ಸೋಮೇಶ್ವರದ ಶತಮಾನ ಮೀರಿದ ಅರಳಿ ಮರದ ನೆರಳಲ್ಲಿ ಅರ್ಧ ಶತಮಾನ ನಿಂತಿರುವ ಈ ನಾನು..,! 

ಸಂಘದ ಚುನಾವಣೆಯ ಕಾರಣಕ್ಕೆ ಎರಡು ವಾರಗಳಿಂದ ಸುನೀತಾ ಹೊಟೆಲ್‌ ಅಡ್ಡೆಗೆ ಕಾಲಿಟ್ಟಿರಲಿಲ್ಲ. ದೇವಣ್ಣ, ಜವಹರ್‌, ಸಿದ್ದಯ್ಯ, ಶ್ರೀನಿವಾಸ್‌, ಹರ್ಷ , ಅಂಜನಮೂರ್ತಿ, ರಮೇಶ್‌, ಉಗಮ ಇವರೆಲ್ಲರ ಜೊತೆಗೆ ಬಾಲ್ಯದ ಗೆಳೆಯ ದೇವರಾಯಪಟ್ಣ ಯತೀಶ ಜೊತೆ ಲೆಸ್‌ ಕಾಫಿ ಕುಡಿದ ಮೇಲೇ ಇವತ್ತಿನ ಬೆಳಗು ಸಮಾಧಾನ ಕೊಟ್ಟದ್ದು.

ಸೋಮೇಶ್ವರದ ಶತಮಾನ ಮೀರಿದ ಅರಳಿ ಮರದ  ನೆರಳಲ್ಲಿ ಅರ್ಧ ಶತಮಾನ ನಿಂತಿರುವ ಈ ನಾನು..,! 

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

 

    ರಾತ್ರಿ ಮಲಗುವಾಗ ಪೂರ್ತಿ ಮುಚ್ಚುವುದನ್ನು ಮರೆತಿದ್ದ ಅರೆತೆರೆದ ಕಿಟಕಿಯೊಳಗಿಂದ ಬೀಸಿದ ಥಂಡಿ ಗಾಳಿಗೆ ಬೆಳಗಿನ ಐದೂವರೆಗೇ ಎಚ್ಚರವಾಗಿಬಿಟ್ಟಿತು. ಅರೆ ಮತ್ತೆ ಚಳಿಗಾಲ, ಎದ್ದು ಸೂರ್ಯ ಹುಟ್ಟುವ ದಿಕ್ಕಿಗೇ ಇರುವ ಅದೇ ಕಿಟಕಿಯಿಂದ ಹೊರ ನೋಡಿದರೆ ತೀರಾ ಕತ್ತಲು, ಬೆಳಗಾಗುವ ಲಕ್ಷಣವೇ ಇಲ್ಲ ಎನ್ನುವಷ್ಟು ಕಗ್ಗತ್ತಲು.

    ಚಾರ್ಜಿಗೆ ಹಾಕಿದ್ದ ಮೊಬೈಲ್‌ಗೆ ಕೈ ಹಾಕಿ ಎಳೆದುಕೊಂಡು, ಅದಕ್ಕೆ ತಗುಲಿಕೊಂಡಿದ್ದ ಚಾರ್ಜಿಂಗ್‌ ಕೇಬಲ್‌ ವೈರ್‌ ಕಿತ್ತು ಬಿಸಾಕಿ, ಪ್ಯಾಟರ್ನ್‌ ಎಳೆದು ಲಾಕ್‌ ತೆರೆಯುವ ಮುನ್ನವೇ ಸ್ಕ್ರೀನ್‌ನಲ್ಲಿ ಕಂಡ ಮಗಳ ಮುದ್ದು ಮುಖವನ್ನು ಕಂಡು ಮುಗುಳ್ನಕ್ಕು , ಮನದೊಳಗೇ ಗುಡ್‌ ಮಾರ್ನಿಂಗ್‌ ಹೇಳಿ, ವಾಟ್ಸ್‌ಪ್‌ ಹೊಕ್ಕು , ತಾಲೂಕು, ಇತರ ಜಿಲ್ಲೆಗಳಿಗೆ ಹೋಗಬೇಕಿದ್ದ ಎಲ್ಲ ಬಂಡಲ್‌ಗಳು ಹೋದವೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು,  ರಾತ್ರಿ ಮಲಗುವ ಮುನ್ನ ಎಫ್‌ಬಿಗೆ ಹಾಕಿದ್ದ ಪೋಸ್ಟ್‌ಗೆ ಬಿದ್ದಿರುವ ಲೈಕುಗಳೆಷ್ಟು, ಹೊಸ ಕಾಮೆಂಟುಗಳು ಯಾರವು, ನೆಗೆಟಿವ್‌ ಯಾವಾರ ಅವಾ ಅಂತ ಗಮನಿಸಿ, ಇನ್‌ಸೈಟ್‌ ಕ್ಲಿಕ್‌ ಮಾಡಿ ಒಟ್ಟು ಎಷ್ಟು ವ್ಯೂಸ್‌ಗಳಾಗಿವೆ ಅಂತ ಲೆಕ್ಕ ನೋಡಿ, ವಾಪಸ್‌ ಹೋಮ್‌ ಐಕಾನ್‌ ಕ್ಲಿಕ್‌ ಮಾಡಿ ಯಾರದಾದರೂ ಹೊಸ ಪೋಸ್ಟ್‌ಗಳು ಬಂದವಾ ಅಂತ ನೋಡುವ ಹೊತ್ತಿಗೆಅದೇ ಮೊಬೈಲ್‌ನೊಳಗೆ ಆರು ಗಂಟೆಗೆ ಇಟ್ಟಿರುವ ಅಲಾರಂ ಕುಯ್‌ ಕುಯ್‌ ಅನ್ನಲು ಶುರು ಮಾಡಿತು. ಅದನ್ನು ಡಿಸ್‌ಮಿಸ್‌ ಮಾಡಿ ಎದ್ದೆ.

