ʼಏಯ್ ಕರ್ಕಿ !?ʼ 

ಸುಪ್ತ ಮನವೆಂಬ ಜೇಡವು ಗತದ ನೂಲುಗಳಿಂದ ನೇಯ್ದ ಅರಿವೆಯೇ ನೆನಪು. ನಾವು ಎಲ್ಲೋ ಹುಟ್ಟಿ ಇನ್ನೆಲ್ಲೋ ಬೆಳೆದು ಇನ್ಯಾವಾಗಲೋ ಅಳಿಯುತ್ತೇವೆ. ಇಂಡಿಯಾದಂತ ಶ್ರೇಣೀಕೃತ ಜಾತಿಗ್ರಸ್ತ ದೇಶದಲ್ಲಿ ಉನ್ನತ ಜಾತಿ ಎನಿಸಿಕೊಂಡ ಜಾತಿಯಲ್ಲಿ ಜನಿಸಿದವರೂ ಇಡೀ ಜೀವನದಲ್ಲಿ ಯಾವತ್ತೋ ಒಂದು ಸಲ  ಜಾತಿ, ಬಣ್ಣ, ದೇಹದ ಆಕಾರ ಮತ್ಯಾವುದೋ ಕಾರಣಕ್ಕೆ ನೋವು ನುಂಗಿರುತ್ತಾರೆ. ಇನ್ನು ಕೆಳಜಾತಿಗಳ ವಿಷಯದಲ್ಲಂತೂ ಕೇಳುವಂತೆಯೇ ಇಲ್ಲ . ಸುಣ್ಣದ ಕಲ್ಲು ಬಿರಿ ಹುಯ್ದುಂತೆ ಕಣ ಕಣದಲ್ಲೂ ಅಪಮಾನ, ನೋವು, ಸಂಕಟ.  ಇಂಗ್ಲಿಷಿನ ಎಷ್ಟೊಂದು ಪರಿಕಲ್ಪನೆಗಳಿಗೆ ಕನ್ನಡದಲ್ಲಿ ಸಮಾನರ‍್ಥಕ ಪದಗಳನ್ನೇ ನಾವು ರೂಪಿಸಿಕೊಂಡಿಲ್ಲ, ಅವುಗಳಲ್ಲಿ ಆಟೋಬಯಾಗ್ರಫಿಯೂ ಒಂದು, ಅದ್ಯಾರು ಈ ಆಟೋಬಯಾಗ್ರಫಿಯನ್ನು ಆತ್ಮಚರಿತ್ರೆ, ಆತ್ಮ ಕಥನ ಅಂತ ಹೆಸರಿಟ್ಟು ಕರೆದರೋ ಗೊತ್ತಿಲ್ಲ, ಆತ್ಮವೇ ಇಲ್ಲದವರ ಕತೆ ಏನು ಎತ್ತ ಅಲ್ವಾ , ಅಟೋಬಯಾಗ್ರಫಿಗೊಂದು ಸರಿಯಾದ ಕನ್ನಡದ ಪದ ರೂಪಿಸಿಕೊಡಿ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಕೂಗಳತೆ ದೂರದ ಕಾಡೇನಹಳ್ಳಿಯ ತೋಟವೊಂದರಲ್ಲಿ ಹುಟ್ಟಿ ತಿಪಟೂರು, ದಾವಣಗೆರೆಗಳಲ್ಲಿ ಬೆಳೆದು ಬೆಂಗಳೂರಿನಲ್ಲಿ ನೆಲೆಸಿರುವ  ಕೆ.ಬಿ.ನೇತ್ರಾವತಿ ತಮ್ಮ ಇಡೀ ಜೀವನದ ನೆನಪುಗಳನ್ನು ಇಲ್ಲಿ ದಾಖಲಿಸ ಹೊರಟಿದ್ದಾರೆ. ಓದಿ..,  - ಸಂಪಾದಕ  

ʼಏಯ್ ಕರ್ಕಿ !?ʼ 

 
ಕೆ.ಬಿ.ನೇತ್ರಾವತಿ

      ಕರ್ಕಿ ಎಂಬ ಪದ ಮೊದಲು ನನ್ನ ಕಿವಿಗೆ ಬಿದ್ದದ್ದು ನಾನು ಒಂದನೇ ತರಗತಿಗೆ ಶಾಲೆಗೆ ಹೋಗಲು ತೋಟದಿಂದ ನಡೆದು ಕಾಡೇನಹಳ್ಳಿಯ ಶಾಲೆಗೆ ಹೋಗುವಾಗ. ನಮ್ಮ ತೋಟ ಇದ್ದದ್ದು ಕೆಬಿ ಕ್ರಾಸ್‌ನಿಂದ ನಾವು ಚಿನಾಕಳ್ಳಿ ಅಂತ ಕರೆಯುವ ಚಿಕ್ಕನಾಯಕನಹಳ್ಳಿಗೆ ಹೋಗುವ ರಸ್ತೆಯಲ್ಲಿ , ತರಬೇನಹಳ್ಳಿಯಿಂದ ಕಾಡೇನಹಳ್ಳಿ ಮಧ್ಯ ಬಸವನಗುಡಿ ದೇವಸ್ಥಾನದ ಹತ್ತಿರ. ಬಸ್ ಹತ್ತಿ ಬಸವನಗುಡಿ ಟಿಕೆಟ್ ಕೊಡಿ ಅಂದರೆ ಬಸ್ಸಿನವರು ಮುನಿಸಿನಿಂದಲೇ ಟಿಕೆಟ್ ಕೊಡುತ್ತಿದ್ದರು, ಕಾರಣ ಅಲ್ಲಿ ಸ್ಟಾಪ್ ಕೊಡಬೇಕೆಂದರೆ ಸ್ವಲ್ಪ ಅಪ್ ಹತ್ತಿ ಅಲ್ಲಿ ಬಸ್ ನಿಲ್ಲಿಸಬೇಕು, ಚಿನಾಹಳ್ಳಿಗೆ ಹೋಗುವಾಗ ಇಳಿಜಾರು ಇದ್ದುದರಿಂದ ಸುಲಭವಾಗಿ ಹತ್ತಿಸಿಕೊಳ್ಳುತ್ತಿದ್ದ ಬಸ್‌ನವರು, ನಾವು ಬಸವನಗುಡಿಗೆ ವಾಪಸ್ಸು ಬರುವಾಗ ಮುನಿಸಿಕೊಂಡೇ ಟಿಕೆಟ್ ಕೊಡುತ್ತಿದ್ದರು. ಅಲ್ಲಿ ಇದ್ದದ್ದು ನಮ್ಮ ತೋಟ, ಅಜ್ಜಿಯವರ ತೋಟ, ಸೈನ್ಯದಿಂದ ನಿವೃತ್ತಿ ಹೊಂದಿ ಬಂದ ಡಾಕ್ಟರರ ತೋಟ ಹಾಗೂ ಮುಸ್ಲಿಮರ ಮೂರು ಮನೆಗಳು ಮತ್ತು ಅವರ ತೋಟ. ನಮ್ಮ ಜೊತೆಗೆ ಶಾಲೆಗೆ ಆ ಮುಸ್ಲಿಮರ ಮನೆಯ ಮೂರು ಜನ ಹೆಣ್ಣು ಮಕ್ಕಳು ಬರುತ್ತಿದ್ದರು, ವಾಪಸ್ಸು ಮನೆಗೆ ಬರುವ ವೇಳೆ ನಾವೆಲ್ಲಾ ಒಟ್ಟಿಗೆ ಬರುತ್ತಿದ್ದೆವು, ಹೋಗುವಾಗ ನಾನು ಅಕ್ಕ ಹೋದರೆ ಅವರು ಮೂವರು ಒಟ್ಟಿಗೆ ಬರುತ್ತಿದ್ದರು.

 
     ನಮ್ಮ ರೋಡಿನಲ್ಲಿ ಓಡಾಡುವ ಸರ್ಕಾರಿ ಬಸ್, ಪ್ರೈವೇಟ್ ಬಸ್‌ಗಳನ್ನು ನೋಡಿಯೇ ಘಂಟೆ ಎಷ್ಟು ಅಂತ ತಿಳಿದುಕೊಳ್ಳುತ್ತಿದ್ದೆವು, 8 ಗಂಟೆಗೆ, 1 ಗಂಟೆಗೆ ಪ್ರಕಾಶ ಬಸ್, 12.30 ಕ್ಕೆ  ತುರುವೇಕೆರೆ ಸರ್ಕಾರಿ ಬಸ್, ಹೀಗೆ, ರಾತ್ರಿ ಸುನಂದ ಬಸ್ ಹೋದರೆ ಓ ಸಿನೆಮಾ ಮುಗೀತು ಲಾಸ್ಟ್ ಬಸ್ ಹೋಯ್ತು ಅಂತ ಅಂದರೆ 10.30 ಆಗಿದೆ ಅಂತ, ಆಗಾಗ ಓಡಾಡುವ ಅಲ್ಲೊಂದು ಇಲ್ಲೊಂದು ಬಸ್, ಆಗೊಂದು ಈಗೊಂದು ಓಡಾಡುವ ಎತ್ತಿನ ಗಾಡಿ, ಆಗೊಮ್ಮೆ ಈಗೊಮ್ಮೆ ಓಡಾಡುವ ಒಂದಿಬ್ಬರು ಜನ ಬಿಟ್ಟರೆ ಅದು ನಿರ್ಜನ ಪ್ರದೇಶ. ಮಧ್ಯಾಹ್ನದ ಹೊತ್ತು ತೆಂಗಿನ ಮರದ ಕೆಳಗೆ ಮಲಗಿದರೆ ತೆಂಗಿನ ಗರಿಯ ನೆಳಲು ಬೆಳಕು ಮುಖದ ಮೇಲೆ ಅರ್ಧ ಬಿಸಿಲು ಅರ್ಧ ನೆರಳು ಮೈಯನ್ನು ಬೆಚ್ಚಗೆ ಮಾಡುವ ಹುಲ್ಲು, ನೀರವ ಮೌನ, ಗಾಳಿಯಲ್ಲಿನ ಒಂದು ಬಿಸಿ ತುಂಬಿದ ವಾಸನೆ ತಣ್ಣನೆ ತಂಗಾಳಿ ಆಹಾ , ಸ್ವರ್ಗಕ್ಕೆ ಮೂರೇ ಗೇಣು ಚೆನ್ನಾಗಿ ನಿದ್ರೆ ಹತ್ತುತ್ತಿತ್ತು, 


     ನನಗೆ ನೆನಪಿರುವಷ್ಟು ಸಣ್ಣ ವಯಸ್ಸಿನ ನೆನಪಿನಂಗಳದಲ್ಲಿ ದಾಖಲಾಗಿರುವುದು, ತೋಟದಲ್ಲಿ ಬೆಳೆದದ್ದೇ, ತೋಟದಿಂದ ಕಾಡೇನಹಳ್ಳಿಯ ಒಂದೇ ಕೊಠಡಿಯ ಶಾಲೆಗೆ ಹೋಗುತ್ತಿದ್ದದ್ದು. ಸುಮಾರು ೧ ಫರ್ಲಾಂಗು ದೂರ ನಡೆದೇ ಹೋಗುತ್ತಿದ್ದೆವು, ನಾನು ಮತ್ತು ಅಕ್ಕ. ಎಲ್ಲರೂ ನಡೆದೇ ಹೋಗುತ್ತಿದ್ದೆವು. ಯಾರೂ ಬಸ್ ಹತ್ತುವ ಅಭ್ಯಾಸ ಇರಲಿಲ್ಲ. ಚಿನಾ ಹಳ್ಳಿಗೆ ಹೋಗುವಾಗ ಮಾತ್ರ ಬಸ್ ಹತ್ತುತ್ತಿದ್ದದ್ದು. 


