“ಸಕ್ರಿಯ ರಾಜಕಾರಣಿʼ ಎಂಬ ಕತೆ ಹೇಳಿ ಸಹಕಾರ ಸಚಿವ ಕೆ.ಎನ್.ರಾಜಣ್ಣನವರಿಗೆ ತುಮಕೂರು ವಿವಿ ವಿಸಿ ವೆಂಕಟೇಶ್ವರಲು ಗೌರವ ಡಾಕ್ಟರೇಟ್ ವಂಚಿಸಿದ್ದು ಹೀಗೆ!?
ಹೀಗೆ ತುಮಕೂರು ವಿವಿಯ ವಿಸಿ ವೆಂಕಟೇಶ್ವರಲು ಪ್ರಕಾರ ಸಕ್ರಿಯ ರಾಜಕಾರಣಿಗಳಾಗಿರುವ ದೇವೇಗೌಡರು, ಯಡಿಯೂರಪ್ಪನವರು, ಸಿದ್ದರಾಮಯ್ಯನವರು ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿದ ಬೆಂಗಳೂರು ವಿವಿ, ಕೆಳದಿ ಶಿವಪ್ಪ ನಾಯಕ ವಿವಿ, ಮೈಸೂರು ವಿವಿಗಳಿಗೇ ಬೇರೆ ಕಾನೂನು ತುಮಕೂರು ವಿವಿಗೇ ಬೇರೆ ಕಾನೂನು ಜಾರಿಯಲ್ಲಿದೆಯೇ ಎಂದು ವಿಸಿ ಅವರನ್ನು ಕೆಎನ್ಆರ್ ಅಭಿಮಾನಿಗಳು ಪ್ರಶ್ನಿಸಬೇಕಾಗಿದೆ.

99% ಲೋಕಲ್
ಕುಚ್ಚಂಗಿ ಪ್ರಸನ್ನ
ತುಮಕೂರು: ಜೀವನವಿಡೀ ಸಹಕಾರ ರಂಗದಲ್ಲಿ ಸೇವೆ ಸಲ್ಲಿಸಿದ, ಬಡವರ ಏಳಿಗೆಗೆ ಶ್ರಮಿಸಿದ ʼಸಹಕಾರ ರತ್ನʼ ಕೆ.ಎನ್.ರಾಜಣ್ಣನವರಂತ ಸಕ್ರಿಯ ರಾಜಕಾರಣಿಗೆ ಗೌರವ ಡಾಕ್ಟರೇಟ್ ಪದವಿ ಕೊಡಲು ತುಮಕೂರು ವಿವಿ ನಿರಾಕರಿಸಿದೆ. ಕಾರಣ ಆವರು ಆಕ್ಟೀವ್ ಪಾಲಿಟಿಶೀಯನ್ (ಸಕ್ರಿಯ ರಾಜಕಾರಣಿ) , ಆಕ್ಟೀವ್ ಪಾಲಿಟೀಶಿಯನ್ ಗಳಿಗೆ ಗೌರವ ಡಾಕ್ಟರೇಟ್ ಕೊಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ತುಮಕೂರು ವಿವಿ ವಿಸಿ ವೆಂಕಟೇಶ್ವರಲು ತುಂಬಿದ ಸುದ್ದಿಗೋಷ್ಟಿಯಲ್ಲಿ ಘೋಷಿಸಿದರು. ಆದರೆ ಇವತ್ತಿಗೂ ಕೆ.ಎನ್. ರಾಜಣ್ಣನವರ ರೀತಿಯಲ್ಲೇ ಸಕ್ರಿಯ ರಾಜಕಾರಣಿಗಳಾಗಿರುವ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರಾಜ್ಯದ ಎರಡು ಹೆಸರಾಂತ ವಿವಿಗಳು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾದರೂ ಹೇಗೆ, ಅಲ್ಲದೇ ಈ ಇಬ್ಬರಿಗೆ ರಾಜ್ಯದ ಎಲ್ಲ ವಿವಿಗಳ ಮತ್ತು ತುಮಕೂರು ವಿವಿಯ ಚಾನ್ಸೆಲರ್ ಕೂಡಾ ಆಗಿರುವ ಇದೇ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಅವರೇ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರಲ್ಲ ಅದು ಹೇಗೆ?
ಹೋದ ಮಂಗಳವಾರ ಜುಲೈ ಎಂಟರಂದು ತುಮಕೂರು ವಿಶ್ವ ವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪದವೀಧರರಿಗೆ ಪದವಿ ಪ್ರಮಾಣ ಪತ್ರ ವಿತರಿಸುವ ಮೊದಲಿಗೆ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಅವರಲ್ಲಿಇಬ್ಬರು ಕಳಂಕಿತರೂ ಸೇರಿದ್ದರು ಎಂಬುದು ಈಗ ಹಳೆಯ ಸುದ್ದಿ. ಈ ಘಟಿಕೋತ್ಸವದ ಸುದ್ದಿಯನ್ನು ಪತ್ರಕರ್ತರಿಗೆ ಮುಂಚಿತವಾಗಿ ತಿಳಿಸುವ ಸಲುವಾಗಿ ವಿವಿ ವಿಸಿ ಪ್ರೊ. ವೆಂಕಟೇಶ್ವರಲು ನಾಲ್ಕು ದಿನ ಮೊದಲು ಶನಿವಾರ ಸುದ್ದಿಗೋಷ್ಟಿ ಕರೆದಿದ್ದರು. ಈ ಸಾಲಿನಲ್ಲಿ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲು 12 ಶಿಫಾರಸುಗಳು ಬಂದಿದ್ದವು, ಅವುಗಳಲ್ಲಿ ರಾಜ್ಯ ಸರ್ಕಾರದಲ್ಲಿ ಸಹಕಾರ ಸಚಿವರೂ ಆಗಿರುವ ತುಮಕೂರು ಜಿಲ್ಲೆಯ ಹಿರಿಯ ರಾಜಕಾರಣಿ ʼ ಸಹಕಾರ ರತ್ನʼ ಕೆ.ಎನ್.ರಾಜಣ್ಣನವರ ಹೆಸರೂ ಇತ್ತು ಎಂದು ವಿಸಿ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು. ಸಹಕಾರ ಕ್ಷೇತ್ರದಲ್ಲಿ ಜೀವನ ಪರ್ಯಂತ ಗಣನೀಯ ಸಾಧನೆ ಮಾಡಿರುವ ಮಂತ್ರಿ ಕೆ.ಎನ್.ರಾಜಣ್ಣನವರ ಹೆಸರನ್ನು ವಿವಿ ಪರಿಗಣಿಸಬಹುದಿತ್ತಲ್ಲ ಎಂದು ಪತ್ರಕರ್ತರೊಬ್ಬರು ವಿಸಿ ವೆಂಕಟೇಶ್ವರಲು ಅವರನ್ನು ಪ್ರಶ್ನಿಸಿದರು. ಆಗ ತಕ್ಷಣ ವಿಸಿ ವೆಂಕಟೇಶ್ವರಲು, “ ಆಕ್ಟೀವ್ ಪಾಲಿಟೀಶಿಯನ್ಗೆ ಗೌರವ ಡಾಕ್ಟರೇಟ್ ಕೊಡಲು ಬರುವುದಿಲ್ಲ”!? ಎಂದು ಉತ್ತರಿಸಿದರು. ಹೌದೇನೋ ನಿಜವಿರಬಹುದೇನೋ ಎಂದು ಆ ಕ್ಷಣದಲ್ಲಿ ಸುದ್ದಿಗಾರರು ಸುಮ್ಮನಾಗಿ ಮುಂದಿನ ಸಂಗತಿಯತ್ತ ಗಮನ ಹರಿಸಿದರು.
