ಎಲೆಕ್ಷನ್ ಟಿಕೆಟ್ ಮಾಫಿಯಾ -ರೂ.7 ಕೋಟಿ ಗುಳುಂ- ಕ್ವೀನ್ ಪಿನ್ ಚೈತ್ರಾ ಕುಂದಾಪುರ ಬಂಧನ

ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜೀ ಭರವಸೆ ನೀಡಿದ್ದು, ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಕೂಡಾ ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಹಣದ ವಿಷಯದಲ್ಲಿ ತಾವೂ ಜವಾಬ್ದಾರರಾಗಿರುತ್ತೇವೆ ಎಂದು ಭರವಸೆ ನೀಡುತ್ತಾರೆ.

ಎಲೆಕ್ಷನ್ ಟಿಕೆಟ್ ಮಾಫಿಯಾ -ರೂ.7 ಕೋಟಿ ಗುಳುಂ- ಕ್ವೀನ್ ಪಿನ್ ಚೈತ್ರಾ ಕುಂದಾಪುರ ಬಂಧನ


ಬೆಂಗಳೂರು: ಕಳೆದ ಮೇನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಕಣಕ್ಕಿಳಿಯಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಟಿಕೆಟ್ ಆಕಾಂಕ್ಷಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ‍್ಯದರ್ಶಿ ಹಾಗೂ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಏಳು ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಪಡೆದು ವಂಚಿಸಿದ ಆಪಾದನೆ ಮೇರೆಗೆ ಆರ್‌ಎಸ್‌ಎಸ್ ಸಮಾವೇಶಗಳಲ್ಲಿ ಮುಸ್ಲಿಮರ, ಕ್ರೈಸ್ತರ ವಿರುದ್ಧ ದ್ವೇಷ ಸೃಷ್ಟಿಸುವ ಭಾಷಣಗಳನ್ನು ಮಾಡುತ್ತ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಿನ ಪ್ರಚಾರ ಹೊಂದಿದ್ದ ಆರ್‌ಎಸ್‌ಎಸ್ ಕ್ವೀನ್ ಪಿನ್ ಚೈತ್ರಾ ಕುಂದಾಪುರ ಮತ್ತು ಆಕೆಯ ಐವರು ಸಂಗಡಿಗರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ. ಪೊಲೀಸರು ಬಂಧಿಸುವ ಸಮಯದಲ್ಲಿ ಈಕೆ ತಮ್ಮ ಕೈ ಬಳೆ ಒಡೆದುಕೊಂಡು ಉಂಗುರ ನುಂಗಿ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವನ್ನೂ ಮಾಡಿದ್ದು, ಪೊಲೀಸರು ನಿಯಂತ್ರಿಸಿದ್ದಾರೆ.


ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ.ಹೊಸ ಮುಖಗಳಿಗೆ ಹೈಕಮಾಂಡ್ ಮಣೆ ಹಾಕಲಿದೆ ಎಂದು ಪ್ರಚಾರವಾಗಿತ್ತು.ಅಲ್ಲದೆ ಟಿಕೆಟ್ ನಿರಾಕರಿಸಲಾಗುವ ಕೆಲವು ಶಾಸಕರ ಹೆಸರು ಬಹಿರಂಗಗೊಂಡಿತ್ತು. ಈ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿ ಅವರ ಹೆಸರು ಪ್ರಮುಖವಾಗಿತ್ತು. ಈ ಅಂಶವನ್ನು ಬಂಡವಾಳವಾಗಿ ಮಾಡಿಕೊಂಡ ಚೈತ್ರಾ ಕುಂದಾಪುರ ವಂಚನೆ ಯೋಜನೆಯೊಂದನ್ನು ರೂಪಿಸಿ ಹಣ ಪಡೆದುಕೊಂಡಿದ್ದರು. 


