ಆಂಡಯ್ಯನೆಂಬ ಕನ್ನಡತನದ ಟ್ರೆಂಡ್ ಸೆಟ್ಟರ್ ದಯಾ ಗಂಗನಘಟ್ಟ
ಈಗಾಗಲೇ ಇದ್ದ ಸಿದ್ಧ ಮಾದರಿಯನ್ನು ಸಾರಾಸಗಟಾಗಿ ತ್ಯಜಿಸಿ, ಹೊಸನೆಲೆಯ ಕಾವ್ಯ ರಚನೆಗೆ ಮುಂದಾದ ಅಪರೂಪದ ಕವಿ ಈ ಆಂಡಯ್ಯ. ಅಚ್ಚ ಕನ್ನಡದಲ್ಲಿ ಕಾವ್ಯ ಬರೆಯುವ ಧೈರ್ಯ ಮಾಡಿ,ಕನ್ನಡವೆಂಬ ರತ್ನದ ಕನ್ನಡಿಯಲ್ಲಿ ನೋಡಿಕೊಂಡರೆ ದೋಷವೇನಾದರೂ ಬರುವುದೇ? ಎಂದು ಸಂಸ್ಕೃತ ಪ್ರಿಯರಿಗೆ ಸವಾಲು ಹಾಕಿದವ!

ದಯಾ ಗಂಗನಘಟ್ಟ
ಯಾವುದೇ ಮಹತ್ವದ ಬದಲಾವಣೆಯೂ ಇದ್ದಕ್ಕಿದ್ದಂತೆ ಆದುದಾಗಿರುವುದಿಲ್ಲ,ಆ ಬದಲಾವಣೆಯ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾದ ಹಲವು ಅಂಶಗಳು ಮಡುಗಟ್ಟಿರುತ್ತವೆ, ಒಂದು ಯಶಸ್ಸಿನ ಕತೆಯ ಹಿಂದೆ ಹಲವು ಸೋಲುಗಳ,ಅಡಚಣೆಗಳ ಇತಿಹಾಸವೇ ಇರುತ್ತದೆ, ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳದೇ, ಹಳೆಯ ಮಾರ್ಗವನ್ನ ಮುರಿದು ಹೊಸ ಶೈಲಿಯಲ್ಲಿ ಕಟ್ಟುವ ಕೆಲಸವನ್ನ ಆಗಾಗ ಕೆಲವರು ಮಾಡುತ್ತಿರುತ್ತಾರೆ,ಮಾಡಬೇಕು ಕೂಡ,
ಮನುಷ್ಯ ಇಂತಹ ತುಡಿತಕ್ಕೆ ಬಿದ್ದಾಗಲೆಲ್ಲಾ ದೊಡ್ಡ ಅನ್ವೇಷಣೆಗಳೇ ಆಗಿವೆ, ಹಿಂದಿನಿಂದ ನಡೆಸಿಕೊಂಡು ಬಂದಿದ್ದಕ್ಕಿಂತ ಭಿನ್ನವಾದ ಹೊಸತೊಂದನ್ನ ಹುಟ್ಟುಹಾಕಿಬಿಡುವ ಧೈರ್ಯವನ್ನ ಕೆಲವರು ಮಾಡಿಬಿಡುತ್ತಾರೆ, ಈ ತರಹದ ಪ್ರಯೋಗಗಳು ಸಾಹಿತ್ಯ ಕ್ಷೇತ್ರದಲ್ಲೂ ಆಗಾಗ ಆಗುತ್ತಲೇ ಬಂದಿವೆ,
ಸಾಹಿತ್ಯದ ಅನುಭೂತಿ ಎಂದರೆ ಹೀಗೇ ಇರಬೇಕು ಎನ್ನುವುದೇ ಮೊದಲು ತಪ್ಪು, ಪಂಪನು ಕಟ್ಟಿಕೊಟ್ಟ ಕಾವ್ಯತತ್ವ ವಚನಕಾರರ ಕಾಲಕ್ಕೆ ಬದಲಾಗುತ್ತದೆ, ಸಂಸ್ಕೃತವನ್ನ ಹೊತ್ತು ಮೆರೆಯುತ್ತಿದ್ದ ಸಾಹಿತ್ಯದ ತೇರು ಕ್ರಮೇಣ ಪಡುವಣದ ದಿಕ್ಕಿಗೆ ತಿರುಗಿಬಿಡುತ್ತದೆ. ಮಹಾಕಾವ್ಯದ ಬದಲಿಗೆ ಭಾವಗೀತೆ, ನಾಟಕಗಳು ಬರುತ್ತವೆ, ಹೊಸಗನ್ನಡದ ಮಧ್ಯದಲ್ಲೊಮ್ಮೆ ಹಳಗನ್ನಡದಲ್ಲಿ ಮಹಾಕಾವ್ಯವನ್ನು ಕುವೆಂಪು ಬರೆಯುತ್ತಾರೆ, ಗ್ರಾಂಥಿಕ ಕನ್ನಡದ ನಯ ನಾಜೂಕಿನ ನಡುವೆ ಗ್ರಾಮೀಣ ಭಾಷೆಯನ್ನ ಕುಂವೀ,ದೇವನೂರು ತರುತ್ತಾರೆ.
ಈ ತರದಲ್ಲಿ ಬದಲಾವಣೆಗೆ ತಮ್ಮನ್ನು ಒಡ್ಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ ಹಲವರಲ್ಲಿ ನನಗೆ ಬಹಳ ಪ್ರಮುಖ ಅನ್ನಿಸುವ ಹೆಸರು ಕವಿ ಆಂಡಯ್ಯನದು. ಈಗಾಗಲೇ ಇದ್ದ ಸಿದ್ಧ ಮಾದರಿಯನ್ನು ಸಾರಾಸಗಟಾಗಿ ತ್ಯಜಿಸಿ, ಹೊಸನೆಲೆಯ ಕಾವ್ಯ ರಚನೆಗೆ ಮುಂದಾದ ಅಪರೂಪದ ಕವಿ ಈ ಆಂಡಯ್ಯ. ಅಚ್ಚ ಕನ್ನಡದಲ್ಲಿ ಕಾವ್ಯ ಬರೆಯುವ ಧೈರ್ಯ ಮಾಡಿ,ಕನ್ನಡವೆಂಬ ರತ್ನದ ಕನ್ನಡಿಯಲ್ಲಿ ನೋಡಿಕೊಂಡರೆ ದೋಷವೇನಾದರೂ ಬರುವುದೇ? ಎಂದು ಸಂಸ್ಕೃತ ಪ್ರಿಯರಿಗೆ ಸವಾಲು ಹಾಕಿದವ!
ಪೂವಿನ ಪೊಳಲು ಎಂಬ ರಾಜ್ಯ. ಅದನ್ನಾಳುವ ರಾಜನ ಹೆಸರು ನನೆಯಂಬ. ಅವನು ಒಂದು ದಿನ ತನ್ನ ಅರಮನೆಯ ಬಳಿ ಸಂತೋಷದಿಂದ ಗೋಡೆಗಳ ಮೇಲೆ ಬರೆದ ಕಾಡಿನ ಚಿತ್ರಗಳನ್ನು ನೋಡುತ್ತಿರುತ್ತಾನೆ. ಆಗ ನಗೆಗಾರನೆಂಬುವನು ಬಂದು ಚಿತ್ರದಲ್ಲಿರುವ ವನ ನೋಡುವಿರೇಕೆ ಮನೆಯ ಪಕ್ಕದಲ್ಲಿ ಬೆಳೆದ ಹೂದೋಟವನ್ನು ನೋಡಿ ಎನ್ನುತ್ತಾನೆ,ಅಲ್ಲಿ ಹೋದರೆ ಆ ಸುಂದರ ತೋಟದ ಮಾವಿನ ಮರದ ಕೆಳಗೆ ಸುಂದರಿಯೊಬ್ಬಳು ಕೂತಿದ್ದಳು. ಅವಳನ್ನು ನೋಡಿದ ನನೆಯೆಂಬ ಈಕೆ ಸ್ವರ್ಗದವಳೆಂದುಕೊಂಡು ನೀವು ಯಾರು ಎಂದು ಕೇಳಲು, ಆಕೆ ಸಂತೋಷಕ್ಕಾಗಿ ತೋಟವನ್ನು ನೋಡಲು ಬಂದೆ ಎಂದಳು. ಅವಳು ನನೆಯೆಂಬನ ಪೂರ್ವಕತೆಯನ್ನು ಹೇಳತೊಡಗಿದಳು. ಶಾಪಗ್ರಸ್ಥನಾದ ನನೆಯೆಂಬನು ಪೂರ್ವಜನ್ಮದಲ್ಲಿ ಕಂಪಿನ ಪೊಳಲೆಂಬ ರಾಜಧಾನಿಯನ್ನಾಳುವ ಕಾಮನಾಗಿದ್ದನು. ಅವನ ಹೆಂಡತಿ ಇಚ್ಛೆಗಾರ್ತಿ, ಈಕೆ ಹೂವಿನ ಕೊಳದಂತೆ ಸುಂದರಿ. ಈಕೆಯ ಸೌಂದರ್ಯಕ್ಕೆ ಚಂದ್ರನೇ ಮೋಹಿತನಾಗಿದ್ದಾನೆ. ಕಾಮ ಮತ್ತು ಇಚ್ಛೆಗಾರ್ತಿ ಸುಖದಿಂದಿದ್ದರು. ಪುಷ್ಪಬಾಣನಾದ ಈ ಕಾಮನಿಗೆ ಪ್ರಪಂಚದಲ್ಲಿ ಸೋಲದವರೆ ಇಲ್ಲ. ಒಂದು ದಿನ ಚಕೋರ ಪಕ್ಷಿಯು ಬಂದು- ಕಾಮದೇವನೇ ನಿನಗಾರು ಶತ್ರುಗಳೇ ಇಲ್ಲ. ಆದರೆ ಹಿಮಾಲಯದಲ್ಲಿ ವಾಸಿಸುವ ಶಿವನೆಂಬ ದುಷ್ಟ ಶೈವ ಯತಿಯು ಆಕಾಶದ ಬಾಲಚಂದ್ರನ್ನು ಸೆರೆಹಿಡಿದು ಸೊಕ್ಕಿನಿಂದ ಮೆರೆಯುತ್ತಿದ್ದಾನೆ ಎಂದು ಹೇಳುತ್ತದೆ,
ಅಹಂಮಿನಲ್ಲಿ ಕೋಪಗೊಂಡ ಕಾಮದೇವ ಪಂಚಮುಖದ ಶಿವನನ್ನು ಕೆಡಹುವೆನೆಂದು ಶಪಥ ಮಾಡುತ್ತಾನೆ. ಬ್ರಹ್ಮ ವಿಷ್ಣು, ಇಂದ್ರರೇ ನನ್ನ ಹೂವಿನ ಬಾಣಕ್ಕೆ ಸೋತಿದ್ದಾರೆ. ಇವನಾವ ಲೆಕ್ಕವೆಂದು ನೆತ್ತಿಗಣ್ಣನ ವಿರುದ್ಧ ಯುದ್ಧ ಘೋಷಿಸುತ್ತಾನೆ. ಆ ಮುಂಚೆ ತೆಂಗಾಳಿಯನ್ನು ಕಳಿಸಿ ಚಂದ್ರನನ್ನು ಬಿಡಲು ತಿಳಿಸುತ್ತಾನೆ. ಶಿವ ಒಪ್ಪಲಿಲ್ಲ. ಆಗ ವಸಂತ ಮತ್ತು ಮಂದಮಾರುತ ಎಂಬ ಗೆಳೆಯರ ನೇತೃತ್ವದಲ್ಲಿ ಕೋಗಿಲೆ, ದುಂಬಿ, ಗಿಳಿ, ಚಕ್ರವಾಕ ಎಂಬ ದಂಡನಾಯಕರೊಂದಿಗೆ ತೆಂಕಣ ಗಾಳಿಯೆಂಬವನನ್ನು ಸಾರಥಿಯನ್ನಾಗಿ ಮಾಡಿಕೊಂಡು ಹಿಮಾಲಯಕ್ಕೆ ಹೋಗಿ ಮರಿದುಂಬಿಗಳು ಹೂವಿನ ಕುಡಿಯೆಂಬ ಖಡ್ಗವಿಡಿದು ಯುದ್ಧ ಮಾಡಿ ಶಿವನ ಪಾಳಯದಿಂದ ಬಂದ ವೀರಭದ್ರನ ಸೈನ್ಯವನ್ನು ಓಡಿಸಿದನು. ಆಗ ಕೆಂಡಗಣ್ಣ ಮತ್ತು ಪುಷ್ಟಬಾಣರ ನಡುವೆ ಯುದ್ಧ ನಡೆಯುತ್ತದೆ,ಕಾಮ ತನ್ನ ಕಬ್ಬಿನ ಬಿಲ್ಲಿನಿಂದ ಹೂಬಾಣ ಬಿಟ್ಟನು. ಶಿವನ ಹಣೆ, ಕೆನ್ನೆ, ಅಂಗೈ, ತೊಡೆ, ತೋಳುಗಳಲ್ಲಿ ಹೂಬಾಣ ನೆಟ್ಟು ಆ ಕೂಡಲೇ ಅವನು ಅರ್ಧನಾರೀಶ್ವರನಾದನು. ಇದರಿಂದ ಕೋಪಗೊಂಡ ಹಣೆಗಣ್ಣನಾದ ಶಿವ ಹಿರಿಯರೆಂಬುದನ್ನು ಪರಿಗಣಿಸದೇ ನನ್ನೊಡನೇ ಸೊಕ್ಕಿನಿಂದ ಯುದ್ಧ ಮಾಡುವೆಯಾ! ನಿನ್ನ ಹೆಂಡತಿಯನ್ನು ಕೂಡದೇ, ಯಾರಿಗೂ ಕಾಣದೇ ನೀನು ಕಾಮನೆಂಬುದನ್ನು ಮರೆತು ಎಲ್ಲಾದರೂ ಇರು ಎಂದು ಶಾಪ ಕೊಟ್ಟುಬಿಟ್ಟನು.ಈ ಸುದ್ದಿ ತಿಳಿದ ಇಚ್ಛೆಗಾರ್ತಿ ಮೂರ್ಛೆ ಹೋದಳು. ನಂತರ ಎಚ್ಚೆತ್ತು ವಿರಹ ತಾಪದಿಂದ ಬಳಲುತ್ತಾ ಬದುಕಿದ್ದಾಳೆ, ಅವಳು ನಾನೇ, ನೀನು ಶಿವನ ಶಾಪದಿಂದ ಹೂವಿನ ಪೊಳಲಿನ ರಾಜ ನನೆಯೆಂಬನಾಗಿರುವೆ, ನನ್ನ ಮಾತು ಕೇಳಿ ನಿನಗೆ ಶಾಪ ವಿಮೋಚನೆಯಾಯಿತು ಎಂದು ಸುಂದರಿ ಪೂರ್ವಕತೆಯನ್ನು ತಿಳಿಸುತ್ತಾಳೆ. ಇದನ್ನು ಕೇಳಿದ ತೋಟದ ಗಿಳಿಯೊಂದು ಕಂಪಿನ ಪೊಳಲಿಗೆ ಸುದ್ದಿ ಮುಟ್ಟಿಸುತ್ತದೆ. ಶಿವನನ್ನು ಗೆದ್ದ ಕಾಮ ಮತ್ತು ಇಚ್ಛೆಗಾರ್ತಿಯರು ಮುಂದೆ ರಾಜಧಾನಿಯಲ್ಲಿ ಸುಖವಾಗಿರುತ್ತಾರೆ. ಇದು ಕಥೆ.
