ನನ್ನ ಆಸ್ತಿ ನನ್ನ ಹಕ್ಕು ಅಂದವಳು....

ಆಕೆಗೆ ಎಲ್ಲವೂ ಇತ್ತು, ಯಾವೊಬ್ಬ ಹೆಣ್ಣಿಗೂ ಇಷ್ಟೆಲ್ಲಾ ಒಟ್ಟಿಗೇ ಸಿಗಲಾರದೇನೋ ಎಂಬಷ್ಟು,, ಆದರೆ........ ಬದುಕು

ನನ್ನ ಆಸ್ತಿ ನನ್ನ ಹಕ್ಕು ಅಂದವಳು....

- ದಯಾ ಗಂಗನಗಟ್ಟ.
     ಇವಳು ಅವತ್ತಿನ ಕಾಲಕ್ಕೇ ಮೊಟ್ಟ ಮೊದಲಬಾರಿಗೆ ಸಾಮಾಜಿಕ ಮತ್ತು ಕೌಟುಂಬಿಕವಾಗಿ ಹೆಣ್ಣನ್ನು ಕಟ್ಟಿಹಾಕಿರುವ ನಿಯಮಗಳ ವಿರುದ್ಧ ದನಿ ಎತ್ತಿದವಳು. ತನಗಾದ ಅನ್ಯಾಯದ ವಿರುದ್ಧ ಹಿರಿಯರಲ್ಲಿ ತನ್ನ ನೋವನ್ನು ತೋಡಿಕೊಂಡು, ತನಗೆ ಪ್ರತ್ಯೇಕ ರಾಜ್ಯವೊಂದನ್ನು ಕೊಡಲು ಕೇಳಿದವಳು. ಕೆಟ್ಟ ಗಂಡನನ್ನು ತ್ಯಜಿಸಿ ಮಕ್ಕಳೊಡನೆ ಪ್ರತ್ಯೇಕ ಬದುಕುವುದಾಗಿ ಹೇಳಿದವಳು, ಇವಳ ಈ ಎರಡೂ ಬೇಡಿಕೆಗಳೂ ಅವತ್ತಿನ ಕಾಲಕ್ಕೆ ಬಹುದೊಡ್ಡ ಧರ್ಮದ್ರೋಹದ ನಡೆಗಳು ಎಂಬಂತೆ ಕಾಣಿಸುತ್ತವೆ ಹಿರಿಯರಿಗೆ, ಧರ್ಮಸೂಕ್ಷ್ಮದ ಹೆಸರಿನಲ್ಲಿ ಅವಳಿಗೆ ನೀತಿ ಬೋಧನೆ ಮಾಡುವ ಹಿರಿಯರು ಪಾಲಿಗೆ ಬಂದದ್ದನ್ನು ಒಪ್ಪಿಕೊಂಡು ಜೀವಿಸುವಂತೆ ಹೇಳುತ್ತಾರೆ, ನನ್ನ ಅರಿವಿಗೆ ಬಂದಂತೆ ಹೆಣ್ಣೊಬ್ಬಳಲ್ಲಿ ಗಂಡನ ನಡವಳಿಕೆಯ ವಿರುದ್ಧ ಎದ್ದ ಮೊದಲ ಪ್ರತಿರೋಧದ ಧ್ವನಿಯೇ ಈ ದುಶ್ಯಲಾ.
    ಆಕೆಗೆ ಎಲ್ಲವೂ ಇತ್ತು, ಯಾವೊಬ್ಬ ಹೆಣ್ಣಿಗೂ ಇಷ್ಟೆಲ್ಲಾ ಒಟ್ಟಿಗೇ ಸಿಗಲಾರದೇನೋ ಎಂಬಷ್ಟು,, ಆದರೆ........
