು ಅವರನ್ನೇ ಕೇಳಿ ನೋಡಿ.( ಈಗ ಅವರು ಗಡ್ಡ ಬಿಟ್ಟಿಲ್ಲ ಅನ್ನೋದು ಬೇರೆ ವಿಚಾರ).
ಕ್ಯಾತಸಂದ್ರಕ್ಕೆ ಸಮೀಪದ ಚೌಡಯ್ಯನ ಪಾಳ್ಯ ಮೂಲದ, ಅಶೋಕ ರಸ್ತೆಯಲ್ಲಿ ಸಾವಿತ್ರಮ್ಮನ ಛತ್ರದ ಪಕ್ಕ ಜನತಾ ಪಕ್ಷದ ಕಚೇರಿ ಮುಂಭಾಗದ ಕಾಂಪ್ಲೆಕ್ಸ್ನಲ್ಲಿ ಕಮಲ ಎಲೆಕ್ಟ್ರಿಕಲ್ಸ್ ಅಂಗಡಿ ಇಟ್ಟುಕೊಂಡಿದ್ದ , ಲಚ್ಚಣ್ಣ ಅಂತಲೇ ಜನಪ್ರಿಯರಾಗಿದ್ದ ಲಕ್ಷ್ಮಿನರಸಿಂಹಯ್ಯನವರ ಎದುರು 1983ರಲ್ಲಿ ಸೋತಿದ್ದ, ನಂತರ 1985ರಲ್ಲಿ ಟಿಕೆಟ್ ದಕ್ಕಲಿಲ್ಲವಲ್ಲ ಎಂಬ ಅಸಮಾಧಾನದಿಂದ ಪಕ್ಷದ ಅಧಿಕೃತ ಅಭ್ಯರ್ಥಿ ಅಲಿಯಾ ಬೇಗಂ ಅವರನ್ನು ಸೋಲಿಸುವಲ್ಲಿ ಯಶಸ್ಸು ಕಂಡು, ಮತ್ತೆ 1989ರಲ್ಲಿ ಅದೇ ಲಚ್ಚಣ್ಣನವರ ಎದುರು ನಿಂತು ಗೆದ್ದು ಶಾಸಕರಾಗಿದ್ದ ಎಸ್.ಷಫಿ ಅಹ್ಮದ್ , ಸಿಟ್ಟಿಂಗ್ ಎಂಎಲ್‌ಎ ಎನ್ನುವ ಕಾರಣಕ್ಕೇ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಕಾಂಗ್ರೆಸ್ ಟಿಕೆಟ್ ದಕ್ಕಲಿಲ್ಲ ಎಂಬ ಕಾರಣಕ್ಕೆ ಷಫಿ ಅವರನ್ನು ಅವರನ್ನು ಸೋಲಿಸುವ ಸಲುವಾಗಿಯೇ ಕೆ.ಎನ್.ರಾಜಣ್ಣನವರು ಬಂಡಾಯ ಅಭ್ಯರ್ಥಿಯಾಗಿ ಎರಡು ಎಲೆ ಗುರುತಿನ ಮೇಲೆ ಕಣಕ್ಕಿಳಿದಿದ್ದರು. ಜನತಾ ದಳದಿಂದ ಲಚ್ಚಣ್ಣನವರೂ ಅಭ್ಯರ್ಥಿ.
ಆ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣನವರು 25,144 ಓಟುಗಳನ್ನು ಪಡೆದ ಪರಿಣಾಮ 29,997 ಓಟು ಗಳಿಸಿದ ಕಾಂಗ್ರೆಸ್ಸಿನ ಷಫಿ ಅಹ್ಮದ್ ಸೋತು ರನ್ನರ್ ಅಪ್ ಆದರು. 27,100 ಓಟಿಗೆ ಸೀಮಿತರಾದ ಮಾಜಿ ಸಚಿವ ಲಕ್ಷ್ಮೀ ನರಸಿಂಹಯ್ಯನವರು ನಿರಂತರ ಎರಡನೇ ಸಲ ಸೋಲು ಕಂಡರು. ಹಿಂದಿನ 1989ರ ಚುನಾವಣೆಯಲ್ಲಿ ಜನತಾ ದಳದ ಲಕ್ಷ್ಮೀನರಸಿಂಹಯ್ಯನವರ ಎದುರು ಕಾಂಗ್ರೆಸ್ಸಿನ ಷಫಿ ಅಹ್ಮದ್ ಗೆಲ್ಲಲು ಜನತಾ ಪಕ್ಷದ ಬಿ.ವಿಶ್ವಣ್ಣ ಕಣಕ್ಕಿಳಿದು 11,133 ಓಟು ಕಿತ್ತದ್ದು ಕಾರಣವಾಗಿತ್ತು. ಆ ಚುನಾವಣೆಯಲ್ಲಿ ಮಾಜಿ ಸಚಿವ ಲಚ್ಚಣ್ಣನವರು ಸೋತರೂ 39,646 ಓಟು ಪಡೆದಿದ್ದರು. ಆದರೆ ಐದು ವರ್ಷಗಳ ನಂತರ ನಡೆದ 1994ರ ಚುನಾವಣೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಪಡೆದಿದ್ದ ಓಟುಗಳಿಗಿಂತ 545 ಕಡಿಮೆ ಓಟು (39,101) ಪಡೆದ ಬಿಜೆಪಿಯ ಸೊಗಡು ಶಿವಣ್ಣ ಗೆದ್ದುಬಿಟ್ಟರು.