ಆಂಡಯ್ಯನ ಈ ಕಬ್ಬಿಗರ ಕಾವವನ್ನು ಓದಿದರೆ ಕನ್ನಡ ನಾಡಿನ ನಿಸರ್ಗದ ಚೆಲುವು ಕಣ್ಣ ಮುಂದೆ ಬರುತ್ತದೆ. ಇದು ಒಂದು ಪರಿಸರದ ಕಾವ್ಯ. ಇಲ್ಲಿ ಕಾಮನ ಸೈನ್ಯವೆಲ್ಲಾ ಪಶು, ಪಕ್ಷಿ ಪ್ರಾಣಿಗಳು. ಅವನ ಬಾಣಗಳೆಲ್ಲಾ ಪುಷ್ಪ ಜಾತಿಗಳು. ಎಕಾಲಾಜಿಕಲ್ ನೆಲೆಯ ಕಾವ್ಯವಿದು. ಇಲ್ಲಿ ಬಳಸಿದ ಕನ್ನಡ ಅವತ್ತಿನ ಕನ್ನಡದ ಮಟ್ಟಿಗೆ ಹೊಸ ಪ್ರಯೋಗ.ಇಂತಹ ಪ್ರಯೋಗ ಕನ್ನಡ ಕಾವ್ಯ ಚರಿತ್ರೆಯಲ್ಲಿ ಈವರೆಗೂ ಬಂದಿಲ್ಲ. ಇದು ಆಂಡಯ್ಯನ ವಿಶೇಷ ಶಕ್ತಿ ರಾಜಕೀಯ ಅಧಿಕಾರಕ್ಕಾಗಿ ಜೈನರು ಮತ್ತು ವೀರಶೈವರ ಮಧ್ಯೆ ಪ್ರಬಲ ಹೋರಾಟ ನಡೆಯುತ್ತಿದ್ದ ಕಾಲದಲ್ಲಿ ಕನ್ನಡ ನಾಡೆಂದರೆ ಅಪಾರ ಅಭಿಮಾನವಿಟ್ಟು ಸಂಸ್ಕೃತದ ಸಹಾಯವಿಲ್ಲದೆ ಕೇವಲ ತದ್ಭವ ಪದಗಳನ್ನೂ, ದೇಸೀ ನುಡಿಗಳನ್ನೂ ಬಳಸಿಕೊಂಡು ಈ ಕೃತಿಯನ್ನು ಕಟ್ಟಿದ ವೀರ ಕವಿ ಇವನು. ಇಡೀ ಕಾವ್ಯವನ್ನು ಗಮನಿಸಿದರೆ,ಇಲ್ಲಿನ ಶಿವ-ಮನ್ಮಥರ ಕಥೆಯ ಎಳೆ ನಮ್ಮ ಪುರಾಣಗಳಲ್ಲಿ ದೊರೆಯುವುದೇ ಆಗಿದ್ದರೂ, ಕವಿ ಮಾಡಿಕೊಂಡ ಮಾರ್ಪಾಟು ಹೊಸತನದಿಂದ ಕೂಡಿದೆ,ವಸ್ತು ಪಾತ್ರ ರಸ ಇವುಗಳಲ್ಲಿ ಒಂದು ವಿನೂತನವಾದ ಚಿತ್ರಕಶಕ್ತಿ ಕಂಡುಬರುತ್ತದೆ. ಈ ಎಲ್ಲಾ ಬದಲಾವಣೆಗಳೂ ಮುಂದಿನ ವಚನ ಸಾಹಿತ್ಯದ ಭಾಷಾ ಬದಲಾವಣೆ ಮತ್ತು ವಸ್ತು,ವಿಚಾರ ಮಂಡನೆಗೆ ಬಹುದೊಡ್ಡ ಒತ್ತುಹಲಗೆಯಂತೆ ಕೆಲಸ ಮಾಡುತ್ತವೆ, ಭದ್ರ ಅಡಿಪಾಯವಾಗುತ್ತವೆ.
"ಸೊಗವಿಪ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ ಬಗೆಗೊಳೆ ಸಲೆ ಮುನ್ನಿನ ಪೆಂಪನಾಳ್ದ ಕಬ್ಬಿಗರದು ಮಾತನಾಡಿದವೊಲಂದವನಾಳ್ದಿರೆ ಬಲ್ಪು ನೆಟ್ಟಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್" ಎಂದು ಘೋಷಿಸಿ ಈತ ಹಾಕುವ ಚಾಲೆಂಜ್ ತರದ ಮಾತುಗಳು, "ಇವು ಪಳ್ಳಿಗಳಿವು ಪಟ್ಟಣ
ಮಿವು ಕೆಱೆಗಳಿವೆಱಗಿ ನಿಂದ ಮುಗಿಲೋಳಿಗಳಿಂ
ತಿವು ಕಾಡಿವು ". ಇತ್ಯಾದಿ ದೇಸೀ ಪದ ಪ್ರಯೋಗಗಳು
ಮುಂದೆ " ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ" ಎಂಬಂತಹ ಸರಳ ಕನ್ನಡದ ಸುಂದರ ವಚನಗಳ ರಚನೆಗೆ ಪ್ರೇರಕ ಶಕ್ತಿಯಾಗುತ್ತವೆ.