ಬದುಕು ಒಮ್ಮೊಮ್ಮೆ ಬರಪೂರ ಎಲ್ಲವನ್ನೂ ಕೊಟ್ಟು ಅದನ್ನ ಅನುಭವಿಸುವ ನಸೀಬನ್ನು ಮಾತ್ರ ಅನಾಮತ್ತು ಮೂಟೆಕಟ್ಟಿ ಯಾವುದೋ ಕತ್ತಲ ಅಟ್ಟಕ್ಕೆ ಎಸೆದುಬಿಟ್ಟಿರುತ್ತದೆ, ಮೇಲ್ನೋಟಕ್ಕೆ ಸುಖದ ಸುಪ್ಪತ್ತಿಗೆಯಲ್ಲಿ ತೂಗುವವರಂತೆ ಕಾಣಿಸುವ ಕೆಲವರು ಒಳಗೊಳಗೆ ಅಗ್ನಿಕುಂಡವನ್ನು ಹೊತ್ತು ತಿರುಗುವ ಅನಿವಾರ್ಯತೆಯಲ್ಲಿ ಇರುತ್ತಾರೆ, ಮಹಾಭಾರತದ ಬಹುತೇಕ ಪಾತ್ರಗಳು ಈ ತೆರನ ಕೊಟ್ಟಿ ನಸೀಬಿನವೇ ಆಗಿವೆ,ಕುಂತಿ,ಕರ್ಣ,ದ್ರೌಪದಿ,ಭಾನುಮತಿ,ಏಕಲವ್ಯ ಭೀಷ್ಮ,ಅಭಿಮನ್ಯು ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು,ಇದರಲ್ಲಿ ನನಗೆ ತೀರಾ ಅನ್‌ಲಕ್ಕಿ ಅನಿಸುವ ಪಾತ್ರ ದುಶ್ಯಲೆಯದು.
     ನೂರು ಮಂದಿ ಕೌರವರು ಹಾಗೂ ಐದು ಮಂದಿ ಪಾಂಡವರೆಂಬ ವೀರಾಧಿ ವೀರರ ಮುದ್ದಿನ ತಂಗಿ, ಹಸ್ತಿನಾಪುರದ ಮಹಾರಾಜನ ಮಗಳು, ಜಯದ್ರಥನ ಹೆಂಡತಿ, ಸುಂದರಿ, ವೀರಯೋಧೆ,ವಿದ್ಯಾವಂತೆ ಹೀಗೆ ಸಕಲಗುಣಗಳನ್ನೂ ಹೊಂದಿದ್ದ ಯುವರಾಣಿ,  ಎಲ್ಲವೂ ಇದ್ದು ಕೊನೆಗೆ ಎಲ್ಲವನ್ನೂ ಕಳೆದುಕೊಂಡು ಅನಾಥೆಯಂತೆ ಬದುಕು ಕಳೆದ ನತದೃಷ್ಟೆ ದುಶ್ಯಲಾ. 
    ವಿವಾಹದ ನಂತರ ಬಹಳ ಸಮಯ ಮಕ್ಕಳಿಲ್ಲದೆ ಹತಾಶಳಾಗಿದ್ದ ಗಾಂಧಾರಿ. ನವಮಾಸ ಕಳೆದರೂ ಹೆರಿಗೆ ಯಾಗದ ಸಿಟ್ಟಿಗೆ ತನ್ನ ಹೊಟ್ಟೆಯನ್ನು ಹಿಚುಕಿಕೊಳ್ಳುತ್ತಾಳೆ, ಆಗ ಹೊಟ್ಟೆಯಲ್ಲಿದ್ದ ಮಾಂಸದ ಮುದ್ದೆಯೊಂದು ಹೊರ ಬರುತ್ತದೆ. ಮಗುವಿನ ಆಕಾರವಿಲ್ಲದ ಈ ಮಾಂಸದ ಮುದ್ದೆಯನ್ನು ಮಹಾಮುನಿ ವೇದವ್ಯಾಸರು ಆ ಮುದ್ದೆಯನ್ನು ನೂರು ತುಂಡುಗಳನ್ನಾಗಿಸುವಾಗ ಗಾಂಧಾರಿಗೆ ಓರ್ವ ಮಗಳೂ ಬೇಕೆಂಬ ಹಂಬಲ ಉಂಟಾಗುತ್ತದೆ. ಅದನ್ನು ವೇದವ್ಯಾಸರಲ್ಲಿ ಹೇಳಿದಾಗ ಅವರು ಮಾಂಸದ ಮುದ್ದೆಯನ್ನು ನೂರಾ ಒಂದು ತುಂಡುಗಳನ್ನಾಗಿ ಮಾಡಿ ತುಪ್ಪದ ಜಾಡಿಗಳಲ್ಲಿ ಹಾಕಿ ಮುಚ್ಚಿ ಇಡಲು ಹೇಳುತ್ತಾರೆ. ಆ ಜಾಡಿಯಿಂದ ಮೊದಲು ದುರ್ಯೋಧನ, ನಂತರ ದುಶ್ಯಾಸನ ಹೀಗೆ ನೂರು ಮಂದಿ ಗಂಡು ಮಕ್ಕಳು ಜನಿಸಿ ಕೊನೆಗೆ ಒಬ್ಬ ಹೆಣ್ಣು ಮಗಳು ಹುಟ್ಟುತ್ತಾಳೆ,ಅವಳೇ ದುಶ್ಯಲಾ. ಇದು ಕತೆ.
      ಅರಮನೆಯ ಸಕಲ ಸುಖ ಸಂಪತ್ತಿನಲ್ಲಿ ಬೆಳೆದ ಇವಳಿಗೆ ಎಲ್ಲಾ ಬಯಕೆಗಳನ್ನು ತೀರಿಸಲು ಆಳು ಕಾಳುಗಳು ಇದ್ದರು. ನೂರು ಮಂದಿ ಅಣ್ಣಂದಿರಿದ್ದರು. ಆದರೆ ಸಿಂಧೂ ದೇಶದ ರಾಜ ಜಯದ್ರಥನೊಡನೆ ವಿವಾಹವಾದಲ್ಲಿಂದ ದುಶ್ಯಲಾಳ ಕರುಣಾಜನಕ ಕತೆ ಶುರುವಾಗುತ್ತದೆ. ಅವಳು ಮದುವೆಯಾದ ಜಯದ್ರಥ ಅತ್ಯಂತ ಕಾಮುಕ ವ್ಯಕ್ತಿ ಆಗಿದ್ದ. ಹೆಣ್ಣುಬಾಕನಾದ ಇವ ಹಲವು ಹೆಣ್ಣು ಮಕ್ಕಳನ್ನು ಕೆಡಿಸಿದ್ದ, ತನ್ನ ಕೆಟ್ಟ ನಡವಳಿಕೆಯಿಂದ ಸದಾ ಸುದ್ದಿಯಲ್ಲಿರುತ್ತಿದ್ದ , ಗಂಡನ ನಡವಳಿಕೆಗಳನ್ನು ತಿದ್ದುವ ದುಶ್ಯಲಾಳ ಹರಸಾಹಸಗಳೆಲ್ಲವೂ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾದವು, ಪತಿಯನ್ನು ಪ್ರಶ್ನಿಸಿದಾಗೆಲ್ಲಾ ಅವನು ಅವಳನ್ನು ಹೊಡೆಯುವುದಕ್ಕೂ ಹೇಸುತ್ತಿರಲಿಲ್ಲ. ಇಂತಹ ಓರ್ವ ವ್ಯಕ್ತಿ ಜೊತೆ ತಾನು ಜೀವನ ಸಾಗಿಸಬೇಕಲ್ಲ ಎಂದು ದುಶ್ಯಲಾಳಿಗೆ ಅತ್ಯಂತ ಬೇಸರವಾಗುತ್ತಿತ್ತು. ಶೂರರಾದ ಅಣ್ಣಂದಿರಲ್ಲಿ ದೂರು ನೀಡೋಣ ಎಂದುಕೊಳ್ಳುತ್ತಾಳೆ, ಆದರೆ ಪಾಂಡವರನ್ನು ದ್ವೇಶಿಸುತ್ತಿದ್ದ ಕಾರಣ ದುರ್ಯೋಧನನಿಗೆ ತನ್ನ ಭಾವ ಅತ್ಯಂತ ಪ್ರೀತಿಯ ವ್ಯಕ್ತಿ ಆಗಿದ್ದ. ಒಮ್ಮೆ ಜಯದ್ರಥನು ಪಾಂಡವರ ಪತ್ನಿ ದ್ರೌಪದಿಯನ್ನು ಅವಮಾನಿಸಲು ಪ್ರಯತ್ನ ಪಟ್ಟು ಪಾಂಡವರಿಂದ ಬಂದಿಯಾಗಿ,ತಮ್ಮ ಏಕೈಕ ಸಹೋದರಿಯ ಪತಿ ಎಂಬ ಒಂದೇ ಕಾರಣಕ್ಕೆ ಜೀವದಾನ ಪಡೆದುಕೊಂಡಿದ್ದ. 
