ಲೋಕಲ್ ಪೇಪರ್ ಗಳ "ಆಂದೋಲನ" ದ ರೂವಾರಿಯ ನೆನಪಿನಲ್ಲಿ...,
ಟ್ಯಾಬ್ಲಾಯ್ಡ್ ಪತ್ರಿಕಾವೃತ್ತಿಗೆ ಕನ್ನಡದ ಮಟ್ಟಿಗೆ ಲಂಕೇಶ್ ಹೇಗೋ , ಹಾಗೆ ರಾಜಶೇಖರ ಕೋಟಿ ಅವರು ಸ್ಥಳೀಯ ಪತ್ರಿಕೆ ಎಂದರೆ ಹೇಗಿರಬೇಕು, ನಿಜವಾದ ಪತ್ರಕರ್ತ ಹೇಗಿರುತ್ತಾನೆ ಎಂಬುದಕ್ಕೆ ಅನುಕರಣೀಯ ಮಾದರಿಯಾಗಿ ಅರ್ಧ ಶತಮಾನ ಬಾಳಿ ಬೆಳಗಿದ್ದಾರೆ. ಅವರ ಹಾದಿಯಲ್ಲಿ ಸಾಗುವ ಕಿರು ಪ್ರಯತ್ನ ನಿಮ್ಮ ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆಯ ತಂಡದ್ದೂ ಆಗಿದೆ ಅಂತ ಮಾತ್ರ ಭರವಸೆ ಕೊಡಬಲ್ಲೆ .
ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ
ಇಟಕ ದಿಬ್ಬನಹಳ್ಳಿ ಅಂತ ಹೇಳಿ ನೋಡಿ, ಇವತ್ತು ಯಾರಿಗೂ ಅದು ಯಾವೂರು ಅಂತ ಗೊತ್ತಾಗಲ್ಲ, ಆದರೆ ಐಡಿ ಹಳ್ಳಿ ಅಂತ ಹೇಳಿ ನೋಡಿ ಪಟಕ್ಕಂತ ಗೊತ್ತಾಗಿಬಿಡುತ್ತೆ. ಮಧುಗಿರಿ ತಾಲೂಕಿನ ಒಂದು ದೊಡ್ಡ ಹಳ್ಳಿ, ಈಗ ಆ ಊರಲ್ಲಿ ಪೆಟ್ರೋಲ್ ಬಂಕ್ ಕೂಡಾ ಐತೆ. ಮಧುಗಿರಿಯಿಂದ ಕೊಡಿಗೇನಹಳ್ಳಿ –ಹಿಂದೂಪುರ ಅಂತಾರಾಜ್ಯ ಹೆದ್ದಾರಿಯಲ್ಲಿ ಪುರವರದ ಹತ್ರ ಎಡಕ್ಕೆ ಹೊಡಕಂಡ್ರೆ ಮಧುಗಿರಿಗೆ ಒಂದ್ 25 ಕಿಲೋಮೀಟರ್ ಆಗಬಹುದು. ಮಿಡಿಗೇಶಿ ಮೇಲಿಂದ ಹೋದ್ರೆ ಇನ್ನೂ ಹತ್ ಕಿಲೋಮೀಟರ್ ಜಾಸ್ತಿ. ಗೂಗಲ್ ಮ್ಯಾಪಿನಲ್ಲೇನಾದರೂ ಇಟಕದಿಬ್ಬನಹಳ್ಳಿ ಅಂತ ಟೈಪ್ ಮಾಡಿ ಸರ್ಚ್ ಕೊಟ್ ನೋಡಿ, ಅದು ಅಚ್ಚ ಕನ್ನಡದಲ್ಲಿ ಇತಕುಡಿದಿಬ್ಬಾನಹಳ್ಳಿ ಅಂತ ತೋರಿಸುತ್ತೆ. ಇವತ್ತು ಬೆಳಿಗ್ಗೆ ರೈತ ಮಿತ್ರ ಜಿ.ಕೃಷ್ಣಪ್ರಸಾದ್ ಅಂದರೆ ನಮ್ಮೆಲ್ಲರ ಪ್ರೀತಿಯ ಕಿಟ್ಟಿ ಫೇಸ್ ಬುಕ್ ನಲ್ಲಿ ತನ್ನಂತೆಯೇ ಎದೆಯುದ್ದ ಬೆಳೆದು ನಿಂತಿರುವ ತನ್ನ ಮಗ ರುತುಪರ್ಣನ ಫೋಟೋ ಹಾಕಿ ಮೆಚ್ಚುಗೆಯ ಮಾತುಗಳನ್ನು ಬರೆದದ್ದನ್ನು ಕಂಡಾಗ ಈ ಕಿಟ್ಟಿ ಹುಟ್ಟಿ ಬೆಳೆದ ಇಟಕದಿಬ್ಬನಹಳ್ಳಿ ನೆನಪಾಯಿತು.
ಮಧುಗಿರಿ ತಾಲೂಕು ಬಾಲ್ಯದಿಂದಲೂ ನನಗೇನೂ ಹೊಸತೇನೂ ಆಗಿರಲಿಲ್ಲ. ಕೊಡಿಗೇನಹಳ್ಳಿ ಸಮೀಪದ ಮೈದನಹಳ್ಳಿಯಲ್ಲಿದ್ದ ಅಮೃತಗಿರಿಯ ಚನ್ನಮ್ಮ ದೊಡ್ಡಮ್ಮನ ಮನೆ, ದೊಡ್ಡ ಹೊಸಳ್ಳಿಯ ನೆಂಟರ ಮನೆ, ಗಂಕಾರನಹಳ್ಳಿಯ ಮೀಸೆ ಶಾಮಣ್ಣ ತಾತನ ದೊಡ್ಡ ಕೊಟ್ಟಿಗೆ, ನಮ್ಮ ರಕ್ತ ಸಂಬಂಧಿ ನೆಂಟರಿರುವ ರಂಟವಾಳ, ಚಿಕ್ಕದಾಳವಟ್ಟಗಳೆಲ್ಲ ಹಿಂಗೇ ತೇರು, ಪರಿಸೆ, ಮದುವೆ, ನಾಮಕರಣ, ತಿಥಿಗಳಿಗೆ ಹೋಗಿ ಬಂದೂ ರೂಡಿ ಆಗಿತ್ತು. ನಾನು ತೀರಾ ಚಿಕ್ಕವನಾಗಿದ್ದಾಗ ನಾವು ಅಣ್ಣ ಅಂತ ಕರೆಯುತ್ತಿದ್ದ ನಮ್ಮಪ್ಪ ಕೃಷಿ ಇಲಾಖೆಯಲ್ಲಿ ಕೆಲ ತಿಂಗಳು ಕೆಲಸದಲ್ಲಿದ್ದ ಕಾರಣ ಮಧುಗಿರಿ ಟೌನ್ ಕೂಡಾ ಮಧುಗಿರಿಯ ಬಂಡೆಗಳ ಸಮೇತ ಪರಿಚಯವಾಗಿತ್ತು.