ವಿವರ ಹೀಗಿದೆ:

ಉದ್ಯಮಿಯ ಗೆಟಪ್‌ನಲ್ಲಿ ಗೋವಿಂದ ಬಾಬು ಪೂಜಾರಿ

ಚಿಕ್ಕಮಗಳೂರು ಜಿಲ್ಲೆಯ ಬಿಜೂರಿನ ನಿವಾಸಿ, ಗೋವಿಂದ ಬಾಬು ಪೂಜಾರಿ ಬೈಂದೂರಿನ ಚೆಫ್ ಟಾಕ್ ಸಂಸ್ಥೆಯನ್ನು ನಡೆಸುತ್ತಿದ್ದು,ಕೆಲಕಾಲ ಆರ್‌ಎಸ್‌ಎಸ್ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ನಂತರ 6 ವರ್ಷಗಳಿಂದ ಬಿಜೆಪಿಗೆ ಶಿಫ್ಟ್ ಆಗಿ ಸಂಘಟನೆಯಲ್ಲಿ ತೊಡಗಿದ್ದ ಅವರು ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡದೆ ಹೋದರೆ ತಮಗೇ ಕೊಡುವಂತೆ ಪ್ರಮುಖರಲ್ಲಿ ಮನವಿ ಮಾಡಿದ್ದರು. 

ರಾಜ್ಯ ಬಿಜೆಪಿ ಉಪಾಧ್ಯಕ್ಷ


ಈ ವೇಳೆ ಇವರಿಗೆ ಚೈತ್ರಾ ಕುಂದಾಪುರ ಹಾಗೂ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯುವ ಮೋರ್ಚಾ ಗಗನ್ ಕಡೂರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ನಂಬಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಚೈತ್ರಾ ಕುಂದಾಪುರ ಅವರು ಬಿಜೆಪಿ ಮತ್ತು ಸಂಘ ಪರಿವಾರದ ಹಲವರ ಜೊತೆ ನಂಟು ಹೊಂದಿರುವುದನ್ನು ತಿಳಿದ ಗೋಪಾಲ ಬಾಬು ಪೂಜಾರಿ ಇವರು ಮನಸ್ಸು ಮಾಡಿದರೆ ತನಗೆ ಟಿಕೆಟ್ ಗ್ಯಾರಂಟಿ ಎಂದು ನಂಬಿ ಅವರು ಹೇಳಿದಂತೆ ಕೇಳುತ್ತಾರೆ. ಚೈತ್ರಾ ಕುಂದಾಪುರ ಗ್ಯಾಂಗ್ ವ್ಯಕಿಯೊಬ್ಬರನ್ನು ಪೂಜಾರಿ ಅವರಿಗೆ ಪರಿಚಯಿಸಿ,


ಇವರು ವಿಶ್ವನಾಥ್ ಜೀ. ಇವರು ಕಳೆದ 45 ವರ್ಷಗಳಿಂದ ಆರ್‌ಎಸ್‌ಎಸ್ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಕೇಂದ್ರದ ಅಭ್ಯರ್ಥಿಯ ಸೆಲೆಕ್ಷನ್ ಕಮಿಟಿಯಲ್ಲಿ ಅವರು ಒಬ್ಬರಾಗಿರುತ್ತಾರೆ ಎಂದು ಹೇಳುತ್ತಾರೆ. ಪೂಜಾರಿ ಅವರನ್ನು ನಂಬುತ್ತಾರೆ. ನಂತರ 2022 ರ ಜುಲೈ 7 ರಂದು ಗೋವಿಂದಬಾಬು ಪೂಜಾರಿಯನ್ನು ಚೈತ್ರಾ ಕುಂದಾಪುರ ನಗರದ ಸರ್ಕಾರಿ ಅತಿಥಿ ಗೃಹಕ್ಕೆ ಕರೆಸಿಕೊಂಡು ವಿಶ್ವನಾಥ್ ಜೀ ಅವರ ಜೊತೆ ಮಾತನಾಡುತ್ತಾರೆ. ಈ ವೇಳೆ ವಿಶ್ವನಾಥ್ ಜಿ ನಾನು ಹೇಳಿದರೇ ಮಾತ್ರ ಬಿಜೆಪಿ ಟಿಕೆಟ್ ಅಂತಿಮವಾಗುತ್ತದೆ. ಆದರೆ ಸಾಕಷ್ಟು ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು ಎಂದು ಹೇಳಿ ಅಂತಿಮವಾಗಿ ಏಳು ಕೋಟಿ ರೂಪಾಯಿಗೆ ವ್ಯವಹಾರ ಕುದುರಿಸುತ್ತಾರೆ.


