ಸ್ಕ್ರೀನ್ ಟೈಮ್ ಎಂಬ ಡಿಜಿಟಲ್ ಬಲೆ

ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಾರೆ, ವೃತ್ತಿಪರರು ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಕುಟುಂಬಗಳು ವೀಡಿಯೊಗಳನ್ನು ವೀಕ್ಷಿಸಲು ಅಥವಾ ಸಾಮಾಜಿಕ ಮಾಧ್ಯಮವನ್ನು ಬ್ರೌಸ್ ಮಾಡಲು ಬಿಡುವಿನ ಸಮಯವನ್ನು ಕಳೆಯುತ್ತಾರೆ.

ಸ್ಕ್ರೀನ್ ಟೈಮ್ ಎಂಬ ಡಿಜಿಟಲ್ ಬಲೆ

ಆಶಾ ಸಿಂಗ್

  

         ಸ್ಕ್ರೀನ್ ಟೈಮ್ ಎಂದರೆ – ಒಂದು ದಿನದ 24 ಗಂಟೆಯಲ್ಲಿ ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೆಟ್, ಟಿವಿ, ಮತ್ತು ಗೇಮ್ ಗಳನ್ನು ಬಳಸುತ್ತ ಒಬ್ಬ ವ್ಯಕ್ತಿಯು ಒಟ್ಟಾರೆಯಾಗಿ ಕಳೆಯುವ ಸಮಯವನ್ನು ಸೂಚಿಸಲು ಸ್ಕ್ರೀನ್ ಟೈಮ್ ಎಂದು ಹೇಳಲಾಗುತ್ತದೆ. ಇದೊಂದು ಡಿಜಿಟಲ್ ಬಲೆಯಂತೆ ಬಂಧಿಸಿಟ್ಟಿದೆ, ವ್ಯಸನದ ರೀತಿ ಆಗಿಬಿಟ್ಟಿದೆ. ಹಿರಿಯರು, ಮಕ್ಕಳು ಎಲ್ಲರಿಗೂ ಇದು ಸಂಗಾತಿಯಾಗಿದೆ. ಹಲವರು ಶಿಕ್ಷಣ, ಸಂವಹನ, ಮನರಂಜನೆ, ಕೆಲಸ, ಮಾಹಿತಿ ಸಂಗ್ರಹಣೆ, ಅಧ್ಯಯನ ಮತ್ತಿತರ ಪ್ರಯೋಜನಗಳೂ ಇವೆ. ಆದರೆ ಈಗೀಗ ಇದು ಅಗತ್ಯಕ್ಕಿಂತ ಮಿತಿಮೀರಿ ಒಂದು ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಮಕ್ಕಳ ವಿಷಯದಲ್ಲಂತೂ ಇದೊಂದು ಬಿಕ್ಕಟ್ಟು ಎಂಬಂಥ ಸ್ಥಿತಿ ನಿರ್ಮಾಣಗೊಂಡಿದೆ.

     ಎದ್ದ ಕೂಡಲೇ ಸ್ಕ್ರೋಲ್ ಮಾಡುವುದು, ಪ್ರಯಾಣ ಮಾಡುವಾಗ, ಊಟ ಮಾಡುವಾಗ, ಮಲಗುವಾಗ, ಮಾತನಾಡುವಾಗ, ಕಡೆಗೆ ವಾಹನ ಚಲಾಯಿಸುವಾಗಲೂ ಸ್ಕ್ರೀನ್ ನೋಡುವುದು ತಪ್ಪಿಸಲಾಗುತ್ತಿಲ್ಲ. ಇದರಿಂದ ಏಕೆ ಹೊರಬರಲು ಸಾಧ್ಯವಾಗುತ್ತಿಲ್ಲ.ಸ್ಕ್ರೀನ್  ನಮ್ಮ ಮನಸ್ಸಿನ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಾಮಾಜಿಕ ಮಾಧ್ಯಮವನ್ನು ಬಳಸಿದಾಗ ಆಗುವ ನೇರ ಪರಿಣಾಮವನ್ನು ವಿಶ್ವ ಆರೋಗ್ಯ ಸಂಸ್ಥೆಯು ಅಧ್ಯಯನಕ್ಕೊಳಪಡಿಸಿದೆ. ಇದರ ಅಂಗವಾಗಿ ನಾಲ್ಕು ದೇಶಗಳ ಡೇಟಾವನ್ನು ಅಧ್ಯಯನ ಮಾಡಿದ್ದು, ಶೇಕಡಾ 11 ರಷ್ಟು ಮಕ್ಕಳು ಸಾಮಾಜಿಕ ಮಾಧ್ಯಮದ ಬಗ್ಗೆ ವ್ಯಸನಕಾರಿ ಲಕ್ಷಣಗಳನ್ನು ಹೊಂದಿರುವುದು ಕಂಡುಬಂದಿದೆ ಎಂದು, ಅದರಲ್ಲೂ ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದೂ ತಿಳಿಸಿತು.

