ಮಲ್ಟಿಪ್ಲೆಕ್ಸ್‌ ಅಗ್ರಿಕೇರ್‌ ಕೀಟನಾಶಕ ಕಾರ್ಖಾನೆಯಿಂದ ರಾಜಕಾಲುವೆಗೆ ವಿಷ  

ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್‌ - ಕ್ರಮದ ಎಚ್ಚರಿಕೆ

ಮಲ್ಟಿಪ್ಲೆಕ್ಸ್‌ ಅಗ್ರಿಕೇರ್‌ ಕೀಟನಾಶಕ ಕಾರ್ಖಾನೆಯಿಂದ ರಾಜಕಾಲುವೆಗೆ ವಿಷ  

  ವರದಿಯ ಪರಿಣಾಮ

      ತುಮಕೂರು: ನಗರಕ್ಕೆ ಸಮೀಪದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮೆ.ಮಲ್ಟಿಪ್ಲೆಕ್ಸ್‌ ಅಗ್ರಿಕೇರ್‌ ಲಿಮಿಟೆಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಎಂಬ ಕೀಟನಾಶಕ ತಯಾರಿಸುವ ಕಾರ್ಖಾನೆಯಿಂದ ಹೊರ ಬರುವ ವಿಷಕಾರಿ ನೀರು ಅಮಾನಿಕೆರೆ ತಲುಪುವ ರಾಜಕಾಲುವೆಗೆ ಸೇರುತ್ತಿದ್ದು ನೀರು ಕುಡಿದ ಕುರಿ ಸತ್ತಿದ್ದು ಕಾಲುವೆ ನೀರಿನಲ್ಲಿರುವ ಹಾವು ಮತ್ತು ಇನ್ನಿತರ ಜಲಚರಗಳು ದೂರಿನ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಮಾಲಿನ್ಯ ಮಂಡಳಿ ಅಧಿಕಾರಿಗಳು ಪರಿವೀಕ್ಷಣೆ ಬಳಿಕ ಮೇ.21ರ ಮಂಗಳವಾರ ಸದರಿ ಕಾರ್ಖಾನೆಯ ಆಡಳಿತ ಮಂಡಳಿಗೆ ನೋಟೀಸ್‌ ಜಾರಿ ಮಾಡಿದ್ದು , ನೋಟೀಸ್‌ ತಲುಪಿದ ಏಳು ದಿನಗಳ ಒಳಗಾಗಿ ಸೂಚಿಸಿದ ದಾಖಲೆ ಸಹಿತ ಸಮಜಾಯಿಷಿ ನೀಡುವಂತೆ ತಾಕೀತು ಮಾಡಲಾಗಿದೆ.

   

      ತುಮಕೂರು ನಗರದಿಂದ ಯಲ್ಲಾಪುರಕ್ಕೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಅಂತರಸನಹಳ್ಳಿ ಬಳಿ ಬಲಭಾಗದಲ್ಲಿರುವ ಸಣ್ಣಕೈಗಾರಿಕಾ ಅಭಿವೃದ್ಧಿ ನಿಗಮದ ಕೈಗಾರಿಕಾ ಪ್ರದೇಶದಲ್ಲಿ ಮೂರು ಘಟಕಗಳನ್ನು ಹೊಂದಿರುವ ಮೆ.ಮಲ್ಟಿಪ್ಲೆಕ್ಸ್‌ ಅಗ್ರಿಕೇರ್‌ ಲಿಮಿಟೆಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಹೆಸರಿನ ಕೀಟನಾಶಕ ತಯಾರಿಸುವ ಕಾರ್ಖಾನೆಯಿಂದಲೇ ಈ ವಿಷಕಾರಿ ನೀರು ಹೊರಬರುತ್ತಿದೆ ಎಂದು ಪತ್ರಿಕಾ ವರದಿಗಳು, ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ವರದಿಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮೇ.20ರ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದರು. ಅದರಂತೆ ಉಪ ಪರಿಸರ ಅಧಿಕಾರಿ ಪಲ್ಲವಿ ಅದೇ ದಿನ ಸ್ಥಳ ಪರಿವೀಕ್ಷಣೆ ನಡೆಸಿದ್ದರು.

