ಕನ್ನಡದ ಮೆದುಳಿಗೂ  ಒಂದು ಥರದ  ಥಾಯ್‌ಸ್ಯಾಕ್ ರೋಗ ಬಂದಿದೆ

ಕನ್ನಡದ ಮೆದುಳಿಗೂ  ಒಂದು ಥರದ  ಥಾಯ್‌ಸ್ಯಾಕ್ ರೋಗ ಬಂದಿದೆ

ಚಿಂತನೆ

ಡಾ. ವೆಂಕಟೇಶ್ ನೆಲ್ಲುಕುಂಟೆ

ಕನ್ನಡದ ಮೆದುಳಿಗೂ  ಒಂದು ಥರದ  ಥಾಯ್‌ಸ್ಯಾಕ್ ರೋಗ ಬಂದಿದೆ

ಕನ್ನಡದ ಸಾಮಾಜಿಕ, ರಾಜಕೀಯ, ಆರ್ಥಿಕ ಚಿಂತನೆಗಳು ಅತ್ಯಂತ ಗಂಭೀರವಾದ ಡೆಡ್ ಲಾಕಿನೊಳಗೆ ಸಿಲುಕಿಕೊಂಡು ನರಳುತ್ತಿರುವಂತೆ ಕಾಣಿಸುತ್ತಿವೆ.
ನಾನೆ ಸರಿ, ನನ್ನದೆ ಸರಿ ಎಂಬುದರ ಅಂತಿಮ ಘಟ್ಟ 'ಥಿಯರಿ ಆಫ್ ಎಕ್ಸ್ ಕ್ಲೂಷನ್' ಆಗಿರುತ್ತದೆ. 
ಈ ಥಿಯರಿ ಆಫ್ ಎಕ್ಸ್ ಕ್ಲೂಷನ್ ಬಹುತೇಕ ಸಾರಿ ಅಧಿಕಾರಸ್ಥರ ಪ್ರಧಾನ ಟೂಲು ಆಗಿರುತ್ತದೆ. ಆದರೆ ಅದು ಸಮಾಜದ ನೆಪ ಬಳಸಿಕೊಂಡು ವೈಯಕ್ತಿಕ ಸ್ವಾರ್ಥ ಮೆರೆವವರ ಟೂಲು ಆಗಿ ಬಿಟ್ಟರೆ ಅಥವಾ ಜೀವಂತವಾಗಿ ಬದುಕುತ್ತಿರುವ ಸಮಾಜಗಳ ಟೂಲು ಆಗಿಬಿಟ್ಟರೆ ವಾಸ್ತವ ರಣಾರಂಪವಾಗಿಬಿಡುತ್ತದೆ. ಇವತ್ತು ನಮ್ಮಲ್ಲಿ ಇದೆ ಆಗುತ್ತಿರುವುದು.
ಹುಲಿ ಸಿಂಹಗಳಿಗೆ ಕಾಡೆಮ್ಮೆಗಳ ಗುಂಪು ಛಿದ್ರವಾಗುವುದು ಬೇಕು. ಗುಂಪಿನಲ್ಲಿದ್ದಾಗ ಎದುರಿಸುವುದು ಕಷ್ಟ. ಆನೆಗಳ ವಿಚಾರದಲ್ಲೂ ಹಾಗೆಯೆ.
ಇದಕ್ಕಿಂತ ಉತ್ತಮ ಉದಾಹರಣೆಯೆಂದರೆ ಜೇನು ಗೂಡಿನದು. ಜೇನಿನ ಹಲ್ಲೆಯ ತಳ ಭಾಗದಲ್ಲಿ ದೇವಾಲಯಗಳ ಕಳಸಗಳಂತೆ ದೊಡ್ಡ ಮನೆಗಳಿರುತ್ತವೆ. ಒಂದೊ ಎರಡೊ ಇರುವ ಆ ಮನೆಗಳಲ್ಲಿ ಸಾಮಾನ್ಯವಾಗಿ ಮುಂದೆ ರಾಣಿ ಜೇನಾಗುವ ಹುಳ ಇರುತ್ತವೆ. ಆ ನೊಣಗಳಿಗೆ ವಿಶೇಷ ಆಹಾರ ಕೊಟ್ಟು ಬೆಳೆಸಲಾಗುತ್ತದೆ. ರಾಣಿ ಜೇನು ಬೆಳೆದು ದೊಡ್ಡವಾಗುವ ಹಂತಕ್ಕೆ ಬಂದಾಗ ಜೇನಿನ ತಂಡ ಒಡೆದು ಛಿದ್ರವಾಗುತ್ತದೆ. ಅವುಗಳವುಗಳೆ ಕಿತ್ತಾಡಿಕೊಂಡು ಸಾಯುತ್ತವೆ. ಒಂದೆರಡು ನೊಣ ಸತ್ತು ಬಿದ್ದ ಕೂಡಲೆ ಇರುವೆ, ಕಡಜಗಳು ಇಡೀ ಗೂಡಿನ ಮೇಲೆ ದಾಳಿ ಮಾಡುತ್ತವೆ. ಕಡೆಗೆ ಗೂಡಿನಲ್ಲಿರುವ ಮರಿಗಳನ್ನು ಬಿಟ್ಟು ರೆಕ್ಕೆ ಇರುವವೆಲ್ಲ ಹಾರಿ ಹೋಗುತ್ತವೆ. ಚಿಕ್ಕ ಚಿಕ್ಕ ಗೂಡುಗಳಲ್ಲಿ ಒಡೆದು ಹೋಗಿ ಸಂಘರ್ಷ ಮಾಡಿಕೊಂಡೆ ಮತ್ತೊಂದು ಗೂಡು ಕಟ್ಟುತ್ತವೆ. ಆರಕ್ಕೆ ಏರವು ಮೂರಕ್ಕೆ ಇಳಿಯವು.
ನಮ್ಮ ಬೌದ್ಧರು ಆಗಿದ್ದು ಹೀಗೆಯೆ.
ನಮ್ಮ ಕನ್ನಡದ ಮೆದುಳಿಗೂ ಒಂದು ಥರದ ಥಾಯ್ ಸ್ಯಾಕ್ ರೋಗ ಬಂದಿದೆ.
ಬಿಡದೆ ಸುರಿವ ಮಳೆಗೆ ಕಲ್ಲುಗಳ ಮೇಲೂ ಬೂಸ್ಟು ಹತ್ತುತ್ತದೆ. ಹೊಸ ಬೆಳಕು, ವಾತಾವರಣ ಬೇಕು. ಹಾಗಾಗದಿದ್ದರೆ ಸ್ಥಳೀಯ ಸಹನೆಯ ವಿವೇಕವಾದರೂ ಇರಬೇಕು. ಎರಡೂ ಇಲ್ಲದಿದ್ದರೆ ಆ ಸಮಾಜಗಳಲ್ಲಿ ಸಹಜವಾಗಿ ತಾಲಿಬಾನಿಗಳು ಹುಟ್ಟುತ್ತಾರೆ.
ತಾಲಿಬಾನಿನ ಪ್ರಧಾನ ನೆಲೆಗಟ್ಟೆ ಥಿಯರಿ ಆಫ್ ಎಕ್ಸ್ ಕ್ಲೂಷನ್. ಇವನಾರವ ಎಂಬುದು ಅದರ ಇನ್ನೊಂದು ರೂಪ. ನಮ್ಮಲ್ಲಿನ ಬಹುಪಾಲು ಜನರು ಯಾವುದನ್ನು ವಿರೋಧಿಸುತ್ತಾರೊ ಅದೆ ಆಗ ಹೊರಟಿರುವುದು ಭೀಕರ ದುರಂತ. ದೆವ್ವದ ಬಗ್ಗೆ ತುಂಬ ತಲೆ ಕೆಡಿಸಿಕೊಂಡು ದೆವ್ವವೆ ಆಗಿಬಿಡುವುದನ್ನು ಸಾಮಾಜಿಕ ದುರಂತವೆನ್ನದೆ ಬೇರೆ ಏನೆನ್ನುವುದು.
ಹಾಗಿದ್ದರೆ ಆರೋಗ್ಯಕರ ವಾಗ್ವಾದಗಳು ನಡೆಯಬಾರದೆ? ಖಂಡಿತ ನಡೆಯಬೇಕು. ಎಲ್ಲಿಯವರೆಗೆ ? ವಾತಾವರಣ ಆರೋಗ್ಯಕರವಾಗಿರುವವರೆಗೆ ಮಾತ್ರ. ಸಂವಾದಕ್ಕೆ ಕೂತವರು ಮಾತು ಖಾಲಿಯಾಯಿತು ಎಂದಾಗ ಕಲ್ಲು ದೊಣ್ಣೆ ಹಿಡಿದುಕೊಳ್ಳುತ್ತಾರೆ ಅಥವಾ ಅಲ್ಲಿ ಜಗಳದ ಭಾಷೆ ಪ್ರಾರಂಭವಾಗುತ್ತದೆ. ಕನ್ನಡದಲ್ಲಿ ಇಂದು ನಡೆಯುತ್ತಿರುವುದು ಸಂವಾದವಾ ಇಲ್ಲ ಜಗಳವಾ? ಎಂದು ನೀವೆ ತೀರ್ಮಾನಿಸಿ.
