"ಸಂತೆಗಣ್ಗಳಿಗೆ" ಕಾಣದವರು...!
ಬಾಹ್ಯಲೋಕದ ಒತ್ತಡ ಇಲ್ಲವೇ ಪರಿಸ್ಥಿತಿಯ ಕಾರಣದಿಂದ ಅಸಹಾಯಕರಾಗಿ,ತಮಗೆ ವಯೋಸಹಜವಾಗಿ ದಕ್ಕಬೇಕಾದ ಸುಖವು ದಕ್ಕದೇ ಹೋದಾಗ ಅದನ್ನ ತಮ್ಮದೇ ರೀತಿಯಲ್ಲಿ ಕಂಡುಕೊಂಡ, ಅನುಭವಿಸಿದ ರೇಣುಕಾ,ಅಹಲ್ಯಾ ಮತ್ತು ಊರ್ಮಿಳಾರ ಮುಖೇನ ನಾವಿವತ್ತು ಮೌಲ್ಯ ಎಂದರೆ ಯಾವುದು? ಮೌಲ್ಯದ ಪ್ರತಿಪಾದನೆ ಹೇಗೆ? ಎಂಬ ವಿಷಯವನ್ನು ಲೇಖಕಿ ದಯಾ ಗಂಗನ ಘಟ್ಟ ಇಲ್ಲಿ ಚರ್ಚಿಸಿದ್ದಾರೆ.

ಬದುಕಿನಲ್ಲಿ ಬಾಹ್ಯ ನಡವಳಿಕೆಗಳಿಗೆ ಎಷ್ಟು ಬೆಲೆಯಿದೆಯೊ,ಅವುಗಳಿಗಿಂತ ಹೆಚ್ಚಾಗಿ ಅಂತರಂಗದ ನಡವಳಿಕೆಗಳಿಗೂ ಬೆಲೆಯಿದೆ; ಬಾಹ್ಯ ವ್ಯಾಪಾರಗಳಿಗೆ ಅಂತರಂಗದ ವ್ಯಾಪಾರಗಳೇ ಮೂಲ.
ಲೌಕಿಕವಾಗಿ ನೀಗಿಸಿಕೊಳ್ಳಲಾಗದ ಎಷ್ಟೋ ಬಯಕೆಗಳನ್ನು ಬೌದ್ದಿಕವಾಗಿ ನೀಗಿಸಿಕೊಳ್ಳುವ ಏಕೈಕ ಶಕ್ತಿಯಿರುವ ಜೀವಿ ಮನುಷ್ಯ,ಮನಸ್ಸಿನ ಮೇಲಾಟದ ಮೂಲಕ ಉತ್ತುಂಗದ ಹಂತವನ್ನು ಮುಟ್ಟಿ ಬರುವ ಕಲೆ ಮಾನವನಿಗೆ ಸಿದ್ದಿಸಿದೆ,ಅದು ಆಧ್ಯಾತ್ಮವಿರಬಹುದು ಇಲ್ಲವೇ ಕಾಮವಿರಬಹುದು.
ಬಾಹ್ಯಲೋಕದ ಒತ್ತಡ ಇಲ್ಲವೇ ಪರಿಸ್ಥಿತಿಯ ಕಾರಣದಿಂದ ಅಸಹಾಯಕರಾಗಿ,ತಮಗೆ ವಯೋಸಹಜವಾಗಿ ದಕ್ಕಬೇಕಾದ ಸುಖವು ದಕ್ಕದೇ ಹೋದಾಗ ಅದನ್ನ ತಮ್ಮದೇ ರೀತಿಯಲ್ಲಿ ಕಂಡುಕೊಂಡ, ಅನುಭವಿಸಿದ ರೇಣುಕಾ,ಅಹಲ್ಯಾ ಮತ್ತು ಊರ್ಮಿಳಾರ ಮುಖೇನ ನಾವಿವತ್ತು ಮೌಲ್ಯ ಎಂದರೆ ಯಾವುದು? ಮೌಲ್ಯದ ಪ್ರತಿಪಾದನೆ ಹೇಗೆ? ಎಂಬ ವಿಷಯವನ್ನು ಚರ್ಚಿಸೋಣ.