    ಎದ್ದು ಬಾಗಿಲು ತೆಗೆದರೆ ಬೀಸುವ  ಅದೇ ಥಂಡಿಗೆ ಮುಖವೊಡ್ಡುವ  ದೈರ್ಯವಾಗದೇ ಮತ್ತೆ ರೂಮಿಗೆ ನುಗ್ಗಿ ರಗ್ಗಿನೊಳಗೆ ಕೈಕಾಲು ಮೈ ತೂರಿಸಿ ಅಲ್ಲೇ ಹಂಗೇ ಗೂಡ್ರಿಸಿಕೊಂಡು ಮಲಗುವಾಸೆಯನ್ನು ಹೊರಗೆ ಅಂಗಳದಲ್ಲಿ ಟಪ್‌ ಅಂತ ಪತ್ರಿಕೆ ಬಿದ್ದ ಸದ್ದು ರದ್ದು ಮಾಡಿಬಿಟ್ಟಿತು. ನಡೆದರೆ ಎಡವಿ ಬೀಳುವಂತೆ ನಿದ್ದೆಗಣ್ಣಲ್ಲಿ ಅಡ್ಡಾದಿಡ್ಡಿ ಸುತ್ತಿಕೊಂಡಿದ್ದ ಪಂಚೆಯನ್ನು ಮತ್ತೆ ಸರಿಯಾಗಿ ಸುತ್ತಿಕೊಂಡು, ಟೋಪಿಯ ಜೊತೆಗೆ ಮಫ್ಲರ್‌ ಅನ್ನೂ ಕೊರಳ ಸುತ್ತ ಸುತ್ತಿಕೊಂಡು ಬಾಗಿಲು ತೆಗೆದು ಕೆಳಗಿಳಿದು ಬಂದು ಅಂಗಳದಲ್ಲಿ ಅನಾಥವಾಗಿ ಬಿದ್ದಿದ್ದ ಪತ್ರಿಕೆಗಳನ್ನು ಎತ್ತಿಕೊಂಡು ಅತ್ತಿತ್ತ ನೋಡಿದರೆ ಕೊರೆವ ಚಳಿಯಲ್ಲೂ ಸ್ನಾನ ಮಡಿ ಮುಗಿಸಿ, ಆ ಕವುಗತ್ತಲಲ್ಲೂ ಭದ್ರಮ್ಮನ ಛತ್ರದ ಮಗ್ಗುಲಿನ ಸೋಮೇಶ್ವರ ದೇವಸ್ಥಾನಕ್ಕೆ ಧಾಪುಗಾಲು ಹಾಕುತ್ತ ಹೋಗುತ್ತಿರುವ ಧನುರ್ಮಾಸಧಾರಿಗಳು ಕಂಡರು.

   ಇದು 2025 , ಇಂದಿಗೆ ಸರಿಯಾಗಿ 52 ವರ್ಷಗಳ ಹಿಂದೇ ಅಕ್ಟೋಬರ್‌- ನವೆಂಬರ್‌ ತಿಂಗಳಲ್ಲಿ ಇದೇ ಸೋಮೇಶ್ವರಕ್ಕೆ ಬಂದು ನೆಲೆಸಿದ ದಿನಗಳು ನೆನಪಾದವು.  ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಒಂದೆರಡು ವರ್ಷ ವಾಸವಿದ್ದ ನಾವು ಈ ತುಮಕೂರಿಗೆ,ಈ ತುಮಕೂರಿನ ಇದೇ ಸೋಮೇಶ್ವರ ಪುರಕ್ಕೆ ಶಿಫ್ಟ್‌ ಆದದ್ದು 1973ರ ಅಕ್ಟೋಬರ್‌ ತಿಂಗಳ ದಸರಾ ರಜೆಯಲ್ಲೇ ಹೌದು.