ಸಂಪೂರ್ಣ ನಿರಾಕರಿಸುವವರಿಗೆ ಮತ್ತೊಂದನ್ನು ನಿರ್ಮಿಸುವ ಶಕ್ತಿ ಇರಬೇಕು. ಅಂಥ ಶಕ್ತಿ ಇಲ್ಲದ ಕಾರಣಕ್ಕೆ ಹಲವು ಪ್ರಯತ್ನಗಳು ಈ ಎರಡು ಸಾವಿರ ವರ್ಷಗಳಲ್ಲಿ ವಿಫಲವಾಗಿವೆ. ಸಾಮಾಜಿಕ ಚಿಂತಕನಾಗುವವನು ಬಹಳ ಸಾರಿ ಕವಿಯಾಗಿರಬಾರದು. ಕವಿಯಾದವನು ಸಂದೇಹವಾದಿಯಾಗಿದ್ದರೆ, ಅರಾಜಕವಾದಿಯಾಗಿದ್ದರೆ ಅದಕ್ಕೊಂದು ಅರ್ಥವಿದೆ. ಆದರೆ ಸಾಮಾಜಿಕ, ರಾಜಕೀಯ ಚಿಂತನೆ ಮಾಡುವವರು ಕವಿಗಳಾಗಿಬಿಟ್ಟರೆ ಅದರ ಅನಾಹುತಗಳನ್ನು ಕಲ್ಪಿಸಿಕೊಳ್ಳಲಾಗದು.
ಕನ್ನಡವು ನಿಶ್ಚೇಷ್ಟಿತವಾಗಿದ್ದಾಗ
ಎಂಥದೋ ಉನ್ಮಾದ ಹುಟ್ಟಿಕೊಂಡಿದೆ. ಒಳ್ಳೆಯ ಬೆಳವಣಿಗೆಯೆ!. ಹೊಸ ಬರಹಗಾರರು ಒಂದಿಷ್ಟು ವಿಶ್ವ ಚಿಂತನೆಗಳ ಕಡೆಗೆ ನೋಡಬೇಕಾದ ತುರ್ತು ಇದೆ. ಯಾಕೆಂದರೆ ಹತ್ತಾರು ಗರುಡಗಳಿಗೆ ರೆಕ್ಕೆ ಬಂದರೆ ಎತ್ತರದ, ವಿಶಾಲವಾದ ಆಕಾಶ ಬೇಕು. ಅನ್ನಕ್ಕೆ ಅಷ್ಟೆ ದೊಡ್ಡ ಜಾಗವೂ ಬೇಕು.
ಇಂದಿನ ಅಸಂಖ್ಯಾತವಾದ ದಾರುಣ ಬಿಕ್ಕಟ್ಟುಗಳಿಗೆ ಕನ್ನಡ ಸಾಹಿತ್ಯದಲ್ಲಿ ಉತ್ತರಗಳಿಲ್ಲ. ಜಾಗತಿಕ ಬಿಕ್ಕಟ್ಟುಗಳಿಗೆ ಜಾಗತಿಕ ಪರಿಹಾರ ಸೂತ್ರಗಳೆ ಬೇಕಾಗುತ್ತವೆ.
ಒಬ್ಬ ವಿಜ್ಞಾನಿ, ತಂತ್ರಜ್ಞಾನಿ, ಸಾಮಾಜಿಕ ವಿಜ್ಞಾನಿ, ಪರಿಸರ ಜ್ಞಾನಿ ಎಲ್ಲೆಲ್ಲಿಂದಲೊ, ಯಾವ ಯಾವ ಹೂವುಗಳಿಂದಲೋ ಜೇನು ತಂದು ಕನ್ನಡದಲ್ಲಿ ಕಟ್ಟಬೇಕು. ಅದರ ಬದಲಾಗಿ ಎಲ್ಲ ರೋಗಗಳಿಗೂ ಪದ್ಯ- ಕಾವ್ಯಗಳಲ್ಲಿ ಮದ್ದು ಹುಡುಕುತ್ತಾ ಕೂರುವುದು ವಿನಾಶದ ಸಂಕೇತ.
ಇಲ್ಲದಿದ್ದರೆ ತೇಜಸ್ವಿ, ಕಾರಂತ ಮುಂತಾದವರು ಪದ್ಯ, ಕತೆ ಬರೆಯುವುದು ಬಿಟ್ಟು ವಿಕಾಸವಾದದ, ರಿಲೆಟಿವಿಟಿಯ ಬೆನ್ನಿಗೆ ಯಾಕೆ ಬೀಳುತ್ತಿದ್ದರು?
ಸಮಾಜದ ಜ್ಞಾನ ಶಾಖೆಯ ಉಳಿದ ಅಂಗಗಳು ನಿಶ್ಚಲಗೊಂಡಾಗ ಸಾಹಿತ್ಯವು ಕ್ರಿಯಾಶೀಲವಾಗಿದೆ.
