ನಾಳೆ ಕರ್ನಾಟಕ ಸಚಿವಾಲಯ ಕ್ಲಬ್ ನೂತನ ಕಾರ್ಯಕಾರಿ ಸಮಿತಿ ಆಯ್ಕೆಗೆ ಚುನಾವಣೆ ಅಧಿಕಾರ ಹಿಡಿಯಲು ಆರು ಸಿಂಡಿಕೇಟ್‌ಗಳ ನಡುವೆ ತೀವ್ರ ಹಣಾಹಣಿ !?

ನೂತನ ಕಾರ್ಯಕಾರಿ ಸಮಿತಿ ಆಯ್ಕೆಗೆ ಚುನಾವಣೆ

ನಾಳೆ ಕರ್ನಾಟಕ ಸಚಿವಾಲಯ ಕ್ಲಬ್ ನೂತನ ಕಾರ್ಯಕಾರಿ ಸಮಿತಿ ಆಯ್ಕೆಗೆ ಚುನಾವಣೆ   ಅಧಿಕಾರ ಹಿಡಿಯಲು ಆರು ಸಿಂಡಿಕೇಟ್‌ಗಳ ನಡುವೆ ತೀವ್ರ ಹಣಾಹಣಿ !?

ನಾಳೆ ಕರ್ನಾಟಕ ಸಚಿವಾಲಯ ಕ್ಲಬ್ ನೂತನ ಕಾರ್ಯಕಾರಿ ಸಮಿತಿ ಆಯ್ಕೆಗೆ ಚುನಾವಣೆ


ಅಧಿಕಾರ ಹಿಡಿಯಲು ಆರು ಸಿಂಡಿಕೇಟ್‌ಗಳ ನಡುವೆ ತೀವ್ರ ಹಣಾಹಣಿ !?


ಕುಚ್ಚಂಗಿ ಪ್ರಸನ್ನ


   ಶತಮಾನದ ಇತಿಹಾಸವುಳ್ಳ ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‌ನ ಆರು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲು ಇದೇ ಜೂನ್ ೪ರ ಭಾನುವಾರ ಚುನಾವಣೆ ನಡೆಯುತ್ತಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಚುನಾವಣೆ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಬೇಕು ಎಂಬ ನಿಯಮ ಬೈಲಾದಲ್ಲಿ ಮಾತ್ರವೇ ಉಳಿದುಕೊಂಡಿದೆ. ಕಳೆದ ಚುನಾವಣೆ ೨೦೧೮ರಲ್ಲಿ ನಡೆದಿತ್ತು, ಅದಕ್ಕೂ ಹಿಂದಿನ ಸಮಿತಿ ಮೂರೂವರೆ ವರ್ಷ ಉಳಿದುಕೊಂಡಿತ್ತು.


ಚುನಾವಣೆಯಿಂದ ಚುನಾವಣೆಗೆ ಸ್ಪರ್ಧಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ, ಈ ಸಲ ಒಟ್ಟು ೩೨ ಮಂದಿ ಕಣದಲ್ಲಿದ್ದಾರೆ. ತಲಾ ಆರು ಮಂದಿಯ ಐದು ತಂಡಗಳು ಅಥವಾ ಸಿಂಡಿಕೇಟ್‌ಗಳು ಸಚಿವಾಲಯ ಕ್ಲಬ್ ಕಾರ್ಯಕಾರಿ ಮಂಡಳಿಯನ್ನು ತಮ್ಮದನ್ನಾಗಿ ಮಾಡಿಕೊಳ್ಳಲು ತಯಾರಿ ನಡೆಸಿವೆ.