     ಮೊದಲಿಗೆ ಏಳನೇ ಕ್ರಾಸ್‌ನಲ್ಲಿ ಅವತ್ತು ಎಸ್‌ಎಂ ಇಂಗ್ಲಿಷ್‌ ಸ್ಕೂಲ್‌ ಪಕ್ಕದಲ್ಲಿದ್ದ ಸಂದಿ ಮನೆಯಲ್ಲಿ ಕೆಲವು ತಿಂಗಳು, ನಂತರ ದೊಡ್ಡ ಅರಳಿಕಟ್ಟೆಯ ಎದುರು ಎಂಟು- ಒಂಬತ್ತನೇ ಕ್ರಾಸುಗಳನ್ನು ಸೀಳುವ ಅಡ್ಡ ರಸ್ತೆಯಲ್ಲಿ ಸೌದೆ ಡಿಪೋ ಕೆಂಪಮ್ಮನವರ ಮನೆ ಎದುರು ಕಿವಿಗೆ ಕೆಂಪು ವಾಲೆ ಹಾಕಿಕೊಂಡು, ಜುಟ್ಟು ಕಟ್ಟಿಕೊಂಡಿದ್ದ ರೇವಣ್ಣನವರು ಅಮ್ಮನನ್ನು ಪೂಜಿಸಿಕೊಂಡಿದ್ದ ಮನೆಯ ಎದುರಿಗೆ ಮಲ್ಲಣ್ಣ- ಬೈರಪ್ಪನ ಕಡ್ಲೆಬೀಜದ ಭಟ್ಟಿಯ ಪಕ್ಕದ ಮನೆಯಲ್ಲಿ ಒಂದೂವರೆ ವರ್ಷ ಇದ್ದೆವು. ಆಮೇಲೆ ಸೀದಾ ಒಂದನೇ ಕ್ರಾಸಿಗೆ, ಅಲ್ಲಿ ಇವತ್ತು ವಾಸವಿ ದೇವಾಲಯ ಇರುವ ವೀರಣ್ಣ ಕಾಂಪೌಂಡ್‌ ಎಂದು ಕರೆಯುತ್ತಿದ್ದ ಐದಾರು ಬಾಡಿಗೆ ಮನೆಗಳಿದ್ದ ಆವರಣಕ್ಕೆ ಶಿಫ್ಟ್‌ ಆದೆವು. ಅಲ್ಲಿ ಕನಿಷ್ಟ ಮೂರ್ನಾಲ್ಕು ವರ್ಷ ಇದ್ದೆವು ಅಂತ ಕಾಣುತ್ತದೆ. ಆನಂತರ ಎಂಸಿ ಕಾಲೋನಿ ಫಸ್ಟ್‌ ಕ್ರಾಸ್‌, ಬಳಿಕ ಶೆಟ್ಟಿ ಹಳ್ಳಿ ಗೇಟ್‌ ಆಚೆ ರಾಘವೇಂದ್ರ ಮಠದ ಎದುರಿನ ಬಾಡಿಗೆ ಮನೆ. ಕಡೆಗೆ ದೇವನೂರು ರಸ್ತೆಯಲ್ಲಿರುವ ಭಾಗ್ಯ ನಿಲಯಕ್ಕೆ. ಬಹುಪಾಲು ಆ ಮನೆಯೇ ನಮ್ಮ ತುಮಕೂರು ವಾಸದ ಕಡೇ ಮನೆ ಆಗುತ್ತದೆ ಅಂತ ಅಂದುಕೊಂಡಿದ್ದೆ. ಅದು ಹಾಗೆ ಆಗಲಿಲ್ಲ. ಸ್ವಂತ ಮನೆ ಕಟ್ಟಿದವರಿಗೆ ಇರುವಂತೆ ಜೀವನ ಪೂರಾ ಒಂದೇ ಮನೆಯಲ್ಲಿ ಇದ್ದು ಸಾಯುವ ಅನಿವಾರ್ಯತೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುವ ನನ್ನಂತವರಿಗೆ ಇಲ್ಲ. ಮನೆ ಇಷ್ಟವಾಗಲಿಲ್ಲ ಅಂತಲೋ ಓನರ್ರೋ ಅಥವಾ ಆತನ  ಹೆಂಡತಿ ವಾನರಿ ಕಿರಿಕ್‌ ಅಂತಲೋ, ತೀರಾ ಬೇಡ ಅಂದರೆ ಅಕ್ಕಪಕ್ಕದವರ ಕಿರಿಕಿರಿ ಅಂತಲೋ ಮನೆ ಬದಲಿಸಲು ಇಂತದ್ದೇ ಅಂತ ಒಂದು ಕಾರಣ ಬೇಕಿಲ್ಲ. ಅಷ್ಟು ವರ್ಷದಿಂದ ನೋಡ್ತಾ ಇದ್ದೀವಿ ಅದೇ ಮನೇಲಿ ಇದ್ದೀರಾ ಅದು ನಿಮ್ಮ ಸ್ವಂತ ಮನೆ ಅಂತ ಅಂದುಕೊಂಡು ಬಿಟ್ಟಿದ್ದೆ ಅಂತ ಯಾವನಾರ ಗೆಳೆಯನೋ ನೆಂಟನೋ ಹೇಳಿದರೆ ಸಾಕು ಅದೇ ನೆಪವಾಗಿ ಮನೆ ಬದಲಿಸಿಬಿಡುವ ಫ್ರೀಡಂ ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಇದ್ದೇ ಇರುತ್ತದೆ ಅಲ್ವಾ. ಬದಲಾವಣೆಯೊಂದೇ ಶಾಶ್ವತ ಎನ್ನುವ ಮಾತಿನಂತೆ.

     1977-78ರಲ್ಲಿ ದೇಶದಲ್ಲಿ ಇಂದಿರಾಗಾಂಧಿ ಜಾರಿ ಮಾಡಿದ  ಎಮರ್ಜೆನ್ಸಿ ಎಂಬ ತುರ್ತು ಪರಿಸ್ಥಿತಿಯ ಬಿಸಿ ನಮ್ಮೂರಿಗೂ ಅದರಲ್ಲೂ ಸೋಮೇಶ್ವರ ಪುರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ತಟ್ಟಿತು. ಒಂದು ಈ ಎಮರ್ಜೆನ್ಸಿ ವಿರುದ್ದ ಕದ್ದು ಮುಚ್ಚಿ ಹೋರಾಟ ನಡೆಸುತ್ತಿದ್ದ ಆರ್‌ ಎಸ್‌ ಎಸ್‌ ಕಚೇರಿಯ ಕೇಂದ್ರ ಸ್ಥಾನ ಸಾಧನಾ ಎಂಬ ಕಟ್ಟಡ ಇದ್ದದ್ದು ಇದೇ ಸೋಮೇಶ್ವರದ ಪಾರ್ಕ್‌ ರಸ್ತೆಯಲ್ಲಿ ಎಂಬ ಕಾರಣವೋ, ಅವತ್ತಿನ ಮಟ್ಟಿಗೆ ಹೆಚ್ಚು ವಿದ್ಯಾವಂತರು, ಶಿಕ್ಷಕರು, ಉಪನ್ಯಾಸಕರು ಹಾಗೂ ಸರ್ಕಾರಿ ನೌಕರರಿಯಲ್ಲಿದ್ದ ಮಧ್ಯಮ ವರ್ಗದವರು ಇದ್ದದ್ದು ಇದೇ ಬಡಾವಣೆಯಲ್ಲಿ ಎನ್ನುವ ಕಾರಣಕ್ಕೋ , ಅವತ್ತಿನ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯ ಕೆ.ಲಕ್ಕಪ್ಪನವರು ಇದ್ದದ್ದು ಇದೇ ಸೋಮೇಶ್ವರದಲ್ಲೇ ಎಂಬ ಕಾರಣಕ್ಕೋ ಅಥವಾ ಇವೆಲ್ಲ ಸೇರಿ ಉಂಟು ಮಾಡಿದ ಪರಿಣಾಮದ ಕಾರಣಕ್ಕೋ  ಆ ಅವಧಿಯಲ್ಲಿ ಇರುಳಿಡೀ ಸೈರನ್‌ ಕೂಗಿಸಿಕೊಂಡು ಸೋಮೇಶ್ವರದ ಮುಖ್ಯ  ರಸ್ತೆಯಲ್ಲಿ ಅಡ್ಡ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಪೊಲೀಸ್‌ ಜೀಪ್‌ಗಳು ಮಲಗಿದ್ದವರ ನಿದ್ದೆಗೆಡಿಸುತ್ತಿದ್ದವು. ಸೋಮೇಶ್ವರದ ಒಂದನೇ ಕ್ರಾಸಿನ ಭಾರತಿ ಸ್ತ್ರೀ ಸಮಾಜಕ್ಕೆ ಅಂಟಿಕೊಂಡಿದ್ದ ಕೊನೇ ಹೆಂಚಿನ ಮನೆಯಲ್ಲಿ ವಾಸವಿದ್ದ ಕಚ್ಚೆಪಂಚೆ, ಕರಿಕೋಟು, ಮೈಸೂರು ಪೇಟದ ವಕೀಲರ ಮನೆಯಲ್ಲಿದ್ದ ಕೆಲ ಯುವಕರು ಎಮರ್ಜೆನ್ಸಿ ವಿರುದ್ದದ ಹೋರಾಟದಲ್ಲಿ ಸಕ್ರಿಯವಾಗಿದ್ದರು. ಪೊಲೀಸರು ಇವತ್ತು ಅವರನ್ನು ಹಿಡಿದುಕೊಂಡು ಹೋದರಂತೆ ಇವತ್ತು ಇವರನ್ನು ಕರೆದುಕೊಂಡು ಹೋದರಂತೆ ಎಂಬ ಮಾತು ಸಾಮಾನ್ಯವಾಗಿತ್ತು.

   ಕಡೆಗೂ ಎಮರ್ಜೆನ್ಸಿ ಮುಗಿಯಿತು. ಮೀಸಾ ಅಡಿ ಬಂಧಿತರಾಗಿ ಒಂದೂವರೆ ವರ್ಷ ಬೆಂಗಳೂರಿನ ಸೆಂಟ್ರಲ್‌ ಜೈಲಿನಲ್ಲಿದ್ದ ಸುಮಾರು ಜನ ತುಮಕೂರಿಗೆ ಹಿಂದಿರುಗಿದರು. ಅವರನ್ನೆಲ್ಲ ತುಮಕೂರಿನ ಬಿ.ಹೆಚ್‌.ರಸ್ತೆಯಲ್ಲಿ ಮದುವೆ ಗಂಡು ಹೆಣ್ಣಿನಂತೆ ಟ್ರಾಕ್ಟರ್‌ಗಳ ಮೇಲೆ ಬೆಂಚು ಕಟ್ಟಿ, ಬೆಡ್‌ಶೀಟ್‌ ಹರಡಿ, ಮೆರವಣಿಗೆ  ಮಾಡಲಾಯಿತು. ಹೀಗೆ ಜೈಲಿನಿಂದ ಹಿಂದಿರುಗಿದ ಅವತ್ತಿನ ಮಟ್ಟಿಗೆ ಹೀರೋಗಳಾಗಿದ್ದವರ ಮೆರವಣಿಗೆ ಸೋಮೇಶ್ವರಕ್ಕೂ ಬರಲಿ ಅಂತ ಕೇಳಿದಾಗ, ನಿಮ್ಮ ಏರಿಯಾದೊಳಗೆ ಟ್ರಾಕ್ಟರ್‌ಗಳು ಬರಲಾಗಲ್ಲ, ರೋಡು ಅಗಲ ಇಲ್ಲ ಅಂತ ಕೈಯಾಡಿಸಿಬಿಟ್ಟಿದ್ದರು ಮೆರವಣಿಗೆ ಅರೇಂಜ್‌ ಮಾಡಿದ್ದವರು. ಆದರೆ, ದಿನವೂ ಚಿಕ್ಕಪೇಟೆಯ ಬಾವಿಕಟ್ಟೆಯ ಮನೆಯವರ ಹತ್ರ ಹಾಲು ಅಳೆಸಿಕೊಂಡು ಬಂದು ಪಾರ್ಕ್‌ ರಸ್ತೆಯ ಮೂಲೆ ಮಳಿಗೆಯಲ್ಲಿ ಲೀಟರ್‌, ಅರ್ಧ ಲೀಟರ್‌ , ಕಾಲು ಲೀಟರ್‌ ಲೆಕ್ಕದಲ್ಲಿ ಬಕೆಟ್‌ನಿಂದ ಅಳೆದು ಮಾರುತ್ತಿದ್ದ ರಾಜೇಂದ್ರ ಪ್ರಸಾದ್‌ ಅವತ್ತು ಈ ಹೀರೋಗಳಿಗಾಗಿ ಇಡೀ ಹಾಲನ್ನು ಕಾಯಿಸಿ ಬಾದಾಮಿ ಪೌಡರ್‌ ಹಾಕಿ ಜನರಿಗೆ ಹಂಚಲೆಂದು ರೆಡಿ ಮಾಡಿಸಿ ಇಟ್ಟಿದ್ದರು. ಯಾವಾಗ ಮೆರವಣಿಗೆ ಸೋಮೇಶ್ವರದ ಒಳಕ್ಕೆ ಬರಲ್ಲ ಅಂತ ಗೊತ್ತಾಯಿತೋ ನಾವೆಲ್ಲ ಒಂದು ಐವತ್ತು ಹುಡುಗರು ಬಿ.ಹೆಚ್‌. ರಸ್ತೆಗೇ ಹೋಗಿ ಆ ಟ್ರಾಕ್ಟರ್‌ಗಳ ಮುಂದೆ ಉದ್ದಕ್ಕೆ ಮಲಗಿ ಬಿಟ್ಟೋ. ಕಡೆಗೆ ಪ್ರೊಸೆಶನ್‌ ಸೋಮೇಶ್ವರದ ಒಳಕ್ಕೆ ಬಂತೆನ್ನಿ. ಮುಂದೆ ಎರಡು ಅವಧಿಗೆ ತುಮಕೂರಿನ ಶಾಸಕರಾಗಿ ಚುನಾಯಿತರಾದ , ಮಂತ್ರಿಯೂ ಆದ ಚೌಡಯ್ಯನ ಪಾಳ್ಯದ ಲಕ್ಷ್ಮೀನರಸಿಂಹಯ್ಯ (ಲಚ್ಚಣ್ಣ), ಅವರ ನಂತರ ನಾಲ್ಕು ಅವಧಿಗೆ ಶಾಸಕರಾಗಿ ಪುಟ್ಟ ಅವಧಿಗೆ ಮಂತ್ರಿಯೂ ಆದ ಸೊಗಡು ಶಿವಣ್ಣನವರು ಇದೇ ಎಮರ್ಜೆನ್ಸಿ ವಿರೋಧಿಸಿ ಜೈಲಿಗೆ ಹೋಗಿ ಬಂದವರ ತಂಡದಲ್ಲಿ ಪ್ರಮುಖರಾಗಿದ್ದರು.

     ಅರ್ಧ ಶತಮಾನದ ಹಿಂದೆ ದೇಶವನ್ನು ಆಳುತ್ತಿದ್ದ ಕಾಂಗ್ರೆಸ್‌ ಎಮರ್ಜೆನ್ಸಿ ಹೇರಿದ ಕಾರಣಕ್ಕೆ ಅವತ್ತಿನ ಮಟ್ಟಿಗೆ ಜನರ ಶತ್ರುವಾಗಿ, ಪ್ರಜಾ ಪ್ರಭುತ್ವದ ವಿರೋಧಿಯಾಗಿ ರೂಪುಗೊಂಡಿತ್ತು. ಏಳನೇ ಕ್ಲಾಸಿನ ಪಬ್ಲಿಕ್‌ ಪರೀಕ್ಷೆ ಬರೆದಿದ್ದ ನಾನು 1978ರ ಚುನಾವಣೆಯಲ್ಲಿ ಇವತ್ತಿನ  ಭಾರತೀಯ ಜನತಾ ಪಾರ್ಟಿ ಯಾನೆ ಬಿಜೆಪಿ ಮತ್ತು ಅವತ್ತಿನ ಭಾರತೀಯ ಜನಸಂಘ ಎನಿಸಿದ್ದ ಆರ್‌ಎಸ್‌ಎಸ್‌ನ ರಾಜಕೀಯ ವಿಭಾಗದ ಪರ ಪ್ರಚಾರ ಮಾಡಿದ್ದೆ ಅಂತ ನೆನಪಿಸಿಕೊಂಡರೆ ನನಗೇ ಈಗ ಅಚ್ಚರಿ ಎನಿಸಿಬಿಡುತ್ತದೆ. ನಿನ್ನೆ ಬಿಹಾರದ ವಿಧಾನ ಸಭಾ ಚುನಾವಣೆಯಲ್ಲಿ ಮೋದಿ ಮತ್ತು ಅಮಿತ್ ಶಾಗಳಿಬ್ಬರೂ ಚಿಕ್ಕ ಮಗುವಂತೆ ನಿಂತಿರುವ ಇನ್ನಿಲ್ಲದಂತೆ ನೆಲಕಚ್ಚಿದ ಕಾಂಗ್ರೆಸ್‌ ಅಧಿನಾಯಕ ರಾಹುಲ್‌ ಗಾಂಧಿಗೆ ಸಿಹಿ ತಿನ್ನಿಸುತ್ತಿರುವ ಎಐ ಭಾವಚಿತ್ರವನ್ನು ಫೇಸ್‌ ಬುಕ್‌ನಲ್ಲಿ ಶೇರ್‌ ಮಾಡಿದ ಕಾರಣಕ್ಕೆ, ಕುಚ್ಚಂಗಿ ಪ್ರಸನ್ನ ನಿಮ್ಮಂತವರಿಂದ ಇಂತಾದ್ದನ್ನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ ಎಂಬರ್ಥ ಬರುವ ಕಾಮೆಂಟ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ.  ಯಾಕೆ ನಾನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಟೀಕೆ ಮಾಡಬಾರದಾ, ವ್ಯಂಗ್ಯ ಮಾಡಿರುವ ಎಐ ರಚಿಸಿರುವ ಪೋಸ್ಟರ್‌ಗಳನ್ನು ಶೇರ್‌ ಮಾಡಿಕೊಳ್ಳಬೇಡವಾ, ನಾನು ಬಿಜೆಪಿಯಲ್ಲಿ ಮುಂದೆಂದೂ ಅಸೆಂಬ್ಲಿ ಟಿಕೆಟ್‌ ಸಿಗಲ್ಲ ಅಂತ ಸ್ವತಃ ಗೊತ್ತಿದ್ದರೂ ಅಲ್ಲೇ ಇರುವ ಶಪಥ ಮಾಡಿಕೊಂಡಿರುವ ವೈದ್ಯ ಗೆಳೆಯರ ತರದ  ಆರ್‌ ಎಸ್‌ಎಸ್‌ – ಬಿಜೆಪಿ ಕಟ್ಟರ್‌ ಬೆಂಬಲಿಗನಾ.

