ಸಾಂವಿಧಾನಿಕ ಪ್ರಜ್ಞೆ –ಪ್ರಜಾತಂತ್ರದ ಮೌಲ್ಯ

ಚುನಾವಣೆಗಳಿಂದಾಚೆಗೆ ನೋಡುವ ವ್ಯವಧಾನ ಇಲ್ಲದೆ ಹೋದರೆ ಪ್ರಜಾತಂತ್ರ ಶಿಥಿಲವಾಗುತ್ತದೆ

ಸಾಂವಿಧಾನಿಕ ಪ್ರಜ್ಞೆ –ಪ್ರಜಾತಂತ್ರದ ಮೌಲ್ಯ


ನಾ ದಿವಾಕರ

    ಕೇಂದ್ರ ಎನ್‌ಡಿಎ ಸರ್ಕಾರದ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿರುವ ರಾಮದಾಸ್‌ ಅಠಾವಳೆ ಇತ್ತೀಚಿನ ಹೇಳಿಕೆಯೊಂದರಲ್ಲಿ, ಕೇರಳದ ಮುಖ್ಯಮಂತ್ರಿ ಸಿಪಿಎಂನ ಪಿನರಾಯಿ ವಿಜಯನ್‌ ಅವರಿಗೆ ಮುಕ್ತ ಆಹ್ವಾನ ನೀಡಿದ್ದು, ವಿಜಯನ್‌ ಅವರ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದರೆ, ಪ್ರಧಾನಿ ನರೇಂದ್ರ ಮೋದಿ ಕೇರಳದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ನೀಡುತ್ತಾರೆ, ಉತ್ತಮ ಪ್ಯಾಕೇಜ್‌ಗಳನ್ನು ನೀಡುತ್ತಾರೆ  ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಲಿದೆ ಎಂದು ಹೇಳಿದ್ದಾರೆ. ಇದೇ ಧ್ವನಿಯಲ್ಲಿ ರಾಮದಾಸ್‌ ಅವರು ಸಿಪಿಎಂ ಮತ್ತು ಸಿಪಿಐ ಪಕ್ಷಗಳನ್ನೂ ಆಹ್ವಾನಿಸಿದ್ದಾರೆ. ಸಮಾಜವಾದಿ ನಾಯಕರು ಕೈಜೋಡಿಸಿರಬೇಕಾದರೆ ಕಮ್ಯುನಿಸ್ಟರು ಏಕಾಗಬಾರದು ಎಂಬ ಅವರ ಪ್ರಶ್ನೆಯ ಔಚಿತ್ಯವನ್ನು ಬದಿಗಿಟ್ಟು ನೋಡಿದಾಗ, ಡಾ. ಬಿ. ಆರ್.‌ ಅಂಬೇಡ್ಕರ್‌ ಸ್ಥಾಪಿಸಿದ ರಿಪಬ್ಲಿಕನ್‌ ಪಕ್ಷದ ಏಕೈಕ ವಕ್ತಾರರ ಈ ಹೇಳಿಕೆ, ಕುಸಿಯುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣುತ್ತದೆ. 

     ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಘೋಷಣೆ ಒಂದು ಆಮಿಷವಾಗಿ ಪರಿಣಮಿಸುತ್ತಿರುವುದನ್ನು ಅಠಾವಳೆ ಅವರ ಹೇಳಿಕೆ ದೃಢೀಕರಿಸುತ್ತದೆ. ಒಂದೇ ಎಂಜಿನ್‌ ಅಪೇಕ್ಷಿಸುವ ರಾಜ್ಯಗಳಲ್ಲಿ ಮತದಾರರು ಪ್ರಜಾಸತ್ತಾತ್ಮಕ ಚುನಾವಣೆಗಳ ಮೂಲಕ ಆಯ್ಕೆ ಮಾಡುವ ಸರ್ಕಾರಗಳನ್ನು ಪಲ್ಲಟಗೊಳಿಸಲು, ಅಸ್ಥಿರಗೊಳಿಸಲು ಅಥವಾ ಪದಚ್ಯುತಗೊಳಿಸಲು ಕೇಂದ್ರ ನರೇಂದ್ರ ಮೋದಿ ಸರ್ಕಾರ ಸಾಂವಿಧಾನಿಕ ಮಾರ್ಗದಲ್ಲಿ ರಾಜ್ಯಪಾಲರ ಕಚೇರಿಗಳನ್ನೇ ಬಳಸುತ್ತಿದ್ದರೆ, ಸಾಂಸ್ಥಿಕ ಹಾದಿಯಲ್ಲಿ ಶಾಸನಬದ್ಧ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಈಡಿ), ಎನ್‌ಐಎ, ಚುನಾವಣಾ ಆಯೋಗಗಳನ್ನು ಬಳಸುತ್ತಿದೆ. ಈ ಎರಡೂ ಮಾದರಿಗಳು ಹೊಸ ಅವಿಷ್ಕಾರವೇನಲ್ಲ. ಸ್ವತಂತ್ರ ಭಾರತದ ಆಳ್ವಿಕೆಗಳು ವಿವಿಧ ಕಾಲಘಟ್ಟಗಳಲ್ಲಿ ಅನುಸರಿಸಿರುವ ವಾಮ ಮಾರ್ಗವೇ ಆಗಿದೆ.