ಬಳಿಕ ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ 50 ಲಕ್ಷ ರೂಪಾಯಿ ಹೊಂದಿಸಿ ಅದನ್ನು ಗಗನ್ ಕಡೂರ್ ಕೈಗೆ ಕೊಡಬೇಕು, ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಇನ್ನುಳಿದ 3 ಕೋಟಿ ರೂ. ನೀಡಬೇಕೆಂದು ವಿಶ್ವನಾಥ್ ಜೀ ಹೇಳುತ್ತಾರೆ.


ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜೀ ಭರವಸೆ ನೀಡಿದ್ದು, ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಕೂಡಾ ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಹಣದ ವಿಷಯದಲ್ಲಿ ತಾವೂ ಜವಾಬ್ದಾರರಾಗಿರುತ್ತೇವೆ ಎಂದು ಭರವಸೆ ನೀಡುತ್ತಾರೆ.

ವಿಧಾನ ಸಭಾ ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸ್ವಾಗತಿಸುತ್ತಿರುವ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ

ಮನೆ ಮನೆಗೆ ಹೋಗಿ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ ಗೋವಿಂದ ಬಾಬು ಪೂಜಾರಿ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜೊತೆ ಗೋವಿಂದ ಬಾಬು ಪೂಜಾರಿ

ಆರ್‌ ಎಸ್‌ ಎಸ್‌ ಹಿರಿಯ ನಾಯಕ ಪ್ರಭಾಕರ ಕಲ್ಲಡ್ಕ ಜೊತೆ ಗೋವಿಂದ ಬಾಬು ಪೂಜಾರಿ

25.3.2023ರಂದು ಅಮಿತ್‌ ಶಾ ಜೊತೆ ಗೋವಿಂದ ಬಾಬು ಪೂಜಾರಿ


 ಅದರಂತೆ ಗೋವಿಂದಬಾಬು ಪೂಜಾರಿ ಅವರು 2022 ಜುಲೈ 7 ರಂದು ಶಿವಮೊಗ್ಗದ ಆರ್‌ಎಸ್‌ಎಸ್ ಕಚೇರಿ ಎದುರು 50 ಲಕ್ಷ ರೂ. ಹಣವನ್ನು ಪ್ರಸಾದ್ ಬೈಂದೂರು ಮುಖಾಂತರ ಗಗನ್ ಕಡೂರ್ ಅವರಿಗೆ ತಲುಪಿಸುತ್ತಾರೆ.ನಂತರ ವಿಶ್ವನಾಥ್ ಜಿ, ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ಕಾನ್ಫರೆನ್ಸ್ ಕರೆ ಮಾಡಿ ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿದೆ. ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆಂದು ಮಾಹಿತಿ ನೀಡಿದ್ದಾರೆ. ಬಳಿಕ 2022ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಗೋವಿಂದಬಾಬು ಪೂಜಾರಿ ಅವರಿಗೆ ವಿಶ್ವನಾಥ್ ಜಿ ಮತ್ತು ಚೈತ್ರಾ ಕುಂದಾಪುರ ಅವರು ಕಾನ್ಫರೆನ್ಸ್ ಕರೆ ಮಾಡಿ ಟಿಕೆಟ್ ಹಂಚಿಕೆ ಬಗ್ಗೆ ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿದೆ, ಹಾಗಾಗಿ ಅವರನ್ನು ಭೇಟಿಯಾಗಲು ಸೂಚಿಸಿದ್ದಾರೆ.