   

        ಈ ಕುರಿತಂತೆ ಕರ್ನಾಟಕ ರಾಜ್ಯ ಮಾಲಿನ್‌ ನಿಯಂತ್ರಣ ಮಂಡಳಿಯ ತುಮಕೂರು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಶಿವಮೂರ್ತಿ ಅವರು ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆಯೊಂದಿಗೆ ಮಾತನಾಡಿ, ಮಲ್ಟಿಪ್ಲೆಕ್ಸ್‌ ಕೀಟ ನಾಶಕ ತಯಾರಿಕಾ ಕಾರ್ಖಾನೆಗೆ 3 ಪುಟಗಳ ನೋಟೀಸ್‌ ನೀಡಿದ್ದು  ಏಳು ದಿನಗಳಲ್ಲಿ ಸೂಚಿಸಿರುವ ದಾಖಲೆ ಸಹಿತ ಸಮಜಾಯಿಷಿ ನೀಡುವಂತೆ ಸೂಚಿಸಲಾಗಿದೆ ಹಾಗೂ ಅಲ್ಲಿ ಸಂಗ್ರಹಿಸಲಾಗಿರುವ ಕಲುಷಿತ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಿದ್ದು, ವರದಿ ನಿರೀಕ್ಷಿಸಲಾಗಿದೆ ಎಂದರು,

     ಕರ್ನಾಟಕ ಹ್ಯಾಂಡ್‌ ಟೂಲ್ಸ್‌ ಕಾಂಪ್ಲೆಕ್ಸ್‌ನಲ್ಲಿ ಸರ್ಕಾರಿ ಮುದ್ರಣಾಲಯದ ಶೆಡ್‌ಗಳ ಸಮೀಪ  ನಂ.10ರಲ್ಲಿ ಸ್ಥಾಪನೆಯಾಗಿರುವ ಮೆ.ಮಲ್ಟಿಪ್ಲೆಕ್ಸ್‌ ಅಗ್ರಿಕೇರ್‌ ಲಿಮಿಟೆಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಕೀಟನಾಶಕಗಳನ್ನು ತಯಾರಿಸುತ್ತಿದ್ದು, ಕೀಟನಾಶಕಗಳ ತಯಾರಿಕೆಯಲ್ಲಿ ಬಳಕೆಯಾಗುವ ವಿಷಕಾರಿ ಪದಾರ್ಥಗಳ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ ಹಾಗೂ ಅದಕ್ಕಾಗಿ ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳನ್ನು ಹಾಗೂ ಜಾಗರೂಕತಾ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂದು ಪರಿಸರ ನಿಯಂತ್ರಣ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.

   ಮೆ.ಮಲ್ಟಿಪ್ಲೆಕ್ಸ್‌ ಅಗ್ರಿಕೇರ್‌ ಲಿಮಿಟೆಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಆವರಣದಲ್ಲಿ ಕೀಟನಾಶಕ ತಯಾರಿಕೆಯಲ್ಲಿ ಬರುವ ವ್ಯರ್ಥ ಪದಾರ್ಥಗಳನ್ನು ಸೋಲಾರ್‌ ಎವಾಪೊರೇಶನ್‌ ಪಾಂಡ್‌ನಲ್ಲಿ ಟ್ರೀಟ್‌ ಮಾಡುವಂತೆ ಸೂಚಿಸಲಾಗಿದೆ, ಆದರೆ ಈ ಪಾಂಡ್‌ ಮಳೆನೀರಿನಿಂದ ತುಂಬಿ ಹೊರಳಿದಾಗಲೂ ವಿಷಕಾರಿ ನೀರು ಸಹಜ ಕಾಲುವೆ ಆ ಮೂಲಕ ರಾಜಕಾಲುವೆ ಸೇರುತ್ತಿದೆ.

