ಬಹುತ್ವ, ಜಾತ್ಯತೀತತೆ ಪ್ರಜಾಸತ್ತೆಗಳ ತವರು ನೆಲ - ತಿಪಟೂರು ಸೀಮೆ
ಹೋದ ವಾರ ತಿಪಟೂರು ತಾಲೂಕು ಸಾಹಿತ್ಯ ಸಮ್ಮೆಳನವನ್ನು ಹೆಸರಾಂತ ಬರಹಗಾರ , ಚಿಂತಕ ಎಸ್.ನಟರಾಜ ಬೂದಾಳು ಉದ್ಘಾಟಿಸಿದರು. ಸಮಾವೇಶದ ಮುಂದೆ ಇರಿಸಿದ ತಿಪಟೂರು ಸೀಮೆಯನ್ನು ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆಯ ಭಾನುವಾರದ ಪುರವಣಿ ಓದುಗರಿಗಾಗಿ ಇಡಿಯಾಗಿ ಇಲ್ಲಿ ಮಂಡಿಸಲಾಗಿದೆ, ಓದಿ , ಪರಿಭಾವಿಸಿ- ಸಂಪಾದಕ
ನಟರಾಜ ಬೂದಾಳು
ಮೊದಲಿಗೆ ಬಹುತ್ವವನ್ನು ಪ್ರೀತಿಸುವ, ಎಲ್ಲ ತಾರತಮ್ಯಗಳನ್ನು ದಾಟಲು ಒಪ್ಪುವ ಎಲ್ಲರನ್ನು ಬಾಳಿಸಿಕೊಂಡು ಬಾಳಬೇಕು ಮತ್ತು ವಿಜ್ಞಾನದ ಮತ್ತು ನೆಲದ ವಿವೇಕ ನಮ್ಮನ್ನು ಮುನ್ನಡೆಸಬೇಕು ಎಂದು ನಂಬಿರುವ ಬಿಳಿಗೆರೆ ಕೃಷ್ಣಮೂರ್ತಿ ಅವರನ್ನು ಈ ಹೊತ್ತಿನ ಈ ಸಮ್ಮೇಳನದ ನಟ್ಟ ನಡುವೆ ಕುಳ್ಳಿರಿಸಿಕೊಂಡು ನಾವೆಲ್ಲ ಸೇರಿದ್ದೇವೆ. ಅದಕ್ಕಾಗಿ ನಿಮಗೆ ಮತ್ತು ಕೃಷ್ಣಮೂರ್ತಿಗೆ ಪ್ರೀತಿಯ ಅಭಿನಂದನೆಗಳು. ಕವಿ, ನಾಟಕಕಾರ, ಪ್ರಬಂಧಕಾರ, ಮಕ್ಕಳ ಸಾಹಿತಿ, ಸಾವಯವ ಕೃಷಿಕ, ಚಳವಳಿಗಳ ಲೌಡ್ ಸ್ಪೀಕರ್, ಇತ್ಯಾದಿಗಳನ್ನು ಎಳೆದಾಡಿಕೊಂಡು ಹೊಲ ತೋಟಕ್ಕೆ ಹೋಗುವ ಬಿಳಿಗೆರೆ ನಮ್ಮ ನಡುವಿನ ನಮ್ಮ ಸೀಮೆಯ ಜೀವಂತ ಚೈತನ್ಯ.ಅವರ ಸಾಹಿತ್ಯವನ್ನು ಕುರಿತು ಗೆಳೆಯರು ಅಲಾಯಿದ ಮಾತನಾಡುತ್ತಾರೆ. ಹಾಗಾಗಿ ಅದು ನನ್ನ ಪಾಲಿನ ಕೆಲಸವಲ್ಲ. ಅವರನ್ನು ಮೊದಲಿಗೆ ಅಭಿನಂದಿಸುವ ಜೊತೆಗೆ ಈ ಸಾಹಿತ್ಯ ಸಮ್ಮೇಳನ ನಮ್ಮ ತಿಪಟೂರು ಸೀಮೆಯ ಸಾಂಸ್ಕೃತಿಕ ಬದುಕನ್ನು, ಸಾಮಾಜಿಕ ಬದುಕನ್ನು ಸಾಹಿತ್ಯಕ ಮತ್ತು ಶೈಕ್ಷಣಿಕ ಬದುಕನ್ನು ಕುರಿತಾದ ಒಂದು ಜಮಾಬಂದಿಯಾಗಲಿ ಮುಂದಿನ ದಾರಿಗೆ ಸರಿಯಾದ ಒಂದು ಕೈಮರವನ್ನೊದಗಿಸಲಿ ಎಂದು ಆಶಿಸುತ್ತೇನೆ.
ಹಿಂದಣ ಹೆಜ್ಜೆಯನರಿತಲ್ಲದೆ ನಿಂದ ನಿಲುವನರಿಯಲಾಗದು - ನಾವೆಲ್ಲಿಂದ ಬಂದು ಎಲ್ಲಿಗೆ ಹೋಗುತ್ತಿದ್ದೇವೆ ಈಗೆಲ್ಲಿ ಇದ್ದೇವೆ ಈ ಮೂರೂ ಎಚ್ಚರದಲ್ಲಿ ನೋಡಿ ತೀರ್ಮಾನಿಸಬೇಕಾದ ಸಂಗತಿ.ಹೀಗೆ ಪ್ರತಿ ಹೆಜ್ಜೆಯನ್ನು ಪ್ರಶ್ನಿಸಿ ಪರಿಶೀಲಿಸಿ ಸರಿ ಎನ್ನಿಸಿದರೆ ಮಾತ್ರ ಇಡುವ ಈ ಕ್ರಮದಲ್ಲಿ ನಡೆಯುವುದನ್ನು ಸಂಯಕ್ ಮಾರ್ಗ ಅಥವಾ ಯುಕ್ತಮಾರ್ಗ ಅನ್ನುತ್ತಾರೆ.ಸರಿದಾರಿ ಎನ್ನುವುದು ಆಗಿಂದಾಗ್ಗೆ ತೀರ್ಮಾನಿಸಿಕೊಳ್ಳಬೇಕಾದದ್ದು.ಇದು ಹೋಗ ಹೋಗುತ್ತ ಕೇಳಿಕೊಂಡು ಹೋಗುವ ದಾರಿ. ನಾವು ಆಯ್ಕೆ ಮಾಡಿಕೊಂಡಿರುವ ಪ್ರಜಾಸತ್ತೆ, ಬಾಳಿಕೊಂಡು ಬಂದಿರುವ ಸಾಂಸ್ಕೃತಿಕ ಸಾಮಾಜಿಕ ಧಾರ್ಮಿಕ ಮತ್ತು ಸಾಹಿತ್ಯಿಕ ಬದುಕು, ನಮ್ಮ ಆರ್ಥಿಕತೆ, ಇವುಗಳಿಗೆ ಕಾರಣವಾಗಿರುವ ಶಿಕ್ಷಣ, ಕೃಷಿ, ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ನಾವು ನಿರ್ವಹಿಸುತ್ತಿರುವ ಬಗೆ ಇವೆಲ್ಲ ನಮ್ಮ ಮುಂದಿನ ಬದುಕನ್ನು ನಿರ್ಧರಿಸುತ್ತವೆ. ಇವೆಲ್ಲವೂ ಸೇರಿ ಆದದ್ದು ಸಾಹಿತ್ಯ. ಸಾಹಿತ್ಯ ಅಂದರೆ ಅಡಿಗೆಗೆ ಬೇಕಾಗೋ ಸಾಮಾನು ಅನ್ನೋದು ಅದರ ಮೊದಲ ಅರ್ಥ.