ಕಾಂಗ್ರೆಸ್‌ನ ತಪ್ಪುಗಳ ಹಿಂದೆ ಮುಖ ಮುಚ್ಚಿಕೊಳ್ಳುವ ಬಿಜೆಪಿ

ನಮಗೆ ಸಣ್ಣವರಾಗಿದ್ದಾಗ ಹೇಳಿದ್ದ ತಿಳುವಳಿಕೆ, ಮನುಷ್ಯ ಸತ್ತ ಮೇಲೆ ಆತನ ಬಗ್ಗೆ ಒಳ್ಳೆಯದನ್ನ ಮಾತ್ರ ಆಡಬೇಕು, ಕೆಟ್ಟದ್ದನ್ನು ಮರೆತುಬಿಡಬೇಕು ಕಾರಣ ಆತನನ್ನ ಸಮರ್ಥಿಸಿಕೊಳ್ಳಲು ಆತ ನಮ್ಮೊಡನಿರುವುದಿಲ್ಲ ಎಂದು.

ಕಾಂಗ್ರೆಸ್‌ನ ತಪ್ಪುಗಳ ಹಿಂದೆ ಮುಖ ಮುಚ್ಚಿಕೊಳ್ಳುವ ಬಿಜೆಪಿ

ವರ‍್ತಮಾನ


ಕೆ.ಬಿ.ನೇತ್ರಾವತಿ

   ‘ಅಮಿತ್ ಷಾ’ ಸಂಸತ್‌ನಲ್ಲಿ ಅಂಬೇಡ್ಕರ್ ಬಗ್ಗೆ ಆಡಿದ ಮಾತನ್ನ ಸಮರ್ಥಿಸಿಕೊಳ್ಳುವ ರೀತಿ ಯಾರೂ ಒಪ್ಪತಕ್ಕದ್ದಲ್ಲ. ಗೃಹ ಸಚಿವ ಆಡಿದ ಮಾತನ್ನ ಖಂಡಿಸಬೇಕೇಬೇಕು. ಅದು ಬಿಟ್ಟು ಕಾಂಗ್ರೆಸ್‌ನವರು ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದು ಅಂತ ಉತ್ತರ ಕೊಟ್ಟರೆ ಏನು ಅರ್ಥ? ಅಂದರೆ ಕಾಂಗ್ರೆಸ್ ಮಾಡಿದ ತಪ್ಪನ್ನೆಲ್ಲ ನಾವು ಬೇರೆ ರೀತಿ ಮಾಡುತ್ತೇವೆ. ಕಾಂಗ್ರೆಸ್ ನವರು ನಮ್ಮನ್ನು ಯಾವುದನ್ನೂ ಪ್ರಶ್ನಿಸುವಂತಿಲ್ಲ ಅಂತ ಧೋರಣೆ ಆದರೆ. ಅದು ಸರಿಯೆ? ಖಂಡಿತಾ ಅಲ್ಲ, ಸಂಸತ್ ಉತ್ತರ ಕೊಡಬೇಕಿರುವುದು, ಜವಾಬ್ದಾರರಾಗಬೇಕಿರುವುದು ದೇಶದ ಜನತೆಗೆ. ತಮಗೆ ಓಟು ಕೊಟ್ಟ ಓಟುದಾರರಿಗೆ, ಕಾಂಗ್ರೆಸ್ ವಿರೋಧಪಕ್ಷ ಅಷ್ಟೆ. ನೀವು ಮಾಡುವ ಪ್ರತಿಯೊಂದು ತಪ್ಪಿಗೆ ವಿರೋಧಪಕ್ಷವಾಗಿ ಪ್ರಶ್ನಿಸುವ ಕಾಂಗ್ರೆಸ್ ಅನ್ನು ಬಿಜೆಪಿಯು ಮೋಘಲರು, ಬ್ರಿಟಿಷರು ಹಾಗೂ ಸ್ವಾತಂತ್ರ‍್ಯ ಪಡೆದ ದಿನದಿಂದ ಇಂದಿನವರೆಗಿನ ತಪ್ಪುಗಳ ಗುರಾಣಿ ಆಗಿ ಬಳಸಿಕೊಳ್ಳುವುದು ತಪ್ಪು. 


ನೋಟ್ ಬಂದಿ ಬಗ್ಗೆ ಪ್ರಶ್ನಿಸಿದರೆ ನೋಡಿ ನೀವು ಆಗ ಮಾಡಿರಲಿಲ್ಲವೆ? ಎನ್ನುತ್ತಾರೆ. 


   ಬ್ಯಾಂಕ್ ವಿಲೀನದ ಬಗ್ಗೆ ಪ್ರಶ್ನೆ ಮಾಡಿದರೆ ನೋಡಿ ನೀವು ಬ್ಯಾಂಕ್ ರಾಷ್ಟ್ರೀಕರಣ ಮಾಡಿರಲಿಲ್ಲವೆ? ಎಂದು ಪ್ರಶ್ನಿಸುತ್ತಾರೆ. 


   ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ, ನೋಡಿ ಅಂದರೆ, ಅಂದು ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ನಾವಲ್ಲ ಅನ್ನುತ್ತಾರೆ.


    ನೋಡಿ ಚೈನಾ ಒಳನುಸುಳುತ್ತಿದೆ ಅಂತ ಅಂದರೆ ನೋಡಿ ಇಂಡಿಯಾದ ಭಾಗವನ್ನ ಚೀನಾಗೆ ಬಿಟ್ಟುಕೊಟ್ಟದ್ದು ನೆಹರು ಎನ್ನುತ್ತಾರೆ.


   ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿದೆ ಎಂದರೆ ನೋಡಿ ಇದು ಆಗಿರುವುದು ಕಾಂಗ್ರೆಸ್ ಕಾಲದಲ್ಲಿ ನಮ್ಮ ಆಡಳಿತದಲ್ಲಿ ಹಾಗೆ ನಮೂದೇ ಅಗಿಲ್ಲ.


   ನೋಡಿ ಮಣಿಪುರ ಹತ್ತಿ ಉರಿಯುತ್ತಿದೆ? ಎಂದರೆ ಅದರ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇಲ್ಲ?! ಹೀಗೇ ಪಟ್ಟಿಮಾಡುತ್ತ ಹೋದರೆ ಪಟ್ಟಿ ಉದ್ದ ಬೆಳೆಯುತ್ತದೆ.


  ಅಂದು ಮಾಡಿದ್ದ ನೋಟ್ ಬಂದಿಗೂ ಇಂದಿನದಕ್ಕೂ ಬಹಳ ವ್ಯತ್ಯಾಸ ಇದೆ ಜನ ಅದನ್ನ ಅರ್ಥ ಮಾಡಿಕೊಳ್ಳಬೇಕಿದೆ. 


   ಏಕಾಏಕಿ ರಾತ್ರಿ ಎಂಟು ಗಂಟೆಗೆ ಇಡೀ ದೇಶದ ಕರೆನ್ಸಿಯ ಮುಕ್ಕಾಲು ಪ್ರಮಾಣದಷ್ಟಿದ್ದ ರೂ 500, 1000 ಗಳನ್ನು ರದ್ದುಪಡಿಸುವ ಮೂಲಕ ದೇಶದ ಜನರ ಜೀವನದ ಜೊತೆ ಚೆಲ್ಲಾಟ ಆಡಿದರು. ನೂರಾರು ಜನ ಸತ್ತರು, ನೋಟು ರದ್ದತಿಯ ಫಲಿತಾಂಶ ಶೂನ್ಯ, ಪ್ರಧಾನಿ ಉತ್ತರ ಕೊಟ್ಟರೆ? ಹೊಣೆಗಾರರಾದರೆ , ಇಲ್ಲ .


ನಮ್ಮ ಹೆಮ್ಮೆಯ ಮೈಸೂರು ಬ್ಯಾಂಕ್ ನಮ್ಮ ನಾಡಿನ ಅಸ್ಮಿತೆಯಾಗಿತ್ತು ಜನರ ಸ್ನೇಹಿಯಾಗಿದ್ದ ಈ ಬ್ಯಾಂಕ್ ವಿಲೀನ ಗೊಂಡ ಎಸ್ ಬಿ ಐನಲ್ಲಿ ಜನ ಸ್ನೇಹಿ ವಾತಾವರಣ ಇಲ್ಲ. ಇದನ್ನ ಬಿಜೆಪಿಯವರು ವಿರೋಧಿಸಲೇ ಇಲ್ಲ. ಈ ವಿಲೀನವು ನೆಲದ ಭಾಷೆ ಗೊತ್ತಿಲ್ಲದ ಜನ, ದುರಹಂಕಾರ ತುಂಬಿದ ಉತ್ತರ ಭಾರತದ ಜನ ಇಲ್ಲಿ ಬಂದು ದಬ್ಬಾಳಿಕೆ ಮಾಡಲು ಅನುಕೂಲ ಮಾಡಿಕೊಟ್ಟಿದೆ ಅಷ್ಟೆ. ಕನ್ನಡ ಕಲಿಯದ ಉತ್ತರ ಭಾರತದ ಅಧಿಕಾರಿ ನೌಕರರು ದಕ್ಷಿಣ ಭಾರತದಲ್ಲಿ ನೆಲೆಸಲು ಜಾಗ ಸಿಕ್ಕಿತು ಅಷ್ಟೆ.


