ಕಾಶ್ಮೀರದ ಕಿರೀಟವಿಲ್ಲದ ಮಹಾರಾಜ ಯಾರು ಗೊತ್ತಾ?!

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ಮತ್ತೆ ಸ್ವತಂತ್ರ ರಾಜ್ಯ ಸ್ಥಾನಮಾನ ಘೋಷಣೆಯ ನಿರೀಕ್ಷೆಯಲ್ಲಿರುವ , ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಓಮರ್ ಅಬ್ದುಲ್ಲಾ 2024ರ ಅಕ್ಟೋಬರ್ 16ರಂದು ಗೌಪ್ಯತೆಯ ಪ್ರಮಾಣ ಸ್ವೀಕರಿಸುತ್ತಾರೆ. ಪ್ರಮಾಣ ವಚನ ಸ್ವೀಕರಿಸಿದ ನಾಲ್ಕೇ ದಿನಗಳಲ್ಲಿ ಪ್ರತೀಕಾರವೋ ಎಂಬಂತೆ ಅ.20ರಂದು ಇದೇ ಓಮರ್ ಅಬ್ದುಲ್ಲಾ ವಿಧಾನ ಸಭೆಗೆ ಗೆದ್ದು ಬಂದ ಗಾಂಡರ್‌ಬಾಲ್ ಜಿಲ್ಲೆಯಲ್ಲಿ ಏಳು ನಾಗರಿಕರನ್ನು ಉಗ್ರರು ಗುಂಡು ಹಾರಿಸಿಕೊಲ್ಲುತ್ತಾರೆ.
ಟಿಆರ್‌ಎಫ್ ಎಂಬ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಈ ಕೃತ್ಯ ನಾನೇ ಮಾಡಿದ್ದು ಎನ್ನುತ್ತದೆ. ಮೊನ್ನೆ ಏ.22ರ ಮಂಗಳವಾರ ಕಾಶ್ಮೀರದ ಪಹಲ್‌ಗಾಮ್‌ನಲ್ಲಿ ನೂರು ಸುತ್ತು ಗುಂಡು ಹಾರಿಸಿ 26 ಪ್ರವಾಸಿಗರನ್ನು ಕೊಂದದ್ದೂ ಇದೇ ಟಿ ಆರ್ ಎಫ್ ಉಗ್ರರ ಸಂಘಟನೆಯೇ. ಈ ಟಿ ಆರ್ ಎಫ್ ಪಕ್ಕದ ಪಾಕಿಸ್ತಾನದ ಗುಪ್ತಚರ ದಳ ಐಎಸ್‌ಐ ತರಬೇತಿ ನೀಡಿರುವ ಲಷ್ಕರ್ ಎ ತೈಬಾ ಉಗ್ರಗಾಮಿ ಸಂಘಟನೆಯ ಮತ್ತೊಂದು ಪ್ರಾಕ್ಸಿ ಸಂಘಟನೆ.
ಜಮ್ಮು ಮತ್ತು ಕಾಶ್ಮೀರದ ಹಿಂದಿನ ಇತಿಹಾಸ ಒಂದು ಕಡೆ ಇರಲಿ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ದಿನಗಳಿಂದ ಮುಂದಿನ ಬೆಳವಣಿಗೆಯನ್ನು ಗಮನಿಸಿ. ಭಾರತ ಸರ್ಕಾರವನ್ನು ನಡೆಸುತ್ತಿರುವ ಬಿಜೆಪಿ ಜಮ್ಮು ಮತ್ತು ಕಾಶ್ಮೀರಕ್ಕೆ 1947ರಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ಪಾರ್ಲಿಮೆಂಟಿನಲ್ಲಿ ಧ್ವನಿಮತದ ಅನುಮೋದನೆ ಪಡೆದು ಏಕಪಕ್ಷೀಯವಾಗಿ ರದ್ದು ಮಾಡಿತು. ಹೀಗೆ ರದ್ದು ಮಾಡುವಾಗ ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಜಮ್ಮು , ಕಾಶ್ಮೀರ ಮತ್ತು ಲಡಕ್ ಸೇರಿ ಒಂದು ರಾಜ್ಯವಾಗಿದ್ದನ್ನು ರದ್ದು ಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ಒಂದು ಆಡಳಿತ ಘಟಕವಾಗಿ ಹಾಗೂ ಲಡಾಕ್ ಅನ್ನು ಮತ್ತೊಂದು ಆಡಳಿತ ಘಟಕವಾಗಿ ಕೇಂದ್ರಾಡಳಿತ ಪ್ರದೇಶಗಳು ಎಂದು ಘೋಷಿಸುತ್ತದೆ. ಅದರಂತೆ, 2019ರ ಅಕ್ಟೋಬರ್ 31ರಂದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆ ಬರುತ್ತದೆ. ಅದೇ ದಿನ ರಾಷ್ಟ್ರಪತಿಯವರು ಈ ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ಆಗಿ ಐಎಎಸ್ ಅಧಿಕಾರಿ ಗಿರೀಶ್ ಚಂದ್ರ ಮುರ್ಮು ಅವರನ್ನು ನೇಮಿಸುತ್ತಾರೆ.