ನಾನು ಪದವಿ ಓದುತ್ತಿರುವಾಗ ಆಕಸ್ಮಿಕವಾಗಿ ತಗುಲಿಕೊಂಡ ಮುಂದೆ ನನ್ನ ಜನ ಪರ – ಜೀವ ಪರ ಜೀವನಕ್ಕೊಂದು ಸ್ಪಷ್ಟ ದಿಕ್ಕು ತೋರಿದ ರೈತ ಚಳವಳಿ ಮತ್ತು ಆ ರೈತ ಹೋರಾಟದ ಜೀವಾಳವಾಗಿದ್ದ ರುದ್ರಪ್ಪ- ಸುಂದರೇಶ್ - ನಂಜುಂಡಸ್ವಾಮಿ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ, ಆ ಸಂಘಟನೆಯ ವಿದ್ಯಾರ್ಥಿ ವಿಭಾಗ ರೈತ ವಿದ್ಯಾರ್ಥಿ ಒಕ್ಕೂಟ, ಆ ಮೂಲಕ ಪರಿಚಯವಾದ ಜಿ.ಶ್ರೀನಿವಾಸಕುಮಾರ್ ಇದೇ ಐಡಿಹಳ್ಳಿಯವರು. ರೈತ ಸಂಘಕ್ಕೂ ಸೇರುವ ಮೊದಲು ಸಮಾಜವಾದಿ ಅಧ್ಯಯನ ಕೇಂದ್ರದಲ್ಲಿ ಪಳಗಿದ್ದವರು ಇವರು. ಈ ಶ್ರೀನಿವಾಸಕುಮಾರ್ ನನಗೆ ಅಧಿಕೃತವಾಗಿ ಪರಿಚಯವಾಗುವ ಮೂರು ವರ್ಷ ಮೊದಲೇ ಅವರನ್ನು ಇದೇ ತುಮಕೂರಿನಲ್ಲಿ ಬಹಳಷ್ಟು ಸಲ ಕಂಡಿದ್ದೆ, ಮಾತನಾಡಿಸಿದ್ದೆ, ಆದರೆ ಅವರೇ ಅವರು ಅಂತ ಗೊತ್ತಾಗಿರಲಿಲ್ಲ. ಗಾಯಿತ್ರಿ ಥಿಯೇಟರಿನ ಕಾಂಪೌಂಡ್ ಮುಂದೆ ಒಂದಷ್ಟು ಹಳೆಯ ಪುಸ್ತಕಗಳನ್ನು ಜೋಡಿಸಿ, ಒಂದು ಕಾಲನ್ನು ಅದೇ ಗೋಡೆಗೆ ಒರಗಿಸಿ ನಿಂತು, ಬೀಡಿಯೋ ಸಿಗರೇಟೋ ಸೇದುತ್ತ ನಿಂತಿರುತ್ತಿದ್ದ ಅವರ ಬಳಿ ʼಔಟ್ ಲೈನ್ಸ್ ಆಫ್ ಬಾಟನಿʼ ಎಂಬ ಅತ್ಯುತ್ತಮ ಪಠ್ಯ ಪುಸ್ತಕವನ್ನು ಕೇವಲ ಒಂದು ರೂಪಾಯಿಗೋ ಎರಡು ರೂಪಾಯಿಗೋ ಖರೀದಿ ಮಾಡಿದ್ದೆ. ಪಿಯು ಓದುತ್ತಿದ್ದ ನನಗೆ ಆ ಪುಸ್ತಕದಿಂದ ಕಲಿಯಲು ಬಹಳ ಅನುಕೂಲವಾಗಿತ್ತು. ಹಂಗಾಗಿ ಆಗಾಗ ಆ ಫುಟ್ ಪಾತ್ ಪುಸ್ತಕದ ಅಂಗಡಿಯನ್ನು ಇಣುಕಿ ನೋಡುತ್ತ ಶ್ರೀನಿವಾಸಕುಮಾರ್ ಎಂಬ ಎದ್ದು ಕಾಣುವ ಮೂಗಿನ , ಕೋಲು ಮುಖದ ಆಸಾಮಿಯನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೆ. ಆ ಪುಸ್ತಕದ ಅಂಗಡಿಯ ಮತ್ತೊಬ್ಬ ಕೂದಲು ಸೀಳಿ ವಿಶ್ಲೇಷಿಸುವ ಪಾರ್ಟನರ್ ಅವತ್ತೂ ಹೆಚ್ಚು ಆಪ್ತ ಎನಿಸಿರಲಿಲ್ಲ ಇವತ್ತೂ ಅಷ್ಟೇ ಆದೇಕೋ ಗೊತ್ತಿಲ್ಲ.