      ತೋಟದಿಂದ ಕಾಡೇನಹಳ್ಳಿಗೆ ತೆರಳುವಾಗ ಒಂದು ತಿರುವು ಬರುತ್ತದೆ, ಅಲ್ಲಿ ಒಂದು ತಾರೆ ಮರ ಅದಕ್ಕೆ ಹೊಂದಿಕೊಂಡಂತೆ ಒಂದು ನಾಗರ ಕಲ್ಲು. ಅಲ್ಲಿ ಹಬ್ಬ ಹರಿದಿನಗಳಲ್ಲಿ ದೀಪ ಊದುಬತ್ತಿ ಹಚ್ಚಿ, ಎಡೆ ಇಕ್ಕಿ ಹೋಗುತ್ತಿದ್ದರು ಆ ಹಳ್ಳಿಯ ಜನ. ಅವರು ಇಟ್ಟ ಎಡೆ ಯಾವಾಗಲೂ ಹಸು, ದನ ಎಮ್ಮೆ ಅಥವಾ ನಾಯಿ ಪಾಲಾಗುತ್ತಿದ್ದದ್ದೇ ಹೆಚ್ಚು. ಆ ತಿರುವಿನಲ್ಲಿ ರಾತ್ರಿ ಹೊತ್ತು ಬಹಳವೇ ಅಪಘಾತವಾಗುತ್ತಿತ್ತು, ಅದಕ್ಕೆ ಕಾರಣ ತಾರೆ ಮರ, ಶನಿ ದೇವರು , ದೆವ್ವ ಕಾರಣ ಅಂತ ಜನ ಹಬ್ಬಿಸಿದ್ದರು. ನಾವು ಕೂಡ ಆ ತಿರುವನ್ನು ಹಾದು ಹೋಗಬೇಕಿತ್ತು, ನಮಗೆ ದೆವ್ವದ ಭಯ ಜಾಸ್ತಿ , ಹಾಗಾಗಿ ಸ್ವಲ್ಪ ವೇಗವಾಗಿ ನಡೆದು ಆ ತಿರುವು ದಾಟುತ್ತಿದ್ದೆವು. 


     ಹಾಗೆ ಒಮ್ಮೆ ಆ ತಿರುವು ದಾಟುವಾಗ ʼಏ ಕರ್ಕಿʼ , ನಿಂತ್ಕೋʼ ಅಂತ ಕೂಗಿದ ಸದ್ದು ಕೇಳಿ ಗಾಬರಿ ಆಯಿತು, ದೆವ್ವವಾ ಅಂತ ಸುತ್ತಲೂ ನೋಡಿದೆವು, ಧ್ವನಿ ಬಂದ ಕಡೆ ನೋಡಿದರೆ ತಾರೆ ಮರಕ್ಕೆ ಹೊಂದಿಕೊಂಡಂತೆ ಇದ್ದ ತೋಟದ ಒಳಗಿಂದ ಒಬ್ಬ ವ್ಯಕ್ತಿ ಹಾಗೆ ಕೂಗಿದ್ದು ಅಂತ ಆತ ಪುನಃ ಕೂಗಿದಾಗ ತಿಳಿಯಿತು, ಆದರೆ ಹಾಗೆ ಏಕೆ ಕೂಗುತ್ತಿದ್ದಾನೆ, ಆತ ನಮಗೆ ಪರಿಚಯದವನಲ್ಲ ಅನಿಸಿ ನಾನು ಅಕ್ಕ ಮುಖ ಮುಖ ನೋಡಿಕೊಂಡೆವು, ನಮಗೆಯಾ ಅಂತ ಹಿಂತಿರುಗಿ ನೋಡಿದೆವು, ಆತ ತೋಟದಿಂದ ನಮ್ಮೆಡೆಗೆ ಬಹಳವೇ ರಭಸವಾಗಿ ನುಗ್ಗಿ ಬಂದ, 


