ಬಿತ್ತಲು ಬೀಜಗಳಿವೆ , ಹಸನಾದ ನೆಲವೆಲ್ಲಿದೆ..? ಡಾ.ರವಿಕುಮಾರ್‌ ನೀಹ ರವಿಕುಮಾರ್‌ ನೀಹ

ಸಾವು ಮನುಷ್ಯನ ದೇಹವನ್ನು ನಮ್ಮಿಂದ ಮರೆ ಮಾಡುತ್ತದೆಯಾದರೂ ಅವರ ಚೈತನ್ಯ ನಮ್ಮೊಳಗೆ ಪ್ರವಹಿಸುತ್ತಲೇ ಇರುತ್ತದೆ, ಯಾರ ಚೈತನ್ಯವನ್ನು ನಾವು ಹೆಚ್ಚು ಒಳಗೊಳ್ಳುತ್ತ ಹೋಗುತ್ತೇವೋ ಅವರ ವಿಚಾರವನ್ನು ನಾವು ಪಸರಿಸುತ್ತ ಹೋಗುತ್ತೇವೆ, ಅನಾರೋಗ್ಯವೇ ಕಾರಣವಾಗಿ ಏಳೆಂಟು ರ‍್ಷ ಮಲಗಿದಲ್ಲೇ ಮಲಗಿದ್ದು ಮೊನ್ನೆ ನಿರ್ಗಮಿಸಿದ ದಲಿತ ಹೋರಾಟಗಾರ ಬಂದಕುಂಟೆ ನಾಗರಾಜಯ್ಯನವರ “ಬಿತ್ತನೆ ಬೀಜ” ಅನುಭವ ಕಥನ ಕುರಿತು ಕತೆಗಾರ, ವಿಮರ್ಶಕ ಡಾ.ರವಿಕುಮಾರ ನೀಹ ಅವರ ಬರಹ ಇಲ್ಲಿದೆ, ಓದಿ 

 ಬಿತ್ತಲು ಬೀಜಗಳಿವೆ , ಹಸನಾದ ನೆಲವೆಲ್ಲಿದೆ..?                                                                                                                                                        ಡಾ.ರವಿಕುಮಾರ್‌ ನೀಹ                                                                                                                                      ರವಿಕುಮಾರ್‌ ನೀಹ

 

ರವಿಕುಮಾರ್‌ ನೀಹ


     ವಿಭಿನ್ನ ಆಯಾಮದ ಅನುಭವ ಕಥನಗಳು ತುಮಕೂರಿನ ನೆಲದ ಕತೆಯನ್ನು ವಿಸ್ತರಿಸಿವೆ. ಸುಮಾರು ಹತ್ತಕ್ಕೂ ಮೀರಿ ದಲಿತ ಅನುಭವ ಕಥನಗಳು ತುಮಕೂರು ನೆಲದಲ್ಲಿ ಅನಾವರಣಗೊಂಡಿವೆ. ಮಣೆಗಾರದಿಂದ ಶುರುಮಾಡಿ ಮುತ್ತಿನಜೋಳ, ಹೊರಬೀಡು, ಕಿಚ್ಚಿಲ್ಲದ ಬೇಗೆ, ಬಿತ್ತನೆಬೀಜ, ಟ್ರಂಕ್‌ತಟ್ಟೆ, ಅಂಗುಲಿಮಾಲ, ರಸ್ತೆನಕ್ಷತ್ರ, ನಮ್ಮಹಟ್ಟಿಯವರೆಗೂ ದಲಿತಲೋಕ ಕಾಣುತ್ತಿದೆ. ದಲಿತರ ಸುಡುವಾಸ್ತವದ ಮುಂದೆ ವಸೂಲಿಗಿಳಿದಿರುವ ಸಂಘಟನೆಗಳು, ಸತ್ವ ಕಳೆದುಕೊಂಡಿರುವ ಚಳವಳಿಗಳು, ಮೀಸಲಾತಿಯ ಅಪವ್ಯಾಖ್ಯಾನಗಳು, ಮೀಸಲಾತಿಯನ್ನು ಅಪ್ರಸ್ತುತಗೊಳಿಸುವ ಹೊತ್ತಿನಲ್ಲಿ ತುಮಕೂರಿಗೆ ಮತ್ತೊಂದು ಭಿನ್ನ ದಲಿತಲೋಕ ದಿವಂಗತ ಬಂದಕುಂಟೆ ನಾಗರಾಜಯ್ಯನವರ ‘ಬಿತ್ತನೆಬೀಜ’ ಕೃತಿಯ ಮೂಲಕ ಕಾಣಿಸಿದೆ. ಬಂದಕುಂಟೆ ನಾಗರಾಜಯ್ಯನವರು ‘ಬಿತ್ತನೆ ಬೀಜ’ವಿಡಿದು ಅಕ್ಷರಭೂಮಿಗೆ ಪ್ರವೇಶಿಸಿದ್ದಾರೆ. 