ಆದರೆ, ಕಳೆದ ಎರಡು ವರ್ಷಗಳಲ್ಲೇ ರಾಜ್ಯದ ವಿವಿಧ ವಿಶ್ವ ವಿದ್ಯಾನಿಲಯಗಳು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿವೆ. ಜೊತೆಗೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರದ ದೇವರಾಜ ಅರಸು ಉನ್ನತ ಶಿಕ್ಷಣ ಅಕಾಡೆಮಿ ಎಂಬ ಸ್ವಾಯತ್ತ ವಿವಿ 16.05.2025ರಂದು ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯು ದಿನಾಂಕ 24.03.2025ರಂದು ಲೋಕೋಪಯೋಗಿ ಇಲಾಖೆ ಮಂತ್ರಿ ಸತೀಶ್ ಜಾರಕಿಹೊಳಿ ಅವರಿಗೂ ಗೌರವ ಡಾಕ್ಟರೇಟ್ ಪದವಿಯನ್ನು ಘೋಷಿಸಿದ್ದವು, ಆದರೆ ಅವರಿಬ್ಬರೂ ತಮಗೆ ಗೌರವ ಡಾಕ್ಟರೇಟ್ ಬೇಡ ಎಂದು ನಿರಾಕರಿಸಿದರು. ಒಂದು ವೇಳೆ ಈ ಇಬ್ಬರೂ ತಮಗೆ ಗೌರವ ಡಾಕ್ಟರೇಟ್ ಬೇಡ ಎನ್ನದೇ ಸೀದಾ ಘಟಿಕೋತ್ಸವಗಳಿಗೆ ಹೋಗಿ ಗೌನು ಹಾಕಿಕೊಂಡು ನಿಂತು ಬಿಟ್ಟಿದ್ದರೆ ಅವರೂ ವಿವಿಗಳಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಸಕ್ರಿಯ ರಾಜಕಾರಣಿಗಳ ಪಟ್ಟಿಗೆ ಸೇರಿಬಿಟ್ಟಿರುತ್ತಿದ್ದರು.
ಹೀಗೆ ತುಮಕೂರು ವಿವಿಯ ವಿಸಿ ವೆಂಕಟೇಶ್ವರಲು ಪ್ರಕಾರ ಸಕ್ರಿಯ ರಾಜಕಾರಣಿಗಳಾಗಿರುವ ದೇವೇಗೌಡರು, ಯಡಿಯೂರಪ್ಪನವರು, ಸಿದ್ದರಾಮಯ್ಯನವರು ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿದ ಬೆಂಗಳೂರು ವಿವಿ, ಕೆಳದಿ ಶಿವಪ್ಪ ನಾಯಕ ವಿವಿ, ಮೈಸೂರು ವಿವಿಗಳಿಗೇ ಬೇರೆ ಕಾನೂನು ತುಮಕೂರು ವಿವಿಗೇ ಬೇರೆ ಕಾನೂನು ಜಾರಿಯಲ್ಲಿದೆಯೇ ಎಂದು ವಿಸಿ ಅವರನ್ನು ಕೆಎನ್ಆರ್ ಅಭಿಮಾನಿಗಳು ಪ್ರಶ್ನಿಸಬೇಕಾಗಿದೆ.
ಈ ವರದಿಯ ಜೊತೆಗೆ ಪ್ರಕಟಿಸಿರುವ ಹೆಚ್.ಡಿ.ದೇವೇಗೌಡರು, ಬಿ.ಎಸ್.ಯಡಿಯೂರಪ್ಪ ಅವರಿಗೆ ವಿವಿಧ ವಿಸಿಗಳು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವ ಸುದ್ದಿಗಳ ತುಣುಕುಗಳನ್ನು ತುಸು ಗಮನಿಸಿ.
ನಿದರ್ಶನ 01:
2023ರ ಜುಲೈ 22ರಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕುರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನ ವಿವಿಯು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಯಡಿಯೂರಪ್ಪನವರು ಇಂದಿಗೂ ಸಕ್ರಿಯ ರಾಜಕಾರಣಿ.