ಊರ್ಮಿಳೆ....ಅನುಪಮ ಸೌಂದರ್ಯದ ಯುವರಾಣಿ, 'ಜನಕ' ಹಾಗೂ 'ಸುನೈನಾ'ಳ ಮಗಳು,ಉತ್ತಮ ಚಿತ್ರಕಲಾವಿದೆ,ಲಕ್ಷ್ಮಣನ ಹೆಂಡತಿ.
ರೇಣುಕಾ.... ಜಾಣೆ,ತಪಸ್ವಿ,ಚತುರೆ,ಜಮದಗ್ನಿಯ ಪತ್ನಿ.
ಅಹಲ್ಯೆ.... ಚಲುವೆ,ದಿಟ್ಟೆ,ಗೌತಮನ ಪತ್ನಿ.
ಮೂವರೂ ಪತಿಯ ಮಾತಿನಂತೆ ನಡೆದವರು, ತಮ್ಮ ಯೌವನದ ಕಾಲದಲ್ಲಿ ಗಂಡನಿಂದ ಸಿಗಬೇಕಾದ ಸುಖದಿಂದ ವಂಚಿತರಾದವರು.ಈ ಮೂವರ ಸುತ್ತ ನಡೆದ ಬಾಹ್ಯ ಚಟುವಟಿಕೆ ಮತ್ತು ಪ್ರಸಂಗಗಳ ಬಗ್ಗೆ ಸಾಕಷ್ಟು ಕತೆಗಳು ನಮ್ಮೆದುರಿಗಿವೆ,ಆದರೆ ಅವರು ಅನುಭವಿಸಿದ ಮಾನಸಿಕ ತುಮುಲಗಳನ್ನು ಜಗತ್ತಿಗೆ ತೆರೆದಿಟ್ಟ ಕತೆಗಳು ವಿರಳ.ರೇಣುಕೆಯ ಮನಸ್ಸಿನ ಚಡಪಡಿಕೆಯ ಬಗ್ಗೆ ನನಗೆ ಹೆಚ್ಚೇನೂ ಓದಲು ಸಿಕ್ಕಿಲ್ಲ,ಆದರೆ ಊರ್ಮಿಳೆಯ ಮನೋ ಹೋರಾಟದ ಸಂಕಟದ ಚಿತ್ರಣವನ್ನು ಹಿಂದಿಯಲ್ಲಿ ಮೈಥಿಲಿಶರಣಗುಪ್ತ, ಕನ್ನಡದಲ್ಲಿ ಕುವೆಂಪು,ಮಲೆಯಾಳಿಯಲ್ಲಿ ಶ್ವೇತಾ ಗಣೇಶ ಇವರು ನೀಡಿದ್ದಾರೆ. ಅಹಲ್ಯೆಯ ಬಗ್ಗೆಯಂತೂ ಲೆಕ್ಕವಿಲ್ಲದಷ್ಟು ಚರ್ಚೆ ಮಾಡಿದ ಪುಸ್ತಕಗಳಿವೆ.