     ಕೇಂದ್ರದಲ್ಲಿ ಅಧಿಕಾರ ನಡೆಸಿರುವ ಎಲ್ಲ ಪಕ್ಷಗಳು ಮತ್ತು ರಾಜಕೀಯ ನಾಯಕರು ತತ್ವ-ಸಿದ್ದಾಂತಗಳನ್ನೂ ದಾಟಿ ಈ ಪ್ರಕ್ರಿಯೆಯಲ್ಲಿ ಭಾಗಿದಾರರೂ (Stakeholders)̧  ಫಲಾನುಭವಿಗಳೂ (Beneficiaries)̧  ಆಗಿರುವುದು ವಾಸ್ತವ. ಹಾಗಾಗಿಯೇ ಕಳೆದ ಹತ್ತು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ನಡೆದಿರುವ ಅಸಾಂವಿಧಾನಿಕ ಬೆಳವಣಿಗೆಗಳಿಗೆ ವಿರೋಧ ವ್ಯಕ್ತವಾಗುತ್ತದೆಯೇ ಹೊರತು, ಈ ಅವ್ಯವಸ್ಥೆಯನ್ನು ಸರಿಪಡಿಸುವ ಅಥವಾ ಸುಧಾರಣೆಗೊಳಪಡಿಸುವ ರಾಜಕೀಯ ಕೂಗು ಕೇಳಿಬಂದಿಲ್ಲ. ಅಂಬೇಡ್ಕರ್‌ ಅವರ ವಾರಸುದಾರರು ಎಂದು ಬೆನ್ನು ತಟ್ಟಿಕೊಳ್ಳುವ ಅಠಾವಳೆ ಅವರಂತಹ ದಲಿತ ನಾಯಕರು ಈ ನಿಷ್ಕ್ರಿಯ ಮೌನ ಮತ್ತು ಸ್ವಾರ್ಥ ಹಿತಾಸಕ್ತಿಗೆ ಪ್ರತ್ಯಕ್ಷ ಸಾಕ್ಷಿಗಳಾಗಿ ಕಾಣುತ್ತಾರೆ.

                     ಸ್ವವಿಮರ್ಶೆಯ ಔದಾತ್ಯ ಮತ್ತು ಮನಸ್ಸಾಕ್ಷಿಯಂತೆ ನಡೆಯುವ ಉನ್ನತ ಮೌಲ್ಯಗಳನ್ನು ಎಂದೋ ಮರೆತಿರುವ ಭಾರತೀಯ ರಾಜಕಾರಣದ ದುರವಸ್ಥೆಯನ್ನು ಈ ದೃಷ್ಟಿಯಿಂದ ಗಮನಿಸಬೇಕಿದೆ.

ಒಕ್ಕೂಟ ವ್ಯವಸ್ಥೆಯ ಆತಂಕಗಳು

     ಒಕ್ಕೂಟ ವ್ಯವಸ್ಥೆಗೆ ಒದಗುತ್ತಿರುವ ದುರ್ಗತಿ ಮುಂದೊಂದು ದಿನ ಪ್ರಜಾಪ್ರಭುತ್ವದ ತಳಪಾಯವನ್ನೇ ಕೆಡವಿಹಾಕಬಹುದು ಎಂಬ ಆತಂಕ ಕೇವಲ ರಾಜಕೀಯ ವಿಶ್ಲೇಷಕರನ್ನಷ್ಟೇ ಕಾಡಬೇಕಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಅವಿರತ ಶ್ರಮಿಸುತ್ತಿರುವ, ಹೋರಾಡುತ್ತಿರುವ ಮತ್ತು ಈ ವ್ಯವಸ್ಥೆಯ ಫಲಾನುಭವಿಗಳಾಗಿರುವ ಸಮಸ್ತ ಜನತೆಯನ್ನೂ ಕಾಡಬೇಕು. ವಿಪರ್ಯಾಸ ಎಂದರೆ, ಈ ಕಾಳಜಿ ಕಳಕಳಿಯ ಹೊರತಾಗಿಯೂ, ಒಂದು ರಾಜ್ಯ ಸರ್ಕಾರದ ಮೇಲೆ ಅಥವಾ ಮುಖ್ಯಮಂತ್ರಿಯ ಮೇಲೆ ನಡೆಯುವ ಅಸಾಂವಿಧಾನಿಕ ಸಾಂಸ್ಥಿಕ ದಾಳಿ ಇತರ ರಾಜ್ಯಗಳಲ್ಲಿ ಯಾವ ಸಂಚಲನವನ್ನೂ ಸೃಷ್ಟಿಸುತ್ತಿಲ್ಲ. ಇತ್ತೀಚಿನ ನಿದರ್ಶನವಾಗಿ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಅವರ ಪ್ರಕರಣವನ್ನು ನೋಡಬಹುದು. ಚುನಾವಣಾ ಸಮೀಕ್ಷೆ ನಡೆಸುವ ಒಂದು ಸಂಸ್ಥೆ, ಆಡಳಿತಾರೂಢ ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ಕಾರಣಕ್ಕಾಗಿ ಈಡಿ ದಾಳಿಗೊಳಗಾಗುವುದು ಆತಂಕಕಾರಿ ವಿಚಾರ.

    ಇನ್ನೂ ಹೆಚ್ಚಿನ ಆತಂಕವಾಗುವುದು, ಈ ಪ್ರಕರಣದ ಬಗ್ಗೆ ಇತರ ಬಿಜೆಪಿಯೇತರ ಸರ್ಕಾರಗಳ ಮತ್ತು ರಾಜಕೀಯ ಪಕ್ಷಗಳ ಮೌನ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಸಂಕುಚಿತ-ತತ್ವಾಧಾರಿತ ಅಥವಾ ಅಧಿಕಾರ ಕೇಂದ್ರಿತ ಮನೋಭಾವ, ಒಕ್ಕೂಟ ವ್ಯವಸ್ಥೆಗೆ ಬೇಕಾದ ಐಕಮತ್ಯಕ್ಕೆ ಬಹುದೊಡ್ಡ ತೊಡಕಾಗಿರುವುದು ವಾಸ್ತವ. ಇದೇನೂ ಹೊಸ ವಿದ್ಯಮಾನವಲ್ಲ. ಆದರೆ ಸಮಯ ಸಂದರ್ಭಗಳನ್ನು ಗಮನಿಸಿದಾಗ 1970ರ ಭಾರತ ಈಗಿಲ್ಲ. 1950ರ ಭಾರತದ ಪಳೆಯುಳಿಕೆಯೂ ಸಹ ಕಾಣುವುದಿಲ್ಲ. 1980-90ರ ವಿಕೇಂದ್ರೀಕರಣದ ಮೌಲ್ಯಗಳನ್ನು ಹಂತಹಂತವಾಗಿ ಕೊಲ್ಲುತ್ತಾ, ಹೆಚ್ಚು ಕೇಂದ್ರೀಕರಣದತ್ತ ವಾಲುತ್ತಿರುವ ಭಾರತದ ರಾಜಕೀಯ ವ್ಯವಸ್ಥೆ, ಒಕ್ಕೂಟ ಸಂಸ್ಕೃತಿಯನ್ನೇ ನಾಶಪಡಿಸುವ ದಿಕ್ಕಿನಲ್ಲಿ ಸಾಗುತ್ತಿರುವುದು ವಾಸ್ತವ. 

    ಒಂದೆಡೆ ಮಮತಾ ಬ್ಯಾನರ್ಜಿ ಅವರ ಆಳ್ವಿಕೆಯನ್ನು ಅಸ್ಥಿರಗೊಳಿಸುವ  ಪ್ರಕ್ರಿಯೆ ಜಾರಿಯಲ್ಲಿದ್ದರೆ ಮತ್ತೊಂದೆಡೆ ದಕ್ಷಿಣ ರಾಜ್ಯಗಳಾದ ಕೇರಳ, ಕರ್ನಾಟಕ ಮತ್ತು ತಮಿಳುನಾಡು ವಿಧಾನಸಭೆಗಳಲ್ಲಿ ರಾಜ್ಯಪಾಲರ ವರ್ತನೆ, ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸುವ ಮೂಲಕ ಸರ್ಕಾರಗಳನ್ನು ವಿಚಲಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಚುನಾಯಿತ ವಿಧಾನಸಭೆಗಳಲ್ಲಿ ಅಧಿವೇಶನಗಳ ಆರಂಭದಲ್ಲಿ ರಾಜ್ಯಪಾಲರು ಮಾಡಬೇಕಾದ ಸಾಂಪ್ರದಾಯಿಕ ಭಾಷಣಗಳು ಈಗ ವಿವಾದದ ಕೇಂದ್ರಗಳಾಗಿ ಪರಿಣಮಿಸಿರುವುದು ಪ್ರಜಾಪ್ರಭುತ್ವದ ಬೇರುಗಳನ್ನೇ ಅಲುಗಾಡಿಸುವ ವಿದ್ಯಮಾನ. ಸರ್ಕಾರಗಳು ಸಿದ್ಧಪಡಿಸಿದ ಭಾಷಣಗಳನ್ನು ಜಂಟಿ ಅಧಿವೇಶನದಲ್ಲಿ ಓದುವ ಒಂದು ಪರಂಪರೆಯನ್ನು ಅಲಕ್ಷಿಸಲಾಗುತ್ತಿದ್ದು, ಮೂರೂ ರಾಜ್ಯಗಳ ರಾಜ್ಯಪಾಲರು ತಮ್ಮದೇ ಆದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. 