ಕಾಶ್ಮೀರ ಕಣಿವೆಯ ಜನರು ದಿಗ್ಬ್ರಮೆಗೊಳ್ಳುತ್ತಾರೆ. ಹೆಜ್ಜೆಗೊಬ್ಬರಂತೆ ಸೇನಾ ಯೋಧರನ್ನು ತಂದು ನಿಲ್ಲಿಸಲಾಗುತ್ತದೆ. ಅವರ ಮಾಜಿ ಮುಖ್ಯಮಂತ್ರಿ ಸೇರಿದಂತೆ ಎಲ್ಲ ನಾಯಕರನ್ನು ತಿಂಗಳುಗಟ್ಟಲೆ ಗೃಹ ಬಂಧನದಲ್ಲಿರಿಸಲಾಗುತ್ತದೆ. ಜನರು ಮನೆಗಳಿಂದ ಹೊರ ಬರದಂತೆ ಮುಳ್ಳು ತಂತಿ ಬೇಲಿ ಹಾಕಲಾಗುತ್ತದೆ. ಒಬ್ಬರಿಗೊಬ್ಬರು ಸಂಪರ್ಕ ಸಾಧಿಸದಂತೆ ದೂರವಾಣಿ ಸಂಪರ್ಕ ಹಾಗೂ ನೆಟ್ ವರ್ಕ್ ಕಡಿತಗೊಳಿಸಲಾಗುತ್ತದೆ. ಇಷ್ಟೆಲ್ಲ ಆದ ಮೇಲೆ ಆ ರಾಜ್ಯದ ಜನರ ಪ್ರತಿಕ್ರಿಯೆ ಏನು ಎಂಬುದನ್ನೇ ಯಾರೂ ಕೇಳುವುದೂ ಇಲ್ಲ, ಹೇಳಲು ಬಿಡಲೂ ಇಲ್ಲ. ಆಲ್ ಈಸ್ ವೆಲ್ ಅಷ್ಟೇ.
ಈ ಮುರ್ಮು ಎಂಬ ಐಎಎಸ್ ಅಧಿಕಾರಿ ಗುಜರಾತಿನಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಹಾಗೂ ಅಮಿತ್ ಶಾ ಗೃಹ ಮಂತ್ರಿಯಾಗಿದ್ದಾಗ 2001ರಿಂದಲೂ ಅವರ ಬಲಗೈ ಭಂಟನಾಗಿ ಸೇವೆ ಸಲ್ಲಿಸುತ್ತ ಅವರೊಂದಿಗೇ ಪ್ರಧಾನ ಮಂತ್ರಿ ಕಚೇರಿವರೆಗೂ ಸಾಗಿ ಬಂದವರು. ಗುಜರಾತಿನಲ್ಲಿ 2004ರಲ್ಲಿ ಗೃಹ ಕಾರ್ಯದರ್ಶಿಯಾಗಿ ಗೋಧ್ರಾ ನರಮೇಧದ ಕೇಸುಗಳನ್ನು ನಿಭಾಯಿಸಿದವರು. ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದರೆಂದು ಆಪಾದಿಸಲಾದ ಇಷ್ರತ್ ಜಹಾನ್ ಮತ್ತು ಇತರ ಮೂವರನ್ನು ಎನ್‌ಕೌಂಟರ್‌ನಲ್ಲಿ ಕೊಂದ ಕೇಸಿನಲ್ಲಿ ಈ ಮುರ್ಮು ಅವರೂ ಸಿಬಿಐ ತನಿಖೆ ಎದುರಿಸಿದ್ದರು ಹಾಗೂ ಈ ಕೇಸಿನಲ್ಲಿ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಪ್ರಫುಲ್ ಪಟೇಲ್ ಹಾಗು ಇನ್ನಿತರ ಮೂವರು ಅಧಿಕಾರಿಗಳ ಜೊತೆ ಇದೇ ಮುರ್ಮು ಈ ನಕಲಿ ಎನ್‌ಕೌಂಟರ್ ಮುಚ್ಚಿ ಹಾಕುವ ಕುರಿತು ಮಾತನಾಡಿದ್ದ ಆಡಿಯೋ ಟೇಪ್ ಆಧರಿಸಿಯೇ ಸಿಬಿಐ ತನಿಖೆ ನಡೆಸಿದ್ದು. ಇಷ್ಟರ ಮಟ್ಟಿಗೆ ಮೋದಿ-ಶಾ ನಂಬಿಕಸ್ತನಾದ ಕಾರಣಕ್ಕೇ ಈ ಐಎಎಸ್ ಅಧಿಕಾರಿ ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿದ್ದು . ಈ ಮುರ್ಮು ಜಮ್ಮು ಮತ್ತು ಕಾಶ್ಮೀರಕ್ಕೆ ಬರುವ ಮೊದಲು ಸ್ವತಂತ್ರ ರಾಜ್ಯವಾಗಿದ್ದ ಇಲ್ಲಿ ಪುಲ್ವಾಮಾ ಆತ್ಮಹತ್ಯಾತ್ಮಕ ಬಾಂಬ್ ಸ್ಫೋಟ ಕುರಿತ ಕೆಲ ಸತ್ಯಗಳನ್ನು ಹೊರಗೆಡವಿದ ಆ ಮೂಲಕ ಮೋದಿ-ಶಾ ಅವರ ಕೆಂಗಣ್ಣಿಗೆ ಗುರಿಯಾದ ಸತ್ಯಪಾಲ್ ಮಲ್ಲಿಕ್ ರಾಜ್ಯಪಾಲರಾಗಿದ್ದರು.
2020ರ ಆಗಸ್ಟ್ 7ರಿಂದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿ ಬಿಜೆಪಿ ಸರ್ಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಮೂರು ಸಲ ಸಂಸದರಾಗಿದ್ದ ಮನೋಜ್ ಸಿನ್ಹಾ ಕಾರ್ಯನಿರ್ವಹಿಸುತ್ತಿದ್ದಾರೆ. ಈತ ಬಿಟೆಕ್ ಸಿವಿಲ್ ಇಂಜಿನಿಯರ್, ಬನಾರಸ್ ಹಿಂದೂ ವಿವಿಯ ಐಐಟಿ ಪ್ರಾಡಕ್ಟ್ ಕೂಡಾ.
ನಿಮಗೆ ಜಮ್ಮು ಮತ್ತು ಕಾಶ್ಮೀರದ ಇವತ್ತಿನ ಆಡಳಿತ ವಿಧಾನದ ಅರಿವಾಗ ಬೇಕೆಂದರೆ ಆ ರಾಜ್ಯದ ಅಧಿಕೃತ ವೆಬ್ ಸೈಟ್ ನೋಡಬೇಕು. ಆ ಜಾಲತಾಣದ ಮುಖಪುಟದ ಗ್ಯಾಲರಿಯ ಎಲ್ಲ ಫೋಟೋಗಳಲ್ಲೂ ಇದೇ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರಧಾನವಾಗಿ ಕಾಣುವ ಹತ್ತಾರು ಫೋಟೋಗಳೇ ಎದ್ದು ಕಾಣುತ್ತವೆ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ ಅಂತ ಹೇಳಿದ್ರಿ ಅಂತ ಕೇಳಬೇಡಿ, ಅವರನ್ನು ಈ ವೆಬ್ ಸೈಟ್‌ನಲ್ಲಿ ನೋಡಬೇಕು ಎಂದರೆ ಕೌನ್ಸಿಲ್ ಆಫ್ ಮಿನಿಸ್ಟರ್ಸ್ ಎನ್ನುವ ಪೇಜ್ ಕ್ಲಿಕ್ ಮಾಡಬೇಕು. ಆಲ್ಲಿ ಓಮರ್ ಅಬ್ದುಲ್ಲಾ ಮುಖ್ಯಮಂತ್ರಿ, ಸುರೀಂದರ್ ಕುಮಾರ್ ಚೌಧರಿ ಉಪಮುಖ್ಯಮಂತ್ರಿ ಹಾಗು ಇನ್ನಿತರ ನಾಲ್ವರು ಮಂತ್ರಿಗಳ ಮಾಹಿತಿ ಹಾಗೂ ಫೊಟೋ ಕಾಣಸಿಗುತ್ತವೆ. ಸಿಎಂ, ಡಿಸಿಎಂ ಸೇರಿ ಆರು ಮಂತ್ರಿಗಳಲ್ಲಿ ಯಾರೂ ಗೃಹ ಖಾತೆ ಹೊಂದಿಲ್ಲ. ಹಾಗಾಗಿ ಇಂಡಿಯಾದ ಗೃಹ ಮಂತ್ರಿಯಾಗಿರುವ ಅಮಿತ್ ಶಾ ಅವರೇ ಜಮ್ಮು ಮತ್ತು ಕಾಶ್ಮೀರಕ್ಕೂ ಗೃಹ ಮಂತ್ರಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ, ಗಡಿಯಾಚೆಗಿನ ಭಯೋತ್ಪಾದನೆ ಹತೋಟಿಯಲ್ಲಿದೆ. ಈ ಪ್ರದೇಶದ ಜನರು ಶಾಂತಿಯುತ ಜೀವನ ನಡೆಸುತ್ತಿದ್ದಾರೆ ಎಂದು ಸಂಸತ್‌ನಲ್ಲಿ ನಿರಂತರ ಹೇಳಿಕೆ ಕೊಡುತ್ತ ಬಂದಿರುವವರೂ ಇದೇ ಅಮಿತ್ ಶಾ ಅವರೇ. ಹೆಚ್ಚೂ ಕಮ್ಮಿ ಜಮ್ಮು ಮತ್ತು ಕಾಶ್ಮೀರದ ಪಟ್ಟಾಭಿಷೇಕ ಮಾಡಿಸಿಕೊಳ್ಳದೇ, ಕಿರೀಟವನ್ನೂ ಇಟ್ಟುಕೊಳ್ಳದೇ ಆಳುತ್ತಿರುವ ಮಹಾರಾಜರೂ ಇವರೇ. ಇದೇ ಕಾರಣವಾಗಿ ಮೊನ್ನೆ ಕಾಶ್ಮೀರದ ಪಹಲ್‌ಗಾಮ್‌ನಲ್ಲಿ ಗುಂಡಿನ ದಾಳಿ ನಡೆದ ಸುದ್ದಿ ಕಿವಿಗೆ ಬಿದ್ದ ಕ್ಷಣದಲ್ಲೇ ತರಾತುರಿಯಲ್ಲಿ ವಿಶೇಷ ವಿಮಾನದಲ್ಲಿ ಅಲ್ಲಿಗೆ ಹಾರಿದವರೂ ಇವರೇ, ಇದೇ ಕಾರಣವಾಗಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅರಬ್ ಪ್ರವಾಸ ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಧಾವಿಸಿದರೂ ಸಾಲು ಹೆಣಗಳನ್ನು ನೋಡಿ ಸಂತಾಪ ಸಲ್ಲಿಸಲು ಕಾಶ್ಮೀರಕ್ಕೆ ಹೋಗುವ ಬದಲು ಚುನಾವಣೆ ಸಮೀಪವಿರುವ ಬಿಹಾರಕ್ಕೆ ಹೋಗಿ ಅಲ್ಲಿ ಪಹಲ್‌ಗಾಮ್ ಹತ್ಯಾಕಾಂಡ ಖಂಡಿಸಿ ವೀರಾವೇಶದ ಭಾಷಣ ಮಾಡಿದ್ದು. ಇಂತದ್ದೇ ಕಾರಣಕ್ಕೇ ನಮ್ಮ ಪ್ರಧಾನಿಯವರು ಮಣಿಪುರ ವರ್ಷದಿಂದ ಹತ್ತಿ ಉರಿಯುತ್ತಿದ್ದರೂ ಅಲ್ಲಿಗೆ ಹೋಗದೇ ಇರುವುದು.
2019ರಲ್ಲಿ ಆರ್ಟಿಕಲ್ 370 ರದ್ದು ಪಡಿಸಿದ ನಂತರ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ಕೃತ್ಯಗಳು ಕಡಿಮೆಯಾಗಿವೆ, ಉಗ್ರರನ್ನು ಹತೋಟಿಗೆ ತರಲಾಗಿದೆ. ಒಂದು ಅಂಕಿ ಅಂಶಗಳ ಪ್ರಕಾರ 2020ರಲ್ಲಿ 126, 2022ರಲ್ಲಿ 103, 2023ರಲ್ಲಿ 29 ಹಾಗೂ 2024ರಲ್ಲಿ 09 ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ. ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಬಿಜೆಪಿ ನೆಲೆಯಿರುವ ಜಮ್ಮು ವಿಭಾಗದಲ್ಲಿ ಹೆಚ್ಚು ಉಗ್ರಗಾಮಿ ಚಟುವಟಿಕೆಗಳು ನಡೆಯತೊಡಗಿವೆ. ವಾಸ್ತವದಲ್ಲಿ ಪಾಕಿಸ್ತಾನಕ್ಕೆ ಶ್ರೀನಗರಕ್ಕಿಂತ ಹೆಚ್ಚು ಸಮೀಪ ಇರುವುದೇ ಜಮ್ಮು.
ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮನ್ನು ನಾವು ಆಳಿಕೊಳ್ಳುವ ಪ್ರಜಾಸತ್ತಾತ್ಮಕ ಅಡಳಿತ ವ್ಯವಸ್ಥೆ ಇರುವ , ಬಹು ಜನಾಂಗೀಯ, ಬಹು ಧರ್ಮೀಯ, ಬಹು ಸಂಸ್ಕೃತಿಯ ಜನರುಳ್ಳ ಈ ದೇಶದಲ್ಲಿ “ಒಂದು ದೇಶ- ಒಂದು ಪಡಿತರ ಚೀಟಿ, “ಒಂದು ದೇಶ – ಒಂದು ಚುನಾವಣೆ” ಎಂಬೆಲ್ಲ ಬಿಜೆಪಿಯ ಘೋಷಣೆಗಳು ಹಾಸ್ಯಾಸ್ಪದ ಎನಿಸಬಿಡುತ್ತವೆ. ಇಂಥ ಇವರ ಘೋಷಣೆಗಳಿಗೆ ಅಡಿಪಾಯ ಹಾಕಿಕೊಟ್ಟವರು ಶ್ಯಾಮ ಪ್ರಸಾದ ಮುಖರ್ಜಿ ಅವರು.
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಘೋಷಿಸಿದ ಕ್ವಿಟ್ ಇಂಡಿಯಾ ಚಳವಳಿಯ ತೀವ್ರ ವಿರೋಧಿ, ಭಾರತವನ್ನು ವಿಭಜಿಸಿದೇ ಇದ್ದರೂ ಪರವಾಗಿಲ್ಲ ಬಂಗಾಳವನ್ನು ವಿಭಜಿಸಿ ಎಂದು ಪಟ್ಟು ಹಿಡಿದಿದ್ದ ಒಂದು ಕಾಲಕ್ಕೆ ಕಾಂಗ್ರೆಸ್‌ನಿಂದ ಗೆದ್ದು, ನೆಹರೂ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿ ಆನಂತರ ಹಿಂದೂ ಮಹಾ ಸಭಾ ಅಧ್ಯಕ್ಷನಾಗಿ, ಆರ್ ಎಸ್ ಎಸ್ ನೆರವಿನೊಂದಿಗೆ ಭಾರತೀಯ ಜನ ಸಂಘ ಕಟ್ಟಿದ ಶ್ಯಾಮ ಪ್ರಸಾದ್ ಮುಖರ್ಜಿ ಇದೇ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕೊಡುವುದರ ತೀವ್ರ ವಿರೋಧಿಯಾಗಿದ್ದರು. ಇವರು 1950ರಲ್ಲಿ ಇದೇ ಕಾರಣವಾಗಿ “ಏಕ್ ವಿಧಾನ್- ಏಕ್ ಪ್ರಧಾನ್- ಏಕ್ ನಿಶಾನ್ “ ಇಡೀ ಇಂಡಿಯಾಕ್ಕೆ ಒಂದೇ ಆಡಳಿತ- ಒಬ್ಬನೇ ಪ್ರಧಾನಿ ಹಾಗೂ ಒಂದೇ ಗುರಿ ಎಂಬ ಘೋಷಣೆಯೊಂದಿಗೆ ಕಾಶ್ಮೀರದಲ್ಲಿ ಹೋರಾಟ ನಡೆಸಿದರು. 1953ರ ಮೇ 11ರಂದು ಜಮ್ಮು ಮತ್ತು ಕಾಶ್ಮೀರದ ಪ್ರಧಾನಿಯಾಗಿದ್ದ ಶೇಕ್ ಅಬ್ದುಲ್ಲಾ ಸರ್ಕಾರ ಮುಖರ್ಜಿ ಅವರನ್ನು ಬಂಧಿಸಿ ಜೈಲಿಗೆ ಹಾಕಿತ್ತು. ತಿಂಗಳ ನಂತರ ಜೂನ್ 23ರಂದು ಶ್ಯಾಮ್ ಪ್ರಸಾದ ಮುಖರ್ಜಿ ಅವರಿಗೆ ಹೃದಯಾಘಾತವಾಯಿತು. ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟರು. ಅವರ ಸಾವು ಸಹಜವಲ್ಲ, ಹತ್ಯೆ ಎಂದು ಅವರ ಪಕ್ಷದವರು ಪ್ರತಿಭಟನೆ ನಡೆದರೂ ನೆಹರೂ ತನಿಖೆಗೆ ಆದೇಶ ಕೊಡಲಿಲ್ಲ.