"ದೇಸಿ ಪೊದಳ್ದಿರೆ, ಕೊಂಕು ತೀವೆ" ಎಂದು ತಾನು ಕಾವ್ಯವನ್ನು ಬರೆವುದಾಗಿ ಹೇಳುವ ಇವನು ಹೀಗೇ ಬರೆಯಬೇಕು ಎಂಬ ಹುಕಿಯನ್ನ ಮುಂದಿನವರಿಗೆ ದಾಟಿಸುತ್ತಾನೆ,
"ಕನ್ನಡಮೆನಿಪ್ಪನಾಡು ಚಲ್ವಾಯ್ತು" ಎಂದು ತನ್ನ ನಾಡುನುಡಿಗಳನ್ನು ಬಣ್ಣಿಸಿ. ತವರುನುಡಿಯ ಮೇಲೆ ಮಮತೆಯನ್ನು ಸಹೃದಯರ ಎದೆಯಲ್ಲಿ ಹುಟ್ಟುಹಾಕಿ,ಸಾಮಾನ್ಯನೂ ವಚನಗಳನ್ನು ಬರೆಯಬಹುದು ಎಂಬ ಆತ್ಮವಿಶ್ವಾಸಕ್ಕೆ ಮೂಲವಾಗುತ್ತಾನೆ.
ಹೀಗೆ ಸುಲಲಿತವಾದ ಶೈಲಿಯನ್ನ, ಸುಲಭವಾಗಿ ಅರ್ಥವಾಗುವ ಪದಪುಂಜಗಳನ್ನ, ಶಬ್ದಾಲಂಕಾರಗಳನ್ನ, ಹೊಸ ಛಂದೋಗತಿಯನ್ನ. ಹಿತವಾದ ಅನುಪ್ರಾಸವನ್ನ, ಸರಳ ಗದ್ಯದ ಹಾದಿಯನ್ನ ಮುಂದಿನವರಿಗೆ ಸಮ ಮಾಡಿ ಕೊಡುವಾಗ ತಾನು ಕಲ್ಲುಮುಳ್ಳಿನ ಹಾದಿಯನ್ನ ಕ್ರಮಿಸಿದ್ದಾನೆ ಆಂಡಯ್ಯ, ಹಲವು ಪಂಡಿತರ ಕುಹಕಗಳನ್ನ ಎದುರಿಸುತ್ತಾನೆ,ಕೊಂಕುಗಳ ದಾಳಿಗೆ ಒಳಗಾಗುತ್ತಾನೆ, ಲಕ್ಮೀಶ, ಕುಮಾರವ್ಯಾಸ ಮುದ್ದಣರಿಗೆ ಸಿಕ್ಕಷ್ಟು ಮನ್ನಣೆ ಈ ಕವಿಗೆ ಸಿಕ್ಕುವುದೇ ಇಲ್ಲ ,ವಿದ್ವಾಂಸರು ಬರೆದುದೆನ್ನೆಲ್ಲ ಒಪ್ಪಿಕೊಂಡು ಬಿಟ್ಟರೆ ತಲೆಯಲ್ಲಿ ಪ್ರಶ್ನೆಗಳಾದರೂ ಹೇಗೆ ಹುಟ್ಟುತ್ತವೆ! ಎಂಬ ಧೋರಣೆಯೊಂದಿಗೆ ಇವೆಲ್ಲವುಗಳ ನಡುವೆಯೂ ತನ್ನ ಕೆಲಸವನ್ನ ತಾನು ಶ್ರದ್ಧೆಯಿಂದ ಮಾಡುತ್ತಾನೆ, ಇವನ ಈ ಧೋರಣೆಯ ಕಿಡಿ ವಚನಗಳೆಂಬ ಬೆಳಕಿಗೇ ಬೆಳಕಾಗುತ್ತದೆ ‘ಹೆಚ್ಚೆಣಿಕೆಯವರ ಮುಂದೆ ಕೊರೆಯೆಣಿಕೆಯವರೇನೂ ಕಮ್ಮಿಯಿಲ್ಲ ಎಂಬಂತೆ ಆಂಡಯ್ಯನು ಎತ್ತಿಟ್ಟ ಸಣ್ಣದೊಂದು ಹೆಜ್ಜೆಯು ಮುಂದೊಂದು ಮಹಾ ಪ್ರಯಾಣಕ್ಕೆ ಗುದ್ದಲಿಪೂಜೆಯಾಗುತ್ತದೆ. ಆಂಡಯ್ಯ ಬಿತ್ತಿದ ಬೀಜದ ಹಣ್ಣನ್ನ ಆತ ತಿನ್ನಲಾಗದೇ ಹೋದರೂ ಮುಂದಿನವರಿಗೆ ಸಮೃದ್ಧ ಫಸಲು ಬೆಳೆಯಲು ನೆಲ ಹಸನು ಮಾಡಿಕೊಟ್ಟಂತೆ ಆದದ್ದೇನೂ ಕಡಿಮೆ ಸಾಧನೆಯಲ್ಲ . ಹೀಗೆ ಹಲವು ನೆಲೆಗಳಿಂದ ಆಂಡಯ್ಯ ಓರ್ವ ಟ್ರೆಂಡ್ ಸೆಟ್ಟರ್ ಆಗಿಯೇ ನನಗೆ ಕಾಣುತ್ತಾನೆ.