ಇಂತಾ ಶ್ರೀನಿವಾಸಕುಮಾರ್ ಅವರಿಗೆ ಜಿಗಣೆಯಂತೆ ಅಂಟಿಕೊಂಡ ನಾನು ಅವರು ಹೋದ ಕಡೆಗೆಲ್ಲ ಕರೆಯದೇ ಇದ್ದರೂ ಜೊತೆಗೆ ಹೋಗಿ ಬಿಡುತ್ತಿದ್ದೆ. ಹಂಗೇ ಒಂದು ದಿನ ತುಮಕೂರಿನಿಂದ ಹೊರಟು ಮಧುಗಿರಿಯಲ್ಲಿ ಬೇರೆ ಬಸ್ ಹತ್ತಿ ಕತ್ತಲಾಗುವ ಹೊತ್ತಿಗೆ ಅವರ ಊರು ಐಡಿಹಳ್ಳಿ ತಲುಪಿದ್ದೆವು. ಅವರ ಮನೆ ತೋಟದೊಳಗಿತ್ತು. ಶ್ರೀನಿವಾಸಕುಮಾರ್ ಅವರ ಅಮ್ಮ , ತಂಗಿ ಕಂಡರು, ಅಪ್ಪ ಬೆಳಿಗ್ಗೆ ಕಂಡಂತಾಯಿತು. ಅವರ ತಾತ ಕಚ್ಚೇಹರುವೆ ಕಟ್ಟಿಕೊಂಡು ಬಾವಿಯ ಮಗ್ಗುಲಲ್ಲಿ ಕುಳಿತು ಏನೋ ಕೆದಕುತ್ತಿತ್ತು. ಈ ಶ್ರೀನಿವಾಸ ಕುಮಾರ್ ಅವರ ಇಬ್ಬರು ಸೋದರರಲ್ಲಿ ಕಿರಿಯ ಜಿ.ಕೃಷ್ಣಪ್ರಸಾದ್. ಓದಿದ್ದು ಇಂಜಿನಿಯರಿಂಗ್ ಆದರೂ ಈಗ ಎರಡು ದಶಕಗಳಿಂದ ಸಹಜ-ಸಾವಯವ ಕೃಷಿಕರ ಜೊತೆಗೆ ದೇಸಿ ಬೀಜಗಳನ್ನು ಉಳಿಸುತ್ತ, ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಲು ಹೆಣಗುತ್ತಿದ್ದಾರೆ.
ಮೊನ್ನೆ ಬುಧವಾರ 97-98ರ ಇಳಿ ವಯಸ್ಸಿನಲ್ಲಿ ತೀರಿಕೊಂಡ ಹಿರಿಯ ಸಮಾಜವಾದಿ ಸಚ್ಚಿದಾನಂದ ಸಿನ್ಹ ಅವರ ಬಳಕೆದಾರ ಸಂಸ್ಕೃತಿ ಕುರಿತ ಪುಸ್ತಕವನ್ನು ಇದೇ ಶ್ರೀನಿವಾಸಕುಮಾರ್ “ಚಿನ್ನದ ಕತ್ತಿಯ ಮೋಹ” ಅಂತ ಕನ್ನಡಕ್ಕೆ ತಂದು ಪ್ರಕಟಿಸಿದರು. ಜೀವವನ್ನು ದೇಹದ ಬತ್ತಿ ಉರಿದು ಕರುಕಾಗುವ ತನಕ ಉರಿಸಿದ ಪರಿಣಾಮವಾಗೋ ಏನೋ ಇವತ್ತು ಜಿ. ಶ್ರೀನಿವಾಸಕುಮಾರ್ ನಮ್ಮೊಂದಿಗೆ ಇಲ್ಲ, ಅವರ ಐಡಿ ಹಳ್ಳಿಯಲ್ಲಿ ಅವರೊಂದಿಗೆ ಹುಟ್ಟಿ ಬೆಳೆದ ಯಾರೂ ಈಗ ಆ ಊರಿನಲ್ಲಿ ವಾಸವಿಲ್ಲ.

ಸಚ್ಚಿದಾನಂದ ಸಿನ್ಹಾ, ಮೊನ್ನೆ ವಿಧಾನ ಸಭಾ ಚುನಾವಣೆಯಲ್ಲಿ ಹತ್ತನೇ ಸಲ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿತಲ್ಲ, ಅದೇ ಬಿಹಾರದವರು. ಬಿಹಾರದ ರಾಜಧಾನಿ ಪಟ್ನಾ ಕ್ಕೆ ಸುಮಾರು 70 ಕಿಲೋಮೀಟರ್ ಗಳಷ್ಟು ದೂರದ ಮುಜಪರಾಪುರ್ ಜಿಲ್ಲೆಯ ಮನಿಕಾ ಗ್ರಾಮದವರು. ರಾಮಮನೋಹರ ಲೋಹಿಯಾ ಅವರಂತೆಯೇ ರಾಜಕೀಯ, ಅರ್ಥಶಾಸ್ತ್ರ, ಕಲೆಗಳಲ್ಲಿ ಜೀವಪ್ರೀತಿಯ ಬರಹಗಳನ್ನು ನಿರಾಳವಾಗಿ ನಿರರ್ಗಳವಾಗಿ ಬರೆಯುತ್ತಿದ್ದವರು, ತಣ್ಣಗೆ ತಂಗಾಳಿಯಂತೆ ಮಾತನಾಡುತ್ತಿದ್ದ ಹಿರಿಯ ಗಾಂಧಿಮಾರ್ಗಿ. ಬಿಹಾರದಲ್ಲಿ ಒಂದು ಕಾಲದಲ್ಲಿ “ ಸಮೋಸಾ ಮೇ ಜಬ್ ತಕ್ ಆಲೂ ರಹೇಗಾ - ತಬ್ ತಕ್ ಲಾಲೂ ರಹೇಗಾ ಬಿಹಾರ್ ಕಾ ರಾಜನೀತೀ ಮೇ” ಅಂತ ಒಂದು ಜನ ನುಡಿ ಇತ್ತು. ಆದರೆ ಮೇವು ಹಗರಣದಲ್ಲಿ ಲಾಲೂ ಜೈಲು ಪಾಲಾದ ಮೇಲೆ ಅವರೊಂದಿಗೇ ಇದ್ದು ರಾಜಕೀಯ ಮಾಡುತ್ತಿದ್ದ ನಿತೀಶ್ಕುಮಾರ್ ಎದ್ದು ನಿಂತರು. ಒಂದು ಸಲ ವಿಧಾನ ಸಭೆಗೆ ಗೆದ್ದು ಎರಡನೇ ಸಲ ಸೋಲಿನ ರುಚಿ ಕಂಡ ನಿತೀಶ್ ಮತ್ತೆಂದೂ ನಿಂತು ಸೋಲುವ ಗೋಜಿಗೇ ಹೋಗಲಿಲ್ಲ. ವಿಧಾನ ಪರಿಷತ್ ನಾಮಕರಣವೆಂಬ ಸುರಕ್ಷಿತ ಸುರಂಗವನ್ನು ಕಂಡುಕೊಂಡು ಬಿಟ್ಟರು. ಕಳೆದ ಹತ್ತು ವರ್ಷಗಳಲ್ಲಿ ಹತ್ತು ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಈ ಮೆಕಾನಿಕಲ್ ಎಂಜಿನಿಯರ್ ಅವರ ಪಕ್ಷ ಜೆಡಿಯು ಎಂದೂ ಬಹುಮತ ಗಳಿಸುವುದಿರಲಿ, ಒಟ್ಟು ಬಿಹಾರದ ಎಲ್ಲ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ನೆನಪೂ ಇಲ್ಲ. ಯಾವ ಯಾವ ಪಕ್ಷಗಳೊಂದಿಗೆ ಮಿತ್ರಕೂಟ ರಚಿಸಿಕೊಂಡರೂ ನಿತೀಶ್ ಮುಖ್ಯಮಂತ್ರಿ ಆಗುವುದನ್ನು ಮಾತ್ರ ತಪ್ಪಿಸಲು ಈ ಸಲ ಖುದ್ದು ಮೋದಿ-ಶಾಗಳಿಂದಲೂ ಆಗಲಿಲ್ಲ.