ಸಂವಿಧಾನ ಮತ್ತು ರಾಜ್ಯಪಾಲ ಹುದ್ದೆ


 
    ಗುರುವಾರ ಆರಂಭವಾದ ಕರ್ನಾಟಕದ ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಪೂರ್ಣ ಭಾಷಣವನ್ನು ಓದದೆ ತಮ್ಮ ಇಚ್ಛಾನುಸಾರ ಕೆಲವೇ ಸಾಲುಗಳನ್ನು ಮಂಡಿಸಿ ನಿರ್ಗಮಿಸಿದ್ದಾರೆ. ಕೇಂದ್ರ ಸರ್ಕಾರದ ಜಿ ರಾಮ್‌ ಜಿ ಕಾಯ್ದೆಯ ವಿರುದ್ಧ ರಾಜ್ಯ ಸರ್ಕಾರ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಭಾಷಣದ ಒಂದು ಭಾಗವಾಗಿದ್ದುದು ಈ ವರ್ತನೆಗೆ ಕಾರಣ ಎನ್ನಲಾಗಿದೆ. ಇಲ್ಲಿ ರಾಜ್ಯಪಾಲರ ಸ್ವಾಯತ್ತತೆಯನ್ನು ಗೌರವಿಸುತ್ತಲೇ ನೋಡುವುದಾದರೆ, ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸುವ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕನ್ನು, ರಾಜ್ಯಪಾಲರು ಗೌರವಿಸಬೇಕಾದ ಪ್ರಶ್ನೆ ಮುನ್ನಲೆಗೆ ಬರುತ್ತದೆ. ರಾಜ್ಯಪಾಲರನ್ನು ನೇಮಿಸುವುದು ಕೇಂದ್ರ ಸರ್ಕಾರವೇ ಆದರೂ, ಆ ಕಚೇರಿಯ ನಿಷ್ಠೆ ಸಂವಿಧಾನಕ್ಕೆ ಮಾತ್ರ ಇರುತ್ತದೆಯೇ ಹೊರತು, ಪಕ್ಷಾಧಾರಿತ ಸರ್ಕಾರಗಳಿಗೆ ಅಲ್ಲ. ಬಹುಶಃ ಕರ್ನಾಟಕದ ರಾಜ್ಯಪಾಲರು ಈ ಅಂಶವನ್ನು ಕಡೆಗಣಿಸಿ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಮರೆತಂತೆ ಕಾಣುತ್ತದೆ.

     ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲ ರವಿ, ಕಳೆದ ವಾರ ನಡೆದ ಅಧಿವೇಶನದಲ್ಲಿ ಆರಂಭದಲ್ಲಿ ನಾಡಗೀತೆಯನ್ನು ಹಾಡುವ ಅಲ್ಲಿನ ಸಂಪ್ರದಾಯವನ್ನು ತಿರಸ್ಕರಿಸಿ , ತಮ್ಮ ಭಾಷಣವನ್ನು ಓದದೆಯೇ ನಿರ್ಗಮಿಸಿದ್ದಾರೆ. ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಸರ್ಕಾರದ ಸಿದ್ಧ ಭಾಷಣದಲ್ಲಿ ತಮ್ಮದೇ ಆದ ಕೆಲವು ಅಭಿಪ್ರಾಯಗಳನ್ನು ಸೇರಿಸುವ ಮೂಲಕ, ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ.  ಈ ಅಹಿತಕರ ಬೆಳವಣಿಗೆಗಳ ಹೊರತಾಗಿ, ರಾಜ್ಯಪಾಲರು ರಾಜ್ಯ ಸರ್ಕಾರಗಳ ಮಸೂದೆಗಳನ್ನು ಅನಿರ್ದಿಷ್ಟ ಕಾಲ ತಡೆಹಿಡಿಯುವುದು, ವಿನಾಕಾರಣ ತಿರಸ್ಕರಿಸುವುದು, ಕುಲಪತಿಗಳ ನೇಮಕದಲ್ಲಿ ವಿವಾದ ಸೃಷ್ಟಿಸುವುದು ಹೆಚ್ಚಾಗುತ್ತಿದ್ದು , ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಬಂಧಗಳಿಗೇ ಸಂಚಕಾರ ತರುತ್ತಿದೆ. 

