ಟಿಜಿಎಂಸಿ ಬ್ಯಾಂಕ್; ಹೊಸ ಆಡಳಿತ ಮಂಡಳಿ ಮುಂದಿನ ಸವಾಲುಗಳೇನು ಗೊತ್ತಾ!?
ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ಎನ್.ಆರ್.ಜಗದೀಶ್ ಅವರು ತೀರಿಕೊಂಡು ಬರುವ ಮಾರ್ಚಿ 22ಕ್ಕೆ ಎರಡು ವರ್ಷಗಳಾಗಲಿವೆ. 90 ವರ್ಷದ ಜಗದೀಶಾರಾಧ್ಯರು ತೀರಿಕೊಂಡಾಗಲೂ ಅವರೇ ಅಧ್ಯಕ್ಷರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೊದಲನೇ ಚುನಾವಣೆ ಇದಾಗಿದೆ.
99% ಲೋಕಲ್
ಕುಚ್ಚಂಗಿ ಪ್ರಸನ್ನ
ತುಮಕೂರು ನಗರದಲ್ಲಿ ಕೇಂದ್ರ ಕಚೇರಿ ಹೊಂದಿ ರಾಜಧಾನಿ ಸೇರಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಒಟ್ಟು 29 ಶಾಖೆಗಳನ್ನು ಹೊಂದಿರುವ 1797 ಕೋಟಿ ರೂಪಾಯಿ ದುಡಿಮೆ ಬಂಡವಾಳ ಹೊಂದಿ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಸಾಲ ನೀಡಿರುವ ಟಿಜಿಎಂಸಿ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆ ಜ.12ರ ಭಾನುವಾರ ನಡೆಯುತ್ತಿದೆ.
ತುಮಕೂರಿನ ಧಾನ್ಯ ವ್ಯಾಪಾರಿಗಳ ಸಂಘವು 1963ರಲ್ಲಿ ಈ ಬ್ಯಾಂಕನ್ನು ಸ್ಥಾಪಿಸಿದಾಗ ಜಂಟಿ ಕಾರ್ಯದರ್ಶಿಯಾಗಿದ್ದ ಆನಂತರ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ಎನ್.ಆರ್.ಜಗದೀಶ್ ಅವರು ತೀರಿಕೊಂಡು ಬರುವ ಮಾರ್ಚಿ 22ಕ್ಕೆ ಎರಡು ವರ್ಷಗಳಾಗಲಿವೆ. 90 ವರ್ಷದ ಜಗದೀಶಾರಾಧ್ಯರು ತೀರಿಕೊಂಡಾಗಲೂ ಅವರೇ ಅಧ್ಯಕ್ಷರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೊದಲನೇ ಚುನಾವಣೆ ಇದಾಗಿದೆ.
ಬ್ಯಾಂಕಿನ ಉಪಾಧ್ಯಕ್ಷರಾಗಿದ್ದ ಹೆಚ್.ಎಂ.ದಿವ್ಯಾನಂದಮೂರ್ತಿಯವರು ಎನ್ನಾರ್ ಸಾವಿನ ಬಳಿಕ ಸಹಜವಾಗೇ ಅಡ್‌ಹಾಕ್ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಈ ಮೂರ್ತಿ ಹಾಗೂ ಎನ್ನಾರ್ ಮೊಮ್ಮಗ ಅಕ್ಷಯ್ ಎನ್.