ಅವೆಲ್ಲವನ್ನು ಹದವಾಗಿ ಸೇರಿಸಿ ರಸವನ್ನು ಸಾರನ್ನು ಸಿದ್ಧಪಡಿಸುತ್ತೇವೆ. ಅದು ನಮ್ಮ ಬದುಕಿಗೆ ಬೇಕಾಗೋ ಜೀವ ಚೈತನ್ಯ. ಹಾಗಾಗಿ ಸಾಹಿತ್ಯ ಅಂದರೆ ಕೇವಲ ಬಿಳಿಹಾಳೆ ಮೇಲೆ ಮೂಡಿಸೋ ಅಕ್ಷರಗಳಷ್ಟೆ ಅಲ್ಲ. ನಮ್ಮ ನಿತ್ಯದ ಬದುಕನ್ನು ಒಪ್ಪಗೊಳಿಸಿಕೊಂಡು ಬಾಳಲು ಬೇಕಾದ ವಿವೇಕ ಮತ್ತು ಅದಕ್ಕೆ ಅಗತ್ಯವಾದ ಸಾಮಗ್ರಿ ವಿಶೇಷ.ಹಾಗಾಗಿ ತಿಪಟೂರು ಸಾಹಿತ್ಯ ಸಮ್ಮೇಳನ ಅಂದರೆ ನಮ್ಮ ಅಡಿಗೆ ಮನೆಯಿಂದ ಹಿಡಿದು ನಮ್ಮ ಶಾಲೆಗಳು, ನಮ್ಮ ಆಡಳಿತ ಕಚೇರಿಗಳು, ನಮ್ಮ ಸುತ್ತಲಿನ ನಿಸರ್ಗ, ಇವೆಲ್ಲ ಏನಾಗಿವೆ ಎಂದು ಕಂಡುಕೊಳ್ಳಲು ಒಂದು ಅವಕಾಶ.
ತಿಪಟೂರನ್ನು ಬರೀ ತಿಪಟೂರು ಅಂದರೆ ಸಾಲದು, ತಿಪಟೂರು ಸೀಮೆ ಅನ್ನಬೇಕು. ಯಾಕೆಂದರೆ ಅದು ಬರೀ ಒಂದು ಊರಿನ ಹೆಸರಲ್ಲ; ಬದಲಿಗೆ ಒಂದು ಜೀವನ ವಿಧಾನದ ಹೆಸರು.ನಮ್ಮದು ಮುದ್ದೆ ಸೀಮೆ.ನಮ್ಮ ಮುದ್ದೆ ಸೀಮೆಯ ಜೀವನ ಮೀಮಾಂಸೆ ಬೇರೆ.ಈ ಜೀವನ ವೈವಿಧ್ಯವೇ ನಮ್ಮನ್ನು ವಿಶಿಷ್ಟಗೊಳಿಸೋದು.ಬೆಳಗಿನ ಹೊತ್ತಿನ ಚಿತ್ರಾನ್ನಕ್ಕೆ ವಗ್ಗರಣೆ ಹಾಕುವ ಪರಿಮಳ, ಸಂಜೆ ದನ ಬರೋ ಹೊತ್ತಿಗೆ ಬರುವ ಸೀದಾ ಬ್ರಹ್ಮರಂಧ್ರಕ್ಕೆ ಏರುವ ಮುದ್ದೆ ಸೀಯುವ ಘಮ್ಮೆನ್ನುವ ವಾಸನೆ ಇವೆಲ್ಲ ನಮ್ಮ ನಿಜವಾದ ಬದುಕಿನ ಲಕ್ಷಣಗಳು.ಇದು ಅವರೆಕಾಯಿಯ ಕಾಲ.ಸಂಜಿಗೆ ಅವರೆ ಕಾಳಿನ ಸಪ್ಪೆಸರಿನ ಜೊತೆಗೆ ಒಂದೂವರೆ ಮುದ್ದೆ ಜೊತೆಯಾದರೆ ಸ್ವರ್ಗಕ್ಕು ಕಿಚ್ಚು ಹಚ್ಚಬಲ್ಲವರು ನಮ್ಮ ಜನ. ನಮ್ಮದು ಮುದ್ದೆ ಸೀಮೆ.ಇಡೀ ಕರ್ನಾಟಕವನ್ನು ಆಹಾರ ಮೀಮಾಂಸೆಯ ದೃಷ್ಟಿಯಿಂದ ಮೂರು ಸೀಮೆ ಮಾಡಬಹುದು.ಒಂದು ಮುದ್ದೆ ಸೀಮೆ, ಇನ್ನೊಂದು ರೊಟ್ಟಿ ಸೀಮೆ ಮತ್ತೊಂದು ಅನ್ನದ ಸೀಮೆ.ಮುದ್ದೆ ಸೀಮೆಯ ಕೇಂದ್ರ ನಮ್ಮದು.ಬೇಯಿಸಿದ ಒಂದು ಹುಣಸೆ ಬೋಟು, ಒಂದು ಹಸಿ ಮೆಣಸಿನಕಾಯಿ, ಇಷ್ಟು ಜೀರಿಗೆ ಒಂದು ಬೆಳ್ಳುಳ್ಳಿ ಇಷ್ಟಿದ್ದರೆ ಸಾಕು; ಉಣ್ಣಲು ತಟ್ಟೆಯೂ ಬೇಡ.
ನಾವಿಂದು ಸೇರಿರುವ ಈ ಸಮ್ಮೇಳನಕ್ಕೆ ನಮ್ಮದೇ ಆದ ವಿಶಿಷ್ಟ ಲಕ್ಷಣಗಳಿವೆ. ಅವನ್ನೆಲ್ಲ ನಾವು ಬಿಟ್ಟುಕೊಟ್ಟು ಬಾಳಬಾರದು.ಯಾಕೆಂದರೆ ಅವೆಲ್ಲ ಸುಮ್ಮನೆ ಬಂದವಲ್ಲ; ನೂರಾರು ವರುಷಗಳ ಹುಡುಕಾಟದ ಫಲ. ಹಾಗೆಂದು ಹೊಸದನ್ನು ಬೇಡ ಅನ್ನಬೇಕು ಅಂತಲೂ ಅಲ್ಲ. ಇಂಥ ಸಂದರ್ಭಗಳಲ್ಲಿ ನಾವು ಪಡಕೊಂಡಿದ್ದೇನು?ಕಳಕAಡಿದ್ದೇನು?ಯಾವ್ಯಾವ ಬದಲಾವಣೆಗಳಿಗೆ ನಮ್ಮ ಸಾಹಿತ್ಯ ಕಾರಣವಾಗಿದೆ?ಯಾವ್ಯಾವ ಚಳವಳಿಗಳನ್ನು ನಾವು ಮಾಡಿದ್ದೇವೆ?ಏನಾರ ಬದಲಾವಣೆ ಆಗಿದೆಯಾ?ನಮ್ಮ ಮುಂದಿನ ಮಕ್ಕಳಿಗೆ ಏನನ್ನು ಉಳಿಸಿಹೋಗುತ್ತಿದ್ದೇವೆ?ಈಗ ಅವರಿಗೆ ನಾವು ಕೊಡುತ್ತಿರುವ ಶಿಕ್ಷಣ ಎಂತದ್ದು?ಇವೆಲ್ಲದರ ಜಮಾಬಂದಿ ಮಾಡೋದು ಸಾಹಿತ್ಯದ ಜವಾಬುದಾರಿ.