     ಭಾರತದ ಸಂವಿಧಾನವು ರಾಜ್ಯಪಾಲರ ಕರ್ತವ್ಯಗಳನ್ನು ಸ್ಪಷ್ಟವಾಗಿ ನಿರ್ವಚಿಸಿದ್ದು, ರಾಜ್ಯ ವಿಧಾನಸಭೆಗಳಲ್ಲಿ ಸರ್ಕಾರದ ಸಿದ್ಧ ಭಾಷಣಗಳನ್ನು ಓದುವುದರಲ್ಲಿ ಯಾವುದೇ ಆಯ್ಕೆಯನ್ನು ನೀಡಿಲ್ಲ. ಬಹುತೇಕ ಸಂವಿಧಾನ ತಜ್ಞರ ಅಭಿಪ್ರಾಯದಲ್ಲಿ ರಾಜ್ಯಪಾಲರು ಸಿದ್ಧಪಡಿಸಿದ ಭಾಷಣವನ್ನು ಯಥಾವತ್ತಾಗಿ ಓದುವುದು ಅವರ ಸಾಂವಿಧಾನಿಕ ಕರ್ತವ್ಯ. ಈ ಭಾಷಣ ಸರ್ಕಾರದ ಆಡಳಿತ ನೀತಿಗಳನ್ನು ಸದನದ ಮುಂದಿಡುವ ದಸ್ತಾವೇಜುಗಳಾಗಿದ್ದು, ಜನಪ್ರತಿನಿಧಿಗಳಿಗೆ ಇದನ್ನು ತಿಳಿದುಕೊಳ್ಳುವ ಹಕ್ಕು ಸಹ ಇರುತ್ತದೆ. ಭಾಷಣ ಓದಲು ನಿರಾಕರಿಸುವುದು ಈ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಹಾಗೆಯೇ ಕೇಂದ್ರ ಸರ್ಕಾರದ ಆಡಳಿತ-ಹಣಕಾಸು ನೀತಿ-ಯೋಜನೆಗಳನ್ನು ಖಂಡಿಸುವ ಸಾಂವಿಧಾನಿಕ ಹಕ್ಕು ರಾಜ್ಯ ಸರ್ಕಾರಗಳಿಗೆ ಇರುತ್ತದೆ. ಇದನ್ನು ಕಸಿದುಕೊಳ್ಳಲಾಗುವುದಿಲ್ಲ. ಈ ಭಾಷಣವನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ಅಗತ್ಯತೆ ರಾಜ್ಯಪಾಲರಿಗೆ ಇರುವುದಿಲ್ಲ. 

    ಇವೆಲ್ಲವೂ ಲಿಖಿತ ಅಥವಾ ಗ್ರಾಂಥಿಕ ಮೌಲ್ಯಗಳಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಾಗವಾಗಿ ಮುನ್ನಡೆಸುವ ಸಲುವಾಗಿ ರೂಪಿಸಲಾಗಿರುವ ಶಿಷ್ಟಾಚಾರಗಳು. ರಾಜ್ಯ ಸರ್ಕಾರಗಳೂ ಸಹ ರಾಜ್ಯಪಾಲರ ಹುದ್ದೆ ನೀಡಬೇಕಾದ ಗೌರವ ಮತ್ತು ಸಮ್ಮಾನಗಳನ್ನು ಕಡೆಗಣಿಸುವುದು ಅಸಾಂವಿಧಾನಿಕವಾಗುತ್ತದೆ. ಆಲಂಕಾರಿಕ ಎಂದು ಬಣ್ಣಿಸಲಾದರೂ, ಸಾಂವಿಧಾನಿಕವಾಗಿ ನೇಮಿಸಲ್ಪಡುವ ರಾಜ್ಯಪಾಲರ ಹುದ್ದೆಯ ಗೌರವವನ್ನು ರಾಜ್ಯ ಸರ್ಕಾರಗಳು ಮನಗಂಡು , ಪಕ್ಷಾತೀತ ದೃಷ್ಟಿಯಿಂದ ನೋಡಿ ಸಮ್ಮಾನಿಸಬೇಕಾಗುತ್ತದೆ. ಕರ್ನಾಟಕದ ಅಧಿವೇಶನದಲ್ಲಿ ಕೆಲವು ಕಾಂಗ್ರೆಸ್‌ ಶಾಸಕರು ರಾಜ್ಯಪಾಲರಿಗೆ ಅಡ್ಡಿಪಡಿಸಿರುವುದು, ಆ ಹುದ್ದೆಗೆ ಅಗೌರವ ತೊರಿದಂತಾಗುತ್ತದೆ. ಇದು ಸರ್ವಥಾ ಸಮರ್ಥನೀಯವಲ್ಲ. ತಾತ್ವಿಕ ಭಿನ್ನಮತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪರಿಹಾರವಾಗಬೇಕೇ ಹೊರತು, ಸ್ವೇಚ್ಚಾಚಾರದ ಮಾರ್ಗಗಳಿಂದ ಅಲ್ಲ. ಸಿದ್ದರಾಮಯ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಿದೆ.