      ಡಿಜಿಟಲ್ ತಂತ್ರಜ್ಞಾನದ ಬೆಳವಣಿಗೆಯು ಸ್ಕ್ರೀನಿನ ಬಳಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಾರೆ, ವೃತ್ತಿಪರರು ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಕುಟುಂಬಗಳು ವೀಡಿಯೊಗಳನ್ನು ವೀಕ್ಷಿಸಲು ಅಥವಾ ಸಾಮಾಜಿಕ ಮಾಧ್ಯಮವನ್ನು ಬ್ರೌಸ್ ಮಾಡಲು ಬಿಡುವಿನ ಸಮಯವನ್ನು ಕಳೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಆನ್‌ಲೈನ್ ಕಲಿಕೆ ಮತ್ತು ವರ್ಕ್ ಫ್ರಮ್ ಹೋಮ್ ಕೆಲಸದ ಏರಿಕೆಯ ನಂತರ, ಸ್ಕ್ರೀನ್ ಬಳಕೆ ಅನಿವಾರ್ಯವಾಗಿದೆ. ಅತಿಯಾದ ಸ್ಕ್ರೀನ್ ಸಮಯದ ಒಂದು ಪ್ರಮುಖ ಪರಿಣಾಮವೆಂದರೆ ಕಣ್ಣಿನ ಆಯಾಸ. ಡಿಜಿಟಲ್ ಸ್ಕ್ರೀನ್‌ಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ತಲೆನೋವು, ಮಸುಕಾದ ದೃಷ್ಟಿ, ಒಣಗಿದ ಕಣ್ಣುಗಳು ಮತ್ತು ಅಸ್ವಸ್ಥತೆ ಉಂಟಾಗಬಹುದು.ಈ ಸ್ಥಿತಿಯನ್ನು ಹೆಚ್ಚಾಗಿ ಡಿಜಿಟಲ್ ಐ ಸ್ಟ್ರೈನ್ ಅಥವಾ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಪರದೆಗಳನ್ನು ದಿಟ್ಟಿಸುತ್ತಾ ದೀರ್ಘಕಾಲ ಕಳೆಯುವುದರಿಂದ ನಿದ್ರೆಯ ಮಾದರಿ ತೊಂದರೆಗೊಳಗಾಗಬಹುದು. ಅಂದರೆ ಸಾಮಾನ್ಯವಾಗಿ ನಿದ್ದೆಹೋಗುವ ಸಮಯ ರಾತ್ರಿ 10 ಆಗಿರುತ್ತದೆ ಎಂದಿಟ್ಟುಕೊಂಡರೆ, ಸ್ಕ್ರೀನ್ ಬಳಕೆಯಿಂದಾಗಿ ಅದು 12 ಗಂಟೆ, 1-2 ಗಂಟೆಯೂ ಆಗಬಹುದು. ಹೀಗಿದ್ದಾಗ ದಿನದ ದೈಹಿಕ ಆಯಾಸಕ್ಕಾಗಿ ದೇಹವು ವಿಶ್ರಾಂತಿಗಾಗಿ ಕಾಯುತ್ತಿರುತ್ತದೆ. ನಿದ್ರಾಸಮಯದಲ್ಲಿ ದೇಹವು ತನ್ನನ್ನು ತಾನು ಆಂತರಿಕವಾಗಿ ವ್ಯವಸ್ಥಿತಗೊಳಿಸಿಕೊಳ್ಳುತ್ತಿರುತ್ತದೆ. ಇದು ವ್ಯತ್ಯಾಸವಾದಾಗ ದೇಹದ ಮೇಲೆ ಪರಿಣಾಮ ಬೀರುತ್ತದೆ. ಆ ಮೂಲಕ ಮನಸ್ಸಿನ ಮೇಲೂ ಪರಿಣಾಮ ಬಿದ್ದೇಬೀಳುತ್ತದೆ. ಇದನ್ನು ಮಕ್ಕಳ ಶರೀರ ತಡೆದುಕೊಳ್ಳಲು ಸಾಧ್ಯವಿಲ್ಲ.