    ಅಲ್ಲರೀ, ಈ ಕಾಂಗ್ರೆಸ್‌ ನಾಯಕರಿಗೇನು ದಾಡಿ , ಇವರ ಕಾಲು ಅವರು, ಅವರ ಕಾಲು ಇವರು ಎಳೀದೇ, ನೇರುಪ್ಪಾಗಿ ಎಲೆಕ್ಷನ್‌ ಮಾಡಿ ಗೆದ್ದು ಬರೋಕೆ ಆಗಲ್ವಾ ಅನ್ನೋ ಅರ್ಥ ಬರೋ ಹಂಗೆ ನಮ್ಮ ಕೆಲ ಬುದ್ದಿ ಜೀವಿಗಳು ಎಫ್‌ಬಿಯಲ್ಲಿ ದುಕ್ಕದಿಂದ ಬರೆಯುತ್ತಿರುವುದನ್ನು ನೋಡಿದರೆ ಅವರಿಗಿಂತ ನಾನು ಆರೋಗ್ಯಕರ ಪರಿಸ್ಥಿತಿಯಲ್ಲಿದ್ದೇನೆ ಅಂತ ಭಾವಿಸಿದ್ದೇನೆ.

    “ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಗೆಲ್ಲಲು ಹಲವು ಕಾರಣಗಳಿದ್ದವು, ಮಹಾ ಘಟಬಂಧನಕ್ಕೆ ಸೋಲಲು ಹಲವು ಕಾರಣಗಳಿದ್ದವು” ಅಂತ ಆರಂಭಿಸಿ 700 ಪದಗಳಲ್ಲಿ ಅಚ್ಚುಕ್ಕಟ್ಟಾದ ಚುನಾವಣೆ ವಿಶ್ಲೇಷಣೆ ಮಾಡಿ ಮುಗಿಸಿದ ಸಿದ್ದರಾಮಯ್ಯನವರ ಮಾಜಿ ಮಾಧ್ಯಮ ಸಲಹೆಗಾರರು ತಮ್ಮನ್ನು ವಿಧಾನ ಸಭೆಗೆ ನಾಮಕರಣ ಮಾಡದ ಕಾಂಗ್ರೆಸ್‌ ಅನ್ನು ನೋಡಿ ಹೇಗೆ ನಾಜೂಕಾಗಿ ಬೈದವರೆ ಅಂತ ಬೆಳಿಗ್ಗೆ ವಾಕಿಂಗ್‌ ಮುಗಿಸಿ ಬಂದ ಕಿಡಿಗೇಡಿ ಪತ್ರಕರ್ತ ಗೆಳೆಯನೊಬ್ಬ ಕುಟುಕಿದ, ಅವನ ಪ್ರಕಾರ ನಾನು ಅವರ ಅಂಧ ಭಕ್ತನಂತೆ. ಇರಲಿ ನನ್ನದೇನೂ ತಕರಾರಿಲ್ಲ.

      1978ರಲ್ಲಿ ತುಮಕೂರಿನಲ್ಲಿ ದೀಪದ ಗುರ್ತಿನ ಮೇಲೆ ನಿಂತಿದ್ದ ಜನತಾ ರಂಗದ ಭಾಗವಾಗಿದ್ದ  ಜನಸಂಘದ ಅಭ್ಯರ್ಥಿಗಳಲ್ಲಿ ಯಾರೂ ಗೆಲ್ಲದೇ ಹೋದರೂ, ಕ್ರಮೇಣ ಜನತಾ ಪಕ್ಷ ಬೆಳೆದು ಇಡೀ ಜಿಲ್ಲೆಯನ್ನು ಆವರಿಸಿಕೊಂಡು, ಜನತಾ ದಳವಾಗಿ ಬದಲಾದಾಗಲೂ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿತಾದರೂ, ಜೆಡಿಎಸ್‌ ಆದ ಮೇಲೆ ಅಲ್ಲೊಂದು ಇಲ್ಲೊಬ್ಬರು ಗೆದ್ದರೆ ಹೆಚ್ಚು ಅನ್ನುವ ಸ್ಥಿತಿ ತಲುಪಿದರೂ ಅವರ ಸ್ಥಾನವನ್ನು ಬಿಜೆಪಿ ಹೊಡೆದುಕೊಳ್ಳಲಾಗಲಿಲ್ಲ. ಹಾಗಾಗಿ ಕಾಂಗ್ರೆಸ್-‌ ಬಿಜೆಪಿ- ಜೆಡಿಎಸ್‌ ಮೂರೂ ಅವರ ಜೋಕರ್‌ ಕಾರ್ಡ್‌ಗಳನ್ನು ಇವರೂ, ಇವರ ಜೋಕರ್‌ ಕಾರ್ಡ್‌ಗಳನ್ನು ಅವರೂ ಹಾಕಿಕೊಂಡ ಶೋ ಮಾಡಲು ಸಾಧ್ಯವಾಗಿರುವುದೂ ಈ ಜಿಲ್ಲೆಯಲ್ಲೇ .