ಆರ್ ಅವರನ್ನೂ ಸೇರಿಸಿಕೊಂಡು 17 ಮಂದಿಯ ಸಿಂಡಿಕೇಟ್ ಅನ್ನು ಬ್ಯಾಂಕಿನ ಮಾತೃ ಸಂಸ್ಥೆ ಜಿಎಂಎ (ಧಾನ್ಯ ವ್ಯಾಪಾರಿಗಳ ಸಂಘ) ಅನುಮೋದಿಸಿ, ಇವರನ್ನೇ ಗೆಲ್ಲಿಸಿ ಎಂದು ಪ್ರಚಾರದಲ್ಲಿ ತೊಡಗಿದೆ. ಈ ತಂಡದಲ್ಲಿ ಹಾಲಿ ನಿರ್ದೇಶಕರಲ್ಲಿ ಕೆಲವರನ್ನು ಕೈ ಬಿಟ್ಟು ಐವರು ಹೊಸಬರಿಗೆ ಅವಕಾಶವನ್ನೂ ಜಿಎಂಎ ಕಲ್ಪಿಸಿಕೊಟ್ಟಿದೆ. ಕಳೆದ ತಿಂಗಳು ಶತಮಾನೋತ್ಸವ ಆಚರಿಸಿಕೊಂಡ ವೈಶ್ಯ ಸಹಕಾರ ಬ್ಯಾಂಕ್ ಹಾಗೂ ಮೊನ್ನೆ ತಾನೇ ಚುನಾವಣೆ ನಡೆದ ತುಮಕೂರು ವೀರಶೈವ ಸಹಕಾರ ಬ್ಯಾಂಕ್ ಸೇರಿದಂತೆ ತುಮಕೂರಿನ ಬಹುತೇಕ ಸಹಕಾರ ಬ್ಯಾಂಕುಗಳು ಹಾಗೂ ಪತ್ತಿನ ಸಹಕಾರ ಸಂಘಗಳು ಆಯಾ ಜಾತಿಗಳ ಬೆಂಬಲದೊಂದಿಗೇ ಸ್ಥಾಪನೆಯಾಗಿರುವ ಕಾರಣದಿಂದಾಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಾಗ ಆಯಾ ಜಾತಿ ಸಂಘಗಗಳು ಸಹಜವಾಗೇ ನಿರ್ಣಾಯಕ ಎನಿಸಿಕೊಂಡಿವೆ. ಇದೇ ಜ.19ರಂದು ಚುನಾವಣೆ ನಡೆಯುತ್ತಿರುವ ವೈಶ್ಯ ಸಹಕಾರ ಬ್ಯಾಂಕಿನ ಅಭ್ಯರ್ಥಿಗಳನ್ನೂ ವೈಶ್ಯ ಸಮಾಜವೇ ಆಯ್ಕೆ ಮಾಡಿದೆ ಎನ್ನುವುದನ್ನು ಗಮನಿಸಿದರೆ ನನ್ನಮಾತುಗಳು ನಿಮಗೆ ಅರ್ಥವಾಗಬಹುದು. ಅದರೆ ಟಿಜಿಎಂಸಿ ಹಾಗಲ್ಲ , ತುಮಕೂರಿನ ಎಲ್ಲ ಕೋಮಿನ ವ್ಯಾಪಾರಿಗಳು, ಉದ್ಯಮಿಗಳು ಈ ಬ್ಯಾಂಕಿನ ಆಡಳಿತ ಮಂಡಳಿ ಹಾಗು ಶೇರುದಾರರ ಪಟ್ಟಿಯಲ್ಲಿದ್ದಾರೆ.
1963ರಲ್ಲಿ 265 ಸದಸ್ಯರೊಂದಿಗೆ ಅವತ್ತಿನ ಮುಂಚೂಣಿ ವರ್ತಕರಾಗಿದ್ದ ಎಕೆಎ ಪಾರ್ಶ್ವನಾಥ್, ಎನ್.ಆರ್.ಜಗದೀಶ್, ಟಿ.ಎನ್.ಕೆಂಪಹೊನ್ನಯ್ಯ, ಗುಬ್ಬಿ ಹುಚ್ಚಪ್ಪ ಮೊದಲಾದವರು ಪ್ರಯತ್ನದೊಂದಿಗೆ ಆರಂಭವಾದ ಟಿಜಿಎಂಸಿ 1987ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಲೈಸೆನ್ಸ್ ಅನ್ನೂ ಪಡೆಯಿತು. 1992ರಿಂದೀಚೆಗೆ ಶಾಖೆಗಳನ್ನೂ ಆರಂಭಿಸತೊಡಗಿತು. ಹಾಲಿಹತ್ತು ಜಿಲ್ಲೆಗಳಲ್ಲಿ ಟಿಜಿಎಂಸಿ ಶಾಖೆಗಳನ್ನು ಹೊಂದಿದೆ. ಕಳೆದ 60 ವರ್ಷಗಳಲ್ಲಿ ಹಲವು ವರ್ಷಗಳು ಅತ್ಯುತ್ತಮ ಪಟ್ಟಣ ಸಹಕಾರ ಬ್ಯಾಂಕ್ ಎಂಬ ಪ್ರಶಸ್ತಿಯನ್ನೂ ಪಡೆದಿದೆ. ಜೊತೆಗೆ ಬ್ಯಾಂಕಿನ ಅಧ್ಯಕ್ಷರಾಗಿದ್ದ ಎನ್ನಾರ್ ಸಹಕಾರ ರತ್ನ ಪ್ರಶಸ್ತಿಯನ್ನೂ ಗಳಿಸಿದ್ದರು.
ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಜನರಲ್ ಬಾಡಿ ಮೀಟಿಂಗ್‌ನಲ್ಲಿ ಅಧ್ಯಕ್ಷ ದಿವ್ಯಾನಂದಮೂರ್ತಿಯವರ ಅಧ್ಯಕ್ಷೀಯ ಭಾಷಣದ ಒಂದು ಪ್ಯಾರಾ ಹೀಗಿದೆ.
“ನಮ್ಮ ಬ್ಯಾಂಕಿನ ವ್ಯವಹಾರದ ವಿಮರ್ಶೆ:
2023-24ರ ಅವಧಿಯಲ್ಲಿ ನಮ್ಮ ಬ್ಯಾಂಕಿನ ವ್ಯವಹಾರದ ಅಂಕಿ ಅಂಶಗಳು ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಕಂಡಿರುವುದಿಲ್ಲ. ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮದಿಂದ 2022-23ರವರೆಗಿನ ಆರ್ಥಿಕ ಮಂದಗತಿಯು ನಮ್ಮ ಬ್ಯಾಂಕಿನ ಬೆಳವಣಿಗೆಯನ್ನು ನಿಧಾನಗೊಳಿಸಿತ್ತು. ಆರ್ಥಿಕ ವರ್ಷ 2023-24ರಲ್ಲಿ ಸಾಲದ ಬೇಡಿಕೆಯು ಮಂದಗತಿಯಲ್ಲಿತ್ತು, ವಾಟ್ಸಾಪ್ ಸಂದೇಶಗಳು ಮತ್ತು ವೃತ್ತ ಪತ್ರಿಕೆ ಹೇಳಿಕೆಗಳ ಮೂಲಕ ಅತೃಪ್ತ ವ್ಯಕ್ತಿಗಳು ಬ್ಯಾಂಕ್ ವಿರುದ್ಧ ನಡೆಸಿದ ನಕಾರಾತ್ಮಕ ಪ್ರಚಾರದಿಂದಾಗಿ ಬ್ಯಾಂಕಿನ ಕೆಲವು ಗ್ರಾಹಕರು ಠೇವಣಿಗಳನ್ನು ಹಿಂಪಡೆದಿದ್ದು ಬ್ಯಾಂಕಿನ ಠೇವಣಿಯ ಬೆಳವಣಿಗೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ವರದಿ ವರ್ಷದಲ್ಲಿ ಬ್ಯಾಂಕು ಠೇವಣಿ ಸಂಗ್ರಹಣೆಗಿಂತ NPA ಪ್ರಮಾಣವನ್ನು ಕಡಿಮೆಗೊಳಿಸಲು ಸಾಲ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಪರಿಣಾಮದಿಂದಾಗಿ ವರದಿ ಸಾಲಿನ ಅಂತ್ಯಕ್ಕೆ ನಿಷ್ಕ್ರಿಯ ಆಸ್ತಿಯು (NPA) ರೂ.253.78 ಕೋಟಿಗಳಿಗೆ ನಿಂತಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ 43.24%ರಷ್ಟು ಕಡಿಮೆಯಾಗಿರುತ್ತದೆ.
*2023-24ನೇ ಸಾಲಿನ ವ್ಯಾಪಾರ ವಹಿವಾಟು ರೂ.2489.03 ಕೋಟಿ ಆಗಿದ್ದು, ಕಳೆದ ವರ್ಷ ಅಂದರೆ 2022-23ರ ವ್ಯಾಪಾರ ವಹಿವಾಟು ರೂ.2866.84 ಕೋಟಿಗಳಿಗೆ ಹೋಲಿಸಿದರೆ 13.18%ರಷ್ಟು ಕುಸಿತ ಕಂಡಿದೆ.”