1989ರಲ್ಲಿ ಡಿಬಿಸನ್ ಎಲೆಕ್ಟಿçಕಲ್‌ನ ಅಡಕೆಲೆ ವಿಶ್ವಣ್ಣ ನಿಲ್ಲದೇ ಹೋಗಿದ್ದರೆ ಷಫಿ ಅಹ್ಮದ್ ಶಾಸಕರಾಗುತ್ತಿರಲಿಲ್ಲ, ಹಾಗಾಗಿ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಷಫಿ ಅಹ್ಮದ್‌ಗೆ ಸಿಟ್ಟಿಂಗ್ ಎಂಎಲ್‌ಎ ಎಂಬ ಲೆಕ್ಕದಲ್ಲಿ ಟಿಕೆಟ್ ಕೊಡುವ ಸಾಧ್ಯತೆಯೂ ಇರಲಿಲ್ಲ, ಆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಎರಡು ಎಲೆ ಹಿಡಿದು ಇವತ್ತಿನ ಸಹಕಾರ ಸಚಿವ ಕೆಎನ್‌ಆರ್ ನಿಲ್ಲದೇ ಹೋಗಿದ್ದರೆ ಸೊಗಡು ಶಿವಣ್ಣನವರು ಗೆಲ್ಲಲು ಸಾಧ್ಯವೇ ಆಗುತ್ತಿರಲಿಲ್ಲ. ಕೆ.ಎನ್.ರಾಜಣ್ಣನವರು ಕಾಂಗ್ರೆಸ್ ಬಂಡುಕೋರ ಅಭ್ಯರ್ಥಿಯಾಗಿ ನಾಮಿನೇಶನ್ ಮಾಡಿ ಸುಮ್ಮನೇ ಮನೆಯಲ್ಲಿ ಕೂರುವ ಬದಲು ಆ ಎರಡು ವಾರ ಕ್ಷೇತ್ರದಲ್ಲಿ ತುಸು ಅಡ್ಡಾಡಿಬಿಟ್ಟಿದ್ದರೆ ಅವತ್ತೇ ಅವರು ತುಮಕೂರಿನ ಶಾಸಕರಾಗಿ ಬಿಡುತ್ತಿದ್ದರು. ಆಮೇಲೂ ಅಷ್ಟೇ ನಾಲ್ಕು ಸಲ ಬ್ಯಾಕ್ ಟು ಬ್ಯಾಕ್ ತುಮಕೂರು ಶಾಸಕರಾಗಿ ಚುನಾಯಿತರಾದ ಸೊಗಡು ಶಿವಣ್ಣನವರು ಪಾರ್ಟಿ ಮುಖ ನೋಡದೇ ಯಡಿಯೂರಪ್ಪನವರ ಜೊತೆ ಕೆಜೆಪಿಗೆ ಹೋಗಿಬಿಟ್ಟಿದ್ದರೆ, ಜ್ಯೋತಿ ಗಣೇಶ್ ತುಮಕೂರಿನಿಂದ ಟಿಕೆಟ್ ಪಡೆಯುವ ಸಂದರ್ಭ ಸೃಷ್ಟಿಯಾಗುತ್ತಲೇ ಇರಲಿಲ್ಲ, ತೀರಾ ಅವರ ಡ್ಯಾಡಿಯ ಒತ್ತಾಯಕ್ಕೆ ಮಣಿದರೂ ಪಕ್ಕದ ಗುಬ್ಬಿಗೆ ಹೋಗಿ ನಿಂತಿರುತ್ತಿದ್ದರು. ಕೆಜೆಪಿ -ಬಿಜೆಪಿ ಓಟು ಹಂಚಿಕೆಯಿಂದಾಗಿ ತಾನೇ ಷಫಿ ಅಹ್ಮದ್ ಅಳಿಯ ಡಾ.ರಫೀಕ್ ಅಹ್ಮದ್ ಅವರಿಗೆ ಶಾಸಕರಾಗುವ ಭಾಗ್ಯ ದೊರಕಿಬಿಟ್ಟಿದ್ದು!
ಚುನಾವಣೆಗಳಲ್ಲಿನ ಸೋಲು ಗೆಲುವುಗಳೇ ಹಾಗೆ, ಹಾವು ಏಣಿಯಾಟ, ಯಾರ ಕಾಲನ್ನು ಯಾರು ಯಾವಾಗ ಎಳೆಯುತ್ತಾರೋ, ಯಾರು ಯಾಕಾಗಿ ಗೆದ್ದುಬಿಡುತ್ತಾರೋ ಅಂತಿಮವಾಗಿ ಕಣದಲ್ಲಿ ಉಳಿಯುವ ಉಮೇದುವಾರರ ಪಟ್ಟಿಯನ್ನು ನೋಡದೇ ಹೇಳಲು ಬರುವುದಿಲ್ಲ. ಹೀಗೆಲ್ಲ ಇತಿಹಾಸದಲ್ಲಿ ಸಂಭವಿಸುವುದೇ ನೆಪವಾಗಿ ಆಯಾ ಊರುಗಳ ಭವಿಷ್ಯವೂ ಯಾರೂ ಊಹಿಸಿರದ ತಿರುವುಗಳನ್ನು ತೆಗೆದುಕೊಂಡು ಬಿಡುತ್ತದೆ.