ವಿ ಆರ್ ಅಟ್ ಕ್ರಾಸ್ ರೋಡ್ಸ್.ನಾವೆಲ್ಲ ಕೆ ಬಿ ಕ್ರಾಸ್ ನಲ್ಲಿ ಇದ್ದೇವೆ. ಎತ್ತಗೆ ಬೇಕಾದರೂ ಹೋಗಬಹುದು.ಎತ್ತಗೆ ಹೋಗಬೇಕು ಅನ್ನೋದನ್ನು ಎಚ್ಚರದಿಂದ ನಿರ್ಧರಿಸಬೇಕು.ಅದಕ್ಕೆ ಕ್ರಾಸ್ ಬಂದಾಗ ಒಂದು ಕೈಮರ ನೆಟ್ಟರ‍್ತಾರೆ.ಇಲ್ಲಿ ದಿಕ್ಕು ತಪ್ಪಿದರೆ ಇನ್ನು ನಮ್ಮ ಮುಂದಿನ ಪಯಣ ದಿಕ್ಕುತಪ್ಪಿದ ಯಾನ. ಹಾಗಾಗದೆ ಸರಿದಾರಿ ಯಾವುದು ಎಂದು ತೋರಿಸೋದು ಇಂತಹ ಸಾಹಿತ್ಯ ಸಮ್ಮೇಳನದ ಉದ್ದೇಶ.
ನಮ್ಮ ಸೀಮೆಯ ಕೆಲವು ವೈಶಿಷ್ಟö್ಯಗಳನ್ನು ನೆನಪಿಸಿಕೊಳ್ಳಬೇಕು.ನಮ್ಮ ನೆನಪಿನ ಕೋಶದ ಹರಹು ದೊಡ್ಡದು.ನಾವು ನಿಂತಿರೋ ಈ ನೆಲ್ಲ ಕಿಬ್ಬನಹಳ್ಳಿ ಹಳೇ ಶಿಲಾಯುಗದ ನೆನಪುಗಳನ್ನು ತನ್ನಲ್ಲಿ ಮುಚ್ಚಿಟ್ಟುಕೊಂಡಿದೆ.ಜಗತ್ತಿನ ಅತ್ಯಂತ ಪ್ರಾಚೀನ ಹಳ್ಳಿಯೊಂದರ ಆವರಣದಲ್ಲಿ ನಾವಿದ್ದೇವೆ. ಈಗಲೂ ಮನುಷ್ಯ ತನ್ನ ಸಾಮಾಜಿಕ ಬದುಕನ್ನು ಆರಂಭಿಸಿದ ಮೊದಲ ಘಟ್ಟದ ಬದುಕಿನ ಅವಶೇಷಗಳು ಸಿಗುವ ಹಳ್ಳಿ ಈ ಕಿಬ್ಬನಹಳ್ಳಿ. ನಮ್ಮ ಮನೋಕೋಶದಲ್ಲಿ ಆ ನೆನಪುಗಳೂ ಇವೆ. ಅನ್ನೋದರಿಂದ ಹಿಡಿದು ನಮ್ಮ ನೆನಪಿನ ಕೋಶದಲ್ಲಿ ಇರುವ ಕೆಲವಾರು ಸಂಗತಿಗಳಲ್ಲಿ ಕೆಲವನ್ನಾದರೂ ನಾವು ನೆನಪಿಸಿಕೊಳ್ಳಬೇಕು.ಏಕೆಂದರೆ ಇವು ನಮ್ಮ ಮುಂದಿನ ನಡೆಯ ಕೈಮರಗಳು.
ಸಂತ ಸಿದ್ಧರಾಮ ಇಲ್ಲಿಗೆ ಬಂದಿದ್ದ. ಬಂದು ಇಲ್ಲಿ ಮಾಡಿದ್ದೇನು? ಒಂದು ಸರ್ಕಾರ, ಒಂದು ದೈವ, ಒಬ್ಬ ಸಂತ, ಒಬ್ಬ ಅಧಿಕಾರಿ ಒಬ್ಬ ಲೋಕಪ್ರೀತಿಯ ಮನುಷ್ಯ ಈ ನೆಲದ ಹಳ್ಳಿಗಳಿಗೆ ಕೊಡಬಹುದಾದ/ಮಾಡಬಹುದಾದ ಅತ್ಯಂತ ಮಹತ್ವ ಕೆಲಸ ಏನಿರಲಿಕ್ಕೆ ಸಾಧ್ಯ?ಒಂದು ಕೆರೆ, ಆ ನೆಲದ ಮರಗಳಿಂದ ಕೂಡಿನ ಒಂದು ತೋಪು ಮತ್ತು ಸುತ್ತ ಇರುವ ನೀರಿನ ಒರತೆ, ಆಕರಗಳನ್ನು ಕಾಪಾಡಿಕೊಳ್ಳುವ ವಿವೇಕ! ಹೀಗೆಂದು ಉತ್ತರಿಸಿದವನು ಗುರು ಸಿದ್ಧರಾಮ.ಇಂದು ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ನಡೆದುಕೊಳ್ಳುವುದು ಹೀಗೆಂದ ಸಿದ್ಧರಾಮನಿಗೆ. ಇವುಗಳನ್ನು ನೀಡುವ ಸಿದ್ಧನೆಂದೇ ಅಂದು ಗುರುತಿಸಲ್ಪಟ್ಟ ಈ ಸಂತನಿಗೆ ಇಂದು ಕೂಡ ಕರ್ನಾಟಕದ ಅತ್ಯಂತ ಹೆಚ್ಚು ಅನುಯಾಯಿಗಳು, ಭಕ್ತರು, ಇರುವುದು ಸಿದ್ಧರಾಮನಿಗೆ! ಈ ನಾಡಿನ ಅತಿ ಹೆಚ್ಚು ಜನ ಪ್ರೀತಿಯಿಂದ ತಮ್ಮ ಹೆಸರನ್ನು ಕರೆದುಕೊಂಡಿರುವುದು ಸಿದ್ದಪ್ಪ, ಸಿದ್ದಯ್ಯ, ಸಿದ್ಧರಾಮ ಎಂದು! ಮಹಾರಾಷ್ಟçದ ಸೊಲ್ಲಪುರ (ಸೊನ್ನಲಿಗೆ) ದಿಂದ ಚಿಕ್ಕನಾಯಕನಹಳ್ಳಿಯ ಗೋಡೆಕೆರೆಯವರೆಗೆ ಇವನ ಹೆಸರಿನ 76 ಗದ್ದುಗೆಗಳಿವೆ. ಇನ್ನು ಚಿಕ್ಕಪುಟ್ಟ ತೋರು ಗದ್ದುಗೆಗಳು ನೂರಾರು ಇವೆ. ಈ ಎಲ್ಲ ಗದ್ದುಗೆಗಳ ಜೊತೆಗೆ ಅವನಿಂದ ಕಟ್ಟಲ್ಪಟ್ಟದೆಂದು ಗುರುತಿಸುವ 76 ಕೆರೆಗಳಿವೆ, ಅಷ್ಟೇ ಪ್ರಮಾಣದ ನೆಡುತೋಪುಗಳಿವೆ ಮತ್ತು ಸುತ್ತಲಿನ ನೀರಿನ ಒರತೆಗಳನ್ನು ಪವಿತ್ರೀಕರಿಸಿ, ದೈವೀಕರಿಸಿ ಅವುಗಳನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಈ ಲೋಕೋಪಯೋಗಿ ಸಂತನ ಮಹಾಪ್ರಯಾಣವನ್ನು ಕಂಡು ದಂಗಾಗಿಹೋದೆ. ಅಂದು ಹುಯನ್ ತ್ಸಾಂಗ್ ಕೈಗೊಂಡ ಆರು ಸಾವಿರ ಮೈಲುಗಳ ಮಹಾಪ್ರಯಾಣಕ್ಕಿಂತ ಇದೇನೂ ಕಡಿಮೆಯಲ್ಲವೆನ್ನಿಸಿತು.