ನಮ್ಮ ಅನುಕಂಪ ಪ್ಯಾಲೇಸ್ತಿನಿಯರ ಸಂಕಟದೊಂದಿಗೆ; ಇಸ್ರೇಲಿಗರ ದುಂಡಾವರ್ತನೆಯೊಂದಿಗಲ್ಲ!

  ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ! (ಹಳೆಯ ಬರಹದ ಮೂಲಕ ದೇಶವಿಲ್ಲದವರಿಗೆ ಮತ್ತೊಮ್ಮೆ ಸ್ವಾಂತನ)

ನಮ್ಮ ಅನುಕಂಪ ಪ್ಯಾಲೇಸ್ತಿನಿಯರ ಸಂಕಟದೊಂದಿಗೆ;  ಇಸ್ರೇಲಿಗರ ದುಂಡಾವರ್ತನೆಯೊಂದಿಗಲ್ಲ!

ವರ್ತಮಾನ

ಕೇಶವ ಮಳಗಿ

 

ಎಲ್ಲರ ಕೈಗಳೂ ಇಲ್ಲೀಗ ರಕ್ತಸಿಕ್ತ. ಬೀದಿಗಳು ಭಗ್ನ ಅಂಗಾಂಗಗಳ ದೇಹ; ಮುರಿದ ಮನಸ್ಸು, ಸೂರಿಲ್ಲದೇ ತಮ್ಮ ನೆಲದಲ್ಲೇ ಪರಕೀಯರಾಗಿರಬೇಕಾದ ಜನರಿಂದ ಕಿಕ್ಕಿರಿದಿವೆ. ಹಾಗೆಂದು ರೆಕ್ಕೆಮುರಿದ ಇಲ್ಲಿನ ಹಕ್ಕಿಗಳು ಹತಾಶೆಗೊಳ್ಳುವಂತಿಲ್ಲ. ಏಕೆಂದರೆ, ಅವು ಮರಳಿ ತಮ್ಮ ಪೊದೆಯನ್ನು ಕಟ್ಟಿಕೊಂಡು ರಕ್ಷಿಸಿಕೊಳ್ಳಬೇಕಾದ ಭವಿಷ್ಯದ ಭೂಮಿಯೂ ಇದೇ ಆಗಿದೆ! ಇಲ್ಲಿನ ಸಕಲ ಚರಾಚರಗಳಿಗೂ ಈ ಹತ್ತಿ ಉರಿಯುವ ಧರೆಯೇ ಸದ್ಯದ ವಾಸ್ತವ ಮತ್ತು ಮುಂದೆ ಅಸ್ತಿತ್ವ ಕಂಡುಕೊಳ್ಳಬೇಕಾದ ಕನಸಿನ ನೆಲವಂತೆ! ಒಳಗೆ ನಿಗಿನಿಗಿ ಕೆಂಡದ ಬೆಂಕಿ ಬೇಯುತ್ತಿದ್ದರೂ ಹೊರಗೆ, ನೀರು ಚೆಲ್ಲಿ ಆರಿಸಿದ ಇದ್ದಿಲಿನಂತೆ ತಣ್ಣಗಿರಬೇಕಾದ ಸ್ಥಿತಿಯಿರುವ ಈ ಜನ ನೂರಾರು ವರ್ಷಗಳಿಂದ ದಣಿವರಿಯದೆ ಪಯಣಿಸುತ್ತಲೇ ಇದ್ದಾರೆ. ಆದರೆ, ಇವರಿಗೆ ಕ್ಷಿತಿಜಗಳಿಲ್ಲ. ಇರುವುದೆಲ್ಲ: ಸಮರದಿಂದ ನಿಸ್ತೇಜಗೊಂಡ ಭೂಮಿಗೆ ಮತ್ತೆ ಮತ್ತೆ ಬಂದು ತಲುಪುವ ಶಾಪ.

