ಯುದ್ಧ-ವಿಯಟ್ನಾಂ ಕಲಿಸುವ ಪಾಠ
ಎಲ್ಲೋ ದೂರದಲ್ಲಿ ಕೂತು ಯುದ್ಧದ ಬಗ್ಗೆ ಮಾತನಾಡುವವರಿಗೆ ಯುದ್ಧ ಶೌರ್ಯದ, ಪ್ರತೀಕಾರದ, ಸಾಹಸದ ಘನ ಕಾರ್ಯವೆಂಬಂತೆ ಕಾಣುತ್ತದೆ. ಆದರೆ ಯುದ್ಧದಿಂದ ಆಗುವ ಹಾನಿ ಅದರ ಬಿಸಿ ತಟ್ಟಿದವರಿಗೆ ಗೊತ್ತು. ಯುದ್ಧ ಹಲವು ವರ್ಷಗಳ ವರೆಗೆ ಮಾನಸಿಕ ನೆಮ್ಮದಿಯನ್ನು, ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಿಬಿಡಿಸುತ್ತದೆ. ದ್ವೇಷಿಸಲು ಕಲಿತ ಮನಸ್ಸಿಗೆ ಪ್ರೀತಿಸುವುದು ಸುಲಭವಲ್ಲ. ಪ್ರೀತಿಯನ್ನು ದ್ವೇಷವಾಗಿ ಮಾರ್ಪಡುವುದು ಸುಲಭ; ದ್ವೇಷವನ್ನು ಪ್ರೀತಿಯಾಗಿಸುವುದು ಕಷ್ಟದ ಕೆಲಸ. ಯುದ್ಧ ನಿಂತ ಮೇಲೂ ಹಲವು ತಲೆಮಾರುಗಳು ದ್ವೇಷದ, ಭೀತಿಯ ಬೇಗೆಯಿಂದ ಪಾರಾಗುವುದೇ ಇಲ್ಲ.

ʼಬೆವರ ಹನಿʼ ವಿಶೇಷ
ಎಂ ನಾಗರಾಜ ಶೆಟ್ಟಿ
ರುಬಿಯಾ ದಾಸ್ ಪಾಕಿಸ್ತಾನದ ಗಡಿಗೆ ಹತ್ತಿರ ನಿಯಂತ್ರಣ ರೇಖೆಗೆ ಅಂಟಿಕೊಂಡಿರುವ ತಾಲೂಕು ಕೇಂದ್ರ ಉಡಿ ಪಟ್ಟಣದ ಶಾಲಾ ಶಿಕ್ಷಕಿ. ಭಾರತ, ಪಾಕಿಸ್ತಾನದ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಹೇಳುವ ಮಾತುಗಳು ಮನ ಕರಗಿಸುವಂತಿವೆ. ʼವಾಸ್ತವದಲ್ಲಿ ಭೀತಿಯು ನಮ್ಮಿಂದ ದೂರವಾಗುವುದೇ ಇಲ್ಲ. ಅದು ನಮ್ಮ ಮನೆಗಳ ಮೂಲೆಗಳಲ್ಲಿ, ನಮ್ಮ ಮಕ್ಕಳ ಕನಸುಗಳಲ್ಲಿ ಅವಿತಿರುತ್ತದೆʼ. ಯುದ್ಧ ಸಾಮಾನ್ಯರ ಬದುಕನ್ನು ಆಕ್ರಮಿಸಿಕೊಳ್ಳುವ ರೀತಿಯನ್ನು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ವಿಯೆಟ್ನಾಂ ಅಮೇರಿಕಾ ವಿರುದ್ಧದ ಯುದ್ಧದಲ್ಲಿ ಜಯಗಳಿಸಿ 50 ವರ್ಷ ಕಳೆದ ನೆನಪಿನಲ್ಲಿ ಇತ್ತೀಚೆಗೆ ಸಂಭ್ರಮಾಚರಣೆಯನ್ನು ನಡೆಸಿತು. ಹದ್ದಿನಂತಹ ಬಲಾಢ್ಯ ದೇಶದ ವಿರುದ್ಧ ಪುಟ್ಟ ಗುಬ್ಬಚ್ಚಿ ತರದ ವಿಯೆಟ್ನಾಂ ಇಪ್ಪತ್ತು ವರ್ಷಗಳ ಕಾಲ ಹೋರಾಡಬೇಕಾಯಿತು. ಎಲ್ಲರೂ ಅಮೇರಿಕಾ ವಿಯೆಟ್ನಾಂ ಅನ್ನು ಭೂಪಟದಿಂದ ಅಳಿಸಿಬಿಡುತ್ತದೆ ಎಂದೇ ತಿಳಿದಿದ್ದರು. ಆದರೆ ಹಾಗಾಗದೆ ಅಮೇರಿಕಾವೇ ಸೋತು ವಿಯಟ್ನಾಂನಿಂದ ನಿರ್ಗಮಿಸಬೇಕಾಯಿತು. ಇದು ಏಷ್ಯಾದ ಪುಟ್ಟ ದೇಶಕ್ಕೆ ದೊರಕಿದ ದೊಡ್ಡ ಜಯ. ಆದರೆ ಇದರಿಂದ ವಿಯಟ್ನಾಂ ಮತ್ತು ಅಮೆರಿಕಾ ಕಳೆದುಕೊಂಡಿದ್ದೇನು ಎಂದು ಯೋಚಿಸಿದರೆ ವ್ಯಥೆ ಪಡುವಂತಾಗುತ್ತದೆ.
ಈ ಯುದ್ಧದಲ್ಲಿ ಸುಮಾರು 38 ಲಕ್ಷ ಜನರು ಪ್ರಾಣ ತೆತ್ತರು ಎನ್ನಲಾಗುತ್ತದೆ. ಪ್ರಮಾಣದಲ್ಲಿ ವಿಯಟ್ನಾಂನಷ್ಟಲ್ಲವಾದರೂ ಸಾಕಷ್ಟು ಅಮೆರಿಕನ್ ಯೋಧರು ಸಾವನ್ನಪ್ಪಿದರು. ಬದುಕುಳಿದು ಅಮೇರಿಕಾಕ್ಕೆ ತೆರಳಿದವರ ಬದುಕೂ ಚೆನ್ನಾಗಿರಲಿಲ್ಲ. ಯುದ್ಧದಲ್ಲಿ ಸೋತವರು ಎನ್ನುವ ಅವಹೇಳನೆ ಒಂದೆಡೆಯಾದರೆ, ದೀರ್ಘಕಾಲ ಯುದ್ಧ ಮಾಡಿದ ಮಾನಸಿಕ ಒತ್ತಡದಿಂದ ಹೊರಬಾರದೆ ಕುಡಿತ, ಚಿತ್ತವಿಕಲ್ಪಕ್ಕೆ ಅನೇಕರು ಬಲಿಯಾದರು. ಇದು ಸಮೃದ್ಧ ರಾಷ್ಟ್ರವೆಂದು ಭಾವಿಸಲಾಗಿರುವ ಅಮೆರಿಕಾದ ಯುದ್ಧ ಸಂತ್ರಸ್ತರ ಕತೆ. ಆದರೆ ವಿಯೆಟ್ನಾಂ ಜನತೆ 50 ವರ್ಷಗಳಲ್ಲಿ ಅನುಭವಿಸಿದ ಸಂಕಷ್ಟಗಳು ಇನ್ನೂ ತೀವ್ರವಾದವು.
