ಎಸ್. ಆರ್. ವೆಂಕಟೇಶ ಪ್ರಸಾದ್
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು(ಫೆ.1) ಸಂಸತ್ ನಲ್ಲಿ ಮಂಡಿಸಲಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಮೇಲೆ ರಾಜ್ಯದ ಜನ ಎಂದಿನಂತೆ ಈ ಬಾರಿಯೂ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.ವಿಶೇಷವಾಗಿ ಮೂಲ ಸೌಕರ್ಯ, ನೀರಾವರಿ,ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ಹಕ್ಕೊತ್ತಾಯಗಳು ಮುಂಚೂಣಿಯಲ್ಲಿವೆ.
ಕರ್ನಾಟಕವು,ದೇಶದ ಆರ್ಥಿಕ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಜ್ಯ. ಜಿ ಎಸ್ ಟಿ, ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆಗಳ ಸಂಗ್ರಹದಲ್ಲಿ ಮುಂಚೂಣಿಯಲ್ಲಿದೆ.ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಸೇವಾ ವಲಯ,ಸ್ಟಾರ್ಟ್ ಅಪ್ ಸೇರಿದಂತೆ ಉತ್ಪಾದನಾ ವಲಯದ ಇತರ ಮೂಲಗಳಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ಸುಮಾರು ₹4.5- ₹5 ಲಕ್ಷ ಕೋಟಿ ಆದಾಯವನ್ನು ಸಂಗ್ರಹಿಸಿ ಕೊಡುತ್ತಿದೆ.
ಕೇಂದ್ರ ಸರ್ಕಾರ ತಾನು ಸಂಗ್ರಹಿಸುವ ತೆರಿಗೆ, ಸೆಸ್ ಮತ್ತು ಸರ್ ಚಾರ್ಜ್ ಗಳಲ್ಲಿ ರಾಜ್ಯಗಳಿಗೆ ಶೇಕಡ 42 ರಷ್ಟು ಪಾಲು ಹಂಚಿಕೆ ಮಾಡುವುದಾಗಿ ಹೇಳಿದ್ದರೂ ವಾಸ್ತವವಾಗಿ ಶೇಕಡ 30ರಷ್ಟನ್ನು ಮಾತ್ರ ನೀಡುತ್ತಿದೆ.ರಾಜ್ಯವು 2020 ರಿಂದ ಕೇಂದ್ರ ಸರ್ಕಾರದ ಆರ್ಥಿಕ ಅನ್ಯಾಯಗಳಿಂದ ಸಾಕಷ್ಟು ನಲುಗಿದೆ.ಸಹಾಯಾನುದಾನ ಮತ್ತು ಕೇಂದ್ರದ ಪ್ರಾಯೋಜಿತ ಯೋಜನೆಗಳಿಗೆ ಹಣ ಒದಗಿಸುವಲ್ಲೂ ಅನ್ಯಾಯ ಮಾಡುತ್ತಿದೆ.ಇದರ ಮಧ್ಯೆಯೂ ಕರ್ನಾಟಕದ ತೆರಿಗೆ ಕೊಡುಗೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಬಾರಿಯಾದರೂ ಕೇಂದ್ರ ಬಜೆಟ್ ನಲ್ಲಿ ನ್ಯಾಯ ಸಮ್ಮತ ಹಂಚಿಕೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ.
ಜಿಎಸ್ ಟಿ ಸರಳೀಕರಣ ವ್ಯವಸ್ಥೆ ಜಾರಿಗೆ ಬಂದ ನಂತರ ರಾಜ್ಯಗಳ ಸ್ವಂತ ತೆರಿಗೆ ಸಾಮರ್ಥ್ಯವು ಕಡಿಮೆಯಾಗಿದೆ.ಮನರೇಗಾ ರದ್ದು ಮತ್ತಿತರ ಉಪಕ್ರಮಗಳಿಂದ ರಾಜ್ಯಕ್ಕೆ ಬರುತ್ತಿದ್ದ ಅನುದಾನದಲ್ಲಿ ಭಾರೀ ಖೋತ ಆಗಿದೆ. ಹಾಗಾಗಿ, ಕೇಂದ್ರದ ಪಾಲಾಗುತ್ತಿರುವ ತೆರಿಗೆಗಳ ನ್ಯಾಯಯುತ ಹಂಚಿಕೆಯೇ ರಾಜ್ಯಗಳ ಆದಾಯದ ಪ್ರಮುಖ ಆಧಾರ.
14ನೇ ಹಣಕಾಸು ಆಯೋಗವು ತೆರಿಗೆ ಪಾಲಿನಲ್ಲಿ ಶೇಕಡ 4.71 ರಷ್ಟನ್ನು ಕರ್ನಾಟಕಕ್ಕೆ ನಿಗದಿ ಮಾಡಿತ್ತು. ಆದರೆ, 15ನೇ ಆಯೋಗವು ಅದನ್ನು ಶೇಕಡ 3.64 ಕ್ಕೆ ಇಳಿಸಿತು. ಇದರಿಂದ ರಾಜ್ಯಕ್ಕೆ ₹80,000 ಕೋಟಿ ತೆರಿಗೆ ನಷ್ಟವಾಯಿತು. ಈಗ,16ನೇ ಹಣಕಾಸು ಆಯೋಗವು ಶೇಕಡ 4.71 ರಷ್ಟು ಪಾಲನ್ನು ಕೊಟ್ಟರೆ ಸಾಕು ಎನ್ನುವ ಸ್ಥಿತಿಯಲ್ಲಿ ಕರ್ನಾಟಕ ಇದೆ.
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಗಳು ತಮ್ಮ ತೆರಿಗೆ ಸಂಗ್ರಹದಿಂದ ಶೇಕಡ 40ರಷ್ಟು ಹಣವನ್ನು ಕೊಡಬೇಕು. ಕರ್ನಾಟಕವು 2021-25 ರವರೆಗೆ ₹ 49,271ಕೋಟಿ ತನ್ನ ಪಾಲನ್ನು ಕೊಡಬೇಕಿತ್ತು. ಆದರೆ,ಕೇಂದ್ರ ಸರ್ಕಾರದ ತನ್ನ ಪೂರ್ಣ ಪಾಲನ್ನು ಕೊಡದ ಕಾರಣಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹23,402 ಕೋಟಿ ಭರಿಸಬೇಕಾಯಿತು.ಜಲಜೀವನ್ ಮಿಷನ್ ಯೋಜನೆಯೊಂದರಲ್ಲೇ ₹13,000 ಕೋಟಿ ಗೂ ಹೆಚ್ಚಿನ ಮೊತ್ತವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ.
ಹಣಕಾಸು ಆಯೋಗವು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಶಿಫಾರಸು ಮಾಡಿದ್ದ ಅನುದಾನದಲ್ಲಿ ₹1802 ಕೋಟಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ₹874 ಕೋಟಿ ಕಡಿಮೆ ಅನುದಾನ ನೀಡಿದೆ. ಇದು ರಾಜ್ಯದ ಬೊಕ್ಕಸದ ಮೇಲೆ ಭಾರಿ ಹೊರೆಯನ್ನು ಹಾಕಿದೆ. ಎನ್ ಡಿ ಆರ್ ಎಫ್ ನಿಯಮಾವಳಿಗಳ ಅಡಿ ಬರ ಪೀಡಿತ ಪ್ರದೇಶಗಳಿಗೆ ಶೀಘ್ರ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ರಾಜ್ಯ ಬಯಸುತ್ತಿದೆ.
*24 ಪ್ರಸ್ತಾಪಗಳಿಗೆ ಕೊಕ್ಕೆ*: ಕರ್ನಾಟಕದ 24 ಇಲಾಖೆಗಳ ಪ್ರಸ್ತಾಪಗಳು ಈಗ ಅನುಮೋದನೆ ಮತ್ತು ಅನುದಾನಕ್ಕಾಗಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಮುಂದೆ ಇವೆ. ಇವುಗಳಿಗೆ ಸಂಬಂಧಿಸಿದ ಕೇಂದ್ರದ ತಕರಾರುಗಳಿಗೆ ಉತ್ತರ ನೀಡಿದ ನಂತರವೂ ಒಂದೂ ಪ್ರಸ್ತಾಪಕ್ಕೆ ಅನುಮೋದನೆ ಸಿಕ್ಕಿಲ್ಲ.
*ಕರ್ನಾಟಕದ ಹಕ್ಕೊತ್ತಾಯಗಳು*: ನವದೆಹಲಿಯಲ್ಲಿ ನಡೆದ ಕೇಂದ್ರ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಡಿಸಿದ ರಾಜ್ಯದ ಹಕ್ಕೊತ್ತಾಯಗಳು:
*ಜಿ ಎಸ್ ಟಿ ವ್ಯವಸ್ಥೆ*: ಜಿಎಸ್ ಟಿ ವ್ಯವಸ್ಥೆ ಸರಳೀಕರಣದ ಬಳಿಕ ರಾಜ್ಯದ ಜಿಎಸ್‌ಟಿ ಬೆಳವಣಿಗೆಯು ಶೇಕಡ 12 ರಿಂದ ಶೇಕಡ 5ಕ್ಕೆ ಇಳಿದಿದೆ. ಪ್ರಸಕ್ತ ವರ್ಷದಲ್ಲಿ ₹5,000 ಕೋಟಿ ಮತ್ತು ವಾರ್ಷಿಕ ₹9,000 ಕೋಟಿ ಕೊರತೆ ಆಗಲಿದೆ. ಈ ನಷ್ಟವನ್ನು ಸರಿದೂಗಿಸಲು ಜಿಎಸ್‌ಟಿ ಪರಿಹಾರ ಸೆಸ್ ಮಾದರಿಯಲ್ಲೇ ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕು.
*ಸುಂಕ ಹಂಚಿಕೆ*: ತಂಬಾಕಿನ ಮೇಲಿನ ಅಬಕಾರಿ ಸುಂಕ ಮತ್ತು ಪಾನ್ ಮಸಾಲ ಮೇಲಿನ ಸೆಸ್ 50:50 ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆ ಆಗಬೇಕು.
*ಜಲಜೀವನ್ ಮಿಷನ್*: ಈ ಯೋಜನೆಗೆ ರಾಜ್ಯ ಸರ್ಕಾರ ಮಾಡಿರುವ ಮುಂಗಡ ಪಾವತಿಯೂ ಸೇರಿದಂತೆ ಬಾಕಿ ಇರುವ ಕೇಂದ್ರದ ಪಾಲನ್ನು ತುರ್ತಾಗಿ ಬಿಡುಗಡೆ ಮಾಡಬೇಕು
*ಮನರೇಗಾ ಬದಲಿಗೆ ಜಿ ರಾಮ್ ಜಿ*: ಯೋಜನೆಯ ಬದಲಾವಣೆಯಿಂದ ರಾಜ್ಯದ ಹಣಕಾಸು ಮತ್ತು ಉದ್ಯೋಗದ ಮೇಲೆ ಕೆಟ್ಟ ಪರಿಣಾಮ ಆಗಲಿದೆ. ಹಾಗಾಗಿ, ಯೋಜನೆ ವಿನ್ಯಾಸವನ್ನು ಮರುಪರಿಶೀಲಿಸಿ, ಬೇಡಿಕೆ ಆಧಾರಿತ ಉದ್ಯೋಗ ವ್ಯವಸ್ಥೆಯನ್ನು ಮತ್ತೆ ಆರಂಭಿಸಿ, ಸಮರ್ಪಕ ಮತ್ತು ಮಿತಿರಹಿತ ಕೇಂದ್ರ ಅನುದಾನ ಒದಗಿಸಬೇಕು.
*ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ - ಬೆಲೆ ಕೊರತೆ ಪಾವತಿ ಯೋಜನೆ: ಮೆಕ್ಕೆಜೋಳ, ಸೋಯಾಬೀನ್, ಮಾವು,ಮೆಣಸಿನಕಾಯಿ, ಈರುಳ್ಳಿ, ಟೊಮೇಟೊ, ಅರಿಶಿಣ ಮತ್ತು ಶುಂಠಿ ಬೆಳೆಗಳಿಗೆ ನ್ಯಾಯಯುತ ಬೆಲೆ ಖಾತರಿ ಪಡಿಸಲು ₹796 ಕೋಟಿ ಅನುದಾನ ನೀಡಬೇಕ
*ಆಶಾ ಮತ್ತು ಅಂಗನವಾಡಿ*: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ₹ 8,000, ಅಡುಗೆ ಸಿಬ್ಬಂದಿ ಮತ್ತು ಸಹಾಯಕರಿಗೆ ತಿಂಗಳಿಗೆ ₹5,000 ಕೇಂದ್ರದ ಪಾಲನ್ನು ನೀಡಬೇಕು .ರಾಷ್ಟ್ರೀಯ ಸಾಮಾಜಿಕ ಭದ್ರತಾ ಕಾರ್ಯಕ್ರಮದ ವ್ಯಾಪ್ತಿಯನ್ನು ಒಟ್ಟು ಅರ್ಹ ಫಲಾನುಭವಿಗಳ ಶೇಕಡ 50ಕ್ಕೆ ವಿಸ್ತರಿಸಿ ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕು.
*ಭದ್ರಾ ಮೇಲ್ದಂಡೆ ಯೋಜನೆ*: ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ನೀರು ಪೂರೈಸುವ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. 2023-24ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದಂತೆ ಯೋಜನೆಗೆ ₹5,300 ಕೋಟಿ ಸಹಾಯ ಧನವನ್ನು ಈ ಬಾರಿಯಾದರೂ ಬಿಡುಗಡೆ ಮಾಡಬೇಕು.
*ಮೇಕೆದಾಟು*: ಕಳಸ-ಬಂಡೂರಿ ನಾಲಾ ತಿರುವು ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿ, ಮೇಕೆದಾಟು ಯೋಜನೆಗೆ ಕೂಡಲೇ ಅನುಮೋದನೆ ನೀಡಬೇಕು.
*ಹಣಕಾಸು ಆಯೋಗದ ಅನುದಾನಗಳು*: ವಿಪತ್ತು ಪರಿಹಾರ-15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಾಕಿ ಅನುದಾನ ಮತ್ತು ವಿಪತ್ತು ಪರಿಹಾರ ಮೊತ್ತಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ವಿಶೇಷ ಅನುದಾನ ₹ 5,495 ಕೋಟಿ,ರಾಜ್ಯ ಕೇಂದ್ರಿತ ಅನುದಾನ ₹ 6,000 ಕೋಟಿ,15 ನೇ ಹಣಕಾಸು ಆಯೋಗದ ಅನುದಾನ ಕೊರತೆ ₹4,044 ಕೋಟಿ ನೀಡಬೇಕು. ಬೆಂಗಳೂರು ಬಿಸಿನೆಸ್ ಕಾರಿಡಾರ್ ಹಾಗೂ ಕೆರೆಗಳ ಅಭಿವೃದ್ಧಿಗೆ ತಲಾ ₹ 3,000 ಕೋಟಿ ಕೊಡಬೇಕು.
*ಪ್ರಾದೇಶಿಕ ಸಮಾನತೆ*: ಕಲ್ಯಾಣ ಕರ್ನಾಟಕ ಪ್ರದೇಶವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಡಿಮೆ ಅಂಕ ಹೊಂದಿದ್ದು, ಅದನ್ನು ಉತ್ತಮಗೊಳಿಸಲು ವಾರ್ಷಿಕ ₹5,000 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಬೇಕು.
ಕಲ್ಬುರ್ಗಿಯಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್ ಆಸ್ಪತ್ರೆ) ಸ್ಥಾಪನೆ ಮಾಡಬೇಕು. ಜಿಐ ಟ್ಯಾಗ್ ಹೊಂದಿರುವ ಕಲ್ಬುರ್ಗಿ ತೊಗರಿಬೇಳೆಗೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ ₹10,000 ಕ್ಕೆ ಏರಿಸಬೇಕು.
*ಪ್ರವಾಸೋದ್ಯಮ ಮತ್ತು ಪರಂಪರೆ*: ಹಂಪೆಯನ್ನು ಜಾಗತಿಕ ಪಾರಂಪರಿಕ ತಾಣವಾಗಿ ಅಭಿವೃದ್ಧಿ ಪಡಿಸುವ ಘೋಷಣೆ ಮಾಡಬೇಕು.ಹಂಪೆ ಸಮೀಪ ಹೊಸ ವಿಮಾನ ನಿಲ್ದಾಣ ನಿರ್ಮಾಣ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಮೂಲ ಸೌಕರ್ಯಗಳ ಸುಧಾರಣೆಗೆ ನೆರವು ಒದಗಿಸಬೇಕು.
*ರೈಲು- ಮೂಲ ಸೌಕರ್ಯ*: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ರೈಲು ಮಾರ್ಗಗಳ ಕಾಮಗಾರಿಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಮತ್ತು ಹೊಸ ಮಾರ್ಗಗಳ ಘೋಷಣೆ, ಬೆಂಗಳೂರು ಸೇರಿದಂತೆ ರಾಜ್ಯದ ನಗರ/ಪಟ್ಟಣ ಪ್ರದೇಶಗಳ ರಸ್ತೆ ಮತ್ತು ನೀರು ಪೂರೈಕೆ ಯೋಜನೆಗಳಿಗೆ, ಮೂಲಸೌಕರ್ಯ ಅಭಿವೃದ್ಧಿಗಾಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ವಿಶೇಷ ನೆರವು ಪ್ರಕಟಿಸಬೇಕು.
