ನೀವು ಈ ದೇಶದ ಪೌರ ಎಂಬುದಕ್ಕೆ ಪುರಾವೆ ಇದೆಯೇ?"
ಇದೆಲ್ಲದರ ನಡುವೆ ರಾಷ್ಟ್ರೀಯ ಮತದಾರರ ದಿನಾಚರಣೆ ಬರುತ್ತಿದ್ದು , ಆ ದಿನ ಮತದಾರರು ಕೇವಲ 'ಮತದಾರರ ಪ್ರತಿಜ್ಞಾವಿಧಿ' ತೆಗೆದುಕೊಳ್ಳುವ ಜೊತೆಗೆ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವ ಜಾಗರೂಕತೆ ನಾವೆಲ್ಲರೂ ಜವಾಬ್ದಾರಿಯಿಂದ ಮಾಡಬೇಕಿದೆ.

ರಘು ಗಂಕಾರನಹಳ್ಳಿ
ದೇಶವು ಎಪ್ಪತ್ತೇಳನೇ ಗಣರಾಜ್ಯೋತ್ಸವಕ್ಕೆ ಸದ್ದಿಲ್ಲದೆ ಸಿದ್ಧಗೊಳ್ಳುತ್ತಿದೆ. ಹಳ್ಳಿಯಿಂದ ದಿಲ್ಲಿಯ ಕೆಂಪು ಕೋಟೆವರೆಗೆ ಆಚರಿಸುವ ಈ ರಾಷ್ಟ್ರೀಯ ಹಬ್ಬವು, ಸ್ವತಂತ್ರಗೊಂಡ ದೇಶವೊಂದು ಸಾರ್ವಭೌಮತ್ವವನ್ನು ಉಳಿಸಿಕೊಂಡು ಎಲ್ಲರೂ ಒಪ್ಪುವ ಅಡಳಿತ ವ್ಯವಸ್ಥೆಯನ್ನು (ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ) ಜಾರಿಗೆ ತಂದ ದಿನವಾಗಿದೆ. ಸರಳವಾಗಿ ಭಾರತ ಸಂವಿಧಾನ ಜಾರಿಗೆ ತಂದಿದ್ದರ ನೆನಪಿಗಾಗಿ ಆಚರಿಸುತ್ತಿರುವುದೇ ಗಣರಾಜ್ಯ ದಿನಾಚರಣೆಯಾಗಿದೆ. ದೇಶವೊಂದರ ಉನ್ನತ ಸ್ಥಾನವಾದ 'ರಾಷ್ಟ್ರಪತಿ' ಹುದ್ದೆಯೂ ಕೂಡ ಚುನಾವಣೆ ಮೂಲಕ ಅಲಂಕೃತಗೊಳ್ಳುವುದು ಗಣರಾಜ್ಯದ ವಿಶೇಷವಾಗಿದೆ. ಇಂತಹ ದಿನಾಚರಣೆಗೆ ಮುನ್ನುಡಿಯಂತೆ ಸಂವಿಧಾನ ಜಾರಿಗೆ ಬರುವ ಒಂದು ದಿನ ಮುಂಚೆ , ಅಂದರೆ 25ನೇ ಜನವರಿ 1950 ರಂದು ಪ್ರಜಾಪ್ರಭುತ್ವದ ಜೀವಕೋಶಗಳಾದ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಕಾಳಜಿಯಿಂದ ನಿರ್ವಹಿಸುವ ಸಲುವಾಗಿ ಭಾರತೀಯ ಚುನಾವಣಾ ಆಯೋಗ ಸ್ಥಾಪನೆಯಾಯಿತು. ಈ ದಿನವನ್ನು ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನವಾಗಿ 2011 ರಿಂದ ಆಚರಿಸಲಾಗುತ್ತಿದೆ.