    ಬಂದಕುಂಟೆ ನಾಗರಾಜಯ್ಯ ಅವರು ಮೂಲತಃ ದಲಿತ ಸಂರ‍್ಷ ಸಮಿತಿಯ ನಾಯಕರಾಗಿದ್ದರು, ವೃತ್ತಿಯಲ್ಲಿ ಶಿಕ್ಷಕರಾದರೂ ದಲಿತಪರ ಹೋರಾಟವೇ ಜೀವನದ ಮುಕ್ಕಾಲು ಭಾಗವನ್ನು ಆವರಿಸಿತ್ತು. ನಾಲ್ಕು ದಶಕಗಳ ಕಾಲ ತುಮಕೂರು ನೆಲದಲ್ಲಿ ದಲಿತ ಸಂರ‍್ಷ ಸಮಿತಿಯನ್ನು ಕ್ರಿಯಾಶೀಲವಾಗಿರಿಸಿದ್ದ ಬಂದಕುಂಟೆಯವರು ಶಿಕ್ಷಕವೃತ್ತಿಯಿಂದ ನಿವೃತ್ತಿಯಾದ ಮೇಲೆ 'ಬಿತ್ತನೆ ಬೀಜ' ಹೆಸರಿನಲ್ಲಿ ಹೋರಾಟದ ಕಥನವನ್ನು ನಮ್ಮ ಮುಂದಿಟ್ಟರು. 'ಬಿತ್ತನೆಬೀಜ' ಪ್ರಕಟವಾಗಿ ಸರಿಸುಮಾರು ಹತ್ತು ವರುಷಗಳಾಗುತ್ತಿವೆ. ತುಮಕೂರಿನ ಮತ್ತು ರಾಜ್ಯದ ದಸಂಸ ಚರಿತ್ರೆಯನ್ನು ಅಭ್ಯಸಿಸುವವರಿಗೆ ಈ 'ಬಿತ್ತನೆ ಬೀಜ' ಬಹುಮುಖ್ಯ ಆಕರ ಕೃತಿ. ಈ ಅನುಭವ ಕಥನ ಕೇವಲ ಬಂದಕುಂಟೆಯವರ ಅನುಭವಗಳಿಗೆ ಸೀಮಿತವಾಗದೆ ದಲಿತ ರ‍್ಚೆ , ದಸಂಸದ ಸಭೆ, ಶಿಬಿರದ ಚರಿತ್ರೆಗಳನ್ನು ಒಡಲಲ್ಲಿಟ್ಟುಕೊಂಡಿದೆ.


      ವ್ಯವಸಾಯ ಸಂಬಂಧಿಯಾಗಿ ಆರಂಭವಾಗುವ, ಹೋರಾಟದ ಕಿಚ್ಚನ್ನು ಮೈಗೂಡಿಸಿಕೊಂಡ ಈ ‘ಬಿತ್ತನೆ ಬೀಜ’ ಓದಿದಾಗ ಮರಾಠಿಯ ‘ಉಚಲ್ಯಾ’ ನೆನಪಿಗೆ ಬರುತ್ತದೆ. ಯಾಕೆಂದರೆ ಗಾಯಕ್ವಾಡರ ‘ಉಚಲ್ಯಾ’ದಲ್ಲಿ ಎರಡು ಭಾಗಗಳಿವೆ. ಒಂದು ತಾನು ಅನುಭವಿಸಿದ ಅವಮಾನ, ಸಂಕಟ. ಮತ್ತೊಂದು ಅದರಿಂದ ಬಿಡುಗಡೆ ಪಡೆಯಲು ಕಟ್ಟಿಕೊಂಡ ಹೋರಾಟ. ಈ ಬಿತ್ತನೆ ಬೀಜದಲ್ಲೂ ಆರಂಭದ ಭಾಗದಲ್ಲಿ ಅವಮಾನ ಸಂಕಟಗಳಿದ್ದರೆ ನಂತರದಲ್ಲಿ ವಿವಿದೆಡೆ ನಡೆಸಿದ ಹೋರಾಟದ ಚಿತ್ರಗಳಿವೆ. ಒಂದು ವ್ಯತ್ಯಾಸವೆಂದರೆ ಮುಂದೆ ಗಾಂiÀiಕ್ವಾಡರೇ ಆ ಸಮುದಾಯದ ಮೊದಲ ನೇತಾರರಾಗುತ್ತಾರೆ. ಇಲ್ಲಿ ಬೀಕೆಯವರು ‘ಬಿತ್ತಿದ ಬೀಜ’ವನ್ನು ಹೊತ್ತು ನಡೆದದಾರಿಯಲ್ಲಿ ಸಾಗುತ್ತಲೇ ತಾವು ಎದುರಿಸಿದ, ಎಡವಿದ, ಸಾಧಿಸಿದ ಎಲ್ಲ ಅಂಶಗಳನ್ನು ಎರಡು ಆಯಾಮದಲ್ಲಿ ಬಿಚ್ಚಿಡುತ್ತಾರೆ.


