ಬಾಂಧವ್ಯದ ತಂತುಗಳು ಭಾವನೆಗಳ ತಂಬೂರಿಯೂ ಹೌದು

25 ವರ್ಷಗಳ ಹಿಂದೆ ಅಗಲಿದ ಸೋದರನ ಸಹಪಯಣ ಮರುಕಳಿಸುವ ಕ್ಷಣಗಳಲಿ

ಬಾಂಧವ್ಯದ ತಂತುಗಳು ಭಾವನೆಗಳ ತಂಬೂರಿಯೂ ಹೌದು

 

 

ನಾ ದಿವಾಕರ

    ನಿನ್ನ ನೆನಪಾದಾಗಲೆಲ್ಲಾ ಮನದಾಳದಲ್ಲಿ ಅನಿರ್ವಚನೀಯ ಭಾವ ತಂತುಗಳು ಪುಟಿದೇಳುತ್ತವೆ. ನೆನಪಾಗುವುದು ಎಂದರೆ, ಮರೆತು ಹೋಗಿರುವುದನ್ನು ಸ್ಮರಿಸುವುದು ಎಂದರ್ಥವೇ ? ಅಥವಾ ಬದುಕಿನ ಮರೆಯಲಾಗದ ಪರ್ವವೊಂದು, ಎದೆಯಾಂತರಾಳದಲ್ಲಿ ಎಲ್ಲೋ ಹುದುಗಿದ್ದು, ಮತ್ತೆ ಮತ್ತೆ ಜೀವ ಮಿಡಿತದೊಂದಿಗೆ ಅನುಸಂಧಾನ ನಡೆಸುವುದನ್ನು ಹೀಗೆ ವ್ಯಾಖ್ಯಾನಿಸಬಹುದೇ ? ಹೊಳೆಯುತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ ಕಣೋ, 25 ವರ್ಷಗಳ ಮುನ್ನ ಇದೇ ದಿನಾಂಕದಂದು (13 ಫೆಬ್ರವರಿ 2001), ಮೂರಡಿ ದೂರದಲ್ಲಿ ನಿಂತಾಗಲೂ ಕೇಳಿಸುತ್ತಿದ್ದ ನಿನ್ನ ಎದೆಬಡಿತ ಹಠಾತ್ತನೆ ನಿಂತುಹೋದಾಗ, ನನ್ನ ಬದುಕಿನ ಒಂದು ಪರ್ವ ಮುಕ್ತಾಯವಾಗಿತ್ತು. ಒಂದು ವರ್ಷದ ಅಂತರದಲ್ಲಿ ಜನಿಸಿದರೂ, ಭೌತಿಕವಾಗಿ ಜಂಟಿಯಾಗಿಯೇ ಸವೆಸಿದ ಬದುಕಿನ ಹಾದಿಯ ನೆನಪಾದಾಗ, ಆ ಮುಗಿದ ಪರ್ವ ಸಂಘರ್ಷಗಳ, ಸಂಕಟಗಳ, ಹರ್ಷೋಲ್ಲಾಸಗಳ ಹಾಗೂ ಸುಂದರ ಕ್ಷಣಗಳ ಒಂದು ಯುಗ ಎಂದೇ ಭಾಸವಾಗುತ್ತದೆ.

   ಹೌದು ನಾಗಿ (ನಾಗರಾಜ) . ಆ 40 ವರ್ಷಗಳ ಪಯಣದಲ್ಲಿ ನಾವಿಬ್ಬರೂ ಎಲ್ಲವನ್ನೂ ಕಂಡಿದ್ದೆವು ಚಿಕ್ಕಂದಿನಲ್ಲಿ ಒಂದು ವರ್ಷದ ಅಂತರದಲ್ಲಿ ಶಾಲೆಗೆ ಹೋಗುತ್ತಿದ್ದಾಗ ನಮ್ಮಿಬ್ಬರನ್ನು ಲವ-ಕುಶ, ರಾಮ-ಲಕ್ಷ್ಮಣ ಎಂದೆಲ್ಲಾ ಕರೆಯುತ್ತಿದ್ದುದು ನೆನಪಿದೆಯೇ ? ಶಾಲೆಯಲ್ಲಿ ಯೂನಿಫಾರ್ಮ್‌ ಇಲ್ಲದಿದ್ದರೂ ಮನೆಯಲ್ಲಿ ನಮ್ಮಿಬ್ಬರಿಗೆ ಹೊಲಿಸುತ್ತಿದ್ದುದು ಒಂದೇ ರೀತಿಯ ಬಟ್ಟೆ. ಹುಟ್ಟಿನಿಂದಲೇ ಹೃದಯದ ಸಮಸ್ಯೆ ಇದ್ದ ನಿನಗೆ ನಾನು ಸದಾ ಅಂಗರಕ್ಷಕನಾಗಿಯೇ ಇರುತ್ತಿದ್ದೆ. ಕ್ರಿಕೆಟ್‌ ಆಡುವಾಗ ನಿನಗೆ ಓಡಲಾಗುತ್ತಿರಲಿಲ್ಲ, ಬ್ಯಾಟ್‌ ಮಾಡುವಾಗ ನಿನಗೆ ರನ್ನರ್‌ ಆಗಿ, ಫೀಲ್ಡ್‌ ಮಾಡುವಾಗ ನಿನ್ನ ಬದಲು ನಾನೇ ಚೆಂಡಿನ ಹಿಂದೆ ಓಡುವುದು ಹೀಗೆ ಸಾಗಿತ್ತು ಆ ಬಾಲ್ಯದ ದಿನಗಳು.