    ಕಾರ್ಖಾನೆಯ ಹಿಂಭಾಗದ ಆವರಣದಿಂದ ರಾಜಕಾಲುವೆಗೆ ಹರಿಯಲು ಕಾರ್ಖಾನೆಯವರೇ ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಮಾಡಿಕೊಂಡಿದ್ದ ಕೊಳವೆ ಮಾರ್ಗವನ್ನು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಅಗೆಸಿ ತೆಗೆಸಿದ್ದು ಉಳಿದಿದ್ದ ಕಲುಷಿತ ವಿಷಕಾರಿ ನೀರನ್ನು ಬ್ಯಾರೆಲ್‌ಗಳಿಗೆ ತುಂಬಿಸಿದ್ದಾರೆ ಹಾಗೂ ಈ ವಿಷಕಾರಿ ನೀರನ್ನು ನೋಟೀಸ್‌ ನೀಡಿದ ಮೂರು ದಿನಗಳ ಒಳಗಾಗಿ ಅಧಿಕೃತ ಸಿಇಟಿಪಿ ( ಕಾಮನ್‌ ಎಫ್ಲುಯೆಂಟ್‌ ಟ್ರೀಟ್‌ಮೆಂಟ್‌ ಪ್ಲಾಂಟ್)‌ಯಲ್ಲಿ ವಿಲೇವಾರಿ ಮಾಡಿ ಮ್ಯಾನಿಫೆಸ್ಟ್‌ ಕಾಪಿಯನ್ನು ನಮೂನೆ -10ರಲ್ಲಿ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ತಾಕೀತು ಮಾಡಿದೆ.

     ಮಲ್ಟಿಪ್ಲೆಕ್ಸ್‌ ಅಗ್ರಿಕೇರ್‌ ಲಿಮಿಟೆಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಆವರಣದಲ್ಲೇ ಕಾರ್ಖಾನೆಯಲ್ಲಿ ಬೀಳುವ ಮಳೆ ನೀರು ಸಂಗ್ರಹಿಸಲು ಕೃಷಿಹೊಂಡದಂಥ ಒಂದು ತೆರೆದ ಕಟ್ಟೆಯನ್ನು ಸೃಜಿಸಲಾಗಿದೆಯಾದರೂ ಸದರಿ ಕಟ್ಟೆಯು ಕುಸಿದು ಹಾಳಾಗಿರುವುದು ಪರಿಸರ ಮಂಡಳಿಯ ಅಧಿಕಾರಿಯ ಸ್ಥಳ ಪರಿವೀಕ್ಷಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಹಾಗಾಗಿ ಕಾರ್ಖಾನೆಯವರು ಮಳೆ ನೀರನ್ನು ರಾಜಕಾಲುವೆಗೆ ಹರಿಸುತ್ತಿದ್ದು ಈ ನೀರಿನೊಂದಿಗೆ ಕಾರ್ಖಾನೆಯಲ್ಲಿ ಚೆಲ್ಲಾಡಿರಬಹುದಾದ ಕೀಟನಾಶಕಗಳನ್ನೂ ಈ ಕಾರ್ಖಾನೆ ಹಿಂಭಾಗದಲ್ಲಿರುವ ರಾಜಕಾಲುವೆಗೆ ಹರಿಸಿರುವುದರಿಂದ, ಆ ಮೂಲಕ ಜಲಚರಗಳ ಸಾವಿಗೆ ಕಾರಣವಾಗಿದೆಯಲ್ಲದೇ, ಅಂತಿಮವಾಗಿ ಈ ಕಲುಷಿತ ವಿಷಕಾರಿ ನೀರು ಅಮಾನಿಕೆರೆಗೆ ಸೇರುವುದರಿಂದ ಕೆರೆಯಲ್ಲಿರುವ ಜಲಚರಗಳ ಮೇಲೂ ನೆಗೆಟಿವ್‌ ಪರಿಣಾಮ ಬೀರುವುದನ್ನು ಅಲ್ಲಗೆಳೆಯುವಂತಿಲ್ಲ ಎಂದಿದೆ ಪರಿಸರ ನಿಯಂತ್ರಣ ಮಂಡಳಿ.

     ನೀವು ಮಳೆ ನೀರು ಸಂಗ್ರಹಿಸಲು ವೈಜ್ಞಾನಿಕ ವ್ಯವಸ್ಥೆ ಮಾಡಿಲ್ಲ, ಕಾರ್ಖಾನೆಯ ಚಾವಣಿ ಮೇಲಿನಿಂದ ಬೀಳುವ ಮಳೆ ನೀರೂ ಕೀಟನಾಶಕಗಳ ಅಂಶಗಳ ಜೊತೆಗೆ ತೆರೆದ ಕಾಲುವೆಯ ಮೂಲಕ ಮಳೆ ನೀರಿನೊಂದಿಗೆ ರಾಜಕಾಲುವೆ ಸೇರುತ್ತಿದೆ, ಆ ಮೂಲಕ ಕೀಟನಾಶಕಗಳನ್ನು ನಿಮ್ಮ ಕಾರ್ಖಾನೆಯಿಂದ ಹೊರಕ್ಕೆ ಬಿಡುತ್ತಿರುವುದು ಖಚಿತವಾಗಿದೆ ಎಂದು ನೋಟೀಸಿನಲ್ಲಿ ಮಾಲಿನ್ಯ  ನಿಯಂತ್ರಣ ಮಂಡಳಿ ಆಪಾದಿಸಿದೆ.