ಸುದೀರ್ಘ ಕಾಲದ ಯುದ್ಧ ವಿಯಟ್ನಾಂನ ಆರ್ಥಿಕತೆಯನ್ನು ನಾಶ ಮಾಡಿತ್ತು. ಬದುಕಿನ ಕನಿಷ್ಟ ಅವಶ್ಯಕತೆಯನ್ನು ಪೂರೈಸಿಕೊಳ್ಳಲಾರದ ಸ್ಥಿತಿ ಬಂದೊದಗಿತ್ತು. ವಿಯೆಟ್ನಾಂನಲ್ಲಿ ಆಡಳಿತ ನಡೆಸುವ ಕಮ್ಯನಿಸ್ಟ್ ಪಾರ್ಟಿ ಆಫ್ ವಿಯಟ್ನಾಂ ಪರಿಸ್ಥಿತಿಯನ್ನು ಸುಧಾರಿಸಲು ಹಲವು ಪ್ರಯೋಗಗಳನ್ನು ಮಾಡತೊಡಗಿತು. ಆಸ್ತಿ ಹಕ್ಕನ್ನು ರದ್ದುಗೊಳಿಸಿ ಸಾಮೂಹಿಕ ಕೃಷಿ ಪದ್ಧತಿಯನ್ನು ಜಾರಿಗೆ ತಂದಿತು. ಇದರಿಂದ ದುಡಿಯುವವರಿಗೆ ಅನ್ನ ಸಿಕ್ಕಿತು. ಕೈಗಾರಿಕೆ, ಉದ್ಯಮಗಳನ್ನು ರಾಷ್ಟ್ರೀಕರಣಗೊಳಿಸಿ ಕಾರ್ಮಿಕರಿಗೆ ಸಮರ್ಪಕವಾದ ವೇತನ ನೀಡಿತು. ಆದರೆ ಇಷ್ಟರಿಂದ ನಿರೀಕ್ಷಿತ ಫಲ ದೊರಕಲಿಲ್ಲ. ಯುದ್ಧ ನಿಂತು 15 ವರ್ಷಗಳು ಕಳೆದರೂ ದೇಶದ ಶೇಕಡಾ 60 ರಷ್ಟು ಜನರು ತೀವ್ರ ಬಡತನದಿಂದ ನರಳುತ್ತಿದ್ದರು. ಜಿಡಿಪಿ ಕೇವಲ 430 ಅಮೆರಿಕನ್ ಡಾಲರ್ ಆಗಿದ್ದು ವಿಯಟ್ನಾಂ ಜಗತ್ತಿನ ಬಡರಾಷ್ಟ್ರಗಳಲ್ಲಿ ಒಂದೆನಿಸಿತ್ತು. ಪರಿಸ್ಥಿತಿ ವಿಷಮಿಸುತ್ತಿದ್ದಂತೆ ಸರಕಾರ ʼ ಪುನರ್ ನಿರ್ಮಾಣʼ (ಡಾಯ್ ಮೋಯ್)ದ ಘೋಷಣೆ ಮಾಡಿತು. ಸಾಮೂಹಿಕ ಕೃಷಿ ಪದ್ದತಿಯನ್ನು ಕೈ ಬಿಟ್ಟು ಖಾಸಗಿ ತೊಡಗುವಿಕೆಗೆ ಉತ್ತೇಜನ ನೀಡಲಾಯಿತು. ಸರಕಾರಿ- ಖಾಸಗಿ ಭಾಗೀದಾರಿಯಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಯಿತು. ಮುಕ್ತ ಮಾರುಕಟ್ಟೆಗೆ ಅವಕಾಶ ಕೊಡಲಾಯಿತು. ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಮಾಡಿದ್ದರಿಂದ ಆರ್ಥಿಕತೆ ಚೇತರಿಕೆಯ ಹಂತಕ್ಕೆ ಬಂದಿದೆ. ಕಮ್ಯುನಿಸ್ಟ್ ಪಕ್ಷವೂ ಸೇರಿದಂತೆ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಿರುವುದು ಆರ್ಥಿಕ ಚೇತರಿಕೆಯ ಕಾರಣಗಳಲ್ಲೊಂದು.