ಹಾಲಿ ಗೌರವ ಕಾರ್ಯದರ್ಶಿಗಳಾಗಿರುವ ಸಚಿವಾಲಯ ನೌಕರರ ಸಹಕಾರ ಸಂಘ , ಸರ್ಕಾರಿ ನೌಕರರ ಒಕ್ಕೂಟಗಳ ಅಧ್ಯಕ್ಷರಾಗಿದ್ದ ಯು.ಡಿ.ನರಸಿಂಹಯ್ಯ ಅವರ ನೇತೃತ್ವದ ಒಂದು ತಂಡ ಹಾಗೂ ಸಚಿವಾಲಯ ನೌಕರರ ಸಂಘ ಹಾಗೂ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷರು ಹಾಗೂ ಹಾಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಮಹದೇವಯ್ಯ ಮಠಪತಿ ಅವರ ತಂಡಗಳ ನಡುವೆ ತೀವ್ರ ಹಣಾಹಣಿ ಕಂಡು ಬರುತ್ತಿದೆ.


ಮಹದೇವಯ್ಯ ಮಠಪತಿ ಹಾಗೂ ಯು.ಡಿ.ನರಸಿಂಹಯ್ಯ ಅವರಿಬ್ಬರೂ ವಯೋ ನಿವೃತ್ತಿ ಹೊಂದಿದ್ದರೂ ಸಚಿವಾಲಯದ ಇತರ ಮುಂಚೂಣಿ ಸಂಘಟನೆಗಳ ಚುನಾವಣೆಯಲ್ಲಿ ಇನ್ನೂ ಗಣನೀಯ ಪ್ರಭಾವ ಹೊಂದಿದ್ದಾರೆ ಎಂಬ ಮಾತನ್ನು ಅಲ್ಲಗೆಳೆಯಲಾಗದು. 


ಮಠಪತಿಯವರ ತಂಡದಲ್ಲಿ ಅಧೀನ ಕಾರ್ಯದರ್ಶಿಗಳಾದ ಎಸ್.ನಾಗರಾಜು, ಶಿವಶಂಕರ್ ಎಸ್.ಆರ್, ಶಾಖಾಧಿಕಾರಿಗಳಾದ ಮಂಜುನಾಥ್ .ಎಸ್., ಶಿವಾನಂದ ಎಂ, ಹಿರಿಯ ಸಹಾಯಕ ಹರ್ಷ ಎ.ಎಸ್ ಹಾಗೂ ಸಹಾಯಕ ಸತೀಶ್.ಟಿ ಕಣದಲ್ಲಿದ್ದಾರೆ. ಇವರಲ್ಲಿ ಹರ್ಷ ಎ.ಎಸ್. ಹಾಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಯಾಗಿದ್ದಾರೆ.


ಯು.ಡಿ.ನರಸಿಂಹಯ್ಯನವರ ತಂಡದಲ್ಲಿ ಉಪ ಕಾರ್ಯದರ್ಶಿ ಎಸ್.ಕೆ.ನಾಗವೇಣಿ, ಶಾಖಾಧಿಕಾರಿಗಳಾದ ಪಿ.ಗುರುಸ್ವಾಮಿ ಹಾಗೂ ಕುಮಾರಸ್ವಾಮಿ ಬಿ.ಆರ್. ಮತ್ತು ಹಿರಿಯ ಸಹಾಯಕರಾದ ಮಹೇಂದ್ರ ಎಂ.ವಿ ಹಾಗೂ ಎಲ್.ಎನ್.ನಾಗಭೂಷಣ ಆಯ್ಕೆ ಬಯಸಿ ಸ್ಪರ್ಧಿಸಿದ್ಧಾರೆ.


ಇವರ ತಂಡಕ್ಕೆ ಸಚಿವಾಲಯ ನೌಕರರ ಸಹಕಾರ ಸಂಘದ ಅಧ್ಯಕ್ಷ ಹನುಮೇಗೌಡ ಹಾಗೂ ಓಪಿಎಸ್ ಜಾರಿಗಾಗಿ ಹೋರಾಡುತ್ತ ಯಶಸ್ಸಿನ ಹಾದಿಯಲ್ಲಿರುವ ಶಾಂತರಾಮ ಅವರ ಸಂಘದ ಬೆಂಬಲವೂ ಇದೆ.


ಈಗಾಗಲೇ ಕ್ಲಬ್‌ನ ಗೌರವ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿರುವ ಎಸ್.ಎನ್.ಕೃಷ್ಣಕುಮಾರ್ ಹಾಗೂ ಬಿ.ಎಸ್. ಸುಂದರಮೂರ್ತಿ ಇಬ್ಬರೂ ಕೂಡಿ ರಚಿಸಿಕೊಂಡಿರುವ ಸಿಂಡಿಕೇಟ್‌ನಲ್ಲಿ ಇವರಿಬ್ಬರ ಜೊತೆಗೆ ನಾಗರಾಜು ಬಿ.ಎಸ್., ಮುನಿ ಆಂಜನಪ್ಪ, ಹರೀಶ್ .ಎಸ್. ಮತ್ತು ಹೇಮಂತನಾಯಕ್ ಆಯ್ಕೆ ಬಯಸಿ ಕಣದಲ್ಲಿದ್ದಾರೆ.


ಸಚಿವಾಲಯ ಕ್ಲಬ್‌ನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತ ಬಂದಿರುವ ಅಂಬಣ್ಣ ಮಹಾಗಾಂವಕರ್ ಕೂಡಾ ತಮ್ಮದೊಂದು ಸಿಂಡಿಕೇಟ್ ರಚಿಸಿಕೊಂಡಿದ್ದಾರೆ. ಇವರಲ್ಲಿ ಶಾಖಾಧಿಕಾರಿ ಎಸ್.ಮಾಲತೇಶ್ ಅವರನ್ನು ಬಿಟ್ಟರೆ ಉಳಿದ ನಾಲ್ವರು ಸ್ಪರ್ಧಿಗಳಾದ ಸಿ.ಟಿ.ಚಂದ್ರಶೇಖರ್, ಕೆ.ನೀಲಕಂಠಾಚಾರ್ ಹಾಗೂ ಕೆ.ಬೋರಲಿಂಗಯ್ಯ ವಯೋ ನಿವೃತ್ತಿ ಹೊಂದಿ ವಿಶ್ರಾಂತ ಜೀವನ ನಡೆಸುತ್ತಿರುವವರೇ ಆಗಿದ್ದಾರೆ. 


ಯು.ಡಿ.ನರಸಿಂಹಯ್ಯನವರ ಜೊತೆಯಲ್ಲೇ ಇದ್ದ ಶಾಖಾಧಿಕಾರಿ ಬಿ.ಎಸ್. ಲಕ್ಷ್ಮಣ್ ವೈಯಕ್ತಿಕ ನಿಲುವಿನಿಂದಾಗಿ ಪ್ರತ್ಯೇಕ ಸಿಂಡಿಕೇಟ್ ರಚಿಸಿಕೊಂಡು ಚುನಾವಣೆಗೆ ಇಳಿದಿದ್ದಾರೆ. ಇವರ ತಂಡದಲ್ಲಿ ಶಾಖಾಧಿಕಾರಿಗಳಾದ ಸಿ.ಸುಜಾತ, ರಾಘವೇಂದ್ರ ಎಸ್. ಆರ್. ಹಿರಿಯ ಸಹಾಯಕ ಆರ್.ಎಸ್.ಮಂಜುನಾಥ್, ಹಾಗೂ ಸಹಾಯಕರಾದ ಗಜಾನನ ಭಾಗೆನ್ನವರ್, ಬೀರಲಿಂಗೇಗೌಡ ಸೇರಿದ್ದಾರೆ.


ಈ ಆರು ಸಿಂಡಿಕೇಟ್ ಅಥವಾ ತಂಡಗಳ ಜೊತೆಗೆ ಕ್ಲಬ್ ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಪಿ.ಎನ್.ಕೃಷ್ಣಮೂರ್ತಿ ಹಾಗೂ ಗೋಪಾಲ ಕೃಷ್ಣಾಜಿ ಮಾತ್ರ ಏಕಾಂಗಿಗಳಾಗಿ ಸ್ಪರ್ಧಿಸಿದ್ದಾರೆ. 