ಕೇಂದ್ರೀಕರಣ ಮತ್ತು ಒಕ್ಕೂಟದ ಅಸ್ತಿತ್ವ

     ಒಕ್ಕೂಟ ವ್ಯವಸ್ಥೆ ಬಲವಾಗಬೇಕಾದರೆ ಅಧಿಕಾರ ಕೇಂದ್ರೀಕರಣದ ಸಂಸ್ಕೃತಿ ಕೊನೆಯಾಗಬೇಕು. ರಾಜ್ಯಪಾಲರ ಹುದ್ದೆಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕು. ಕೇಂದ್ರ ಸರ್ಕಾರದ ಹಂಗಿನಲ್ಲಿರುವುದಾಗಲೀ, ರಾಜ್ಯ ಸರ್ಕಾರಗಳ ಪರ ಇರುವುದಾಗಲೀ ಈ ಹುದ್ದೆಗೆ ಶೋಭಿಸುವುದಿಲ್ಲ. ಸರ್ಕಾರಗಳು ಸಿದ್ಧಪಡಿಸಿದ ಭಾಷಣಗಳನ್ನು ಓದುವ ಪರಂಪರೆಯನ್ನೂ ಮರುವಿಮರ್ಶೆ ಮಾಡುವ ಅವಶ್ಯಕತೆ ಎದುರಾಗಿದೆ.  ಆದರೆ ರಾಜ್ಯಪಾಲರಿಗೆ ನಿರಾಕರಣೆಯ ಹಕ್ಕು ಇದೆ ಎನ್ನುವುದಾದರೆ, ಆ ಹುದ್ದೆಯಲ್ಲಿರುವವರು ನಿಷ್ಪಕ್ಷಪಾತ ನೀತಿಯನ್ನು ಪಾಲಿಸುವಂತಿರಬೇಕು. ಸರ್ಕಾರಗಳ ತಾತ್ವಿಕ ತಳಹದಿ ಅಥವಾ ಸೈದ್ಧಾಂತಿಕ ಒಲವು, ರಾಜ್ಯಪಾಲರ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವಂತಿರಕೂಡದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಸಾಂವಿಧಾನಿಕ ದೃಷ್ಟಿಕೋನದಿಂದ ನೋಡುವ ಒಂದು ಹೊಸ ಪರಂಪರೆಯನ್ನು ಹುಟ್ಟುಹಾಕಬೇಕು.

     ರಾಜ್ಯಪಾಲರ ಕಚೇರಿಯನ್ನು ತಮ್ಮ ಪಕ್ಷದ ಮುಖ್ಯಕಚೇರಿಯ ಹಾಗೆ ಬಳಸಿಕೊಳ್ಳುವ, ರಾಜ್ಯಪಾಲರನ್ನು ಸೂತ್ರದ ಗೊಂಬೆಗಳಂತೆ ಬಳಸುವ ಒಂದು ವಿಕೃತ ಪರಂಪರೆಗೆ ಭಾರತದ ಅಧಿಕಾರ ರಾಜಕಾರಣ ಒಗ್ಗಿಹೋಗಿದೆ. ರಾಜಕೀಯವಾಗಿ ಇದು ಸಿದ್ಧಮಾದರಿಯಾಗಿಯೂ ಕಾಣುತ್ತದೆ. ಏಕೆಂದರೆ ಇದರ ವಿರುದ್ಧ ಯಾವ ಪಕ್ಷಗಳೂ ದನಿ ಎತ್ತುವುದಿಲ್ಲ, ಸುಧಾರಣೆಗಳ ಬಗ್ಗೆ ಸೊಲ್ಲೆತ್ತುವುದಿಲ್ಲ. ಸಾಂದರ್ಭಿಕವಾಗಿ ರಾಜ್ಯಪಾಲರುಗಳನ್ನು ವಿರೋಧಿಸುವುದನ್ನು, ಖಂಡಿಸುವುದನ್ನು ಮಾತ್ರ ಗುರುತಿಸಬಹುದು. ಕಾಂಗ್ರೆಸ್‌ ಪಕ್ಷ ತನ್ನ ಅಸ್ತಿತ್ವಕ್ಕಾಗಿ ನೆಟ್ಟ ಈ ಪರಂಪರೆಯ ಸಸಿ ಈಗ ಹೆಮ್ಮರವಾಗಿ ಬೆಳೆದಿದ್ದು, ಬಿಜೆಪಿ ಅದರ ಫಲಾನುಭವಿಯಾಗಿದೆ. ತಾನೇ ಹುಟ್ಟುಹಾಕಿದ ಆಳ್ವಿಕೆಯ ಕೆಟ್ಟ ಪರಂಪರೆಗಳನ್ನು ವಿರೋಧಿಸಲು ಕಾಂಗ್ರೆಸ್‌ ಪಕ್ಷದಲ್ಲಿ ಸ್ವ ವಿಮರ್ಶೆಯ ಪ್ರಜ್ಞೆ ಇರಬೇಕು. ಪಶ್ಚಾತ್ತಾಪದ ಪರಿವೆಯೂ ಬೇಕು. 