      * ಬಾಲ್ಯದ ಅನುಭವ
      * ಹೋರಾಟದ ಅನುಭವ
      ಬಾಲ್ಯದಲ್ಲಿ ತಮ್ಮನ್ನು ಪ್ರಭಾವಿಸಿದ ಘಟನೆ, ವ್ಯಕ್ತಿಗಳನ್ನು, ಪರಿಚಯಿಸುತ್ತಲೇ ವಿದ್ಯಾರ್ಥಿ ನಾಯಕನಾಗಿ ಬೆಳೆಯುವುದು ಒಂದು ಹಂತವಾದರೆ, ಮತ್ತೊಂದು ಹಂತದಲ್ಲಿ ಹೋರಾಟದ ವ್ಯಕ್ತಿತ್ವಗಳ ಪ್ರಭಾವಕ್ಕೊಳಗಾಗಿ ಸಂಘಟನೆ ಮಾಡಿ ಮುಂದುವರಿದು ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುವ ತುಡಿತವಿದೆ.


     ಬೀಕೆಯವರು ‘ಬಿತ್ತಿದ ಬೀಜ’ ಇಂದು ಫಲ ನೀಡುತ್ತಿದೆಯೇ ಎಂದರೆ ಒಂದು ಆತಂಕ ಎದುರಾಗುತ್ತದೆ. ಆ ಕಾಲದ ಬೀಜಗಳು ಇಂದು ಎಲ್ಲಿ ಯಾವ್ಯಾವ ಕುರ್ಚಿಗಳ ಅಡಿಯಲ್ಲಿ ಅಡಗಿವೆಯೋ. ಈಗಾಗಿ ಇಂದು ‘ಕದ್ದವರಾರಣ್ಣ ನಮ್ಮ ಬೀಜ’ಗಳ ಎಂದು ಕೇಳಿಕೊಳ್ಳಬೇಕಾಗಿದೆ. ಈ ರೂಪಕವನ್ನಿಟ್ಟುಕೊಂಡೇ ಸಾಕಷ್ಟು ವಿವರವನ್ನು ಈ ಕೃತಿ ನೀಡುತ್ತದೆ.


     ಇಂದಿನ ಸಂದರ್ಭದಲ್ಲಿ ಬೀಜದ ಅಗತ್ಯತೆ, ಜಾಗತೀಕರಣದ ಎದುರು ನಮ್ಮ ಮೂಲಬೀಜಗಳನ್ನು ಕಳೆದುಕೊಂಡು ಅದನ್ನು ಇಂದು ಮರುಹುಡುಕಿಕೊಳ್ಳುವ ಪ್ರಜ್ಞೆಯಾಗಿ ಈ ಕೃತಿ ಮೂಡಿದೆ. ಲಲಿತಸಿದ್ದಬಸವಯ್ಯನವರ ಒಂದು ಕವಿತೆಯೇ ‘ಹೊಸ ಬದುಕೆಂದರೆ ಹಳೆಯ ಬೀಜ’. ‘ಬೀಜ’ವೆಂದರೆ ಬದುಕೆ ಎಂದರ್ಥ. ಇದರ ಮೂಲಕ ಆರಂಭಿಕ ಆಯಾಮವನ್ನು ಹೋರಾಟದ ಕಿಚ್ಚನ್ನು, ಸಂಘಟನೆಯ ಮನೋಭಾವವನ್ನು ಪ್ರಕಟಿಸುವ ಪ್ರಬಲ ದ್ರವ್ಯವಾಗಿ ಈ ಬೀಜವನ್ನು ಬಳಸಲಾಗಿದೆ. ಈ ಬಿತ್ತನೆ ಬೀಜಗಳನ್ನು ಮರೆತು ಬೀಜವೇ ಇಲ್ಲದ ಕಾಲದಲ್ಲಿ ಬದುಕುತ್ತಿರುವ ಈ ಹೊತ್ತಿನಲ್ಲಿ ಬಿತ್ತನೆ ಬೀಜ ಈ ಎಲ್ಲ ಆಯಾಮಗಳನ್ನು ತನ್ನೊಡಲಲ್ಲಿಟ್ಟುಕೊಂಡೇ ಜೀವ ಪಡೆದಿದೆ.