ಸಚಿವಾಲಯ ಕ್ಲಬ್‌ನ 2550 ಸದಸ್ಯರಲ್ಲಿ ಸುಮಾರು 700 ಸದಸ್ಯರು ಈಗಾಗಲೇ ನಿವೃತ್ತಿ ಹೊಂದಿದವರೂ ಇದ್ದಾರೆ. 


ಇದೆಲ್ಲ ಮೇಲ್ನೋಟದ ಪರಿಚಯ ಮಾತ್ರ, ಸಚಿವಾಲಯ ಕ್ಲಬ್‌ನಲ್ಲಿ ಗೌರವ ಕಾರ್ಯದರ್ಶಿಯಾಗುವುದು ಸಚಿವಾಲಯದ ಮಟ್ಟಿಗೆ ಇವತ್ತಿಗೆ ಮತ್ತು ಎಂದಿಗೂ ಪ್ರತಿಷ್ಟೆಯ ವಿಷಯವಾಗೇ ಬೆಳೆದುಕೊಂಡು ಬಂದಿದೆ. ಮೊದಲಿಗೆ ಕೇವಲ ಅಧಿಕಾರಿಗಳಿಗೆ ಸೀಮಿತವಾಗಿದ್ದ ಸಚಿವಾಲಯ ಕ್ಲಬ್‌ನಲ್ಲಿ ಬೆರಳೆಣಿಕೆಯಷ್ಟು ಮಂದಿಯನ್ನು ಬಿಟ್ಟರೆ ಇನ್ನೂ ಡಿ ವೃಂದದ ನೌಕರರಿಗೆ ಸದಸ್ಯರಾಗಲು ಅವಕಾಶ ದೊರಕಿಲ್ಲ.


ಹಾಲಿ ಕಾರ್ಯಕಾರಿ ಸಮಿತಿ ನಿಗದಿತ ಅವಧಿಯೊಳಗೆ ಚುನಾವಣೆಗೆ ಹೋಗಲು ಕೋವಿಡ್ ಬಿಕ್ಕಟ್ಟು ಅಡ್ಡಿಯಾಗಿತ್ತು ಎಂದು ಯು.ಡಿ.ನರಸಿಂಹಯ್ಯನವರು ಕಾರಣ ಕೊಡುತ್ತಾರೆ. ಇದೇ ಕಾರಣವನ್ನು ಮಹದೇವಯ್ಯ ಮಠಪತಿಯವರ ನೇತೃತ್ವದಲ್ಲಿ ಅಧಿಕಾರ ಹಿಡಿದ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾಗಿರುವ ಪಿ.ಗುರುಸ್ವಾಮಿಯವರೂ ಕೊಡುತ್ತಾರೆ. ಸಚಿವಾಲಯ ನೌಕರರ ಸಂಘದ ಹಾಲಿ ಸಮಿತಿ ಅಸ್ತಿತ್ವಕ್ಕೆ ಬಂದು ಏಳು ವರ್ಷಗಳಾಗಿವೆ ಎನ್ನಲಾಗಿದೆ.