ಅವರದೇ ಹಾದಿಯಲ್ಲಿ ನಡೆಯುತ್ತಿರುವ ಬಿಜೆಪಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದೇ ಅಲ್ಲದೇ ಅಲ್ಲಿ ತಲೆಮಾರುಗಳಿಂದ ನೆಲೆಸಿರುವ ಶಾಶ್ವತ ನಿವಾಸಿಗಳನ್ನು ಅಭಿವೃದ್ದಿಯ ನೆಪದಲ್ಲಿ ಒಕ್ಕಲೆಬ್ಬಿಸುವ ಮೂಲಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ಕೋರಿತು ಎನ್ನಬೇಕಾಗುತ್ತದೆ.
ಸುಮಾರು ಆರೇಳು ತಿಂಗಳ ಹಿಮಗಾಲ ಮುಗಿದು ಸೂರ್ಯನ ಎಳೆಯ ಕಿರಣಗಳು ಕಾಶ್ಮೀರದ ಭೂಮಿಯನ್ನು ಚುಂಬಿಸಿದಾಗ, ಅಡಿಗಟ್ಟಲೆ ದಪ್ಪದ ಹಿಮದ ರಗ್ಗಿನೊಳಗೆ ಮುಖ ಮುಚ್ಚಿಕೊಂಡಿದ್ದ ಗರಿಕೆ ಚಿಗುರಿ ಕಣ್ಣು ಬಿಡತೊಡಗುವ ದಿನಗಳಿವು. ಯೂರೋಪಿನಲ್ಲಿ ಹೆಚ್ಚು ಕಾಣಸಿಗುವ ಹೆಸರಾಂತ ಟುಲಿಪ್ ಹೂಗಳ ತೋಟವೊಂದು ಶ್ರೀನಗರದಲ್ಲಿ ದಾಲ್ ಸರೋವರಕ್ಕೆ ಲಗತ್ತಾಗಿದೆ. ಈಗ ಅಲ್ಲಿ ಟುಲಿಪ್ ಹೂಗಳು ಅರಳತೊಡಗಿವೆ. ಈ ಟುಲಿಪ್ ಹೂಗಳ ಜೊತೆಗೇ ಕಾಶ್ಮೀರದ ಪ್ರವಾಸೋದ್ಯಮವೂ ಅರಳತೊಡಗುತ್ತದೆ. ವರ್ಷಕ್ಕೆ ಸುಮಾರು ಎರಡು ಕೋಟಿ ದೇಶ ವಿದೇಶಗಳ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ಕೊಡುತ್ತಾರೆ. 12 ಸಾವಿರ ಕೋಟಿಯಷ್ಟು ಹಣ ಈ ಪ್ರವಾಸಿಗರಿಂದಲೇ ಈ ಕಣಿವೆ ರಾಜ್ಯಕ್ಕೆ ಹರಿದು ಬರುತ್ತದೆ. ಜಮ್ಮು ಮತ್ತು ಕಾಶ್ಮೀರದ ಜಿಡಿಪಿಯಲ್ಲಿ ಇದೇನೂ ಹೇಳಿಕೊಳ್ಳುವಂತ ವರಮಾನವೇನೂ ಅಲ್ಲ ನಿಜ. ಆದರೆ ಆರು ತಿಂಗಳ ಕಾಲ ಕುದುರೆಯೂ ಅಲ್ಲದ ಕತ್ತೆಯೂ ಅಲ್ಲದ ಪೋನಿ ಎಂಬ ಬಡಕಲು ಪ್ರಾಣಿಗಳ ಬಾಲ ಹಿಡಿದು ಬದುಕುವ ಬಡ ಕಾಶ್ಮೀರಿಗಳ ಪಾಪಿ ಹೊಟ್ಟೆ ತುಂಬಿಸುತ್ತದೆ ಎನ್ನುವುದರಲ್ಲಿ ಅನುಮಾನವೇನೂ ಇಲ್ಲ. ಆದರೆ ಮಂಗಳವಾರ ಪೆಹಲ್‌ಗಾಮ್‌ನಲ್ಲಿ ನಡೆದ ನರಮೇಧವು ಎಲ್ಲೋ ಆಕಾಶದಲ್ಲಿವೆ ಎನ್ನಲಾಗುವ ಕಲ್ಪಿತ ಸ್ವರ್ಗ ನರಕಗಳನ್ನು ನಂಬುವ ನಮ್ಮ ದೇಶದ ಜನರಿಗೆ ಭೂಮಿಯ ಮೇಲಿರುವ ಸ್ವರ್ಗ ಸಮಾನವಾಗಿರುವ ಕಾಶ್ಮೀರಕ್ಕೆ ಇನ್ನು ಕನಿಷ್ಟ ಎರಡು ವರ್ಷಗಳಾದರೂ ಪ್ರವಾಸಿಗರು ಕಾಲಿಡದಂತೆ ಮಾಡಿಬಿಟ್ಟಿತು.
ಜನ ಚುನಾಯಿಸಿದ ಜನಪ್ರಿಯ ಸರ್ಕಾರವೊಂದು ಅಧಿಕಾರಕ್ಕೆ ಬಂದು ವರ್ಷ ತುಂಬುವ ಮೊದಲೇ ಇಂತದ್ದೊಂದು ದುರ್ಘಟನೆ ಸಂಭವಿಸಿಬಿಟ್ಟರೆ ಹೇಗೆ? ಆಧುನಿಕ ಮನುಷ್ಯ ಎಷ್ಟರ ಮಟ್ಟಿಗೆ ಪರಿಸರವನ್ನು ನಾಶ ಮಾಡಿದ್ದಾನೆ ಎಂದರೆ ಒಂದು ಕಾಲಕ್ಕೆ ನೈಸರ್ಗಿಕ ಎನ್ನುವಂತಿದ್ದ ಭೂಕಂಪ, ಪ್ರವಾಹಗಳೂ ಈಗ ಮಾನವ ಪ್ರೇರಿತವಾಗಿಬಿಟ್ಟಿವೆ. ಇನ್ನುಮನುಷ್ಯರೇ ಮನುಷ್ಯರನ್ನು ಭೇಟಿಯಾಡಿ ಕೊಲ್ಲುವ ಭಯೋತ್ಪಾದಕ ಕೃತ್ಯ ಅದು ಹೇಗೆ ತಂತಾನೇ ಸಂಭವಿಸಲು ಸಾಧ್ಯ.
1980ರಿಂದಲೂ ಕಾಶ್ಮೀರ ಕಣಿವೆಯಲ್ಲಿ ಗುಂಡಿನ ಸದ್ದು ಮೊರೆಯುತ್ತಲೇ ಇದೆ, ಜಮ್ಮು ಮತ್ತು ಕಾಶ್ಮೀರದ ಪ್ರಜೆಗಳು, ಪೊಲೀಸರು, ಸೇನೆಯ ಯೋಧರು, ಪತ್ರಕರ್ತರು, ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ. ಅನಗತ್ಯ, ಅನವಶ್ಯಕ ಎನಿಸುವ ಈ ಭಯೋತ್ಪಾದಕ ಕೃತ್ಯವನ್ನು ಎಲ್ಲರೂ ಖಂಡಿಸಬೇಕು, ಖಂಡಿಸುತ್ತಾರೆ. ಒಂದು ವರ್ಷ ಕಡಿಮೆ ಆಗಬಹುದು ಮತ್ತೊಂದು ವರ್ಷ ಹೆಚ್ಚಿಗೆ ಇರಬಹುದು. ಅದರೆ ಈ ಅಮಾನುಷ ಕೊಲೆಗಳು ನಡೆಯುತ್ತಲೇ ಇವೆ. ಜೊತೆಗೆ ಈ ಭಯೋತ್ಪಾದಕರನ್ನು, ಬಾಡಿಗೆ ಹಂತಕರನ್ನು, ಗಡಿಯಿಂದ ತೂರಿ ಬರುವ ನುಸುಳುಕೋರರನ್ನು ನಿಯಂತ್ರಿಸುವ ಸಲುವಾಗಿ ನಡೆಯುವ ಕಾಳಗದಲ್ಲಿ ನೈಜ ಉಗ್ರರ ಜೊತೆಗೆ ಬಹಳಷ್ಟು ಕಾಶ್ಮೀರಿಗಳೂ ಹತರಾಗಿದ್ದಾರೆ. ಸಾವಿರಾರು ಯುವಕರು ನಾಪತ್ತೆಯಾಗಿದ್ದಾರೆ. ಹಾಗಾಗಿಯೇ ಸುಪ್ರೀಂ ಕೋರ್ಟು, 2023 ರ ಡಿಸೆಂಬರ್ 11ರಂದು ನೀಡಿದ ತೀರ್ಪಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ ಸಂವಿಧಾನದ ಆರ್ಟಿಕಲ್ -370 ರದ್ದು ಮಾಡಿದ ಭಾರತ ಸರ್ಕಾರದ ಕ್ರಮವನ್ನು ಎತ್ತಿ ಹಿಡಿಯುವ ಜೊತೆಗೆ ಜಮ್ಮು ಮತ್ತುಕಾಶ್ಮೀರಕ್ಕೆ ತನ್ನನ್ನು ತಾನು ಆಳಿಕೊಳ್ಳಲು ಅನುವಾಗುವಂತೆ ಶೀಘ್ರ ಸ್ವತಂತ್ರ್ಯ ರಾಜ್ಯದ ಸ್ಥಾನ ನೀಡುವಂತೆಯೂ ಹಾಗೂ 1980ರಿಂದಲೂ ಈ ರಾಜ್ಯದಲ್ಲಿ ಆಗಿರುವ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರಣೆಗೆ ನಿಷ್ಪಕ್ಷಪಾತ , ಸತ್ಯ ಮತ್ತು ಸೌಹಾರ್ದ ವಾತಾವರಣ ಸ್ಥಾಪಿಸಬಲ್ಲ ಆಯೋಗವೊಂದನ್ನು ರಚಿಸುವಂತೆ ಸೂಚಿಸಿತ್ತು. ಸುಪ್ರೀಂ ಕೋರ್ಟಿನ ಈ ಆದೇಶದ ಅನುಷ್ಟಾನ ಯಾವಾಗ ಎಂದು ಭಾರತ ಸರ್ಕಾರವೇ ಹೇಳಬೇಕಿದೆ.
ಲೆಕ್ಕಕ್ಕಿಲ್ಲದ ವಿಧಾನ ಸಭೆ
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಈಗ 95 ವಿಧಾನ ಸಭಾ ಸದಸ್ಯರಿದ್ದಾರೆ. ಇವರಲ್ಲಿ ಆಡಳಿತ ಹಿಡಿದಿರುವ ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಶಾಸಕರ ಸಂಖ್ಯೆ 42, ಇವರ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 05 ಸದಸ್ಯರನ್ನು, ಮುಫ್ತಿ ಮೊಹಮದ್ ಸಯೀದ್ ಅವರ ಜೆಕೆಪಿಡಿಪಿ 03 ಸದಸ್ಯರನ್ನು ಆಮ್ ಆದ್ಮಿ ಪಕ್ಷ ಮತ್ತು ಸಿಪಿಐ (ಎಂ) ತಲಾ ಒಬ್ಬ ಸದಸ್ಯರನ್ನು ಹೊಂದಿವೆ, 07 ಸದಸ್ಯರು ಪಕ್ಷೇತರರು ಹಾಗೂ ನಾಮ ನಿರ್ದೇಶಿತರು 05 ಮಂದಿ. ಇವರ ಜೊತೆಗೆ ವಿರೋಧ ಪಕ್ಷ ಬಿಜೆಪಿ 29 ಸದಸ್ಯ ಬಲ ಹೊಂದಿದೆ. ಜಮ್ಮು ಚಳಿಗಾಲದ ರಾಜಧಾನಿಯಾದರೆ, ಶ್ರೀನಗರ ಬೇಸಿಗೆಯ ರಾಜಧಾನಿ. ಕಾಶ್ಮೀರ ವಿಭಾಗದ ಬಹುಪಾಲು ಎಲ್ಲ ಕ್ಷೇತ್ರಗಳನ್ನು ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳು ಪ್ರತಿನಿಧಿಸಿವೆ. ಸ್ವಾತಂತ್ರ್ಯಾನಂತರದ ವರ್ಷಗಳಿಂದಲೂ ಭಾರತೀಯ ಜನಸಂಘ ಹಾಗೂ ಬಿಜೆಪಿಯ ನೆಲೆ ಏನಿದ್ದರೂ ಜಮ್ಮು ವಿಭಾಗದಲ್ಲಿ ಮಾತ್ರ. ಅಲ್ಲಿ ಹಿಂದೂ, ಮುಸ್ಲಿಮರು ಮಾತ್ರವಲ್ಲದೇ ಗುಜ್ಜರ್ ಹಾಗೂ ಬಕರ್‌ವಾಲ್‌ಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.