ನೆತ್ತರಿನ ಕಲೆಯೇ ಇರದ ಓಣಿಯ ಕಲ್ಲು-ಮಣ್ಣು, ಗೋಡೆಗಳುಂಟೆ ಎಂದು ದುಃಖ, ದುಗುಡ, ಅವಮಾನ, ಹತಾಶೆ ತುಂಬಿದ, ಪಹರೆಯ ಹೊರೆ ಹೊತ್ತ ಕವಿ ಹಗಲು-ರಾತ್ರಿ ಬೀದಿಗಳನ್ನು ಸುತ್ತುತ್ತಾನೆ. ಯಾವ ಮಾರ್ಗದಲಿ ಹಾದುಬಂದರೂ ಗಡಿಯ ಬೇಲಿ ಹಾರಿ ಹೋಗಲಾಗದೇ ಇಲ್ಲುಳಿದ; ಅಪ್ಪಂದಿರ ಮುಖವೇ ನೋಡಿರದ ನಿರ್ಗತಿಕ ಮುಗ್ಧ ಮಕ್ಕಳು, ಗುಂಡಿನ ಸದ್ದುಗಳನ್ನು ಕಿವಿಯೋಲೆಯಾಗಿ ಧರಿಸಿರುವ ದುರ್ವಿಧಿಯ ವಿಧವೆಯರು, ಹುತಾತ್ಮರಾಗಲು ಹೋದ; ಮರಳಿ ಬರದ ತರುಣ ಪ್ರಿಯತಮರನ್ನು ಕಣ್ಣು ಕಂದಿಸಿ ಕಾಯುವ ಬಸುರಿಯರು, ಸಾಯಲೆಂದೇ ಬದುಕಿರುವ ಅಸಹಾಯಕ ವೃದ್ಧರು ಕಣ್ಣಿಗೆ ಬಿದ್ದು ತಾನು ಬಂದ ಹಾದಿಗಳ ಲೆಕ್ಕ ಮರೆತು ನಿಲ್ಲುತ್ತಾನೆ. ಶತಮಾನಗಳಿಂದ ಸುರಿಯುತ್ತಿರುವ ಮುಗ್ಧರ ರಕ್ತ ಹೀರಿಯೇ ಇಲ್ಲಿನ ಖರ್ಜೂರ, ದಾಳಿಂಬೆಗಳು ಕೆಂಪಗೆ ನಳನಳಿಸುತ್ತಿವೆಯೇನೋ ಎಂದು ನಾಲಿಗೆ ಕಹಿ ಮಾಡಿಕೊಳ್ಳುತ್ತಾನೆ.

ತನ್ನ ನೂರಾರು ಕವಿತೆಗಳಲ್ಲಿ ಚಿತ್ರದಂತೆ ಹಿಡಿದಿಟ್ಟ ತಾಯ್ನೆಲದ ರೂಪಕಗಳು ಇಲ್ಲಿನ ಜನರ ಬದುಕು ಬದಲಿಸುವುದಿಲ್ಲ; ಹಸನಾಗಿಸುವುದಿಲ್ಲ, ಸಾಂತ್ವನ ಕೂಡ ಹೇಳುವ ಶಕ್ತಿ ಅವುಗಳಿಗಿಲ್ಲ. ಆದರೂ ಅಪರಿಚಿತನಂತೆ ರಣಬಿಸಿಲಿನಲ್ಲಿ ಬೀದಿಯಲ್ಲಿ ನಡೆದು ಹೋಗುವಾಗ ಸ್ವಾಭಿಮಾನ ಮತ್ತು ದುಃಖಗಳನ್ನು ತುಂಬಿಕೊಂಡ ತನ್ನ ಹಾಡುಗಳನ್ನು ಸಾಮಾನ್ಯರು ಗುನುಗುವುದು ಏಕೋ ಎಂದು ವಿಸ್ಮಿತನಾಗುತ್ತಾನೆ. ಈ ಜನರ ಜೀವದಾಳದ ಆಸೆ, ಕನಸುಗಳು ಅಲ್ಲಿ ಒಡಮೂಡಿರುವುದೇ ಇರಬೇಕೇನೋ ಅಂದುಕೊಳ್ಳುತ್ತಾನೆ. ವಯಸ್ಸಾದ ಅಸಹಾಯಕರನ್ನು ನೋಡಿದಾಗಲೆಲ್ಲ ದುಮ್ಮಾನ ತಾಳಲಾರದೆ ದೇಹದೊಳಗೆ ಮುದುರಿ ಕುಳಿತ ಒಂಟಿ ಆತ್ಮದ ದನಿಯಂತೆ ಈ ನೆಲ ಕೂಡ ಯಾರ ಸಾಂಗತ್ಯ-ಬೆಂಬಲಗಳಿಲ್ಲದೆ ಏಕಾಕಿಯಾಗಿದೆ, ಘಟದ ಪಯಣ ಮುಗಿಯದಾಗಿದೆ ಎಂದು ಖೇದಗೊಳ್ಳುತ್ತಾನೆ.