ಟಿಜಿಎಂಸಿ ಬ್ಯಾಂಕಿನ ಅಧ್ಯಕ್ಷರು ಹೇಳಿರುವ ಅತೃಪ್ತ ವ್ಯಕ್ತಿಗಳ ನಕಾರಾತ್ಮಕ ಪ್ರಚಾರವಷ್ಟೇ ಈ ಬ್ಯಾಂಕಿನಲ್ಲಿ ಇಟ್ಟಿದ್ದ ಠೇವಣಿಯನ್ನು ಗ್ರಾಹಕರು ವಾಪಸ್ ಪಡೆಯಲು ಮುಂದಾದರೇ ಅಥವಾ ಈ ವ್ಯಕ್ತಿಗಳು ಎರಡು ವರ್ಷದಿಂದ ಮಾಡುತ್ತ ಬಂದಿರುವ ಆರೋಪಗಳಲ್ಲಿ ಏನಾದರೂ ಹುರುಳಿದೆಯೇ ಎನ್ನುವುದನ್ನು ತನ್ನ ಗ್ರಾಹಕರು ಹಾಗೂ ಶೇರುದಾರ ಸದಸ್ಯರಿಗೆ ಅರ್ಥ ಮಾಡಿಸುವ ಕೆಲಸಕ್ಕೆ ಆಡಳಿತ ಮಂಡಳಿ ಕೈಹಾಕಲೇ ಇಲ್ಲ , ಬದಲಿಗೆ, ಹಾಗೆ ಹೇಳಿಕೆ ನೀಡುತ್ತಿರುವವರು ಮಾಧ್ಯಮಗಳಿಗೆ ಯಾವ ಹೇಳಿಕೆಯನ್ನೂ ನೀಡದಂತೆ ಹಾಗೂ ಆ ವ್ಯಕ್ತಿಗಳು ಸಹಕಾರ ಸಂಘಗಳ ಇಲಾಖೆಯಲ್ಲಿ ಸಲ್ಲಿಸಿದ ದೂರುಗಳ ವಿರುದ್ಧ ಕಾನೂನು ಪ್ರಕಾರ ತನಿಖೆ ನಡೆಯದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆಗಳನ್ನು ತರುವಲ್ಲಿ ಯಶಸ್ವಿಯಾಗಿದೆ, ಜೊತೆಗೆ ಈ ಜನರ ಮಾತುಗಳನ್ನು ನಂಬಬೇಡಿ ಎಂದು ಆಗಾಗ ಪ್ರಕಟಣೆಗಳನ್ನುಕೊಡುತ್ತಾ ಬಂದಿದೆ.
ವಾಸ್ತವದಲ್ಲಿ ಟಿಜಿಎಂಸಿ ಬ್ಯಾಂಕಿನಲ್ಲಿ ಸಾಲಗಳನ್ನು ಮಂಜೂರು ಮಾಡುವಾಗ ಆಡಳಿತ ಮಂಡಳಿಯು ನಿಗದಿಪಡಿಸಿದ ವಿಧಾನಗಳನ್ನು ಅನುಸರಿಸುತ್ತಿಲ್ಲ, ಸಾಲ ಮಂಜೂರು ಮಾಡುವಾಗ ಹಾಗೂ ಆನಂತರ ಹಣಕಾಸಿನ ಅಕ್ರಮ ವಹಿವಾಟುಗಳು ನಡೆದಿವೆ ಹಾಗೂ ನಡೆಯುತ್ತಿವೆ. ಪರಿಣಾಮವಾಗಿ ಬ್ಯಾಂಕು ಅನಗತ್ಯವಾಗಿ ಅನಪೇಕ್ಷಿತವಾಗಿ ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸುತ್ತಿದೆ . ಈ ಅಕ್ರಮದಲ್ಲಿ ಬ್ಯಾಂಕಿನ ಕೆಲವು ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ದೂರು ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಆರೋಪಗಳಿಗೆ ನಿದರ್ಶನವಾಗಿ, ಒಂದು ಸಾಲದ ಪ್ರಕರಣದಲ್ಲಿ ವಾಣಿಜ್ಯ ಅಥವಾ ವಸತಿ ಉದ್ದೇಶಕ್ಕೆ ಸರ್ಕಾರದಿಂದ ಭೂ ಪರಿವರ್ತನೆಯೇ ಆಗಿಲ್ಲದ ಕೃಷಿ ಭೂಮಿಯನ್ನು ಅಡಮಾನ ಮಾಡಿಕೊಂಡು 20 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಸಾಲದ ಅರ್ಜಿಯನ್ನು ಸಲ್ಲಿಸಿದ ದಿನಾಂಕಕ್ಕೆ ತಿಂಗಳು ಮೊದಲೇ ಬ್ಯಾಂಕಿನ ಅಧಿಕೃತ ಮೌಲ್ಯಮಾಪಕರು ಅರ್ಜಿದಾರರಿಗೆ ನೇರವಾಗಿ ಮೌಲ್ಯಮಾಪನ ಮಾಡಿಕೊಡುತ್ತಾರೆ. ಕಾನೂನು ಸಲಹೆಗಾರರೂ ಅಡಮಾನ ಮಾಡಲು ನೀಡಿದ ಭೂಮಿಯ ಜಿರಾಕ್ಸ್ ಪ್ರತಿಗಳನ್ನು ಆಧರಿಸಿ ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಹೀಗೆಲ್ಲ ಕೃಷಿ ಭೂಮಿಗೆ ಸಾಲ ಮಂಜೂರುಮಾಡಲು ಬ್ಯಾಂಕಿನ ನಿಯಮಗಳಲ್ಲಿ ಅವಕಾಶವಿಲ್ಲ ಎಂಬುದು ಒಂದು ಆಪಾದನೆಯಾದರೆ. ಇದೇ ಪ್ರಕರಣದಲ್ಲಿ ಸಾಲ ಪಡೆದಿರುವ ತಂದೆ ಹಾಗೂ ಮಗ ಇಬ್ಬರೂ ಸರ್ಕಾರಕ್ಕೆ ದೂರು ಸಲ್ಲಿಸಿ, ನಾವು ಸಾಲದ ಅರ್ಜಿಯಲ್ಲಿ 15 ಕೋಟಿ ರೂ. ಸಾಕು ಅಂತ ಹೇಳಿದ್ದೆವು, ಆದರೆ, ನಮ್ಮ ಸಹಿಯನ್ನು ಫೋರ್ಜರಿ ಮಾಡಿ ಆ ಮೊತ್ತವನ್ನು ರೂ.20 ಕೋಟಿ ಅಂತ ಮತ್ತೊಂದು ಅರ್ಜಿಯಲ್ಲಿ ಬರೆದುಕೊಳ್ಳಲಾಗಿದೆ, ಆದರೆ ನಮಗೆ ಎಂಟು ಕೋಟಿಮಾತ್ರ ಸಾಲ ಬಿಡುಗಡೆ ಮಾಡಲಾಗಿದೆ. ಈ ಕುರಿತು ತನಿಖೆಮಾಡಿ ಅಂತ ಆಕ್ಷೇಪ ಎತ್ತಿದ್ದಾರೆ.
ಮತ್ತೊಂದು ನಿದರ್ಶನದಲ್ಲಿ ಸಾಲಗಾರರು ಸಾಲ ಪಾವತಿ ಮಾಡದೇ ಎನ್‌ಪಿಎ ಆಗಿರುವ ಅವಧಿಯಲ್ಲೇ ಅವರು ಅಡಮಾನ ಮಾಡಿದ್ದ ಆಸ್ತಿಗಳಲ್ಲಿ ಒಂದು ಆಸ್ತಿಯನ್ನು ಬಿಡುಗಡೆ ಮಾಡಿಕೊಡಲಾಗಿದೆ. ಜೊತೆಗೆ ಅವರ ಆಸ್ತಿಯನ್ನುವಸೂಲಿ ಮೊತ್ತಕ್ಕಿಂತ ಕಡಿಮೆ ಧಾರಣೆಗೆ ಮಾರಲು ಅವಕಾಶ ನೀಡಿ ಅರ್ಧ ಮೊತ್ತವನ್ನು ಮಾತ್ರವೇ ಬ್ಯಾಂಕಿಗೆ ಜಮಾ ಮಾಡಿಕೊಂಡು, ಉಳಿದ ದೊಡ್ಡ ಮೊತ್ತವನ್ನು ವಜಾ ಮಾಡಲಾಗಿದೆ. ಜೊತೆಗೆ ಹೀಗೆ ವಜಾ ಮಾಡಿದ ಮೊತ್ತವನ್ನು ಬ್ಯಾಂಕಿನ ಸಿಬ್ಬಂದಿ ತರಬೇತಿ, ಸಭೆ, ಸಮಾರಂಭಕ್ಕೆ ಮಾಡಲಾದ ವೆಚ್ಚ ಎಂದು ತೋರಿಸಿ ಸರಿಗಟ್ಟಲಾಗಿದೆ. ಮತ್ತೊಂದರಲ್ಲಿ ಫೋರ್ಜರಿ ದಾಖಲೆಗಳನ್ನು ಸಲ್ಲಿಸಿದ ದಂಪತಿಗೆ ಸಾಲ ನೀಡಲಾಗಿದೆ.