ಅಲ್ಲಿ ಬಳಕೆಯಾಗಬೇಕಾದ ರೂಪಕಗಳು ಮದ್ದಿನಂತಿರಬೇಕು ಎಂಬ ವಾದವಿದೆ. ಇದನ್ನು ಟಿರನಿ ಆಫ್ ವರ್ಡ್ಸ್ ಎನ್ನುತ್ತಾರೆ. ಬರೆಯುವವರು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ ಇದು.
ಕನ್ನಡದಲ್ಲಿ ಕಾವ್ಯ ಪದ್ಯ ಬರೆಯುವವರೂ ಕೋಗಿಲೆ ಬದುಕು ಬದುಕಿ ಖಾಲಿಯಾಗುವುದು ಹಾಸ್ಯಾಸ್ಪದ. ಸಮಾಜಕ್ಕೆ ಪ್ರಯೋಜನವಿಲ್ಲದ್ದನ್ನು ಬರೆದು ಪ್ರಕಟಿಸುತ್ತಾ ಕೂರುವುದು ಪರಿಸರಕ್ಕೆ ಕಂಟಕ ಎಂದೆ ಭಾವಿಸಬೇಕು. 
ಆದರೂ ಅಳಿಸಲಾರದ ಲಿಪಿಯನು ಬರೆದು ಸ್ಥಾವರ ವಿಗ್ರಹವಾಗಲಾರೆ ಎಂಬ ಮರ್ತ್ಯ ತತ್ವದ ರಾಜಕೀಯ ಪ್ರಮೇಯದ ಬಗ್ಗೆಯೂ ಘನ ಗೌರವ ಇಟ್ಟುಕೊಳ್ಳಬೇಕಾಗುತ್ತದೆ. ಇದು ಓದುವವರಿಗೂ ಇರಬೇಕು. ಬರೆಯುವವರಿಗೂ ಇರಬೇಕು.
ಎಲ್ಲ ಚರಿತ್ರೆಗಳಿಗೂ ಒಂದು ಗತಿ ಇರುತ್ತದೆ. (ಲಂಬಗತಿಯೊ, ಚಕ್ರಗತಿಯೊ ಯಾವುದೊ ಒಂದು) ಅದಕ್ಕೊಂದು ತರ್ಕವೂ ಇರುತ್ತದೆ. ಆ ತರ್ಕ ಅರ್ಥವಾಗದಿದ್ದಾಗ ಪೂರ್ವ ಸೂರಿಗಳು ಪ್ಯಾಂಟು ಹಾಕಿರಲಿಲ್ಲ. ಕಾಚಾ ಹಾಕಿರಲಿಲ್ಲ. ಹ್ಯಾಟು ಶೂಗಳಿರಲಿಲ್ಲ ಎಂದು ಬಯ್ದುಕೊಳ್ಳುತ್ತೇವೆ. ಅಥವಾ ಹೆಮ್ಮೆ ಪಡುತ್ತೇವೆ. 
ಚರಿತ್ರೆಯ ಗತಿ ತರ್ಕ ಅರ್ಥವಾದ ಕೂಡಲೆ ವಿದ್ವಾಂಸನೊಳಗೆ ವಿವೇಕ ಹುಟ್ಟುತ್ತದೆ.
ವ್ಯಾಸ ಸೋಷಿಯಲಿಸಂ ಮಾತನಾಡಿಲ್ಲ ಎಂದು ಆರೋಪಿಸಿದರೆ ದೋಷ ಯಾರದು?
ಆಕ್ಟಿವಿಸ್ಟ್ ಆದವನು ಧ್ವಂಸ ಮಾಡುತ್ತಾನೆ. ತತ್ವ ಜ್ಞಾನಿಯಾದವನು ಒಡೆಯುವುದರ ಜೊತೆಗೆ ಪರ್ಯಾಯವನ್ನು ಕಟ್ಟುತ್ತಾನೆ.
ಸಮಾಜದಲ್ಲಿ ಎರಡಕ್ಕೂ ಸ್ಥಾನ ನೀಡಲಾಗಿದೆ. ಆದರೆ ಕೇವಲ ಒಡೆದು ಹಾಕುವವನು ಏನನ್ನೂ ಕಟ್ಟಲಾರ.
ಯಾವುದೆ ಸಂಸಾರಸ್ಥ ಮನೆಯೊಳಗೆ, ಕೇವಲ ಒಡೆದು ಹಾಕುವವನನ್ನು ಗೌರವದಿಂದ ನೋಡುವುದಿಲ್ಲ ಎಂಬ ಸಣ್ಣ ವಿವೇಕ ನಮಗೆ ಬೇಕಾಗಿದೆ.