ಯು.ಡಿ.ನರಸಿಂಹಯ್ಯ ಹಾಗೂ ಮಹದೇವಯ್ಯ ಮಠಪತಿಯವರು ಹಿಂದೊಮ್ಮೆ ಒಂದೇ ತಂಡದಲ್ಲಿದ್ದವರು. ರಾಜ್ಯ ಸರಕಾರಿ ನೌಕರರ ಸಂಘ ಸರಕಾರಗಳ ಪರ ವಾಲಿ ನೌಕರರಿಗೆ ನ್ಯಾಯ ಕೊಡಿಸುತ್ತಿಲ್ಲ ಎಂಬ ಕಾರಣಕ್ಕೇ ಸ್ಥಾಪಿಸಲಾದ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಮೊದಲ ಅಧ್ಯಕ್ಷರಾಗಿದ್ದವರು ಯು.ಡಿ.ನರಸಿಂಹಯ್ಯನವರು, ನಂತರ ಅವರನ್ನು ಕೈ ಬಿಟ್ಟು ಮಹದೇವಯ್ಯ ಮಠಪತಿ ಒಕ್ಕೂಟದ ಸೂತ್ರ ಹಿಡಿದರು. ಇದೀಗ ಷಡಕ್ಷರಿ ಅವರು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಂತರ ಇದೇ ಒಕ್ಕೂಟದ ಸಕ್ರಿಯ ಸದಸ್ಯರಾಗಿದ್ದವರು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾಗಲು ಅವಕಾಶ ಕೊಡುವ ಮೂಲಕ ಒಕ್ಕೂಟವನ್ನು ಸ್ಥಾಪಿಸಿದ ಮೂಲ ಉದ್ದೇಶವೇ ಲೆಕ್ಕಕ್ಕಿಲ್ಲದಂತಾಗಿಬಿಟ್ಟಿದೆ.


ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ ವಿಜಯೇಂದ್ರ ಅವರ ಸಖ್ಯವೇ ಕಾರಣವಾಗಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಷಡಕ್ಷರಿಯವರು ಸುಮಾರು 14 ಕೋಟಿ ವೆಚ್ಚದಲ್ಲಿ ಎನ್‌ಜಿಓ ಭವನವನ್ನು ನವೀಕರಿಸಿದ ಹೆಗ್ಗಳಿಕೆ ಪಡೆದರು. ಅವರು ಈಗಾಗಲೇ ಸಚಿವಾಲಯ ಕ್ಲಬ್‌ನ ಆಟದ ಮೈದಾನದಲ್ಲಿ ಒಂದು ಭಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಇಡೀ ಸಚಿವಾಲಯ ಕ್ಲಬ್ ಅನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಒಳಾಸೆ ಹೊಂದಿದ್ದಾರೆ, ಸರಕಾರಿ ನೌಕರರ ಸಂಘದ ಇಂಥ ಪ್ರಯತ್ನವನ್ನು ತಡೆಯುವ ಸಲುವಾಗಿಯೇ ಒಂದು ಬಲಿಷ್ಟ ತಂಡವನ್ನು ಈ ಸಲ ಕ್ಲಬ್‌ಗೆ ಚುನಾಯಿಸಬೇಕಿದೆ ಎನ್ನುತ್ತಾರೆ ಹಾಲಿ ಗೌರವ ಕಾರ್ಯದರ್ಶಿ ಯು.ಡಿ.ನರಸಿಂಹಯ್ಯನವರು.


ಅಲ್ಲದೇ, ಮಹದೇವಯ್ಯ ಮಠಪತಿ ಅವರ ತಂಡಕ್ಕೆ ಇದೇ ಷಡಕ್ಷರಿ ಅವರ ಬೆಂಬಲವಿರುವುದು ಗುಟ್ಟಾಗಿ ಉಳಿದಿಲ್ಲವಾದ್ದರಿಂದ ನಮ್ಮ ತಂಡವನ್ನು ಗೆಲ್ಲಿಸಿ ಎನ್ನುತ್ತಾರೆ ಹಾಲಿ ಕಾರ್ಯಕಾರಿ ಸಮಿತಿಗೆ ಮಹದೇವಯ್ಯ ಮಠಪತಿ ಅವರ ತಂಡದಲ್ಲಿ ನಿಂತು ಗೆದ್ದಿದ್ದರೂ ಈ ಚುನಾವಣೆಯಲ್ಲಿ ಯು.ಡಿ.ನರಸಿಂಹಯ್ಯ ಅವರ ತಂಡ ಸೇರಿ ಕಣದಲ್ಲಿರುವ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿಯವರು.


