ಕುರುವಂಶದೊಳಗೆ ಅಂದು ಹುಟ್ಟಿದ ಮೊಳಕೆ ನಮ್ಮೊಳಗೆ ಬೆಳೆದು ಹೆಮ್ಮರವಾದ ಈ ದಿನಗಳು
ಹೀಗೆ ಆಟ, ಪಾಠ, ಪುಂಡಾಟಗಳ ನಡುವೆಯೇ ಕೌರವ ಪಾಂಡವರ ಬಾಲ್ಯವು ಇದ್ದರೂ ವೈಮನಸ್ಯದ ವಿಷಬೀಜವೊಂದು ಅವರಿಗೆ ಅರಿವಿಲ್ಲದೇ ಅವರ ನಡುವೆ ಹೆಮ್ಮರವಾಗಿ ಬೆಳೆಯುತ್ತಾ ಹೋಗುತ್ತದೆ.

ದಯಾ ಗಂಗನಘಟ್ಟ
ಬಾಲ್ಯ ಮತ್ತು ಹದಿಹರೆಯ ಶುರುವಾಗುವ ಹಂತವು ಮಾನವನ ಜೀವಿತ ಕಾಲದ ಸುವರ್ಣ ಕಾಲ. ಇದು ಮತ್ತೆ ಮತ್ತೆ ಮೆಲುಕುಹಾಕಬೇಕು ಎಂದು ಮನವು ಅಡಿಗಡಿಗೂ ಬಯಸುವ ಮುಗ್ದ ಬಾವಗಳ ಗುತ್ತಿ ,ಅಚ್ಚರಿಗಳ ಬುತ್ತಿ. ಚಿಂತೆ, ಜವಾಬ್ದಾರಿ, ಯಾವುದೇ ಹೊಣೆಗಾರಿಕೆಗಳಿಲ್ಲದ, ಆಗು ಹೋಗುಗಳ ಅರಿವಿರದ ಸುಂದರ ವಯೋಮಾನವದು ,ಬಹುತೇಕ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶಗಳು ಘಟಿಸುವ ಸಂಕೀರ್ಣ ಕಾಲವೂ ಹೌದು.
ಕಾನ್ವೆಂಟ್ ಶಿಕ್ಷಣ, ಮೊಬೈಲ್, ಕಂಪ್ಯೂಟರ್ ಮುಂತಾದ ಆಧುನಿಕ ಸೌಲಭ್ಯಗಳ ನಡುವೆ ಸೆರೆಯಾದ ಇವತ್ತಿನ ಮಕ್ಕಳು ಪ್ರಕೃತಿಯ ಮಡಿಲಿನಿಂದ ದೂರವಾಗಿದ್ದಾರೆ. ಹೊಲ, ಗದ್ದೆ, ನದಿ, ಹಕ್ಕಿ, ಮರ ಇವೆಲ್ಲವನ್ನು ಮಕ್ಕಳು ನೋಡುವುದೇ ವಿರಳವಾಗಿದೆ, ಬಯಲಿನಲ್ಲಿ ಆಡುವ ಆಟಗಳು ಕಮ್ಮಿಯಾಗಿವೆ.
ಮಹಾಭಾರತವೆಂದರೆ ಕೌರವ ಪಾಂಡವ ಸೋದರರ ಕಲಹದ ಕಥೆ ಎನ್ನಲಾಗುತ್ತದೆ, ದಾಯಾದಿಗಳಾದ ಇವರು ಬಾಲ್ಯದಲ್ಲಿ ಹೇಗಿದ್ದಿರಬಹುದು ಎಂದು ನೋಡಿದರೆ, ಕುರುವಂಶದ ಕುಡಿಗಳ ಬಾಲ್ಯವು ಮುಗ್ಧ ಮಕ್ಕಳ ಆಟೋಟಗಳ ಚಂದದ ಚಿತ್ರಣವೇ ಆಗಿದ್ದರೂ, ಮುಂದಿನ ಕುರುಕ್ಷೇತ್ರ ಯುದ್ಧಕ್ಕೆ ಸಜ್ಜುಗೊಳ್ಳುತ್ತಿದ್ದ ಭದ್ರ ತಳಹದಿಯಂತೆಯೇ ನನಗೆ ಕಾಣುತ್ತದೆ.