ಅವನಾದರೆ ತಾತ್ವಿಕತೆಯ ಶೋಧದ ಉದ್ದೇಶದಿಂದ ಹನ್ನೆರಡು ಸಾವಿರ ಮೈಲಿ ನಡೆದ.ಇವನಾದರೆ ಸುಮಾರು ಆರು ನೂರು ಮೈಲಿ ಪಯಣಿಸಿ ಲೋಕಾನುಕಂಪದ ಕೆರೆ ಕಟ್ಟೆಗಳನ್ನು ಕಟ್ಟಿದ.ಆದರೆ ನಾವೇನು ಮಾಡಿದ್ದೇವೆ?ಅವನು ಕಟ್ಟಿಸಿದ ಕೆರೆಗಳನ್ನು ಹಾಳುಬಿಟ್ಟು, ತೋಪನ್ನು ನೆಲಸಮ ಮಾಡಿ, ಕಲ್ಯಾಣಿಯ ನೀರನ್ನು ಕೆಡಿಸಿ ಒಂದು ದೊಡ್ಡ ಕಲ್ಲಿನ ಗೋಪುರ ಕಟ್ಟಿಕೊಂಡಿದ್ದೇವೆ. ಗೋಪುರ ಕಟ್ಟುವುದು ಅವನಿಗೆ ಗೊತ್ತಿರಲಿಲ್ಲ ಅಂತಾ ಅಲ್ಲ. ನಮಗೆ ಗೊತ್ತಿರೋದು ಅಷ್ಟೆ.ನಮ್ಮ ವಿವೇಕಕ್ಕೆ ಮಂಕು ಕವಿದರೆ ಇಂಥದ್ದೆಲ್ಲ ಆಗುತ್ತೆ. ತಿಪಟೂರು ಸೀಮೆ ಕೆರೆಗಳ ಸೀಮೆ.ಅವುಗಳ ಮಹತ್ವ ಈಗಲಾದರೂ ಗೊತ್ತಾಗಬೇಕು.ಅವುನಮ್ಮ ಜೀವನಾಡಿ. ನಮ್ಮದು ನದಿಗಳಿಲ್ಲದ ನಾಡು. ಹಾಗಾಗಿ ಅವೇ ನಮ್ಮ ಜೀವನದಿ.ಅವುಗಳನ್ನುಕಾಪಾಡಿಕೊಳ್ಳಬೇಕು.
ಗಾಂಧೀಜಿ ಇಲ್ಲಿಗೆ ಬಂದಿದ್ದರು.ವಿನೋಬಾ ಬಂದಿದ್ದರು.ಜೆ ಪಿ ಬಂದಿದ್ದರು.ಇನ್ನೊಬ್ಬರ ಅಡಿಯಲ್ಲಿ ಜೀತ ಮಾಡಲ್ಲ; ಅಂತ ಗಾಂಧಿಜಿಗೆ ಕೈಜೋಡಿಸಿದವರನ್ನು ಇಲ್ಲಿಯವರನ್ನು ನೆನಪಿಸಿಕೊಳ್ಳಬೇಕು.ಆದರೆ ಆ ನೆನಪುಗಳಿಲ್ಲ; ಅವೆಲ್ಲ ಹಳಹಳಿಕೆಗಳಲ್ಲ. ಬದಲಿಗೆ ನಾವು ನಿಜವಾದ ಸ್ವಾಂತಂತ್ರತ್ರ್ಯ ಪಡೆದುಕೊಂಡೆವೇ ಅಂತ ಕೇಳಿಕೊಳ್ಳಬೇಕಾದ ಸಂದರ್ಭ ಇದು. ಸಾಮಾಜಿಕ ಸಮಾನತೆಗಾಗಿ ಈ ನಾಡಿನಲ್ಲಿ ಹುಟ್ಟಿಕೊಂಡ ದಲಿತ ಚಳವಳಿ ಮತ್ತು ರೈತ ಚಳವಳಿಗಳಿಗೆ ಈ ನೆಲ ಕ್ರಿಯಾಶೀಲವಾಗಿ ಸ್ಪಂದಿಸುತ್ತ ಬಂದಿದೆ.
ನಮ್ಮ ಸೀಮೆಯ ಬದುಕನ್ನು ಸಮೃದ್ಧಗೊಳಿಸಿದ ಕೆಲವು ಮುಖ್ಯ ಸಂಗತಿಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.ಈ ನೆಲ ಸಾಹಿತ್ಯವನ್ನು ತನ್ನ ಜೀವದುಸಿರನ್ನಾಗಿಸಿಕೊಂಡು ಬಂದಿದೆ. ಇಲ್ಲಿನ ಹುಣ್ಣಿಮೆಯ ನಡುರಾತ್ರಿ ಚಿಕ್ಕನಾಯಕನಹಳ್ಳಿಯ ಹಜûರತ್ ಸೈಯದ್ ಮೊಹಿಯುದ್ದೀನ್ ಶಾ ಖಾದ್ರಿಯ ದರ್ಗಾ ಎ ಶರೀಫ್‌ನಲ್ಲಿ ಎಲ್ಲ ಶೂದ್ರ ಸಮೂಹದಿಂದ ಬಂದ ಅನುಭಾವಿ ಸೋದರ ಸಾಧಕರು ಗದ್ದುಗೆಯ ಸುತ್ತ ನಿಂತು ಏಕತಾರಿ ಹಿಡಿದು ಈಗಲೂ ಕಡಕೋಳದ ಮಡಿವಾಳಪ್ಪನ ತತ್ವವನ್ನು ‘ಜ್ಞಾನಪೂರ್ಣಂ ಜಗಂಜ್ಯೋತಿ ನಿರ್ಮಲವಾದ ಮನವೇ ಕರ್ಪೂರದಾರತಿ’ ಹಾಡುತ್ತಾರೆ. ಒಣಗಿದ ಮಾಗಿಕಾಯಿಗೆ ಬಿದಿರಿನ ಕೋಲೊಂದನ್ನು ಸಿಕ್ಕಿಸಿ, ತಂತಿಯೊAದನ್ನು ಬಿಗಿದು ಕಟ್ಟಿದ ಏಕತಾರಿಯನ್ನು ಕೈಗೆತ್ತಿಕೊಂಡ ಸಾಧಕನ ಜೊತೆಗೆ ದಮ್ಮಡಿ ಹಿಡಿದ ಮುದ್ರೆಯೊಂದಿದ್ದರೆ ಸಾಕು, ಹುಣ್ಣಿಮೆಯ ನಡುರಾತ್ರಿಯಲ್ಲಿ ಚಿಕ್ಕನಾಯಕನಹಳ್ಳಿಯ ಹೊರಚ್ಚಿಗೆ ಹೊಲದ ತೆವರಿನಲ್ಲಿರುವ ಬಯಲಪ್ಪನ ಮಠದಲ್ಲಿ, ಚಿಕ್ಕೇನಹಳ್ಳಿ ಮಠದಲ್ಲಿ, ಕೆರೆಗೋಡಿ ರಂಗಾಪುರದ ಮಠದ ಆವರಣದಲ್ಲಿ ಈ ತತ್ವಪದ ಝೇಂಕರಿಸುತ್ತದೆ!