ಮಹದೇವಯ್ಯ ಮಠಪತಿ ಅವರ ತಂಡವು ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಹಾಲಿ ಕಾರ್ಯಕಾರಿ ಸಮಿತಿಯು ಕಾಲಕಾಲಕ್ಕೆ ಮಾಸಿಕ ಸಭೆಗಳನ್ನು ನಡೆಸಲಿಲ್ಲ, ವಾರ್ಷಿಕ ಮಹಾಸಭೆಗಳನ್ನು ನಡೆಸಲಿಲ್ಲ, ಲೆಕ್ಕ ಪತ್ರ ಮಂಡಿಸಲಿಲ್ಲ ಹೀಗಾಗಿ ಸರ್ಕಾರ ಕ್ಲಬ್‌ನ ನಿರ್ವಹಣೆಗೆ ನೀಡುತ್ತಿದ್ದ ವಾರ್ಷಿಕ ರೂ. ೭೫ ಲಕ್ಷ ದ ಅನುದಾನದಲ್ಲಿ ಎರಡು ಕಂತುಗಳನ್ನು ಬಿಡುಗಡೆ ಮಾಡಿಯೇ ಇಲ್ಲ , ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆಪಾದಿಸಿದೆ.


ಇವೆಲ್ಲ ಗುರುತರ ಆಪಾದನೆಗಳೇನೂ ಅಲ್ಲ, ಯಾವ ಕಾರ್ಯಕಾರಿ ಸಮಿತಿಗಳೂ ವಾರ್ಷಿಕ ಮಹಾಸಭೆಗಳನ್ನು ಕರೆದ ನಿದರ್ಶನಗಳಿಲ್ಲ, ಅವಧಿ ಮುಗಿಸಿದ ನಂತರ ಚುನಾವಣೆಯ ದಿನ ಮತದಾನಕ್ಕೆ ಮುನ್ನ ಸರ್ವ ಸದಸ್ಯರ ಸಭೆ ನಡೆಸುತ್ತ ಬಂದಿವೆ ಎನ್ನುತ್ತಾರೆ ಯು.ಡಿ.ನರಸಿಂಹಯ್ಯ.


ಆದರೆ ೧೯೯೬ರ ನಂತರ ಚುನಾಯಿತರಾದ ಯಾವ ಕಾರ್ಯಕಾರಿ ಸಮಿತಿಯೂ ಮುಕ್ತಾಯಗೊಂಡಿದ್ದ ಕ್ಲಬ್‌ನ ಗುತ್ತಿಗೆ ಅವಧಿಯನ್ನು ನವೀಕರಿಸಿರಲಿಲ್ಲ, ನಾವು ಆ ಕಾರ್ಯ ಮಾಡಿದ್ದೇವೆ, ಆದರೆ ಈಜುಕೊಳ ನಿರ್ಮಿಸದಂತೆ ರಾಜ್ಯ ಹೈಕೋರ್ಟ್ ನಲ್ಲಿ ಪಿಐಎಲ್ ಹೂಡಿದ್ದರಿಂದ ಆ ಕಾರ್ಯ ನೆನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಹಾಲಿ ಗೌರವ ಕಾರ್ಯದರ್ಶಿ ಯು.ಡಿ.ನರಸಿಂಹಯ್ಯನವರು/ ಯಾರೇ ಚುನಾಯಿತರಾಗಲಿ , ಯುವಕರು ಮತ್ತು ನನ್ನಂತ ಹೊಸ ಮುಖಗಳು ಆಯ್ಕೆಯಾಗಲಿ ಎನ್ನುತ್ತಾರೆ ಮಹದೇವಯ್ಯ ಮಠಪತಿ ತಂಡದ ಎಸ್.ಮಂಜುನಾಥ್.