ವನವಾಸಕ್ಕೆ ಹೊರಟ ಲಕ್ಷ್ಮಣ ಊರ್ಮಿಳೆಗೆ ತಾಯಿಯರನ್ನು ಉಪಚರಿಸಿಕೊಂಡು ಅರಮನೆಯಲ್ಲಿರಬೇಕು,ಯಾವತ್ತಿಗೂ ಕಣ್ಣೀರು ಹಾಕಬಾರದು ಎಂಬ ವಚನವನ್ನು ಹಾಕುತ್ತಾನೆ. ಇದರಿಂದ ತಪಸ್ವಿನಿಯಂತೆ ವಿರಹಿಯಂತೆ ಬದುಕುತ್ತ ದಿನಗಳೆಯುವ ಘೋರ ದಿನಗಳು ಊರ್ಮಿಳೆ ಪಾಲಿಗೆ ಬರುತ್ತವೆ, ಇಷ್ಟೇ ಅಲ್ಲದೆ ಲಕ್ಷ್ಮಣ ತನ್ನ ಪಾಲಿನ ನಿದ್ರೆಯನ್ನೂ ಕೊಟ್ಟು ಅವಳು ಸದಾ ನಿದ್ರೆಯಲ್ಲಿರುವಂತೆ ಮಾಡುತ್ತಾನೆ,ದಿನದ ಹೆಚ್ಚಿನ ಸಮಯ ಊರ್ಮಿಳೆ ನಿದ್ರೆಯಲ್ಲಿಯೇ ಕಳೆಯುತ್ತಾಳೆ, ನೂರಾರು ಕನಸು ಹೊತ್ತು ಬಂದವಳು ಯೌವನಾವಸ್ಥೆಯ ವಸಂತದಲ್ಲಿ ಹೂವಾಗಿರಬೇಕಾದ ಬದುಕೇ ನಶ್ವರ ಎಂಬಂತೆ ದಿನದೂಡುತ್ತಾಳೆ.
ಹೊರಗಿನ ಕಣ್ಣಿಗೆ ಅವಳ ವ್ಯಕ್ತಿತ್ವ ಅವ್ಯಕ್ತ; ಒಳಗಣ್ಣಿಗೆ ಸದಾ ವ್ಯಕ್ತ.ಅದು ಅದಮ್ಯವಾದುದು, ಅವಳ ಹೃದಯದಲ್ಲಿ ನಡೆದ ಹೋರಾಟ ‘ಸಂತೆಗಣ್ಗಳಿಗೆ’ ಕಾಣುವಂತದ್ದಲ್ಲ. ಮಾತು ಕಡಿಮೆ ಮಾಡಿ, ಜನಜಂಗುಳಿಯನ್ನು ಇಷ್ಟಪಡದೆ, ಸದಾ ಏಕಾಂತದಲ್ಲಿ ಕಾಲಕಳೆವ ಅವಳ ಮಾನಸಿಕ ಸ್ಥಿತಿ ಹೇಗಿರಬೇಡ, ಜನಪದದಲ್ಲಿ ಒಂದು ನುಡಿಗಟ್ಟಿದೆ " ಊರ್ಮಿಳಾ ಸ್ನಾನ" ಅಂತ, ಬಹಳ ಹೊತ್ತು ಬಚ್ಚಲುಮನೆಯಲ್ಲಿ ಇರುವವರಿಗೆ "ನಿಂದೇನು ಊರ್ಮಿಳಾ ಸ್ನಾನವಾಯ್ತಲ್ಲಾ" ಅನ್ನುತ್ತಾರೆ, ಒಂಟಿಯಾದ ಊರ್ಮಿಳೆಗೆ ತನ್ನ ಭಾವಲೋಕದಲ್ಲಿ ವಿಹರಿಸಲು ಇದ್ದ ಏಕೈಕ ಜಾಗ ಸ್ನಾನಗೃಹ,ಇಲ್ಲಿ ಆಕೆ ಸ್ವತಂತ್ರವಾಗಿ ಮೈಚೆಲ್ಲಿ ಮಲಗಿ ತನ್ನ ಮನಸ್ಸಿನ ದುಗುಡಗಳನ್ನೆಲ್ಲಾ ಕಳೆದುಕೊಳ್ಳುತ್ತಾಳೆ, ತನ್ನ ದೈಹಿಕ ಆಸೆಯನ್ನು ಲಕ್ಮಣನು ತನ್ನೊಂದಿಗೆ ಕಳೆದ ದಿನಗಳನ್ನೆಲ್ಲಾ ನೆನಪಿಸಿಕೊಳ್ಳುವ ಮೂಲಕ, ಭಾವತೀವ್ರತೆಯ ಹಂತವನ್ನು ಮುಟ್ಟುವ ಮೂಲಕ ಪೂರೈಸಿಕೊಳ್ಳುತ್ತಾಳೆ.ಇಲ್ಲಿ ಊರ್ಮಿಳೆ ದೂರದಲ್ಲೆಲ್ಲೋ ಇರುವ ಗಂಡನೊಂದಿಗೇ ತನ್ನನ್ನು ಕನೆಕ್ಟ್ ಮಾಡಿಕೊಂಡು ಸುಖಿಸುತ್ತಾಳೆ.