ಏನೋ ಹೇಳುತ್ತಿದ್ದೆ ಎಲ್ಲಿಗೋ ಹೋಗಿ ಬಿಟ್ಟೆ. ಆ 1994ರ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳ ಸಮೀಕ್ಷೆಯನ್ನು ನಾನು ಬರೆಯುತ್ತಿದ್ದೆ. ಕ್ಷೇತ್ರದಲ್ಲಿ ಸುತ್ತಾಡಿ ಬಂದ ಅನುಭವದ ಜೊತೆಗೆ ಸಂಪಾದಕರ ಸಲಹೆಗಳೂ ಸೇರಿ ಸಮೀಕ್ಷೆ ರೆಡಿಯಾಗುತ್ತಿತ್ತು. ಹಾಗೆ ಒಂದು ದಿನ ತುಮಕೂರು ವಿಧಾನ ಸಭಾ ಕ್ಷೇತ್ರದ ಸಮೀಕ್ಷೆ ಬರೆದು ಸಂಪಾದಕರ ಟೇಬಲ್ ಮೇಲಿನ ಫೈಲ್ ಫೋಲ್ಡರ್‌ನಲ್ಲಿ ಇರಿಸಿ ಹೊರಗೆ ಇನ್ನಾವುದೋ ಕ್ಷೇತ್ರಕ್ಕೆ ಹೋಗಿದ್ದೆ ಅಂತ ಅನಿಸುತ್ತೆ. ನನ್ನ ಬರಹ ಸಂಪಾದಕರ ಮೂಲಕ ಡಿಟಿಪಿಗೆ ಹೋಗಿತ್ತು. ಮರು ದಿನ ಆ ಸಮೀಕ್ಷೆ ಪ್ರಕಟವೂ ಆಯಿತು. ಅಂದು ಯಾವುದೋ ಕಾರಣಕ್ಕೆ ಆಫೀಸಿಗೆ ತುಸು ತಡವಾಗಿ ಬಂದೆ, ಕಚೇರಿಯಲ್ಲಿದ್ದವರು ನನ್ನನ್ನು ಕಂಡ ತಕ್ಷಣ “ಅಯ್ಯೋ ಪ್ರಸನ್ನೋರೆ, ನೀವು ಲೇಟಾಗಿ ಬಂದದ್ದೇ ಒಳ್ಳೇದಾಯಿತು, ನೀವು ದಿನಾ ಬಂದಂಗೆ ಒಂಬತ್ತು ಗಂಟೆಗೇ ಬಂದಿದ್ದರೆ ನಿಮಗೆ ತೊಂದರೆ ಆಗ್ತಿತ್ತು “ ಅಂತ ಅಂದರು.
ಏನು ನಡೀತು ಅಂತ ಕೇಳಿದೆ. ಏನಿಲ್ಲ ಸಂಪಾದಕರು ಕುಂತಿದ್ದರು, ಆ ಗಡ್ಡದ ಬಸವರಾಜು ಅವರಲ್ಲ ಸೀದಾ ಕೂಗಾಡಿಕೊಂಡು ಬಂದವರೇ ಟೇಬಲ್ ಮೇಲಿನ ಪೇಪರ್ , ಟ್ರೇ ಎಲ್ಲ ಎಳೆದಾಕಿ ಗದ್ದಲ ಮಾಡಿದ್ರು. ಆಗ ಸಂಪಾದಕರು “ ಪ್ರಸನ್ನ ಬರಲಿ, ಕೇಳೋಣ “ ಅಂತ ಹೇಳಿದ್ದು ಮಾತ್ರ ಕೇಳಿಸಿತು”. ಅದೇನೋ ಸೊಗಡು ಶಿವಣ್ಣನೋರ ಬಗ್ಗೆ ನೆಗೆಟಿವ್ ಬರಿದಿದ್ದೀರಂತೆ” ಅಂತ ವಿವರಿಸಿದರು.
ಒಂಚೂರು ದಪ್ಪನಾಗಿ ಅರ್ಥವಾಯಿತು, ತಕ್ಷಣ ಒಳಗೆ ಹೋಗಿ ಸತ್ಯಮೂರ್ತಿ ಹಾಗೂ ವಿಶಾಲ ಡಿಟಿಪಿ ಮಾಡುತ್ತಿದ್ದ ಅಟ್ಟ ಹತ್ತಿ, ಬಫ್ ನ್ಯೂಸ್ ಪ್ರಿಂಟಿನ ಒನ್ ಸೈಡ್ ಹಾಳೆಯಲ್ಲಿ ನಾನು ಬರೆದಿದ್ದ ಸಮೀಕ್ಷೆ ಹುಡುಕಿ ತೆಗೆದು ನೋಡಿದೆ. ನಾನು ರೆನಾಲ್ಡ್÷್ಸ ಪೆನ್ನಿನಲ್ಲಿ ಬರೆದಿದ್ದೆ, ಅದರ ನಡುವೆ ಸಂಪಾದಕರು ತಮ್ಮ ಇಂಕ್ ಪೆನ್ನಿನಲ್ಲಿ ಒಂದು ಸಾಲು ಬರೆದು ಸೇರಿಸಿದ್ದರು. ಹಾಗೆ ಬರೆಯಲು ಅವರ ಅವತ್ತಿನ ಒಳ ಆಶಯ ಒಳ್ಳೆಯದೇ ಇತ್ತಾದರೂ, ಬರೆದು ಹೆಚ್ಚು ರೂಡಿ ಇಲ್ಲದ ಅವರು ಅವರು ಬರೆದದ್ದು ಮಾತ್ರ ಸೊಗಡು ಶಿವಣ್ಣನವರ ಮನಸ್ಸಿಗೆ ಘಾಸಿ ಮಾಡಿಬಿಟ್ಟಿತ್ತು. ಹಾಗಾಗಿ ಅವರ ಎಲೆಕ್ಷನ್ ಮ್ಯಾನೇಜರ್ ಆಗಿದ್ದ ಗಡ್ಡದ ಬಸವರಾಜು ಪತ್ರಿಕಾ ಕಚೇರಿಗೆ ಬಂದು ಗದ್ದಲ ಮಾಡುವಂತೆ ಮಾಡಿಬಿಟ್ಟಿತ್ತು. ಹಂಗೆ ನೋಡಿದರೆ, ಅವರೆಲ್ಲ ಒಂದೇ ಹಕ್ಕಿಯ ರೆಕ್ಕೆ ಪುಕ್ಕಗಳಂತಿದ್ದವರು.