ಪಾಂಡು ರಾಜನ ಸಾವಿನ ನಂತರ ಅವನ ಐವರು ಮಕ್ಕಳು ಕುಂತಿಯೊಂದಿಗೆ ಹಸ್ತಿನಾಪುರಕ್ಕೆ ಬರುತ್ತಾರೆ, ಇದುವರೆಗೂ ಕೌರವರು ಆ ಇಡೀ ಸಾಮ್ರಾಜ್ಯಕ್ಕೆ ತಾವೇ ವಾರಸುದಾರರು ಅಂದುಕೊಂಡಿರುತ್ತಾರೆ, ನೂರೂ ಮಂದಿ ಸಹೋದರರು ಸುಯೋಧನನ ಆಜ್ಞಾ ಪಾಲಕರಾಗಿರುತ್ತಾರೆ. ಅವನ ಮಾತಿಗೆ ಎದುರಾಡುವವರು ಯಾರೂ ಇರುವುದಿಲ್ಲ, ಹೀಗಿದ್ದಾಗ ಪಾಂಡವರ ಆಗಮನವಾಗುತ್ತದೆ. ಸಹಜವಾಗಿ ಹೊಸ ಮಕ್ಕಳು ಬಂದಿದ್ದು ಕೌರವರ ಅಸಹನೆಗೆ ಕಾರಣವಾಗುತ್ತದೆ.ಹಿರಿಯರು ಅವರಿಗೆ ಪರಸ್ಪರ ಹೊಂದಿಕೊಂಡು ಹೋಗಲು ತಿಳಿಸುತ್ತಾರೆ, ಈಗ ಬಂದವರು ನನ್ನ ಆಧಿಪತ್ಯವನ್ನು ಸಹಿಸಿಕೊಳ್ಳಲಿ ಎಂದು ಸುಯೋಧನನಿಗೆ ಅನಿಸುತ್ತದೆ, ಆದರೆ ಆ ಐವರಲ್ಲಿ ಭೀಮ ಅದಕ್ಕೆ ಸಿದ್ಧನಿರಲಿಲ್ಲ.ಅವನು ಮತ್ತು ಸುಯೋಧನ ಇಬ್ಬರೂ ಒಂದೇ ವಯಸ್ಸಿನವರು , ಹದಿನಾರರ ಹರೆಯದವರು, ಸಮಬಲರು. ದುರ್ಯೋಧನನಿಗೆ ತನಗೆ ಬಗ್ಗದ ಭೀಮನ ಮೇಲೆ ಮತ್ತು ತಮಗಿಂತ ಹೆಚ್ಚು ಬುದ್ಧಿವಂತರೂ ಶಕ್ತಿಶಾಲಿಗಳು ಅನಿಸಿಕೊಳ್ಳುತ್ತಿದ್ದ ಪಾಂಡವರ ಮೇಲೆ ಮತ್ಸರ ಬೆಳೆಯುತ್ತದೆ, ಅವರಿಗೆ ತೊಂದರೆ ಕೊಡತೊಡಗುತ್ತಾನೆ, ಈ ಕಡೆ ಇದು ನಮ್ಮದೂ ರಾಜ್ಯವೇ,ನಮಗೂ ಇಲ್ಲಿ ಹಕ್ಕಿದೆ ಎಂದುಕೊಳ್ಳುವ ಭೀಮನೂ ಸಹ ಕೌರವರನ್ನು ಕಾಡ ಬಾರದ ರೀತಿಯಲ್ಲಿ ಕಾಡುವುದಕ್ಕೆ ಶುರು ಮಾಡ್ತಾನೆ.ಇದು ಸಹಜವಾಗಿಯೇ ಪರಸ್ಪರರಲ್ಲಿ ಹೊಟ್ಟೆಕಿಚ್ಚು, ದ್ವೇಷ ಹುಟ್ಟುವ ಹಾಗೆ ಮಾಡುತ್ತದೆ.