ನಂಬಿಕೆ, ಶ್ರದ್ಧೆ, ಆಚರಣೆ ಮತ್ತು ರಾಜಕಾರಣಗಳು ಒಂದೇ ನೆಲದ ಮೂವರು ಅಣ್ಣತಮ್ಮಂದಿರನ್ನು ಸಾವಿರಕ್ಕೂ ಮಿಗಿಲು ವರುಷಗಳ ಕಾಲ ಬೇರೆ ಮಾಡಿ ಬೇಟೆಯಾಡುತ್ತಿವೆ, ಅಲ್ಲವೇ? ಎಂದು ತನಗೇ ತಾನೇ ಪ್ರಶ್ನಿಸಿಕೊಂಡು ಹೌದು ಎಂದು ಉತ್ತರ ಕೊಟ್ಟುಕೊಳ್ಳುವ ಕವಿ ಗತದ ಬೆನ್ನಟ್ಟುತ್ತಾನೆ.

ಭೂಮಿಯ ಎಲ್ಲ ಭಾಗಗಳಿಗೂ ಪುರಾತನ 'ದೇವವಾಣಿ'ಯನ್ನು ಬಿತ್ತಲು ಪವಿತ್ರಗ್ರಂಥ ಕೊಟ್ಟು ಕಳುಹಿಸಿದ್ದು ಇದೇ ಭೂಮಿ; ದೇವರನ್ನು ತಮ್ಮ ನಿಯಂತ್ರಣದಲ್ಲಿಕೊಳ್ಳುವ ಹುನ್ನಾರ ಮಾಡಿದ ಸ್ಥಳೀಯ ಬಲಾಢ್ಯರನ್ನು, ಅಧಿಕಾರ ಮತ್ತು ಹಣದ ಮೂಲಕ ಅಧಿಪತ್ಯ ನಡೆಸುವ ರೋಮನ್ನರನ್ನು ತಿರಸ್ಕರಿಸಿ ದೇವರರಾಜ್ಯದ ಕುರಿತು ಮಾತನಾಡಿದ 'ಕುರಿಗಾಹಿ'ಯನ್ನು ನೀಡಿದ್ದು ಇದೇ ನೆಲ. ಶಾಂತಿಯನ್ನು ಸ್ಥಾಪಿಸಲೆಂದೇ ತ್ಯಾಗ-ಬಲಿದಾನಗಳ ಸಮರ ಸಾರಿದ 'ಪ್ರವಾದಿ' ನಡೆದಾಡಿದ; ಸ್ವರ್ಗಾರೋಹಣ ಮಾಡಿದ ಮಣ್ಣೂ ಇದೇ! ಇಂದು ಕೂಡ ಮೂವರೂ ಶ್ರದ್ಧಾವಂತರು ಒಂದೇ ಗೋಡೆ ಹಿಡಿದೇ ತಮ್ಮ ಜನ್ಮ ಪವಿತ್ರಗೊಳಿಸಿಕೊಳ್ಳುವುದು.

