ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೊಂದು ಬಹಿರಂಗ ಪತ್ರ
ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪನ್ನಾಗಿ ಮಾಡಿ ಕನಿಷ್ಟ ಶೇ.1 ರಷ್ಟು ಒಳಮೀಸಲಾತಿ ಒದಗಿಸುವ ಸುವರ್ಣಾವಕಾಶ ನಿಮ್ಮ ಕೈಯಲ್ಲಿತ್ತು. ಆದರೆ ನೀವು ಮತ್ತೆ 59 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ-ಸಿ ನಲ್ಲಿ ಮುಂದುವರೆದ ಬೋವಿ, ಲಂಬಾಣಿ ಮತ್ತಿತರ ಸಮುದಾಯಗಳೊಂದಿಗೆ ಸೇರಿಸಿ ಶೇ.4.5 ರಷ್ಟು ಒಳಮೀಸಲಾತಿ ಕಲ್ಪಿಸಿ ಅದರಲ್ಲಿ ಮೂಗಿಗೆ ತುಪ್ಪ ಸವರುವಂತೆ ಅತ್ಯಂತ ಹಿಂದುಳಿದ 59 ಸಮುದಾಯಗಳಿಗೆ "ಶೇ.4.5 ರಲ್ಲಿ ಶೇ.20"ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ ಎಂದು ಹೇಳಿರುತ್ತೀರಿ. ಇದು ದಲಿತರಲ್ಲಿನ ಬಹುಸಂಖ್ಯಾತ ರಾಜಕಾರಣವನ್ನು ಓಲೈಸಲು ಮಾಡಿದ ಕ್ರಮ ಮತ್ತು ಇದು ಮೀಸಲಾತಿ ಹಾಗೂ ಒಳಮೀಸಲಾತಿಯ ಪರಿಕಲ್ಪನೆಯನ್ನೇ ತಲೆಕೆಳಗು ಮಾಡಿ ಸಾಮಾಜಿಕ ನ್ಯಾಯವನ್ನು ಬುಡ ಮೇಲು ಮಾಡುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧದ ನಡೆ.
ಸನ್ಮಾನ್ಯರೇ,
ಎರಡನೇ ಅವಧಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಮೂರು ವರ್ಷ ಪೂರೈಸಿರುವ ನಿಮಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.

ತುಮಕೂರಿನಲ್ಲಿ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶವನ್ನು ಮೇ19ರಂದು ನಡೆಸಿದ್ದೀರಿ. ಸಾಧನೆಯ ಸಮಾವೇಶದಲ್ಲಿ ಮಾತನಾಡಿದ ನೀವು “ಸಂವಿಧಾನದ ಆಶಯಗಳಾದ ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಾಧಿಸುವುದು ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಕೊಡುವುದು, ಆ ಮೂಲಕ ಸಮಪಾಲು-ಸಮಬಾಳು ಎಂಬ ಧ್ಯೇಯವನ್ನು ಸಾಧಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ” ಎಂದು ಹೇಳಿದ್ದೀರಿ. ಬಹಳಷ್ಟು ಸಾರ್ವಜನಿಕ ವೇದಿಕೆಗಳಲ್ಲಿ ಈ ಮಾತುಗಳನ್ನು ಪದೇ ಪದೇ ಹೇಳುತ್ತಿರುತ್ತೀರಿ. ದುರ್ಬಲರಿಗೆ ಶಕ್ತಿ ತುಂಬಲು ಸಮಾನ ಅವಕಾಶವನ್ನು ಕಲ್ಪಿಸಿ ಸಮಾನತೆ ಸಾಧಿಸುವುದು ನಮ್ಮ ಉದ್ದೇಶ ಎಂಬ ಮಾತುಗಳನ್ನು ನೀವು ಆಡಿರದಿದ್ದರೆ ಬಹುಶಃ ನಾನು ಈ ಪತ್ರ ಬರೆಯುತ್ತಿರಲಿಲ್ಲವೇನೋ ಅನ್ನಿಸುತ್ತದೆ.
ನಾನು ನಿಮ್ಮನ್ನು ಮೊದಲು ಭೇಟಿಯಾಗಿದ್ದು ಮತ್ತು ನಿಮ್ಮೊಂದಿಗೆ ಮಾತನಾಡಿದ್ದು ತುಮಕೂರಿನಲ್ಲಿಯೇ. ಬಹುಶಃ ಅದು 1992-93 ನೇ ವರ್ಷ ಇರಬಹುದು. ನಾನಾಗ ಸಮತಾ ವಿದ್ಯಾರ್ಥಿ ಒಕ್ಕೂಟ ಎಂಬ ವಿದ್ಯಾರ್ಥಿ ಸಂಘಟನೆಯ ಸಂಚಾಲಕನಾಗಿ ಒಂದು ಅಧ್ಯಯನ ಶಿಬಿರವನ್ನು ಉದ್ಘಾಟಿಸಲು ನಿಮ್ಮನ್ನು ಆಹ್ವಾನಿಸಿದ್ದೆ. ಅದೇ ಸಮಯದಲ್ಲಿ ಮಂಡಲ್ ವರದಿಯ ಪರ-ವಿರೋಧದ ಹೋರಾಟ ಹೆಚ್ಚಾಗಿತ್ತು. ಹಾಗಾಗಿ ನೀವು ನಮ್ಮ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ, ಮಂಡಲ್ ವರದಿ ಮತ್ತು ಮೀಸಲಾತಿಯ ಸುತ್ತ-ಮುತ್ತ ಮಾತನಾಡಿ ಸಾಮಾಜಿಕ ಅನ್ಯಾಯಕ್ಕೊಳಗಾದವರಿಗೆ ಮೀಸಲಾತಿ ಎಷ್ಟು ಅಗತ್ಯ ಎಂಬುದರ ಕುರಿತು ಒತ್ತಿ ಹೇಳಿದ್ದ ನೆನಪು. ನಾವೆಲ್ಲ ಕಾಲೇಜು ವಿದ್ಯಾರ್ಥಿಗಳು ಸೇರಿ ನಡೆಸುತ್ತಿದ್ದ ಅಧ್ಯಯನ ಶಿಬಿರವಾದ್ದರಿಂದ ಹಣಕಾಸಿನ ಕೊರತೆ ಇತ್ತು. ಹಾಗಾಗಿ ಮಧ್ಯಾಹ್ನದ ಊಟಕ್ಕೆ ಕೇವಲ ತರಕಾರಿ ಪಲಾವ್ ಮಾಡಿಸಿದ್ದೆವು. ತುಮಕೂರಿನ ಕಾಳಿದಾಸ ಕಾಲೇಜಿನ ಕ್ಲಾಸ್ ರೂಮಿನಲ್ಲಿ ಹಾಕಲಾಗಿದ್ದ ಮಣೆ ಮೇಲೆ ನಮ್ಮೊಂದಿಗೆ ಕುಳಿತು ಮೊಸರು ಬಜ್ಜಿಯೂ ಇಲ್ಲದ ಪಲಾವ್ ