‘ತಿಪಟೂರು ತಾ. ನೀರಾವರಿಗೆ ರೂ.೧೮೦ ಕೋಟಿ’

‘ತಿಪಟೂರು ತಾ. ನೀರಾವರಿಗೆ ರೂ.೧೮೦ ಕೋಟಿ’


 ‘ತಿಪಟೂರು ತಾ. ನೀರಾವರಿಗೆ ರೂ.೧೮೦ ಕೋಟಿ’
 ಕೆರೆಗಳನ್ನು ಕೋಡಿ ಬೀಳಿಸಲಾಗುವುದಿಲ್ಲ: ಸಚಿವ  ಬಿ.ಸಿ.ನಾಗೇಶ್
ತಿಪಟೂರು : ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆಗಾಗಿ ರೂ.೧೮೦ ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಹೇಮಾವತಿಯ ೨೯೩ ಎಂಸಿಎಫ್‌ಟಿ ನೀರು ಹಾಗೂ ಎತ್ತಿನ ಹೊಳೆಯಿಂದ ಬರುವಂತಹ ನೀರನ್ನು ನೂರಕ್ಕೂ ಹೆಚ್ಚು ಕೆರೆಗಳಿಗೆ ಕೆರೆಯ ಶೇ.೬೦ ರಷ್ಟು ತುಂಬಿಸಲು ಪ್ರಯತ್ನಿಸಲಾಗುವುದು ಎಂದು ಘೋಷಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹಾಗೂ ಕ್ಷೇತ್ರದ ಶಾಸಕ ಬಿ.ಸಿ.ನಾಗೇಶ್ ಪೂರ್ತಿ ಕೆರೆಯನ್ನು ಭರ್ತಿ ಮಾಡಿ ಕೋಡಿ ಬೀಳಿಸುತ್ತೇವೆ ಎಂದು ಎಲ್ಲಿಯೂ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೇಮಾವತಿ, ಎತ್ತಿನಹೊಳೆ ಯೋಜನೆಗಳ ಮೂಲಕ ತಿಪಟೂರು ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆಯನ್ನು ರೂಪುಗೊಳಿಸಲು ೧೮೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಾರಂಭಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಶೀಘ್ರದಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ತಾಲ್ಲೂಕಿನ ಶಿವರ ಗ್ರಾಮದಲ್ಲಿ ಭಾನುವಾರ ಹೇಮಾವತಿ ನಾಲೆಯಿಂದ ಶಿವರ ಕೆರೆ, ಗೌಡನಕಟ್ಟೆ ಕೆರೆ, ಕರಿಕೆರೆ ಕೆರೆ ಮತ್ತು ಮಾದಿಹಳ್ಳಿ ಕೆರೆ, ಭೈರನಾಯಕನಹಳ್ಳಿ ಕೆರೆಗಳಿಗೆ ನೀರು ಹರಿಸುವ ಹಾಗೂ ಹೊಸದಾಗಿ ಪೈಪ್ ಲೈನ್, ಪಂಪ್ ಹೌಸ್ ಮೋಟಾರ್ ಅಳವಡಿಕೆಗೆ ೩೬.೫೦ ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಅತೀ ಹೆಚ್ಚಿನ ನೀರಿನ ಹಾಹಾಕಾರವಿದ್ದು ಮೊದಲ ಬಾರಿಗೆ ಚುನಾಯಿತ ಪ್ರತಿನಿಧಿಯಾದಾಗಿನಿಂದಲೂ ಹಲವಾರು ಯೋಜನೆಗಳನ್ನು ಮಾಡುತ್ತಾ ಬಂದಿದ್ದೇನೆ. 
ಸತತವಾಗಿ ೪-೫ ವರ್ಷಗಳ ಕಾಲ ಕೆರೆಗೆ ನೀರು ಬಂದು, ನಿಂತರೆ  ಮಾತ್ರವೇ ಅಂತರ್ಜಲ ವೃದ್ಧಿಯಾಗಲಿದೆ ಹೊನ್ನವಳ್ಳಿ ಏತ ನೀರಾವರಿಯ ಯೋಜನೆಯೇ ಉದಾಹರಣೆ ಎಂದರು. 
ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ ೨೦-೩೦ ವರ್ಷಗಳ ನಿರಂತರ ಹೋರಾಟದ ಫಲದಿಂದ ಇಂದು ಶಿವರ ಕೆರೆಗೆ ನೀರು ಬಂದಿದೆ. ಜಿಲ್ಲೆಗೆ ನೀರಾವರಿ ಯೋಜನೆಯಿಂದ ಹಿಡಿದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಬ್ಬರೂ ಸಚಿವರು ಜೋಡೆತ್ತುಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡೂ ತಾಲ್ಲೂಕುಗಳ ಹಲವು ಭಾಗಗಳಿಗೆ ನೀರಾವರಿ ಸೌಕರ್ಯ ದೊರೆತಿರುವುದು ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಕಾರ್ಯಗತವಾಗಲಿ ಎಂದು ಆಶಿಸಿದರು.
ಹಾಜರಿದ್ದ ಪ್ರಮುಖರು
ಎಪಿಎಂಸಿ ಅಧ್ಯಕ್ಷ ಎಚ್.ಬಿ.ದಿವಾಕರ್, ಮಾಜಿ ತಾ.ಪಂ.ಸದಸ್ಯ ಗುರುಸಿದ್ಧಯ್ಯ ಹೊಸೂರು, ಮಂಜು ಬೇಲೂರನಹಳ್ಳಿ, ಉಮಾಶಂಕರ್ ಗುರುಗದಹಳ್ಳಿ, ಶಶಿಧರ್ ಶಿಂಗೇನಹಳ್ಳಿ, ತೇಜು ಶಿವರ, ಮಂಜುನಾಥ್ ಲಿಂಗದಹಳ್ಳಿ, ಉಮೇಶ್ ಹೊಸೂರು, ಚಂದ್ರಯ್ಯ, ಸಿದ್ದರಾಮಣ್ಣ, ಷಡಕ್ಷರಿ ಬನ್ನಿಹಳ್ಳಿ, ಬಸವರಾಜು, ಷಣ್ಮುಖಯ್ಯ, ಷಣ್ಮುಖ ಗೌಡನಕಟ್ಟೆ, ದೇವರಾಜು ಚಿಕ್ಕಬಿದರೆ, ಸಿದ್ದಲಿಂಗಮೂರ್ತಿ ಮಾದಿಹಳ್ಳಿ, ಚಿಕ್ಕೇಗೌಡ ಶಿವರ