    ಚುನಾವಣೆ ಘೋಷಣೆಯಾದ ಸಮಯಕ್ಕೆ ತಕ್ಕಂತೆ ದಲಿತ ಮಹಿಳೆ ಅವಮಾನ ನಡೆಯುತ್ತೆ, ಹಿಂದೂ ಹುಡುಗಿ ಹತ್ಯೆ ಒಬ್ಬ ಮುಸ್ಲಿಂ ಯುವಕನಿಂದ ನಡೆಯುತ್ತೆ . ಇಂತಹ ಸಂದರ್ಭಗಳನ್ನ ಕಾಂಗ್ರೆಸ್ ಅರ್ಥಮಾಡಿಕೊಂಡು ಗುಪ್ತಚರ ಇಲಾಖೆಯನ್ನು ಭದ್ರ ಪಡಿಸಿಕೊಳ್ಳಬೇಕಿದೆ. ಅದನ್ನ ಬಿಟ್ಟು ಎಲ್ಲೋ ಏನೋ ನಡೆಯುವುದು ಸುಮ್ಮನೆ ಸುಮ್ಮನೆ ನಡೆದಿದೆ ಎನ್ನುವ ರೀತಿ ವರ್ತಿಸುವುದು ವರ್ತಿಸುವುದು ಥರವಲ್ಲ. ಪ್ರಕರಣದ ಆಳಕ್ಕೆ ಇಳಿದು ಪರಿಶೀಲಿಸಬೇಕಿದೆ. ಎಲ್ಲಾ ನಾಯಕರ ಮೇಲೆ ಇಡಿ, ಐಟಿ –ಕೇಸುಗಳು ಇರುವಂತೆ ನೋಡಿಕೊಂಡಿರುವುದರಿಂದ ಎಲ್ಲರೂ ನಿಜ ತಿಳಿದು ಸುಮ್ಮನಿರಬಹುದೇ? 


    ಡೆಂಗ್ಯು, ಬಾಣಂತಿಯರ ಸಾವು- ಇದಕ್ಕೆ ಹಲವಾರು ಕಾರಣಗಳಿರುತ್ತದೆ. ಒಂದು ಅಲ್ಲಿರುವ ವೈದ್ಯ ಬಿಜೆಪಿಯವರ ಕಡೆಯವನಿರಬಹುದು. ಐವಿ ಸಪ್ಲೈಯರ್ ಅಥವಾ ಅದನ್ನ ಕಂಟಾಮಿನೇಟ್ ಮಾಡಲು ಸಾಕಷ್ಟು ಜನರ ಕೈವಾಡ ಇರಬಹುದು. ಅದು ಹೇಗೆ ಇಂಥ ಘಟನೆ ನಡೆಯುತ್ತೆ ನಾವು ಇಂತದ್ದಕ್ಕೆಲ್ಲ ಪ್ರತಿಭಟನೆ ಮಾಡಬೇಕು, ಅದಕ್ಕೆ ಇಂಥವರು ಹೀಗೆ ಉತ್ತರ ಕೊಡಬೇಕು ಪ್ರಶ್ನೆ ಎತ್ತಬೇಕು ಅಂತ ಹೇಗೆ ಬಿಜೆಪಿಯವರಿಗೆ ಮೊದಲೇ ಗೊತ್ತಿರುತ್ತದೆ? ತತ್ ಕ್ಷಣ ಎಲ್ಲಾ ಕಡೆ ಒಂದೇ ರೀತಿಯ ಹೇಳಿಕೆ, ಪತ್ರಿಕಾ ಗೋಷ್ಠಿ, ಪ್ರತಿಭಟನೆ?! ಹೇಗೆ ನಡೆಯುತ್ತವೆ, ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು.ಇದನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಬೇಕಿದೆ.


    ಜಿಎಸ್ ಟಿ ರಾಜ್ಯ ಸರ್ಕಾರಕ್ಕೆ ಆಗುವ ಅನ್ಯಾಯವನ್ನ ಬಿಜೆಪಿಯವರು ರಾಜ್ಯದ ಹಿತಕ್ಕಾಗಿ ಜನರ ಹಿತಕ್ಕಾಗಿ ಪ್ರತಿಭಟಿಸಬೇಕೇ ಹೊರತು, ಕಾಂಗ್ರೆಸ್ ವಿರುದ್ಧ ಅಲ್ಲ, ಗ್ಯಾರಂಟಿಗಳನ್ನು ಕೊಟ್ಟಿರುವುದು ರಾಜ್ಯದ ಜನತೆಗೆ ಅದರ ವಿರುದ್ಧ ಹೋರಾಡುವ ಬದಲು, ರಾಜ್ಯಕ್ಕೆ ಬರಬೇಕಾದ ಅನುದಾನಕ್ಕೆ ಹೊಡೆದಾಡಲಿ. 


‌  ಡಿಲಿಮಿಟೇಷನ್ ಅನ್ನೂ ವಿರೋಧಿಸುವುದಿಲ್ಲ. ಇಂಥವರನ್ನ ಜನತೆ ಸಂಸತ್ತಿಗೆ ಆರಿಸಿರುವುದು ವಿಪರ್ಯಾಸ. 


