ಭಕ್ತರಿಗೂ ದ್ವೇಷಿಗಳಿಬ್ಬರಿಗೂ ಅರ್ಥವಾಗದ ಗಾಂಧೀ -ದಿನೇಶ್ ಅಮೀನ್ ಮಟ್ಟು
“ತಲ್ಲಣಿಸದಿರು ಮನವೇ “ ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮಿಯವರು ಡಿ.27ರಂದು ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಏರ‍್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ʼ ಭಾರತ ಮತ್ತು ಗಾಂಧೀಜಿ ಚಿಂತನೆಗಳ ಪ್ರಸ್ತುತತೆ” ಕುರಿತು ಮಾಡಿದ ಉಪನ್ಯಾಸದ ಪೂರ್ಣ ಪಾಠ ʼ ಕಿನ್ನರಿʼಯ ಓದುಗರಿಗಾಗಿ ಇಲ್ಲಿದೆ, ಓದಿ.

ದಿನೇಶ್ ಅಮೀನ್ ಮಟ್ಟು
ಈ ದೇಶದಲ್ಲಿ ಯಾವುದಾದರು ಒಂದು ಬದಲಾವಣೆ ಆಗಬೇಕಾದರೆ, ಸಾಮಾನ್ಯವಾಗಿ ಧಾರ್ಮಿಕ ನಾಯಕರ ನೇತೃತ್ವದಲ್ಲಿ ಮಾಡಿದರೆ ಮಾತ್ರ ಸಾಮಾಜಿಕ ಪರಿವರ್ತನೆ ಆಗಿದೆ. ಕೇರಳದಲ್ಲಿ ಜಾತಿ ವ್ಯವಸ್ಥೆ ನಾರುತ್ತಿದ್ದ ಕಾಲದಲ್ಲಿ ಸ್ವಾಮಿ ವಿವೇಕಾನಂದರು ಕೇರಳವನ್ನು ಬಿಟ್ಟು ಓಡಿ ಹೋಗುತ್ತಾರೆ. ವೀರೇಶಾನಂದ ಸ್ವಾಮೀಜಿ ಇದನ್ನು ಹೇಳಲಿಲ್ಲ. ಸ್ವಾಮಿ ವಿವೇಕಾನಂದರೆ ಕೇರಳ ಒಂದು ಹುಚ್ಚರ ಆಸ್ಪತ್ರೆ ಅಂತ ಬಿಟ್ಟು ಹೋಗುತ್ತಾರೆ. ಆ ರಾಜ್ಯದಲ್ಲಿ ಒಂದು ಸಾಮಾಜಿಕ ಪರಿವರ್ತನೆ ಮಾಡಬೇಕೆಂದು ಬಯಸಿದ ಡಾ.ಪದ್ಮನಾಭ ಪಲ್ಪು ಎಂಬ ವೈದ್ಯ ವಿವೇಕಾನಂದರನ್ನು ಭೇಟಿಯಾದಾಗ ವಿವೇಕಾನಂದರು ಹೇಳುತ್ತಾರೆ. ಒಬ್ಬ ಧಾರ್ಮಿಕ ಗುರು ನೇತೃತ್ವದಲ್ಲಿ ಕೆಲಸ ಮಾಡುವುದಾದರೆ ಸಾಧ್ಯ ಆಗಬಹುದು ಎಂದು ಹೇಳಿದರು. ಡಾ. ಪದ್ಮನಾಭ್ ಪಲ್ಪು ಹೋಗಿ ನಾರಾಯಣಗುರುಗಳನ್ನು ಸಂಧಿಸುತ್ತಾರೆ. ನಂತರ ಕೇರಳದಲ್ಲಿ ಒಂದು ಪರಿವರ್ತನೆಯ ಚಳವಳಿ ನಡೆಯುತ್ತದೆ. ಅದೊಂದು ಇತಿಹಾಸ. ಅದು ಬುದ್ದ ಇರಲಿ, ಬಸವ ಇರಲಿ, ಕನಕ ಇರಲಿ ನೀವು ಉದ್ದಕ್ಕೂ ಸಾಮಾಜಿಕ ಪರಿವರ್ತನೆಯ ನೇತಾರರನ್ನು ನೋಡಿದರೆ, ಧರ್ಮವನ್ನು ಇಟ್ಟುಕೊಂಡು ಧಾರ್ಮಿಕ ಗುರುಗಳ ನೇತೃತ್ವದಲ್ಲಿ ಬಹಳ ದೊಡ್ಡ ಪರಿವರ್ತನೆ ಚಳವಳಿ ನಡೆದಿದೆ.
ಧರ್ಮ ಬೇರೆ, ಕೋಮುವಾದ ಬೇರೆ. ಧಾರ್ಮಿಕನಾಗುವುದು ಬೇರೆ, ಕೋಮುವಾದಿಯಾಗುವುದು ಬೇರೆ. ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡರೆ ನಮಗೆ ರಾಜಕೀಯವೂ ಅರ್ಥವಾಗುತ್ತದೆ. ಸಮಾಜವೂ ಅರ್ಥವಾಗುತ್ತದೆ. ರಿಲೀಜಿಯಸ್ ಆಗುವುದು ತಪ್ಪು ಅಲ್ವೇ ಅಲ್ಲ. ಕಮ್ಯುನಲ್ ಆಗುವುದು ತಪ್ಪು ಅಷ್ಟೇ. ಸ್ವಾಮಿ ವಿವೇಕಾನಂದರು ಹೇಳಿದ ಹಿಂದೂ ಧರ್ಮದ ಬಗ್ಗೆ, ಮಹಾತ್ಮ ಗಾಂಧೀಜಿ ಹೇಳಿದ ಹಿಂದೂ ಧರ್ಮದ ಬಗ್ಗೆ, ಕನಕ ಹೇಳಲು ಬಯಸಿದ ಹಿಂದೂ ಧರ್ಮದ ಬಗ್ಗೆ, ನಾರಾಯಣ ಗುರುಗಳು ಹೇಳಿದ ಹಿಂದೂ ಧರ್ಮದ ಬಗ್ಗೆ ನಮಗೆ ಯಾವುದೇ ಭಿನ್ನಾಭಿಪ್ರಾಯ ಖಂಡಿತ ಇಲ್ಲ, ಆದರೆ ಕನಕನನ್ನು ಕನಕನ ಕಿಂಡಿಯಿಂದ ಹೊರಗಿಟ್ಟ ಆ ಧರ್ಮದ ಬಗ್ಗೆ, ಆ ಧರ್ಮದ ಪ್ರತಿಪಾದಕರ ಬಗ್ಗೆ ನಮಗೆ ವಿರೋಧ ಇದೆ.