     ಹೀಗಾಗಿ ನೋಟೀಸ್‌ ತಲುಪಿದ 7 ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ ಅಗ್ರಿಕೇರ್‌ ಲಿಮಿಟೆಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ತನ್ನ 2022-23 ಹಾಗೂ 2023-24ರ ಅವಧಿಯ ಉತ್ಪಾದನಾ ಸ್ಟೇಟ್‌ಮೆಂಟ್‌, ಕಚ್ಚಾ ಪದಾರ್ಥ ಖರೀದಿ ಸ್ಟೇಟ್‌ ಮೇಂಟ್‌, ನೀರು ಖರೀದಿ ಸ್ಟೇಟ್‌ಮೆಂಟ್‌ , ಉತ್ಪತ್ತಿಯಾಗಿರುವ ಅಪಾಯಕಾರಿ ತ್ಯಾಜ್ಯದ ಪ್ರಮಾಣದ ಹಾಗೂ ವಿಲೇವಾರಿ ಸ್ಟೇಟ್‌ಮೆಂಟ್‌ ಮತ್ತು ಪರಿಸರ ಸ್ಟೇಟ್‌ಮೆಂಟ್‌ಗಳನ್ನು ಅಗತ್ಯ ಬಿಲ್‌ ಹಾಗೂ ದಾಖಲಾತಿಗಳ ಸಹಿತ ಸಲ್ಲಿಸಬೇಕಾಗಿದೆ. ಜೊತೆಗೆ ಸೋಲಾರ್‌ ಎವಾಪೊರೇಶನ್‌ ಪಾಂಡ್‌ ನಿಷ್ಕ್ರಿಯವಾಗಿರುವುದರಿಂದಾಗಿ ಸ್ಕಬ್ಬರ್‌ ಎಫ್ಲೂಯೆಂಟ್‌ ಟ್ರೀಟ್‌ಮೆಂಟ್‌ಗಾಗಿ ಇಟಿಪಿ ಕ್ರಿಯಾಯೋಜನೆ ಸಲ್ಲಿಸುವಂತೆ ನೋಟೀಸಿನಲ್ಲಿ ಸೂಚಿಸಲಾಗಿದೆ.  ಲಿಕ್ವಿಡ್‌ ಬ್ಲೆಂಡರ್‌ ಹಾಗೂ ಪೌಡರ್‌ ಬ್ಲೆಂಡಿಂಗ್‌ ಶಾಖೆ ಮತ್ತು ಡೀಸೆಲ್‌ ಜನರೇಟರ್‌ ಸೆಟ್‌ಗಳ ವಾಯು ಮಾಲಿನ್ಯ ವರದಿಗಳನ್ನೂ ಸಲ್ಲಿಸಬೇಕಾಗಿದೆ. ಅಲ್ಲದೇ ಮಳೆ ನೀರು ಕಟ್ಟೆಯಲ್ಲಿ ನಿಂತ ನೀರಿನ ಮಾದರಿಯ ಪರೀಕ್ಷಾ ವರದಿ ಮಾತ್ರವಲ್ಲದೇ ಮಳೆ ನೀರನ್ನು ಬಳಸಿಕೊಳ್ಳುವ ಕ್ರಿಯಾಯೋಜನೆಯನ್ನೂ ಸಲ್ಲಿಸಬೇಕಾಗಿದೆ.

   ಇಷ್ಟೆಲ್ಲ ಮಾಹಿತಿಯನ್ನು ಅಗತ್ಯ ದಾಖಲೆಗಳ ಸಹಿತ ನೋಟೀಸ್‌ ಸ್ವೀಕರಿಸಿದ ಏಳು ದಿನಗಳ ಒಳಗಾಗಿ ಅಂದರೆ ಅಂದಾಜು ಮೇ.29ರೊಳಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸದೇ ಹೋದಲ್ಲಿ , ನೈಸರ್ಗಿಕ ಜಲಮೂಲಗಳಿಗೆ ರಾಸಾಯನಿಕ ಬೆರೆತ ನೀರನ್ನು ಹರಿಸಿದ ಆಪಾದನೆ ಮೇರೆಗೆ 1974ರ ಜಲ ಮಾಲಿನ್ಯ ನಿಯಂತ್ರಣ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಮಲ್ಟಿಪ್ಲೆಕ್ಸ್‌ ಅಗ್ರಿಕೇರ್‌ ಲಿಮಿಟೆಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಎಚ್ಚರಿಕೆ ನೀಡಿದೆ.