“ಏಯ್ ನಿನನ್ನೇ ಕೂಗುತ್ತಿರುವುದು” ಅಂತ ಅಕ್ಕನನ್ನ ಬಿಟ್ಟು ನನ್ನ ದಾರಿಗೆ ಅಡ್ಡ ಬಂದ, ನನಗೆ ಗಾಬರಿ, ಜೊತೆಗೆ ಆ ಪದದ ಅರ್ಥ ಎಲ್ಲ ಒಟ್ಟಿಗೇ ಯೋಚಿಸುತ್ತಾ ಅಲ್ಲಿಂದ ಓಡಲು ಮುಂದಾದೆ. ಆತ ನನ್ನ ಕೈ ಹಿಡಿಯಲು ಬಂದಾಗ ಕೈಕಿತ್ತುಕೊಂಡು ಶಾಲೆ ಇರುವ ಕಾಡೇನಹಳ್ಳಿ ಕಡೆ ಓಡಿದೆ. ಆತ ಸ್ವಲ್ಪ ದೂರ ಓಡಿ ನನ್ನ ವೇಗಕ್ಕೆ ಓಡಲಾಗದೆ ಹಿಂತಿರುಗಿದ.


        “ನಾಳೆ ಇದೇ ದಾರಿಯಾಗಿ ಬರಬೇಕಲ್ಲವಾ ಬಾ ನೋಡ್ಕೋತೀನಿ” ಅಂದ, ಅವನು ಅಕ್ಕನನ್ನ ಏನೂ ಮಾಡಲಿಲ್ಲ. ಪುನಃ ಸಂಜೆ ಆ ದಾರಿಯಾಗಿ ಬರುವಾಗ,” ಅವನು ತೋಟದಲ್ಲಿ ಇದ್ದಾನ ನೋಡು” ಅಂತ ಮುಂದೆ ಕಳಿಸಿ ಅವನು ಇಲ್ಲ ಅಂತ ಅಕ್ಕ ಹೇಳಿದ ಮೇಲೆ ಒಂದೇ ಉಸುರಿಗೆ ಆ ತೋಟ ದಾಟಿ ಮುಂದಿನ ತಿರುವು ದಾಟಿ ಓಡಿದ್ದೆ, ಅಕ್ಕ ನಿಧಾನವಾಗಿ ಬಂದು ನನ್ನ ಸೇರಿಕೊಂಡಳು, ‘ ಹಂಗಂದ್ರೆ ಏನುʼ ಅಂದೆ ಅಕ್ಕ ನನಗೂ ಗೊತ್ತಿಲ್ಲ ಅಂದಳು. ಮಾರನೆ ಬೆಳಗ್ಗೆ ನಾನು “ಶಾಲೆಗೆ ಹೋಗಲ್ಲ” ಅಂತ ಅಂದೆ, ಅಮ್ಮ ಏಕೆ ಅಂದರೆ ವಿಷಯ ತಿಳಿಸಿದೆ, “ಹಂಗಂದ್ರೆ ಏನು” ಅಂದೆ, “ಅಂತ ಕೆಟ್ಟ ಜನ ಅಲ್ಲಿ ಯಾರೂ ಇಲ್ಲ, ಅವನು ಕಂಡರೆ ಹಾಗೇಕೆ ಕರೆದಿರಿ ಅಂತ ಅನು ಕೇಳುತ್ತಾಳೆ, ನೀನು ಅವಳ ಜೊತೆಗೇ ಹೋಗು” ಅಂತ ಹೇಳಿ ಅಮ್ಮ ಹಿಂಸೆ ಮಾಡಿ ನನ್ನನ್ನು ಶಾಲೆಗೆ ಕಳಿಸಿತು. 