ನೋಡಿದೇನೆ ಪ್ರೌಢಸುಂದರೀ | ಆ |
ಜಾಡ ತಿಳಿದು | ನೋಡಿದೇನೆ ಪ್ರೌಢಸುಂದರೀ ||ಪ||
ರೂಢಮಾಗಿ ಮೂರು ನದಿಯು |
ಕೂಡಿಯಿರುವ ಠಾವಿನಲ್ಲಿ |
ಆಡಿ ಬಂದು ಜೋಡಿಗಿಳಿಯು |
ಕೂಡಿ ಮಾತಾಡುವುದನ್ನು ||ನೋಡಿದೇನೆ || ಅ.ಪ||
ನಿಜವಾಗಿ ಈ ನೆಲದ ನಿತ್ಯ ಹಾಡಿಸಿಕೊಳ್ಳುವ ಸಾಹಿತಿಗಳು ಅಂದರೆ ಶಂಕರಾನAದ ಯೋಗಿ, ಶಂಕರರ‍್ಯರು, ಜ್ಞಾನಾನಂದರು, ಸಪ್ಪಣ್ಣಾರ್ಯರು, ಹನುಮಂತಸ್ವಾಮಿಗಳು, ನಿಜಗುಣ ಶಿವಯೋಗಿಗಳು, ಹಾಗಲವಾಡಿ ಮುದ್ದುವೀರಸ್ವಾಮಿಗಳು, ಸಿದ್ಧರಾಮ, ಕಲ್ಲೂರು ರುದ್ರಮುನಿದೇವ, ಚುಂಗನಹಳ್ಳಿ ಶಿವಪ್ಪ, ಬಾಗೇಶಪುರದ ಜಮಖಂಡಿ ಶಿವಪ್ಪ, ಕರೀಂಪೀರ ಮುಂತಾದವರು.
ನಮ್ಮದು ತಾಯಿ ಆರಾಧನೆಯ ನೆಲ.ಊರೂರಿಗೊಂದು ಅಮ್ಮನ ಗುಡಿ ಇದೆ. ಹೆಸರಳ್ಳಿ ಲಕ್ಕಮ್ಮ, ಶೆಟ್ಟಿಕೆರೆ ಕೆಂಪಮ್ಮ, ಬಿದರೆಗುಡಿ ಅಮ್ಮ, ಹಟ್ನದ ಅಮ್ಮ, ಕರಿಯಮ್ಮ, ಉಡುಸಲಮ್ಮಗಳ ನಾಡು. ತಾಯಿ ಆರಾಧನೆ ನಮ್ಮ ಶ್ರಮಣಧಾರೆಗಳ ಸಾಮಾನ್ಯ ಲಕ್ಷಣ. ಶಿವ ಸಂಸ್ಕೃತಿ, ತಾಯಿ ಸಂಸ್ಕೃತಿ, ಜಲ ಸಂಸ್ಕೃತಿ, ಚಂದ್ರ ಸಂಸ್ಕೃತಿ ಮತ್ತು ನಾಗ ಸಂಸ್ಕೃತಿ ನಮ್ಮ ಜೀವನ ಮೀಮಾಂಸೆಯ ಲಕ್ಷಣಗಳು, ಇವು ದಿನ ನಿತ್ಯ ಮರೆವಿಗೆ ಸಲ್ಲುತ್ತಿವೆ. ಅಸ್ಮಿತೆಯನ್ನು ಕಳೆದುಕೊಂಡ ಬದುಕು ಜೀತದ ಬದುಕಿಗೆ ಸಮಾನ. ಶಿವ ಸಂಸ್ಕೃತಿಯನ್ನು ತಿರಸ್ಕರಿಸಲು ಪಿತೃ ಸಂಸ್ಕೃತಿ, ಶಿವ ಸಂಸ್ಕೃತಿಯನ್ನು ತಿರಸ್ಕರಿಸಲು ವೈಷ್ಣವ ಸಂಸ್ಕೃತಿ, ನೀರನ ಸಂಸ್ಕೃತಿಯನ್ನು ತಿರಸ್ಕರಿಸಲು ಅಗ್ನಿ ಸಂಸ್ಕೃತಿ, ನಾಗ ಸಂಸ್ಕೃತಿಯನ್ನು ತಿರಸ್ಕರಿಸಲು ಗರುಡ ಸಂಸ್ಕೃತಿಗಳನ್ನು ಮುಂದಿಡಲಾಗುತ್ತಿದೆ. ಇವೆಲ್ಲ ನಮಗೇ ಗೊತ್ತಾಗದೆ ನಮ್ಮನ್ನು ಪರದೇಸಿಗಳನ್ನಾಗಿಸುವ ಹುನ್ನಾರ.ನಮ್ಮ ಸಾಂಸ್ಕೃತಿಕ ಚಹರೆಗಳು ದುರ್ಬಲಗೊಳ್ಳದ ಹಾಗೆ ನೋಡಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ.