ದುರ್ಯೋಧನನು ಚಿಕ್ಕ ಹುಡುಗನಾಗಿದ್ದಾಗ ಒಮ್ಮೆ ಗಾಂಧಾರಿಯು ತನ್ನ ಮಕ್ಕಳಿಗೆಲ್ಲಾ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿರುತ್ತಾಳೆ, ಎಲ್ಲಿಗೋ ಹೋಗಿದ್ದ ದುರ್ಯೋಧನ ಬಂದು ನೋಡುತ್ತಾನೆ, ಅವನ ಹೊಸ ಬಟ್ಟೆಯನ್ನು ಮರೆತು ತಾಯಿ ದುಶ್ಯಾಸನನಿಗೆ ತೊಡಿಸಿರುತ್ತಾಳೆ,ಸಿಟ್ಟುಗೊಂಡ ಇವನು ಅಷ್ಟೂ ಮಕ್ಕಳು ಕುಳಿತಿದ್ದ ಮಂಚಕ್ಕೆ ಒಮ್ಮೆ ಜೋರಾಗಿ ಗುದ್ದುತ್ತಾನೆ, ಇಡೀ ಮಂಚವು ಒಮ್ಮೆ ಚಾವಣಿಯ ಎತ್ತರಕ್ಕೆ ಚಿಮ್ಮಿ ನೆಲಕ್ಕೆ ಬಿದ್ದು ಪುಡಿಪುಡಿಯಾಗುತ್ತದಂತೆ ಅಷ್ಟು ಗಟ್ಟಿಗ, ಭೀಮನೇನೂ ಕಮ್ಮಿಯಲ್ಲ,ಒಮ್ಮೆ ಕಾಡಿನಲ್ಲಿ ಕುಂತಿ ಒಂದು ಬಂಡೆಯ ತುದಿಯಲ್ಲಿ ಮಗು ಭೀಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಳಿತಿರುತ್ತಾಳೆ, ಆಟವಾಡುತ್ತಿದ್ದ ಮಗು ತಾಯಿಯ ತೊಡೆಗೆ ಕಾಲುಗಳನ್ನು ಒತ್ತಿ ಚಿಮ್ಮುತ್ತದೆ, ಕುಂತಿ ತುದಿಯಲ್ಲಿ ಕುಳಿತಿದ್ದರಿಂದ,ಚಿಮ್ಮಿದ ಮಗು ಸೀದಾ ಕಣಿವೆಯ ಕೆಳಕ್ಕೆ ಬಿದ್ದುಬಿಡುತ್ತದೆ, ಅಯ್ಯೋ ಮಗು ಎಂದು ಕಿರುಚಿದ ಕುಂತಿ ಓಡಿಹೋಗಿ ನೋಡಿದರೆ,ಕೆಳಗಿನ ಒಂದು ಬಂಡೆಯ ಮೇಲೆ ಭೀಮ ಬಿದ್ದಿದ್ದನಂತೆ, ಅವನಿಗೆ ಏನೇನೂ ಏಟಾಗಿರಲಿಲ್ಲ, ಬಂಡೆ ಮಾತ್ರ ಚೂರು ಚೂರಾಗಿತ್ತಂತೆ.
ಕುಂತಿ ಮತ್ತು ಪಾಂಡವರು ಹಸ್ತಿನಾವತಿಗೆ ಬಂದ ಮೇಲೆ, ಪಾಂಡವರು ಮತ್ತು ಕೌರವರು ಪುರದ ಹೊರಬಾಗದಲ್ಲಿ ಒಟ್ಟಾಗಿ ಆಟವಾಡುತ್ತಿದ್ದರಂತೆ, ' ಕುಮಾರವ್ಯಾಸ ಭಾರತ' ದಲ್ಲಿ ಇದರ ಬಗ್ಗೆ ಬಹಳ ಸುಂದರವಾದ ವಿವರಣೆಯಿದೆ. ಇಂದು ನಮಗೆ ಹೆಸರೂ ಕೂಡ ಗೊತ್ತಿಲ್ಲದ, ಅಂದಿನ ಮಕ್ಕಳು ಆಡುತ್ತಿದ್ದ ಹಲವಾರು ಆಟಗಳನ್ನು ಕವಿ ಅಲ್ಲಿ ಹೇಳುತ್ತಾನೆ. ಆಳಿನೇರಿಕೆ (ಒಬ್ಬರ ಬೆನ್ನನ್ನು ಒಬ್ಬರು ಹತ್ತುವುದು), ಕವಡೆ, ಗುರಿಯಿಟ್ಟು ಚಂಡಿನಿಂದ ಹೊಡೆಯುವುದು, ಚಿಣ್ಣಿಕೋಲು, ಗುಡುಗು (ಕಬಡ್ಡಿ), ಲಗ್ಗೆಯ ಚೆಂಡು, ಗುಮ್ಮನ ಬಡಿವ ಆಟ, ಮುಚ್ಚಿಟ್ಟುಕೊಂಡು ನಂತರ ಬಂದು ಹೊಡೆಯುವುದು,ಕಣ್ಣಾ ಮುಚ್ಚಾಲೆ, ಹರಿ ಹಲಗೆ ಕವಣೆಗಲ್ಲು, ಒಬ್ಬರನೊಬ್ಬರು ಕೆಡವಿ ಗುದ್ದುವುದು, ಹೀಗೆ ನಾನಾ ರೀತಿಯ ಆಟಗಳನ್ನು ಆ ಮಕ್ಕಳು ಪಾಂಡವರು ಮತ್ತು ಕೌರವರು ಎಂಬ ಎರಡು ಗುಂಪುಗಳನ್ನು ಮಾಡಿಕೊಂಡು ಆಟಗಳಲ್ಲಿ ನಲಿಯುತ್ತಿದ್ದರು. ಆಟಗಳಲ್ಲಿ ಸೋಲು ಗೆಲುವು ಇದ್ದದ್ದೇ,ಆದರೆ ಹೆಚ್ಚು ಬಾರಿ ಸೋಲುತ್ತಿದ್ದ ಕೌರವರು ಇದನ್ನು ಪ್ರತಿಷ್ಟೆಯ ಪ್ರಶ್ನೆಯಾಗಿ ತೆಗೆದುಕೊಳ್ಳುತ್ತಿದ್ದರು, ಪಾಂಡವರಲ್ಲಿ ಭೀಮನೋ ಬಲು ಪುಂಡ, ಅವನನ್ನು ತಡೆಯುವುದು ಎಲ್ಲರಿಗೂ ಕಷ್ಟವಾಗುತ್ತಿತ್ತು, ಅವನ ಶಕ್ತಿ ಮತ್ತು ಸ್ವಭಾವ ಹೇಗೆಂದರೆ, ಅವನೊಬ್ಬನೇ ಅಷ್ಟೂ ಜನರನ್ನು ಸದೆಬಡಿದು ಬಿಡುತ್ತಿದ್ದ, ತಾನೇನಾದರೂ ಸೋತರೆ ನನ್ನನ್ನೇ ಸೋಲಿಸುತ್ತೀರೇನೋ ಎಂದು ಕೋಪಗೊಂಡು ಎಲ್ಲರಿಗೂ ಹೊಡೆಯುತ್ತಿದ್ದ,ಒಂದು ವೇಳೆ ಅವನೇ ಗೆದ್ದರೆ ಖುಷಿಯಿಂದ 'ಸೋಲುಪುರುಕರು' ನೀವು ಎಂದು ಎಲ್ಲರಿಗೂ ಬಾರಿಸುತ್ತಿದ್ದ!
ಒಂದು ಬಾರಿಯಂತೂ ಎಲ್ಲರೂ ಮರಕೋತಿ ಆಟ ಆಡುತ್ತಿರುತ್ತಾರೆ, ಉಳಿದವರು ಮರ ಹತ್ತಿ ಅವಿತುಕೊಂಡರೆ, ಅವರನ್ನು ಹುಡುಕುವುದು ಭೀಮನ ಸರದಿ,ದುರ್ಯೋಧನ ಹಾಗೂ ಅವನ ಸಹೋದರರು ಎಷ್ಟು ಹುಡುಕಿದರೂ ಸಿಗದೆ ಕೋಪಗೊಂಡ ಭೀಮ ಇಡೀ ಮರವನ್ನೇ ಹಿಡಿದು ಅಲುಗಾಡಿಸಿ ಬಿಟ್ಟನಂತೆ, ಹೀಗಾಗಿ ಆ ಮರದ ಮೇಲಿದ್ದ ಮಕ್ಕಳೆಲ್ಲ ಎಳೆ ಮಾವಿನ ಕಾಯಿಗಳ ತರಹ ಉದುರಿ ನೆಲಕ್ಕೆ ಬಿದ್ದರು.