ಬಾಲ್ಯದ ಪ್ರಸಂಗಗಳ ನೆನಪು

    ಒಂದು ಪ್ರಸಂಗ ನೆನಪಿದೆಯೇ ನಾಗಿ, ನಾನು ಎರಡನೆಯ ಇಯತ್ತೆಯಲ್ಲಿದ್ದೆ, ನೀನು ಮೂರರಲ್ಲಿ. ಸಹಪಾಠಿಯೊಬ್ಬ (ಈಗಲೂ ಸೌಖ್ಯವಾಗಿದ್ದಾನೆ) ನಿನ್ನ ಬಲಗೈನ ಮುಂಗೈಗೆ ಅಂಟಿಕೊಂಡಿದ್ದ ಒಂದಿಂಚಿನ ಆರನೆ ಬೆರಳಿಗೆ ಬ್ಲೇಡ್‌ ಹಾಕಿಬಿಟ್ಟಿದ್ದ. ಹುಡುಗಾಟದ ವಯಸ್ಸಲ್ಲವೇ ? ನಾನು ಸಿಟ್ಟಿನಿಂದ ಅವನ ಕಪಾಳಕ್ಕೆ ಹೊಡೆದಿದ್ದೆ. ಹೆಡ್‌ ಮಾಸ್ಟರ್‌ ಬಾಲಯ್ಯ, ಸರಸ್ವತಮ್ಮ ಮೇಡಂ ಮೂವರನ್ನೂ ಕರೆಸಿ, ನನಗೆ ಸಹಪಾಠಿಗೆ ಚೆನ್ನಾಗಿ ಬೈದರು. ಅವನು ಮಾಡಿದ ತಪ್ಪಿಗೆ, ನಾನು ಹೊಡೆದಿದ್ದಕ್ಕೆ. ಅವನೊಡನೆ ನಮ್ಮ ಗೆಳೆತನ ಎಷ್ಟು ಗಾಢವಾಗಿತ್ತು. ವಿದ್ಯಾಭ್ಯಾಸ ಮುಗಿದ ನಂತರವೂ ಸಹ. ನಿನಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನನಗಿತ್ತು. ಅದು ಕೊನೆಯವರೆಗೂ ಇರಬೇಕಿತ್ತು. ಆದರೆ ಜೀವನದ ಸಂಕಟಗಳು ಮೂಡಿಸಿದ ಬಿರುಕು ಕೊನೆಯ ಐದಾರು ವರ್ಷಗಳನ್ನು ಕಸಿದುಕೊಂಡಿತ್ತು. ಇರಲಿ ಬದುಕೆಂದರೆ ಹೀಗೇ ಅಲ್ಲವೇ ನಾಗಿ.

    ಒಂದೇ ಶಾಲೆ ಒಂದೇ ತರಹದ ಟೆರಿಕಾಟ್‌ ಬಟ್ಟೆ ನಮ್ಮಿಬ್ಬರ ಟ್ರೇಡ್‌ ಮಾರ್ಕ್‌ ಆಗಿತ್ತು. ಜಗಳ ಆಡಿದ್ದು ಕಡಿಮೆ ಯಾಕೆ ಗೊತ್ತಾ, ಅಮ್ಮ ಸದಾ ಹೇಳುತ್ತಿದ್ದಳು, ಅವನು ವೀಕು (Weak) ನೀನೇ ಹೊಂದಿಕೊಂಡು ಹೋಗು ಎಂದು. ಆ ವಯಸ್ಸಿನಲ್ಲಿ ನಾನು ದೂರ್ವಾಸನ ಅಪರಾವತಾರವಾಗಿದ್ದೆ. ಮನೆಯಲ್ಲಿ ಕರೆಯುತ್ತಿದ್ದುದೂ ದೂರ್ವಾಸ ಎಂದೇ ಅಲ್ಲವೇ ? ನನ್ನಿಂದ ಏಟು ತಿನ್ನದೆ ಇದ್ದವ ನೀನೊಬ್ಬನೇ. ಇರಲಿ ಈ ಹೊಂದಿಕೊಂಡು ಹೋಗುವ ಗುಣ ನನ್ನ ಬದುಕನ್ನು ಎಲ್ಲೋ ತಂದು ನಿಲ್ಲಿಸಿದ್ದು ಈಗ ಚರಿತ್ರೆ. ಅದಕ್ಕೆ ನೀನೂ ಒಂದು ರೀತಿಯಲ್ಲಿ ಕಾರಣ ಮತ್ತು ಎಲ್ಲ ರೀತಿಯ ಸಾಕ್ಷಿ. ನೆನಪು ಅಲೆಅಲೆಯಾಗಿ ಹರಿಯಲಾರಂಭಿಸಿದಾಗ, ಕೆಲವು ಅಹಿತಕರ ಸತ್ಯಗಳು ಧುತ್ತನೆ ಏಳುತ್ತವೆ. ಇದೂ ಹಾಗೆಯೇ. ಇರಲಿ, ನಿನ್ನನ್ನು ಕಾರಣ ಎಂದೆನಲ್ಲವೇ ಆ ನೋವು ನನ್ನಿಂದ ಈ ಮಾತುಗಳನ್ನು ಹೊರಡಿಸಿಬಿಡುತ್ತವೆ. ತಪ್ಪು ಒಪ್ಪುಗಳನ್ನು ನಿಷ್ಕರ್ಷೆ ಮಾಡುವುದಾದರೂ ಹೇಗೆ ? ನೀನಿಲ್ಲದಿರುವಾಗ ಅಲ್ಲವೇ ನಾಗಿ.