     ಕಾಂಗ್ರೆಸ್‌ನಲ್ಲಿ 21 ವರ್ಷ ಜಿಲ್ಲಾಧ್ಯಕ್ಷರಾಗಿದ್ದ ಜಿ.ಎಸ್.ಬಸವರಾಜು ಯಡಿಯೂರಪ್ಪನವರ ಕರೆ ಮೇರೆಗೆ ಬಿಜೆಪಿ ಸೇರಿ ಎಂಪಿ ಆದದ್ದರಿಂದಾಗಿ ಅವರ ಮಗನೂ ಈಗ ಬಿಜೆಪಿ ಶಾಸಕ, ಇವರ ಪ್ರವೇಶದ ನಂತರ ಆರ್‌ ಎಸ್‌ ಎಸ್‌ ಮೂಲಕ ಬಿಜೆಪಿಗೆ ಬಂದು ನೆಲೆ ಕಂಡುಕೊಂಡಿದ್ದವರೆಲ್ಲ ಮುನಿಸಿಕೊಂಡು ದೂರ ಸರಿದ ಕಾರಣ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ ಈ ಪಕ್ಷದಲ್ಲಿ. 2019ರಲ್ಲಿ ಇದ್ದೊಬ್ಬ ಎಂಪಿಗೆ ಮತ್ತೆ ಟಿಕೆಟ್‌ ಕೊಡದೇ ಮೈತ್ರಿಯ ಹೆಸರಲ್ಲಿ ಮಾಜಿ ಪ್ರಧಾನಿ ಅವರನ್ನು ಕರೆತಂದು ನಿಲ್ಲಿಸಿ ಅವರ ಭಾರೀ ಹೆವಿ ವೇಯ್ಟ್‌ಗೆ ಕಾಂಗ್ರೆಸ್‌ ಸೊಂಟ ಮುರಿದುಕೊಂಡದ್ದೂ ನಮ್ಮ ಜಿಲ್ಲೆಯಲ್ಲೇ.

      ಈಗ ನಿನ್ನೆ ಬಿಹಾರದ ವಿಧಾನ ಸಭಾ ಚುನಾವಣೆಯಲ್ಲಿ ಹಿಂದಿನ ಐದು ವರ್ಷದ ಹಿಂದೆ ಗೆದ್ದಿದ್ದ ಆರು ಸೀಟುಗಳಲ್ಲಿ ಒಂದು ಸೀಟನ್ನು ಹೆಚ್ಚಿಸಿಯೂ ಕೊಳ್ಳದೇ ಒಂದು ಸೀಟನ್ನೂ ಕಡಿಮೆಯೂ ಮಾಡಿಕೊಳ್ಳದೇ ಸ್ಥಿತ ಪ್ರಜ್ಞತೆ ಮೆರೆದ ಕಾಂಗ್ರೆಸ್‌ ಹೈಕಮಾಂಡ್‌ ಇನ್ನು ಕರ್ನಾಟಕದಲ್ಲಿ ತಮ್ಮ ಸ್ವಂತ ಬಲದ ಮೇಲೆ 138 ಸೀಟು ಗೆದ್ದು ಆಡಳಿತ ಮಾಡುತ್ತಿರುವ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸೀಟಿನಿಂದ ಅಲುಗಾಡಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ನೀರಿನೊಳಗೆ ಮೀನಿನ ಹೆಜ್ಜೆಯ ಬದಲು ನೀರಿನ ಹೆಜ್ಜೆಯನ್ನು ಹುಡುಕಿರುವ ಡಿಕೆ ಸಾಹೇಬರೇ ಹೇಳಬೇಕಿದೆ.