ಆರ್ಥಿಕತೆಯನ್ನು ಸುಧಾರಿಸುವಲ್ಲಿ ಸಾಕಷ್ಟು ಮಟ್ಟಿಗೆ ಯಶಸ್ವಿಯಾದ ಕಮ್ಯುನಿಸ್ಟ್ ಪಾರ್ಟಿ ಅಫ್ ವಿಯಟ್ನಾಂ ಸಾಮಾಜಿಕ ಬದುಕಿನಲ್ಲಿ ಬದಲಾವಣೆ ತರುವಲ್ಲಿ ಸಫಲತೆ ಹೊಂದಿಲ್ಲ. ವಿಯೆಟ್ನಾಂನ ಜನಸಂಖ್ಯೆಯಲ್ಲಿ ಯುದ್ಧದಲ್ಲಿ ಪಾಲ್ಗೊಂಡು ಬದುಕುಳಿದವರ ಸಂಖ್ಯೆ ಜನಸಂಖ್ಯೆಯ ಶೇಕಡಾ 15 ರಷ್ಟಿದೆ. ಯುದ್ಧ ಸನ್ನಿಯಿಂದ ಐವರಲ್ಲಿ ಒಬ್ಬ ಬಳಲುತ್ತಿದ್ದಾನೆ. ಅಂತವರ ಮಾನಸಿಕ ಸ್ಥಿತಿಯಲ್ಲಿ ಸುಧಾರಣೆ ಆಗುತ್ತಿಲ್ಲ. ಕೊಲ್ಲುವ, ಸೇಡು ತೀರಿಸುವ ಮನೋಭಾವ ಕುಟುಂಬದೊಡನೆ, ಸಮಾಜದೊಡನೆ ಮುಕ್ತವಾಗಿ ಬೆರೆಯಲು ಬಿಡುತ್ತಿಲ್ಲ. ಕೊಂದೆ ಎನ್ನುವ ಅಪರಾಧಿ ಭಾವ, ಸಮಾಜದ ಬಗೆಗಿನ ತುಚ್ಛೀಕಾರ ರಾತ್ರಿ ಹಗಲು ಕಾಡುತ್ತಿರುತ್ತದೆ. ಎಚ್ಚರದಲ್ಲೂ, ನಿದ್ದೆಯಲ್ಲೂ ಅದೇ ಭಾವನೆ. ಮಾಜಿ ಯೋಧನೊಬ್ಬ ಈ ಭಾವನೆಯನ್ನು ಹೀಗೆ ಕಟ್ಟಿ ಕೊಡುತ್ತಾನೆ ʼ ನಾನೆಷ್ಟು ದ್ವೇಷಿಸುತ್ತೇನೋ ಅಷ್ಟು ಪ್ರೀತಿ ಮಾಡಲು ಬಯಸುತ್ತೇನೆ. ಆದರೆ ನನ್ನಿಂದ ಸಾಧ್ಯವಾಗುತ್ತಿಲ್ಲ. ಪ್ರೀತಿ ಎನ್ನುವುದು ನನಗೆ ಎಟುಕದ ವಸ್ತುವಾಗಿದೆ! ʼ.
ಇದು ಯುದ್ಧದಲ್ಲಿ ಭಾಗಿಯಾದವರ ಗೋಳು ಮಾತ್ರವೇ ಅಲ್ಲ. ಯುದ್ಧದಲ್ಲಿ ನೇರವಾಗಿ ತೊಡಗದವರಲ್ಲಿಯೂ ಹತಾಶೆ, ನೋವು ಮನೆ ಮಾಡಿದೆ. ಇಪ್ಪತ್ತು ವರ್ಷಗಳ ಯುದ್ಧದಲ್ಲಿ ಪ್ರಾಣ ಕಳೆದುಕೊಂಡವರು ಲಕ್ಷಾಂತರ ಮಂದಿ. ಅವರ ಶವಗಳು ಎಲ್ಲೆಂದರಲ್ಲಿ ಹರಡಿದ್ದವು. ಕೆಲವರನ್ನು ಎರಡು, ಮೂರಡಿಯೊಳಗೆ ಹೂಳಲಾಯಿತು. ನೀರಲ್ಲಿ ಕೊಳೆತ ಶವಗಳನ್ನು, ಕಾಡಿನಲ್ಲಿ ಕಾಣದ ದೇಹಗಳನ್ನು ಕೇಳುವವರಿಲ್ಲ. ಭೂಮಿ ಅಗೆಯುವಾಗ, ಉಳುವಾಗ ಅಸ್ಥಿಪಂಜರಗಳು ಸಿಗುತ್ತವೆ. ಯಾರ ತಂದೆಯ, ಮಗನ, ಗಂಡನ, ಸಂಬಂಧಿಯ ತಲೆಬುರುಡೆ ಎಂದು ಹೇಳುವವರು ಯಾರು? ಕೊಳೆತ ಶವಗಳನ್ನು ಜಲಚರಗಳು ತಿನ್ನುವುದನ್ನು ನೋಡಿ ಮೀನುಗಳನ್ನು ತಿನ್ನುವುದನ್ನೇ ಬಿಟ್ಟವರಿದ್ದಾರೆ. ಶವಗಳ ನಡುವೆ ಓಡಾಡುವ ಹೆಗ್ಗಣ ಗಾತ್ರದ ಕಪ್ಪೆಗಳನ್ನು ನೋಡಿ ಭಯಭೀತರಾದವರಿದ್ದಾರೆ. ವಿಯಟ್ನಾಂನ ಜನರು ಆತ್ಮಗಳನ್ನು, ಪುನರ್ಜನ್ಮವನ್ನು ನಂಬುವವರು. ಸಂಸ್ಕಾರವಿಲ್ಲದೆ ಸತ್ತ ತಮ್ಮ ಸಂಬAಧಿಗಳು ಪ್ರೇತಾತ್ಮಗಳಾಗಿ ಓಡಾಡುತ್ತಾರೆ ಎನ್ನುವ ಭಯ ಜನರಲ್ಲಿದೆ.