     ದುಶ್ಯಲಾ ಸುಂದರಿಯೂ, ಯುದ್ಧ ಕಲೆಯ ನಿಪುಣೆಯೂ ಆಗಿದ್ದಳು. ಪಿತಾಮಹ ಭೀಷ್ಮಳಿಂದ ಅವಳು ಸಮರ ಕಲೆಯನ್ನು ಅಭ್ಯಸಿಸಿದ್ದಳು ಎಂದು ಹೇಳುತ್ತಾರೆ. ಅವಳಿಗೆ ಸುರಥ ಎಂಬ ಪುತ್ರನೂ ಇದ್ದ. ಯುದ್ಧದಲ್ಲಿ ತನ್ನ ಗಂಡ ಜಯದ್ರಥ ಹಾಗೂ ಮಗ ಸುರಥ ಇಬ್ಬರೂ ಅರ್ಜುನನಿಂದ ಹತರಾಗುತ್ತಾರೆ,ಏಕಕಾಲದಲ್ಲಿ ವಿದವೆಯೂ,ಮಗನನ್ನು ಕಳೆದುಕೊಂಡ ದುಃಖದಿಂದಲೂ ದುಶ್ಯಲೆ ಮಾನಸಿಕ ರೋಗಕ್ಕೆ ತುತ್ತಾಗಿ ನರಳುತ್ತಾಳೆ, 
 
     ಮಹಾಭಾರತ ಯುದ್ಧ ಮುಗಿದ ಬಳಿಕ ಯುದಿಷ್ಟಿರ ಹಸ್ತಿನಾಪುರದ ಮಹಾರಾಜನಾಗಿ ಪಟ್ಟಾಭಿಷೇಕವಾದ ನಂತರ ದೃತರಾಷ್ಟ್ರ ಹಾಗೂ ಗಾಂಧಾರಿ ವಾನಪ್ರಸ್ತಕ್ಕಾಗಿ ಕಾಡಿಗೆ ಹೋಗುತ್ತಾರೆ. ಇದರಿಂದ ದುಶ್ಯಲಾ ಏಕಾಂಗಿಯಾಗಿ ಬಿಡುತ್ತಾಳೆ. ಎಲ್ಲಿರಬೇಕು ಏನು ಮಾಡಬೇಕು ಎಂದು ತಿಳಿಯದೆ ತನ್ನ ಮೊಮ್ಮಗನ ಜೊತೆ ಸಿಂಧೂ ದೇಶಕ್ಕೆ ಹೋಗುತ್ತಾಳೆ. ಮುಂದೊಮ್ಮೆ  ರಾಜಸೂಯ ಯಜ್ಞ ಮಾಡಿದಾಗ ಯಾಗದ ಕುದುರೆ ಸಿಂಧೂ ದೇಶಕ್ಕೆ ಬಂದಾಗ ಹುಚ್ಚಿಯಂತೆ ಆ ಕುದುರೆಯನ್ನು ತಡೆದು ತನ್ನ ಸಹೋದರರ ವಿರುದ್ಧವೇ ಯುದ್ದಕ್ಕೆ ನಿಲ್ಲುತ್ತಾಳೆ, ತನ್ನ ಗಂಡ ಜಯದ್ರಥನನ್ನು, ನನ್ನ ಮಗನನ್ನು ಕೊಂದ ನಿನ್ನನ್ನು ಸುಮ್ಮನೇ ಬಿಡಲಾಗದು ಎಂದ ದುಶ್ಯಲಾಳಿಗೆ ಅರ್ಜುನನು, ಜಯದ್ರಥನು ಹೇಗೆ ಮೋಸದಿಂದ ಅಭಿಮನ್ಯುವನ್ನು ಕೊಲ್ಲಲು ಕೌರವರಿಗೆ ಸಹಾಯ ಮಾಡಿದ ಎನ್ನುವುದರ ನೆನಪು ಮಾಡಿಕೊಡುತ್ತಾನೆ. ತನ್ನ ಗಂಡ ಮಾಡಿದ ಪಾಪದ ಕಾರ್ಯಗಳಿಗೆ ತಕ್ಕ ಶಿಕ್ಷೆಯಾಯಿತೆಂದು ಅರ್ಥಮಾಡಿಕೊಂಡ ದುಶ್ಯಲಾ ಅರ್ಜುನನಲ್ಲಿ ಕ್ಷಮೆಯಾಚಿಸುತ್ತಾಳೆ. ಇಷ್ಟು ಇವಳ ಕತೆ.