    ಇನ್ನ ಸಾರ್ವಜನಿಕ ಉದ್ದಿಮೆಗಳನ್ನು ಒಂದೊಂದಾಗಿ ಏರ್ ಪೋರ್ಟ್ , ಬಂದರು, ಟೆಲಿಕಾಂ, ಹೀಗೆ ಖಾಸಗಿ ಒಡೆತನಕ್ಕೆ ಮಾರಿರುವುದರ ಬಗ್ಗೆ ಚಕಾರ ಎತ್ತದ ಬಿಜೆಪಿ ಸಂಸದರು ಕ್ಷುಲ್ಲಕ ಭ್ರಷ್ಟಾಚಾರಗಳನ್ನ ಹಿಡಿದು ದಿನಗಟ್ಟಲೆ ಪ್ರತಿಭಟನೆ ಮಾಡುತ್ತಾರೆ. ಅವರಿಗೆ ಬೇಕಿರುವುದು ಜನರ ಯೋಗ ಕ್ಷೇಮ ಅಲ್ಲ ಭಾರತದ ಉದ್ದಗಲಕ್ಕೂ ಬಿಜೆಪಿ ಸರ್ಕಾರ ಬೇಕಷ್ಟೆ, 


ಆದರೆ ಬಿಜೆಪಿ ಯಾವ ಯಾವ ಜನಾನುರಾಗಿ ಕೆಲಸಗಳನ್ನ ಮಾಡಿದೆ?


ಒಂದು ತಪ್ಪು ಮಾತನ್ನ ಬಿಜೆಪಿಯವರು ಆಡಿದರೆ, ಅವರು ಅದಕ್ಕೆ ಸಮರ್ಥನೆಯಾಗಿ ಕಾಂಗ್ರೆಸ್‌ನ ಹಿಂದಿನ ಆಡಳಿತಗಾರರ ತಪ್ಪನ್ನ ಎಳೆ ತಂದು ಮುಂದಿಡುತ್ತಾರೆ. 


ಮಾಡಿದ ತಪ್ಪನ್ನು ಆಡಿದ ಮಾತನ್ನು ತಿದ್ದಿಕೊಳ್ಳಬೇಕು, ಅದನ್ನು ಬಿಟ್ಟು ನಾವು ಹಾಗೆ ಮಾತನಾಡೇ ಇಲ್ಲ, ಎಲ್ಲ ತಿರುಚಿದ ವಿಡಿಯೋ, ನೋಡಿ ನೀವು ತಪ್ಪು ಮಾಡಿದ್ರಿ ಅಂದರೆ ಏನು ಅರ್ಥ. 


   ನಮಗೆ ಸಣ್ಣವರಾಗಿದ್ದಾಗ ಹೇಳಿದ್ದ ತಿಳುವಳಿಕೆ, ಮನುಷ್ಯ ಸತ್ತ ಮೇಲೆ ಆತನ ಬಗ್ಗೆ ಒಳ್ಳೆಯದನ್ನ ಮಾತ್ರ ಆಡಬೇಕು, ಕೆಟ್ಟದ್ದನ್ನು ಮರೆತುಬಿಡಬೇಕು ಕಾರಣ ಆತನನ್ನ ಸಮರ್ಥಿಸಿಕೊಳ್ಳಲು ಆತ ನಮ್ಮೊಡನಿರುವುದಿಲ್ಲ ಎಂದು.


ಆದರೆ 2014 ರಿಂದೀಚೆಗೆ ಬರೀ ಸತ್ತು ಮಣ್ಣು ಸೇರಿರುವ ಮನುಷ್ಯರನ್ನೆಲ್ಲ ಎಳೆ ತಂದು ನೆಹರು ಕಾರಣ, ನೆಹರು ಮಾಡಿದ್ದು, ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದ್ದು, ನಿಮಗೆ ನೈತಿಕತೆ ಇಲ್ಲ ಎಂದರೆ ಏನು ಪ್ರಶ್ನೆ?. ಆ ಕಾಲವನ್ನ ದಾಟಿ ನಾವು ಮುಂದೆ ಬಂದಿದ್ದೇವೆ. ಹಿಂದಿನ ತಪ್ಪುಗಳಿಂದ ನಾವು ಪಾಠ ಕಲಿತು ಮುಂದೆ ಬಂದಿದ್ದೇವೆ. ಅಂದು ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ಆಕೆಯನ್ನ ಸೋಲಿಸಿ ಜನತೆ ಪಾಠ ಕಲಿಸಿ ಮತ್ತೆ ಆಕೆಯನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಿಲ್ಲವೇ? ಆದರೆ ಇಂದೂ ಕೂಡ ಅದನ್ನೇ ಹಿಡಿದು ಪ್ರತಿ ಕ್ಷಣ ಪ್ರಶ್ನಿಸುವ ಹಕ್ಕು ಬಿಜೆಪಿಗೆ ಇಲ್ಲ. ನೆಹರು ಈ ದೇಶಕ್ಕೆ ಕೊಟ್ಟ ಕೊಡುಗೆ ಅಗಾಧವಾದದ್ದು ನಾವು ಇಂದು ಕಾಣುತ್ತಿರುವ ಇಸ್ರೋ, ಐಐಟಿ, ಬ್ಯಾಂಕಿಂಗ್, ಅಣೆಕಟ್ಟುಗಳು, ಪಟ್ಟಿ ಉದ್ದ ಆಗುತ್ತದೆ. ಬ್ಯಾಂಕ್ ರಾಷ್ಟ್ರೀಕರಣದಿಂದ ರಸ್ತೆ ರಾಷ್ಟ್ರೀಕರಣದಿಂದ ಒಳ್ಳೆಯದೆ ಆಗಿದೆಯೆ ಹೊರತು ಜನರಿಗೆ ಅದರಿಂದ ನಷ್ಟ ಆಗಿಲ್ಲ. ಆದರೆ ಅದರಿಂದ ತಮ್ಮನ್ನು ಬೆಂಬಲಿಸುವ ತಮಗೆ ಬಂಡವಾಳ ಹೂಡಿರುವ ಕಾರ್ಪೋರೇಟ್‌ಗಳಿಗೆ ನಷ್ಟ ಆಗಿದೆ ಅನ್ನುವುದನ್ನು ಬಿಜೆಪಿ ನೇರವಾಗಿ ಹೇಳದೆ ಅದನ್ನೆಲ್ಲ ಕಾಂಗ್ರೆಸ್ನ ತಪ್ಪು ಅಂತ ಬಿಂಬಿಸುತ್ತದೆ. 