*****
ರೇಣುಕಾ ಕೇವಲ ಎಂಟು ವರ್ಷದವಳಾಗಿದ್ದಾಗ, ಜಮದಗ್ನಿ ಮಹರ್ಷಿಯನ್ನ ಮದುವೆಯಾಗುತ್ತಾಳೆ, ಆಶ್ರಮವಾಸ,ಗಂಡನೋ ಸದಾ ತಪೋ ಮಗ್ನ, ರೇಣುಕೆಯ ಕೆಲಸ ಗಂಡನಿಗೆ ಎಲ್ಲಾ ರೀತಿಯ ಸೇವೆಯನ್ನು ಮಾಡುವುದಾಗಿರುತ್ತದೆ,ಪ್ರತೀದಿನ ಅವಳು ಮುಂಜಾನೆ ಎದ್ದು, ಅಲ್ಲೇ ಇದ್ದ ಮಲಪಹರಿ ನದಿಯಲ್ಲಿ ಸ್ನಾನ ಮಾಡಿ, ಮಣ್ಣಿನಿಂದ ಒಂದು ಬಿಂದಿಗೆಯನ್ನ ತಾನೇ ತಯಾರಿಸಿ,ಒಂದು ಹಾವನ್ನು ಸಿಂಬಿಯನ್ನಾಗಿ ಮಾಡಿಕೊಂಡು ನೀರು ಹೊತ್ತು ಮನೆಗೆ ತರುತ್ತಿರುತ್ತಾಳೆ.ಒಂದು ದಿನ ರೇಣುಕಾ ದೇವಿಯು ನದಿಗೆ ನೀರನ್ನು ತರಲು ಹೋದಾಗ ಅಲ್ಲಿ ನೀರಲ್ಲಿ ಆಟವಾಡುತ್ತಿದ್ದ ಗಂಧರ್ವರನ್ನು, ಅವರ ಆಟವನ್ನು ನೋಡಿ ಮೈ ಮರೆಯುತ್ತಾಳೆ. ವಯೋ ಸಹಜವಾಗಿ ಅವರನ್ನು ನೋಡಿ ಮುದಗೊಳ್ಳುವ ಅವಳು ಅವರ ಶೃಂಗಾರ ಚಟುವಟಿಕೆಗಳನ್ನು ಕಂಡವಳು ತಾನೂ ತನ್ನ ಪತಿಯೊಂದಿಗೆ ಹೀಗೆ ಇದ್ದಂತೆ ಕಲ್ಪಿಸಿಕೊಂಡು ಕನಸಿನ ಲೋಕದಲ್ಲಿ ಮೈಮರೆತು ಕೂರುತ್ತಾಳೆ, ಕೊನೆಗೆ ಎಚ್ಚೆತ್ತವಳು ತಡವಾಗಿ,ಮನೆಗೆ ನೀರಿಲ್ಲದೆ ತೆರೆಳುತ್ತಾಳೆ. ಇದನ್ನ ಕಂಡ ಜಮದಗ್ನಿ ಮಹರ್ಷಿ ಕೋಪ ಗೊಂಡು ರೇಣುಕಾ ದೇವಿಯನ್ನ ಮನೆ ಇಂದ ಹೊರಗೆ ನಿಲ್ಲಿಸಿ. ಮಗನಾದ ಪರಶುರಾಮನನ್ನು ಕರೆದು ತಾಯಿಯ ತಲೆಯನ್ನು ಕಡಿದು ಹಾಕಲು ಹೇಳುತ್ತಾನೆ. ಹಿಂದೆಮುಂದೆ ಯೋಚಿಸದೆ ತಂದೆಯ ಮಾತನ್ನು ಪರಿಪಾಲಿಸಲು ಪರಶುರಾಮ ತಾಯಿಯ ತಲೆಯನ್ನು ಕಡಿದು ಹಾಕುತ್ತಾನೆ.