ಅದರಂತೆ ಗೋವಿಂದ ಬಾಬು ಪೂಜಾರಿ ಹಿರೇಹಡಗಲಿಗೆ ತೆರಳಿ ಸ್ವಾಮೀಜಿಯವರನ್ನು ಭೇಟಿಯಾಗುತ್ತಾರೆ, ಅಲ್ಲಿ ಸ್ವಾಮೀಜಿ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಮುಂದಿನ ಪ್ರಕ್ರಿಯೆಗೆ ರೂ.1.5 ಕೋಟಿ ರೂ. ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಈ ವರ್ಷ ಜನವರಿ 16 ರಂದು ಬೆಂಗಳೂರಿನ ವಿಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ ಹಣ ನೀಡಿದ್ದಾರೆ. ಇದಾದ ಬಳಿಕ ವಿಶ್ವನಾಥ್ , ಗಗನ್ ಕಡೂರು ಮತ್ತು ಚೈತ್ರಾ ಕುಂದಾಪುರ ಅವರು ಗೋವಿಂದಬಾಬು ಪೂಜಾರಿ ಅವರಿಗೆ ಕಾನ್ಫರೆನ್ಸ್ ಕರೆ ಮಾಡಿ ಬಿಜೆಪಿಯ ಕೇಂದೀಯ ಚುನಾವಣಾ ಸಮಿತಿಯ ಪ್ರಮುಖರು ಬೆಂಗಳೂರಿಗೆ ಆಗಮಿಸಲಿದ್ದು ಅವರನ್ನು ಭೇಟಿ ಆಗಿ ಎಂದು ಹೇಳಿದ್ದಾರೆ.


ಶ್ರೀಕಾಂತ್ ನಾಯ್ಕ್ ಪ್ರವೇಶ


ಈ ಮಾತಿನಂತೆ ಗೋವಿಂದಬಾಬು ಪೂಜಾರಿ ಅವರು ಗಗನ್ ಕಡೂರು ಜೊತೆ ಬೆಂಗಳೂರಿನ ಕುಮಾರ ಕೃಪಾ ಸರ್ಕಾರಿ ಅತಿಥಿ ಗ್ರಹಕ್ಕೆ ಬಂದು ಅಲ್ಲಿ ತಂಗಿದ್ದ ಶ್ರೀಕಾಂತ್ ನಾಯ್ಕ್ ಎಂಬುವರನ್ನು ಭೇಟಿಯಾಗುತ್ತಾರೆ ಈ ವೇಳೆ ಗಗನ್ ಕಡೂರು, ಶ್ರೀಕಾಂತ ನಾಯ್ಕ್ ಅವರನ್ನು ದೆಹಲಿಯ ನಾಯಕ, ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯ ಎಂದು ಪರಿಚಯಿಸಿದ್ದಾನೆ.


ಇದಾದ ನಂತರ ಶ್ರೀಕಾಂತ ನಾಯ್ಕ್, ಕೇಂದ್ರಿಯ ಚುನಾವಣಾ ಸಮಿತಿ ನಿಮ್ಮ ಹೆಸರು ಅಂತಿಮಗೊಳಿಸಿದೆ ಎಂದು ಗೋವಿಂದಬಾಬು ಪೂಜಾರಿಗೆ ಹೇಳಿದ್ದಾರೆ. ಅಲ್ಲದೆ ಈ ಮೊದಲು ಮಾತನಾಡಿದಂತೆ ಬಾಕಿ ಮೊತ್ತ 3 ಮೂರು ಕೋಟಿ ರೂಪಾಯಿಗಳನ್ನು ಗಗನ್ ಕಡೂರ್ ರವರು ಸೂಚಿಸಿದ ಸ್ಥಳಕ್ಕೆ ತಲುಪಿಸಬೇಕೆಂದು ಸೂಚಿಸಿದರು.


ಶ್ರೀಕಾಂತ್ ನಾಯ್ಕ್ ಮತ್ತು ವಿಶ್ವನಾಥ್ ಜಿ ಸೂಚನೆಯಂತೆ ಗೋವಿಂದ ಬಾಬು ಪೂಜಾರಿ 3 ಕೋಟಿ ರೂಪಾಯಿಗಳನ್ನು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ತಂಡಕ್ಕೆ 2022ರ ಡಿಸೆಂಬರ್ 29 ರಂದು ಮಂಗಳೂರಿನಲ್ಲಿ ನೀಡಿದ್ದಾರೆ. 