ಭಾರತೀಯ ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು 324 ನೇ ವಿಧಿಯಾನುಸಾರ ಸ್ಥಾಪಿಸಲ್ಪಟ್ಟಿದೆ. ಇದರ ಜವಾಬ್ದಾರಿಗಳನ್ನು ಸಂವಿಧಾನದ 325, 326 ನೇ ವಿಧಿಗಳಲ್ಲಿ ನಿರ್ಣಯಿಸಲ್ಪಟ್ಟಿದೆ. ಸ್ವಾತಂತ್ರ‍್ಯೋತ್ತರ ಭಾರತದಲ್ಲಿ 1951-52 ರಿಂದ 2024ರವರೆಗೆ 18 ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿರುವ ಆಯೋಗವು ಪ್ರಥಮ ಮುಖ್ಯ ಆಯುಕ್ತರಾದ ಸುಕುಮಾರ್ ಸೇನ್ ರಿಂದ ಈಗಿನ ಜ್ಞಾನೇಶ್ ಕುಮಾರ್ ವರೆಗೆ 26 ಮಂದಿ ಮುಖ್ಯ ಚುನಾವಣಾ ಆಯುಕ್ತರನ್ನು ಕಂಡಿದೆ. ಕಳೆದ 76 ವರ್ಷಗಳಲ್ಲಿ , ಚೊಚ್ಚಲ ಸಾರ್ವತ್ರಿಕ ಚುನಾವಣೆಯಿಂದಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಇಂತಹ ಹಲವಾರು ಚುನಾವಣಾ ಸುಧಾರಣೆಗಳನ್ನು, ಪ್ರಯೋಗಗಳನ್ನು ಮಾಡಿರುವ ಆಯೋಗವು ಹಲವು ಬಾರಿ ಕೋರ್ಟ್, ರಾಜಕೀಯ ಪಕ್ಷ ಹಾಗೂ ಸಾರ್ವಜನಿಕರಿಂದ ಟೀಕೆಗಳನ್ನು ಎದುರಿಸಿದೆ. ಹಾಗೆ ನೋಡಿದರೆ ಭಾರತೀಯ ಚುನಾವಣಾ ಇತಿಹಾಸ ಬ್ರಿಟಿಷರ ಕಾಲದಲ್ಲೇ ಆರಂಭವಾಯಿತು. 1892ರ 'ಭಾರತ ಕೌನ್ಸಿಲ್ ಕಾಯ್ದೆ' ಭಾರತೀಯ ಚುನಾವಣಾ ವ್ಯವಸ್ಥೆಗೆ ಅಡಿಗಲ್ಲಾಯಿತು. ಈ ಕಾಯ್ದೆಯ ಉದ್ದೇಶವೇನೆಂದರೆ ಭಾರತೀಯರಿಗೆ ಆಡಳಿತ ಅನುಭವ ನೀಡುವ ಸಲುವಾಗಿ ಮತದಾನದ ಹಕ್ಕು ಇಲ್ಲದೆ , ಪುರಸಭೆ, ಜಿಲ್ಲಾ ಮಂಡಳಿ, ವಿಶ್ವವಿದ್ಯಾಲಯಗಳಿಂದ ಶಿಫಾರಸಿನ ಮೂಲಕ ಸದಸ್ಯರ ನೇಮಕ ನಡೆದವು. ನಂತರ ಬಂದ ಕಾಯ್ದೆಗಳು ಹಂತ ಹಂತವಾಗಿ ಹಲವು ಮಾರ್ಪಾಡುಗಳನ್ನು ಮಾಡಿದವು ಅವುಗಳೆಂದರೆ 1909 ರ 'ಲಾರ್ಡ್ ಮಿಂಟೊ ಕಾಯ್ದೆ' ದೇಶದಲ್ಲಿ ಮೊದಲಿಗೆ ಮತದಾನದ ಹಕ್ಕು ಸೀಮಿತವಾಗಿರಿಸಿ( ಆಸ್ತಿ , ತೆರಿಗೆ, ಶಿಕ್ಷಣ ಆಧಾರಿತವಾಗಿ) ನೇರ ಚುನಾವಣೆ ನಡೆಯುವಂತೆ ಮಾಡಿತು. ಆದರೆ ಮುಸ್ಲಿಮರಿಗೆ ಪ್ರತ್ಯೇಕ ಮತದಾನ ವ್ಯವಸ್ಥೆ ಕಲ್ಪಿಸಿ ಭಾರತೀಯರಲ್ಲಿ ಒಡಕನ್ನುಂಟು ಮಾಡಿತು. ನಂತರ ಬಂದ 1935 ರ ಭಾರತ ಸರ್ಕಾರ ಕಾಯ್ದೆ ಹಲವು ಷರತ್ತುಗಳೊಂದಿಗೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಿತು. 1946 ರ ಭಾರತೀಯ ಸಂವಿಧಾನ ರಚನಾ ಸಮಿತಿಯ ಸದಸ್ಯರು ಕೂಡ ಚುನಾವಣೆ ಮೂಲಕ ಆರಿಸಿ ಬಂದಿದ್ದರು.