      ಈ ಕೃತಿ ಪ್ರಕಟಗೊಳ್ಳಲು ಈ ಎಲ್ಲ ಆಂತರಿಕ ಒತ್ತಡಗಳು ಮುಖ್ಯವಾಗಿರುವುದರಿಂದ ಕಳೆದ ಕಾಲದ ನೆನಪುಗಳನ್ನು ಸಮಕಾಲೀನದ ಮುಂದಿರಿಸುವ, ಹೋರಾಟದ ದೀರ್ಘ ಪರಂಪರೆಯನ್ನು ಹೊಸತಲೆಮಾರಿಗೆ ವಿವರಿಸುವ, ದಸಂಸದ ಬಗೆಗೆ ಹೊಸತಲೆಮಾರಿನ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸುವ ಉಮೇದಿನಲ್ಲಿಯೇ ಇದು ಪ್ರಕಟಗೊಂಡಿದೆ. ಯಾಕೆಂದರೆ ಫೇಸ್‌ಬುಕ್ ತಲೆಮಾರಿಗೆ, ವಸೂಲಿ ಸಂಘಟಕರಿಗೆ ಚಳವಳಿಗಳ ಚಾರಿತ್ರಿಕ ಜ್ಞಾನವೇ ಇಲ್ಲ. ಅಂತ ಚಾರಿತ್ರಿಕ ಜ್ಞಾನವನ್ನು ಇಂದಿನ ವೇಗದ ಬದುಕಿಗೆ ಕಟ್ಟಿಕೊಡಬೇಕಾದರೆ ಒಂದಷ್ಟು ದಾಷ್ಟö್ರ್ಯ ಅಗತ್ಯವಿದೆ. ಅದಕ್ಕಾಗಿ ಈ ‘ಬಿತ್ತನೆ ಬೀಜ’ ಒಟ್ಟು ಬರಹದ ಶೈಲಿಯಲ್ಲಿ ತಾವು ಹೋರಾಡಿದ ಘಟನೆಗಳನ್ನು ವಿವರಿಸುವಾಗ ಅದೇ ತಾಜಾತನ ಮತ್ತು ಕಾವನ್ನು ಹಾಗೆ ಹಿಡಿದಿರಿಸಲಾಗಿದೆ.


      ತುಮಕೂರಿನ ನೆಲದಲ್ಲಿ ಇಲ್ಲಿಯವರೆಗೆ ಬಂದ ಅನುಭವ ಕಥನಗಳು ಕೇವಲ ದಲಿತ ನೋವು, ಅವಮಾನ ಸಂಕಟಗಳಿಗಷ್ಟೇ ಕೇಂದ್ರೀಕೃತಗೊಂಡಿದ್ದರೆ ‘ಬಿತ್ತನೆ ಬೀಜ’ ಅದರ ನಂತರ ದಲಿತ ಹೋರಾಟದ ಸಾಫಲ್ಯಗಳನ್ನು ಬಿಚ್ಚಿಡುತ್ತದೆ. ಅದರ ಜತೆಯಲ್ಲಿ 70-80 ರ ದಶಕದಲ್ಲಿ ಪ್ರಬಲ ಶಕ್ತಿಯಾಗಿ ಬೆಳದಿದ್ದ ದಸಂಸ ಇಂದಿನ ದಿನಗಳಲ್ಲಿ ಬಿಡಿಬಿಡಿಯಾಗಿ ಒಡೆದದ್ದು, ಅದರ ಬಲವನ್ನು ಹೀನಮಾಡಿದ್ದು ಇತ್ಯಾದಿಗಳನ್ನು ಕುರಿತು ಆಲೋಚಿಸುತ್ತಲೇ ಅವುಗಳ ಜತೆಯಲ್ಲಿ ಎಪ್ಪತ್ತರ ದಶಕದ ತಲ್ಲಣಗಳನ್ನು ಬಿಚ್ಚಿಡುತ್ತಲೇ ಸದ್ಯದ ಕನಸುಗಳನ್ನು ಜೋಡಿಸುವ ಇವರ ಕಥನಮಾದರಿ ಈ ಕೃತಿಗೆ ದಕ್ಕಿದೆ.