ಈ ನೆಲದ ಸಾಹಿತ್ಯಕ್ಕೆ ಒಂದು ವಿಶೇಷ ಗುಣವಿದೆ.ಅದು ಬಹುತ್ವವನ್ನು, ಎಲ್ಲ ತಾರತಮ್ಯಗಳನ್ನು ದಾಟಿದ ಸಮಾನತೆಯನ್ನು, ಎಲ್ಲರನ್ನೂ ಬಾಳಿಸಿಕೊಂಡು ಬಾಳಿದರೆ ಮಾತ್ರ ತನಗೂ ಬಾಳುವೆ ಎನ್ನುವ ಲೋಕಸಾಮರಸ್ಯವನ್ನು, ಮತ್ತು ಎಲ್ಲರೊಡನೆ ಹಂಚಿಕೊಂಡು ಬಾಳುವ ಪ್ರಜಾಸತ್ತೆಯನ್ನು ಪ್ರತಿಪಾದಿಸಿಕೊಂಡು ಬಂದಿದೆ. ಇಲ್ಲಿನ ಪುರಾತನರು ಮತ್ತು ಆಧುನಿಕರು ಇಬ್ಬರೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಕೆಲವರನ್ನಾದರೂ ನೆನೆದುಕೊಳ್ಳಬೇಕಿದೆ: ಟಿ ಎಸ್ ನಾಗರಾಜಶೆಟ್ಟಿ, ಷಡಕ್ಷರಿ, ಎನ್ ಕೆ ಹನುಮಂತಯ್ಯ, ಎಸ್ ಗಂಗಾಧರಯ್ಯ, ಫೀನಿಕ್ಸ್ ರವಿ, ಹೊನ್ನವಳ್ಳಿ ನಟರಾಜ್, ಕಂಟಲಗೆರೆ ಗುರುಪ್ರಸಾದ್, ರಾಧಾಕೃಷ್ಣ, ಧನಂಜಯ, ದೇವರಹಳ್ಳಿ ಶ್ರೀಧರ, ಕಂಟಲಗೆರೆ ಸಣ್ಣಹೊನ್ನಯ್ಯ, ಎಸ್ ಕೆ ಮಂಜುನಾಥ, ಆಲೂರು ದೊಡ್ಡನಿಂಗಪ್ಪ, ತಿಮ್ಮನಹಳ್ಳಿ ವೇಣು, ಎನ್ ಇಂದಿರಮ್ಮ, ರಾಮಕೃಷ್ಣಪ್ಪ . ಹಾಗೆ ಚಲನಚಿತ್ರ ಕಿರುಪರದೆ ಮೇಲೆ ತಮ್ಮ ಛಾಪನ್ನು ಮೂಡಿಸಿದ ಅಚ್ಯುತ, ಅನಿಲ್, ಕೈಲಾಸ, ಪ್ರದೀಪ, ಸತೀಶ, ಮುಂತಾದವರು. ಇನ್ನು ಚಲನಚಿತ್ರದ ಪೂರ್ವಿಕರು ಎನ್ನಬೇಕಾದ ನರಸಿಂಹರಾಜು, ಕಾಡೇನಳ್ಳಿ.. . .
ಇನ್ನು ಕೃಷಿ ಕ್ಷೇತ್ರದಲ್ಲಿ ದೀರ್ಘಕಾಲದ ಚರಿತ್ರೆಯನ್ನು ಸೃಷ್ಟಿ ಮಾಡಿದ ಬೈಫ್ ಸಂಸ್ಥೆ ಮತ್ತು ಜಿ ಎನ್ ಎಸ್ ರೆಡ್ಡಿಯವರು. ಸಾಹಿತ್ಯಿಕ ಹಾಗೂ ವೈಚಾರಿಕತೆಯಲ್ಲಿ ತನ್ನದೇ ಆದ ಹೊಸ ದಾರಿ ತುಳಿದಿದ್ದ ಹೊನ್ನಾರು ಮಾಸ ಪತ್ರಿಕೆ ಇವೆಲ್ಲ ತಿಪಟೂರಿನ ಮಹತ್ವದ ಸಂಗತಿಗಳು.
ನೆನಪಿಸಿಕೊಳ್ಳಲೇಬೇಕಾದ ಎರಡು ಜನಪದ ಪ್ರಕಾರಗಳು: ಒಂದು ಅರೆವಾದ್ಯ ಮತ್ತೊಂದು ಸೋಮನ ಕುಣಿತ ಮೂಡಲಪಾಯ ಯಕ್ಷಗಾನಕ್ಕೆ ತಿಪಟೂರು ತನ್ನ ಪೇಟೆಂಟ್ ಉಳಿಸಿಕೊಂಡೇ ಬಂದಿದೆ.ಇದು ಮೂಡಲಪಾಯದ ನೆಲ.ಶಿವಜಲಂಧರ, ದಶಕಂಠ ರಾವಣ, ದೇವಿ ಮಹಾತ್ಮೆ, ಕರಿಭಂಟನ ಕಾಳಗ, ಚಿತ್ರಪಟ ರಾಮಾಯಣ, ಇವೆಲ್ಲವನ್ನು ಉಳಿಸಿ ಬೆಳೆಸಿಕೊಂಡು ಬಂದವರು.ಅವರಲ್ಲಿ ಕೆಲವರನ್ನಾದರೂ ನೆನಪಿಸಿಕೊಳ್ಳಲೇಬೇಕು.ಭಾಗವತ ನಾರಸೀಯಪ್ಪ, ಪೂರ್ವಾಚಾರ್, ಚನ್ನಬಸವಯ್ಯ, ಕಲ್ಮನೆ ನಂಜಪ್ಪ, ಕೊನೆಹಳ್ಳಿ ಶಂಕರಪ್ಪ ಇನ್ನೂ ಮುಂತಾದವರು.ಕೊನೆಹಳ್ಳಿಯ ಮೂಡಲಪಾಯ ಯಕ್ಷಗಾನ ಟ್ರಸ್ಟ್ ಸಾಂಸ್ಥಿಕವಾಗಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಹೆಣಗುತ್ತಿದೆ.ತೀರಾ ಇತ್ತೀಚೆಗೆ ಚಳ್ಳಕರೆಯ ಹಳ್ಳಿಯೊಂದರಲ್ಲಿ ಕರಿಭಂಟನ ಕಾಳಗವನ್ನು ಆಡುತ್ತಿರುವುದನ್ನು ಕಂಡೆ. ಅದು ಇನ್ನೂ ಉಳಿದಿರುವುದು ಅತ್ಯಂತ ಆಶ್ಚರ್ಯದ ಸಂಗತಿ. ನನ್ನ ಬಳಿ ಮೂಡಲಪಾಯದ ಬಹುಪಾಲು ಎಲ್ಲ ಯಕ್ಷಗಾನದ ಪಠ್ಯಗಳಿವೆ. ಅವುಗಳನ್ನು ಸಂಪಾದಿಸಿ ಒಂದು ವ್ಯವಸ್ಥ ರೀತಿಯಲ್ಲಿ ಸಂಪಾದಿಸಿ ಕೊಡಬಲ್ಲೆ. ಕನಿಷ್ಠ ಪಠ್ಯಗಳಾದರೂ ಉಳಿಯಲಿ.ಮುಂದೆ ಎಂದಾದರೂ ಅವು ಮತ್ತೆ ಮರುಚೇತನಗೊಂಡಾಗ ಪಠ್ಯಗಳು ಇದ್ದರೆ ಮಾತ್ರ ಅವು ಮರುಜೀವ ಪಡೆಯಲು ಸಾಧ್ಯ.ಮುದ್ರಣವಾಗದೆ ಹೋದರೂ, ಕನಿಷ್ಟ ಸಾಫ್ಟ್ ಕಾಪಿಯನ್ನಾದರೂ ಉಳಿಸಿ ಹೋಗಬಹುದು.ಇದಕ್ಕೆ ಯಾವುದಾದರೂ ಸಂಸ್ಥೆ ಮನಸು ಮಾಡಿದರೆ ಸಾಧ್ಯ.