ಬಿಹಾರ ಚುನಾವಣೆ ಆಗಿ ಮುಗಿಯುವ ತನಕ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ಅಂತ ನಮ್ಮ ನೇರ-ದಿಟ್ಟ ರಾಜಕಾರಣಿ ಕೆಎನ್ನಾರ್ ಹೇಳಿದ್ದರು. ಆನಂತರವೂ ಏನೂ ಬದಲಾವಣೆ ಆಗುವಂತೆ ಕಾಣುತ್ತಿಲ್ಲ ಅಂತ ನಮ್ಮ ರಾಜಧಾನಿ ಸುದ್ದಿ ಮೂಲಗಳು ಹೇಳುತ್ತಿವೆ. ಮುಖ್ಯಮಂತ್ರಿ ಬದಲಾವಣೆ ಖಚಿತ ಆದರೆ ಯಾವತ್ತು ಅಂತ ಹೇಳಲಾಗದು, ಬಿಹಾರ ಚುನಾವಣೆ ಮುಗಿಸಿ ರೆಸ್ಟ್ಗೆಂದು ವಿದೇಶಕ್ಕೆ ಹೋಗಿರುವ ಕಾಂಗ್ರೆಸ್ ಹೈಕಮಾಂಡ್ನ ಕಮಾಂಡರ್ ರಾಹುಲ್ ಗಾಂಧಿಯನ್ನು ಡಿಕೆ ಸಾಹೇಬ್ರು ಪರ್ಸನಲ್ ಆಗಿ ಮೀಟ್ ಮಾಡಿ ಕನ್ವೀನ್ಸ್ ಮಾಡಲಾಗಿಲ್ಲ, ಉಳಿದ ಎಲ್ಲ ಕಮಾಂಡರ್ಗಳೆಲ್ಲರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಮೊನ್ನೆ ಗುರುವಾರದ ಅಮಾವಾಸ್ಯೆಯಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಖರಾರುವಕ್ಕಾಗಿ ಎರಡೂವರೆ ವರ್ಷದ ಹೊಸಿಲು ದಾಟಿತು. ಆದರೆ ಆ ಸಂಭ್ರಮವನ್ನು ಆಚರಿಸಲು ಸಿದ್ದು ಜೊತೆ ಇರುವ ಮೂರೂವರೆ ವಜ್ರಗಳಿಗೆ ಅವಕಾಶವೇ ಸಿಕ್ಕಲಿಲ್ಲ. ಆ ಮೂರೂವರೆ ವಜ್ರಗಳು ಯಾರು ಯಾರು ಅಂತ ಕೇಳಬೇಡಿ, ಇನ್ನೊಂದು ಸಲ ವಿವರಿಸುತ್ತೇನೆ.
******
ಟಿವಿಗಳು ಬರುವ ತನಕ ಪ್ರೆಸ್ ಅಂತ ಕರೆಯುತ್ತಿದ್ದ ನಮ್ಮನ್ನು ಮೀಡಿಯಾ ಅಂತಲೂ ಕರೆಯಲಾಗುತ್ತಿದೆ. ಟಿವಿಗಳವರನ್ನು ಎಲೆಕ್ಟ್ರಾನಿಕ್ ಮೀಡಿಯಾ ಅಂತಲೂ ನಮ್ಮನ್ನು ಅಂದರೆ ಪತ್ರಿಕೆಗಳವರನ್ನು ಪ್ರಿಂಟ್ ಮೀಡಿಯಾ ಅಂತಲೂ, ಯೂ ಟ್ಯೂಬ್ಗಳಲ್ಲಿ ಸುದ್ದಿಗೆ ಗುದ್ದುಗಳನ್ನು ಕೊಡುವವರಿಗೆ ಯೂಟ್ಯೂಬರ್ ಅಂತಲೂ, ಫೇಸ್ ಬುಕ್ ಸ್ಟೋರಿಗಳನ್ನು ಬರೆಯುವವರನ್ನು, ವಿಡಿಯೋಗಳನ್ನು ವೈರಲ್ ಮಾಡುವವರನ್ನು ಸೋಶಿಯಲ್ ಮೀಡಿಯಾದವರು ಅಂತಲೂ, ಮೊಬೈಲಿನಲ್ಲೇ ಎಲ್ಲವನ್ನೂ ಶೂಟ್ ಮಾಡಿ ಹರಿಬಿಡುವವರನ್ನು ಮೊಜೊಗಳು ಅಂತಲೂ ವಿವಿಧ ನಾಮಕರಣಗಳನ್ನು ಮಾಡಿಬಿಡಲಾಗಿದೆ.
ಎಲೆಕ್ಟ್ರಾನಿಕ್ ಮೀಡಿಯಾ ಅಂತ ಬಂದ ಮೇಲೆ, ಈ ಸೋಶಿಯಲ್ ಮೀಡಿಯಾಗಳು ಹರಡಿಕೊಂಡ ಮೇಲೆ ಪ್ರಿಂಟ್ ಮೀಡಿಯಾಗಳನ್ನು ಕೇಳುವವರೇ ಇಲ್ಲ ಅಂತ ನಮ್ಮೂರಿನಿಂದ ನ್ಯಾಶನಲ್ ಲೆವಲ್ ತಲುಪಿ ದಣಿದಿರುವ ಜಾಹಿರಾತು ದಣಿ ಅವ(ರ)ಲೋಕನದಲ್ಲಿ ಗೊಣಗಿಕೊಂಡಿದ್ದಾರೆ. ಚಳಿಗಾಲದ ಅಧಿವೇಶನ ಮುಗಿಯವವರೆಗೆ ಬೆಚ್ಚಗಿರಿ ಅಂತ ಚಳಿಗೆ ಗಡಗಡ ನಡುತ್ತಿರುವ ದಿಲ್ಲಿಯಿಂದ ಇಲ್ಲಿಗೇ ಬಂದು ಖರ್ಗೆ ಸಾಹೇಬರು ಹೇಳಿರುವ ಕಾರಣಕ್ಕೆ ಜಾಹಿರಾತಿಗಾಗಿ ಇವರು ಎತ್ತಿರುವ ದನಿ ಸದ್ಯಕ್ಕಂತೂ ದನಿ ರಹಿತರ ದನಿಯಾಗುವ ಆತಂಕವಿಲ್ಲ. ಜಸ್ಟ್ ವೇಟ್ ಅಂಡ್ ಸೀ.