ನಾನು ಕರಾವಳಿಯಿಂದ ಬಂದವನು, ಯಾವ ಕನಕನ ಕಿಂಡಿ ಇದೆಯೋ ಆ ಕನಕನ ಕಿಂಡಿ ಆ ಮಠದ ಸ್ವಾಮಿಗಳು ಇವತ್ತು ನಾಲ್ಕು ಪಂಕ್ತಿಗಳಲ್ಲಿ ಜನರಿಗೆ ಊಟ ಹಾಕುತ್ತಾರೆ. ಕೊನೆ ಪಂಕ್ತಿಯಲ್ಲಿ ಮಠದ ಕೆಲಸಗಾರರ, ಮೊದಲ ಪಂಕ್ತಿಯಲ್ಲಿ ಸ್ವಾಮಿಗಳು, ನಡುವೆ ಬೇರೆಯವರು.

ಪರಮೇಶ್ವರ ಅವರು ಬಹಳ ದಿಟ್ಟತನದಿಂದ ಮಾತನಾಡಿದರು. ಇದನ್ನು ನಾನು ಅಫ್ರಿಶಿಯೇಟ್ ಮಾಡಬೇಕು. ನಾನು ಏನೋ ತೇಲಿಸಿ ಮಾತಾಡಿ ಹೋಗುತ್ತಾರೆ ಅಂದುಕೊಂಡಿದ್ದೆ. ಸ್ವಾಮೀಜಿ ಹೇಳೋ ಸಂಸ್ಕೃತಿ ಬಗ್ಗೆ ಪರಮೇಶ್ವರ್ ಮನಸ್ಸು ಕಲಕಿತ್ತು. ಸ್ವಾಮಿಗಳು ಹೇಳೋ ಸಂಸ್ಕೃತಿ ಬಗ್ಗೆ ಮಾತನಾಡಿದಾಗ. ಅದರಿಂದ ಪರಮೇಶ್ವರ್ ದಿಟ್ಟತನದಿಂದ ಉತ್ತರ ಕೊಟ್ಟರು. ಅವರಿಗೆ ಮಿತಿಯೂ ಇದೆ. ಅವರು ಹೇಳಿದರು. ಅವರೊಬ್ಬ ರಾಜಕಾರಣಿ. ಸಂಸ್ಕೃತಿ ಬಗ್ಗೆ ಹಾಗೆ ಹೇಳಿದಾಗ ಮನಸ್ಸು ಕಲಕುತ್ತದೆ. 1927ರ ಡಿಸೆಂಬರ್ 25 ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಮನುಸ್ಮೃತಿಯನ್ನು ಸುಟ್ಟ ದಿನ. ವೀರೇಶಾನಂದ ಸ್ವಾಮೀಜಿ ಇಲ್ಲಿ ಇರಬೇಕಾಗಿತ್ತು. ( ವೀರೇಶಾನಂದ ಸರಸ್ವತಿ ಸ್ವಾಮೀಜಿ ಭಾಷಣ ಮುಗಿಸಿ ಅನ್ಯ ಕಾರ್ಯ ನಿಮಿತ್ತ ಹೊರಟು ಬಿಟ್ಟಿದ್ದರು)
ಮನುಸ್ಮೃತಿಯನ್ನು ಯಾಕೆ ಸುಟ್ಟು ಹಾಕಲಾಯಿತು. ಇಲ್ಲಿ ಬಹಳಷ್ಟು ಹೆಣ್ಣು ಮಕ್ಕಳು ಇದ್ದೀರಾ. ಯಾವ ಸಂಸ್ಕೃತಿ ಅದು, ಬಾಬಾ ಸಾಹೇಬರು ಅದನ್ನು ಸುಟ್ಟು ಹಾಕಿದ್ದು ಮಾತ್ರವಲ್ಲ, ಅದರ 27 ವರ್ಷಗಳ ನಂತರ ಸಂವಿಧಾನವನ್ನು ಕೊಟ್ಟು ಹೋಗಿದ್ದಾರೆ. ಆ ಸಂವಿಧಾನ ಏನು ಹೇಳುತ್ತೆ. ಅಷ್ಟೇ ಅಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ಲನ್ನು ತಂದರು. 1927 ರಿಂದ 1951 ರವರೆಗೆ ಬಾಬಾ ಸಾಹೇಬರು ನಿರಂತರವಾಗಿ ಹಿಂದೂ ಧರ್ಮವನ್ನು ಸುಧಾರಣೆ ಮಾಡಬೇಕೆಂದು ಪ್ರಯತ್ನಪಟ್ಟರು. ಹಿಂದೂ ಕೋಡ್ ಬಿಲ್ಲನ್ನು ಲೋಕಸಭೆಯಲ್ಲಿ ಮಂಡಿಸಿದಾಗ ಪಂಡಿತ್ ಜವಾಹರಲಾಲ್ ನೆಹರು ಅವರೊಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ವಿರೋಧಿಸಿದ್ದರು. ವಲ್ಲಭ ಭಾಯ್ ಪಟೇಲ್, ಬಾಬು ರಾಜೇಂದ್ರ ಪ್ರಸಾದ್ ವಿರೋಧ ಮಾಡ್ತಾರೆ. ಹಿಂದೂ ಮಹಾಸಭಾ ಬಿಡಿ ಅವರೆಲ್ಲರೂ ವಿರೋಧ ಮಾಡಿಯೇ ಮಾಡ್ತಾರೆ. ಅದರ ನಂತರ ಪಂಡಿತ್ ಜವಾಹರಲಾಲ್ ನೆಹರು ಅವರು 1955-56ರಲ್ಲಿ ಎರಡು ಅವಧಿಯಲ್ಲಿ ಬಾಬಾ ಸಾಹೇಬರ ಹಿಂದೂ ಕೋಡ್ ಬಿಲ್ಲನ್ನು ತರಲಿಕ್ಕೆ ಪ್ರಯತ್ನಿಸಿ, ಅದನ್ನು ಅನುಷ್ಠಾನಕ್ಕೆ ತಂದರು.
ಇವೊತ್ತು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನವಾದ ಹಕ್ಕು ಸಿಕ್ಕಿದ್ದರೆ, ವಿಚ್ಛೇದನ ಮಾಡುವ ಹಕ್ಕು ಸಿಕ್ಕಿದ್ದರೆ, ದತ್ತು ಪಡೆಯುವ ಹಕ್ಕು ಸಿಕ್ಕಿದ್ದರೆ, ಸಮಾಜದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುವ ಹಕ್ಕು ಸಿಕ್ಕಿದ್ದರೆ ಅದು ಹಿಂದೂ ಕೋಡ್ ಬಿಲ್ಲಿನಿಂದ ಸಿಕ್ಕಿದ್ದು. ಇದೆಲ್ಲವನ್ನು ನಿರಾಕರಣೆ ಮಾಡಿರೋದು ಮನುಸ್ಮೃತಿ. ಇವತ್ತು ಮತ್ತೆ ಆ ಮನುಸ್ಮೃತಿಯನ್ನು ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ. ನಿನ್ನೆ ಆದ ಕಾರಣಕ್ಕೆ ಅದನ್ನು ಉಲ್ಲೇಖ ಮಾಡಿದ್ದು ಅಷ್ಟೆ. ಡಿಸೆಂಬರ್ 25, 1927ರಂದು ಮನುಸ್ಮೃತಿಯನ್ನು ಸುಟ್ಟು ಹಾಕಿದ್ದಕ್ಕೆ ಇದನ್ನು ಹೇಳಬೇಕಾಯಿತು ಅಷ್ಟೆ.
ನಮ್ಮ ಸಂಸ್ಕೃತಿಯ ಬಗ್ಗೆ ಮಾತನಾಡುವ ಎಲ್ಲಾ ಸ್ವಾಮಿಗಳು ಮನುಸ್ಮೃತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಜನರ ಮುಂದೆ ಇಡಬೇಕು. ಇದನ್ನು ಒಪ್ಪುತ್ತೀರಾ? ಇಲ್ವಾ? ಅದರಿಂದ ಆ ಸಂಸ್ಕೃತಿಯ ಬಗ್ಗೆ ಮಾತನಾಡದಿದ್ದರೆ ಒಬ್ಬ ಕುರುಬ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾನು ಇದರ ವಿವರಗಳ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ.
ನಾನು ಗಾಂಧೀಜಿ ಬಗ್ಗೆ ಮಾತನಾಡುತ್ತೇನೆ. ಗಾಂಧೀಜಿ ಇವೊತ್ತು ಯಾರಿಗೂ ಬೇಡವಾದ ಒಬ್ಬ ನಾಯಕ. ಯಾಕೆ ಅಂದ್ರೆ ಗಾಂಧೀಜಿಗೆ ಯಾವುದೇ ಜಾತಿ ಇಲ್ಲ. ನೀವು ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣ, ಕನಕದಾಸರು, ಇಲ್ಲದಿದ್ದರೆ ನಾರಾಯಣ ಗುರುಗಳ ಮೂರ್ತಿಯನ್ನು ಎಲ್ಲಾದರೂ ಸ್ವಲ್ಪ ವಿರೂಪ ಮಾಡಿದರೆ ದಂಗೆ ಆಗುತ್ತದೆ. ಆಗಬೇಕು, ಆಗುತ್ತೆ. ಆದರೆ ಮಹಾತ್ಮ ಗಾಂಧಿಯವರ ಮೂರ್ತಿಯನ್ನು ಕೆಡವಿ ಹಾಕಿದರೂ ಯಾರೂ ದಂಗೆ ಏಳುವುದಿಲ್ಲ. ನನಗೆ ಅದಕ್ಕೆ ಖುಷಿಯಾಗಿರುವುದು, ಯಾಕೆ ಅಂದ್ರೆ ಇಂಥ ಒಬ್ಬ ನಾಯಕನ ಬಗ್ಗೆ ಒಂದು ಕಾರ್ಯಕ್ರಮದಲ್ಲಿ ಬಗ್ಗೆ ಸ್ವಾಮೀಜಿಯವರು ಮಾತನಾಡಬೇಕೆಂದು ಬಯಸಿದರಲ್ಲ, ಅದೊಂದು ದೊಡ್ಡ ಸಾಧನೆ, ಕೊಡುಗೆ ಅದಕ್ಕಾಗಿ ನಿರಂಜನಾನದ ಸ್ವಾಮೀಜಿಯನ್ನು ಗೌರವಿಸುತ್ತೇನೆ. ಯಾರಿಗೂ ಬೇಡ ಗಾಂಧೀಜಿ, ಗಾಂಧೀಜಿಯನ್ನು ಹಿಂದೂಗಳು ದ್ವೇಷಿಸುತ್ತಾರೆ. ಯಾಕೆ ಅಂದ್ರೆ ಅವರು ಮುಸ್ಲಿಮರ ಪರವಾಗಿದ್ದರು ಎಂದು. ಅದೇ ಕಾರಣಕ್ಕಾಗಿ ಅವರನ್ನು ಗುಂಡಿಕ್ಕಿ ಕೊಂದರು. ಪಾಕಿಸ್ತಾನಕ್ಕೆ 55 ಕೋಟಿ ರೂಗಳನ್ನು ಕೊಡಲಿಕ್ಕೆ ಹೊರಟರು ಹಾಗಾಗಿ ಇವರನ್ನು ಕೊಂದರು. ಇವಿಷ್ಟೇ ಕಾರಣವಲ್ಲ ಗಾಂಧೀಜಿಯನ್ನು ಕೊಲ್ಲಲು ಕಾರಣ. ಬೇರೆ ಕಾರಣಗಳು ಇದ್ದವು. ಗಾಂಧಿ ಬಗ್ಗೆ ಮುಸ್ಲೀಮರಿಗೂ ಅಸಮಾಧಾನವಿದೆ. ತನ್ನ ಪ್ರಿಯ ಶಿಷ್ಯ ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ಪ್ರಧಾನಿ ಮಾಡಲಿಕ್ಕೆ ಮೊಹಮದ್ ಆಲಿ ಜಿನ್ನಾ ಅವರನ್ನು ಕೈಬಿಟ್ಟರು, ದೇಶ ವಿಭಜನೆಗೆ ಅವರು ಕಾರಣರಾದ್ರು ಅಂತ. ಹಿಂದೂಗಳಲ್ಲಿರುವ ಸವರ್ಣೀಯರಿಗೂ ಅಸಮಾಧಾನವಿದೆ. ಮೂರು ಹೊತ್ತು ಹರಿಜನ, ಹರಿಜನ ಅಂತ ಭಜನೆ ಮಾಡ್ತಾರೆ ಅಂತ. ಇವರು ಹಿಂದೂನೇ ಅಲ್ಲ ಅಂತ ಅವರು ವಿರೋಧ ಮಾಡ್ತಾರೆ. ದಲಿತರಿಗಾಗಿರುವ ಅಸಮಾಧಾನ ಏನೂ ಅಂದ್ರೆ ಗಾಂಧೀಜಿ ಅಂಬೇಡ್ಕರ್ ಅವರ ವಿರುದ್ಧವಾಗಿದ್ದರು. ಪ್ರತ್ಯೇಕ ಮತಕ್ಷೇತ್ರವನ್ನು ನಿರಾಕರಿಸಿದ್ದರು. ಅದರಿಂದ ಗಾಂಧೀಜಿ ದಲಿತ ವಿರೋಧಿ ಅಂತ. ಮಹಾತ್ಮ ಗಾಂಧೀಜಿ ಹಿಂದೂ ವಿರೋಧಿ, ಮುಸ್ಲೀಂ ವಿರೋಧಿ, ಬ್ರಾಹ್ಮಣ ವಿರೋಧಿ, ದಲಿತ ವಿರೋಧಿ ಹಾಗಿದ್ದರೂ ಕೂಡ ಇಷ್ಟು ವರ್ಷಗಳ ನಂತರ ಗಾಂಧೀಜಿ ತತ್ವಗಳ ಬಗ್ಗೆ ನಾವು ಮಾತನಾಡುತ್ತೇವೆ. ಯಾಕೆ ಅಂದ್ರೆ, ಗಾಂಧೀಜಿ ಇವೆಲ್ಲವನ್ನೂ ಮೀರಿ ಬೆಳೆದಿದ್ದಾರೆ. ಇವೊತ್ತಿನ ದಿನಮಾನದಲ್ಲಿ ಗಾಂಧೀಜಿ ಬಗ್ಗೆ ಮಾತನಾಡಬೇಕು.

ಗಾಂಧೀಜಿ ಬಗ್ಗೆ ಬಹಳ ಮಂದಿ ಮಾತನಾಡುವಾಗ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಚ್ಚು ಹೇಳುತ್ತಾರೆ. ಸ್ವಾತಂತ್ರ್ಯ ಹೋರಾಟ ನಡೆದಿದ್ದು ಬರಿ 90 ವರ್ಷ ಮಾತ್ರ. ಆದರೆ ಸಾಮಾಜಿಕ ಹೋರಾಟಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ಮಹಾತ್ಮ ಗಾಂಧಿಯವರು ನಾಲ್ಕು ವಿಷಯಗಳನ್ನಿಟ್ಟುಕೊಂಡು ಹೋರಾಟ ಮಾಡಿದರು. ನಾವು ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತಗೊಳಿಸಿ ಮಾತನಾಡುತ್ತೇವೆ. ಒಂದು ರಾಜಕೀಯ ಸ್ವಾತಂತ್ರ್ಯ , ಎರಡನೆಯದ್ದು ಗ್ರಾಮ ಸ್ವರಾಜ್ಯ, ಮೂರನೆಯದ್ದು ಅಸ್ಪೃಶ್ಯತೆ ನಿವಾರಣೆ, ನಾಲ್ಕನೇದ್ದು ಕೋಮುಸೌಹಾರ್ದತೆ.
ಇವೊತ್ತು ಈ ನಾಲ್ಕು ವಿಷಯಗಳನ್ನು ನಿಮ್ಮ ತಲೆಗೆ ತೆಗೆದುಕೊಂಡು ಅವರ ಹೋರಾಟ ಪೂರ್ಣಗೊಂಡಿದೆ ಎಂದು ಪ್ರಶ್ನೆ ಮಾಡಿದರೆ, ನಿಮಗೆ ಉತ್ತರ ಸಿಗುತ್ತದೆ. ನಮಗೆ ರಾಜಕೀಯ ಸ್ವಾತಂತ್ರ್ಯ ಬಂದಿದೆ. ಆದರೆ ಅದರ ಅನುಭವ ಆಗುತ್ತಿದೆಯೇ ಎಂಬ ಬಗ್ಗೆ ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ, ಗ್ರಾಮ ಸ್ವರಾಜ್ಯ ಸ್ಥಾಪನೆ ಆಗಿದೆಯೇ ಎಂದು ಪ್ರಶ್ನೆ ಮಾಡಿಕೊಳ್ಳಿ. ಅಸ್ಪೃಶ್ಯತೆ ನಿವಾರಣೆ ಆಗಿದೆಯೇ ಎಂದು ಪ್ರಶ್ನಿಸಿಕೊಂಡು ಕೋಮುಸೌಹಾರ್ದತೆ ಆಗಿದೆಯೇ ಎಂದು ಪ್ರಶ್ನೆ ಮಾಡಿಕೊಳ್ಳಿ.
ಯಾಕೆ ಗಾಂಧೀಜಿ ಇಂದಿಗೂ ಪ್ರಸ್ತುತ ಅಂದರೆ, ಎಲ್ಲವೂ ಕೂಡ ಅನ್‌ಫಿನಿಷ್ಡ್ ಟಾಸ್ಕ್ಗಳು. ಯಾವುದೂ ಪೂರ್ಣಗೊಂಡಿಲ್ಲ. ಗಾಂಧೀಜಿ ಭಕ್ತರಿಗೂ ಇದು ಅರ್ಥವಾಗುತ್ತಿಲ್ಲ, ದ್ವೇಷಿಗಳಿಗೂ ಅರ್ಥವಾಗುತ್ತಿಲ್ಲ.
ರಾಜಕೀಯ ಸ್ವಾತಂತ್ರ್ಯದ ಬಹಳ ಸಂಕ್ಷಿಪ್ತವಾಗಿ ಮಾತನಾಡುತ್ತೇನೆ. ರಾಜಕೀಯ ಸ್ವಾತಂತ್ರö್ಯ ಬಂದಿದೆ ನಮಗೆ. ಬ್ರಿಟೀಷರಿಂದ ನಮಗೆ ಸ್ವಾತಂತ್ರö್ಯ ಸಿಕ್ಕಿದೆ. ಆದರೆ ನಾವು ಸ್ವತಂತ್ರರಾ? ರಾಜಕೀಯ ಸ್ವಾತಂತ್ರö್ಯ ನಮಗೆ ಬಂದಾಗ ಅದರ ಬಗ್ಗೆ ಮೊದಲು ಆಕ್ಷೇಪವನ್ನು ಎತ್ತಿದ್ದವರು ಬಾಬಾ ಸಾಹೇಬ್ ಅಂಬೇಡ್ಕರ್. ಈ ಸಮಾಜಕ್ಕೆ ಬೇಕಾಗಿರುವುದು ರಾಜಕೀಯ ಸ್ವಾತಂತ್ರ್ಯ ಅಲ್ಲ ಸಾಮಾಜಿಕ ಸ್ವಾತಂತ್ರ್ಯ . ನಮಗೆ ಬೇಕಾಗಿರುವುದು ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆ ಆಗಬೇಕು ಅಂತ ಹೇಳಿದರು. ಯಾಕೆ ಅಂದ್ರೆ ಈ ಸಮಾಜ ಹಾಗೆ ಇದೆ. ಅಸಮಾನತೆಯನ್ನು ಸಾರುವ ಒಂದು ಸಾಮಾಜಿಕ ಸ್ಥಿತಿ ಮತ್ತು ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ. ಇದು ಒಂದಕ್ಕೊಂದು ಘರ್ಷಣೆ ಮಾಡುತ್ತಿವೆ.
1949 ನವೆಂಬರ್ 26ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನವನ್ನು ಅರ್ಪಣೆ ಮಾಡುವಾಗ ಹೇಳುತ್ತಾರೆ. ಈ ಎರಡು ವಿರೋಧಾಭಾಸಗಳು ಇದೆ. ಇದನ್ನು ನಿವಾರಣೆ ಮಾಡದೆ ಇದ್ದರೆ ಜನ ಪ್ರಜಾಪ್ರಭುತ್ವದ ಸೌಧವನ್ನೇ ಸ್ಫೋಟ ಮಾಡಬಹುದು ಎಂದು ಹೇಳುತ್ತಾರೆ. ಇವೊತ್ತು ರಾಜಕೀಯ ಸ್ವಾತಂತ್ರ್ಯ ಬಂದಿದೆ. ಸಿದ್ದಲಿಂಗಯ್ಯ ಅವರು ಹೇಳಿದ ಹಾಗೆ ಯಾರಿಗೆ ಬಂತು, ಅಂದರೆ ಟಾಟಾ, ಬಿರ್ಲಾಗೆ ಬಂತು ಸ್ವಾತಂತ್ರ್ಯ , ಇದನ್ನು ಸ್ವಲ್ಪ ಚೇಂಜ್ ಮಾಡಿ ಅದಾನಿ, ಅಂಬಾನಿಗೆ ಸ್ವಾತಂತ್ರ್ಯ ಬಂದಿದೆ. ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಮಾಜಿಕ ಸ್ವಾತಂತ್ರ್ಯ ಇಲ್ಲದಿದ್ದರೆ ಏನು ಅನಾಹುತ ಆಗಬಹುದೇನೋ ಎಂಬುದನ್ನು ಬಾಬಾ ಸಾಹೇಬರು ಅಂದೇ ಹೇಳಿದ್ದರು. ಸ್ವಾತಂತ್ರ್ಯ ಬಂದರೆ ಅದರ ಮೊದಲ ಫಲಾನುಭವಿಗಳು ಯಾರಿಗೆ ಸಿಗುತ್ತದೆ ಅಂದರೆ ಕಾರ್ಮಿಕರಿಗೆ ಸಿಗುವುದಿಲ್ಲ, ಅವರ ಮಾಲಿಕರಿಗೆ ಸಿಗುತ್ತದೆ. ಗೇಣಿದಾರರಿಗೆ ಸಿಗುವುದಿಲ್ಲ. ಕೂಲಿ ಕಾರ್ಮಿಕರಿಗೆ ಸಿಗುವುದಿಲ್ಲ. ಭೂಮಾಲಿಕನಿಗೆ ಸಿಗುತ್ತದೆ. ಅವನ ಕೈಗೆ ಸಿಕ್ಕಿರುವ ಸ್ವಾತಂತ್ರ್ಯ ವನ್ನು ಶೋಷಣೆಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾನೆ.
ಗಾಂಧೀಜಿ ಉದ್ದಕ್ಕೂ ಬದಲಾಗುತ್ತಲೇ ಹೋಗಿದ್ದಾರೆ. ಯೌವ್ವನದ ದಿನಗಳಲ್ಲಿ ನಾಸ್ತಿಕರಾಗಿದ್ದ ಗಾಂಧೀಜಿ ಅದರ ನಂತರ ಒಬ್ಬ ಕಟ್ಟಾ ಹಿಂದೂವಾಗಿದ್ದರು. ಜಾತಿ ಎನ್ನುವುದು ಬದುಕಿನ ಕಾನೂನು ಅಂತ ಹೇಳಿದ್ದಾರೆ. ವರ್ಣಾಶ್ರಮ ವ್ಯವಸ್ಥೆಯನ್ನು ಗಾಂಧೀಜಿ ಪ್ರತಿಪಾದನೆ ಮಾಡುತ್ತಾರೆ. ವರ್ಣ ವ್ಯವಸ್ಥೆ ತಪ್ಪಲ್ಲ, ಆದರೆ ಅಸಮಾನತೆಯ ಅಸ್ಪೃಶ್ಯತೆ ತಪ್ಪು ಅಂತ ಹೇಳ್ತಾರೆ. ಒಂದು ವಿಚಿತ್ರವಾದ ವಾದ ಮಂಡನೆ ಮಾಡುತ್ತಾರೆ. ಅದೇ ಗಾಂಧೀಜಿ 1940ರಲ್ಲಿ ಅಂತರ್ ಜಾತಿ ಮದುವೆ ಆಗಬೇಕು ಎಂದು ಪ್ರತಿಪಾದನೆ ಮಾಡುತ್ತಾರೆ. ಗಾಂಧೀಜಿ ಬದಲಾಗುತ್ತಲೇ ಇದ್ದರು. ಶೋಷಿತನು ಬದಲಾಗಲೇ ಇಲ್ಲ, ಅಂಬೇಡ್ಕರ್ ಬದಲಾಗಲೇ ಇಲ್ಲ, ಆದರೆ ಗಾಂಧೀಜಿ ಬದಲಾಗುತ್ತ ಹೋದರು. ಇಲ್ಲಿ ಬದಲಾಗಬೇಕಾಗಿರುವವರು ಶೋಷಕರೇ ಹೊರತು ಶೋಷಿತರಲ್ಲ. ಗಾಂಧೀಜಿ ಶೋಷಕ ಕುಟುಂಬದಿಂದ ಬಂದವರು. ಅವರು ನೋಡಿ ಕಲಿತದ್ದು, ಅಂಬೇಡ್ಕರ್ ಅನುಭವಿಸಿ ಕಲಿತದ್ದು.
ದಕ್ಷಿಣಾ ಆಫ್ರಿಕಾಕಕ್ಕೆ ಹೋಗಿ ಬಂದ ಮೇಲೆ ಗಾಂಧೀಜಿ ಭಾರತಕ್ಕೆ ಬಂದಾಗ ಇಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಅರ್ಥ ಮಾಡಿಕೊಳ್ಳುತ್ತಾರೆ. ಗಾಂಧೀಜಿ ಚಿಂತನೆಗಳಲ್ಲಿ ಉದ್ದಕ್ಕೂ ಬದಲಾವಣೆ ಆಗುತ್ತಲೇ ಹೋಗುತ್ತವೆ.
ರಾಜಕೀಯ ಸ್ವಾತಂತ್ರ್ಯ ಬಂದಿದೆ. ಲೋಕಸಭೆಯಲ್ಲಿ 540 ಮಂದಿ ಸಂಸತ್ ಸದಸ್ಯರಿದ್ದಾರೆ. ಇವರಲ್ಲಿ 250 ಮಂದಿಯ ಮೇಲೆ ಸೀರಿಯಸ್ ಆದ ಕ್ರಿಮಿನಲ್ ಪ್ರಕರಣಗಳಿವೆ. 175 ಎಂಪಿಗಳ ಮೇಲೆ ಮರ್ಡರ್, ರೇಪ್, ಗಡಿಪಾರು, ಅಪಹರಣ ಕೇಸುಗಳಿವೆ.
ಅಸ್ಪೃಶ್ಯತೆ ನಿವಾರಣೆ: ಯಾವ ಗಾಂಧೀಜಿ ವರ್ಣಾಶ್ರಮ ವ್ಯವಸ್ಥೆಯನ್ನು ಪ್ರತಿಪಾದನೆ ಮಾಡಿದರೋ, ಜಾತಿ ವ್ಯವಸ್ಥೆ ಪ್ರತಿಪಾದಿಸಿದರೂ ನಂತರ ಗಾಂಧೀಜಿ ಜಾತಿ ವ್ಯವಸ್ಥೇ ತಪ್ಪು ಅಂತ ಹೇಳಿದರು. ಎನ್.ಸಿ.ಆರ್.ಬಿ ವರದಿ ಪ್ರಕಾರ ಪ್ರತಿದಿನ 16 ಮಂದಿ ದಲಿತರ ಹತ್ಯೆಯಾಗುತ್ತಿದೆ. ಪ್ರತಿ ಗಂಟೆಗ 13 ಮಂದಿ ದಲಿತರ ಮೇಲೆ ದೌರ್ಜನ್ಯಗಳಾಗುತ್ತಿವೆ. ಪ್ರತಿ ದಿನ ನಾಲ್ಕು ಮಂದಿ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗುತ್ತಿದೆ.
ಹುಬ್ಬಳ್ಳಿಯಲ್ಲಿ ಒಬ್ಬ ಹುಡುಗಿ ದಲಿತ ಹುಡುಗನನ್ನು ಮದುವೆಯಾಗುತ್ತಾಳೆ ಎನ್ನುವ ಕಾರಣಕ್ಕೆ ಅವಳನ್ನು ಗರ್ಭಿಣಿ ಸ್ತಿತಿಯಲ್ಲಿ ಅವರ ತಂದೆಯೇ ಕೊಲೆ ಮಾಡುತ್ತಾನೆಂದರೆ, ಅಸ್ಪೃಶ್ಯತೆ ನಿವಾರಣೆ ಆಗಿದೆಯಾ? ನಮ್ಮ ವೀರೇಶಾನಂದ ಸರಸ್ವತಿ ಸ್ವಾಮೀಜಿ ಪ್ರತಿಪಾದಿಸುವ ಸಂಸ್ಕೃತಿ ಎಲ್ಲಿದೆ? ಇದು ನಮ್ಮ ಪರಿಸ್ಥಿತಿ. ಇವೊತ್ತು ಅಸ್ಪೃಶ್ಯತೆ ನಿವಾರಣೆ ಆಗಿಲ್ವಾ? ಖಂಡಿತ ಆಗಿದೆ. ಇವೊತ್ತು ಗೋಚರವಾದ ಅಸ್ಪೃಶ್ಯತೆ ಕಾಡುತ್ತಿಲ್ಲ. ಗೋಚರವಾಗಿ ಜಾತೀಯತೆ ಕಾಡುವುದಿಲ್ಲ. ಆದರೆ ಅಗೋಚರವಾದ ಜಾತೀಯತೆ ಇದೆ. ಅಗೋಚರವಾದ ಅಸ್ಪೃಶ್ಯತೆ ಇದೆ. ನಮಗೆ ಕಾಣುವುದಿಲ್ಲ ಅದು. ಒಬ್ಬ ಸಿದ್ದರಾಮಯ್ಯ ಬಜೆಟ್ ಮಂಡಿಸುವವಾಗಿನ ಪ್ರತಿಕ್ರಿಯೆ ಹೇಗಿರುತ್ತದೆ. ಕುರಿ ಎಣಿಸಲಿಕ್ಕೆ ಬಾರದವ ಬಜೆಟ್ ಏನು ಮಂಡಿಸ್ತಾನೆ. ಯಾಕೆ ಮತ್ತೆ ಮತ್ತೆ ಸಿದ್ದರಾಮಯ್ಯ ಅವರ ಮೇಲೆ ದಾಳಿಯಾಗುತ್ತಿರುತ್ತದೆ? ಪರಮೇಶ್ವರ್ ಯಾಕೆ ಮುಖ್ಯಮಂತ್ರಿ ಆಗಲಿಕ್ಕೆ ಸಾಧ್ಯವಿಲ್ಲ? ಯಾಕೆ ದಲಿತ ಶಾಸಕರು ಒಟ್ಟಿಗೆ ಕುಳಿತು ಊಟ ಮಾಡಿದರೆ ಕೆಂಗಣ್ಣು ಆಗುತ್ತೆ? ಗೋಚರವಾಗುವ ಅಸ್ಪೃಶ್ಯತೆ ಕಡಿಮೆಯಾಗಿದೆ.
ಇವೊತ್ತು ಯುನಿವರ್ಸಿಟಿಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳು ಎಷ್ಟಿವೆ ಎಂದು ನೋಡಿದರೆ ಗೊತ್ತಾಗುತ್ತದೆ. ಅಸ್ಪೃಶ್ಯತೆ ನಿವಾರಣೆ ಆಗಿದ್ದರೆ ಜಾತಿ ಗಣತಿಯನ್ನು ಯಾಕೆ ವಿರೋಧ ಮಾಡ್ತಾರೆ? ನಾವೆಲ್ಲ ಸಮಾನರು, ನಾವೆಲ್ಲ ಹಿಂದೂಗಳಾದರೆ ಜಾತಿ ಗಣತಿ ಬಗ್ಗೆ ಯಾಕೆ ವಿರೋಧ. ಜಾತಿ ಎನ್ನುವುದು ಒಂದು ರೋಗ. ಇಲ್ಲಿ ಡಾಕ್ಟರ್‌ಗಳು ಇದ್ದೀರಾ? ರೋಗಿ ಬಂದು ನನಗೆ ಯಾವುದೇ ಕಾಯಿಲೆ ಇಲ್ಲ ಅಂತ ಹೇಳಿದರೆ ಚಿಕಿತ್ಸೆ ಕೊಡಲು ಆಗುವುದಿಲ್ಲ. ಮೊದಲು ಜಾತಿ ರೋಗ ಇದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅದರ ನಂತರ ನಿವಾರಣೆ ಮಾಡಬೇಕು. ಜಾತಿಯೇ ಇಲ್ಲ ಅಂದರೆ ರೋಗವೇ ಇಲ್ಲದ ರೋಗಿಗೆ ಚಿಕಿತ್ಸೆ ಹೇಗೆ ಕೊಡ್ತೀರಿ? ಇದನ್ನು ನಾವು ಒಪ್ಪಿಕೊಳ್ಳಬೇಕು. ಅಸ್ಪೃಶ್ಯತೆ ನಿವಾರಣೆ ಆಗಿದೆಯಾ, ಕಣ್ಣಿಗೆ ಕಾಣುವಂತೆಯೇ ಇದೆ, ನಿವಾರಣೆ ಆಗಿಲ್ಲ. ನಮ್ಮ ನಡುವೆ ಜಾತಿ ಇದೆ. ಅಸ್ಪೃಶ್ಯತೆ ಇದೆ. ಇದನ್ನು ನಿವಾರಣೆ ಮಾಡುವುದು ಹೇಗೆ ಎಂಬ ಬಗ್ಗೆ ಯೋಚನೆ ಮಾಡಬೇಕು. ನಮ್ಮ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕು.
ಗಾಂಧೀಜಿ ಉದ್ದಕ್ಕೂ ಪ್ರತಿಪಾದನೆ ಮಾಡುತ್ತ ಬಂದದ್ದು ಕೋಮುಸೌಹಾರ್ದತೆ ಬಗ್ಗೆ. ಇಡೀ ದೇಶ ಸ್ವಾತಂತ್ರೋತ್ಸವದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಸಂಭ್ರಮಿಸುವಾಗ ಗಾಂಧೀಜಿ ನೌಕಾಲಿಯಲ್ಲಿ ಕೋಮುದಂಗೆ ನಡೆದ ಗಲ್ಲಿಗಳಲ್ಲಿ ಬರಿಗಾಲಲ್ಲಿ ಅಡ್ಡಾಡುತ್ತಿದ್ದರು, ಅವರು ಉಪವಾಸ ಕೂತಿದ್ದು ಕೂಡ ಹಿಂದೂ-ಮುಸ್ಲೀಮರ ಏಕತೆಗಾಗಿ. ಇವೊತ್ತು ಕೋಮುಸೌಹಾರ್ದತೆ ಕೂಡ ಯಾವ ಸ್ಥಿತಿಗೆ ಬಂದಿದೆ ಎಂಬುದನ್ನು ನೋಡಬೇಕು.
ವಿವೇಕಾನಂದರಿಗೆ ಕಾಯಿಲೆಗಳು ಇದ್ದವು, ಹುಕ್ಕಾ ಸೇದುತ್ತಿದ್ದರು. ಮಾಂಸವನ್ನು ತಿನ್ನುತ್ತಿದ್ದರು. ಮಾಂಸಾಹಾರದ ಬಗ್ಗೆ ಮಡಿವಂತಿಕೆ ಯಾಕೆ ಸ್ವಾಮಿ? ನಿರಂಜನಾನಂದ ಸ್ವಾಮೀಜಿಗಳು ಇಂತಹ ಕಾರ್ಯಕ್ರಮವನ್ನು ಮುಂದುವರಿಸಬೇಕು. ದಲಿತರು ನಾರಾಯಣಗುರುಗಳ ಬಗ್ಗೆ ಮಾತನಾಡಬೇಕು. ಈಡಿಗರು ಅಂಬೇಡ್ಕರ್ ಬಗ್ಗೆ ಮಾತನಾಡಬೇಕು. ಬಸವಣ್ಣನವರ ಬಗ್ಗೆ ಬೇರೆಯವರು ಮಾತನಾಡಬೇಕು. ಈ ಚೇಂಜ್ ಆದ್ರೆ ಮಾತ್ರ ಸಮಾಜದಲ್ಲಿ ಬದಲಾವಣೆ ಬರಲು ಸಾಧ್ಯ. ಅಹಿಂದ ಸಂಘಟನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲಾ ಹಿಂದುಳಿದ ಸ್ವಾಮೀಜಿಗಳು ಒಗ್ಗಟ್ಟಾಗಬೇಕು. ಅಹಿಂದ ಉದ್ಯಮದಲ್ಲೂ ಬರಬೇಕು, ರಾಜಕೀಯದಲ್ಲೂ ಬರಬೇಕು. ಮಾಧ್ಯಮದಲ್ಲೂ ಬರಬೇಕು. ಎಲ್ಲರಿಂದಲೂ ಒಗ್ಗಟ್ಟು ಆದರೆ ಒಳ್ಳೆಯದಾಗುತ್ತದೆ. ಆಧ್ಯಾತ್ಮಿಕ ಗುರುಗಳು ಇದರ ನೇತೃತ್ವ ವಹಿಸಬೇಕು.
bevarahani1