    ಅಪ್ಪನ ಹತ್ತಿರ ಈ ವಿಷಯ ಹೇಳಲು ಭಯ, ಅಷ್ಟು ಹೊತ್ತಿಗೆ ಅಪ್ಪ ಆಫೀಸಿಗೆ ಹೊರಟುಹೋಗಿತ್ತು. ನನಗೋ ಒಳಗೊಳಗೇ ಭಯ, ಆತ ಏಕೆ ಹಾಗೆ ಕೂಗಿದ, ನಾನು ಕೈಗೆ ಸಿಕ್ಕರೆ ಏನು ಮಾಡಬಹುದು, ಅಂತೆಲ್ಲಾ ಯೋಚಿಸುತ್ತಾ, ಮನೆಗೆ ವಾಪಸ್ಸು ಹೋದರೆ ಅಮ್ಮ ಬೈಯುತ್ತದೆ. ಶಾಲೆಗೆ ಹೋಗಲು ಆ ವ್ಯಕ್ತಿಯ ಭಯ. ಕೈ ಉಗುರು ಕಚ್ಚುತ್ತಾ ಮೆತ್ತಗೆ ಆ ತಿರುವಿನಲ್ಲಿ ನಿಂತು ತೋಟವನ್ನೆಲ್ಲಾ ಕಣ್ಣಲ್ಲೇ ಸ್ಕ್ಯಾನ್ ಮಾಡಿ ಆತ ಎಲ್ಲೂ ಕಾಣದ್ದರಿಂದ ಒಂದೇ ಓಟಕ್ಕೆ ಓಡಲು ಶುರು ಮಾಡಿದೆ. ಅದೆಲ್ಲಿದ್ದನೋ ಆತ ತೆಂಗಿನ ಮರದ ಬುಡದಿಂದ ಮೇಲೆದ್ದು ʼಏಯ್ ಕರ್ಕಿ ನಿಂತ್ಕೋʼ ಅಂತ ಅಟ್ಟಿಸಿಕೊಂಡು ಬರಲು ಶುರು ಮಾಡಿದ. ಇಂದೂ ಕೂಡ ಆತನಿಗಿಂತ ನಾನು ಜೋರಾಗಿ ಓಡಿದೆ. ಹಳ್ಳಿ ಕಾಣುವಷ್ಟು ದೂರ ಓಡಿ ಹಿಂತಿರುಗಿ ನೋಡಿದೆ, ಆತ ವಾಪಸ್ಸು ಹೋಗುತ್ತಿದ್ದ, ಹೃದಯ ಭಯದಿಂದ ಜೋರಾಗಿ ಓಡಿದ ರಭಸಕ್ಕೆ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು, ಹೃದಯ ಬಾಯಿಗೆ ಬಂದಂತೆ ರಕ್ತವೆಲ್ಲಾ ನನ್ನ ಮಿದುಳಿಗೆ ನುಗ್ಗಿದಂತೆ ಮುಖವೆಲ್ಲಾ ಬಿಸಿಯಾಗಿ ಉರಿಯುವಂತೆ ಭಾಸವಾಗುತ್ತಿತ್ತು. 


     ಛೇ, ಇದೆಂಥಾ ಭಯ, ಮತ್ತೆ ಸಂಜೆ ಏನು ಮಾಡಲಿ ಹೀಗೇ ಯೋಚಿಸುತ್ತಾ ಶಾಲೆ ಸೇರಿಕೊಂಡೆ. ಅಕ್ಕ ಅವನನ್ನ ಏನೂ ಕೇಳಲಿಲ್ಲ. ನಾನು “ಯಾಕೆ ಕೇಳಲಿಲ್ಲ” ಅಂದರೆ ನನಗೂ ಭಯ ಆಯಿತು ಅಂದಳು. ಅವಳನ್ನು ಬಯ್ಯುವುದರಲ್ಲಿ ಪ್ರಯೋಜನ ಇಲ್ಲ ಅಂತ ಸುಮ್ಮನಾದೆ. ಕಣ್ಣಂಚಿನಲ್ಲಿ ಹನಿ ನೀರಾಡುತ್ತಿತ್ತು.