ತಮಗೆ ಟಿಕೆಟ್ ಖಾತ್ರಿ ಎಂದು ಗೋವಿಂದ ಬಾಬು ಪೂಜಾರಿ ಪ್ರಚಾರ ಆರಂಭಿಸಿದ್ದಾರೆ.ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಸ್ಪರ್ಧೆ ಖಚಿತ ಎಂದು ಕಾರ್ಯಕರ್ತರಿಗೆ ಹೇಳಿ ಪ್ರಚಾರ ಮಾಡುತ್ತಿರುವಾಗ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಮಾಡಿದ ಪೋನ್ ಕರೆ ಗೋವಿಂದ ಬಾಬು ಪೂಜಾರಿ ಅವರನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ.


ಗೋವಿಂದಬಾಬು ಪೂಜಾರಿಗೆ ಮಾರ್ಚ್ 3 ರಂದು ಕರೆ ಮಾಡಿದ ನಂತರ ಗಗನ್ ಕಡೂರ್, ಸಂಘ ಪರಿವಾರದ ನಾಯಕ ವಿಶ್ವನಾಥ್ ಉಸಿರಾಟದ ಸಮಸ್ಯೆಯಿಂದ ಇದೇ ಬೆಳಿಗ್ಗೆ 11.30ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ತಿಳಿಸುತ್ತಾನೆ, ಈ ಸುದ್ದಿ ಕೇಳಿದ ಗೋವಿಂದ ಬಾಬು ಪೂಜಾರಿ ಆಘಾತದಿಂದ ತತ್ತರಿಸಿ ಹೋಗಿದ್ದಾರೆ. ವಿಶ್ವನಾಥ್ ಹೋದ ಮೇಲೆ ನನ್ನ ಟಿಕೆಟ್ ಗತಿ ಏನು ಎಂದು ತಿಳಿಯದೆ ಕಂಗಾಲಾಗುತ್ತಾರೆ.


ಇದಾದ ಎರಡು ದಿನದ ಬಳಿಕ ಸಾವರಿಸಿಕೊಂಡು ವಿಶ್ವನಾಥ್ ಸಾವಿನ ಸುದ್ದಿ ಬಗ್ಗೆ ತಿಳಿಯಲು ಕಾಶ್ಮೀರದಲ್ಲಿರುವ ತಮ್ಮ ಪರಿಚಿತರಾದ ನಿವೃತ್ತ ಸೇನಾಧಿಕಾರಿ ಯೋಗೇಶ್ ಎಂಬುವವರನ್ನು ಸಂಪರ್ಕಿಸುತ್ತಾರೆ. ಸಂಘ ಪರಿವಾರದ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದ ಅವರು ಗೋವಿಂದ ಬಾಬು ಪೂಜಾರಿ ಅವರಿಗೆ ಸಂಘದಲ್ಲಿ ವಿಶ್ವನಾಥ್ ಹೆಸರಿನ ಹಿರಿಯ ಪ್ರಚಾರಕರು ಯಾರೂ ಇಲ್ಲ, ಅಲ್ಲದೆ ಅಷ್ಟು ದೊಡ್ಡ ವ್ಯಕ್ತಿ ಮೃತಪಟ್ಟರೆ ಎಲ್ಲರಿಗೂ ತಿಳಿಯುತಿತ್ತು. ಹೀಗಾಗಿ ತಮಗೆ ತಿಳಿದಿರುವಂತೆ ಇಂತಹ ಹೆಸರಿನವರು ಯಾರೂ ಇಲ್ಲ ಎಂದಿದ್ದಾರೆ.


