ಪ್ರಾಥಮಿಕ ಮಾತ್ರವಲ್ಲ ಉನ್ನತ ಶಿಕ್ಷಣವನ್ನೂ ಕನ್ನಡದಲ್ಲಿ ಕೊಡಬೇಕು

“ತಮಿಳುನಾಡಿನಂತೆ ನಾವು ಸ್ವಾಭಿಮಾನಿಗಳಾಗಿ  ದ್ವಿಭಾಷಾ ನೀತಿಯನ್ನು ಒಪ್ಪಿಕೊಳ್ಳಲು ಇವತ್ತಿಗೂ ಹಿಂಜರಿಯುತ್ತಿದ್ದೇವೆ. ಇದು ಅತ್ಯಂತ ಕರುಣಾಜನಕವೂ , ಶೋಚನೀಯವೂ , ಅಪಮಾನಕಾರಕವೂ ಅದ ವಿಚಾರವಾಗಿದೆ .‌ ಕನ್ನಡದಲ್ಲೇ  ಕಲಿಯುವ ವ್ಯವಸ್ಥೆಯನ್ನು ನಾವೇ ಕೈಯಾರ ಮುರಿದು ಹಾಕುತ್ತಿದ್ದೇವೆ.” ಇದು ನಮ್ಮ ಕವಿ, ವಿಮರ್ಶಕ ಡಾ. ಕೆ.ಪಿ.ನಟರಾಜ್‌ ಅವರ ಗಟ್ಟಿ ನಿಲುವು. ಹೋದ ವಾರ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ನಟರಾಜ್‌ ಅವರನ್ನು ಆ ಸಂದರ್ಭಕ್ಕೆಂದೇ ಮಾಡಲಾಗಿದ್ದ ಅಪ್ರಕಟಿತ ಸಂದರ್ಶನವಿದು.

   ಪ್ರಾಥಮಿಕ ಮಾತ್ರವಲ್ಲ  ಉನ್ನತ ಶಿಕ್ಷಣವನ್ನೂ  ಕನ್ನಡದಲ್ಲಿ ಕೊಡಬೇಕು

ಗಡಿನಾಡ ಪ್ರದೇಶಗಳಲ್ಲಿ ಕನ್ನಡದ ಪರಿಸ್ಥಿತಿ ಹೇಗಿದೆ ?

*********************************

ಕೆಪಿಎನ್‌:  ಒಳನಾಡುಗಳಲ್ಲೇ  ಪರಿಸ್ಥಿತಿ ಆತಂಕಕಾರಿಯಾಗಿದ್ದು ಕನ್ನಡ ತನ್ನ ಅಸ್ತಿತ್ವಕ್ಕೆ ಬೆದರಿಕೆ ಎದುರಿಸುತ್ತಿದೆ . ಇದೇ ಪರಿಸ್ಥಿತಿ ಗಡಿನಾಡುಗಳಲ್ಲೂ ಮುಂದುವರಿದಿದೆ ಅನ್ನಿಸುತ್ತದೆ  

ಜಗತ್ತಿನ ಯಾವುದೇ  ದೇಶವಾಗಲಿ ಸಮುದಾಯವಾಗಲಿ  ತನ್ನ ಭಾಷೆಯೊಂದಿಗೆ ತನ್ನ ಅವಿನಾಭಾವ  ಅಸ್ತಿತ್ವವನ್ನೂ ಗುರುತನ್ನೂ  ಕಾಪಾಡಿಕೊಂಡಿರುತ್ತದೆ .ದುರದೃಷ್ಟವಶಾತ್ ಕರ್ನಾಟಕ ತನ್ನ ಭಾಷಿಕ  ಗುರುತನ್ನೇ ವಿಸರ್ಜಿಸುತ್ತ ತನ್ನ ನಾಡಲ್ಲೇ ತಾನು ಗುರುತುಗೇಡಿಯಾಗುತ್ತಿದೆ ಭಾಷೆಯ ಜೊತೆಗಿನ ನಂಟನ್ನು ಕಳಚಿಕೊಂಡಂತೆಲ್ಲ ಕರ್ನಾಟಕ ತನ್ನ ಅಸ್ತಿತ್ವ ಕ್ಕೂ ಧಕ್ಕೆ ತಂದುಕೊಳ್ಳುತ್ತಿದೆ..

 

ಯಾವುದೇ  ಭಾಷಿಕ ಸಮುದಾಯ , ತನ್ನ ಭಾಷೆಯ ನ್ನು ರಕ್ಷಿಸಿಕೊಳ್ಳಲು ತನ್ನ ಭಾಷೆಯಲ್ಲಿ ಕಲಿಯುವ  ಸದೃಢ ಶಿಕ್ಷಣ ಮಾಧ್ಯಮ ವನ್ನು ಕಟ್ಟಿಕೊಳ್ಳುತ್ತದೆ . ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೂ ಕಲಿಕಾಮಾಧ್ಯಮವಾಗಿ  ಕನ್ನಡವನ್ನು ಕಟ್ಟಿಕೊಳ್ಳುವುದೊಂದೇ ಕನ್ನಡವನ್ನೂ ಕರ್ನಾಟಕವನ್ನೂ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗ. ಆದರೆ  ಕರ್ನಾಟಕದಲ್ಲಿ ಕನ್ನಡವನ್ನು ಶಿಕ್ಷಣ ಮಾಧ್ಯಮದ ಸ್ಥಾನದಿಂದ ಪದಚ್ಯುತಗೊಳಿಸಲಾಗುತ್ತಿದೆ.. ಈಗ ಯುದ್ಧೋಪಾದಿಯಲ್ಲಿ ಕಟ್ಟಲಾಗುತ್ತಿರುವ 'ಕರ್ನಾಟಕ ಪಬ್ಲಿಕ್ ಶಾಲೆ' ಗಳೆಂಬ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಮೂಲಕ  ಕನ್ನಡದ ಅಸ್ತಿತ್ವದ ಮೇಲೆ   ಬುಲ್ಡೋಜರ್ ಹರಿಸಲಾಗುತ್ತಿದೆ

 

ತಮ್ಮ  ಭಾಷೆಯಲ್ಲಿಯೇ  ಕಲಿಯದ ನಾಡು  ಸಂಸತ್ತಿನಲ್ಲಿ ತನ್ನನ್ನು ಪ್ರತಿನಿಧಿಸಲು ಸೋಲುತ್ತದೆ. ಕರ್ನಾಟಕದ ಸಂಸದರು  ಸಂಸತ್ತಿನಲ್ಲಿ ಕನ್ನಡದ ಮತ್ತು ಕನ್ನಡಿಗರ  ಹಿತಾಸಕ್ತಿಗಳಿಗಾಗಿ   ದನಿಯೆತ್ತಿದ್ದನ್ನು ಎಂದಾದರೂ‌ ನೋಡಿದ್ದೇವೆಯೆ ? ಈ ನಿರಭಿಮಾನ ಮತ್ತು ಕರ್ತವ್ಯ ಚ್ಯುತಿಗೆ  ನಾವು ನಮ್ಮ‌ಭಾಷೆಯಲ್ಲಿ ಕಲಿಯದೇ ಹೋದದ್ದೇ, ಕಲಿಯದೆಹೋಗುತ್ತಿರುವುದೇ  ಕಾರಣವಾಗಿದೆ ಹೀಗಾಗಿ ಕನ್ನಡದ ದನಿ , ಕನ್ನಡಿಗರ ಅಸ್ತಿತ್ವ , ಕನ್ನಡಿಗರ ಗುರುತು, ಒಳನಾಡು ಗಡಿನಾಡು ಎಲ್ಲ ಕಡೆಯೂ ಸಮಾನವಾಗಿ   ಕರುಣಾಜನಕವಾಗಿದೆ 

 

ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ . ನಿಮ್ಮ ಅಭಿಪ್ರಾಯ ?

*****************************************

 

ಕೆಪಿಎನ್‌:  ಈಗಷ್ಟೇ ಮುಗಿದ  ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವೇ ಬಿಡುಗಡೆ ಮಾಡಿದ  ಅಂಕಿ ಅಂಶಗಳು ಆಘಾತ ಕಾರಿಯಾಗಿವೆ . ಕಳೆದ ಹದಿನೈದು ವರ್ಷಗಳಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ  ಶಾಲೆಗಳಲ್ಲಿ ದಾಖಲಾಗುವ  ಮಕ್ಕಳ ಸಂಖ್ಯೆ ೧೭ ಲಕ್ಷದಷ್ಟು ( ಶೇ ೩೦) ಕಡಮೆಯಾಗಿದೆ  ಎಂದು ಸರ್ಕಾರವೇ ಒಪ್ಪಿಕೊಂಡಿದೆ .. 

 

ಇದಕ್ಕೆ ಕಾರಣಗಳೇನು ಎಂಬ ಬಗೆಗೆ  ಸರ್ಕಾರಗಳಾಗಲಿ , ಕನ್ನಡ ಜನತೆಯಾಗಲಿ , ಈ ನಾಡಿನ ಬರೆಹಗಾರರಾಗಲಿ ,ವಿವಿಧ ಕ್ಷೇತ್ರಗಳ  ಬುದ್ದಿಜೀವಿ ಗಳಾಗಲಿ  ಕಂಡುಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ . ಕಾರಣವೇನೆಂದರೆ ಎಲ್ಲರೂ  ಸಾರ್ವತ್ರಿಕವಾಗಿ  ಇಂಗ್ಲಿಷ್ ಮಾಧ್ಯಮದ  ಶಿಕ್ಷಣದ ಹಿಂದೆಬಿದ್ದಿದ್ದಾರೆ .

 

ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಅವನತಿ ಕಾಣಲು ಮುಖ್ಯ  ಕಾರಣ :  ಎಸ್ಎಸ್ಎಲ್ ಸಿ ನಂತರ ಕನ್ನಡ ಮಾಧ್ಯಮದ ಶಿಕ್ಷಣ ಇಲ್ಲದೆ ಇರುವುದು.. ಹತ್ತನೆ ತರಗತಿಯ ನಂತರ ಕನ್ನಡ ಮಾಧ್ಯಮ ದ ಶಿಕ್ಷಣವನ್ನು ನೀಡದೆ ಪ್ರತಿ ವರ್ಷವೂ ಲಕ್ಷ ಲಕ್ಷ ‌ಕನ್ನಡ ಮಾಧ್ಯಮದ ಮಕ್ಕಳನ್ನು ಬೀದಿಪಾಲಾಗುವಂತೆ ಮಾಡಲಾಗುತ್ತಿದೆ.. ಆದ್ದರಿಂದ  ಹತ್ತನೆಯ ತರಗತಿಯ ನಂತರ ಉನ್ನತ ಹಂತಗಳಲ್ಲಿ   ವ್ಯವಸ್ಥಿತವಾದ ಸದೃಢ‌ ಕನ್ನಡ ಮಾಧ್ಯಮವನ್ನು ಕಟ್ಟುವ ಮೂಲಕ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ 

 

ಹಾಗೂ  ಸರ್ಕಾರಿ ಶಾಲೆಗಳು  ದುರ್ಬಲವಾಗಲು  ಇರುವ ಮತ್ತೊಂದು ಕಾರಣ  : 'ಶಿಕ್ಷಣ ಹಕ್ಕು ಕಾಯ್ದೆ' (ಆರ್ ಟಿ‌ಇ) ಈ‌  ಕಾಯ್ದೆಯು ಕಳೆದ ಹತ್ತು ವರ್ಷಗಳಿಂದಲೂ  ಪ್ರತಿ ವರ್ಷ ವೂ  ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ  ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ್   ಖಾಸಗಿ  ಶಾಲೆಗಳಿಗೆ  ಹೊತ್ತೊಯ್ದಿದೆ ‌‌.  ತಾನೇ ಶಾಲಾ ಶುಲ್ಕ ವನ್ನು ತೆತ್ತು ಖಾಸಗಿಯವರನ್ನು  ಕೊಬ್ಬಿಸಿದೆ 

 

ಸರ್ಕಾರಿ ಶಾಲೆಗಳನ್ನು  ಕಳೆದ ಹಲವು  ದಶಕಗಳಿಂದಲೂ  ಹಲವು ಬಗೆಯಲ್ಲಿ  ನಿರ್ನಾಮಗೊಳಿಸುತ್ತ ಬರಲಾಗಿದೆ . ಇತ್ತೀಚಿನ  ಆಕ್ರಮಣ  ಅತ್ಯಂತ ನಿರ್ದಯವಾಗಿದೆ .  ಅದು ‌'ಕರ್ನಾಟಕ ಪಬ್ಲಿಕ್ ಶಾಲೆ'ಗಳೆಂಬ  ಸಮುಚ್ಚಯ ಶಾಲೆಗಳ ಮೂಲಕ ನಡೆಯುತ್ತಿದೆ .. ಈ ಶಾಲೆಗಳು ಮೊದಲಿಗೆ ದ್ವಿಮಾಧ್ಯಮ ಶಾಲೆಗಳಾಗಿವೆ  ನಂತರ  ಈ ಶಾಲೆಗಳ ರಚನೆಯೇ  ಕನ್ನಡ ಶಾಲಾ ಶಿಕ್ಷಣದ  ದೃಷ್ಟಿಯಿಂದ ವಿಧ್ವಂಸಕಾರಿಯಾಗಿದೆ . 

 

ನಮ್ಮಲ್ಲಿ ಸರ್ಕಾರಿ ಶಾಲೆಗಳು ಎಂದರೆ  ಕನ್ನಡ ಮಾಧ್ಯಮ ಶಾಲೆಗಳು  ಎಂದೇ ಭಾವಿಸಿದ್ದೇವೆ. ಆದರೆ ಈ ಶಾಲೆಗಳನ್ನೆಲ್ಲ  ವ್ಯಾಪಕವಾಗಿ   ಇಂಗ್ಲಿಷ್ ಮಾಧ್ಯಮ ದ ಶಾಲೆಗಳನ್ನಾಗಿ ಬದಲಿಸಲಾಗುತ್ತಿದೆ.. ಈ ಬದಲಾವಣೆಯನ್ನು ಏನೇ ಕಾರಣಗಳನ್ನು ಕೊಟ್ಟು ಸಮರ್ಥಿಸಿಕೊಳ್ಳಬಹುದು . ಆದರೆ ಇದು ವಿವೇಕದ ನಿರ್ಧಾರವಲ್ಲ.,ಇದು ಆತ್ಮಹತ್ಯಾ ತ್ಮಕವಾದ ಕೆಲಸ .

 

ಕೆಪಿಎಸ್ ಅಥವಾ ಕರ್ನಾಟಕ ಪಬ್ಲಿಕ್ ಶಾಲೆಗಳ ವಿಷಯಕ್ಕೆ ಬರುವುದಾದರೆ ಈ ಶಾಲೆಗಳು  ಪಾರಂಪರಿಕ ವಾದ ನೆರೆ ಹೊರೆ ಶಾಲೆಗಳ ಕಲ್ಪನೆಯನ್ನೇ ವಿನಾಶ ಮಾಡಿ .  ಗ್ರಾಮ , ಬೀದಿ ,ಬಡಾವಣೆ , ಹಟ್ಟಿ ಹೀಗೆ ಜನವಸತಿಗಳ ಹತ್ತಿರ ಕಟ್ಟಲಾಗಿದ್ದ  ಹತ್ತಾರು , ನೂರಾರು ಶಾಲೆಗಳನ್ನೆಲ್ಲ  ಮುಚ್ಚಿ  ಮಕ್ಕಳ ನೆಲೆಗಳಿಂದ  ದೂರದಲ್ಲಿ  ಇವುಗಳನ್ನು ಕಟ್ಟಲಾಗುತ್ತಿದೆ. 

 

ಪೂರ್ವ  ಪ್ರಾಥಮಿಕ ಹಂತದಿಂದ ಪಿಯುಸಿ ಹಂತದವರೆಗಿನ ಸಂಯೋಜಿತ ಶಾಲೆಗಳಾಗಿರುವ  ಕೆಪಿಎಸ್ ಶಾಲೆಗಳು    ಪ್ರಾಥಮಿಕ , ಮಾಧ್ಯಮಿಕ , ಪ್ರೌಡ , ಪದವಿ ಪೂರ್ವ ಎಂದು ವಿಭಜಿಸಲ್ಪಟ್ಟು ಹಳೆಯ ,  ವ್ಯವಸ್ಥಿತವಾಗಿ ನಿರ್ವಹಿಸಲ್ಪಡುತ್ತಿದ್ದ  ಶೈಕ್ಷಣಿಕ ವ್ಯವಸ್ತೆಯನ್ನೇ  ನಾಶಮಾಡಿದೆ ಜೊತೆಗೆ ಶಿಕ್ಷಣ ಮಾಧ್ಯಮದಲ್ಲಿಯೂ ಸಹ ಅತ್ಯಾಚಾರ ಸಮ ಅತಿಕ್ರಮಣ ನಡೆಸಲಾಗಿದೆ  ಹಳೆಯ ಕನ್ನಡ  ಕಲಿಕಾ ಮಾಧ್ಯಮವನ್ನು  ನಾಶಮಾಡಿ ಇಲ್ಲಿ  ದ್ವಿಮಾಧ್ಯಮ  ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.. 

 

ಯಾವ ನಾಡೂ ಈ ಪರಿಯಲ್ಲಿ  ಸ್ವಹತ್ಯೆಗೆ ಮುಂದಾದ ಉದಾಹರಣೆ ಇಲ್ಲ 

 

ಕರ್ನಾಟಕದ ರಾಜದಾನಿ ಬೆಂಗಳೂರಿನಲ್ಲಿ ಕನ್ನಡದ ಪರಿಸ್ಥಿತಿ ಹೇಗಿದೆ ?

*************************************

ಕೆಪಿಎನ್ : ಎಲ್ಲ  ಮಹಾನಗರಗಳೂ ಸಂಕ್ಷಿಪ್ತ ಭಾರತಗಳೇ ' ಎಂದು ಕುವೆಂಪು ಅವರು ಹೇಳುತ್ತಾರೆ.ಆದರೆ  ಮಹಾನಗರಗಳಿಗೆ ವಲಸೆ ಬರುವ ಅನ್ಯ ರಾಜ್ಯದ ಕನ್ನಡೇತರ ಭಾಷಿಕರು ಇಲ್ಲಿ ಬಂದು ಹಲವು ವರ್ಷಗಳ ಕಾಲ ನೆಲೆಸಿದರೆ   ಇಲ್ಲಿನ ಭಾಷೆಯನ್ನು ಕಲಿಯಬೇಕಾಗುತ್ತದೆ  ಅಥವಾ ಇಲ್ಲಿನ  ಭಾಷೆಯನ್ನು  ಸಹಿಸಬೇಕಾಗುತ್ತದೆ . ಇಲ್ಲಿ  ಅಂತಹ ಅನಿವಾರ್ಯತೆಯನ್ನು ಸೃಷ್ಟಿಸಬೇಕಾದದ್ದು  ಕರ್ನಾಟಕದ ಜನತೆಯ ಮತ್ತು ಕರ್ನಾಟಕ ದ ಸರ್ಕಾರಗಳ  ಆದ್ಯ ಕರ್ತವ್ಯವಾಗಿದೆ. ಆದರೆ   ಇದುವರೆವಿಗೆ  ನಮ್ಮ ನಾಡನಲ್ಲಿ ಆಡಳಿತವನ್ನು ನಿರ್ವಹಿಸಿದ ಸರ್ಕಾರಗಳು ಈ ಕರ್ತವ್ಯದಿಂದ ಚ್ಯುತವಾಗಿವೆ.

 

ಭಾಷಾಧಾರಿತ ಒಕ್ಕೂಟ ತತ್ವವನ್ನು  ಆಧರಿಸಿ ಏಕೀಕರಣಗೊಂಡ ಕರ್ನಾಟಕದಲ್ಲಿ ಕನ್ನಡ ಭಾಷೆಯ ನ್ನು  ಸಾರ್ವಜನಿಕ ಬದುಕಿನ ಭಾಷೆಯನ್ನಾಗಿ ಕಟ್ಟಿಕೊಳ್ಳಲು  ಹಿಂಜರಿಯುತ್ತಲೇಬಂದ ಕರ್ನಾಟಕ ದ ರಾಜ್ಯ ಸರ್ಕಾರಗಳು , ರಾಜಧಾನಿ ಬೆಂಗಳೂರನ್ನು ಕನ್ನಡಿಗರ ಪಾಲಿಗೆ ಜೀವ  ಬೆದರಿಕೆ , ಮಾನ ಬೆದರಿಕೆ , ಅಸ್ತಿತ್ವಕ್ಕೆ ಬೆದರಿಕೆ ಒಡ್ಡುವ ಜಾಗವನ್ನಾಗಿ‌ಮಾಡಿಬಿಟ್ಟಿವೆ.. ಬ್ಯಾಂಕುಗಳಲ್ಲಿ ,  ಸಾರ್ವ ಜನಿಕ ಸ್ಥಳಗಳಲ್ಲಿ ,  ಕೇಂದ್ರೋದ್ಯಮಗಳು ಮತ್ತು ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ   ಕನ್ನಡವನ್ನು ನಿರ್ನಾಮ ಮಾಡಲಾಗಿದೆ .ಅಲ್ಲೆಲ್ಲ ಹಿಂದಿ  ಮತ್ತು ಹಿಂದಿ ಮಾತಾಡುವ ಜನ   ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ.. 

 

ಈ ಎಲ್ಲ   ಕಳವಳಕಾರಿ ಪರಿಸ್ಥಿತಿಗೆ  ಇಲ್ಲಿ ಆಡಳಿತ ನಡೆಸಿದ ಸರ್ಕಾರಗಳೂ , ಅವುಗಳನ್ನು ಆಯ್ಕೆ ಮಾಡಿ  ಭಾಷೆಯ ಬಗೆಗೆ  ನಿರಭಿಮಾನಿಗಳಾಗೂ ನಿಷ್ಕ್ರಿಯರಾಗೂ ಉಳಿದ ಕನ್ನಡ ಜನತೆಯೇ ಕಾರಣ 

 

ನೆಲ ,ಜಲ ,ಭಾಷೆಯ ಬಗ್ಗೆ ನಿಮ್ಮ ಅಭಿಪ್ರಾಯ ?

*********************************************

 

ಕೆಪಿಎನ್‌ : ಭಾಷಾಧಾರಿತ ಒಕ್ಕೂಟ ರಾಷ್ಟ್ರ ವನ್ನು ಕಟ್ಟಿದ ನಮ್ಮ ರಾಷ್ಟ್ರ ನಿರ್ಮಾಪಕರು  , ಪ್ರತಿ ಭಾಷಿಕ ಸಮುದಾಯವೂ ತಾ ನು ನೆಲೆಸಿದ  ಭೌಗೋಳಿಕ ಸೆಲೆಗಳಲ್ಲಿನ ನೈಸರ್ಗಿಕ ಸಂಪತ್ತನ್ನು ಒಳಗೊಂಡು ಸಾಂಸ್ಕೃತಿಕ ಸಂಪತ್ತನ್ನೂ    ಬಳಸಿಕೊಂಡು  ಮತ್ತು ಉಳಿಸಿಕೊಂಡು   ಸರ್ವಾಂಗೀಣವಾದ ಏಳ್ಗೆಯನ್ನು ಕಾಣಲಿ ಎಂಬುದಾಗಿತ್ತು.  ಇಲ್ಲಿನ ನೆಲ ,ಜಲ ,  ಭಾಷೆ ಎಲ್ಲ ಸಂಪತ್ತನ್ನು ಬಳಸಿಕೊಳ್ಳಲು   ಅಗತ್ಯವಾಗಿ ಬೇಕಾಗಿರುವುದು  ನಾವೆಲ್ಲರೂ ಕನ್ನಡಿಗರೆಂಬ   ಸಮಷ್ಟೀ ಪ್ರಜ್ಞೆ . ಈ ಪ್ರಜ್ಞೆ ಯನ್ನೇ ಕಟ್ಟಿಕೊಳ್ಳಲು ನಾವು ಸೋಲುತ್ತಿದ್ದೇವೆ.. ಈ ಕಾರಣದಿಂದಲೇ ನಾವು ಅರ್ಧ ಶತಮಾನದಿಂದಲೂ  ತ್ರಿಭಾಷಾ ನೀತಿಯ ಗುಲಾಮರಾಗಿ ಬಾಳ್ವೆ ನಡೆಸುತ್ತಿದ್ದೇವೆ. ತ್ರಿಭಾಷಾ ನೀತಿಯ ಕಾರಣದಿಂದ  ಹಿಂದಿ ಮತ್ತು ಸಂಸ್ಕೃತ ಗಳು ಕನ್ನಡವನ್ನು   ಕೊನೆಯ ಸ್ಥಾನಕ್ಕೆ ತಳ್ಳುತ್ತಿವೆ. ತಮಿಳುನಾಡಿನಂತೆ ನಾವು ಸ್ವಾಭಿಮಾನಿಗಳಾಗಿ  ದ್ವಿಭಾಷಾ ನೀತಿಯನ್ನು ಒಪ್ಪಿಕೊಳ್ಳಲು ಇವತ್ತಿಗೂ ಹಿಂಜರಿಯುತ್ತಿದ್ದೇವೆ.. ಇದು ಅತ್ಯಂತ ಕರುಣಾಜನಕವೂ , ಶೋಚನೀಯವೂ , ಅಪಮಾನಕಾರಕವೂ ಅದ ವಿಚಾರವಾಗಿದೆ .. ಇನ್ನು ಈಗಾಗಲೇ ಇಲ್ಲಿ ಪ್ರಸ್ತಾಪಿಸಿದಂತೆ ಕನ್ನಡ ದಲ್ಲಿ ಕಲಿಯುವ ವ್ಯವಸ್ಥೆ ಯನ್ನು ನಾವೇ ಕೈಯಾರ ಮುರಿದು ಹಾಕುತ್ತಿದ್ದೇವೆ ,  ಕರ್ನಟಕದಲ್ಲೇ ಇರುವ ಕನ್ನಡ ವಿರೋಧಿಗಳ ಕಾರಣದಿಂದ ಗೋಕಾಕ್ ಚಳವಳಿಯ  ಫಲವನ್ನೂ ಅನುಭವಿಸಲಾರದೆ ಹೋದೆವು., ಭಾಷಾಧಾರಿತ ಒಕ್ಕೂಟ ರಾಷ್ಟ್ರ ತತ್ವದ ಅಡಿಯೇ ಕಟ್ಟಲಾದ  ಏಕೀಕೃತ ಕರ್ನಾಟಕ ದಲ್ಲಿ  ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ  ಜಾರಿ ಮಾಡಿದರೆ  , ಈ ದೇಶದ ಸರ್ವೋಚ್ಚ  ನ್ಯಾಯಾಲಯ ಇದು ಸಾಂವಿದಾನಿಕ ಹಕ್ಕಿನ ಉಲ್ಲಂಘನೆ ಎಂದು ಹೇಳಿತು‌.

 

ನಮ್ಮ ಗಡಿ ಭಾಗಗಳಲ್ಲಿ , ಉದಾಹರಣೆಗೆ ಬೆಳಗಾವಿಯಂತಹ ಕಡೆ ಕನ್ನಡವನ್ನು ದೂಷಿಸುವಂತಹ , ಕನ್ನಡಿಗರ ಮೇಲೆ ಹಲ್ಲೆ ಮತ್ತು ಆಕ್ರಮಣಗಳಿಗೆ ಇಳಿಯುವಂತಹ. ಪರಿಸ್ಥಿತಿ ಇದೆ.ಇಂತಹ ಪರಿಸ್ಥಿತಿಯನ್ನು  ಪೂರ್ಣ ಪ್ರಮಾಣದಲ್ಲಿ  ಕನ್ನಡಿಗರಾಗದ , ಕನ್ನಡಿಗರಾದ  ನಾವೇ ನಿರ್ಮಿಸಿದ್ದೇವೆ . 

 

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದ ಬಗ್ಗೆ ನಿಮ್ಮ ಅಭಿಪ್ರಾಯ ?

***************************************

 

ಕೆಪಿಎನ್‌ : ಕನ್ನಡಿಗರಿಗೆ ಉದ್ಯೋದ ಗಳಲ್ಲಿ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿದ್ದ  ಸರೋಜಿನಿ ಮಹಿಷಿ ಯವರ ವರದಿಯನ್ನು ನಮ್ಮ ಇದುವರೆಗಿನ ಸರ್ಕಾರಗಳು ಕಣ್ಣೆತ್ತಿಯೂ ನೋಡದೆ  ನಿರ್ಲಕ್ಷಿಸಿದವು . ಮಹಿಷಿಯವರು  ವರದಿಯನ್ನು ( ೧೯೮೩ ) ಕೊಟ್ಟು ಹಲವು ದಶಕಗಳೇ ಮುಗಿದುಹೋದವು .. ಆಗ ಅಸ್ತಿತ್ವದಲ್ಲಿ  ಇದ್ದಂತಹ ಸರ್ಕಾರಿ  ಕೇಂದ್ರೋದ್ಯಮಗಳ  ಕಾಲವೇ ಮುಗಿದು ಈಗ. ಖಾಸಗಿ ಕ್ಷೇತ್ರ ದ ಉದ್ಯಮಗಳ ಯುಗ ಕಾಲಿಟ್ಟಿದೆ .ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರ ಪಾಲಿಗಾಗಿ ಹೋರಾಟ  ಮಾಡುವುದನ್ನು ಊಹಿಸಲೂ ಆಗದ ಪರಿಸ್ಥಿತಿ ಈಗ ಏರ್ಪಟ್ಟಿದೆ. ದಿಗ್ಬ್ರಾಂತಿಯ ಸಂಗತಿಯೆಂದರೆ  ಈಗ ಈ ಬಗ್ಗೆ ಮಾತಾಡುವವರೂ ಇಲ್ಲ ದ ಶೂನ್ಯವೊಂದು ಆವರಿಸಿದಂತೆ ನನಗೆ  ವರ್ತಮಾನದ ಕರ್ನಾಟಕ ಕಾಣುತ್ತದೆ.

 

ಇಂತಹ ಪರಿಸ್ಥಿತಿ ಯನ್ನು  ಬದಲಿಸಲು  ನನಗೆ ಕಾಣುವ ದಾರಿ ಒಂದೇ : ಕಳೆದ ಐವತ್ತು ವರ್ಷಗಳಿಂದಲೂ ಹತ್ತನೆಯ ತರಗತಿಯ ನಂತರ ವಿಜ್ಞಾನ ,ತಂತ್ರಜ್ಞಾನ , ಮೂಲ ವಿಜ್ಞಾನ ಗಳ ಶಿಕ್ಷಣವನ್ನು  ಕನ್ನಡದಲ್ಲಿ  ನೀಡದ ಕಾರಣ ,  ಲಕ್ಷ ಲಕ್ಷ ಕನ್ನಡಿಗರು   ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಕಳೆದುಕೊಂಡಿದ್ದಾರೆ.  ಇದನ್ನು ಬದಲಿಸಬೇಕಾದರೆ , ಉನ್ನತ ಶಿಕ್ಷಣ ವನ್ನು ಕನ್ನಡದಲ್ಲಿ ಕೊಡಬೇಕಾಗುತ್ತದೆ  . ಹಾಗಾದಾರೆ  ಕರ್ನಾಟಕದ ಯುವಜನ  ಉದ್ಯೋಗ ಗಳಲ್ಲಿ ತಮಗೆ ಬರಬೇಕಾದ ಪಾಲನ್ನು ಪಡೆಯಲು ಸಮರ್ಥರಾಗುತ್ತಾರೆ.. 

 

ಪರಿಸ್ಥಿತಿ ಹೀಗೆಲ್ಲ  ವ್ಯತಿರಿಕ್ತವಾಗಿರುವಾಗ,   ಕನ್ನಡಕ್ಕೆ ಕನ್ನಡಿಗರಿಗೆ  ಘಾತುಕ ವಾಗಿರುವಾಗ  ಸದ್ಯದ ಸ್ವಾಭಿಮಾನ ಶೂನ್ಯ ಕರ್ನಾಟಕದಲ್ಲಿ ಕನ್ನಡದ  ಅಗತ್ಯಗಳಾದ  ನೆಲ ಜಲ ಬಾಷೆ ಗಳನ್ನು ಹೇಗೆ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ? ಮತ್ತು ಈ ಎಲ್ಲ. ವಿಚಾರಗಳಲ್ಲೂ ಕರ್ನಾಟಕವನ್ನು ಪ್ರತಿನಿದಿಸಬೇಕಾದ  ನಮ್ಮ ರಾಜಕಾರಣಕ್ಕೆ  ಅತ್ಮಗೌರವ ಮತ್ತು  ಘನತೆ ಬರುವುದಾದರೂ ಹೇಗೆ ?

____________________________