*ಕೊನೆಯ ಮಾತು*: 16ನೇ ಹಣಕಾಸು ಆಯೋಗ ಮತ್ತು ಕೇಂದ್ರ ಸರ್ಕಾರದಿಂದ ಈ ಬಾರಿಯಾದರೂ ರಾಜ್ಯಕ್ಕೆ ನ್ಯಾಯ ಸಿಗಬಹುದು.ರಾಜ್ಯದಲ್ಲಿನ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಬಹುದು ಎನ್ನುವುದು ರಾಜ್ಯದ ಜನರ ನಿರೀಕ್ಷೆ. ಅದರೊಂದಿಗೆ, ರಾಜ್ಯದಿಂದ ಸಂಸತ್ ಗೆ ಆಯ್ಕೆಯಾದವರಿಂದ ರಾಜ್ಯದ ಪರ ಧ್ವನಿ ಎತ್ತುವುದನ್ನು, ಇತರ ರಾಜ್ಯಗಳ ಸಂಸದರು ಪಕ್ಷಬೇಧ ಮರೆತು ಒಗ್ಗೂಡಿ ತಮ್ಮ ರಾಜ್ಯಗಳ ಹಿತ ಕಾಪಾಡಲು ತೋರಿಸುವ ಕ್ರಿಯಾಶೀಲತೆಯನ್ನು ರಾಜ್ಯದ ಜನ ಬಯಸುತ್ತಿದ್ದಾರೆ.
*ಬೆಂಗಳೂರಿಗೆ ವಿಶೇಷ ನೆರವು*:
ಬೆಂಗಳೂರನ್ನು ಜಾಗತಿಕ ಮಟ್ಟದ ನಗರವಾಗಿ ರೂಪಿಸಲು ₹1.5 ಲಕ್ಷ ಕೋಟಿ ವಿಶೇಷ ನೆರವನ್ನು ರಾಜ್ಯ ಸರ್ಕಾರ ಕೇಳಿದೆ. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲು ಮಾರ್ಗದ ಉದ್ಘಾಟನೆಗಾಗಿ ಕಳೆದ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದಾಗ ನಗರಾಭಿವೃದ್ಧಿ ಸಚಿವರೂ ಆದಂತಹ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿಗೆ ಈ ಸಂಬಂಧ ಮನವಿ ಸಲ್ಲಿಸಿ ನೆರವಿನ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದರು.
*ಸುರಂಗ ರಸ್ತೆ*:ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗಿನ ಉತ್ತರ- ದಕ್ಷಿಣ ಕಾರಿಡಾರ್ ಸೇರಿದಂತೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುರಂಗ ರಸ್ತೆಗಳಿಗೆ ಅನುದಾನದ ನಿರೀಕ್ಷೆ ಇದೆ.
*ಬೆಂಗಳೂರು ಉಪನಗರ ರೈಲು*: ಈ ಯೋಜನೆಗೆ 2022ರ ಆಗಸ್ಟ್‌ನಲ್ಲಿ ಚಾಲನೆ ನೀಡುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 40 ತಿಂಗಳಿನಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ನೀಡಿದ್ದ ಭರವಸೆಯ ಗಡುವು ಡಿಸೆಂಬರ್ 2025 ಕ್ಕೆ ಅಂತ್ಯಗೊಂಡಿದ್ದು, ಈಗ ಆ ಗಡುವು 2030ಕ್ಕೆ ವಿಸ್ತರಣೆಯಾಗಿದೆ.ಕಾಮಗಾರಿ ವೇಗಗೊಳಿಸಲು ಸಕಾಲದಲ್ಲಿ ಅಗತ್ಯದಷ್ಟು ಅನುದಾನದ ಬೇಡಿಕೆ ಇದೆ.
*ಮೆಟ್ರೋ ವಿಸ್ತರಣೆ*: ಬೆಂಗಳೂರಿನ ನಮ್ಮ ಮೆಟ್ರೋ ರೈಲಿನ ಮುಂದಿನ ಹಂತದ ಯೋಜನೆಗಳಿಗೆ ವೇಗವಾಗಿ ಅನುಮೋದನೆ ಮತ್ತು ಕೇಂದ್ರದ ಪಾಲಿನ ಹಣದ ನಿರೀಕ್ಷೆಯಲ್ಲಿ ರಾಜ್ಯ ಇದೆ. ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಪ್ರಸ್ತಾಪ ಸಲ್ಲಿಸಿದ 19 ತಿಂಗಳುಗಳ ನಂತರ ಅನುಮತಿ ನೀಡಿದೆ.ಇದರಲ್ಲಿ ಕೇಂದ್ರದ ಪಾಲು ಶೇಕಡ 20 ರಷ್ಟು ಮಾತ್ರ.