ಮೊದಲಿಗೇ ಹೇಳಿದ ಐಡಿಹಳ್ಳಿಯಲ್ಲಿ ಹುಟ್ಟಿ ಅಹಮದಾಬಾದಿನವರೆಗೂ ಹೋಗಿ ಓದಿಕೊಂಡು ಬಂದ ಜಿ.ಕೃಷ್ಣಪ್ರಸಾದ್ ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ. ಮೈಸೂರು ಒಂತರಾ ನನಗೆ ಎರಡನೇ ಹುಟ್ಟೂರಿನಂತೆ. ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ನಮ್ಮೂರಿನ ಶಾರದಮ್ಮನವರ ತಮ್ಮ ಹೊಳಕಲ್ನ ಬೊಂಬಾಯಿ ರಾಮಚಂದ್ರ ಅವರ ಮದುವೆ ಮೈಸೂರಿನಾಚೆಯ ನಂಜನಗೂಡಿಗೂ ಮುಂಚೆ ಸಿಗುವ ಕಡಕೊಳದಲ್ಲಿ ನಡೆದಿತ್ತು. ಮದುವೆ ದಿಬ್ಬಣದ ಬಸ್ಸಿನಲ್ಲಿ ಅಣ್ಣನೊಂದಿಗೆ ಮದುವೆಗೆ ಹೋದಾಗ ಶಾಸ್ತ್ರದ ಸಂಜೆ ಮೈಸೂರಿನ ಅರಮನೆ, ಕೆ.ಆರ್.ಎಸ್ , ಬೆಳಿಗ್ಗೆ ಧಾರೆಗೆ ಮುಂಚೆ ನಂಜನಗೂಡಿನ ನಂಜುAಡೇಶ್ವರನ ದೊಡ್ಡ ದೇವಾಲಯದಲ್ಲಿ ಪೊಂಗಲ್ ಪ್ರಸಾದದ ರುಚಿ ಕಂಡ ನೆನಪು.
ಮತ್ತೆ ಪದವಿ ಓದುವಾಗ ಅದೇ ಮೈಸೂರಿಗೆ ದಲಿತ ಸಂಘರ್ಷ ಸಮಿತಿ ಹಾಗೂ ರೈತಸಂಘಗಳು ಒಂದಾಗಿ ಏರ್ಪಡಿಸಿದ್ದ ಮೀಸಲಾತಿ ಕುರಿತ ವಿಚಾರ ಸಂಕಿರಣಕ್ಕೆ ಹೋದಾಗ ಬೆಳ್ಳಗೆ ಫಳಪಳ ಹೊಳೆಯುತ್ತಿದ್ದ ಪಾದರಸದಂತೆ ಹರಿದಾಡುತ್ತಿದ್ದ ʼ ಹಾಲು ಕುಡಿದ ಹುಡುಗಾʼ ಕತೆ ಬರೆದು ಖ್ಯಾತಿ ಪಡೆದಿದ್ದ ನಮ್ಮದೇ ವಾರಿಗೆಯ ಅಬ್ದುಲ್ ರಶೀದ್ ಮತ್ತು ನಮ್ಮ ತಿಪಟೂರಿನ ಇವತ್ತಿನ ಹೆಸರಾಂತ ಕತೆಗಾರ ಎಸ್.ಗಂಗಾಧರಯ್ಯ ಅವರ ಜೋಡಿಯನ್ನು ಕಂಡದ್ದು.
ಮತ್ತೆ ಎಂಎ ಓದುವಾಗ ಮೈಸೂರಿನ ನಂಟು ಹೆಚ್ಚಿನ ಪ್ರಮಾಣಕ್ಕೆ ಹರಡಿಕೊಂಡಿತ್ತು. ಅಷ್ಟು ಹೊತ್ತಿಗೆ ವಿದ್ಯಾರ್ಥಿ ಸಂಘಟನೆ, ಹೋರಾಟ ಮುಗಿದು ಬದುಕಿನ ಹೋರಾಟ ಶುರುವಾಗಿತ್ತು. ವಾರದಲ್ಲಿ ಆರು ದಿನ ಕೇವಲ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿದ್ದ 35 ಪೈಸೆ ಮುಖ ಬೆಲೆಯ ದಿನಪತ್ರಿಕೆಯ ವರದಿಗಾರನಾಗಿಬಿಟ್ಟಿದ್ದೆ. ಅದೇ ಮೈಸೂರಿನಲ್ಲಿ ಪದವಿ ಓದುವಾಗ ಬೂಸಾ ಪ್ರಕರಣದ ಪ್ರತ್ಯಕ್ಷದರ್ಶಿಯಾಗಿದ್ದ, ದಲಿತ ಚಳವಳಿ ತಣ್ಣಗಾಗುತ್ತಿದ್ದ ದಿನಗಳಲ್ಲಿ ತುಮಕೂರಿನಲ್ಲಿ ಪ್ರಜಾವಾಣಿ – ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ವರದಿಗಾರರಾಗಿದ್ದ ಶಿವಾಜಿ ಗಣೇಶನ್ ಅವರು ಹಳ್ಳಿಯಲ್ಲಿ ಚೂರು ಪಾರು ನೆಲ ಕೆರೆದುಕೊಂಡಿದ್ದ ನನ್ನನ್ನು 1988ರ ಜನವರಿ ಅಂತ್ಯದಲ್ಲಿ ಪತ್ರಿಕಾ ವೃತ್ತಿಗೆ ಪರಿಚಯಿಸಿ ದಡ ಸೇರಿಸಿದೆ ಅಂತ ಅಂದುಕೊಂಡಿದ್ದರು.
ಆದರೆ ಈ ಪತ್ರಿಕಾ ವೃತ್ತಿ ಎಂಬ ಕಡಲಿಗೆ ದಡವೆಂಬುದೇ ಇಲ್ಲ ಎಂಬುದು ನನಗೆ ಈ 38 ವರ್ಷಗಳಲ್ಲಿ ಅವಧಿಯಲ್ಲಿ ಬಹಳಷ್ಟು ಸಲ ಅರ್ಥವಾಗಿಬಿಟ್ಟಿದೆ. ಒಂದು ಸಲ ಪತ್ರಿಕಾ ವೃತ್ತಿಗೆ ಎಂಟ್ರಿ ಕೊಟ್ಟ ಮೇಲೆ ಭೂಗತ ಜಗತ್ತಿಗಿಂತ ಹೆಚ್ಚಿನ ಮಟ್ಟಿಗೆ ನಮಗೆ ಅದು ಅಂಟಿಕೊಂಡು ಬಿಡುತ್ತದೆ ಅಥವಾ ನಾವೇ ಅದಕ್ಕೆ ಅಂಟಿ ಕೊಂಡು ಬಿಡುತ್ತೇವೆ. ಅಕಸ್ಮಾತ್ ಒಂದೊಂದು ಸಲ ಭೂಗತ ಜಗತ್ತಿನಲ್ಲಿ ದಶಕಗಟ್ಟಲೆ ಇದ್ದವರು ಅದರ ಲಿಂಕ್ ಕಳಚಿಕೊಂಡು ಎಲ್ಲೋ ತಣ್ಣಗೆ ಇದ್ದು ಬಿಡಬಹುದು ಆದರೆ ಈ ಪ್ರೆಸ್ ಫೀಲ್ಡ್ ಐತಲ್ಲ ಅದು ಅಷ್ಟು ಸುಲಭಕ್ಕೆ ನಿಮ್ಮನ್ನು ಬಿಟ್ಟುಕೊಡುವುದಿಲ್ಲ. ಪತ್ರಿಕಾ ಸಂಪಾದಕರಾಗೇ ಇದ್ದುಕೊಂಡು ನಾಲ್ಕು ಸಲ ಎಂಎಲ್ಎ ಎರಡು ಸಲ ಮಂತ್ರಿಯಾದ ಅವರ ಬೆಂಬಲಿಗರು ಕರೆಯುವ ʼ ಹಿಂದೂ ಹುಲಿʼ ಸೊಗಡು ಶಿವಣ್ಣನವರನ್ನ ಬೇಕಿದ್ದರೆ ರಾಜಕೀಯ ಬಿಡಿ ಅಂದರೆ ಬಿಟ್ಟು ಬಿಡುತ್ತಾರೆ, ಪತ್ರಿಕಾ ವೃತ್ತಿಯನ್ನು ಮಾತ್ರ ಬಿಡಲ್ಲ ಅಂತಾರೆ, ನನ್ನ ಮಾತಲ್ಲಿ ನಂಬಿಕೆ ಇಲ್ಲದೇ ಹೋದರೆ ಚಿಕ್ಕಪೇಟೆ ಸರ್ಕಲ್ಲಿಗೆ ಹೋಗಿ ಅವರನ್ನೇ ಕೇಳಿ ನೋಡಿ.
ನಾನು ಮೈಸೂರಿಗೆ ಎಂ.ಎ ಓದುವಾಗ ಸಂಪರ್ಕ ತರಗತಿಗಳಿಗೆಂದು ಹೋಗಿ ವರ್ಷದಲ್ಲಿ ಹದಿನೈದು ದಿನ ಎರಡು ವರ್ಷ ಅಲ್ಲೇ ಉಳಿದುಕೊಂಡಿದ್ದಾಗ ಮೈಸೂರಿನ ಗೆಳೆಯರೊಂದಿಗೆ ಹೋಗಿ ʼ ಆಂದೋಲನʼ ದಿನಪತ್ರಿಕೆಯ ಪ್ರೆಸ್ ಕಂ ಕಚೇರಿಯಲ್ಲಿ ರಾತ್ರಿ ಸರುಹೊತ್ತಿನವರೆಗೆ ಇರತೊಡಗಿದೆ. ಅಷ್ಟೊತ್ತಿಗಾಗಲೇ ನಾನು ಪತ್ರಿಕಾ ವೃತ್ತಿಗೆ ಬಂದು ವರ್ಷಗಳೇ ಆಗಿದ್ದವಲ್ಲ. ಅಂದಿಗಾಗಲೇ ʼ ಆಂದೋಲನʼ ಅಚ್ಚುಮೊಳೆ ಜೋಡಿಸುವುದನ್ನು ತೊರೆದು , ಶೀಟ್ ಫೆಡ್ ಆಫ್ ಸೆಟ್ ಪ್ರಿಂಟಿಂಗ್ ಅನ್ನೂ ದಾಟಿ ಕಪ್ಪು ಬಿಳುಪಿನ ವೆಬ್ ಮೆಶೀನ್ನಲ್ಲಿ ನಾಲ್ಕು ಪುಟಗಳಲ್ಲಿ ಮುದ್ರಣಗೊಳ್ಳುತ್ತಿತ್ತು. ʼಆಂದೋಲನʼ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿಯವರು ಒಂದು ವಿಶಿಷ್ಟ ತಂಡವನ್ನು ಕಟ್ಟಿಕೊಂಡು ಪತ್ರಿಕೆಯನ್ನು ರೂಪಿಸುತ್ತಿದ್ದ ಪರಿಗೆ ನಾನು ಬೆರಗಾಗಿಬಿಟ್ಟಿದ್ದೆ. ಸಂಪಾದಕ ಅಂದರೆ ಹೀಗೇ ಇರಬೇಕು ಅಂತ ಮನದೊಳಗೆ ತಿದ್ದಿ ತಿದ್ದಿ ಬರೆದುಕೊಳ್ಳತೊಡಗಿದೆ. ಅವರು ಸುದ್ದಿಗಳನ್ನು ಎಡಿಟ್ ಮಾಡುತ್ತಿದ್ದ ರೀತಿ, ಅವರ ಪತ್ರಿಕೆ ಸಂಪಾದಕೀಯ ನೀತಿ , ಅವರು ಸಿಬ್ಬಂದಿಗೆ ತೋರುತ್ತಿದ್ದ ಪ್ರೀತಿ ಎಲ್ಲವೂ ನನ್ನೊಳಗೆ ಆವರಿಸಿಕೊಳ್ಳತೊಡಗಿತು. ಸದಾ ಕಮ್ಯುನಿಸ್ಟ್ ಕಾಮ್ರೇಡ್ ಗಳಂತೆ ಒಂದು ಕೆಂಪು ಟೀ ಶರ್ಟ್ ಹಾಗೂ ಮುಖದ ತುಂಬ ಇರುತ್ತಿದ್ದ ಅವರ ತುಂಬು ನಗೆಗೆ ಮನಸೋತುಬಿಟ್ಟಿದ್ದೆ.