ಇಂಡಿಯಾದ ಶ್ರೇಣೀಕೃತ ಜಾತಿ ಪದ್ದತಿಯ ಪ್ರಭಾವ ಸಚಿವಾಲಯದಲ್ಲೂ ಇಲ್ಲ ಎನ್ನುವಂತಿಲ್ಲ. ಮಹದೇವಯ್ಯಮಠಪತಿ ಮತ್ತು ಯು.ಡಿ.ನರಸಿಂಹಯ್ಯನವರ ನಾಯಕತ್ವದಲ್ಲಿ ಕ್ರಮವಾಗಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪ್ರಾಬಲ್ಯ ಸಚಿವಾಲಯದ ಎಲ್ಲ ಮುಂಚೂಣಿ ಸಂಘಟನೆಗಳು ಹಾಗೂ ಸಂಸ್ಥೆಗಳ ಮೇಲೆ ಇರುವುದನ್ನು ನಿರಾಕರಿಸುವಂತಿಲ್ಲ. ಹಾಗೆಯೇ ಒಂದು ಕಾಲಕ್ಕೆ ಒಕ್ಕಲಿಗರ ಪ್ರಾಬಲ್ಯವಿದ್ದ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ಈಗ ಲಿಂಗಾಯತರ ಯಜಮಾನಿಕೆ ನಡೆದಿದೆ. ಹಾಗಾಗಿ ರಾಜ್ಯ ಸರಕಾರಿ ನೌಕರರ ಸಂಘದಿAದ ಬೇರ್ಪಟ್ಟು ರಾಜ್ಯ ಸರಕಾರಿ ನೌಕರರ ಒಕ್ಕೂಟ ಸ್ಥಾಪಿಸಿದ್ದವರು ಈಗ ಮರಳಿ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ವಿಲೀನವಾದವರಂತಿರುವುದು ವಿಶೇಷವೇನಲ್ಲ.ಆದರೆ , ರಾಜ್ಯ ಸರಕಾರಿ ನೌಕರರ ಸಂಘ ಸಚಿವಾಲಯ ಕ್ಲಬ್ ಮೇಲಾಗಲೀ, ಸಚಿವಾಲಯ ನೌಕರರ ಸಂಘ ಅಥವಾ ಸಹಕಾರ ಸಂಘದ ಮೇಲಾಗಲೀ ಬೇನಾಮಿ ಹತೋಟಿ ಹೊಂದಲು ಬಯಸುವುದು ಸಚಿವಾಲಯದ ಭವಿಷ್ಯಕ್ಕೆ ಮಾರಕವಾದೀತು ಎಂಬ ಎಚ್ಚರಿಕೆಯನ್ನು ಸಚಿವಾಲಯದ ಅಧಿಕಾರಿಗಳು ಮತ್ತು ನೌಕರ ಬಾಂಧವರಲ್ಲಿ ಇರಬೇಕು , ಆ ಮೂಲಕ ನಮ್ಮ ತಂಡವನ್ನು ಗೆಲ್ಲಿಸಿ ಎನ್ನುತ್ತಾರೆ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ. ಇವರೂ ಕೂಡಾ ಮಠಪತಿಯವರ ಗರಡಿಯಲ್ಲೇ ಬೆಳೆದು ನಾಯಕತ್ವದ ಗುಣಗಳನ್ನು ರೂಡಿಸಿಕೊಂಡವರು.


ಈ ಎಲ್ಲ ಹಿನ್ನೆಲೆಯಲ್ಲಿ ಸಚಿವಾಲಯ ಕ್ಲಬ್‌ನ ಯಾವ ಯಾವ ಸಿಂಡಿಕೇಟ್‌ಗಳ ಯಾರ ಯಾರನ್ನು ಒಳಗೊಂಡ ಹೊಸ ಕಾರ್ಯಕಾರಿ ಸಮಿತಿಯನ್ನು ಸಚಿವಾಲಯದ ಅಧಿಕಾರಿ ನೌಕರರು ಭಾನುವಾರ ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲಕರವಾಗಿದೆ.