ಸಂವಿಧಾನ ಉಳಿದರೆ ತಾನೆ ವರ್ಗೀಕರಣದ ಪ್ರಶ್ನೆ ಬರುವುದು? ಮಂದಕೃಷ್ಣರ ಬುದ್ದಿಯನ್ನು ಮಂದ ಮಾಡಿದ ಮೋದಿ ಪರಿವಾರ

    ಹಾಗಿದ್ದರೂ ಸಹ ನಮ್ಮ ಸಮುದಾಯವು ಈಗಾಗಲೇ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿದೆ. ಮಕ್ಕಳಿಗೆ ಸ್ಕಾಲರ್‌ ಶಿಪ್‌  ಇಲ್ಲ ಹಾಸ್ಟೆಲ್ ಸೌಲಭ್ಯ ಇಲ್ಲ , ವಿದ್ಯಾರ್ಜನೆಗೆ ತಿಲಾಂಜಲಿ ಇಡುತ್ತಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಒಂದೊಂದಾಗಿ ತೆಗೆಯುತ್ತಾ ಬಂದಿದ್ದಾರೆ. ಕೆಲಸ ಕೇಳಲು ಹೋದರೆ ಎಲ್ಲಾ ರಂಗದಲ್ಲೂ ಖಾಸಗೀಕರಣ ಮಾಡಿದ್ದಾರೆ. ಖಾಸಗೀಕರಣದಲ್ಲಿ ಮೀಸಲಾತಿಯ ಪ್ರಶ್ನೆಯೇ ಇಲ್ಲ,  ಮೀಸಲಾತಿಗೆ ತಿಲಾಂಜಲಿ ಇಡಲು ಎಲ್ಲಾ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿರುವಾಗ ಯಾವ ಭರವಸೆಯೊಂದಿಗೆ ಮಂದಕೃಷ್ಣ ಮಾದಿಗರು ಬಿಜೆಪಿ ಪರವಾಗಿ ಬಂದು ಮಾತನಾಡುತ್ತಾರೆ ಎಂಬುದು ನನಗೆ ಅನುಮಾನ ಮೂಡಿದೆ. 

ಸಂವಿಧಾನ ಉಳಿದರೆ ತಾನೆ ವರ್ಗೀಕರಣದ ಪ್ರಶ್ನೆ ಬರುವುದು?                   ಮಂದಕೃಷ್ಣರ ಬುದ್ದಿಯನ್ನು ಮಂದ ಮಾಡಿದ ಮೋದಿ ಪರಿವಾರ

ಅಭಿಪ್ರಾಯ

ಗಂಗಹನುಮಯ್ಯ

      ಮಂದಕೃಷ್ಣ ಮಾದಿಗ ಅವರು ಏಕೆ ಬಿಜೆಪಿಯನ್ನು ಓಲೈಸುತ್ತಿದ್ದಾರೆ ಮತ್ತು  ಮಾದಿಗರನ್ನು ಏಕೆ ಬಿಜೆಪಿಯತ್ತ ಸೆಳೆಯುತ್ತಿದ್ದಾರೆ. ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವ ಸರ್ಕಾರ ಮೀಸಲಾತಿ ವರ್ಗೀಕರಣದ ಪರವಾಗಿ ನಿಲ್ಲುವುದೇ?

     ಮಂದಕೃಷ್ಣ ಮಾದಿಗ ಅವರನ್ನು ಪ್ರಥಮ ಬಾರಿಗೆ  ತುಮಕೂರಿಗೆ ಕರೆಸಿದ್ದು 2021ನೇ ಜುಲೈ 5ನೇ ತಾರೀಖು.  ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದ ಮಾದಿಗ ದಂಡೋರ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು, ಆ  ಸಭೆಯ ಅಧ್ಯಕ್ಷತೆಯನ್ನು ನಾನೇ ವಹಿಸಿದ್ದೆ . ಆ ಒಂದು ಸಮಾವೇಶ ಆಯೋಜನೆಗೊಂಡ ನಂತರ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗವನ್ನು ನೇಮಿಸಿತ್ತು.  ಅಂದರೆ ನಾವು ನಡೆಸಿದ ಸಮಾವೇಶದ ಯಶಿಸ್ಸಿನ ಫಲ ಎಂಬಂತೆ ಸದಾಶಿವ ಆಯೋಗ ರಚನೆಯಾಯಿತು. ಇದು ನಮ್ಮ ವರ್ಗೀಕರಣ ಹೋರಾಟಕ್ಕೆ ಬುನಾದಿಯಾಗಿ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆಯಾಗಿತ್ತು ಎಂದು ವಿವರಿಸಿದ್ದಾರೆ.

    ಹಾಗಿದ್ದರೂ ಸಹ ನಮ್ಮ ಸಮುದಾಯವು ಈಗಾಗಲೇ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿದೆ. ಮಕ್ಕಳಿಗೆ ಸ್ಕಾಲರ್‌ ಶಿಪ್‌  ಇಲ್ಲ ಹಾಸ್ಟೆಲ್ ಸೌಲಭ್ಯ ಇಲ್ಲ , ವಿದ್ಯಾರ್ಜನೆಗೆ ತಿಲಾಂಜಲಿ ಇಡುತ್ತಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಒಂದೊಂದಾಗಿ ತೆಗೆಯುತ್ತಾ ಬಂದಿದ್ದಾರೆ. ಕೆಲಸ ಕೇಳಲು ಹೋದರೆ ಎಲ್ಲಾ ರಂಗದಲ್ಲೂ ಖಾಸಗೀಕರಣ ಮಾಡಿದ್ದಾರೆ. ಖಾಸಗೀಕರಣದಲ್ಲಿ ಮೀಸಲಾತಿಯ ಪ್ರಶ್ನೆಯೇ ಇಲ್ಲ,  ಮೀಸಲಾತಿಗೆ ತಿಲಾಂಜಲಿ ಇಡಲು ಎಲ್ಲಾ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿರುವಾಗ ಯಾವ ಭರವಸೆಯೊಂದಿಗೆ ಮಂದಕೃಷ್ಣ ಮಾದಿಗರು ಬಿಜೆಪಿ ಪರವಾಗಿ ಬಂದು ಮಾತನಾಡುತ್ತಾರೆ ಎಂಬುದು ನನಗೆ ಅನುಮಾನ ಮೂಡಿದೆ.  ಕೇಂದ್ರ ಸಚಿವರಾಗಿದ್ದ ನಾರಾಯಣಸ್ವಾಮಿ ಅವರು ವರ್ಗೀಕರಣದ ಪರವಾಗಿ ಬಹಿರಂಗವಾಗಿ ಚರ್ಚಿಸುತ್ತಾರೆ. ಆದರೆ ಸಂಸತ್ತಿನಲ್ಲಿ ಉತ್ತರ ನೀಡುವಾಗ ಇದು ಸಾಧ್ಯವಿಲ್ಲವೆಂಬಂತೆ ಅವರೇ ಲೋಕಸಭೆಗೆ ತಿಳಿಸುತ್ತಾರೆ. ಅಂದರೆ ನಮ್ಮ ಸಮುದಾಯದವರಿಗೆ ಕೊಡಲಿ ಕೊಟ್ಟು ನಿಮ್ಮನ್ನು ನೀವೇ ಕಡಿದುಕೊಳ್ಳಿ ಎಂದು ನಾರಾಯಣಸ್ವಾಮಿಯವರ ಕೈಗೆ ಕೊಡಲಿ ಕೊಟ್ಟರು.

     ಬೊಮ್ಮಾಯಿ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮೀಸಲಾತಿ ಮಿತಿಇರುವುದು ಶೇ.೫೦% ಒಳಗೆ ನಿಗದಿಯಾಗಿದ್ದು ಅದನ್ನು ಅಸಂವಿಧಾನಿಕವಾಗಿ ವಾಮ ಮಾರ್ಗದಲ್ಲಿ ಅನುಷ್ಠಾನಗೊಳಿಸಲು ಮುಂದಾಗಿ  ಅಂದು ಸದಾಶಿವ ಆಯೋಗದ ವರದಿಯನ್ನು ಪರಿಗಣಿಸದೆ ಸಂಸದೀಯ ಸಮಿತಿ ರಚನೆ ಮಾಡಿ ಸದಾಶಿವ ವರದಿಯನ್ನು ತಿಪ್ಪೆಗೆ ಬಿಸಾಡಿರುವುದು ನಮಗೆಲ್ಲ ತಿಳಿದಿರುವ ವಿಚಾರ. ಆ ಸಂಸದೀಯ ವರದಿಯೂ ಸಹ ಏನಾಗಿದೆ ಎಂಬ ವಿಚಾರ ಇಲ್ಲಿಯವರೆಗೆ ತಿಳಿದಿಲ್ಲ.

      ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊನ್ನೆ ಸದಾಶಿವ ಆಯೋಗದ ವರದಿಯನ್ನು ಕ್ಯಾಬಿನೆಟ್ ಅಲ್ಲಿ ಚರ್ಚಿಸಿ ಅಲ್ಲಿನ ಹಾಗು ಹೋಗುಗಳ ಬಗ್ಗೆ ಮನದಟ್ಟು ಮಾಡಿ ಜನಗಣತಿ ವರದಿ ಆಧಾರದ ಮೇಲೆ ವರ್ಗೀಕರಣ ಮಾಡಬಹುದೆಂದು ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ತಿಂಗಳೇ ಕಳೆದಿದೆ. ಆದರೂ ಸಹ ಕೇಂದ್ರ ಸರ್ಕಾರ ಅದನ್ನು ಪರಿಗಣಿಸದೆ ಅದರ ಬಗ್ಗೆ ಚಕಾರವೆತ್ತದೆ ಮೌನವಾಗಿದೆ. ಯಾವುದೆ ವರದಿಯ ಆಧಾರವಿಲ್ಲದೆ ತರಾತುರಿಯಲ್ಲಿ ಮುಂದುವರಿದ ಜಾತಿಗಳಿಗೆ 10% ಮೀಸಲಾತಿ ಕೊಡುವ ಮಸೂದೆಗೆ ಹೇಗೆ ಅಂಗೀಕಾರ ಸಿಕ್ಕಿತು ಅದೇ ರೀತಿ ಈ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ ವರದಿಯನ್ನು ಕೇಂದ್ರ ಏಕೆ ಪರಿಗಣಿಸಲಿಲ್ಲ ಎಂದು  ಮಂದಕೃಷ್ಣ ಮಾದಿಗರು ಉತ್ತರಿಸುವರೇ? 

      ನಾವು ವರ್ಗೀಕರಣದ ವಿಚಾರವನ್ನುಕಾನೂನಾತ್ಮಕವಾಗಿ ಹೋರಾಟ ಮಾಡಬೇಕು ಮತ್ತು ಕಾನೂನು ನಮ್ಮ ಪರವಾಗಿ ನಿಲ್ಲುತ್ತದೆ ಎಂಬ ಆಶಾ ಭಾವನೆ ಇತ್ತು. ಆದರೆ ನರೇಂದ್ರ ಮೋದಿಯವರು ಮೊನ್ನೆ ಖಾಸಗಿ ವಾಹಿನಿಗೆ ನೀಡಿದ  ಸಂದರ್ಶನದಲ್ಲಿ ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಭಾವಿಸಿ ವಜಾ ಗೊಳಿಸಿದ ಚುನಾವಣಾ ಬಾಂಡ್ ಮಸೂದೆಯನ್ನು ಸಮರ್ಥಿಸುತ್ತಾರೆಂದರೆ ಮುಂದೆ ನಮಗೆ ನ್ಯಾಯಾಂಗವು ನಮ್ಮ ಕೈ ಹಿಡಿಯುವುದಿಲ್ಲವೆಂಬ ಸಂದೇಶ ರವಾನೆಯಾದಂತಾಗಿದೆ. ಹೀಗಿದ್ದರೂ ಮಂದಕೃಷ್ಣರವರು ಮಾದಿಗರ ದಾರಿಯನ್ನು ತಪ್ಪಿಸಲು ಶ್ರಮ ಪಡುತ್ತಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಎಡಗೈ ಮತ್ತು ಬಲಗೈ ಸಮುದಾಯವು ಸೋದರತ್ವದಲ್ಲಿ ಈ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುತ್ತಿದ್ದು ಕಾಂಗ್ರೆಸ್ ಪರವಾಗಿ ನಿಂತಿದೆ. ನಾವೆಲ್ಲಾ ಬಂಧುಗಳು ದಯಮಾಡಿ ಯಾರೇ ದಾರಿ ತಪ್ಪಿಸಲು ಪ್ರಯತ್ನ ಮಾಡಿದರೂ ಈ ಬಾರಿ ಲೋಕಸಭೆಗೆ ಮುದ್ದಹನುಮೇಗೌಡರನ್ನು ಗೆಲ್ಲಿಸುವ ಮೂಲಕ ನಮ್ಮ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್‌ನ್ನು ಬೆಂಬಲಿಸಬೇಕೆಂದು ಮತ್ತು ಜಿಲ್ಲೆಯ ರಾಜಕಾರಣ ಜಿಲ್ಲೆಯಲ್ಲೆ ಉಳಿಯುವಂತಾಗಲಿ ಎಂದು ನಾನು ಸರ್ವರಲ್ಲೂ ವಿನಂತಿಸುತ್ತೇನೆ.

(ಲೇಖಕರು ಮಾಜಿ ಶಾಸಕರು ಹಾಗೂ ಹಿರಿಯ ಪತ್ರಕರ್ತರು)