ವಿಯಟ್ನಾಂನ ಜನರಲ್ಲಿ ಮನೆ ಮಾಡಿರುವ ಭೀತಿ, ಅಸ್ಥಿರತೆಯನ್ನು ಸರಕಾರ ಹೊರ ಜಗತ್ತಿಗೆ ತಿಳಿಯದಂತೆ ಮರೆ ಮಾಚಿದೆ. ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ, ಪ್ರದರ್ಶನ ಕಲೆಗಳಿಗೆ ನಿರ್ಬಂಧವಿದೆ. ವಿಯಟ್ನಾಂ ಯುದ್ಧದಲ್ಲಿ ಪಾಲ್ಗೊಂಡ ಯೋಧ ಬಾವೋನಿನ್ ಬರೆದ “ದ ಸಾರೋಸ್ ಆಫ್ ವಾರ್” ( ʼ The sorrows of war ʼ) ಕೃತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ. ಈ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಯಟ್ನಾಂನ ಸಿನಿಮಾ ʼ ವಿಯಟ್ ಎಂಡ್ ನಾಮ್ʼ ಪ್ರದರ್ಶಿತಗೊಂಡಿತ್ತು. ಈ ಸಿನಿಮಾವನ್ನು ವಿಯಟ್ನಾಂನಲ್ಲಿ ನಿಷೇಧಿಸಲಾಗಿದೆ. ಈ ಸಿನಿಮಾದಲ್ಲಿ ಅಳಿದ ವ್ಯಕ್ತಿಯ ಸಮಾಧಿಯನ್ನು ಅತನ ಮಗ ಮತ್ತು ಹೆಂಡತಿ ಹುಡುಕುತ್ತಾರೆ. ತಂದೆ ಜೀವಂತವಾಗಿ ಬಂದ ಹಾಗೆ, ಗುಂಡು ಹೊಡೆದು ಸಾಯಿಸಿದ ಹಾಗೆ ಮಗನಿಗೆ ಕಾಣುತ್ತದೆ. ಇದು ಜನರಲ್ಲಿ ಅಡಗಿರುವ ಭೀತಿ. ಯುದ್ಧ ಮುಗಿದ ಮೇಲೂ ಯುದ್ಧದ ಭೀತಿ, ದ್ವೇಷ ಅಳಿಯದು.