ನಿದರ್ಶನ 02:
ಬೆಂಗಳೂರು ವಿಶ್ವ ವಿದ್ಯಾನಿಲಯವು 2023ರ ಅಕ್ಟೋಬರ್ 18ರಂದು ಮಾಜಿ ಪ್ರಧಾನ ಮಂತ್ರಿ ಹಾಗೂ ಹಾಲಿ ರಾಜ್ಯ ಸಭಾ ಸದಸ್ಯರೂ ಆಗಿರುವ ಹೆಚ್.ಡಿ.ದೇವೇಗೌಡರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ದೇವೇಗೌಡರೂ ಇವತ್ತಿಗೂ ಸಕ್ರಿಯ ರಾಜಕಾರಣಿ.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು , ಹಾಲಿ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅವರನ್ನು ಗೌರವ ಡಾಕ್ಟರೇಟ್ ಪದವಿ ನೀಡಲು ಆಯ್ಕೆ ಮಾಡಿರುವ ವಿಶ್ವವಿದ್ಯಾನಿಲಯಗಳಿಗಿಂತ ಹೆಚ್ಚಿನ ಕಾನೂನು ಜ್ಞಾನ ತುಮಕೂರು ವಿವಿ ವಿಸಿ ವೆಂಕಟೇಶ್ವರಲು ಅವರಿಗೆ ಇದೆಯೇ ಎಂದು ಜಿಲ್ಲೆಯ ಪ್ರಜ್ಞಾವಂತರು ಪ್ರಶ್ನಿಸಬೇಕಾಗಿದೆ.
ಇನ್ನೂ ಸ್ವಾರಸ್ಯದ ಸಂಗತಿ ಎಂದರೆ, 18ನೇ ವರ್ಷದ ಘಟಿಕೋತ್ಸವವನ್ನು ಕಳೆದ ವಾರ ಮಾಡಿ ಮುಗಿಸಿದ ತುಮಕೂರು ವಿವಿ ಇನ್ನೂ ತನ್ನದೇ ಆದ ಕಾನೂನುಗಳನ್ನು ರಚಿಸಿಕೊಂಡಿಲ್ಲವೇ ಇಲ್ಲ. ಬದಲಿಗೆ ಎರಡು ದಶಕದಿಂದಲೂ ತಾನು ಪ್ರತ್ಯೇಕಗೊಂಡು ಹೊರಬಂದಿರುವ ಬೆಂಗಳೂರು ವಿಶ್ವ ವಿದ್ಯಾನಿಲಯದ ಕಾನೂನುಗಳನ್ನೇ ಅನುಸರಿಸಿಕೊಂಡು ಬರುತ್ತಿದೆ. ಪರಿಸ್ಥಿತಿ ಹೀಗಿರುವಾಗ ಅದು ಯಾವ ಭಂಡ ಧೈರ್ಯದ ಮೇಲೆ ವಿಸಿ ವೆಂಕಟೇಶ್ವರಲು ನೂರಕ್ಕೂ ಹೆಚ್ಚು ಪತ್ರಕರ್ತರಿಂದ ತುಂಬಿ ತುಳುಕುತ್ತಿದ್ದ ಸುದ್ದಿಗೋಷ್ಟಿಯಲ್ಲಿ ಹೀಗೆ ಹಸೀ ಸುಳ್ಳನ್ನು ಹೇಳಿದರು ಎಂಬುದನ್ನು ಆ ಏಳುಕೊಂಡಲವಾಡನೇ ಬಲ್ಲ.
ಇತ್ತೀಚೆಗಷ್ಟೇ 75 ವರ್ಷಗಳನ್ನು ಪೂರೈಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಅಮೃತ ಮಹೋತ್ಸವ ಆಚರಿಸಿಕೊಂಡ, ಘನವಾದ ಅಭಿನಂದನಾ ಗ್ರಂಥವನ್ನೂ ಹೊರ ತರಲು ಅನುವಾಗುಂತ ದೊಡ್ಡ ಮಟ್ಟದ ಜನ ಸೇವೆ ಮಾಡಿರುವ, ಜಿಲ್ಲೆಯ ಅತ್ಯಂತ ಘನತೆ ಹಾಗೂ ದಿಟ್ಟ ರಾಜಕಾರಣಿ ಸಹಕಾರ ಮಂತ್ರಿ ಕೆ.ಎನ್.ರಾಜಣ್ಣನವರ ಹೆಸರನ್ನು ಸಲೀಸಾಗಿ ಕೈ ಬಿಟ್ಟು, ಇನ್ನಿಬ್ಬರು ಕಳಂಕಿತ ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಕೊಟ್ಟರು ಎಂಬುದನ್ನೂ ತನಿಖೆ ಮಾಡಬೇಕಿದೆ.