ಅದಿರಲಿ, ಆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸೊಗಡು ಶಿವಣ್ಣನವರು ತುಮಕೂರನ್ನು ಬಿಜೆಪಿಗೆ ಖಾಯಂ ಎನ್ನುವಂತೆ ಮಾಡಿಕೊಟ್ಟರು. ಶಿವಣ್ಣನವರು ಗೆಲ್ಲದೇ ಹೋಗಿದ್ದರೆ ನಾನು ಬಹು ದೊಡ್ಡ ವಿಲನ್ ಆಗಿಬಿಡುತ್ತಿದ್ದೆ. ಹಾಗೆ ವಿಲನ್ ಆಗಿಬಿಟ್ಟಿದ್ದರೆ ನಿನ್ನೆ ಸುಧಾ ಟೀ ಹೌಸ್‌ನಲ್ಲಿ ಸುದ್ದಿ ಗೋಷ್ಟಿ ಮುಗಿದ ಬಳಿಕ ಕೆಳಗೆ ಅದೂ ಇದೂ ಮಾತನಾಡುತ್ತ ನಿಂತಿದ್ದಾಗ, ಮಣ್ಣೆರಾಜು ಅದೇನೋ ಹೇಳಿದಾಗ, ಇದೇ ಸೊಗಡು ಶಿವಣ್ಣನವರು, “ ಅಲ್ವೇನೋ ಸಾಹೇಬ” ಅಂತ ಹೇಳಿ ನನ್ನ ಗಲ್ಲ ಸವರುತ್ತಿರಲಿಲ್ಲ.
ಆದರೆ, ಪತ್ರಿಕಾ ವೃತ್ತಿಯ ನನ್ನ ಜೀವಿತದ ಉಸಿರು ಅಂತ ಪರಿಭಾವಿಸಿಕೊಂಡಿದ್ದ ನನಗೆ, ಅವತ್ತು 31 ವರ್ಷಗಳ ಹಿಂದೆ ಆ ಚುನಾವಣಾ ಸಮೀಕ್ಷೆಗೆ ನನ್ನ ಹೆಸರನ್ನೇನೂ ಹಾಕಿರಲಿಲ್ಲವಾದರೂ ಆ ಸಂಪಾದಕರು ತಮ್ಮ ತಲೆಯ ಮೇಲಿನ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ಸಲುವಾಗಿ ಆಗ ನನ್ನ ಹೆಸರು ಹೇಳಬಾರದಿತ್ತು ಅಂತ ಅನ್ನಿಸಿತು. ಪತ್ರಿಕೆಯ ಯಾವುದೇ ಸಿಬ್ಬಂದಿ ಏನನ್ನೇ ಬರೆದರೂ ಅಂತಿಮವಾಗಿ ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿಯೂ ಸಂಪಾದಕನೇ ಹೊಣೆ . ಅದು ಪತ್ರಿಕಾ ವೃತ್ತಿಯ ನಿಯಮ. ಅವರಿಗೆ ತೋರಿಸದೇ ನಾನೇ ನನಗನ್ನಿಸಿದ್ದನ್ನೆಲ್ಲ ಬರೆದು ನೇರ ಡಿಟಿಪಿಗೆ ಕೊಟ್ಟು ಅದು ಹಾಗೇ ಪತ್ರಿಕೆಯಲ್ಲಿ ಪ್ರಕಟಗೊಂಡು ಬಿಟ್ಟಿದ್ದರೆ ಅದು ಬೇರೆ ಮಾತಾಗಿರುತ್ತಿತ್ತು. ನನ್ನ ಕುಟುಂಬ ಮತ್ತು ಖಾಸಗಿ ಸುಖಗಳನ್ನೆಲ್ಲ ಒಂದು ಬದಿಗಿಟ್ಟು ಹಗಲಿರುಳೂ ಪತ್ರಿಕೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದ ನನ್ನ ಮನಸಿಗೆ ಸಂಪಾದಕರ ಆ ಹೆಗಲು ಜಾರಿಸಿಕೊಳ್ಳುವ ನಡವಳಿಕೆೆ ಶಾಕಿಂಗ್ ಆಗಿತ್ತು. ಹಾಗಾಗಿ ಅಲ್ಲಿಂದ ಹೊರನಡೆಯುವ ನಿರ್ಧಾರ ತೆಗೆದುಕೊಂಡೆ. ಕೆಲಸ ಬಿಡಲು ಕಾರಣವೇನು ಅಂತ ಹೇಳದೇ ಜೂನ್ 30ರ ನಂತರ ಕೆಲಸಕ್ಕೆ ಬರಲ್ಲ ಅಂತ ಹೇಳಿಬಿಟ್ಟೆ. ಒಂದು ಪ್ರೆಸ್ ಹಾಕುವುದು, ಆಮೇಲೆ ಪತ್ರಿಕೆ ಗಿತ್ರಿಕೆ ಮಾಡೋದು ಅಂತ ಅಂದುಕೊಂಡು ಹೊರಟೆ.
1995ರ ಜುಲೈನಲ್ಲಿ ಚಿಕ್ಕಪೇಟೆಯಲ್ಲಿ ಸ್ವಂತದ “ಅಮೂಲ್ಯ ಪ್ರೆಸ್” ಉದ್ಘಾಟನೆಯೂ ಆಯಿತು. ನವೆಂಬರ್-ಡಿಸೆಂಬರ್ ಹೊತ್ತಿಗೆ “ ಸುದ್ದಿ ಆಮೂಲ್ಯ” ವಾರಪತ್ರಿಕೆಯೂ ಹೊರ ಬಂತು. ಆಗ, ಪ್ರಿಂಟ್ ಮೀಡಿಯಾ ಬಿಟ್ಟರೆ ಸ್ಥಳೀಯ ಸುದ್ದಿಗಳಿಗೆ ಇವತ್ತಿನಂತೆ ಫೇಸ್ ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ, ಟೆಲಿಗ್ರಾಂ, ಇಮೇಲ್, ವೆಬ್ ಸೈಟ್ , ವೆಬ್ ಪೋರ್ಟಲ್, ಡಾಟ್ ಕಾಮ್ ಇತ್ಯಾದಿಗಳೆಲ್ಲ ಇರಲಿಲ್ಲ. ಒಂದು ಸಿಂಗಲ್ ಕಾಲಂ ಸುದ್ದಿಯೇ ತುಮಕೂರೆಂಬ ಪುಟ್ಟ ಊರನ್ನು ವಾರ ಪೂರ್ತಿ ಎಂಗೇಜ್ ಆಗಿ ಇಟ್ಟುಬಿಡುತ್ತಿತ್ತು.
1996ರ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ನಡೆಯಿತು. ‘ ಸುದ್ದಿ ಅಮೂಲ್ಯ’ ವಾರಪತ್ರಿಕೆಯಿಂದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ “ ಲೋಕ ಸಭೆ- ಜನಸಂವಾದ 1996” ಅಂತ ಹಾಲಿ, ಮಾಜಿ ಸಂಸದರು ಹಾಗೂ ಆಕಾಂಕ್ಷಿಗಳನ್ನೆಲ್ಲ ಸೇರಿಸಿದ್ದೆ. ರಂಗಮಂದಿರದಲ್ಲಿ ಸೇರಿದ್ದ ನೂರಾರು ಜನರಿಗೆ ಅಂಗೈಯಗಲದ ಕಜ್ಜಾಯ ಮಾಡಿಸಿ ತಿನ್ನಲು ಕೊಟ್ಟಿದ್ದೆ.
ತುಮಕೂರಿಗೇ ಫಸ್ಟ್ ಆಫ್ ಇಟ್ಸ್ ಕೈಂಡ್ ಆಗಿದ್ದ ಆ ಜನ ಸಂವಾದವನ್ನು ‘ ಸುದ್ದಿ ಅಮೂಲ್ಯ’ ಪರವಾಗಿ ಆಗ ತುಮಕೂರಿನಲ್ಲಿ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ವರದಿಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಹಾಗೂ ಇವತ್ತಿಗೂ ಜನಪರ ಹೋರಾಟದಲ್ಲಿ ತೊಡಗಿರುವ ವಿಚಾರವಾದಿ ಹಾಗೂ ಕಾಳಿದಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಸಿ.ಯತಿರಾಜು ವೇದಿಕೆಯಲ್ಲಿದ್ದು ನಡೆಸಿಕೊಟ್ಟಿದ್ದರು. ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಆಗಿದ್ದ ದಿವಂಗತ ಎಸ್. ಮಲ್ಲಿಕಾರ್ಜುನಯ್ಯ ಜನರ ತೀಕ್ಷ್ಣ ಪ್ರಶ್ನೆಗಳಿಗೆ ಸಮಾಧಾನ ಹೇಳಲಾಗದೇ ಅರ್ಧಕ್ಕೇ ಎದ್ದು ನಾನು ಡೆಲ್ಲಿಗೆ ಹೋಗಬೇಕಿದೆ ಅಂತ ಹೊರಟು ಹೋದರು. ಅಷ್ಟೊತ್ತಿಗಾಗಲೇ ಕಾಂಗ್ರೆಸ್‌ನಿಂದ ಎರಡು ಸಲ ಎಂಪಿ ಆಗಿದ್ದ ಜಿ.ಎಸ್. ಬಸವರಾಜು ಟಿಕೆಟ್ ಪಡೆಯುವ ಒದ್ದಾಟದಲ್ಲಿ ಸಂವಾದಕ್ಕೆ ಬಂದಿರಲಿಲ್ಲ. ಅವತ್ತಿನ ಎಂಪಿ ಟಿಕೆಟ್ ತಮಗೆ ದೊರಕುತ್ತದೆ ಎಂಬುದೇ ಗೊತ್ತಿಲ್ಲದ ಜನತಾ ದಳದ ದಿವಂಗತ ಸಿ.ಎನ್.ಭಾಸ್ಕರಪ್ಪ ಆ ಚುನಾವಣೆಯಲ್ಲಿ ಗೆದ್ದುಬಿಟ್ಟರು. ಮನದೊಳಗೇ ಎಂಪಿ ಟಿಕೆಟ್ ಪಡೆಯುವ ಹಂಬಲ ಇರಿಸಿಕೊಂಡಿದ್ದ ಜೆ.ಸಿ.ಮಾಧುಸ್ವಾಮಿ ವೇದಿಕೆಯಲ್ಲಿದ್ದರು. ಲಚ್ಚಣ್ಣನವರು ನನಗೆ ಟಿಕೆಟ್ ಕೊಡುವುದಾದರೆ ಚಿಕ್ಕಬಳ್ಳಾಪುರ ಓಕೆ ಅಂತ ಹೇಳಿದರು.