ವಿಯೆಟ್ನಾಂ ಯುದ್ಧದಲ್ಲಿ ಗೆದ್ದು ಬೀಗಿದ ಐವತ್ತು ವರ್ಷಗಳ ನಂತರವೂ ಅನುಭವಿಸುತ್ತಿರುವ ಯಾತನೆ ಇದು. ಸೋತವರ ಕತೆ ಒಂದು ಬಗೆಯಾದರೆ ಗೆದ್ದವರಿಗೂ ನೆಮ್ಮದಿ ಇಲ್ಲ ಎನ್ನುವುದಕ್ಕೆ ಇದು ನಿದರ್ಶನ. ಸೋತವರು ಅವಮಾನವನ್ನು ಮರೆಯುವುದಿಲ್ಲ; ಸೇಡಿಗಾಗಿ ಕಾಯುತ್ತಲೇ ಇರುತ್ತಾರೆ. ಗೆದ್ದವರು ಯುದ್ಧದ ಉನ್ಮಾದದಿಂದ, ಗೆಲುವಿನ ಮತ್ತಿನಿಂದ ಹೊರಬರುವುದಿಲ್ಲ. ಗೆದ್ದವರಲ್ಲೂ, ಸೋತವರಲ್ಲೂ ದ್ವೇಷ ಉಳಿದೇ ಇರುತ್ತದೆ. ದ್ವೇಷ ರೂಢಿಯಾದ ಮನಸ್ಸಿಗೆ ಪ್ರೀತಿ, ಶಾಂತಿ ರುಚಿಸುವುದಿಲ್ಲ. ಅದಕ್ಕೆ ಸರಿಯಾಗಿ ತಮ್ಮ ಉದ್ದೇಶಗಳನ್ನು ತೀರಿಸಿಕೊಳ್ಳಲು ಅಂತವರನ್ನು ಬಳಸಿಕೊಳ್ಳುವವರು ಇದ್ದೇ ಇರುತ್ತಾರೆ.
ಮನಶ್ಶಾಸ್ತ್ರಜ್ಞನೊಬ್ಬನ ಹೇಳಿಕೆಯಂತೆ ʼ ನಾವು ಮೊದಲು ತಿಳಿಯಬೇಕಾದ್ದು ಏನೆಂದರೆ ಕೊನೆಯ ಗುಂಡು ಸಿಡಿಯುವ ಮೂಲಕ ಯುದ್ಧ ನಿಲ್ಲುವುದಿಲ್ಲ. ಯುದ್ಧೋನ್ಮಾದಿಗಳು ತಮಗೇ ಅರಿವಿಲ್ಲದಂತೆ ಅದನ್ನು ಮುಂದುವರಿಸುತ್ತಲೇ ಇರುತ್ತಾರೆ ʼ ಎಲ್ಲೋ ದೂರದಲ್ಲಿ ಕೂತು ಯುದ್ಧದ ಬಗ್ಗೆ ಮಾತನಾಡುವವರಿಗೆ ಯುದ್ಧ ಶೌರ್ಯದ, ಪ್ರತೀಕಾರದ, ಸಾಹಸದ ಘನ ಕಾರ್ಯವೆಂಬಂತೆ ಕಾಣುತ್ತದೆ. ಆದರೆ ಯುದ್ಧದಿಂದ ಆಗುವ ಹಾನಿ ಅದರ ಬಿಸಿ ತಟ್ಟಿದವರಿಗೆ ಗೊತ್ತು. ಯುದ್ಧ ಹಲವು ವರ್ಷಗಳವರೆಗೆ ಮಾನಸಿಕ ನೆಮ್ಮದಿಯನ್ನು, ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಿಬಿಡಿಸುತ್ತದೆ. ದ್ವೇಷಿಸಲು ಕಲಿತ ಮನಸ್ಸಿಗೆ ಪ್ರೀತಿಸುವುದು ಸುಲಭವಲ್ಲ. ಪ್ರೀತಿಯನ್ನು ದ್ವೇಷವಾಗಿ ಮಾರ್ಪಡುವುದು ಸುಲಭ; ದ್ವೇಷವನ್ನು ಪ್ರೀತಿಯಾಗಿಸುವುದು ಕಷ್ಟದ ಕೆಲಸ. ಯುದ್ಧ ನಿಂತ ಮೇಲೂ ಹಲವು ತಲೆಮಾರುಗಳು ದ್ವೇಷದ, ಭೀತಿಯ ಬೇಗೆಯಿಂದ ಪಾರಾಗುವುದೇ ಇಲ್ಲ. ವಿಯಟ್ನಾಂನ ಸಂಕಟಗಳಿಂದ ಉದ್ವೇಗ, ಉನ್ಮಾದವನ್ನು ಹುಟ್ಟಿಸುವ ಪತ್ರಿಕೆಗಳು, ಟೆಲಿವಿಷನ್ ಹಾಗೂ ಸಾಮಾಜಿಕ ಮಾಧ್ಯಮಗಳು ಮತ್ತು ಜನರು ಪಾಠ ಕಲಿಯುವುದಿದೆ.