ತಡರಾತ್ರಿ ಒಂದೂವರೆ ಎರಡು ಗಂಟೆಗೆ ಎಡಿಶನ್ ಮುಗಿಸಿದ ಕೋಟಿಯವರು ಮತ್ತೆ ಬೆಳಗಿನ ಜಾವ ನಾಲ್ಕೂವರೆಗೇ ಎದ್ದು ಪತ್ರಿಕೆಯ ಬಂಡಲುಗಳ ಜೊತೆ ದೇವರಾಜ ಮಾರುಕಟ್ಟೆಗೆ ಬಂದು ಅಲ್ಲಿನ ಫುಟ್ ಪಾತ್ ಮೇಲೆ ಕುಳಿತು ಹಿಂದಿನ ರಾತ್ರಿಯ ಇಂಡೆಂಟ್ ಕೊಟ್ಟ ವಿತರಕರಿಗೆ ಪತ್ರಿಕೆಯನ್ನು ಎಣಿಸಿಕೊಡುತ್ತಿದ್ದರು. ಒಂದರೆಡು ಮುಂಜಾನೆ ನನಗೂ ಅವರ ಜೊತೆ ಇರುವ ಅವಕಾಶ ಕೊಟ್ಟಿದ್ದರು. ಪತ್ರಿಕೆ ಎಣಿಸಿಕೊಟ್ಟ ಬಳಿಕ ಅಲ್ಲೇ ಅವರಿಗಾಗೇ ಕಾದಿದ್ದ ಪುಟ್ಟ ಟೀ ಅಂಗಡಿಯಲ್ಲಿ ನೊರೆಭರಿತ ಕಾಫಿ ಕುಡಿಯುತ್ತಿದ್ದರು. ಸದಾ ಟೀ ಕುಡಿಯುತ್ತಿದ್ದ ನಾನು ಅವರನ್ನು ನೋಡಿ ಅವರ ಮೇಲಿನ ಅಭಿಮಾನದಿಂದ ಟೀ ತೊರೆದು ಶುಗರ್ ಲೆಸ್ ಕಾಫಿಗೆ ಶಿಫ್ಟ್ ಆಗಿಬಿಟ್ಟೆ!
ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಗೆ ನ್ಯೂಸ್ ಪ್ರಿಂಟ್ ಕೊರತೆ ಆದಾಗ ಅದೇ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿದ್ದ ಪಟೇಲ್ ಪೇಪರ್ ಕಾರ್ಖಾನೆಯವರಿಗೆ ಹೇಳಿ ಶಿಫಾರಸು ಮಾಡಿ, ನಂದಿ ಪೇಪರ್ ಬ್ರಾಂಡಿನ ಹತ್ತು ಟನ್ ನ್ಯೂಸ್ ಪ್ರಿಂಟ್ ಬಂಡಲುಗಳನ್ನು ಕೊಡಿಸಿಕೊಟ್ಟಿದ್ದರು ಕೋಟಿಯವರು. ಹೀಗೆ ನ್ಯೂಸ್ ಪ್ರಿಂಟ್ ಕೊಡಿಸಿಕೊಡುವ ಸಂದರ್ಭದಲ್ಲಿ ನನ್ನ ಮಾಜಿ ಮಾಲೀಕರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ರಾಜಶೇಖರ ಕೋಟಿ ಅವರಿಗೆ ಪರಿಚಯ ಮಾಡಿಕೊಟ್ಟದ್ದು ನಾನೇ. ಈ ಸಂಗತಿ ಎಂಟು ವರ್ಷ ಹಗಲಿರುಳೆನ್ನದೇ ದುಡಿದು ಬೆವರು ಮಾತ್ರವಲ್ಲ ಜೀವವನ್ನೂ ಬಸಿದುಕೊಟ್ಟ ನನ್ನನ್ನು ಎದುರು ಕಂಡರೂ ಕಾಣದಂತೆ ಜರುಗಿಹೋಗುವ, ಕೈ ಎತ್ತಿ ನಮಸ್ಕಾರ ಹೇಳಿದರೂ ಪ್ರತಿ ನಮಸ್ಕಾರ ಹೇಳುವುದಿರಲಿ ಸ್ವೀಕರಿಸುವಷ್ಟು ದೊಡ್ಡ ಮನಸ್ಸಿಲ್ಲದ ಎಲ್ಲ ಮಾಡಬಾರದ ಅಕ್ರಮಗಳನ್ನು ಮಾಡಿಯೂ ಇವತ್ತು ಸಮಾಜದಲ್ಲಿ ಅತ್ಯಂತ ದೊಡ್ಡ ಮನುಷ್ಯ ಎಂದು ತನಗೆ ತಾನೇ ಭಾವಿಸಿಕೊಂಡಿರುವ ಆ ಮಾಮಾಗೆ ನೆನಪಿದೆ ಅಂತ ಅಂದುಕೊಳ್ಳುತ್ತೇನೆ.
ಇವತ್ತು ಶನಿವಾರ, ನಾಳೆ ತಾರೀಕು 23, ತಿಂಗಳು ನವೆಂಬರ್, 2017ನೇ ಇಸವಿ. ಪತ್ರಿಕೆಯ ಕೆಲಸದ ಮೇಲೆ ಬೆಂಗಳೂರಿಗೆ ಬಂದು ಉಳಿದುಕೊಂಡಿದ್ದ ʼ ಆಂದೋಲನʼ ದಿನಪತ್ರಿಕೆಯ ಸಂಸ್ಥಾಪಕ ರಾಜಶೇಖರ ಕೋಟಿ ಅವರು ಅಲ್ಲೇ ಗೆಸ್ಟ್ ಹೌಸ್ನ ಕೋಣೆಯಲ್ಲಿ ಚಿರನಿದ್ರೆಗಿಳಿದರು. ಆಗ ಕೋಟಿ ಅವರ ದೇಹಕ್ಕೆ ಸೆವೆಂಟಿ ಇಯರ್ಸ್ ಆಗಿತ್ತಾದರೂ ಅವರ ಚೈತನ್ಯ ಜಸ್ಟ್ ಸೆವೆಂಟೀನ್ ಎನ್ನುವಂತಿತ್ತು. ಮೈಸೂರಿನಿಂದ ಬೆಂಗಳೂರಿಗೆ ಅವರೇ ಅತ್ಯಧಿಕ ವೇಗದಲ್ಲಿ ಕಾರು ಚಾಲನೆ ಮಾಡುವುದು ಅವರ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತಂತೆ.