ಇಲ್ಲಿನ ನಿಸರ್ಗ ಒಂದು ರೀತಿಯಲ್ಲಿ ನಮ್ಮ ನಾಡಿನ ಟ್ರಜರಿ.ಅಪಾರ ಖನಿಜ ಸಂಪತ್ತು, ಜೀವ ವೈವಿಧ್ಯ, ಸಸ್ಯ ವೈವಿಧ್ಯದ ಮೇಲೆ ಲೂಟಿಕೋರರು ಯಾವಾಗಲೂ ಕಣ್ಣಿಟ್ಟಿರುತ್ತಾರೆ.ಆಗಾಗ್ಗೆ ಲೂಟಿಗಳು ನಡೆದಿವೆ, ನಡೆಯುತ್ತಲೇ ಇವೆ. ಇಂತಹ ಸಾಹಿತ್ಯ ಸಮ್ಮೇಳನಗಳು ನಮ್ಮ ಸಂಪತ್ತನ್ನು ಕಾಪಾಡಿಕೊಳ್ಳುವ ಎಚ್ಚರವನ್ನು ಮೂಡಿಸಬೇಕು.
ಬಹುಪಾಲು ಎಲ್ಲ ಹಳ್ಳಿಗಳ ಸರ್ಕಾರಿ ಶಾಲೆಗಳು ಆಗಲೋ ಈಗಲೋ ಕವುಚಿಕೊಳ್ಳುತ್ತವೆ ಅನ್ನೋ ಸ್ಥಿತಿಯಲ್ಲಿವೆ. ಆದರೆ ಊರ ಬಾಗಿಲಲ್ಲೇ ಹೊಸದೊಂದು ದೇವಸ್ಥಾನ ಕಟ್ಟಲು ಎಲ್ಲ ಸಿದ್ಧತೆಗಳೂ ನುಣ್ಣಗೆ ಮಾಡಿಸಿಕೊಂಡು ಕುಳಿತಿರೋ ಕಲ್ಲು ಕಂಬಗಳು ಕಾಣಿಸುತ್ತವೆ. ದೇವಸ್ಥಾನ ಕಟ್ಟಿಕೊಳ್ಳುವುದನ್ನು ಬೇಡಾ ಅನ್ನಲ್ಲ. ಆದರೆ ಮೊದಲು ಸರಿಮಾಡಿಕೊಳ್ಳಬೇಕಾದ್ದು ಸ್ಕೂಲೋ ದೇವಸ್ಥಾನವೋ ಅನ್ನೋದು ನಮ್ಮ ವಿವೇಕಕ್ಕೆ ಬಿಟ್ಟದ್ದು. ಬರೋ ಎಲ್ಲ ಶಾಸಕರೂ ಮೊದಲು ನೋಡಬೇಕಾದ್ದು ಶಾಲೆ ದೇವಸ್ಥಾನವಲ್ಲ. ಅದು ಅವರಿಗೂ ಗೊತ್ತಿರುತ್ತೆ ಆದರೆ ಅವರ ಕೆಲಸ ಆಗೋದು ಯಾವುದರಿಂದ ಅಂತಾ ಮಾತ್ರ ಯೋಚಿಸುತ್ತಾರೆಯೇ ಹೊರತು ಯಾವುದು ನಮ್ಮ ಜವಾಬುದಾರಿ ಅಂತಾ ಯೋಚಿಸೋದು ಕಮ್ಮಿ.ಒಮ್ಮೆ ಯೋಚಿಸಿ ಇಲ್ಲಿರೋ ಅಕ್ಷರಸ್ತರು ಬಹುಪಾಲು ಮೊದಲನೆಯ ಪೀಳಿಗೆಯವರು.ನಿಮಗೆ ಸ್ಕೂಲು ಸಿಕ್ಕಿದ್ದರಿಂದ, ಅಕ್ಷರ ಸಿಕ್ಕಿದ್ದರಿಂದ, ಪಠ್ಯ ಸಿಕ್ಕಿದ್ದರಿಂದ ಹೀಗೆ ಇದ್ದೀರಿ. ಸಿಕ್ಕಿಲ್ಲದಿದ್ದರೆ ಏನಾಗಿರುತ್ತಿದ್ದಿರಿ ಎನ್ನುವುದನ್ನು ಬೇರೆ ಬೇಢ ನಿಮ್ಮ ಅಜ್ಜಂದಿರು ಅವರ ಅಪ್ಪಂದಿರನ್ನು ನೆನಪಿಸಿಕೊಳ್ಳಿ. ಹಾಗಾಗಿ ನಿಮಗೆ ಸಿಕ್ಕಿದ ಅಕ್ಷರದ ಸವಲತ್ತು ನಿಮ್ಮ ಮಕ್ಕಳಿಗೂ ಸಿಗಬೇಕು. ಅದು ಸರ್ಕಾರದ ಮೊದಲ ಜವಾಬ್ದಾರಿ.ಶಿಕ್ಷಣ ಎಲ್ಲರ ಹಕ್ಕು ಅಂತಾ ಪುಸ್ತಕದಲ್ಲಿ ಸಂವಿಧಾನದ ಪುಸ್ತಕದಲ್ಲಿ ಇದ್ದರೆ ಸಾಲದು.ಅದು ನಮ್ಮದಾಗಬೇಕು.ಎಲ್ಲ ಅಧಿಕಾರಿಗಳನ್ನು, ಶಾಸಕರನ್ನು ಮಂತ್ರಿಗಳನ್ನು ಅದಕ್ಕೆ ಒತ್ತಾಯಿಸಿ.ಅದು ಅವರು ಮಾಡಬೇಕಾದ ಮೊದಲ ಕೆಲಸ ಅಂತಾ ನೆನಪಿಸಿ.