    ಭಾರತದ ಪ್ರಜಾತಂತ್ರ ದುರ್ಬಲವಾಗುತ್ತಿರುವುದು ಈ ಕೆಲವು ಸಾಂದರ್ಭಿಕ ಘಟನೆಗಳಿಂದಲ್ಲ. ಅಥವಾ ನಿರ್ದಿಷ್ಟ ಪಕ್ಷ, ನಾಯಕತ್ವ ಮತ್ತು ತತ್ವಗಳಿಂದಲೂ ಅಲ್ಲ. ಪ್ರಜಾಪ್ರಭುತ್ವದ ಅವನತಿಯ ಹಾದಿಯನ್ನು ಹೆದ್ದಾರಿಯನ್ನಾಗಿ ಪರಿವರ್ತಿಸಿ, ಅಡ್ಡಿ ಆತಂಕಗಳೆಲ್ಲವನ್ನೂ ನಿರ್ನಾಮ ಮಾಡುವ ರೀತಿಯಲ್ಲಿ ಹಿಂದುತ್ವ ರಾಜಕಾರಣ ಸಾಗುತ್ತಿರುವುದು ವಾಸ್ತವವಾದರೂ ಮತ್ತೊಂದು ಬದಿಯಲ್ಲಿ ಇದನ್ನು ವಿರೋಧಿಸಿ ತಡೆಗಟ್ಟಬೇಕಾದ ರಾಜಕೀಯ ಪರಿಸರದಲ್ಲಿ ಸಾಂವಿಧಾನಿಕ ಮೌಲ್ಯಗಳು ಶಿಥಿಲವಾಗುತ್ತಿರುವುದು ಬಹುಮುಖ್ಯ ಕಾರಣವಾಗಿ ತೋರುತ್ತದೆ.  ಸ್ವತಃ ಅಂಬೇಡ್ಕರ್‌ ಸಹ ನಿಮಿತ್ತ ಮಾತ್ರವಾಗಿ, ಬಳಕೆಯ ಸಾಧನವಾಗಿ, ಉತ್ಸವ ಮೂರ್ತಿಯಾಗಿ ನಮ್ಮ ನಡುವೆ ಇರುವುದನ್ನು ರಾಮದಾಸ್‌ ಅಠಾವಳೆ ಅವರ ಹೇಳಿಕೆ ಸೂಚಿಸುತ್ತದೆ. ಸಾಂವಿಧಾನಿಕ ಕ್ರಿಯೆಯನ್ನು ಮಾರುಕಟ್ಟೆ ಕ್ರಿಯೆಯಂತೆ ಪರಿಗಣಿಸುವ ಈ ಸಂಸ್ಕೃತಿ ಏಕೆ ಯಾರಿಂದಲೂ ಖಂಡನೆಗೊಳಗಾಗಿಲ್ಲ ?

ತಾತ್ವಿಕ ಜಿಜ್ಞಾಸೆಗಳ ನಡುವೆ

    ಈ ಪ್ರಶ್ನೆಯನ್ನು ದಲಿತ ಸಂಘಟನೆಗಳು, ಸಂವಿಧಾನವನ್ನು ಎದೆಗಪ್ಪಿಕೊಂಡು ಜಪಿಸುವ ರಾಜಕೀಯ ಪಕ್ಷ-ನಾಯಕರು, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡುತ್ತಿರುವ ಮನಸ್ಸುಗಳು ತಮಗೆ ತಾವೇ ಕೇಳಿಕೊಳ್ಳಬೇಕಿದೆ. ತಮ್ಮ ಪಕ್ಷಗಳೊಳಗೆ ಆಂತರಿಕ ಪ್ರಜಾಪ್ರಭುತ್ವ (Internal Democracy) ಮತ್ತು ಅಧಿಕಾರ ವಿಕೇಂದ್ರೀಕರಣ (Decentralisation of Power) ಈ ಎರಡೂ ನೀತಿಗಳನ್ನು ಅಳವಡಿಸಿಕೊಳ್ಳದ ರಾಜಕೀಯ ಪಕ್ಷಗಳು, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉತ್ಸವ ಮೂರ್ತಿಗಳನ್ನಾಗಿ ಮಾಡಿ, ಮೆರವಣಿಗೆ ಮಾಡುತ್ತಿರುವುದು ವರ್ತಮಾನದ ದುರಂತ ಅಲ್ಲವೇ ? ಈ ಪ್ರಶ್ನೆಗೆ ಎಡಪಕ್ಷಗಳನ್ನೂ ಒಳಗೊಂಡಂತೆ ಎಲ್ಲ ರಾಜಕೀಯ ಪಕ್ಷಗಳೂ ಉತ್ತರ ಕಂಡುಕೊಳ್ಳಬೇಕಿದೆ.