    ಹಿಂದಿನ ಚುನಾವಣೆ ಸಮಯದಲ್ಲಿ ನೋಡಿ ನಾವು ಎಷ್ಟು ರಸ್ತೆ ಗಳನ್ನು ಮೇಲ್ದರ್ಜೆಗೇರಿಸಿದೀವಿ ಅಂತ ಹೇಳುವ ಜನ ಚತುಷ್ಪಥ ರಸ್ತೆ ನಿರ್ಮಾಣ ಮಾಡಿ ಟೋಲ್ ಸಂಗ್ರಹಣೆ ಶುರು ಮಾಡಿದ್ದನ್ನು ಮರೆ ಮಾಚುತ್ತಾರೆ. ಇದರಿಂದ ಜನ ಸುಂಕದ ಮೇಲೆ ಸುಂಕು ತೆರೆಲಾಗದೇ ಇವರನ್ನ ಗೆಲ್ಲಿಸಿ ಅದೇ ಟೋಲ್ ಮುಂದೆ ಮೋಸ ಮಾಡುತ್ತಾ ಹೋಗುವ , ಜಗಳ ಕಾಯುವ ಇದೇ ಜನರನ್ನ ಕಾಣಬಹುದು.


    ಹಿಂದಿನ ನಮ್ಮ ಮಹಾಭಾರತ, ರಾಮಾಯಣ ತೆಗೆದುಕೊಂಡರೆ, ಅದರಲ್ಲಿ ಎಷ್ಟೋ ಉಪ ಕಥೆಗಳು ಬರುತ್ತವೆ. ಇಂದ್ರ ಮಾತ್ರನೇ ಇಂದ್ರ ಪದವಿಯಲ್ಲಿ ಇರಬೇಕು ಎಂದು ದೇವತೆಗಳು ಮಾಡುವ ಹುನ್ನಾರ ಮೋಸಗಳೆ ತುಂಬಿವೆ. ಬಲಿ, ಶಿಬಿ, ಇವರು ಇಂದ್ರ ಪದವಿಗೇರಬಾರದು ಎಂದೇ ಆತನನ್ನ ಪಾತಾಳಕ್ಕೆ ತುಳಿದ ಕಥೆ ನಮಗೆ ತಿಳಿದಿದೆ, ಅಂದರೆ ಒಬ್ಬ ಒಳ್ಳೆ ವ್ಯಕ್ತಿ ಕೂಡ ಇಂದ್ರ ಪದವಿಗೆ ಹೋಗಬಾರದು , ಇಂದ್ರ ಅಯ್ಯೋ ನನ್ನ ಪದವಿಗೆ ಧಕ್ಕೆ ಬಂದಿದೆ ಎಂದು ಗೋಳಿಟ್ಟ ತಕ್ಷಣ ವಿಷ್ಣು ಬ್ರಹ್ಮ ಎಲ್ರೂ ಕಾರ್ಯಪ್ರವೃತ್ತರಾಗಿ ಆತನ ಸಹಾಯಕ್ಕೆ ನಿಲ್ಲುತ್ತಾರೆ. ಹಿರಣ್ಯಕಷಿಪು ಇಂದ್ರನ ಆಸ್ಥಾನಕ್ಕೆ ಲಗ್ಗೆ ಇಟ್ಟದ್ದು ತನ್ನ ಪತ್ನಿಯ ಗರ್ಭದಲ್ಲಿದ್ದ ಶಿಶುವನ್ನ ಕೊಲ್ಲಲು ಆತ ಪ್ರಯತ್ನಿಸಿದ ತಪ್ಪಿಗೆ. ಆದರೆ ಕಡೆಗೆ ಅವನನ್ನ ವಿಲನ್ ಮಾಡಿ ಬಿಡುತ್ತಾರೆ ಕೊಲ್ಲಲು ಎಲ್ಲ ದೇವತೆಗಳೂ ಒಂದಾಗುತ್ತಾರೆ. ಇವರು ಮಾಡುವ ದೌರ್ಜನ್ಯ ಸಹಿಸದೆ ಎದುರು ಬಿದ್ದರೆ ವಿಲನ್ ಗಳಂತೆ ಬಿಂಬಿಸುತ್ತಾರೆ. ಇಂದ್ರ ಎಷ್ಟು ತಪ್ಪುಗಳನ್ನು ಮಾಡಿಲ್ಲ, ಬೇಕಾದಷ್ಟು, (ಅದರಲ್ಲಿ ಸಣ್ಣ ಉದಾಹರಣೆ ಅಹಲ್ಯೆ ಕಥೆ) ಆತನ ತಪ್ಪನ್ನು ಮನ್ನಿಸಿಬಿಡುತ್ತಾರೆ. ಇಂದ್ರ ಕೂಡ ಯಾವಾಗಲೂ ಸುರೆ ಕುಡಿದು ನಾಟ್ಯ ವೀಕ್ಷಿಸುತ್ತಾ ಲೋಲುಪನಾದವನೇ ಆದರೆ ಅದನ್ನು ಆತನ ಸವಲತ್ತೆಂದು ಬಿಂಬಿಸುತ್ತಾರೆ. ಅದೆ ದಾನವರಿಗೆ ಅಮೃತ ಸಿಗದ ಹಾಗೆ ಮಾಡಿದ ಮೋಸ ಮೋಸವಲ್ಲವೇ. ದಾನವರು ಅಜರಾಮರಾದರೆ ದೇವತೆಗಳಿಗೆ ಕಷ್ಟ ಏನು. 