ಇಲ್ಲಿ ರೇಣುಕಾ ಕಣ್ಣೆದುರಿಗೆ ಕಂಡ ಜೋಡಿಯೊಂದನ್ನು ನೋಡುತ್ತಾ ತನ್ನನ್ನು ಅಲ್ಲಿ ತಂದುಕೊಂಡು ಸುಖಿಸುತ್ತಾಳೆ
*****
ಅಹಲ್ಯೆ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಹೆಣ್ಣು ಕಲ್ಲಾದ ಚಿತ್ರವೊಂದು ಬರುತ್ತದೆ, ಇವಳು ತರುಣಿ ,ಅತ್ಯಂತ ಸುಂದರಿ. ಗೌತಮನಿಗೆ ಮದುವೆಯಾದಾಗ ಇದ್ದ ಆಸಕ್ತಿ ಅನಂತರ ಕಡಿಮೆಯಾಯಿತೆಂದು ಕಾಣುತ್ತದೆ ಜೊತೆಗೆ ತಪಸ್ಸು, ಅಧ್ಯಯನ, ಯೋಗ, ಮೌನ ಇವುಗಳಲ್ಲಿ ಮುಳುಗಿ ಹೋಗುತ್ತಾನೆ, ಇದಕ್ಕೆ ಅಹಲ್ಯೆಯೂ ಸಿದ್ಧಳಿದ್ದಳೆ! ಶೃಂಗಾರದ ಬಾಯಾರಿಕೆ ತೀರದ ಹೆಂಡತಿ, ಅಲೌಕಿಕದ ಕಡೆ ಆಕರ್ಷಿತನಾದ ಗಂಡ.ಸಮಯ ಕಾಯುತ್ತಿದ್ದ ಇಂದ್ರ ,ಹೇಗಾದರೂ ಮಾಡಿ ಗೌತಮನನ್ನು ತಪೋ ಭ್ರಷ್ಟನನ್ನಾಗಿಸಬೇಕೆಂದು ಒಂದು ದಿನ ಗೌತಮ ಸ್ನಾನಕ್ಕೆ ಹೋಗಿದ್ದಾಗ ಗೌತಮನದೇ ವೇಷ ಧರಿಸಿ ಅಹಲ್ಯೆ ಬಳಿಗೆ ಬಂದು ತನ್ನ ಆಸೆಯನ್ನು ತೀರಿಸಿಕೊಳ್ಳುತ್ತಾನೆ, ಇಲ್ಲಿ ಅಹಲ್ಯೆ ತನ್ನ ಸುಖಕ್ಕಾಗಿ ಕೂಡಿದ್ದು ಗಂಡನ ಆಕಾರದ ದೇಹವನ್ನು,ಆದರೆ ಅದರೊಳಗೆ ಅಡಗಿದ್ದವ ಇಂದ್ರ, ಇಲ್ಲಿ ಅಹಲ್ಯೆ ಬಯಕೆ ತೀರಿಸಿಕೊಂಡದ್ದು ಯಾರಿಂದ, ಅವಳ ಮನಸ್ಸು ಕನೆಕ್ಟ್ ಆಗಿದ್ದು ಯಾರೊಂದಿಗೆ?ನಿಜವಾಗಿ ಆಕೆಗೆ ಅವನು ಗೌತಮನೇ ಅಥವಾ ಇಂದ್ರನೇ ಎಂಬುದು ಗೊತ್ತಿತ್ತೇ,ಗೊತ್ತಿರಲಿಲ್ಲವೇ?