     ಬಿಹಾರದ ಚುನಾವಣೆಗಿಂತ ಹೆಚ್ಚು ಕುತೂಹಲ ಕೆರಳಿಸಿದ್ದುದು ನ. 9ರಂದು ಭಾನುವಾರ ನಡೆದ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ. ದಶಕದ ಹಿಂದೆ ಕಾಫಿ ಕುಡಿಯಲೆಂದು ಸೇರಿದ ಗೆಳೆಯರು ಈ ಸಲ ನೀನು ಅಧ್ಯಕ್ಷನಾಗು ಅವನು ಕಾರ್ಯದರ್ಶಿಯಾಗಲಿ ಎಂದಾಗ ಇಲ್ಲಪ್ಪಾ ನಂಗೆ ಬೇಡಪ್ಪಾ ಎಂದು ಓಡಿಹೋಗುತ್ತಿದ್ದ ಈ ಸಂಘವು ಮೂರು ಅವಧಿಯ ಹಿಂದೆ ಚುನಾವಣೆಯನ್ನು ಅಧಿಕೃತವಾಗಿ ಅಳವಡಿಸಿಕೊಂಡಿತು. ಈ ಸಲವಂತೂ ಮೂರೂವರೆ ಸಿಂಡಿಕೇಟ್‌ಗಳ ಮಾರಾಮಾರಿ. ಹದಿನೆಂಟು ವರ್ಷ ಕಾರ್ಯನಿರತ ಪತ್ರಕರ್ತನ ವೃತ್ತಿಯಿಂದ ದೂರವಿದ್ದು, ತುಮಕೂರಿನಿಂದಲೂ ದೂರವಿದ್ದು ಇದೀಗ ಏಳೆಂಟು ವರ್ಷಗಳಿಂದ ಪಕ್ಕಾ ಪತ್ರಕರ್ತನಾಗಿರುವ ನನಗೂ ಈ ಚುನಾವಣೆಯಿಂದ ದೂರ ನಿಲ್ಲಲು ಮನಸ್ಸಾಗಲಿಲ್ಲ. ನಾನು ಕಣಕ್ಕಿಳಿಯದೇ ಹೋದರೂ ಸಮಾನ ಮನಸ್ಕರ ತಂಡವನ್ನು ಬೆಂಬಲಿಸಿ ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಸಿಕೊಂಡೆ. ಸಂಘವನ್ನು ಅದರ ಸಂವಿಧಾನ ಹಾಗೂ ಬೈಲಾಗಳ ಅನ್ವಯ ನಡೆಸುವ ಪಣ ತೊಟ್ಟಿರುವ ನಮ್ಮ ತಂಡವನ್ನು ಇಡೀ ಜಿಲ್ಲೆಯ ಪತ್ರಕರ್ತ ಗೆಳೆಯರು ಬಹುಮತ ನೀಡಿ ಆಯ್ಕೆ ಮಾಡಿದ್ದಾರೆ. 25 ಸೀಟುಗಳಲ್ಲಿ ಅಧ್ಯಕ್ಷ , ಖಜಾಂಚಿ ಸೇರಿ 15 ಸ್ಥಾನಗಳಲ್ಲಿ ಸಮಾನ ಮನಸ್ಕರ ತಂಡ ಗೆದ್ದಿದೆ. ಉಳಿದ ತಂಡಗಳಿಂದಲೂ ಹತ್ತು ಮಂದಿ ಚುನಾಯಿತರಾಗಿದ್ಧಾರೆ. ಎಲ್ಲರೂ ಸೇರಿ ಒಂದು ಕೈಯಾಗಿ ಮುಂದಿನ ಮೂರು ವರ್ಷ ಆಡಳಿತ ಮಾಡುವುದಾಗಿ ಶುಕ್ರವಾರ ಪ್ರಮಾಣ ಮಾಡಿದ್ದಾರೆ.

     ಸಂಘದ ಚುನಾವಣೆಯ ಕಾರಣಕ್ಕೆ ಎರಡು ವಾರಗಳಿಂದ ಸುನೀತಾ ಹೊಟೆಲ್‌ ಅಡ್ಡೆಗೆ ಕಾಲಿಟ್ಟಿರಲಿಲ್ಲ. ದೇವಣ್ಣ, ಜವಹರ್‌, ಸಿದ್ದಯ್ಯ, ಶ್ರೀನಿವಾಸ್‌, ಹರ್ಷ , ಅಂಜನಮೂರ್ತಿ, ರಮೇಶ್‌, ಉಗಮ ಇವರೆಲ್ಲರ ಜೊತೆಗೆ ಬಾಲ್ಯದ ಗೆಳೆಯ ದೇವರಾಯಪಟ್ಣ ಯತೀಶ ಜೊತೆ ಲೆಸ್‌ ಕಾಫಿ ಕುಡಿದ ಮೇಲೇ ಇವತ್ತಿನ ಬೆಳಗು ಸಮಾಧಾನ ಕೊಟ್ಟದ್ದು.

    ಅರ್ಧ ಶತಮಾನದ ಹಿಂದಿನ ತುಮಕೂರು ಮತ್ತು ತುಮಕೂರಿನೊಳಗಿನ ನನ್ನ ಸೋಮೇಶ್ವರದ ಚಹರೆ ಸಾಕಷ್ಟು ಬದಲಾಗಿದೆ. ಬದಲಾಗುತ್ತಲೇ ಇದೆ, ಇನ್ನೂ ಬದಲಾಗುತ್ತಲೇ ಇರುತ್ತದೆ. ಆದರೆ ನನ್ನ ಮೂರನೇ ಕ್ಲಾಸಿನ ಬಾಲ್ಯದಿಂದ ಇವತ್ತಿನವರೆಗೂ ಅರ್ಧ ಶತಮಾನದ ಕಾಲ ಇದೇ ಸೋಮೇಶ್ವರದ ಶತಮಾನ ಮೀರಿದ ದೊಡ್ಡ ಅರಳಿಮರ ಇನ್ನಷ್ಟು ದೊಡ್ಡದಾಗಿದೆಯೇ ಹೊರತು  ತಣ್ಣಗೆ ತಂಗಾಳಿ ತೀಡುತ್ತ, ಸದಾ ನೆರಳು ನೀಡುವುದನ್ನು ಮಾತ್ರ ನಿಲ್ಲಿಸಿಲ್ಲ,  ಅದು ಹಾಗೇ ತಣ್ಣಗೆ  ಬೆಳೆಯುತ್ತ ತನ್ನ ನೆರಳಲ್ಲಿ ನಿಂತ ಎಲ್ಲರನ್ನೂ ತಣ್ಣಗೆ ಇಡಲಿ.