   ಅದೇ ಈಗಲೂ ನಡೆಯುತ್ತಿರುವುದು. ಜನರನ್ನ ದೇವರು ಎಂಬ ನಾಮ ಸ್ಮರಣೆಗೆ ತಳ್ಳಿ , ತಮಗೆ ಬೇಕಾದ ರೀತಿ ಆಡಳಿತ ನಡೆಸುವುದು. ಬರೀ ಕಾಂಗ್ರೆಸ್ಸಿನ ಭ್ರಷ್ಟತೆ ಬಗ್ಗೆ ಮಾತನಾಡುವ ಬಿಜೆಪಿ, 2ಜಿ ಹಗರಣದಲ್ಲಿ ಯಾರನ್ನೂ ದೋಷಿ ಮಾಡಲಿಲ್ಲ. ಎಲ್ಲರೂ ಖುಲಾಸೆ ಹೊಂದಿದರು, ಅಂದರೆ ಭ್ರಷ್ಟತೆ ನಡೆದಿಲ್ಲ ಎಂದಲ್ಲವೆ. ಅಂದರೆ ಬಿಜೆಪಿ ಮಾಡಿದ ಪ್ರತಿಭಟನೆ ಭಾಷಣ ಎಲ್ಲ ಬರೀ ಚುನಾವಣೆ ಗೆಲ್ಲಲಲ್ಲವೇ? ಕರ್ನಾಟಕದಲ್ಲಿ ದಿನಕ್ಕೊಂದು ನಡೆಯುವ ಘಟನೆಗಳ ಹಿಂದೆ ನಿಜವಾಗಿ ಯಾರ ಕೈವಾಡ ಇದೆ ಕಂಡು ಹಿಡಿಯುವಲ್ಲಿ ಗುಪ್ತಚರ ಇಲಾಖೆ ಸೋತಿದೆ ಅಥವಾ ಅದು ಸರಿಯಾದ ಮಾಹಿತಿಯನ್ನ ಆಡಳಿತ ಪಕ್ಷಕ್ಕೆ ನೀಡುತ್ತಿಲ್ಲ. ಇದರಿಂದಲೇ ಆಡಳಿತಾರೂಢ ಪಕ್ಷ ಪ್ರತೀ ಬಾರಿ ಪ್ರತಿಭಟನೆಯ ಬಿಸಿ ಕಾಣುವಂತಾಗಿದೆ. ಮೊದಲು ಗುಪ್ತಚರ ಇಲಾಖೆಗೆ ತನ್ನ ನಂಬಿಕಸ್ಥ ಜನರನ್ನ ನೇಮಿಸಬೇಕಿದೆ. ಇಡೀ ದೇಶದ ತುಂಬೆಲ್ಲ ಬಿಜೆಪಿ ಪರ ಕಾಂಗ್ರೆಸ್ ಪರ ಅನ್ನುವ ಅಧಿಕಾರಿಗಳಿದ್ದಾರೆ, ಆದರೆ ಹೆಚ್ಚು ಜನ ಅಧಿಕಾರದಲ್ಲಿರುವುವರು ಬಿಜೆಪಿ ಪರದವರೇ ಇದ್ದಾರೆ ಅದರಿಂದ ಸುಮ್ಮ ಸುಮ್ಮನೇ ಸಾವು, ನೋವು, ಗಲಾಟೆ,ರೋಗ ರುಜಿನಗಳಂತಹ ಸಮಸ್ಯೆ ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ (ಡಾಕ್ಟರ್, ಇಂಜಿನಿಯರ್ ,ರ್ಸ್, ತಹಶೀಲ್ದಾರ್, ಎಸಿ ಡಿಸಿ, ಗ್ರಾಮ ಪಂಚಾಯತ್ ಹೀಗೆ ಪಟ್ಟಿ ಬೆಳೆಯುತ್ತದೆ)