ಮೂರು ಹೊತ್ತೂ ಮೂಗು ಹಿಡಿದು ಕೂಡುವ. ಹೆಂಡತಿ ಪಕ್ಕದಲ್ಲಿದ್ದರೂ ಕೇವಲ ತಾಳೆ ಗರಿ ತಿರುಗಿಸುವ ಗಂಡ ಮತ್ತು, ದೇವತೆಗಳಿಗೆಲ್ಲ ನಾಯಕನಾದವ ಅಮೃತ ಕುಡಿಯುವ ನಿತ್ಯ ಜವ್ವನಿಗ ಇವರ ನಡುವಿನ ತುಲನೆಯಲ್ಲಿ ತನಗಾಗಿ ಬೇಡಿದವನು ತನಗೂ ಬೇಕೆನ್ನಿಸಿಯೇ. ಏಕಾಗಬಾರದು ಎಂದುಕೊಂಡಳೆ?
ಹಾಗಾದರೆ ಆಕೆಯದು ಅನೈತಿಕ ನಡೆಯೆ?ತನಗೆ ಬೇಕನಿಸಿದ್ದನ್ನ ದಿಟ್ಟತನದಿಂದ ಪಡೆದು ತನ್ನ ದಾರಿಯನ್ನು ತಾನೇ ಆರಿಸಿಕೊಂಡಳೆ?
ತೆಲುಗು ಲೇಖಕಿ "ಓಲ್ಗಾ" ಅವರ ಪುಸ್ತಕದಲ್ಲಿ ಒಂದು ಪ್ರಸಂಗ ಬರುತ್ತದೆ,ಅದರಲ್ಲಿ ಸೀತೆ ಅಹಲ್ಯೆಯರ ಸಂವಾದವಿದೆ, ಸೀತೆ,ಬಂದವನು ಇಂದ್ರ ಎನ್ನುವುದು ನಿನಗೆ ಗೊತ್ತಿರದಿದ್ದರೂ ನೀನು ಗೌತಮನ ಶಾಪಕ್ಕೆ ಗುರಿಯಾಗಬೇಕಾಯಿತು ಅಲ್ಲವೆ ಎನ್ನುತ್ತಾಳೆ,ಆಗ ಅಹಲ್ಯೆ, ಆ ಕನಿಕರವನ್ನೇ ಧಿಕ್ಕರಿಸುವ ದೃಢತೆಯಲ್ಲಿ ‘‘ಆ ರಾತ್ರಿ ಬಂದವನು ಗೌತಮನಲ್ಲ ಎನ್ನುವುದು ಗೊತ್ತಿತ್ತೋ ಗೊತ್ತಿರಲಿಲ್ಲವೋ ಎಂಬುದು ನಿನಗೆ ಗೊತ್ತಾ? ಬೇರೆ ಯಾರಿಗಾದರೂ ಗೊತ್ತಾ? ಎನ್ನುತ್ತಾಳೆ. ಇಲ್ಲಿ ಅಹಲ್ಯೆ ಗಂಡನಲ್ಲದ ವ್ಯಕ್ತಿಯೊಂದಿಗೆ ತನ್ನಿಷ್ಟದಂತೆ ಸುಖಿಸುತ್ತಾಳೆ.
ಈ ಮೂರೂ ಪ್ರಸಂಗಗಳಲ್ಲಿ ನನ್ನನ್ನು ಕಾಡುವ ಬಹುದೊಡ್ಡ ಪ್ರಶ್ನೆ ಎರಡು ಅಂಶಗಳನ್ನು ಕುರಿತಾದ್ದು,ಒಂದು ಮೌಲ್ಯ ಮತ್ತೊಂದು ಅನೈತಿಕತೆ. ಭಾವಲೋಕದಲ್ಲಿ ವಿಹರಿಸಿದ ಇವರು ತಮ್ಮ ದೈಹಿಕ ಮತ್ತು ಮಾನಸಿಕ ಆಕಾಂಕ್ಷೆಗಳ ಪೂರೈಕೆಗೆ ಕಂಡುಕೊಂಡ ದಾರಿಗಳಲ್ಲಿ ನೈತಿಕತೆ ಮತ್ತು ಅನೈತಿಕತೆಯ ಎಳೆಯನ್ನು ಹೇಗೆ ತೆಗೆಯುವುದು?