     ದಲಿತ ಹೋರಾಟಕ್ಕಾಗಿ ಎಷ್ಟೋಜನ ಹೋರಾಟಕ್ಕಾಗಿ ತಮ್ಮ ಊರು, ಮನೆ ಬಿಟ್ಟು ದುಡಿದಿದ್ದಾರೆ. ಆದರೆ ಅವರು ಇಂದು ಹಿಂದಿರುಗಿ ನೋಡಿದರೆ ಹೋರಾಟದ ಹೆಸರಿನಲ್ಲಿ ತಮ್ಮ ವೈಯಕ್ತಿಕ ಬದುಕನ್ನು ಕಳೆದುಕೊಂಡಿದ್ದಾರೆ. ಅವರಿಗೆ ನೆಲೆಗಳಿಲ್ಲ. ಆದರೆ ಆ ಚಳವಳಿಯ ಕಾವಿನಲ್ಲಿ ಬೇಳೆ ಬೇಯಿಸಿಕೊಂಡವರು ಬೆಚ್ಚನೆ ಬಂಗಲೆಯಲ್ಲಿ ಆರಾಮಾಗಿದ್ದಾರೆ. ಇಂಥ ಹೊತ್ತಿನಲ್ಲಿ ತಮ್ಮ ಬದುಕನ್ನೇ ಹೋರಾಟಕ್ಕೆ ಮೀಸಲಿಟ್ಟ ವೈಯಕ್ತಿಕ ಬದುಕನ್ನು ಕಳೆದುಕೊಂಡ ಅದೆಷ್ಟೋ ಹೆಸರಿಲ್ಲದ ದಸಂಸ ಚರಿತ್ರೆಗಳು ನಾಯಕರು ನಮ್ಮ ಚರಿತ್ರೆಯಲ್ಲಿ ಕಾಣೆಯಾಗಿವೆ. ದಲಿತ ಚಳವಳಿ ಹೋರಾಟ ಎಂದರೆ ಬೆರಳೆಣಿಕೆಯಷ್ಟು ಜನರನ್ನಷ್ಟೇ ಉಲ್ಲೇಖಿಸಿ ಪ್ರಾಮಾಣಿಕ ಹೋರಾಟಗಾರರನ್ನು ಬದಿಗೆ ಸರಿಸಲಾಗಿದೆ. ಅಂಥ ಅನೇಕ ಹೋರಾಟಗಾರರ ಹೆಸರುಗಳು, ಅವರ ಸಾಧನೆಗಳ ವಿವರಗಳನ್ನು ಈ ಕೃತಿ ಅಪಾರವಾಗಿ ತನ್ನೊಡಲಲ್ಲಿ ಇರಿಸಿಕೊಂಡಿದೆ. 


     ತುಮಕೂರಿನ ದಲಿತ ಚರಿತ್ರೆಗೆ ‘ಬಿತ್ತನೆಬೀಜ’ ಮಹತ್ವದ ದಾಖಲೆಯಾಗಿದೆ. ತುಮಕೂರಿನ ಸಾಂಸ್ಕೃತಿಕ ಪರಿಸರದಲ್ಲಿ ಜರುಗಿದ ದಸಂಸ ಹೋರಾಟಗಳು, ಶಿಬಿರಗಳು ಮತ್ತು ನಡೆದಿರುವ ಚರ್ಚೆಗಳು.... ದೇವನೂರು ಹೆಗಡೆ ಪರವಾಗಿ ನಿಂತದನ್ನು ದಾಖಲಿಸುತ್ತದೆ. ದಂಸಂಸ ದ ರಾಜಕೀಯ ತಿರುವನ್ನು ಇದು ತಿಳಿಸುವುದರ ಜತೆಗೆ ಮೊದಲ ಸಾಲಿನ ನಾಯಕರು ಮಾಡಿದ ರಾಜಕೀಯ ತೀರ್ಮಾನಗಳು ಇಡೀ ದಸಂಸ ದ ಶಕ್ತಿಯನ್ನು ಕುಂದಿಸಲು ಯತ್ನಿಸಿದ ವಿವರವನ್ನು ವಿಶ್ಲೇಷಿಸುತ್ತದೆ. ರಾಜಕೀಯ ಆಯ್ಕೆಯನ್ನು ದಸಂಸ ಗೆ ವ್ಯವಸ್ಥಿತವಾಗಿ ಒಂದು ಪಕ್ಷಕ್ಕೆ ಅಡಯಿಡುವುದು ನಮ್ಮ ಮೊದಲ ಹಂತದ ದಲಿತ ನಾಯಕರು ಮಾಡಿದ ದುರಂತವೇ ಸರಿ. ಇಂಥ ವಿಚಾರಗಳು ಬಂದಾಗ ಮೊದಲ ತಲೆಮಾರಿನ ನಾಯಕರು ಮೌನವಹಿಸುತ್ತಾರೆ. ಈ ಮೌನ ವಹಿಸುವಿಕೆ ಹೊಸ ತಲೆಮಾರಿನ ಯುವಕರಿಗೆ ಪರಂಪರೆಯ ಅರಿವಿನ ಕೊರತೆಯುಂಟಾಗುತ್ತದೆ. ಈ ಗೊಂದಲಗಳನ್ನು ಮೊದಲ ತಲೆಮಾರಿನವರು ನಿರ್ವಹಿಸಿದರೆ ಹೊಸ ತಲೆಮಾರು ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯವಾಗುತ್ತದೆ. ಈ ಸ್ವರೂಪದ ತಾತ್ವಿಕ ಅಂಶಗಳನ್ನು ಒಳಗೊಂಡು ಈ ಕೃತಿ ದಸಂಸ ಚರಿತ್ರೆಯಲ್ಲಿ ಮುಖ್ಯ ಸ್ಥಾನ ಗಳಿಸಿದೆ ಎಂದರೆ ತಪ್ಪಾಗಲಾರದು.