ಆಗ ಗೋವಿಂದ ಬಾಬು ಪೂಜಾರಿ ಅವರಿಗೆ ತಾವು ವಂಚನೆಯ ಜಾಲದಲ್ಲಿ ಸಿಲುಕಿರುವುದು ಮನದಟ್ಟಾಗುತ್ತದೆ.ತಡ ಮಾಡದ ಅವರು, ಚೈತ್ರಾ ಕುಂದಾಪರ ಹಾಗೂ ಗಗನ್ ಕಡೂರುಗೆ ಕರೆ ಮಾಡಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ತಮ್ಮ ಕಚೇರಿಗೆ ಬರುವಂತೆ ತಾಕೀತು ಮಾಡುತ್ತಾರೆ


ಇಬ್ಬರನ್ನೂ ತಮ್ಮ ಕಚೇರಿಗೆ ಕರೆಸಿಕೊಂಡು ಚರ್ಚಿಸಿ, ನನಗೆ ಯಾವ ಟಿಕೆಟ್ ಕೂಡ ಬೇಡ ನಾನು ಕೊಟ್ಟಿರುವ ಹಣ ವಾಪಸ್ ಕೊಡಿ ಎಂದಿದ್ದಾರೆ. ಅದಕ್ಕೆ ಗಗನ್ ತಾವು ಪಡೆದ ಹಣ ವಿಶ್ವನಾಥ ಬಳಿ ಇದ್ದು, ಅವರೀಗ ವಿಧಿವಶರಾಗಿದ್ದಾರೆ ಎಂದು ಹೇಳಿದ್ದಾರೆ.


ವಿಷದ ಬಾಟಲಿ ಡ್ರಾಮ:


ಇದನ್ನು ನಂಬದ ಗೋವಿಂದಬಾಬು ಅವರು ಎಲ್ಲ ನಾಟಕ ನನಗೆ ಗೊತ್ತಾಗಿದೆ, ಹಣವನ್ನು ವಾಪಸ್ ನೀಡಿ, ಇಲ್ಲ ದೂರು ನೀಡುತ್ತೇನೆ ಎಂದಿದ್ದಾರೆ. ಆಗ ಸ್ವಲ್ಪ ಮೆತ್ತಗಾದ ಚೈತ್ರಾ ಕುಂದಾಪುರ ತಾವು ಈಗಿಂದೀಗಲೆ ಹಣ ಕೇಳಿದರೆ ಕೊಡುವುದು ಎಲ್ಲಿಂದ ಅದಕ್ಕೆ ಸ್ವಲ್ಪ ಸಮಯ ಕೊಡಿ ಇಲ್ಲವಾದರೆ ತಮಗೆ ಆತ್ಮಹತ್ಯೆ ಒಂದೇ ದಾರಿ ಎಂದು ವಿಷದ ಬಾಟಲಿ ತೋರಿಸಿದ್ದಾರೆ.


ಇದಕ್ಕೆ ಸಮ್ಮತಿಸಿದ ಅವರು ಸ್ವಲ್ಪ ಕಾಲಾವಕಾಶ ನೀಡಿದ್ದಾರೆ. ಅನಂತರ ಇಬ್ಬರೂ ಫೋನ್ ಕರೆ ಸ್ವೀಕರಿಸದೆ ತಲೆ ಮರೆಸಿಕೊಂಡಿದ್ದರು. ಇದಾದ ಬಳಿಕ ಗೋವಿಂದಬಾಬು ಅಭಿನವ ಪಾಲಶ್ರೀ ಸ್ವಾಮೀಜಿ ಅವರನ್ನು ಭೇಟಿಯಾಗಿ 1.5 ಕೋಟಿ ರೂ. ಹಣ ನೀಡುವಂತೆ ಹೇಳಿದ್ದಾರೆ. ಆಗ ಸ್ವಾಮೀಜಿ ಒಂದು ತಿಂಗಳೊಳಗೆ ವಾಪಸ್ ನೀಡುತ್ತೇನೆ ಈ ವಿಚಾರದಲ್ಲಿ ನನ್ನನ್ನು ಬಿಟ್ಟು ಬಿಡಿ ಎಂದು ಹೇಳಿದ್ದಾರೆ.