ಒಬ್ಬರಿಗೆ ತಲೆಗೆ ಪೆಟ್ಟು, ಕೈ ಮುರಿದೋ, ಕಾಲುಗಳು ಉಳುಕಿಯೋ, ಬೆನ್ನು ಮುರಿದೋ, ರಕ್ತ ಸುರಿಸುತ್ತಲೋ ನೆಲಕ್ಕೆ ಬಿದ್ದು ಒದ್ದಾಡುತ್ತಾರೆ. ಅಳುತ್ತಾ ಕೌರವರು ಧೃತರಾಷ್ಟ್ರನಿಗೆ ಬಂದು ದೂರು ಹೇಳಿದರೆ, ಅವನು 'ನಿಮಗೆ ನಾನು ಹೇಳಿರಲಿಲ್ಲವೆ, ಅವನು ದುಷ್ಟ , ಅವನ ಸಂಗ ಬೇಡವೆಂದು, ಅವನಿಂದ ದೂರವಿರಿ' ಎಂದು ಬಿಡುತ್ತಾನೆ, ಆದರೆ ಒಳಗೊಳಗೆಯೆ ಭೀಮ ಮತ್ತು ದುರ್ಯೋಧನರ ಮಧ್ಯೆ ವೈರ ಬೆಳೆಯುತ್ತಾ ಹೋಗುತ್ತದೆ. ಮುಂದೆ ಕೌರವರು ಯುಧಿಷ್ಟಿರನಲ್ಲಿಗೆ ಹೋಗಿ “ ನಿನ್ನ ತಮ್ಮ ಭೀಮನಿಗೆ ಹೇಳು,ಈ ಆಟಗಳನ್ನು ನಿಲ್ಲಿಸು” ಎಂದು,ಎನ್ನುತ್ತಾರೆ,ಇದರಿಂದ ಪ್ರಯೋಜನವಾಗದಾಗ ಅರ್ಜುನನ ಬಳಿಗೆ ಹೋಗುವರು,ಅಲ್ಲೂ ಪ್ರಯೋಜನ ವಾಗದಿದ್ದಾಗ,ಭೀಮನನ್ನೆ ಮೆತ್ತಗೆ ನಯವಾಗಿ ಆಕರ್ಷಿಸಿ, ಆಟಕ್ಕೆ ಕರೆಯುತ್ತಾರೆ, ಭೀಮನು ಸೋತಹಾಗೆ ಮಾಡಿ, ಕೌರವರನ್ನು ತನ್ನ ಹೆಗಲಿನ ಮೇಲೆ ಕೂರಿಸಿಕೊಂಡು ಹೋಗಿ ಯಾವುದಾದರು ಒಂದು ಪೊದೆಗೆ ಬೀಳಿಸಿ ಬಡಿಯುತ್ತಿದ್ದನು. ಕೊನೆಗೊಮ್ಮೆ ಎಲ್ಲರೂ ಒಂದಾಗಿ ಭೀಷ್ಮನಿಗೆ ದೂರು ಕೊಡಲು ಹೋಗುತ್ತಾರೆ, ಇವರು ಅಲ್ಲಿಗೆ ತಲುಪುವ ಮೊದಲೇ ಭೀಮನು ಮುಳ್ಳುಗಳ ಪೊದೆಗೆ ನುಗ್ಗಿ ಮೈಯೆಲ್ಲಾ ಗಾಯಮಾಡಿಕೊಂಡು ಸುಳ್ಳು ಸುಳ್ಳೇ ಅಳುತ್ತಾ ಭೀಷ್ಮನ ಮುಂದೆ ನಿಂತಿರುತ್ತಾನೆ. ಭೀಮನ ಆಟಗಳನ್ನು ಕಂಡ ಭೀಷ್ಮ ಮತ್ತು ವಿದುರರು ಈ ಗಲಾಟೆಗಳನ್ನು ತಪ್ಪಿಸಲು, ಇವನನ್ನೇ ಬೇರೆ ಮತ್ತು ಉಳಿದ ನೂರಾನಾಲ್ಕು ಮಕ್ಕಳನ್ನೇ ಬೇರೆ ಎಂದು ಗುಂಪು ಮಾಡಿ, ಅವನನ್ನು ಬೇರೆ ಕಡೆಯೆ ಕಳಿಸಿ ಪ್ರಮಾಣ ಮಾಡಿಸಿಕೊಂಡರೂ, ಸ್ವಲ್ಪ ಸಮಯ ಹೀಗೆ ಬೇರೆ ಇದ್ದು, ಮರುದಿನವೆ ಎಲ್ಲರೂ ಒಂದಾಗಿ ಆಟ ವಾಡುತ್ತಿರುತ್ತಾರೆ.