ಮುಕದ ಮೇಲೆ ಮೂಗಿಲ್ಲದವರ ನಡುವೆ ಮೂಗು ಚಂದವಿರುವನೊಬ್ಬ ಮೂಗಿದ್ದರೇ ಚಂದ ಅಂತ ತಿಳಿಸೋಕೆ ಬಾಳ ತಿಣುಕಬೇಕಾಗುತ್ತೆ, ಆಂಡಯ್ಯ ಅದಕ್ಕಾಗಿ ಬಡಿದಾಡುತ್ತಾನೆ,ತನ್ನ ಬದುಕನ್ನೇ ಪಣಕ್ಕಿಡುತ್ತಾನೆ,
ವಲ್ಲಭ-ಬಲ್ಲವ,ಬ್ರಹ್ಮ-ಬೊಮ್ಮ ,
ದೋಷ-ದೋಸ,ಭಾಷಣ-ಬಾಸಣ,
ಭಾಷೆ-ನುಡಿ,ಇಕ್ಷುಜಾಪ-ಇಚ್ಚೆಗಾತಿ,ಸಂಸ್ಕೃತ-ಸಕ್ಕದ ಇತ್ಯಾದಿ ಬದಲಿ ಪದಗಳನ್ನ ಹುಡುಕಿ ದಿಟ್ಟತನದಲಿ, ಬರಿ ಸಿರಿಗನ್ನಡದಲ್ಲೆ ಮಾಕಬ್ಬವನ್ನು ಬರೆವೆನೆಂದು ಪಣತೊಟ್ಟು ಅದರಂತೆ ನಡೆದ ಕನ್ನಡದ ಹೆಮ್ಮೆಯ ಕಬ್ಬಿಗ ಆಂಡಯ್ಯ,
ಸುಮಾರು 1235 ರಲ್ಲಿ ಆಂಡಯ್ಯನೆಂಬ ಒಬ್ಬ ಕನ್ನಡಪ್ರೇಮಿ ಕವಿ ಸಂಸ್ಕೃತದ ಬಿಗಿ ಹಿಡಿತದಲ್ಲಿ ನರಳುತ್ತಿದ್ದ ಕನ್ನಡವನ್ನು ಬಿಡಿಸಲು ಅದೆಂತಾ ದಿಟ್ಟ ಕೆಲಸ ಮಾಡಿದ್ದನೆಂಬುದನ್ನ ನಾವೆಲ್ಲಾ ಯಾವತ್ತಿಗೂ ನೆನಪಿಟ್ಟುಕೊಂಡು ನಮ್ಮ ಮಕ್ಕಳಿಗೂ ತಿಳಿಸಲೇಬೇಕು.
ಕನ್ನಡದೊಲವಿಗಾಗಿ "ಕನ್ನಡದೊಳ್ಪಿನ ನುಡಿಯಂ! ಮುನ್ನಿದಱೊಳೆ ನೋಡಿ ತಿಳಿದುಕೊಳ್ವುದು ಚದುರಂ!" ಎಂದು ಕನ್ನಡದ ಉಳಿವಿಗೆ ತನ್ನದೇ ನೂತನ ಮಾದರಿಯನ್ನು ತೋರಿಸಿಕೊಟ್ಟ ವೀರನೇ ನನ್ನ ನೆಚ್ಚಿನ ಕವಿ ಆಂಡಯ್ಯ.
ಚಿತ್ರ: ರಾಜೇಶ್ ಶ್ರೀವತ್ಸ
bevarahani1