ಸುಂದರ ಕ್ಷಣಗಳ ಸವಿನೆನಪು

     ನಿನ್ನ ನೆನಪು ಎಂದೆನಲ್ಲವೇ ? ಆ ನೆನಪುಗಳಲ್ಲಿರುವ ಸೌಂದರ್ಯ ಮಾತ್ರ ಬಹುಶಃ ಇನ್ನಾರ ನೆನಪಲ್ಲೂ ಇರಲಾರದು. ಏಕೆಂದರೆ ಮಾತು ಮಾತಿಗೆ ನಿನ್ನಿಂದ ಹೊರಡುತ್ತಿದ್ದ ಹಾಸ್ಯ ಚಟಾಕಿಗಳು. ನಿನ್ನ ಮಾತಿನಲ್ಲಿ ಹಾಸ್ಯ ಇತ್ತು ಎನ್ನುವುದಕ್ಕಿಂತಲೂ, ಹಾಸ್ಯವೇ ನಿನ್ನ ಮಾತಾಗಿತ್ತು ಎನ್ನುವುದು ಸೂಕ್ತ. ಶಾಲಾ ದಿನಗಳಿಂದ ಬ್ಯಾಂಕಿನ ದಿನಗಳವರೆಗೂ ವಿಸ್ತರಿಸಿದ ಆ ಹಾಸ್ಯಲೋಕ ಬಹುಶಃ ಒಂದು ಗ್ರಂಥವನ್ನೇ ಆಕ್ರಮಿಸುತ್ತದೆ. ಸಾವಿರಲಿ, ನೋವಿರಲಿ, ನಲಿವಿರಲಿ ನಿನ್ನ ಮಾತುಗಳ ವೈಖರಿ ಬದಲಾಗುತ್ತಿರಲಿಲ್ಲ. ಕೆಲವೊಮ್ಮೆ ಮತ್ತೊಬ್ಬರಿಗೆ ನೋವಾಗಬಹುದು ಎಂದೂ ಯೋಚಿಸದೆ ಮಾತನಾಡಿಬಿಡುತ್ತಿದ್ದೆ. ನಿನ್ನ ಗುಣ ತಿಳಿದವರು ಬೇಸರಿಸಿಕೊಳ್ಳುತ್ತಿರಲಿಲ್ಲ. ಅಮ್ಮ ಇದ್ದಾಗ, ʼ ಇವನು ಹೀಗೇ ಹಿಂದೆಮುಂದೆ ನೋಡದೆ ಮಾತಾಡ್ತಾನೆ ʼ ಎಂದು ಸಮಜಾಯಿಷಿ ನೀಡಿ ಸಮಾಧಾನ ಮಾಡುತ್ತಿದ್ದರು.

    ಆದರೆ ನಿನ್ನ ಹಾಸ್ಯಪ್ರವೃತ್ತಿಯಿಂದ ಮೂಡುತ್ತಿದ್ದ ಆ ಮಾತುಗಳು ಆ ಕ್ಷಣದಲ್ಲೇ ಹುಟ್ಟಿಕೊಳ್ಳುತ್ತಿದ್ದವು. ಕಟ್ಟಿ ಹೇಳುವ ಜೋಕ್‌ಗಳನ್ನು ನೀನು ಹೇಳಿರುವ ನೆನಪು ನನಗಂತೂ ಇಲ್ಲ. ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ನಿನ್ನ ಮಾತುಗಳಿಂದ ಒಮ್ಮೆ ಅಮ್ಮ ಸೋಫಾದಲ್ಲಿ ಮಲಗಿದ್ದವರು ಧೊಪ್ಪನೆ ನೆಲಕ್ಕೆ ಬಿದ್ದಿದ್ದು ನೆನಪಿದೆ. ದೊಡ್ಡಣ್ಣ ಮಂಜು ಒಂದು ಪ್ರಸಂಗದಲ್ಲಿ ಸೋಫಾದಲ್ಲಿ ಕುಳಿತಿದ್ದವನು ನಗು ತಡೆಯಲಾರದೆ ಬಿದ್ದಿದ್ದ ನೆನಪಿದೆ. ಇಂತಹ ಹಲವಾರು ಪ್ರಸಂಗಗಳು ಮನದಾಳದಲ್ಲಿ ಅಚ್ಚಾಗಿವೆ. ಎಂದೋ ಒಂದು ದಿನ ಅಕ್ಷರ ರೂಪಕ್ಕೆ ತರುತ್ತೇನೆ ನಾಗಿ. ಈಗೇಕೋ ಅವೆಲ್ಲಾ ಬೇಡ ಎನಿಸುತ್ತಿದೆ. ಕಾರಣ ಗೊತ್ತಾ, ನೀನು ಅಗಲಿ ಕಾಲು ಶತಮಾನ ಕಳೆದಿದೆ. ನನ್ನ 65 ವಸಂತಗಳ ಪಯಣದಲ್ಲಿ ನೀನಿಲ್ಲದ ಋತುಗಳು 25. ಎಷ್ಟು ದುಬಾರಿ ಎನಿಸುವುದಿಲ್ಲವೇ ?