 

ಮಾಲಿನ್ಯ ನಿಯಂತ್ರಣ ಮಂಡಳಿ ಕರ್ತವ್ಯ ನಿರ್ಲಕ್ಷ್ಯ

     ಮಲ್ಟಿಪ್ಲೆಕ್ಸ್‌ ಅಗ್ರಿಕೇರ್‌ ಲಿಮಿಟೆಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಮಾನವರು ಮತ್ತು ಇತರ ಜೀವಿಗಳ ಪ್ರಾಣಕ್ಕೆ ಅಪಾಯಕಾರಿಯಾಗಬಲ್ಲ ಕೀಟನಾಶಕಗಳನ್ನು ಉತ್ಪಾದಿಸುತ್ತಿದೆಯಾದರೂ ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಗಿ ನೀಡುವಾಗಲೇ ಸೂಚಿಸಿರುವಂತೆ ವ್ಯವಸ್ಥಿತವಾದ ಅಪಾಯಕಾರಿ ತ್ಯಾಜ್ಯ ನಿರ್ವಹಣಾ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಹೊಂದಿಲ್ಲ ಎಂಬುದು ಸ್ಥಳ ಪರಿವೀಕ್ಷಣೆಯಿಂದ ಬೆಳಕಿಗೆ ಬಂದಿದೆ ಎಂದು ನೋಟೀಸಿನಲ್ಲಿ ಮಂಡಳಿ ಹೇಳಿದೆ. ಕೀಟ ನಾಶಕ ತಯಾರಿಕೆಗೆ ಬಳಸುವ ಕಚ್ಚಾ ರಾಸಾಯನಿಕ ಪದಾರ್ಥಗಳ ಖಾಲಿ ಚೀಲಗಳನ್ನು ರಾಜಕಾಲುವೆಗೆ ಲಗತ್ತಾದ ಕಾರ್ಖಾನೆಯ ಹಿಂಭಾಗದ ಬಯಲಲ್ಲಿ ತಂದು ರಾಶಿ ಹಾಕಲಾಗಿದೆ. ಕೀಟನಾಶಕಗಳ ಖಾಲಿ ಸ್ಯಾಷೆಗಳು ಹಾಗೂ ಬಾಟಲಿಗಳನ್ನೂ ಕಾರ್ಖಾನೆಯ ಆವರಣದ ಹೊರಗಡೆಯ ಬಯಲಲ್ಲೂ ಚೆಲ್ಲಾಡಿರುವುದು ಕಂಡು ಬಂದಿತು ಎಂದು ನೋಟೀಸಿನಲ್ಲಿ ಮಂಡಳಿ ಆಕ್ಷೇಪಿಸಿದೆ.

     ಆದರೆ ಇಲ್ಲಿ ಗಮನಿಸಬೇಕಿರುವ ಮಹತ್ವದ ಸಂಗತಿ ಎಂದರೆ, ಇಂಥ ಒಂದು ಕಾರ್ಖಾನೆಗೆ ಪರವಾನಗಿ ನೀಡಿದ ಬಳಿಕ ಅಪಾಯಕಾರಿ ತ್ಯಾಜ್ಯಗಳ ನಿರ್ವಹಣಾ ವ್ಯವಸ್ಥೆಯನ್ನು ಈ ಕಾರ್ಖಾನೆ ಸ್ಥಾಪಿಸಿದೆಯೇ ಇಲ್ಲವೇ, ಅಂತದ್ದೊಂದು ಅಪಾಯಕಾರಿ ತ್ಯಾಜ್ಯವನ್ನು ನಿಯಮಾನುಸಾರ ಸಮರ್ಪಕವಾಗಿ ನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲಿಸುತ್ತಿಲ್ಲ, ಇದು ಅವರ ಕರ್ತವ್ಯ ನಿರ್ಲಕ್ಷ್ಯವಲ್ಲವೇ .