ಅ ಸಲ ಕಾಂಗ್ರೆಸ್ ಟಿಕೆಟ್ ಜಿ.ಎಸ್. ಬಸವರಾಜು ಅವರಿಗೆ ದಕ್ಕಲಿಲ್ಲ, ಯುವ ಕಾಂಗ್ರೆಸ್ ಕೋಟಾ ಹೆಸರಲ್ಲಿ ಚಿತ್ರದುರ್ಗ ಜಿಲ್ಲೆಯ ಆರ್.ಮಂಜುನಾಥ್ ತುಮಕೂರಿಗೆ ಅಭ್ಯರ್ಥಿಯಾಗಿ ಬಂದಿಳಿದರು. ಟಿಕೆಟ್ ವಂಚಿತ ಮಾಜಿ ಸಂಸದ ಜಿ.ಎಸ್. ಬಸವರಾಜು ಒಳಶುಂಟಿ ಎಷ್ಟು ತೀವ್ರವಾಗಿತ್ತಪ್ಪಾ ಅಂದರೆ ಪೋಲಿಂಗ್ ಶುರುವಾಗುವ ಒಂದು ಗಂಟೆ ಮೊದಲೇ ಮಂಜುನಾಥ್ ಬೆಂಗಳೂರು ಎಲ್ಲಿದೆ ಅಂತ ಹುಡುಕತೊಡಗಿದ್ದರು. ನೇಗಿಲ ಗುರುತಿನೊಂದಿಗೆ ಸಮಾಜವಾದಿ ಪಕ್ಷದಿಂದ ದಿವಂಗತ ವೈ.ಕೆ.ರಾಮಯ್ಯನವರೂ ಕಣದಲ್ಲಿದ್ದರು.
ಆಗ ‘ಸುದ್ದಿ ಅಮೂಲ್ಯ’ ವಾರಪತ್ರಿಕೆಯಲ್ಲಿ ನಮ್ಮ ಎಸ್.ಜಿ. ಸಿದ್ದರಾಮಯ್ಯನವರ ವೈದ್ಯ ಸೋದರ ರಮೇಶ್ ಸಿಂಗಾಪುರ ಅವರಿಂದ ಬರೆಸಿದ್ದ ಚುನಾವಣೆಯ ಸಾಂಕೇತಿಕ ಚಿತ್ರದ ರೀತಿಯಲ್ಲೇ ಫಲಿತಾಂಶವೂ ಹೊರಬಂತು.
ಎಂಜಿ ರಸ್ತೆಯಲ್ಲಿ ದ್ವಾರಕ ಹೊಟೆಲ್ ಎದುರು ಕಣ್ಣೆದುರೇ ಪುಟ್ಟದೊಂದು ಜಗಳ ನಡೆದರೂ ‘ ಇದು ನಿಜವೇ?! ಅಂತ ಸುದ್ದಿ ಬರೆಯುತ್ತಿದ್ದ ದಿವಂಗತ ಗುಂಡುರಾಯರ ಪುಟ್ಟ ‘ ವಿಜಯ ವಾಣಿ’, ಹೆಸರಿಗೆ ದಿನಪತ್ರಿಕೆಯಾದರೂ ವಾರದ ಹಿಂದಿನ ಸುದ್ದಿಗಳನ್ನು ಪ್ರಕಟಿಸುತ್ತಿದ್ದ ದಿವಂಗತ ಹೆಬ್ಬೂರು ರಾಮಣ್ಣನವರ ‘ ತುಮಕೂರು ವಾರ್ತೆ’ ಮತ್ತು ದಿವಂಗತ ಸಿ.ಎನ್. ಭಾಸ್ಕರಪ್ಪನವರು ಸಂಸ್ಥಾಪಕ ಸಂಪಾದಕರಾಗಿ ವಾರಪತ್ರಿಕೆಯಾಗಿ ಪ್ರಾರಂಭಿಸಿ, ನಡೆಸುತ್ತಿದ್ದ ನನ್ನ ಮಾಜಿ ಪತ್ರಿಕೆಗಳ ಮುಂದೆ ‘ ಸುದ್ದಿ ಅಮೂಲ್ಯ’ ಡೇರ್ ಡೆವಿಲ್ ಮುಸ್ತಾಫದಂತಿತ್ತು. ಹೆಚ್ಚೂ ಕಮ್ಮಿ 24 ಸಂಚಿಕೆ ಪ್ರಕಟವಾಗಿದ್ದವು. 1996ರ ಜುಲೈ 14ರ ಬೆಳಗಿನ ಜಾವ ಕುಚ್ಚಂಗಿಯ ನಮ್ಮ ತೋಟದ ಮನೆಯಲ್ಲಿ ನಡೆದ ದರೋಡೆಯೇ ನೆಪವಾಗಿ ‘ ಸುದ್ದಿ ಅಮೂಲ್ಯ’ ಸ್ಥಗಿತಗೊಂಡಿತು.
“ ನೀನು ಯಾರನ್ನೂ ಕೇರು ಮಾಡಲ್ಲ, ಮಂತ್ರಿ, ಎಂಎಲ್‌ಎ, ಡಿಸಿ,ಎಸ್‌ಪಿ ಅಂತ ನೋಡಲ್ಲ, ಎಲ್ಲಾರ ಮೇಲೂ ಏನೇನೋ ಬರೆದುಬಿಡ್ತೀಯಾ, ಸದ್ಯ ಅವರು ನಮ್ಮ ಜೀವ ಉಳಿಸಿ ಹೋಗಿದ್ದಾರೆ, ಬೇಡಪ್ಪಾ ನೀನು ಪೇಪರ್ ಮಾಡಬೇಡ, ಹಂಗೆ ಮಾಡಲೇಬೇಕು ಅಂದರೆ ಬೆಂಗಳೂರಿಗೆ ಹೋಗಿ ಬಿಡು” ಎಂಬ ಕುಟುಂಬದವರ ಒತ್ತಾಯವೂ ಪತ್ರಿಕೆ ನಿಲ್ಲಿಸಲು ಒಂದು ಕಾರಣವಾಯಿತು. ಆಗಲೂ ಮತ್ತು ಈಗಲೂ ಕಾಸು ಮಾಡಲು ಹೆಚ್ಚು ಆದ್ಯತೆ ಕೊಡದ ನನ್ನೊಳಗೆ , “ಏಕೆ ಹೀಗಾಯಿತು, ಎಲ್ಲಿ ತಪ್ಪಿ ನಡೆದೆ”ಎಂಬ ಕೊರಗು ತುಂಬಿಕೊಂಡಿತು. ಕಡೆಗೆ ಪ್ರೆಸ್ ಮಾರಿದೆ, ಬ್ಯಾಂಕ್ ಸಾಲ ತೀರಿಸಿದೆ. ಅಲ್ಲಿ ಇಲ್ಲಿ ಕೆಲಸ ಮಾಡಲು ಮನಸ್ಸು ಸಮಾಧಾನ ಕೊಡಲಿಲ್ಲ. ಮತ್ತೆ ಚೇತರಿಸಿಕೊಳ್ಳಲು ವರ್ಷಗಳೇ ಹಿಡಿದವು.