    ಸಂಜೆ ತೋಟದಲ್ಲಿ ಆತ ಇರಲಿಲ್ಲ. ಹೇಗೋ ಮನೆ ಸೇರಿಕೊಂಡೆವು ಮನಸ್ಸು ಎಲ್ಲೂ ನಿಲ್ಲುತ್ತಿಲ್ಲ. ಬೇಸರ ಯಾರಿಗೆ ಹೇಳಿಕೊಳ್ಳಲಿ. ತೋಟಕ್ಕೆ ಹೋಗಿ ಒಬ್ಬಳೇ ಅತ್ತೆ, ಬಾವಿಗೆ ಕಲ್ಲು ಎಸೆಯುತ್ತಾ. 


    ಮತ್ತದೇ ಭಾನುವಾರ ಆತ ನಮ್ಮ ಅಜ್ಜಿ ತೋಟದಲ್ಲಿ ಕಾಣಿಸಿಕೊಂಡ, ಆತನ ಕಂಡು ಭಯದಿಂದಲೇ ಅಜ್ಜಿ ಮರೆಯಲ್ಲಿ ನಿಂತು ಅಜ್ಜಿಗೆ ದೂರು ಹೇಳಿದೆ. ಎಲ್ಲರಿಗಿಂತ ಅಜ್ಜಿಯೇ ಧೈರ್ಯಸ್ಥೆ ಅನ್ನಿಸಿತ್ತು ನನಗೆ, ಅಜ್ಜಿ ʼಏಯ್ ಯಾಕೋ ಹಂಗೆ ಹೆದರಿಸುತ್ತೀಯಾʼ ಅಂದರೆ ʼಏಯ್ ನಕ್ಸಾಲಕ್ಕೆ ಹಂಗಂದೆ ಬಿಡು ಇನ್ನು ಮುಂದೆ ಅನ್ನಲ್ಲ ಆಯ್ತʼ ಅಂದ, ನನ್ನ ಕಣ್ಣಲ್ಲಿ ಆಡುತ್ತಿದ್ದ ನೀರು ಕೆನ್ನೆ ಮೇಲೆ ಹರಿಯುತ್ತಿದ್ದ ಕಣ್ಣೀರು ಒರೆಸಿಕೊಂಡೆ ಪೆದ್ದು ನಗೆ ನಕ್ಕೆ. ಅದು ಆತ ಸುಮ್ಮನೆ ಕರೆದದ್ದು ಅಂತ ನನಗನ್ನಿಸಲಿಲ್ಲ. ಆತ ಬೇಕೆಂತಲೇ ನನ್ನ ಹಂಗೆ ಕರೆದಿರುವುದು ಅಂತ ನನ್ನ ಭಾವನೆ. ಅದೇ ಸರಿ ಅಂತ ಮನಸ್ಸು ಹೇಳುತ್ತಿತ್ತು. 