ನಮ್ಮದು ಬಹುತ್ವ ಮಾದರಿಯ ಸಮಾಜ.ಎಲ್ಲರೂ ಈ ನೆಲ ಒದಗಿಸುವ ಅನ್ನ, ನೀರು, ಗಾಳಿ, ಬೆಳಕು, ಸಂಸ್ಕೃತಿ, ಸ್ವಾತಂತ್ರö್ಯಗಳನ್ನು ಸಮಾನವಾಗಿ ಬಳಸಿಯೇ ಬದುಕಬೇಕು.ನಮ್ಮ ಬದುಕಿನ ವಿಧಾನವೇ ಹರಿಯುವ ನದಿಗೆ ಮೈಯೆಲ್ಲಾ ಕಾಲು ಎನ್ನುವ ಮಾದರಿಯದ್ದು.ಸಾವಿರಾರು ಮಾದರಿಯ ಅನ್ನ-ಪಾನೀಯಗಳಿಂದ ಹಿಡಿದು ನೂರಾರು ರೀತಿಯ ಪೂಜಾ ವಿಧಾನಗಳನ್ನು ಅನುಸರಿಸುವವರು ನಾವು.ಈ ಬಹುತ್ವವು ನಮ್ಮ ಜೀವನ ಸಮೃದ್ಧಿಯ ಸಂಕೇತವೂ ಹೌದು.ಇಂತಹ ಪ್ರಜಾಪ್ರಭುತ್ವದ ಆಶಯಗಳು ನಮ್ಮ ಸಾಹಿತ್ಯ, ಕಲೆ, ದರ್ಶನ, ಸಂಸ್ಕೃತಿ, ಆಚರಣೆಗಳಲ್ಲಿ ಹಾಸು ಹೊಕ್ಕಾಗಿವೆ. ನಮ್ಮ ಸಮಾಜದ ಆರೋಗ್ಯವನ್ನು ಕಾಪಾಡುತ್ತ ಬಂದಿವೆ. ಈ ಚಿಂತನೆಯು ಕನ್ನಡದ ವಿಸ್ತಾರವಾದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯಲ್ಲಿ ಹರಡಿಕೊಂಡಿದೆ. ನಾವು ತಿನ್ನುವ ಅನ್ನ, ಉಡುವ ಬಟ್ಟೆ, ನಮ್ಮ ಭಾವನಾತ್ಮಕ ಸಂಬಂಧಗಳನ್ನು ನಿರ್ದೇಶಿಸುವ ವಿದ್ಯಮಾನಗಳು ನಮ್ಮೆಲ್ಲರ ಬದುಕಿನ ಸ್ವಾತಂತ್ರö್ಯಗಳನ್ನು ಮತ್ತು ವೈವಿಧ್ಯತೆಯನ್ನು ಕಿತ್ತುಕೊಂಡಿವೆ ಎಂದು ನಾನು ಭಾವಿಸಿದ್ದೇನೆ. ನೀವು ಇಂಥದ್ದನ್ನೆ ತಿನ್ನಿ, ಇಂಥದ್ದೇ ದೇವರನ್ನು ಪೂಜಿಸಿ, ಹೀಗೆಯೆ ಮದುವೆ ಮಾಡಿ, ನಿಮ್ಮ ಮಕ್ಕಳು ಹೀಗೆಯೆ ಬೆಳೆಯಲಿ ಎಂದು ಆಜ್ಞಾಪಿಸುತ್ತಿವೆ. ಏಕರೂಪತೆಯೆನ್ನುವುದೇ ಅಸಹನೀಯವಾದದ್ದು, ಅನೈಸರ್ಗಿಕವಾದದ್ದು ಮತ್ತು ಅಸಹಜವಾದದ್ದು.
ಕನ್ನಡದ ಸಾಹಿತ್ಯ ಚರಿತ್ರೆಯಲ್ಲಿ ಯಾವ್ಯಾವಾಗ ಬಹುತ್ವ ಮಾತನಾಡಿದೆಯೋ ಆಗೆಲ್ಲ ಕನ್ನಡ ಸಾಹಿತ್ಯಕ್ಕೆ ಮಹತ್ತು ಪ್ರಾಪ್ತವಾಗಿದೆ. ಅಕ್ಷರವು ಹರಡಿಕೊಂಡ ಕಾರಣಕ್ಕೆ ಹೊಸ ಓದುಗವಲಯ ಕನ್ನಡದಲ್ಲಿ ಹುಟ್ಟಿಕೊಂಡಿತು. ಕೃತಿಕಾರರಿಂದ ಮಾತ್ರ ಪಠ್ಯ ನಿರ್ಮಾಣವೆಂದು ನಂಬಿರುವ ನಮಗೆ ಓದುಗರು ಕೇವಲ ಓದುಗರು ಮಾತ್ರ. ಆದರೆ ಈ ಓದುಗರೂ ಪಠ್ಯ ನಿರ್ಮಾತೃಗಳೆಂಬ ಸತ್ಯವನ್ನು ಅರಿತಾಗ ಮಾತ್ರ ಅದರ ಇತರ ಆಯಾಮಗಳು ಮುನ್ನೆಲೆಗೆ ಬರುತ್ತವೆ. ಬಹುತ್ವವೇ ಜೀವದ್ರವ್ಯವಾಗಿರುವ ಭಾರತವನ್ನು ಹಿಡಿದಿಡಲು ಈವರೆಗೆ ಸಾಧ್ಯವಾಗಿರುವುದು ಶೂದ್ರ ಪ್ರಜ್ಞೆಗೆ ಮಾತ್ರ! ಇದು ತುಸು ದೂರಾನ್ವಯದ ಮಾತು ಎಂದು ಅನ್ನಿಸಿದರೆ ಆಶ್ಚರ್ಯವಲ್ಲ. ಆದರೆ ಕಥನ ಪರಂಪರೆಯನ್ನು ಗಮನಿಸಿ ನೋಡಿ.ನಮ್ಮ ನಡುವೆ ಈಗಲೂ ಸಮೂಹದ ಬದುಕನ್ನು ಕಿಟಕಿಯಿಂದ ಕಂಡು ಬರೆಯುತ್ತಿರುವ ಕತೆಗಾರ ಕತೆಗಾರ್ತಿಯರಿಗೇನೂ ಕಡಿಮೆ ಇಲ್ಲ. ಎಂದೂ ತಮ್ಮ ಜಗಲಿಯನ್ನು ಬಿಟ್ಟು ಕೆಳಗಿಳಿಯದ ಅವರು ಊರೊಳಗೇ ಬಂದಿಲ್ಲ. ಆದರೂ ನಮ್ಮ ಪ್ರಾತಿನಿಧಿಕ ಕತೆಗಾರರಾಗಿ ಮೆರೆಯುತ್ತಿದ್ದಾರೆ.ಅವರ ಮೆರೆತ ಕಂಡು ಅಸೂಯೆಪಡಬೇಕಾದ್ದಿಲ್ಲ. ಆದರೆ ಕಥನಕ್ಕೆ ಅಧಿಕೃತತೆ ದೊರಕುವುದು ಸಮಷ್ಟಿಯನ್ನು ಒಳಗೊಂಡಾಗ ಮಾತ್ರ.ಎಲ್ಲರೊಳಗೆ ಒಂದಾದಾಗ ಮಾತ್ರ.
ಕೊನೆಯದಾಗಿ ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು.ನಿಸರ್ಗ ವಿವೇಕದಲ್ಲಿ ವಿಶ್ವಾಸ ಉಳ್ಳವರು.ಎಲ್ಲರನ್ನೂ ಬಾಳಿಸಿಕೊಂಡು ಬಾಳಿದರೆ ಮಾತ್ರ ನಮಗೂ ಬಾಳು ಎಂದು ನಂಬಿದ ಸಂವಿಧಾನದ ಪರವಾದವರು.ಬಹುತ್ವ, ಜಾತ್ಯತೀತತೆ, ಸಂವಿಧಾನ, ಸಮಾನತೆಗಳು ನಮ್ಮ ಸಾಹಿತ್ಯದ ಜೀವದ್ರವ್ಯ.ಅದನ್ನು ಈ ಸಮ್ಮೇಳನ ಖಚಿತಪಡಿಸಲು ಎಂದು ಆಶಿಸಿ ಈ ಸಮ್ಮೇಳನವನ್ನು ಅತ್ಯಂತ ಪ್ರೀತಿ ವಿಶ್ವಾಸಗಳಿಂದ ಉದ್ಘಾಟಿಸುತ್ತಿದ್ದೇನೆ.
---