ಸಂಕಟಗಳ ಹಾದಿಯಲ್ಲಿ

    ನಮ್ಮಿಬ್ಬರ ನಡುವಿನ ಸೋದರ ಬಾಂಧವ್ಯಕ್ಕೆ ಸವಾಲಾಗಿ ನಿಂತಿದ್ದು ಆ ಏಳೆಂಟು ವರ್ಷಗಳ ಅಜ್ಞಾತ ಪರ್ವ. ಅಣ್ಣ (ಅಂದರೆ ಅಪ್ಪ) 1977ರಲ್ಲಿ ಹಠಾತ್ತನೆ ನಿರ್ಗಮಿಸಿದ ಮೇಲೆ, ಅದಕ್ಕೂ ಮುನ್ನಾದಿನಗಳಲ್ಲೂ ಸಹ, ನಾವು ಅನುಭವಿಸಿದ ಯಾತನೆ, ಅಪಮಾನ, ಹಸಿವು, ಅನ್ನಾಹಾರಗಳಿಲ್ಲದ ದಿನಗಳು , ಈಗ ನನಗೆ ನಾನೇ ಹೇಳಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದೇನೆ ನಾಗಿ. ನಳಿನಿ (ಸೋದರಿ) ಬಿಟ್ಟರೆ ಇನ್ನಾರೂ ಈ ನೋವಿನ ಕಥನ ಹಂಚಿಕೊಳ್ಳಲು ಇಲ್ಲ. ಅಮ್ಮನನ್ನೂ ಸೇರಿದಂತೆ ನಮ್ಮ ಹಸಿವನ್ನೂ ಮರೆಸುತ್ತಿದ್ದ ಒಂದು ಸಂಗತಿ ಎಂದರೆ ಪಕ್ಕದ ಮನೆಯ ರೆಡ್ಡಿ ಕುಟುಂಬದ ಎರಡು ವರ್ಷದ ಮಗು ರೋಷನ್‌(ಈಗ ಭಾರತೀಯ ಸೇನೆಯಲ್ಲಿದ್ದಾನೆ) ಮತ್ತು ನಿನ್ನ ಹಾಸ್ಯ ಚಟಾಕಿಗಳು. ನಿನಗೆ ವರದಾನವಾಗಿದ್ದ ಆ ಹಾಸ್ಯದ ಕಲೆ ನಮಗೂ ಒಂದು ಹಂತದಲ್ಲಿ ನೋವು ಮರೆಸುವ ಕವಚವಾಗಿತ್ತು.

    ದುರದೃಷ್ಟವೋ ಬದುಕಿನ ಮಹತ್ತರ ತಿರುವಿನ ಲಕ್ಷಣವೋ ನಮ್ಮ ದುರ್ದಿನಗಳು ಆರಂಭವಾದದ್ದೂ ಈ ನಗುವಿನ ಅಲೆಗಳ ನಡುವೆ. ಏಕಾಏಕಿ ನಮ್ಮಿಬ್ಬರನ್ನು ಹೊಸಕೋಟೆಯ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸಕ್ಕೆ ಹಚ್ಚಿ ಇಬ್ಬರು ಅಕ್ಕಂದಿರು ಅಮ್ಮನನ್ನೂ ಸೇರಿದಂತೆ ಕುಟುಂಬವನ್ನು ಅಲ್ಲಿಗೆ ವರ್ಗಾಯಿಸಿದ ರವಿಯ (ಅಣ್ಣನ) ತೀರ್ಮಾನ ಇಂದಿಗೂ ಜಿಜ್ಞಾಸೆಯಾಗೇ ಉಳಿದಿದೆ. ನಾನು ಅಂತಿಮ ಪದವಿ ಓದುತ್ತಿದ್ದೆ. ಸಹಜವಾಗಿ ಕಾಲೇಜು ಹಾಜರಾತಿ ಇಲ್ಲವಾಗಿಹೋಯಿತು. ಇರಲಿ, ಹೊಸಕೋಟೆಯಲ್ಲಾದದ್ದು ಏನು , ಆರೋಗ್ಯದ ದೃಷ್ಟಿಯಿಂದ ನಿನ್ನಿಂದ ಸಾಧ್ಯವಾಗದ ಕೆಲಸಗಳನ್ನು ನಾನು ಮಾಡುವುದು ಅನಿವಾರ್ಯವಾಯಿತು. ಪೆಟ್ರೋಲ್‌ ಬಂಕ್‌ನಲ್ಲಿ ನೈಟ್‌ ಡ್ಯೂಟಿ, ಸೈಕಲ್‌ನಲ್ಲಿ ನಿನ್ನನ್ನು ಮೂರ್ನಾಲ್ಕು ಕಿಲೋಮೀಟರ್‌ ದೂರದವರೆಗೆ ಬಿಟ್ಟುಬರುವುದು, ಕರೆತರುವುದು. ಇರಲಿ ಬಿಡು ಬದುಕು ಕಟ್ಟಿಕೊಳ್ಳಲು ಈ ಇಟ್ಟಿಗೆಗಳೇ ನೆರವಾಗತ್ತಿದ್ದವೇನೋ ?

    ಯಾವುದೋ ಒಂದು ದುರದೃಷ್ಟಕರ ಗಳಿಗೆಯಲ್ಲಿ ನೀನು ನಿರ್ವಹಿಸಿದ ಒಂದು ದಿನದ ರಾತ್ರಿಯ ಪಾಳಿ, ಮರುದಿನ ಬ್ಯಾಂಕಿಗೆ ಕಟ್ಟಬೇಕಾದ ದುಡ್ಡನ್ನು ಪರಿಚಿತ ವ್ಯಕ್ತಿಯ ಕೈಗೆ ಕೊಟ್ಟು ಕಳೆದುಕೊಂಡಿದ್ದು, ಈ ಕೆಲವೇ ಇಟ್ಟಿಗೆಗಳನ್ನೂ ನುಚ್ಚುನೂರು ಮಾಡಿತ್ತು. ಅವನು ಪರಾರಿಯಾದ, 2500 ರೂಗಳು ನಮ್ಮಿಬ್ಬರ ಕೆಲಸಕ್ಕೆ ಸಂಚಕಾರ ತಂದಿತ್ತು. ಸಂಬಳವಿಲ್ಲದೆ ತಿಂಗಳಿಗೂ ಹೆಚ್ಚು ಕಾಲ ದುಡಿದು, ಹೊರಬಿದ್ದಾಗ ಪ್ರಪಂಚ ಅಯೋಮಯವಾಗಿತ್ತು. ಅವನಿಗೆ ಆ ಜವಾಬ್ದಾರಿ ವಹಿಸಿದ್ದಕ್ಕೆ  ಕಾರಣ ನಿನಗೆ ಬ್ಯಾಂಕಿಗೆ ನಡೆದು ಹೋಗುವ ಶಕ್ತಿ ಇರಲಿಲ್ಲ. ಕಟು ವಾಸ್ತವಗಳು ಹೇಗೆ ಬದುಕಿನ ತಿರುವುಗಳಿಗೆ ಸೇತುವೆಯಾಗುತ್ತವೆ ಅಲ್ಲವೇ ? 1981ರ ಈ ಪ್ರಸಂಗ ಅಂತಹ ಮುರಿದ ಸೇತುವೆಯನ್ನು ಸೃಷ್ಟಿಸಿತ್ತು. ಆ ಸೇತುವೆಯ ಮೇಲೆ ನಡೆಯುವ ಶಕ್ತಿಯೂ ಇಲ್ಲದೆ, ಬಿದ್ದರೆ ಏಳುವ ದೈಹಿಕ ಶಕ್ತಿಯೂ ಇಲ್ಲದೆ ನಾವು ನಡೆದ ಹಾದಿಯನ್ನು ಈಗ ಒಬ್ಬನೇ ಕುಳಿತು ನೆನಪು ಮಾಡಿಕೊಳ್ಳುತ್ತಿರುತ್ತೇನೆ. (ಭಾವಹಂಚಿಕೆಗೆ ಯಾರಿದ್ದಾರೆ ?)

ನೋವು ಆತಂಕಗಳ ಕವಲುಹಾದಿ

    ಆ ವಿಷಮ ಸಂದರ್ಭದಲ್ಲೂ ನಿನ್ನಿಂದ ಬಂದ ಪ್ರತಿಕ್ರಿಯೆ “ ದುಡ್ಡು ತೊಗೊಂಡು ಓಡಿ ಹೋದವನು ಹೇಳಿ ಹೋಗಬಾರದಿತ್ತಾ,,,,” ಎಂದು. ಆಗಲೂ ನಾನು ಅಮ್ಮ ನಗುತ್ತಲೇ ಕಣ್ಣೊರೆಸಿಕೊಂಡಿದ್ದೆವು. ಆಗ ಹೊಸಕೋಟೆಯಿಂದ ಕೆಆರ್‌ ಪುರಂವರೆಗೆ ಎಷ್ಟು ಸಲ ಅಂಡಲೆದಿದ್ದೇವೆ ನೆನಪಿದೆಯೇ? ಸಿಟಿ ಬಸ್‌ನಲ್ಲಿ ಹೋಗಲು ದುಡ್ಡಿರಲಿಲ್ಲ. ಇದ್ದಷ್ಟು ಚಿಲ್ಲರೆ ಕಾಸಿಗೆ ಆದಷ್ಟು ದೂರ ಹೋಗಿ, ಇಳಿದು ಅಲ್ಲಿಂದ ನಡೆಯುವುದು. ಎಷ್ಟು ಕಿಲೋಮೀಟರ್‌ ನಡೆದಿದ್ದೇವೆ, ಅಬ್ಬಾ !!!! ನನಗೇ ಅಚ್ಚರಿ. ಖಾಲಿ ಹೊಟ್ಟೆ, ಅನಿಶ್ಚಿತ ಸೂರು, ಬಹುತೇಕ ನಿರ್ಗತಿಕ ಅವಸ್ಥೆ ಆದರೆ ಬೆಟ್ಟದಷ್ಟು ಜವಾಬ್ದಾರಿ. ಸ್ವಂತ ಬದುಕು ಅಮ್ಮ ಮತ್ತು ಸೋದರಿ. ಉಳಿದವರೆಲ್ಲಾ ಪಲಾಯನಗೈದವರೇ. ಹೇಗಿದ್ದೀರಿ ಎಂದು ವಿಚಾರಿಸದ ನೆಂಟರಿಷ್ಟರು. ದೊಡ್ಡಕ್ಕ ಒಬ್ಬಳೇ ಗತಿ. ಅವಳ ಬಳಿಗೇ ಹೋಗಲು ಅಡ್ಡಿಯಾಗುತ್ತಿದ್ದ ಸ್ವಾಭಿಮಾನ. ಎಂತಹ ದಿನಗಳು ಅಲ್ಲವೇ ನಾಗಿ ?

   ಆ ದಿನಗಳಲ್ಲೇ ಅಲ್ಲವೇ ನಾವು ಬೀದಿಗೆ ಬಿದ್ದು ದೊಡ್ಡಕ್ಕನ ಆಸರೆಗೆ ಒಳಗಾಗಿದ್ದು. ನಾವು ನಾಲ್ಕು ಜನ ಅವರಿಗೆ ಹೊರೆಯಾಗುತ್ತೇವೆ ಎಂಬ ಆಲೋಚನೆ ಸಹ ನಮಗೆ ಬರಲಿಲ್ಲ. ಇದ್ದುದು ಒಂದೇ ಸೂರು. ಆದರೆ ಅಲ್ಲಿ ನಡೆದದ್ದೇ ಬೇರೆ. ನಾನು ಅಂತಿಮ ಪರೀಕ್ಷೆ ಮುಗಿಸಿ ಬರುವಷ್ಟರಲ್ಲಿ (1982 ಮಾರ್ಚ್‌ ) ಬಹುಶಃ ಅಲ್ಲಿಂದಲೂ ನಿರ್ಗಮಿಸುವ ಗಳಿಗೆ ಎದುರಾಗಿತ್ತು. ಉದ್ಯೋಗವೂ ಇಲ್ಲ ಕೆಲಸ ಹುಡುಕಲು ಚಿಕ್ಕಾಸೂ ಇಲ್ಲ, ಯಾರಿಗಾದರೂ ನಾಲ್ಕು ಜೀವಗಳು ಹೊರೆಯೇ ಅಲ್ಲವೇ ? ಹೇಗೋ ಭಾವನ ಸಹಾಯದಿಂದ ಕೈವಾರಕ್ಕೆ ಹೋದೆವು, ಅದೇ ವೇಳೆ ನಿನಗೆ ಬೆಂಗಳೂರಿನ ಪೀಣ್ಯದಲ್ಲಿ ಕೆಲಸ ಸಿಕ್ಕಿತು. ನನಗೆ ಅಲ್ಲಿನ ಕೋಳಿಫಾರಂನಲ್ಲಿ ಕೆಲಸ ಸಿಕ್ಕಿತು. ಹುಟ್ಟು ನತದೃಷ್ಟರಲ್ಲವೇ ಎರಡೂ ಕೆಲಸ ಒಟ್ಟಿಗೆ ಹೋಯಿತು. ಬೆಂಗಳೂರಿನಿಂದ ಧಾವಿಸಿದ ನಿನ್ನ ಮುಖದಲ್ಲಿ ಕಂಡ ಆತಂಕ, ಭಯ, ಜಿಗುಪ್ಸೆ ಇನ್ನೂ ನೆನಪಿದೆ ನಾಗಿ.

    ಮುಂದೇನು ? ಈ ಪ್ರಶ್ನೆಗೆ ನಮ್ಮಿಬ್ಬರಿಗೂ ನಾವೇ ಉತ್ತರ. ಒಂದು ದಿನ ಕೈವಾರದ ಬೆಟ್ಟದ ಮೇಲೆ ಕುಳಿತು ಮಾತನಾಡುತ್ತಾ ಸಂಜೆಯವರೆಗೂ ಮನೆಗೆ ಹೋಗಲಿಲ್ಲ. ಅಮ್ಮ ಗಾಬರಿಯಾಗಿ ಊರೆಲ್ಲಾ ಹುಡುಕಿಸಿದ್ದರು. ಆಗ ನೀನು ಬೆಟ್ಟ ಹತ್ತಿದ್ದಾದರೂ ಹೇಗೆ ಎಂದು ಇಂದಿಗೂ ಅಚ್ಚರಿಯಾಗುತ್ತದೆ. ನಿನ್ನಿಂದ ಹೇಗೆ ಸಾಧ್ಯವಾಯಿತು ? ಇಬ್ಬರಿಗೂ ಕೆಲಸ ಇಲ್ಲದ ವಿಷಯ ಅಮ್ಮನಿಗೆ ತಿಳಿಸಿರಲಿಲ್ಲ. ಮತ್ತೊಂದು ದಿನ ಬೆಳಿಗ್ಗೆ ತಿಂಡಿ ತಿಂದು ಇಬ್ಬರೂ ನಡೆಯುತ್ತಾ ಹೊರಟೆವು. ಯಾವ ದಾರಿ ಈಗಲೂ ಗೊತ್ತಿಲ್ಲ, ಕಾಲ್ನಡಿಗೆ, ಕಾಲು ದಾರಿ, ಕಾಲುಗಳಲ್ಲಿ ಇನ್ನೂ ಉಳಿದಿದ್ದ ಅಲ್ಪಸ್ವಲ್ಪ ಶಕ್ತಿ. ನಡೆದೆವು, ನಡೆದೆವು ನಡೆದೇ ನಡೆದೆವು ಬಹುಶಃ ಎರಡು ಗಂಟೆಗಳ ಕಾಲ. ಕೊನೆಗೆ ಯಾವುದೋ ಹಳ್ಳಿ ತಲುಪಿದೆವು. ಅಚ್ಚರಿಯೆಂದರೆ ಅದು ಚೀಮಂಗಲ, ಅಣ್ಣನ (ಅಪ್ಪನ) ಸ್ವಂತ ಊರು, ದೊಡ್ಡಪ್ಪ ಇದ್ದ ಊರು. ಅವರ ಮಗ ಹರಿ ಹೇಳಿದಾಗಲೇ ತಿಳಿದಿದ್ದು ನಾವು ಎಂಟು ಕಿಲೋಮೀಟರ್‌ಗೂ ಹೆಚ್ಚು ನಡೆದಿದ್ದೆವು.

      ನಿನ್ನಿಂದ ಅಷ್ಟು ದೂರ ನಡೆಯಲು ಹೇಗೆ ಸಾಧ್ಯವಾಯಿತು ? ಇಂದಿಗೂ ಉತ್ತರ ಕಾಣದ ಜಿಜ್ಞಾಸೆ. ವಾಪಸ್‌ ಬರುವಾಗ ಹರಿ ನಮ್ಮ ಬಸ್‌ ಚಾರ್ಜ್‌ಗೆ ದುಡ್ಡುಕೊಟ್ಟು ಕೈವಾರಕ್ಕೆ ಕಳಿಸಿದ್ದ. ಸದ್ಯಕ್ಕೆ ದೊಡ್ಡಮ್ಮನ ಮನೆ ಊಟ ಹೊಟ್ಟೆ ತುಂಬಿಸಿತ್ತು. ಆ ದಾರಿಯುದ್ದಕ್ಕೂ ನಾವು ಮಾತನಾಡಿದ್ದು , ಅನಿಶ್ಚಿತ ನಾಳೆಗಳ ಬಗ್ಗೆ ಮಾತ್ರ. ಏನು ಮಾಡುವುದು ? ಚಿತ್ತ ಕೆಡಿಸುವ ಈ ಪ್ರಶ್ನೆಗೆ ಉತ್ತರವೇ ಇರಲಿಲ್ಲ. ನಮ್ಮ ಆತಂಕದ ಮುಖ ನೋಡಿಯೇ ಸೂಕ್ಷ್ಮಗ್ರಾಹಿ ಅಮ್ಮನಿಗೆ ಸತ್ಯ ತಿಳಿದುಹೋಗಿತ್ತು. ಆನಂತರದ ದಿನಗಳಲ್ಲೇ ಅಲ್ಲವೇ ಇಬ್ಬರೂ ಬ್ಯಾಂಕ್‌ ಪರೀಕ್ಷೆ ಬರೆದಿದ್ದು, ಒಂದು ಸೋಪ್‌ ತಯಾರಿಕೆಯ ಕೊಠಡಿಯಲ್ಲಿ ತಂಗಿದ್ದು, ಉಪವಾಸದ ವನವಾಸವನ್ನು ಅನುಭವಿಸಿದ್ದು,,,,,,,.ಓಹ್‌ ಎಷ್ಟೆಲ್ಲಾ ಸಂಕಟಗಳು. ಅಲ್ಲಿನ ಒಂದು ಪ್ರಸಂಗವನ್ನು ನೆನಪಿಸಲೇಬೇಕು.

ಅಜ್ಞಾತ ವಾಸದ ನೆನಪುಗಳು

    ಸೋಪು ತಯಾರಿಸುವ ಸಣ್ಣ ಕೊಠಡಿಯಲ್ಲಿ ನಮಗೆ ಮಲಗುವ ಅವಕಾಶ ಮಾತ್ರ. ಒಂದು ದಿನ ಕೈಯ್ಯಲ್ಲಿ ಚಿಕ್ಕಾಸೂ ಇಲ್ಲದೆ, ಇದ್ದ ಎರಡು ರೂಪಾಯಿಯಲ್ಲಿ ಬನ್‌ ತಿಂದು, ನಾಲ್ಕೈದು ಕಿಲೋಮೀಟರ್‌ ನಡೆದು ತಂಗುದಾಣಕ್ಕೆ ತಲುಪಿದ್ದೆವು. ಅಲ್ಲಿದ್ದ ಹರಕಲು ಚಾಪೆ, ರಟ್ಟಿನ ಬಾಕ್ಸ್‌ಗಳನ್ನು ಬಿಡಿಸಿ ಹಾಕಿದ ಪಲ್ಲಂಗವೇ ನಮ್ಮ ನಿದ್ರೆಗೆ ಆಸರೆ. ಪಕ್ಕದಲ್ಲೇ ಸೋಪು ತಯಾರಿಕೆಯ  ದೊಡ್ಡ ಬಾಣಲೆ , ಬೂದಿ ಕೆಂಡ ತುಂಬಿದ ಒಲೆ ಇತರ ವಸ್ತುಗಳು. ಎಲ್ಲಿಂದಲೋ ಒಳಗೆ ನುಗ್ಗಿದ ನಾಯಿಮರಿಯೊಂದು ತಿನ್ನಲು ಏನನ್ನಾದರೂ ಹುಡುಕುತ್ತಿತ್ತು. ಪಾಪ ಅದಕ್ಕೇನು ಗೊತ್ತು ನಮ್ಮ ಅವಸ್ಥೆಯೂ ಅದೇ ಆಗಿತ್ತು. ಬಹುಶಃ ಹಸಿದಿದ್ದ ಆ ನಾಯಿಮರಿ ಚೆಲ್ಲಿದ್ದ ಬೂದಿಯನ್ನು ಕೆದಕುತ್ತಾ ಏನನ್ನೊ ಹುಡುಕುತ್ತಿತ್ತು. ಹಠಾತ್ತನೆ ಬಿದ್ದು ಸತ್ತುಹೋಯಿತು. ಎಳೆದುಕೊಂಡುಹೋಗಿ ಹೊರ ಹಾಕಿದ್ದೂ ಆಯಿತು. ಆಗ ನಿನ್ನಿಂದ ಬಂದ ಮಾತುಗಳು : “ ದಿವಿ , ಯಾವತ್ತೋ ಒಂದು ದಿನ ನಮಗೂ ಇದೇ ಗತಿ ಬರುತ್ತೆ ಅಲ್ವೇನೋ,,,,,,”. ತಮಾಷೆಯೋ, ಹಾಸ್ಯವೋ, ನಿರಾಸೆಯೋ ಆ ಮಾತುಗಳು ನನ್ನನ್ನು ನಗಿಸಿತ್ತು, ಆದರೆ ಒಂದೆರಡು ಹನಿಗಳೊಂದಿಗೆ.