1998ರ ಜನವರಿಯಲ್ಲಿ ಬೆಂಗಳೂರಿನ ಸಪ್ನ ಬುಕ್ ಹೌಸಿನಲ್ಲಿ ಕೆಲ ತಿಂಗಳು ಸಂಪಾದಕ, ನಂತರ ಹಾಸನದ ಜನತಾ ಮಾಧ್ಯಮದಲ್ಲಿ ಉಪ ಸಂಪಾದಕ, ಕಡೆಗೆ ಡಿಸೆಂಬರ್ ಕೊನೇ ವಾರದ ಹೊತ್ತಿಗೆ ಆಗ ತಾನೇ ಶುರುವಾಗಿದ್ದ ʼ ಜನವಾಹಿನಿ “ ಎಂಬ ಈಗ ನಿಂತುಹೋಗಿರುವ ರಾಜ್ಯಮಟ್ಟದ ದಿನಪತ್ರಿಕೆಯ ಬೆಂಗಳೂರು ಬ್ಯೂರೋದಲ್ಲಿ ವರದಿಗಾರ ಕಂ ಉಪ ಸಂಪಾದಕ ಅಂತ ನೇಮಕಗೊಂಡು ನಿಟ್ಟುಸಿರು ಬಿಟ್ಟೆ.
ಮತ್ತೆ ನಾಲ್ಕು ವರ್ಷ ತುಂಬುವ ಮೊದಲೇ ಹಿಂದೆಂದೋ ಬರೆದಿದ್ದ ಕೆಪಿಎಸ್ಸಿ ಪರೀಕ್ಷೆ ರಿಸಲ್ಟ್ ಬಂದು ವಿಧಾನ ಸೌಧದಲ್ಲಿ ಸರ್ಕಾರಿ ನೌಕರಿ ದಕ್ಕಿತು. ನಾವು ಅಣ್ಣ ಅಂತ ಕರೆಯುತ್ತಿದ್ದ ನಮ್ಮ ಅಪ್ಪನೂ ವಿಧಾನ ಸೌಧದಲ್ಲಿ 25 ವರ್ಷ ಜೀವ ಸವೆಸಿದವರೇ. ಅದರ ಅನುಭವವೂ ಆಗಲಿ ಅಂತ ಮುಂದಡಿ ಇಟ್ಟೆ. ಅಲ್ಲಿ ಹದಿನಾರು ವರ್ಷ ಹಾಗೂ ಹೀಗೂ ಕಾಲ ತಳ್ಳಿ, ಸ್ವಯಂ ನಿವೃತ್ತಿ ಪಡೆಯಲು ಅವಕಾಶ ಸಿಕ್ಕಿದ ಮೇಲೆ, ಇದೀಗ ಮತ್ತೆ ಪತ್ರಕರ್ತನಾಗಿ , ‘ ಬೆವರ ಹನಿ’ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕನಾಗಿ ಎಂಟು ವರ್ಷಗಳಿಂದ ನಿಮ್ಮ ಮುಂದೆ ಹಾಜರಾಗಿದ್ದೇನೆ. ಅಲೆಗಳ ಮೇಲೆ ತೇಲುವ ತರಗೆಲೆಯಂತಿರುವ ನನ್ನನ್ನು ಜೀವನವೆಂಬ ಕಡಲು ಮತ್ತೆ ಮತ್ತೆ ಪತ್ರಿಕಾ ವೃತ್ತಿಯೆಂಬ ದಡಕ್ಕೆ ತಂದು ಎಸೆದಿದೆ.
****
ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ʼಮೈತ್ರೇಯ ಬುದ್ಧ ಪ್ರೆಸ್ʼ ಎಂಬ ಪುಟ್ಟದೊಂದು ಸ್ವಂತದ ಬಣ್ಣದ ಆಫ್ ಸೆಟ್ ಪ್ರೆಸ್ ಸ್ಥಾಪಿಸಿದ್ದು ಅಲ್ಲ್ಲಿ ಪತ್ರಿಕೆ ದಿನವೂ ಬಣ್ಣದಲ್ಲಿ ಮುದ್ರಣವಾಗುತ್ತಿದೆ.