'ಸಂವಿಧಾನ ಶಿಲ್ಪಿ' ಬಾಬಾ ಸಾಹೇಬ ಬಿ.ಆರ್.ಅಂಬೇಡ್ಕರ್ ಅವರು ಬಂಗಾಳ ಪ್ರಾಂತ್ಯದಿಂದ ಆರಿಸಿ ಬಂದಿದ್ದರು. ಸ್ವಾತಂತ್ರ‍್ಯ ಪೂರ್ವದ ದಿನಗಳಲ್ಲಿ ಹಲವು ಮಜಲುಗಳನ್ನು ಕಂಡಿದ್ದ ಚುನಾವಣಾ ವ್ಯವಸ್ಥೆಯು ಸ್ವಾತಂತ್ರ‍್ಯಾನಂತರ ಒಮ್ಮೆಗೇ ಬಹು ದೊಡ್ಡ ಬದಲಾವಣೆಗೆ ಎದುರುಗೊಂಡಿತು. ಅದೇ 'ವಯಸ್ಕ ಮತದಾನ' ಪದ್ಧತಿ. 21 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಮತ ಚಲಾಯಿಸುವ ಹಕ್ಕು ಪಡೆದರು. ಇದರಿಂದಾಗಿ ನಿತ್ಯದ ಅನ್ನವನ್ನು ದುಡಿದು ತಿನ್ನಲೇ ಬೇಕಾದ ಅನಿವಾರ್ಯತೆಯಿರುವ, ಅಕ್ಷರ ಜ್ಞಾನ ವಂಚಿತರಾದ ಬಹು ಸಂಖ್ಯಾತರಿಗೆ ಮೊದಲಿಗೆ ಮತದಾನದ ಅವಕಾಶ ದೊರೆಯಿತು.1951-52ರ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗಲೆಂದು ಪಕ್ಷಗಳನ್ನು ಹೆಸರಿನಿಂದ ಗುರುತಿಸಲು ಕಷ್ಟವಾಗಬಹುದೆಂದು, ನಿತ್ಯ ಜೀವನದಲ್ಲಿ ಬಳಕೆಯ ವಸ್ತುಗಳನ್ನು ಚಿಹ್ನೆಯಾಗಿ ನೀಡಲಾಯಿತು. ಪ್ರತಿ ಮತಗಟ್ಟೆಯಲ್ಲಿ ಪ್ರತಿ ಪಕ್ಷಕ್ಕೊಂದರಂತೆ ಚಿಹ್ನೆ ಸಹಿತ ಮತ ಪೆಟ್ಟಿಗೆಗಳನ್ನು ಇರಿಸಲಾಗಿತ್ತು; ಇದಕ್ಕಾಗಿ 8200 ಟನ್ ಉಕ್ಕು ಬಳಕೆಯಾಗಿತ್ತು. ಇದಲ್ಲದೇ ಸೋಗಿನ ಮತದಾರರನ್ನು ತಪ್ಪಿಸಲು ಕೈ ಬೆರಳಿಗೆ ತಕ್ಷಣಕ್ಕೆ ಅಳಿಸಲಾಗದ ಬಣ್ಣ ಬಳಕೆ ಮಾಡಲಾಯಿತು. ಇಲ್ಲಿಂದ ಆರಂಭವಾದ ಈ ಚುನಾವಣಾ ಮಾರ್ಪಾಡುಗಳು ಚುನಾವಣಾ ಆಯೋಗ ಮತ್ತು ಸಂಸತ್ತಿಂದಲೂ ಆದವು. ಉದಾಹರಣೆಗೆ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಮತದಾನದ ವಯಸ್ಸಿನ ಇಳಿಕೆ, ಪಕ್ಷಾಂತರ ನಿಷೇಧ ಕಾಯ್ದೆ, ಇತ್ಯಾದಿ ಹಾಗೂ 1990 ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್ ಅವರು ತಂದAತಹ ಕ್ರಾಂತಿಕಾರಿ ಸುಧಾರಣೆಗಳು, ಬ್ಯಾಲೆಟ್ ಪೇಪರ್ ಬದಲಿಗೆ ಇವಿಎಂ ಯಂತ್ರ ಬಳಕೆ, ಮತದಾರರು ತಾವು ಹಾಕಿದ ಮತವನ್ನು ಯಾವ ಅಭ್ಯರ್ಥಿಗೆ ಹಾಕಿದ್ದೇವೆ ಎಂಬುದನ್ನು ತಿಳಿಯುವ 'ವಿವಿ ಪ್ಯಾಟ್ ' ಎಂಬ ಪಾರದರ್ಶಕ ಪೆಟ್ಟಿಗೆ 2019 ರ 17 ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬಳಕೆಯಾಯಿತು. ಅದಕ್ಕೆ ಹೊಸ ಸೇರ್ಪಡೆ ಈಗ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್). ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳಿಗಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಅಗತ್ಯ. ಆದರೆ ಈ ಪ್ರಕ್ರಿಯೆ ಅನುಮಾನಕ್ಕೆ ಆಸ್ಪದ ನೀಡಬಾರದು. ಇತ್ತೀಚೆಗೆ ಎಸ್ ಐ ಆರ್ ಕುರಿತು ಸಾಮಾಜಿಕ ಜಾಲತಾಣದಲ್ಲಿನ ವ್ಯಂಗ್ಯಚಿತ್ರದಲ್ಲಿ ಅಧಿಕಾರಿಯೊಬ್ಬರು ಗಾಂಧಿಗೆ ಕೇಳುವ ಪ್ರಶ್ನೆ:- "ನೀವು 'ರಾಷ್ಟ್ರಪಿತ'ನೇ ಆಗಿರಬಹುದು,
ನೀವು ಈ ದೇಶದ ಪೌರ ಎಂಬುದಕ್ಕೆ ಪುರಾವೆ ಇದೆಯೇ?" ಈ ವ್ಯಂಗ್ಯ ಚಿತ್ರಕ್ಕೆ ಸಂಬಂಧಿಸಿದಂತೆ ಎಡಿಆರ್ (ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್), ಸರ್ವೋಚ್ಚ ನ್ಯಾಯಾಲಯದಲ್ಲಿ ಎತ್ತಿರುವ ಪ್ರಶ್ನೆ 'ಮತದಾನಕ್ಕೆ ಪೌರತ್ವವು ಪೂರ್ವಭಾವಿ ಷರತ್ತು ಎಂಬುದು ನಿರ್ವಿವಾದವಾದರೂ , ಪೌರತ್ವವನ್ನು ನಿರ್ಧರಿಸುವ ಅಧಿಕಾರ ಆಯೋಗಕ್ಕಿದೆಯೇ?' ಎಂಬುದಾಗಿದೆ. ಹಾಗೂ ಇದು ಅರ್ಹ ಪ್ರಜೆಗಳ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ, ಎಂಬುದು ವಿರೋಧ ಪಕ್ಷಗಳ ಅಭಿಪ್ರಾಯವಾಗಿದೆ. ಇನ್ನೂ ಬಿ ಎಲ್ ಒ ಗಳ ಮೇಲೆ ಒತ್ತಡ ಹೇರಿ ತುರ್ತಾಗಿ, ಅತಿ ಕಡಿಮೆ ಅವಧಿಯಲ್ಲಿ ಈ ಪರಿಷ್ಕರಣೆ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರನ್ವಯ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿರುವ ಈ ಹೊತ್ತಿನಲ್ಲಿ ಸಾರ್ವಜನಿಕರು ತಮ್ಮ ಹಕ್ಕುಗಳಲ್ಲೊಂದಾದ ಮತದಾನದ ಹಕ್ಕು ಬ್ರಿಟಿ಼ಷ್ ಭಾರತದಲ್ಲಿದ್ದಂತೆ ಆದ್ಯತೆಯ ಹಕ್ಕಾಗುತ್ತದೆ ಎಂಬ ಆತಂಕ ಅವರಾದ್ದಗಿದೆ.
ಇದೆಲ್ಲದರ ನಡುವೆ ರಾಷ್ಟ್ರೀಯ ಮತದಾರರ ದಿನಾಚರಣೆ ಬರುತ್ತಿದ್ದು , ಆ ದಿನ ಮತದಾರರು ಕೇವಲ 'ಮತದಾರರ ಪ್ರತಿಜ್ಞಾವಿಧಿ' ತೆಗೆದುಕೊಳ್ಳುವ ಜೊತೆಗೆ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವ ಜಾಗರೂಕತೆ ನಾವೆಲ್ಲರೂ ಜವಾಬ್ದಾರಿಯಿಂದ ಮಾಡಬೇಕಿದೆ.
bevarahani1