ಹೌದು, ದುರದೃಷ್ಟವೆಂದರೆ ಇಂದು ನರಕವಾಗಿರುವ ಈ ನೆಲ, ಹಿಂದೊಮ್ಮೆ ಸ್ವರ್ಗವಾಗಿತ್ತು. ದಮಾಸ್ಕಸ್, ಬೆತ್ಲಹೆಮ್, ಗೊಲ್ಕೊಥ, ದೆಸ್ದಮೂನ, ಬೈಜ಼ಾಂಟಿಯಮ್, ಆಡೆನ್, ಜೇರುಸಲೇಂಗಳ ಹಾಗು ಸೈಪ್ರಸ್ ಮತ್ತು ನೈಲ್ ನದಿ ತೀರದ ಗಾಳಿಯ ಮೇಲಣ ಪವಿತ್ರ ಆಕಾಶವಕಾಶದಲ್ಲಿ ಏಕೆ ಮತ್ತು ಹೇಗೆ ಸಿಡಿಮದ್ದುಗಳ ಕಪು ಹೊಗೆ ತುಂಬುತ್ತದೆ; ಈ ಮಧ್ಯಪೂರ್ವದ ಸೂರ್‍ಯಚಂದ್ರರೇಕೆ ಗುಂಡುಗಳ ಸಿಡಿತಕ್ಕೆ ಸುಟ್ಟುಹೋಗುತ್ತಾರೆ? ಎಂಬುದೇ ಈ ಕವಿಗೆ ತಿಳಿಯುವುದಿಲ್ಲ. ಶತಮಾನಗಳಾದರೂ ಮುಗಿಯದ ಈ ತಗಾದೆಗೆ ಅಂತಿಮ ತೀರ್ಮಾನವೆನ್ನುವುದೊಂದು ಇದೆಯೇ? ಎಂದು ಕೇಳಿಕೊಂಡು ಇತಿಹಾಸದಿಂದ ಪಡೆದ ಉತ್ತರ ನೋಡಿ ವ್ಯಥಿತನಾಗುತ್ತಾನೆ.

ಈಗೇನಿದ್ದರೂ ಅವನಿಗಿರುವ ಆಸೆಯೊಂದೇ: ಅಭಿಮಾನಧನಕ್ಕೆ ಆದ ಅವಮಾನ, ದೇಶಭ್ರಷ್ಟತೆ, ದುಡಿಮೆಯಿಲ್ಲದ ಕೈಗಳಿಂದ ರೋಸಿ ಬಂದೂಕು ಹಿಡಿದ, 'ಮಾನವ ಬಾಂಬು'ಗಳಾಗಿರುವ ಈ ಮರುಭೂಮಿಯ ಎಲ್ಲ ಯುವಕರಿಗೆ, ಮನೆಮನೆಯ ಮಂದಿಗೆ ಒಂದೊಂದು ಕುದುರೆ, ಗುಲಾಬಿ, ಆಲೀವ್ ಗೊಂಚಲು, ಬಿಳಿ ಪಾರಿವಾಳ ಮತ್ತು ಟುಲಿಪ್ ಹೂಗಳನ್ನು ಹಂಚುವುದು!

ಹಾಗೆಂದೇ, ಕವಿ ಯುದ್ಧನಿರತ ಯುವಸೈನಿಕನನ್ನು ಮುಖಾಮುಖಿಯಾಗುತ್ತಾನೆ. ಯುವ ಸೈನಿಕ ಕೂಡ ಕವಿಯಂತೆಯೇ ತನ್ನ ಬಂದೂಕಿನ ನಳಿಕೆಯಲ್ಲಿ 'ಪಾರಿವಾಳ ಮೊಟ್ಟೆಯಿಡಲಿ', ಎಂದು ಆಶಿಸುವವನು. ಯುದ್ಧಭೂಮಿಯಲ್ಲೂ ತನ್ನ ಅವ್ವ ಮಾಡಿಕೊಡುವ ಕಡುಕಾಫಿ, ನಿಂಬೆ ಹೂಗಳ ವಾಸನೆ ಅವನ ಮೂಗು ತುಂಬಿ ಮೈಮರೆಸುತ್ತವೆ. ಕವಿಯೊಂದಿಗೆ ಮಾತಿಗಿಳಿದ ಆತ ತಾನು ಎಣಿಸಲಾರದಷ್ಟು ಜನರನ್ನು ಮುಗಿಸಿರುವುದಾಗಿಯೂ; ಅದಕ್ಕಾಗಿ ಪದಕಗಳ ಪಾರಿತೋಷಕ ತನಗೆ ದಕ್ಕಿದೆ, ಎಂದೂ ಹೇಳುತ್ತಾನೆ. ಮನುಷ್ಯನೊಬ್ಬನನ್ನು ಹತ್ಯೆ ಮಾಡುವಾಗ ದುಃಖ-ವಿಷಾದ ಆವರಿಸುವುದಿಲ್ಲವೇ? ಎನ್ನುವ ಕವಿಯ ಪ್ರಶ್ನೆಗೆ-ಗೆಳೆಯ, ದುಃಖವೆನ್ನುವ ಎದೆಯ ಬಿಳಿಯ ಪಾರಿವಾಳ ಸಮರಭೂಮಿಯ ದಟ್ಟ ಹೊಗೆಯಲ್ಲಿ ಎಂದೂ ಕಾಣುವುದೇ ಇಲ್ಲ. ರಣರಂಗದಲ್ಲಿ ನಾನು ಮನುಷ್ಯನಲ್ಲ, ಮೃತ್ಯುಹಕ್ಕಿಯ ಸೃಷ್ಟಿಸುವ ಸೈತಾನ, ಎಂದು ಉತ್ತರಿಸುತ್ತಾನೆ. ಇರಲಿ ಬಿಡು, ಗೆಳೆಯ, ಆದರೂ ಹೇಳು: ನಿನ್ನ ನೆಲ-ಸೂರುಗಳ ಮಾತೆತ್ತಿದಾಗ ಏನನ್ನಿಸುವುದು ನಿನಗೆ?

ಕನಸಿಗೆ ಜಾರಿದವನಂತೆ ಸೈನಿಕ ನುಡಿಯುತ್ತಾನೆ: 'ಬಿಳಿಯ ಹೂ ಟುಲಿಪ್, ಹಾಡುತುಂಬಿದ ಹಾದಿ, ದೀಪ ಬೆಳಗಿದ ಗೂಡು, ಅವ್ವ ನೀಡುವ ಕಡು ಕಾಫಿ, ಅವೇ ನನಗೆ ಪ್ರಿಯ, ಬೇಡ ಈ ಕಾಡತೂಸು'.

ಹೀಗೆ ಪ್ರತಿಮೆಗಳ ಕೈಹಿಡಿದು ತನ್ನ ನೆಲ ಮತ್ತು ನೆಲದ ಮಕ್ಕಳ ಬವಣೆಯನ್ನು ಹಾಡಾಗಿಸುತ್ತ ದೇಶಭ್ರಷ್ಟನಾಗಿ ನಾಲ್ಕು ದಶಕಗಳಿಂದ ತಿರುಗುತ್ತಿರುವ ಆ ಕವಿ, ಈ ಕಥೆಗಾರನಿಗೆ ಎದೆಗಂಟಿದ ಕೂದಲಿನಷ್ಟೇ ಪರಿಚಿತ. ದೇಶವಿದ್ದೂ ನಿರ್ಗತಿಕರಾಗಿರುವ ಈ ಮರುಭೂಮಿಯ ಮಕ್ಕಳ ನೋವಿನ ಹಾಡುಗಳನ್ನು ಈ ಕಥೆಗಾರನೂ ಕಣ್ಣಿಗೆ ಎಣ್ಣೆ ಹಾಕಿಕೊಂಡು ಗುನುಗಿದ್ದಾನೆ. ಒಡೆದುಬಿದ್ದ ಕವಿಯ ಕೊಳಲು ಮರುಜನ್ಮ ಪಡೆದು ಮತ್ತೆ ಎಲ್ಲ ಪ್ರವಾದಿಗಳ ದೇವವಾಣಿಗಳು ಆ ಕೊಳಲಿನಲ್ಲಿ ಹೊಸರಾಗಗಳನ್ನು ನುಡಿಸಲಿ ಎಂದು ಹಾರೈಸುತ್ತ ಆತನ ಪುಸ್ತಕವನ್ನು ಮಗುಚುತ್ತ್ತಾನೆ.

(ತಾಯ್ನಾಡಿಗಾಗಿ ತುಡಿಯುತ್ತಲೇ ಪ್ಯಾಲೇಸ್ತಿನ್‌ನಿಂದ ದೇಶಭ್ರಷ್ಟನಾಗಿದ್ದ ಕವಿ ಮೊಹಮ್ಮದ್ ದರ್ವಿಶ್ 2008ರಲ್ಲಿ ತೀರಿಕೊಂಡರು. ಅವರು 2004ರಲ್ಲಿ ಪ್ರಕಟಿಸಿದ್ದ ‘ಅನ್‌ಫಾರ್ಚುನೆಟ್ಲಿ, ಇಟ್ ವಾಸ್ ಪ್ಯಾರಡೈಸ್’ ಸಂಕಲನದ ಸಾರಸಂಗ್ರಹ)