1988ರಲ್ಲಿ ವರದಿಗಾರನಾಗಿ ಆರಂಭಿಸಿದ ಪತ್ರಿಕಾ ವೃತ್ತಿಯಲ್ಲಿ ಇದ್ದ ಮತ್ತು ಅದಕ್ಕಿಂತ ಹೆಚ್ಚಿನ ಕಮಿಟ್‌ಮೆಂಟ್, ಜನಪರ ಜಾತ್ಯತೀತ ನಿಲುವು, ಸಾಮಾಜಿಕ ಕಳಕಳಿ, ರಾಜಕೀಯ ಎಚ್ಚರ, ಸಾಂಸ್ಕೃತಿಕ ಒಲವುಗಳನ್ನು ಈ ನಿಮ್ಮ ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆಯಲ್ಲಿ ನೀವು ಕಾಣುತ್ತಿದ್ದೀರಿ. ನನಗಿಂತ ಹೆಚ್ಚಿನ ಶ್ರದ್ಧೆ, ಬದ್ದತೆ ಮತ್ತು ಪ್ರೀತಿಯಿಂದ ಪತ್ರಿಕೆ ಹಾಗೂ ಪ್ರೆಸ್ ಸಿಬ್ಬಂದಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಕಾಲೆಳೆಯುವವರು ಇದ್ದೇ ಇರುತ್ತಾರೆ.
ಕುಟುಂಬದ ಸದಸ್ಯರು, ಗೆಳೆಯರು, ಹಿತೈಷಿಗಳು ಪತ್ರಿಕೆಯನ್ನು ಪೊರೆದಿದ್ದಾರೆ. ತೀರಾ ನಷ್ಟವೂ ಅಲ್ಲದ ಲಾಭಕ್ಕೂ ಬಾರದ ಪರಿಸ್ಥಿತಿಯಲ್ಲಿ ಪತ್ರಿಕೆ ಉಳಿದು ಬೆಳೆಯುತ್ತಿದೆ. ನೀವೆಲ್ಲ ಇದ್ದೀರಲ್ಲ. ಇಷ್ಟು ಕಷ್ಟದ ಪರಿಸ್ಥಿತಿಯಲ್ಲಿದ್ದರೂ ಕೋಟಿ ಗಟ್ಟಲೆ ಲಾಭದಲ್ಲಿರುವ ನನ್ನ ‘ಮಾಮಾ’ ಅಂದರೆ ಮಾಜಿ ಮಾಲೀಕರು ಬಂದವರ ಎದುರು ಗೊಳೋ ಅನ್ನುತ್ತಾರಲ್ಲ ಹಂಗೆ ಗೋಳು ತೋಡಿಕೊಳ್ಳಲು ನನಗೆ ಇಷ್ಟವಾಗುವುದಿಲ್ಲ. ಅವರಂತೆ ಜಾಹಿರಾತಿಗಾಗಿ ದುಂಬಾಲು ಬೀಳುವವನಲ್ಲ ನಾನು, ಅವರಂತೆ, ನೋಡಿ ಈ ಪುಟಗೋಸಿ ಅಗಲದ ಪೇಪರ್‌ಗಳಿಗೆಲ್ಲ ಯಾಕೆ ಜಾಹಿರಾತು ಕೊಡುತ್ತೀರಿ, ಅಂತ ಇತರ ಸಹ ಪತ್ರಿಕೆಗಳಿಗೆ ತೊಂದರೆ ಕೊಡುವುದೂ ಇಲ್ಲ. ಕರೆಯದೇ ಇದ್ದರೂ ಸಿಕ್ಕ ಸಿಕ್ಕ ವೇದಿಕೆ ಹತ್ತಿ ಹಲ್ಲುಗಿಂಜಿ ಪ್ಲಾಸ್ಟಿಕ್ ಮಣಿಹಾರ, ತಗಡು ಪೇಟ ಮತ್ತು ನೂರು ರುಪಾಯಿ ಶಾಲು ಹಾಕಿಸಿಕೊಳ್ಳುವುದಿಲ್ಲ .
ಆದರೆ ಅವರೆಲ್ಲರಿಗಿಂತ ಚೆನ್ನಾದ ಜನಪರ ವರದಿಯನ್ನು ಪ್ರಕಟಿಸುತ್ತಿದ್ದೇನೆ. ಜನರಿಗೆ ತೊಂದರೆಯಾದಾಗ ನಿಷ್ಟುರವಾದ ವರದಿಗಳನ್ನು ಬರೆದು ಪ್ರಕಟಿಸಿ ಚೂರು ಪಾರು ಜಾಹಿರಾತು ನೀಡುತ್ತಿದ್ದವರನ್ನೂ ಕಳೆದುಕೊಂಡಿದ್ದೇನೆ. ಇದು ನನ್ನ ಶಕ್ತಿ ಮತ್ತು ದೌರ್ಬಲ್ಯ ಎರಡೂ. ಆದರೂ ನೀವೆಲ್ಲರೂ, ನನ್ನ ಬಗ್ಗೆ ಒಳಗೊಳಗೇ ಗೊಣಗಿಕೊಂಡರೂ ನನ್ನ ಪತ್ರಿಕಾ ವೃತ್ತಿಯನ್ನು ಮೆಚ್ಚಿಕೊಂಡಿದ್ದೀರಿ. ʼ ಬೆವರ ಹನಿʼ ದಿನಪತ್ರಿಕೆಯ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತು ಹರಸಿದ್ದೀರಿ. ಎಂಟು ವರ್ಷ ಪೂರೈಸುವ ಗಳಿಗೆಯಲ್ಲಿ ಹಿಂಗೆ ಒಂದು ಸಲ ಬೆಟ್ಟ ಹತ್ತಿ ಒಂದಷ್ಟು ದೂರ ಕಡಿದಾದ ಮೆಟ್ಟಿಲುಗಳನ್ನು ಹತ್ತಿ ನಿಂತು, ಬಂದ ಹಾದಿಯನ್ನೊಮ್ಮೆ ಹಿಂದಿರುಗಿ ನೋಡದಿದ್ದರೆ ಹೇಗೆ, ಅಂತ ಅಷ್ಟೇ.