ಭೀಮನ ಇಂತಹ ವಿಚಿತ್ರ ಕಾಟಗಳನ್ನು ತಾಳಲು ಆಗದೆ ಸುಯೋಧನ ಹಾಗೂ ಅವನ ಅನುಜರ ಪಡೆ ಅವನನ್ನು ಹಲವು ರೀತಿಯಲ್ಲಿ ಪೀಡಿಸತೊಡಗುತ್ತಾರೆ, ಎಲ್ಲರೂ ಒಂದಾಗಿ ಆಟವಾಡುತ್ತಿದ್ದಾಗ, ಕೌರವರು ಭೀಮನನ್ನು ಮೈಮರೆಸಿ, ಅವನನ್ನು ದಾರಗಳಲ್ಲಿ ಕಟ್ಟಿ ಹಾಕಿ ಆಳವಾದ ಹಳ್ಳದಲ್ಲಿ ಹಾಕಿದರು,ಅವನು ತನಗೆ ಬಿಗಿದಿದ್ದ ದಾರವನ್ನು ಕಿತ್ತೊಸೆದು, ಅತೀವ ಕೋಪದಿಂದ ಮಡುವಿನಿಂದ ಹೊರಬಂದು, ದುರ್ಯೋಧನಾದಿಗಳಿಗೆ ಚೆನ್ನಾಗಿ ಹೊಡೆದು ತನ್ನ ಕೋಪ ಶಮನ ಮಾಡಿಕೊಂಡನು. ಮತ್ತೆ ಹಿರಿಯರ ಮಾತಿಗೆ ಮಣಿದು, ಭಾಷೆ ಕೊಟ್ಟು ಎಲ್ಲರೂ ಒಂದಾಗುತ್ತಿದ್ದರು. ಆದರೆ ಈ ಒಗ್ಗಟ್ಟು ಬಹಳ ದಿನ ಉಳಿಯುತ್ತಿರಲಿಲ್ಲ.
ಮುಂದೊಮ್ಮೆ ಕೌರವರು ಭೀಮನಿಗೆ ವಿಷವನ್ನು ತಿನ್ನಿಸಿ ಬಿಡುವ ನಿರ್ಧಾರಕ್ಕೆ ಬರುತ್ತಾರೆ .ಹೇಗಿದ್ದರೂ ಭೀಮ ತಿನ್ನೋದ್ರಲ್ಲಿ ಮುಂದು ಹೀಗಾಗಿ ಭೀಮನಿಗೆ ಅರಿವಿಲ್ಲದೆ ಕರಾಳ ವಿಷಗಳಿಂದ ಮಾಡಿದ ಕಜ್ಜಾಯವನ್ನು ತಿನ್ನಿಸಲು ಕೌರವರು ಉಪಾಯ ಮಾಡಿದರು. ಆ ವಿಷದಿಂದ ಮಾಡಿದ ಕಜ್ಜಾಯವನ್ನ ನೋಡಿದರೇ ಎದೆಯ ಕೂದಲುಗಳು ಸೀದು ಹೋಗುತ್ತಿದ್ದವು (ರಕ್ತ ಹೆಪ್ಪುಗಟ್ಟುತಿತ್ತು) ಮುಟ್ಟಿದರೆ ಅಂಗೈ ಹುಣ್ಣಾಗುತಿತ್ತು, ಇದನ್ನು ಕೈಗಳಿಂದ ಬೆರಸಿ ಹೇಗೆ ಮಾಡುತ್ತಿದ್ದರೋ! ಆ ವಿದ್ಯೆ ಎಂತಹುದೋ ವಿವರಿಸಲು ಅಸಾಧ್ಯ. ಇಂತಹ ಕಜ್ಜಾಯವನ್ನು ಭೀಮನಿಗೆ ಪೂಸಿ ಮಾಡಿ ತಿನ್ನಿಸಿಬಿಡುತ್ತಾರೆ, ತಿಂದ ಭೀಮ ಪ್ರಜ್ಞೆ ತಪ್ಪಿ ಬೀಳ್ತಾನೆ ಅವನ ಕೈ ಕಾಲುಗಳನ್ನು ಕಟ್ಟಿದ ದುರ್ಯೋಧನಾದಿಗಳು ಭೀಮನನ್ನು ಗಂಗಾ ನದಿಗೆ ಎಸೆದು ಬಿಡ್ತಾರೆ. ಆಟ ಮುಗಿಸಿ ಎಲ್ಲರೂ ಹಸ್ತಿನಾಪುರಕ್ಕೆ ಹೊರಡಲನುವಾದಾಗ ಅವರಲ್ಲಿ ಭೀಮನಿರಲಿಲ್ಲ, ಅವನು ಮುಂದಾಗಿಯೇ ಅರಮನೆಗೆ ಹೋಗಿರಬಹುದೆಂದು ಯುಧಿಷ್ಠಿರ ಭಾವಿಸುತ್ತಾನೆ. ಕೌರವರು ತಮಗೆ ಏನೂ ಗೊತ್ತಿಲ್ಲದವರಂತೆ ಅರಮನೆ ಸೇರುತ್ತಾರೆ, ಇತ್ತ ಪ್ರಜ್ಞೆ ಇಲ್ಲದ ಭೀಮಾ ಗಂಗಾ ನದಿಯಲ್ಲಿ ಬಿದ್ದ ನಂತರ ಸರ್ಪ ಲೋಕವನ್ನು ತಲುಪಿದನಂತೆ ಅಲ್ಲಿ ಅವನನ್ನು ಹಾವುಗಳು ಕಚ್ಚುತ್ತವೆ, ಆದರೆ ಹಾವಿನ ವಿಷವು ಭೀಮನಿಗೆ ತಿನ್ನಿಸಲಾದ ವಿಷದ ವಿರುದ್ಧ ಕೆಲಸ ಮಾಡುತ್ತದೆ ಹೀಗಾಗಿ ಹಾವುಗಳು ಕಚ್ಚಿದ ಎಷ್ಟೋ ಸಮಯದ ನಂತರ ಭೀಮ ಎಚ್ಚರಗೊಳ್ಳುತ್ತಾನೆ.ಅವನು ತನ್ನ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡು ಹಾವುಗಳನ್ನು ಹಿಡಿದು ಬಡಿದು, ಅದರಿಂದಲೂ ಪಾರಾಗಿ ಬರುತ್ತಾನೆ.
ಹೀಗೆ ಆಟ, ಪಾಠ, ಪುಂಡಾಟಗಳ ನಡುವೆಯೇ ಕೌರವ ಪಾಂಡವರ ಬಾಲ್ಯವು ಇದ್ದರೂ ವೈಮನಸ್ಯದ ವಿಷಬೀಜವೊಂದು ಅವರಿಗೆ ಅರಿವಿಲ್ಲದೇ ಅವರ ನಡುವೆ ಹೆಮ್ಮರವಾಗಿ ಬೆಳೆಯುತ್ತಾ ಹೋಗುತ್ತದೆ.
ಬಾಲ್ಯದ ಮುಗ್ಧತೆ ಮಾಯವಾಗಿ ಹರೆಯದ ಅರೆಬರೆ ಪ್ರಜ್ಞೆ ಜಾಗೃತವಾಗುವ ಸಮಯದಲ್ಲೇ ವ್ಯಕ್ತಿಯ ಭವಿಷ್ಯ ನಿರ್ಧಾರವಾಗುತ್ತದಂತೆ, ಹಾಗೆಯೇ ಕುರುಕ್ಷೇತ್ರ ಯುದ್ಧದ ಕಿಡಿಯೊಂದು ಕುರುವಂಶದ ಒಳಗೆ ಏಕಾಏಕಿ ಆರಂಭವಾದುದಲ್ಲ.
ಎಲ್ಲಾ ಘಟನೆಗಳಿಗೂ ಒಂದು ಮುನ್ನುಡಿ ಅಂತಿರುತ್ತದೆ. ಇವರುಗಳ ಬಾಲ್ಯದಂತೆ...
bevarahani1