ಹಲವರು ದೈಹಿಕವಾಗಿ ಪರಸ್ಪರ ಭೇಟಿ ಆಗದಿದ್ದರೂ ಭಾವಲೋಕದಲ್ಲಿ ಕನೆಕ್ಟ್ ಆಗುವ ಅದೆಷ್ಟು ಉದಾಹರಣೆಗಳು ನಮ್ಮಲ್ಲಿಲ್ಲ! ಹೆಂಡತಿಯು ಶಾರುಕ್ ನನ್ನು ಮನಸ್ಸಲ್ಲಿ ಪ್ರೀತಿಸುವ ಮತ್ತು ಗಂಡನು ಮತ್ತಾವುದೋ ಹೀರೋಯಿನ್ಳನ್ನು ಆರಾಧಿಸುವುದನ್ನು ಬಹಳ ಸಹಜವೆಂಬಂತೆ ಒಪ್ಪುವಾಗ ಇದರ ಕುರಿತು ನೈತಿಕತೆ ಮತ್ತು ಅನೈತಿಕತೆಯನ್ನ ಹೇಗೆ ಆರೋಪಿಸ್ತಿರಾ?
ಭೌತಿಕವಾಗಿ ಅನುಭವಿಸಿದ್ದು, ಸಿಕ್ಕಿದ್ದು ಮಾತ್ರ ಮೌಲ್ಯಗಳಾ ! ಭೌತಿಕವಲ್ಲದೇ ಇರುವ ವಿಷಯಗಳು ಮೌಲ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲವೆ?
ಲೈಂಗಿಕತೆ ಮತ್ತು ಸೈಕಾಲಜಿ ಬಹಳ ಹತ್ತಿರದ ಸಂಬಂಧವಿರುವ ವಿಷಯಗಳು,,ಇವುಗಳ ನಡುವೆ ಅತೀ ಸಣ್ಣಗೆರೆಯಿದೆ, ಪೋರ್ನ್ ಒಂದನ್ನು ನೋಡುತ್ತಾ ತೃಪ್ತಿ ಪಟ್ಟುಕೊಳ್ಳುವವರು ಆ ಚಿತ್ರದ ಪಾತ್ರದಾರಿಯ ಜೊತೆ ಕನೆಕ್ಟ್ ಆಗಿರ್ತಾರಾ ಇಲ್ಲವೇ ತಾನು ಬಯಸುವ,ಇಲ್ಲಾ ತಾನು ಪ್ರೀತಿಸುವವರ ಜೊತೆ ಕನೆಕ್ಟ್ ಆಗಿರ್ತಾರಾ? ಪುರಾಣ ನಮ್ಮನ್ನು ಒಳಗೊಳಗೇ ಕಟ್ಟುವುದು ಆ ಕಾಲದಿಂದ ನಡೆದುಕೊಂಡೇ ಬಂದಿದೆ. ಅದರಲ್ಲಿ ಹೆಣ್ಣುಮಕ್ಕಳ ವಿಚಾರ ಮಾತ್ರ ಅಸ್ಪಷ್ಟ. ಅವರುಗಳಲ್ಲಿ ಮೌಲ್ಯ, ಆಧ್ಯಾತ್ಮ ಎಂಬ ಮುಸುಕಿನಡಿ ಲೌಕಿಕ ಚರ್ಚೆ ಮಾಡಿ ಆ ಸಹಜ ಸಂಗತಿಗಳ ಚರ್ಚೆ ನಡೆಸದೇ ಹೋದದ್ದನ್ನು ಮೌಲ್ಯ ಅಂತ ಕರೆಯೋದು ಹೇಗೆ...?
ಹೆಣ್ಣು ಜೀವವೊಂದು ತನ್ನ ಭಾವ ಮತ್ತು ಲೈಂಗಿಕ ಆಕಾಂಕ್ಷೆಗಳಿಗಾಗಿ ತನ್ನನ್ನು ತಾನು ಕನೆಕ್ಟ್ ಮಾಡಿಕೊಳ್ಳುವ ರೀತಿಗಳಿಗೆ ಮೌಲ್ಯವಿದೆಯಲ್ಲವೆ?.
bevarahani1