    ಈ ಹಂತದವರೆಗೂ ನಿನಗಾಗಲೀ ನನಗಾಗಲೀ ನಿನ್ನ ಸಂಭಾವ್ಯ ಅಂತ್ಯದ ವಯಸ್ಸು ಖಚಿತವಾಗಿ ತಿಳಿದಿರಲಿಲ್ಲ. ಆದರೆ ಹೃದಯದಲ್ಲಿ ರಂಧ್ರ ಇದ್ದುದು ತಿಳಿದಿತ್ತು. ಆದಾಗ್ಯೂ ಸಂಕಟಗಳ ಪಯಣದಲ್ಲಿ ನನಗೆ ಹೆಗಲಾಗಿದ್ದೆ. ಬಹುಶಃ ಆ ಸಮಯದಲ್ಲಿ ನಿನ್ನ ಸಂಗ ಇಲ್ಲದೆ ಹೋಗಿದ್ದರೆ ನಾನು ನಿನಗಿಂತಲೂ ಮುಂಚೆಯೇ ಇಲ್ಲವಾಗುತ್ತಿದ್ದೆ. ಆ ಬಾಂಧವ್ಯ ನೀಡಿದ ಸಾಂತ್ವನ ಮತ್ತು ಆತ್ಮಸ್ಥೈರ್ಯವನ್ನು ಹೇಗೆ ಮರೆಯಲಿ ನಾಗಿ. ಬ್ಯಾಂಕ್‌ ಸೇರುವ ವೇಳೆಗೆ ದೃಢಪಟ್ಟ ನಿನ್ನ ಬದುಕಿನ ಕಟು ಸತ್ಯ ಮತ್ತು ತದನಂತರವೂ ನಮ್ಮಿಬ್ಬರ ಸಾಂಗತ್ಯ ಬೇರೆಯೇ ಪರ್ವದ ಕತೆ. ಅಂತಿಮ ಕ್ಷಣಗಳ ನಿರೀಕ್ಷೆಯಲ್ಲಿ ಪಯಣ ಮುಂದುವರೆಸುವುದು ಎಷ್ಟು ಕಷ್ಟ ಎಂಬ ಅರಿವು ಆ ಕಟುಸತ್ಯವನ್ನು ಅರಿತೂ ಬದುಕುವವರಿಗೆ ಮಾತ್ರ ತಿಳಿದಿರುತ್ತದೆ. ನಿನ್ನೊಳಗಿನ ಆ ವೇದನೆ ಅಥವಾ ಯಾತನೆ ಬಹುಶಃ ನಿನ್ನ ಕೊನೆಯ ದಿನಗಳ ಭಿನ್ನ ವರ್ತನೆಗೂ ಕಾರಣವಾಗಿರಬಹುದು. ನಮ್ಮಿಬ್ಬರನ್ನು ಬೇರ್ಪಡಿಸಿದ ಆ ಕ್ಷಣಗಳು ಬೇರೆ ಕತೆಯನ್ನೇ ಹೇಳುತ್ತವೆ.

    ಇರಲಿ ನಾಗಿ ಏನೆಲ್ಲಾ ಪಲ್ಲಟಗಳನ್ನು ಎದುರಿಸಿದ್ದರೂ, ನನ್ನ ಅತ್ಯಂತ ಸಂಕಷ್ಟದ ಸಮಯದಲ್ಲಿ, ದುರವಸ್ಥೆಯ ಹಾದಿಗಳಲ್ಲಿ, ಪಾತಾಳಕ್ಕೆ ಕುಸಿದಿದ್ದ ಬದುಕೆಂಬ ನಾವೆಯನ್ನು ಮೇಲೆತ್ತುವ ಕ್ರಿಯೆಯಲ್ಲಿ ನನಗೆ ಹೆಗಲು ನೀಡಿದ ನಿನ್ನ ಸಹಕಾರವನ್ನು ಹೇಗೆ ಮರೆಯಲು ಸಾಧ್ಯ ? ನಿನ್ನ ಹಾಸ್ಯ ಚಟಾಕಿಗಳ ನಡುವೆ ನೀನೇ ಆಗಾಗ್ಗೆ “ I am a whole (Hole) Hearted man ” ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದೆ. ನಿನ್ನ ಹೃದಯದಲ್ಲಿ ಒಂದು ರಂಧ್ರ ಇತ್ತು. ಅದು ನಿನ್ನ ಪಾಲಿಗೆ 41ರ ವಯೋಮಾನದಲ್ಲಿ ನಿಶ್ಚಿತ ನಿರ್ಗಮನದ ಬಾಗಿಲಾಗಿತ್ತು, ಕೊನೆಗೂ ತೆರೆದೇ ಬಿಟ್ಟಿತು 13 ಫೆಬ್ರವರಿ 2001ರ ರಾತ್ರಿ ಹತ್ತು ಗಂಟೆಗೆ. ಆ ವೇಳೆಗೆ ಸಂಸಾರಗಳು ಬೇರ್ಪಟ್ಟಿದ್ದವು ನಾಗಿ ಹೃದಯಗಳಲ್ಲ. ಈಗಲೂ ಸಹ ಅದರೊಳಗೆ ಚಿಮ್ಮಿ ಕಣ್ಣಂಚಿನಿಂದ ಹೊರಬರುವ ಕೆಲವೇ ಹನಿಗಳಿಗೆ ಅಂತ್ಯ ಇರಲು ಸಾಧ್ಯವೇ ? ಬಹುಶಃ ಈ ಉಸಿರಿರುವವರೆಗೂ ಸಾಧ್ಯವಿಲ್ಲ.