      ಬಹುಪಾಲು ಎಲ್ಲ ದಲಿತ ಅನುಭವಕಥನಗಳಂತೆ ಇಲ್ಲಿಯೂ ಹಾಸ್ಟೆಲ್ ಅನುಭವ ಸಹಜವಾಗಿಯೇ ಮೂಡಿ ಬಂದಿದೆ. ದನದ ಬಾಡಿನ ವಿಷಯ, ಕ್ಷೌರಿಕದಂತಹ ವಿಷಯಗಳು.. ದಲಿತ ಹೋರಾಟದ ಜತೆಯಲ್ಲಿ ಭೂ ಹೋರಾಟ, ರೈತ ಹೋರಾಟ, ವೈಚಾರಿಕ ಹೋರಾಟಗಳು ಸೇರಿ ಇಡೀ ‘ಬಿತ್ತನೆ ಬೀಜ’ ಸತ್ವಯುತವಾಗಿ ಕಟ್ಟಿಕೊಂಡಿದೆ. ಹೋರಾಟದ ಅನುಭವಗಳು ವರ್ತಮಾನ ಮತ್ತು ಗತಕಾಲದ ಘಟನೆಗಳನ್ನು ಸಹಾನುಭೂತಿಯಿಂದ ವಿವರಿಸುವ ಕಾರಣದಿಂದ ಈ ಕೃತಿಗೆ ‘ಸಮಾಜಶಾಸ್ತ್ರೀಯ’ ಆಯಾಮ ದಕ್ಕಿದೆ. ವಿವಿಧ ಜಾತಿಗಳ ನಡುವಿನ ಸಂಬಂಧಗಳನ್ನು ಚಾರಿತ್ರಿಕಪೂರ್ವ ನೆಲೆಯಲ್ಲಿ ಕಟ್ಟಿಕೊಡುವ ಇವರು ನಾಯಕ, ಗೊಲ್ಲ, ಕುಂಚಿಟಿಗ, ಕೊರಚ, ದಕ್ಕಲ ಸಮುದಾಯಗಳ ಆಂತರಿಕ ನೆಂಟಸ್ತಿಕೆಗಳನ್ನು ಕಲೆಹಾಕಿದ್ದಾರೆ. ಸಂಶೋಧಕರಾಗಿಯೂ ಈ ಬರಹದಲ್ಲಿ ಇಣುಕಿದ್ದಾರೆ. ‘ವಾಡೆದ ಭೂತಪ್ಪ’ ವಿಚಾರದಲ್ಲಿ, ‘ತರಲೆ ಮಲ್ಲೇಶ’ನ ಪವಾಡವನ್ನು ಬಯಲು ಮಾಡುವಲ್ಲಿ ಅವರ ಶೋಧನ ಮನಸ್ಸು ಜಾಗೃತಗೊಂಡಿದೆ.
 ತಮ್ಮ ಬಾಲ್ಯದ ಅನುಭವಗಳನ್ನು ಕಟ್ಟಿಕೊಡುವಾಗಲಂತೂ ಕವಿಯಾಗಿಯೇ ರೂಪುಗೊಂಡಿದ್ದಾರೆ. ಹಾಗಾಗಿ ಆ ಭಾಗದಲ್ಲಿ ಅನುಭವಗಳು ಅತ್ಯಂತ ಸಾವಧಾನದಿಂದ ಓದುಗರ ಆಳಕ್ಕೆ ಇಳಿಯುವ ಶಕ್ತಿ ಪಡೆದಿದೆ. ಹೋರಾಟದ ಭಾಗಕ್ಕೆ ಬಂದ ಹಾಗೆಲ್ಲ ಅಬ್ಬರಿಸಲು ಆರಂಭಿಸುತ್ತವೆ. 