ಬಳಿಕ ಗೋವಿಂದಬಾಬು, ವಿಶ್ವನಾಥ್ ಬಗ್ಗೆ ಚಿಕ್ಕಮಗಳೂರು ಹಿಂದೂ ಸಂಘಟನೆ ಕಾರ್ಯಕರ್ತ ಮಂಜು ಬಳಿ ಹೇಳಿದಾಗ ಮಂಜು ತಾನು ಕೆಲ ದಿನಗಳ ಹಿಂದೆ ಸಲೂನ್ ಒಂದಕ್ಕೆ ಭೇಟಿ ನೀಡಿದ ವೇಳೆ ನಡೆದ ಅಲ್ಲಿಯ ಆತ ನೀಡಿದ ಮಾಹಿತಿಗೂ ಈ ಸನ್ನಿವೇಶಕ್ಕೂ ಇದಕ್ಕೂ ಸಾಮ್ಯತೆ ಎಂದು ಹೇಳಿದ್ದಾರೆ. ಆಗ ಇದರ ಹಿಂದೆ ಬಿದ್ದ ಗೋವಿಂದ ಬಾಬು ಪೂಜಾರಿ ತನ್ನ ಸ್ನೇಹಿತರ ಮೂಲಕ ವಿಚಾರಣೆ ಆರಂಭಿಸಿದರು. ಆಗ ಇವರಿಗೆ ತಿಳಿದು ಬಂದ ಮಾಹಿತಿ ಹೀಗಿದೆ.


ಕಡೂರಿನ ಸಲೂನ್‌ಗೆ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಸ್ಥಳೀಯನೊಬ್ಬ ಆ ವ್ಯಕ್ತಿಯನ್ನು ಆರ್‌ಎಸ್‌ಎಸ್ ಪ್ರಚಾರಕರ ರೀತಿ ಮೇಕಪ್ ಮಾಡಿಸಿದ್ದನು.


ಇದೇ ವೇಳೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ಶ್ರೀಕಾಂತ್ ನಾಯ್ಕ್ ಎಂಬ ವ್ಯಕ್ತಿ ಬಗೆ ಧನರಾಜ್ ಬಳಿ ವಿಚಾರಿಸಿದಾಗ ಇವರು ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಚಿಕನ್ ಕಬಾಬ್ ತಯಾರಿಸುವ ಬೀದಿ ವ್ಯಾಪಾರಿ ಎಂಬುದು ಗೊತ್ತಾಗಿದೆ. ಶ್ರೀಕಾಂತ್ ನಾಯ್ಕ್ರನ್ನು ಭೇಟಿಯಾಗಿ ವಿಚಾರಿಸಿದಾಗ ಬಿಜೆಪಿ ನಾಯಕನಾಗಿ ಪಾತ್ರ ಮಾಡಲು ತನಗೆ ಗಗನ್ ಕಡೂರು 93 ಸಾವಿರ ರೂ. ನೀಡಿದ್ದಾರೆ. ಅಲ್ಲದೇ ಈ ವಿಚಾರಗಳನ್ನು ಬಹಿರಂಗಪಡಿಸಿದರೆ ಕೊಲೆ ಮಾಡಿಸುವುದಾಗಿ ಚೈತ್ರ ಕುಂದಾಪುರ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾನೆ 


ಈ ಎಲ್ಲಾ ಮಾಹಿತಿ ಸಂಗ್ರಹಿಸಿದ ಬಳಿಕ ಗೋವಿಂದ ಬಾಬು ಪೂಜಾರಿ ವಂಚನೆಯ ದೂರು ಹಿಡಿದು ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಬಂಡೆಪಾಳ್ಯ ಠಾಣೆಯಿಂದ ಸಿಸಿಬಿಗೆ ವರ್ಗಾವಣೆ ಮಾಡಿದ್ದು, ತನಿಖೆಯನ್ನು ತೀವ್ರಗೊಳಿಸಿದ ಸಿಸಿಬಿ ಪೊಲೀಸರು ಪ್ರಸಾದ್, ಗಗನ್ ಹಾಗೂ ಪ್ರಜ್ವಲ್ ಶೆಟ್ಟಿಯನ್ನು ಬಂಧಿಸಿ ವಿಚಾರಣೆ ಕೈಗೊಂಡು ಅವರು ನೀಡಿದ ಮಾಹಿತಿಯನ್ನು ಆಧರಿಸಿ ತಲೆ ಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರನ್ನು ಬಂಧಿಸಿದ್ದಾರೆ.ಅಲ್ಲದೇ ಆಕೆಯ ಗೆಳಯ ಶ್ರೀಕಾಂತ್ ನಾಯಕ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

 


ಸ್ವಾಮೀಜಿ ಮತ್ತು ಉದ್ಯಮಿ ಬಂಧನ ಯಾವಾಗ?