ಇಂತ ಅಕ್ರಮಗಳು 1300 ಕೋಟಿ ರೂ ಸಾಲ ನೀಡುವ 29 ಶಾಖೆಗಳನ್ನು ಹೊಂದಿರುವ ಒಂದು ದೊಡ್ಡ ಬ್ಯಾಂಕಿನಲ್ಲಿ ನಡೆಯುವುದು ಸರ್ವೇ ಸಾಮಾನ್ಯ. ಇಂತ ದೂರುಗಳು ಬಂದಾಗ , ಆಡಳಿತ ಮಂಡಳಿಯೇ ಖುದ್ದು ಕಾರ್ಯಾಚರಣೆಗೆ ಇಳಿದು, ದಾಖಲೆಗಳನ್ನು ಪರಿಶೀಲಿಸಿ, ಅಕ್ರಮಗಳು ನಡೆದಿರುವುದು ಸತ್ಯ ಅಂತ ಕಂಡು ಬಂದಲ್ಲಿ, ಸಂಬಂಧಿಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಿ ದೂರು ದಾರರ ಬಾಯಿ ಮುಚ್ಚಿಸಬೇಕಿತ್ತು ಎನ್ನುವುದು ಬ್ಯಾಂಕಿನಲ್ಲಿ ಶೇರು ಹೊಂದಿರುವ,ಠೇವಣಿ ಇರಿಸಿರುವ, ದಶಕಗಳಿಂದಲೂ ಬ್ಯಾಂಕಿನಲ್ಲೇ ವ್ಯವಹಾರ ಮಾಡಿಕೊಂಡು ಬಂದಿರುವ ಗ್ರಾಹಕರ ಮನಸ್ಸಿನಲ್ಲಿತ್ತು.
ಈ ಅತೃಪ್ತರೂ ಒಂದು ಸಿಂಡಿಕೇಟ್ ಮಾಡಿಕೊಂಡು ಚುನಾವಣೆಗೆ ಇಳಿದಿದ್ದಾರೆ. ಯಾರು ಗೆಲ್ಲುತ್ತಾರೆ ಎನ್ನುವುದು ಭಾನುವಾರದ ಮತದಾನದ ನಂತರ ಗೊತ್ತಾಗೇ ಆಗುತ್ತದೆ. ಜಿಎಂಎ ಆಯ್ಕೆ ಮಾಡಿರುವ ಹಾಲಿ ಇರುವ ಆಡಳಿತ ಮಂಡಳಿಯೇ ಮತ್ತೆ ಅಧಿಕಾರ ಹಿಡಿದರೆ ಅದು ಅಚ್ಚರಿಯ ಸಂಗತಿ ಏನೂ ಆಗುವುದಿಲ್ಲ. ಆನಂತರವಾದರೂ, ಹಾಲಿ ಬಯಲಿಗೆ ಬಂದಿರುವ ಅಕ್ರಮಗಳು, ಅವ್ಯವಹಾರಗಳು ಹಾಗೂ ಹಗರಣಗಳನ್ನು ಖುದ್ದು ಆಡಳಿತ ಮಂಡಳಿಯೇ ಪತ್ತೆ ಹಚ್ಚಿ ಹದ್ದುಬಸ್ತು ಮಾಡಿದಲ್ಲಿ ಗ್ರಾಹಕರು ನೆಮ್ಮದಿಯಾಗಿರುತ್ತಾರೆ.