ರಾಜಶೇಖರ ಕೋಟಿ ಅವರಿಗೂ ಮೈಸೂರಿಗೂ ಅದು ಹೇಗೆ ನಂಟು ಬೆಳೆಯಿತೋ ಗೊತ್ತಿಲ್ಲ, ಏಕೆಂದರೆ ಅವರು ಗದಗ ಜಿಲ್ಲೆಯ ಹುಯಿಲಗೋಳದವರು. 1947ರ ಜುಲೈ ಆರರಂದು ಜನಿಸಿದ ರಾಜಶೇಖರ ಕೋಟಿಯವರು 1972ರಲ್ಲಿ ಧಾರವಾಡದಲ್ಲಿ” ಆಂದೋಲನ”ವನ್ನು ವಾರಪತ್ರಿಕೆಯಾಗಿ ಆರಂಭಿಸಿದವರು. ಅವರ ʼ ಆಂದೋಲನʼ ಪತ್ರಿಕೆಯನ್ನು ನಾಲ್ಕಾಣೆಗೆ ಒಂದರAತೆ ಬೆಂಗಳೂರಿನ ಆನಂದ್ ರಾವ್ ಸರ್ಕಲ್‌ನಲ್ಲಿ ನಾವೇ ಮಾರಿದ್ದೇವೆ ಎನ್ನುತ್ತಾರೆ ಪ್ರೊ. ರವಿ ವರ್ಮ ಕುಮಾರ್. ಒಂದು ಅವಧಿಗೆ ಕೋಟಿ ಅವರು ಹಾಸನದ “ ಜನತಾ ಮಾಧ್ಯಮʼ ದಿನಪತ್ರಿಕೆಯಲ್ಲೂ ಇದ್ದರು ಎನ್ನುತ್ತಾರೆ ಆ ಪತ್ರಿಕೆಯ ಸಂಪಾದಕರಾಗಿದ್ದ ಆರ್.ಪಿ.ವೆಂಕಟೇಶ ಮೂರ್ತಿಯವರು.
ನಿಜ ಅರ್ಥದಲ್ಲಿ ಜನರ ಪತ್ರಕರ್ತರಾಗಿದ್ದವರು ರಾಜಶೇಖರ ಕೋಟಿ ಅವರು, ಅವರಿಗೆ ಎಪ್ಪತ್ತು ವರ್ಷ ತುಂಬಿದಾಗ ಮೈಸೂರಿನ ಎಲ್ಲ ಪತ್ರಕರ್ತರೂ ಸೇರಿ ಅಭಿನಂದನಾ ಗ್ರಂಥ ರೂಪಿಸಿ ಪ್ರಕಟಿಸಿ ಸನ್ಮಾನ ಮಾಡಿದ್ದನ್ನು ನೋಡಿದಾಗ ಅವರು ಸಹ ಪತ್ರಕರ್ತರೊಂದಿಗೂ ಎಂತ ಪ್ರೀತಿಯ ಮಧುರ ಬಾಂಧವ್ಯ ಹೊಂದಿದ್ದರು ಎಂಬುದು ಅರಿವಾಗುತ್ತದೆ.
ಬೆಂಗಳೂರಿನಲ್ಲಿ ʼ ಜನವಾಹಿನಿ ʼ ಎಂಬ ಈಗ ಪ್ರಕಟಣೆ ನಿಂತು ಹೋಗಿರುವ ರಾಜ್ಯಮಟ್ಟದ ದಿನಪತ್ರಿಕೆಯಲ್ಲಿ ಮೂರೂವರೆ ವರ್ಷಗಳ ಕಾಲ ಕೆಲಸ ಮಾಡಿದ ನಾನು ಜಸ್ಟ್ ಫಾರ್ ಎ ಚೇಂಜ್ ಎನ್ನುವಂತೆ 2001ರ ಅಂತ್ಯದಲ್ಲಿ ವಿಧಾನ ಸೌಧದ ಉದ್ಯೋಗಿಯಾಗಿ ಪತ್ರಿಕಾವೃತ್ತಿಯಿಂದ ಹೊರಬಂದೆ. ಹದಿನಾರೂವರೆ ವರ್ಷ ಅಲ್ಲಿ ಕಳೆದು 2017ರ ಆಗಸ್ಟ್ ತಿಂಗಳಲ್ಲಿ ಮತ್ತೆ ಮರಳಿ ಮಣ್ಣಿಗೆ ಎನ್ನುವಂತೆ ಕಾರ್ಯನಿರತ ಪತ್ರಕರ್ತನ ವೃತ್ತಿಗೆ ಮರಳಿದ್ದೇನೆ. ಅದಾಗಿ ಏಳು ವರ್ಷ ಕಳೆದು ಹೋಗಿವೆ.
ಟ್ಯಾಬ್ಲಾಯ್ಡ್ ಪತ್ರಿಕಾವೃತ್ತಿಗೆ ಕನ್ನಡದ ಮಟ್ಟಿಗೆ ಲಂಕೇಶ್ ಹೇಗೋ , ಹಾಗೆ ರಾಜಶೇಖರ ಕೋಟಿ ಅವರು ಸ್ಥಳೀಯ ಪತ್ರಿಕೆ ಎಂದರೆ ಹೇಗಿರಬೇಕು, ನಿಜವಾದ ಪತ್ರಕರ್ತ ಹೇಗಿರುತ್ತಾನೆ ಎಂಬುದಕ್ಕೆ ಅನುಕರಣೀಯ ಮಾದರಿಯಾಗಿ ಅರ್ಧ ಶತಮಾನ ಬಾಳಿ ಬೆಳಗಿದ್ದಾರೆ. ಅವರ ಹಾದಿಯಲ್ಲಿ ಸಾಗುವ ಕಿರು ಪ್ರಯತ್ನ ನಿಮ್ಮ ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆಯ ತಂಡದ್ದೂ ಆಗಿದೆ ಅಂತ ಮಾತ್ರ ಭರವಸೆ ಕೊಡಬಲ್ಲೆ .
bevarahani1