     ಮನೆಗೆ ಬರುವ ನೆಂಟರಿಷ್ಟರೆಲ್ಲ ಅಮ್ಮನ ಹತ್ತಿರ ʼದೊಡ್ಡವಳೇನೋ ಸರಿ ಬೆಳ್ಳಗಿದ್ದಾಳೆ, ಇವಳನ್ನ ಹೇಗೆ ಕಳಿಸುವೆ ಕಷ್ಟ ಕಷ್ಟʼ ಅಂದಾಗ ಹಾಗಾದರೆ ನಾನು ಕಪ್ಪಗಿರುವುದು ತಪ್ಪೇ, ನನ್ನ ಬಣ್ಣದಿಂದ ಇವರಿಗೆ ಅಷ್ಟು ತೊಂದರೆಯೇ ಅಂತ ಅನ್ನಿಸಿ ಅಲ್ಲಿಂದ ಸುಮ್ಮನೆ ಆಚೆ ನಡೆದೆ. ಹಾಗಾದ್ರೆ ನಾನು ಇನ್ನೂ ಕಪ್ಪಾಗಬಾರದು ಅಂದ್ರೆ ನಾನು ಬಿಸಿಲಿಗೆ ಹೋಗಬಾರದು (ಆಗ ನನಗಿದ್ದ ತಿಳುವಳಿಕೆ ಜನ ಬಿಸಿಲಿಗೆ ಹೋದರೆ ಕಪ್ಪಗಾಗುತ್ತಾರೆ ಅಂತ) ಅಂತ ಅಂದಿನಿಂದ ಛತ್ರಿ ಹಿಡಿದು ತೋಟವೆಲ್ಲಾ ಓಡಾಡುತ್ತಿದ್ದೆ, ಅಮ್ಮ ಅಪ್ಪ ಏನೂ ಹೇಳಲಿಲ್ಲ ಯಾಕೆ ಅಂತ ಕೇಳಿದ ಅಮ್ಮ ಕಾರಣ ಕೇಳಿ ನಕ್ಕು ಸರಿ ಅಂತ ಸುಮ್ಮನಾಗಿತ್ತು, ಆದರೆ ಅದೇ ಛತ್ರಿ ಹಿಡಿದು ಅಜ್ಜಿ ತೋಟಕ್ಕೆ ಹೋದೆ ಅಲ್ಲಿ ಬಾವಿ ಹತ್ತಿರ ತೆಂಗಿನ ಗರಿ ಕಡ್ಡಿ ಸಿಗಿಯುತ್ತ  ಕುಳಿತಿದ್ದವರು ʼಅದ್ಯಾಕ್ ಛತ್ರಿ ಹಿಡ್ಕೊಂದು ಬಂದಿರುವೆ ? ಏನು ಅಷ್ಟೊಂದು ಬಿಸಿಲ ನಿನಗೆʼ ಅಂದರೆ ʼಇಲ್ಲ ನಾನು ಇನ್ನೂ ಕಪ್ಪಗಾಗಬಾರದು ಅಂತ, ಬಿಸಿಲಲ್ಲಿ ಓಡಾಡುದ್ರೆ ಇನ್ನೂ ಕಪ್ಪಗಾಗುತ್ತೀನಿ ಅದಕ್ಕೆʼ ಅಂದೆ ಅವರೆಲ್ಲ ಗೊಳ್ಳೆಂದು ನಕ್ಕು ʼಅಗೋ ನೋಡು ಇವಳನ್ನ ಬಿಸಿಲಲ್ಲಿ ಓಡಾಡುದ್ರೆ ಕಪ್ಪಗಾಗೋದಂತೆ, “ಏಯ್ ನೀನು ಛತ್ರಿ ಹಿಡಿದು ಓಡಾಡುದ್ರೂ  ಅಷ್ಟೆ ನೆರಳಲ್ಲಿ ಇದ್ದರೂ  ಅಷ್ಟೆ ನಿನ್ನ ಬಣ್ಣ ಬದಲಾಗೋಲ್ಲ. ನೀನು ಇರುವುದೇ ಕಪ್ಪಗೆ” ಅಂತ ಅವರು ನಗುತ್ತಾ ಚೇಷ್ಟೆ ಮಾಡಿದಾಗ ಅಳು ಒತ್ತರಿಸಿ ಬಂತು, ಓ ಹಾಗಾದ್ರೆ ನನ್ನ ಬಣ್ಣನೇ ಕಪ್ಪು ? ನಾನು ಯಾವತ್ತೂ ಬೆಳ್ಳಗೆ ಆಗೊಲ್ಲ ಬಿಸಿಲಲ್ಲಿ ಇದ್ರೂ ಅಷ್ಟೆ ನೆರಳಲ್ಲಿ ಇದ್ದರೂ ಅಷ್ಟೆ ಅಂತ ಛತ್ರಿ ತೆಗೆದು ಕೈಯಲ್ಲಿ ಹಿಡಿದೆ. ಯಾಕೆ ಛತ್ರಿ ಹಿಡಿದುಕೊಳ್ಳಲವಾ ಅನ್ನುವ ಅವರ ಮಾತು ಕೇಳಿಸಿದ್ರೂ ಕೇಳಿಸದ ಹಾಗೆ ಅಲ್ಲಿಂದ ವಾಪಸ್ಸು ನಡೆದೆ ಅವರ ನಗು ನನ್ನ ಹಿಂಬಾಲಿಸುತ್ತಲೇ ಇತ್ತು.