ಈ ಏಳು ಕೋಟಿ ರೂ ಮೊತ್ತದ ವಂಚನೆ ಪ್ರಕರಣದಲ್ಲಿ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ, ಮೇಲ್ನೋಟಕ್ಕೆ ಇದೊಂದು ಕೆಲ ವ್ಯಕ್ತಿಗಳ ವಂಚನೆಯ ಜಾಲ ಎಂಬಂತೆ ಕಂಡು ಬಂದರೂ, ಮಠದ ಕಾವಿಧಾರಿ ಅಭಿನವ ಪಾಲಶ್ರೀ ಸ್ವಾಮಿಯೂ ಗೋವಿಂದ ಬಾಬು ಪೂಜಾರಿಯಿಂದ ಒಂದೂವರೆ ಕೋಟಿಯಷ್ಟ ಬೃಹತ್ ಮೊತ್ತವನ್ನು ಸ್ವೀಕರಿಸಿರುವುದರಿಂತ ಆತನನ್ನು ಬಂಧಿಸುವ ಅವಶ್ಯಕತೆ ಇದೆ. ಹಾಗೂ ಪಕ್ಷದ ಟಿಕೆಟ್ ಕೊಡಿಸುವಂತೆ ದುಂಬಾಲು ಬಿದ್ದು ಏಳು ಕೋಟಿಯಷ್ಟು ಬೃಹತ್ ಮೊತ್ತವನ್ನು ನಗದು ರೂಪದಲ್ಲಿ ನೀಡಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯನ್ನೂ ಮನಿ ಲಾಂಡರಿAಗ್ ತಡೆ ಕಾಯ್ದೆಯಡಿ ಬಂಧಿಸಿ ವಿಚಾರಣೆ ನಡೆಸುವ ಅವಶ್ಯಕತೆ ಇದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉದ್ಯಮಿಯ ಗೆಟಪ್‌ನಲ್ಲಿ ಗೋವಿಂದ ಬಾಬು ಪೂಜಾರಿ


ಈ ಪ್ರಕರಣ ಕೇವಲ ಉದ್ಯಮಿಯನ್ನು ವಂಚಿಸಿರುವ ಪ್ರಕರಣವಲ್ಲ, ಆರ್ ಎಸ್ ಎಸ್ ಕಾರ‍್ಯಕರ್ತ ಹಾಗೂ ಬಿಜೆಪಿ ಮುಖಂಡನಾಗಿ ಬೈಂದೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾತನಿಗೆ ಆತನ ಪಕ್ಷದವರು ಹಾಗೂ ಸಂಘಪರಿವಾರದವರೇ ವಂಚಿಸಿರುವ ಪ್ರಕರಣವಿದು. ಎಲ್ಲ ರಾಜಕೀಯ ಪಕ್ಷಗಳಲ್ಲೂ ಇಂತದ್ದೊಂದು ಮಾಫಿಯಾ ಇದೆ ಎಂದು ಹತ್ತಿರದಿಂದ ಕಂಡ ರಾಜಕಾರಣಿಗಳು ಹೇಳುತ್ತಾರೆ, ಶಿಸ್ತು, ದೇಶ ಭಕ್ತಿ ಇತ್ಯಾದಿ ಬೋಧಿಸುವ ಸಂಸ್ಥೆ ಹಾಗೂ ರಾಜಕೀಯ ಪಕ್ಷವೂ ಇಂಥ ಅಕ್ರಮಗಳಲ್ಲಿ ತೊಡಗಿದೆ ಎಂದರೆ ಅಚ್ಚರಿ ಪಡಬೇಕಿದೆ.