   ನೀವು ಯಾವುದೇ ಮಾತನ್ನ ಬೆಜೆಪಿಗೆ ಬೈದರೂ ಅದಕ್ಕೆ ಅವರು ಗುರಾಣಿಯಾಗಿ ಹಿಡಿಯುವುದು ಕಾಂಗ್ರೆಸ್‌ನ ಹಿಂದೆ ನಡೆದ ವಿಷಯಗಳನ್ನ ಎಳೆ ತಂದು ಬಿಜೆಪಿ ತನ್ನ ಇಂದಿನ ತಪ್ಪನ್ನ ಮುಚ್ಚಿಕೊಳ್ಳುವ ಪ್ರಯತ್ನ ಮಹಾಪರಾಧ. ಬಿಜೆಪಿ ಸಂಸದರು ಉತ್ತರ ಕೊಡಬೇಕಿರುವುದು ಜನತೆಗೆ ತಮ್ಮ ತಪ್ಪಿಗೆ ಕ್ಷಮೆ ಕೋರಬೇಕಿದೆ. ಚುನಾವಣೆಯಲ್ಲಿ ಸ್ವಲ್ಪ ಮತಗಳ ಅಂತರದಲ್ಲಿ ಗೆಲ್ಲುವ ಸಂಸದರು ಉಳಿದ ಜನತೆಗೆ ಕೂಡ ಭಾದ್ಯರಾಗಿರುತ್ತಾರೆ. ಹಿಂದಿನ ಕಾಂಗ್ರೆಸ್ ನಾಯಕರು ಮಾಡಿದ ತಪ್ಪನ್ನ ಇಂದು ಅಮಿತ್ ಷಾ ಆಡಿದ ಮಾತಿಗೆ ಹೇಗೆ ಹೊಂದಿಸುತ್ತಾರೆ. ತಪ್ಪು ತಪ್ಪೇ, ಆತನನ್ನ ಸಂಸತ್‌ನಿಂದ ಹೊರಗೆ ಕಳಿಸಬೇಕು.


ಇಂದು ದೇಶದಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನ ಸ್ಟೇಜ್ ಮ್ಯಾನೇಜ್ಡ್. ಕಾಂಗ್ರೆಸ್ ಪ್ರತಿಭಟನೆ ಮಾಡುವಾಗ ತಡೆಯುವುದು ಮಾರ್ಷಲ್ಗಳ ಕರ್ತವ್ಯ, ಅಲ್ಲಿ ಬಿಜೆಪಿಯವರು ಅಡ್ಡ ನಿಲ್ಲುವುದೇಕೆ ಅಂದರೆ ತಳ್ಳಾಟ ನಡೆಸಲೆಂದೆ ಅವರು ಬಂದದ್ದು, ಆಗ ನಡೆಯುವ ಮುಂದಿನ ಘಟನೆಗೆ ದೂರು ಕೊಡುವುದು ಅವರ ಉದ್ದೇಶ ಅದರಲ್ಲಿ ಅವರು ಸಫಲರಾಗಿದ್ದಾರೆ. 


 ನಿರ್ಮಲ ಸೀತಾರಾಮನ್ ಈರುಳ್ಳಿ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಿದಾಗ ನಾನು ಈರುಳ್ಳಿ ತಿನ್ನುವುದಿಲ್ಲ ಅದಕ್ಕೆ ಅದರ ಬೆಲೆ ನನಗೆ ಗೊತ್ತಿಲ್ಲ ಅನ್ನುತ್ತಾರೆ. ಅದನ್ನು ಯಾವ ಮೀಡಿಯಾ ಪ್ರಶ್ನಿಸುವುದು ಇಲ್ಲ. ರಾಹುಲ್ ಗಾಂಧಿ ಕೂಡಾ ಮೋದಿಯವರ ಥರ ಮೀಡಿಯಾಗೆ ಮಾತನಾಡುವುದು ನಿಲ್ಲಿಸಬೇಕು, ಇಂದಿನ ಮೀಡಿಯಾ ಇರುವುದು ಬರೀ ಕಾಂಗ್ರೆಸ್‌ಗೆ ಮುಜುಗರವಾಗುವಂತಹ ಬಿಜೆಪಿಯವರು ಹೇಳುವ ಸುಳ್ಳುಗಳನ್ನೆ ಅಷ್ಟೆ ಪ್ರಶ್ನಿಸುವುದು. ಅದಕ್ಕೆ ಕೌಂಟರ್ ಅವರು ಮಾಡುವುದೇ ಇಲ್ಲ. ಬಿಜೆಪಿಯವರಿಗೆ ಅಂತಹ ಪ್ರಶ್ನೆ ಅವರು ಕೇಳುವುದೇ ಇಲ್ಲ. ಪತ್ರಿಕೋದ್ಯಮದ ನೈತಿಕತೆ ಘನತೆ ಎಲ್ಲವನ್ನೂ ಮರೆತುಬಿಟ್ಟಿದ್ದಾರೆ. ಹಿಂದೆ ತನಿಖಾ ವರದಿ ಅಂತ ಸ್ಪೆಷಲ್ ಆಗಿ ವರದಿ ಬರೆಯುತ್ತಿದ್ದರು ಅದು ನಿಂತು ಎಷ್ಟೋ ವರ್ಷಗಳೇ ಆಗಿವೆ. 