     ನನಗೆ ದುಶ್ಯಲಾ ಪಾತ್ರ ಯಾಕೆ ಮುಖ್ಯ ಅನಿಸುತ್ತದೆ ಎಂದರೆ, , ತವರಿನವರ ವಿರುದ್ಧ ಮತ್ತು ಹೆಣ್ಣು ಎಲ್ಲವನ್ನೂ ಸುಮ್ಮನೇ ಏಕೆ ಸಹಿಸಬೇಕೆಂದು ಮೊದಲು ಪ್ರಶ್ನಿಸಿದ ಧೀರೆ ದುಶ್ಯಲಾ, ಈ ಕಾರಣದಿಂದ ಅವಳ ಪಾತ್ರ ಬಹು ಮುಖ್ಯ ಅನಿಸುತ್ತದೆ ನನಗೆ. 
     ರಾಜ್ಯ, ವಿಧ್ಯೆ, ಶೌರ್ಯ ಎಲ್ಲ ಇದ್ದೂ ಹೆಣ್ಣಾದ ಕಾರಣಕ್ಕೆ ಅವತ್ತಿನ ಕಾಲಮಾನದಲ್ಲಿ ಏನನ್ನೂ ಮಾಡಲಾಗದೆ ಆಲದಮರದ ನೆರಳಲ್ಲಿ ನರಳುವ ಸಣ್ಣ ಗಿಡವೊಂದರಂತೆ ನಲುಗಿದ, ಮತ್ತು ಸಮಯ ಸಿಕ್ಕಾಗ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದ, ಹೆಣ್ಣಿಗೂ ರಾಜ್ಯದ ಹಕ್ಕು ಬೇಕೆಂಬ ಬೇಡಿಕೆಯನ್ನ ಮೊದಲ ಬಾರಿಗೆ ಇಟ್ಟ ಈಕೆಯನ್ನ ಕೇರಳದಲ್ಲಿ ದೇವತೆಯೆಂದು ಪೂಜಿಸುತ್ತಾರೆ, ಅಲ್ಲಿ ದುಶ್ಯಲಾಳಿಗಾಗಿ ಹಲವಾರು ದೇವಾಲಯಗಳನ್ನೂ ನಿರ್ಮಿಸಲಾಗಿದೆ. ಅವುಗಳಲ್ಲಿ ಶ್ರೀ ಕುನ್ನೀರದಾತು ಮಲನಾಡ ದುಶ್ಯಲಾ ದೇವಾಲಯವೂ ಒಂದು.ಅಲ್ಲದೇ ಕೇರಳದ ಕಥಕ್ಕಳಿಯ ಒಂದು ಪ್ರಸಂಗವಾದ ‘ಅರ್ಜುನ ವಿಷದ ವೃತ್ತಂ’  ನಲ್ಲಿ ದುಶ್ಯಲಾ ಪ್ರಮುಖ ಪಾತ್ರಧಾರಿಯಾಗಿದ್ದಾಳೆ.