    ಒಕ್ಕೂಟ ವ್ಯವಸ್ಥೆ ಉಳಿಯಬೇಕಾದರೆ ಕೇಂದ್ರ ಸರ್ಕಾರದ ವಿರುದ್ದ ಆರೋಪಗಳನ್ನು ಮಾಡುವುದಷ್ಟೇ ಸಾಲುವುದಿಲ್ಲ. ತಳಮಟ್ಟದಿಂದಲೇ ರಾಚನಿಕ ಸುಧಾರಣೆಗಳನ್ನು ಅಳವಡಿಸುವ ಮೂಲಕ, ಕಾರ್ಯಕರ್ತರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಬಿತ್ತುವುದು ಮುಖ್ಯವಾಗುತ್ತದೆ. ಭ್ರಷ್ಟರನ್ನು ಅತಿ ಭ್ರಷ್ಟರನ್ನಾಗಿಸುವ ವ್ಯವಸ್ಥೆಯಲ್ಲಿ, ಕಡು ಭ್ರಷ್ಟರನ್ನು ಬಾಹ್ಯರೂಪದಲ್ಲಿ ಶುದ್ಧೀಕರಿಸುವ ತಂತ್ರಗಳನ್ನೂ ಅಳವಡಿಸಿಕೊಂಡಿರುವ ಭಾರತೀಯ ಪ್ರಜಾಪ್ರಭುತ್ವ ಅಂತಿಮವಾಗಿ ಉಳ್ಳವರ ಪರವಾಗಿ ನಿಲ್ಲುವ ಒಂದು ಆಡಳಿತ ಸಂಸ್ಕೃತಿಯನ್ನು ನಿರ್ಮಿಸುತ್ತದೆ.  ಯಾವುದೇ ಸಂವಿಧಾನ-ಪ್ರಜಾತಂತ್ರ ವಿರೋಧಿ ನಡವಳಿಕೆಗಳು ಮೊದಲು ನಿಯಮಗಳಾಗಿ ರೂಪುಗೊಳ್ಳುತ್ತವೆ, ಇದನ್ನು ಆರಂಭದಲ್ಲೇ ಚಿವುಟಿಹಾಕದೆ ಹೋದರೆ, ಅದು ಕಾಲಾಂತರದಲ್ಲಿ ಸಂಸ್ಕೃತಿಯಾಗಿ ಪರ್ಯವಸಾನ ಹೊಂದುತ್ತದೆ. ಇದನ್ನು ಸಮಾಜ ಪರಂಪರೆ ಎಂದು ಗೌರವಿಸಲಾರಂಭಿಸುತ್ತದೆ.

     ಈ ಸಂದಿಗ್ಧತೆಯನ್ನು ವರ್ತಮಾನದ ಭಾರತ ಎದುರಿಸುತ್ತಿದೆ.  ಹಾಗಾಗಿಯೇ ದಾರ್ಶನಿಕರು ಹುಟ್ಟುಹಾಕಿದ ಎಲ್ಲ ಸೈದ್ಧಾಂತಿಕ ʼವಾದʼ ಗಳೂ ಸಹ ಸಮಯಸಾಧಕ ʼ ಪ್ರತಿವಾದಗ ʼಳ ದಾಳಿಗೆ ಸಿಲುಕಿ ಅರ್ಥಹೀನವಾಗುತ್ತಿವೆ. ಹಾಗಾಗಿಯೇ ಅಧಿಕಾರದಲ್ಲಿರುವಾಗ ಮತ್ತು ವಿರೋಧಪಕ್ಷವಾಗಿರುವಾಗ, ತಾತ್ವಿಕವಾಗಿ ಒಂದೇ ನೀತಿಯನ್ನು ಅನುಸರಿಸುವ ರಾಜಕೀಯ ಪಕ್ಷಗಳನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಈ ಅಡ್ಡಕತ್ತರಿಯಲ್ಲಿ ಸಿಲುಕಿರುವುದು ನಮ್ಮ ಸಂವಿಧಾನ ಮತ್ತು ಕನಸುಗಳನ್ನು ಕಟ್ಟಿದ ಅಂಬೇಡ್ಕರ್‌ ಮತ್ತಿತರ ದಾರ್ಶನಿಕರು. ಭಾರತೀಯ ಪ್ರಜಾಪ್ರಭುತ್ವ ಎಂಬ ರೈಲು ಹಳಿತಪ್ಪದೆ ಉದ್ದೇಶಿತ ಗುರಿ ತಲುಪಲು ಎಂಜಿನುಗಳ ಸಂಖ್ಯೆ ಹೆಚ್ಚಾಗಿರಬೇಕೋ ಅಥವಾ ಅದರ ಚಲನೆಗೆ ಅಗತ್ಯವಾದ ಇಂಧನ ಕಲುಷಿತವಾಗದೆ ಮಾಲಿನ್ಯರಹಿವಾಗಿರಬೇಕೋ ಎನ್ನುವುದು ತಾರ್ಕಿಕ ಪ್ರಶ್ನೆ. 


 
    ಈ ಪ್ರಶ್ನೆಗೆ ಉತ್ತರ ಪಡೆಯಲು ಜನರ ಕಡೆಗೇ ನೋಡಬೇಕಲ್ಲವೇ ? ನೆಲ ನೋಡುತ್ತಾ ನಡೆಯುವವರಿಗೆ ಮಾತ್ರ ಜನ ಕಾಣಲು ಸಾಧ್ಯ.


-೦-೦-೦-೦-೦-