    ಇಂದು ದೇಶದ ಈ ಸ್ಥಿತಿಗೆ ಕಾರಣ ನಮ್ಮ ಜನ. ಅವರಿಗೆ ಎಲ್ಲೋ ಹುದುಗಿ ಹೋಗಿದ್ದ ಜಾತಿಯ ಮೇಲರಿಮೆ ಕೆಳ ಜನರ ಶೋಷಣೆಯನ್ನ, 2014ರ ನಂತರ ಕಾನೂನಿನಡಿ ಮುಚ್ಚಿಟ್ಟಿದ್ದ ಅದರ ಬಾಯನ್ನ ತೆರೆದು ಖುಲೆ ಆಮ್ ಬಿಡಲಾಗಿದೆ. ಎಲ್ಲರೂ ತನ್ನ ಜಾತಿಯ ಶ್ರೇಷ್ಟತೆಯನ್ನು ಸಮಾಜದಲ್ಲಿ ತೋರಿಸಲು ತನ್ನ ಜಾತಿ ಬಗ್ಗೆ ಜಂಬ ಪಡುವುದನ್ನ ಶುರು ಮಾಡಿಕೊಂಡಿದ್ದಾರೆ. ಮನೆ ಮುಂದೆ ವೆಜ್ ಓನ್ಲಿ ಅಂತ ರಾಜಾ ರೋಷವಾಗಿ ಬೋರ್ಡ್ ಹಾಕುತ್ತಾರೆ. ಮನೆ ಕೇಳಲು ಬಂದವರಿಗೆ ನಿಮ್ಮ ಜಾತಿ ಯಾವುದು ಅಂತ ಬಾಯಿಬಿಟ್ಟು ಕೇಳುವಷ್ಟು, ಜಾತಿ ಪ್ರಮಾಣ ಪತ್ರ ಕೊಡಿ ಎಂದು ಕೇಳುವ ಮಟ್ಟಕ್ಕೆ ಸಮಾಜ ಕೆಟ್ಟುಹೋಗಿದೆ. ಇದರಿಂದ ಬೇರೆ ಜಾತಿಯವರಿಗೆ ಆಗುವ ಅವಮಾನದ ಬಗ್ಗೆ ಅವರಿಗೆ ಗಮನವೇ ಇಲ್ಲ ಸಾಮಾಜಿಕ ನ್ಯಾಯದ ಬಗ್ಗೆ ತಮ್ಮ ಜವಾಬ್ದಾರಿ ಅರಿತಿಲ್ಲ. ಇದಕ್ಕೆ ಕಾರಣ ಕೇಂದ್ರ ಸರ್ಕಾರ. ಯಥಾ ರಾಜ ತಥಾ ಪ್ರಜಾ. 2014ರ ನಂತರ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಬಣ್ಣ, ಜಾತಿ, ವೈಯಕ್ತಿಕ ವಿಷಯಗಳನ್ನೆ ಮುಂದು ಮಾಡಿ ವ್ಯಕ್ತಿಯನ್ನು ಜರಿಯುವುದು ತಾನು ಮಾತ್ರ ಶ್ರೇಷ್ಠ ಅಂತ ಬಿಂಬಿಸಿಕೊಳ್ಳುವುದು, ಸುಳ್ಳುಗಳನ್ನು ಹೇಳುವುದು ಫ್ಯಾಷನ್ ಆಗಿಬಿಟ್ಟಿದೆ.


   ದಲಿತರಿಗೆ ಇನ್ನೂ ತಿಳುವಳಿಕೆ ಬರಬೇಕಿದೆ. ಜ್ಞಾನೋದಯವಾಗಬೇಕಿದೆ. ಎಲ್ಲಾ ಮಸೀದಿಗಳನ್ನು ಗುಡಿಗಳನ್ನ ಕೆಡವಿ ಕಟ್ಟಲಾಗಿದೆ ಅಂತ ಸುಪ್ರೀಂ ಕೋರ್ಟ ಮೆಟ್ಟಿಲು ಹತ್ತಿರುವ ಇವರು ಎಷ್ಟೋ ಬೌದ್ಧ ಗುಹೆಗಳನ್ನ, ವಿಹಾರಗಳನ್ನು ಮಾರ್ಪಡಿಸಿ ತಮ್ಮದೆಂದು ಬಿಂಬಿಸುವ ಇವರು ಹಾಗಾದರೆ ಆ ದೇವಸ್ಥಾನಗಳನ್ನು ಬೌದ್ಧರಿಗೆ ಬಿಟ್ಟುಕೊಡುತ್ತಾರಾ. ಯಾರಾದರೂ ಹಾಗೆಂದು ಕೋರ್ಟ್ ಮೆಟ್ಟಲೇರಬೇಕಷ್ಟೆ.