      ಆದರೂ ಸಹ ಸ್ಕ್ರೀನ್ ಅನ್ನು ಬಳಸುವುದು ಸಂಪೂರ್ಣ ಹಾನಿಕಾರಕ ಎಂದೇನಲ್ಲ. ಶೈಕ್ಷಣಿಕ ಕಾರ್ಯಕ್ರಮಗಳು, ಆನ್‌ಲೈನ್ ಕಲಿಕಾ ವೇದಿಕೆಗಳು ಮತ್ತು ಮಾಹಿತಿಯುಕ್ತ ವೀಡಿಯೊಗಳು ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯಲು ಮತ್ತು ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತವೆ.ಇದನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಶಾಲೆಯವರು ಮತ್ತು ಪೋಷಕರು ಸಹಕರಿಸಬೇಕು. ಪರದೆಯ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ತಜ್ಞರು ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಲು ಶಿಫಾರಸು ಮಾಡುತ್ತಾರೆ. ಡಿಜಿಟಲ್ ಸಾಧನಗಳನ್ನು ಬಳಸುವಾಗ ಜನರು ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಬೇಕು. "20-20-20 ನಿಯಮ" ಎಂಬುದು ಕಣ್ಣುಗಳನ್ನು ರಕ್ಷಿಸಲು ಉಪಯುಕ್ತವಾಗಿದೆ: ಪ್ರತಿ 20 ನಿಮಿಷಗಳಿಗೊಮ್ಮೆ, ಕನಿಷ್ಠ 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿರುವ ಏನನ್ನಾದರೂ ನೋಡಿ. ಮಲಗುವ ಮುನ್ನ ಪರದೆಯ ಬಳಕೆಯನ್ನು ಮಿತಿಗೊಳಿಸುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸಬಹುದು. ಪೋಷಕರು ಮಕ್ಕಳನ್ನು ಹೊರಾಂಗಣ ಆಟಗಳು, ಓದುವಿಕೆ, ಹವ್ಯಾಸಗಳು ಮತ್ತು ಕುಟುಂಬ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕುಮತ್ತುಮನೆಯಲ್ಲಿ ಮಕ್ಕಳ ಸ್ಕ್ರೀನ್ ಸಮಯದ ಕುರಿತು ಮಾನಿಟರಿಂಗ್ ಮಾಡಬೇಕು.

     ತಂತ್ರಜ್ಞಾನವು ಪ್ರಪಂಚದಾದ್ಯಂತದ ಜನರೊಂದಿಗೆ ಸಂವಹನವನ್ನು ಸಕ್ರಿಯಗೊಳಿಸುತ್ತದೆ ಮತ್ತು ಡಿಜಿಟಲ್ ಕಲೆ, ಕೋಡಿಂಗ್ ಮತ್ತು ವಿಷಯ ಸಂಗ್ರಹದ ಮೂಲಕ ಸೃಜನಶೀಲತೆಯನ್ನು ಬೆಂಬಲಿಸುತ್ತದೆ.ಇದನ್ನು ಸಮತೋಲನದಿಂದ ಬಳಸುವುದು ನಮ್ಮ ನಿಮ್ಮ ಕೈಯಲ್ಲಿದೆ.