 ಖಾಸಗಿ ವಿಷಯವನ್ನು ಮರೆಮಾಚಿ ಜನಪ್ರಿಯವಾಗುವುದರಲ್ಲಿ, ತನ್ನನ್ನು ವೈಭವೀಕರಿಸುತ್ತ ಬರೆದುಕೊಳ್ಳುವ ಒಂದು ಪಡೆಯೇ ಬರಹಕ್ಕೆ ಪ್ರವೇಶಿಸಿದೆ. ಹಾಗಾಗಿ ಆತ್ಮಕಥನಗಳೆಂದು ಕರೆಸಿಕೊಳ್ಳುವ ಅನೇಕ ಬರಹಗಳು ವೈಯಕ್ತಿಕತೆಗೆ ನಿಂತು ಬಿಡುತ್ತವೆ. ದಿನಚರಿಯಾಗಿರುವ, ತನಗೊಂದು ಸ್ಥಾನಕ್ಕಾಗಿ ಮಂಡಿಸುವ ರೀತಿಯಲ್ಲಿ ಅನೇಕ ಅನುಭವ ಕಥನಗಳು ಬಂದಿವೆ. ಯಾವ ಅನುಭವ ಕಥನಗಳು ದಿನಚರಿಯಾಗುವ ಅಪಾಯದಿಂದ ಬಿಡಿಸಿಕೊಳ್ಳುತ್ತವೆಯೋ ಅವು ಮಾತ್ರ ಸಾರ್ವತ್ರೀಕರಣಗೊಳ್ಳುತ್ತವೆ. ಈ ‘ಬಿತ್ತನೆ ಬೀಜ’ ದ ಬಂದುಕುಂಟೆಯವರಿಗೆ ಈ ತರದ ಸಾಮಾಜಿಕ ಎಚ್ಚರವಿದೆ. ಈ ಎಚ್ಚರಗಳನ್ನು ಇಟ್ಟುಕೊಂಡು ವೈಯಕ್ತಿಕ ಮಿತಿಗಳನ್ನು ದಾಟಲೆತ್ನಿಸುತ್ತಾರೆ.


     ಆದರೆ ಕೆಲವು ಕಡೆ ಅದರಲ್ಲೂ ಕೊನೆಕೊನೆಗೆ ಬರಹದ ಸಾಧ್ಯತೆಯನ್ನು ಮೀರಲೆತ್ನಿಸಿ ವರದಿಯ ರೂಪಕ್ಕೆ ಬಂದುಬಿಟ್ಟಿದ್ದಾರೆ. ಇದರ ಜತೆಯಲ್ಲಿ ಬರಹದುದ್ದಕ್ಕೂ ಇವರನ್ನು ಮುನ್ನಡೆಸಿರುವ ವೈಚಾರಿಕತೆಯೂ ಕೆಲವು ಕಡೆ ಲೇಖಕರನ್ನು ಹಿಂದಿಕ್ಕಿ ತಾನೇ ಆಧಿಪತ್ಯ ಸ್ಥಾಪಿಸಿದೆ. ಇಂಥ ಕಡೆಯಲೆಲ್ಲ ಕೃತಿ ವೈಚಾರಿಕಭಾರದಿಂದ ಪರಿತಪಿಸಿದೆ. ವೈಚಾರಿಕತೆ ಮತ್ತು ಅನುಭವ ಸಮತೋಲನ ಸಾಧಿಸಿದ್ದರೆ ಈ ಕೃತಿ ಇನ್ನಷ್ಟು ಗಂಭಿರವಾಗುತ್ತಿತ್ತು. 


     ಇಷ್ಟಾಗಿಯೂ ಈ ಕೃತಿ ತುಮಕೂರಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ರಾಜ್ಯದ ದಲಿತ ಹೋರಾಟದ ಪರಂಪರೆಯನ್ನು ಇದು ಪ್ರಮುಖವಾಗಿ ದಾಖಲಿಸುವುದರ ಜತೆಗೆ ಎಪ್ಪತ್ತು-ಎಂಬತ್ತರ ದಶಕದ ದಸಂಸದ ಹೋರಾಟದ ಗಾಥೆಯನ್ನು, ಚಳವಳಿಯ ಆಂತರಿಕ ಚರ್ಚೆಯನ್ನು, ಚಳವಳಿ ದಾರಿತಪ್ಪಿದ ಬಗೆಯನ್ನು ಖಚಿತವಾಗಿ ಮಂಡಿಸುತ್ತದೆ. ಚಳವಳಿ ತನ್ನ ಆತ್ಮಾವಲೋಕನ ಮಾಡಿಕೊಂಡ ಬಗೆಯನ್ನು, ಜತೆಯಲ್ಲಿ ದಲಿತ ಚರಿತ್ರೆಯಲ್ಲಿ ದಾಖಲೆಯಾಗದ ಸಾಕಷ್ಟು ಹೆಸರುಗಳು ಈ ಕೃತಿಯಲ್ಲಿ ಸ್ಥಾನ ಪಡೆದಿವೆ. ಇದರ ಮೂಲಕ ದಲಿತ ಹೋರಾಟದ ಚರಿತ್ರೆಗೆ ಈ ಕೃತಿ ನಿಜವಾದ ಮುಖವಿಟ್ಟಿದೆ ಎಂದರೆ ತಪ್ಪಾಗಲಾರದು. ಬಾಲ್ಯದ ಅನುಭವ, ಹೋರಾಟ, ವ್ಯಕ್ತಿಚಿತ್ರ ವಿವಿಧ ಘಟನಾವಳಿಗಳೆಲ್ಲ ಸೇರಿ ಈ ಕೃತಿ ವಿಶಿಷ್ಟ ಆಯಾಮವಾಗಿ ಅನಾವರಣಗೊಂಡಿದೆ.


      ಚಳವಳಿಗಳು ನಮ್ಮ ಮುಂದೆ ಸತ್ವಹೀನವಾಗಿ, ಹೋರಾಟಗಾರರು ಸರ್ಕಸ್ಸಿನ ಹುಲಿಗಳಾಗಿದ್ದಾರೆ, ಹುಸಿ ಹೋರಾಟಗಾರರು ಸಾಮಾನ್ಯರಲ್ಲಿ ಆತಂಕ ಹುಟ್ಟಿಸಿ ಮುಖಂಡರ ಬಗೆಗೆ ನಂಬುಗೆ ಕಳೆದಿದ್ದಾರೆ. ಹಿರಿಯ ದೀಪಗಳನ್ನೆಲ್ಲ ಬೀದಿಯಲ್ಲಿಡಲಾಗಿದೆ. ಇಂಥ ಹೊತ್ತಿನಲ್ಲಿ ಹಿರಿಯ ಹೋರಾಟಗಾರರು ಹೊಸ ತಲೆಮಾರಿಗೆ ತಮ್ಮ ಹೋರಾಟದ ಪರಂಪರೆಯನ್ನು ಜ್ಞಾಪಿಸಬೇಕಾಗಿದೆ. ಹೊಸ ತಲೆಮಾರಿಗೆ ತೋರುಗೈಯಾಗಬೇಕಾಗಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಅದೇ ಬಿರುಸಿನಲ್ಲಿ ಹೋರಾಟದ ಹಂಬಲಗಳನ್ನು ತನ್ನ ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸವನ್ನು ಈ ಕೃತಿ ಮಾಡುತ್ತದೆ.


     ದಸಂಸ ನಾಯಕರ ನಂಬುಗೆಗಳು ಕಳೆದು ನಾವು ತಲುಪುತ್ತಿರುವ ದಾರಿ ಯಾವುದು? ಎಂಬ ಪ್ರಶ್ನೆಯಂತೂ ಕೊನೆಗೆ ಉಳಿದೇ ಉಳಿಯುತ್ತದೆ. ನಮ್ಮ ಭಾಗದ ಎನ್ಕೆ ಹನುಮಂತಯ್ಯ ಒಂದು ರೂಪಕವನ್ನು ಬಳಸುತ್ತಿದ್ದ ‘ನೇತು ಬಿದ್ದನವಿಲು’ ಅಂತ. ‘ಒಂದು ಕಾಲಕ್ಕೆ ದಲಿತ ಲೇಖಕರು ಮತ್ತು ಹೋರಾಟಗಾರರು ನವಿಲುಗಳಂತಿದ್ದರು. ಯಾವುದಾದರೂ ಮೂಲೆಯಲ್ಲಿ ದಲಿತರ ಮೇಲೆ ಹಲ್ಲೆಯಾದರೆ ಅಲ್ಲಿಗೆ ಹೋಗಿ ಜನರಲ್ಲಿ ಬೆರೆತು ಹೋರಾಟದ ಮೊಟ್ಟೆಗಳನ್ನಿಟ್ಟು ಬರುತ್ತಿದ್ದರು. ಅವು ಕೆಲವು ಕಾಲದ ನಂತರ ಒಡೆದು ಮರಿಗಳಾಗುತ್ತಿದ್ದವು. ಈಗ ಎಲ್ಲಿಯಾದರೂ ಹಲ್ಲೆಯ ಸುದ್ಧಿ ಬಂದರೆ ನವಿಲುಗಳು ಹೋಗುವುದಿಲ್ಲ; ಮೊಟ್ಟೆ ಇಡುವುದಿಲ್ಲ. ಯಾಕೆಂದರೆ ಆ ನವಿಲುಗಳನ್ನು ಹುಪ್ಪಳ ಸುಲಿದು ಮಾಂಸದಂಗಡಿಯಲ್ಲಿ ನೇತು ಹಾಕಲಾಗಿದೆ’ ಇನ್ನು ಮುಂದುವರೆದು ದಲಿತ ಮುಖಂಡರೆಲ್ಲ ಕೇರಿಕೇರಿಗೂ ನವಿಲುಗಳಾಗಿ ಹೋಗಿ ನೀಲಿ ಮೊಟ್ಟೆಗಳನ್ನೇನೋ ಇಟ್ಟು ಬರುತ್ತಿದ್ದಾರೆ. ಅವುಗಳಿಗೆ ಸರಿಯಾದ ಕಾವು ಸಿಗದೆ ಇಟ್ಟಲ್ಲೇ ಕೆಡುತ್ತಿವೆ’.


‘ನೆಲ ಹಸನಾಗದೆ ಬೀಜ ಬಿತ್ತಬಹುದೇ?’ 


ಡಾ.ರವಿಕುಮಾರ್ ನೀಹ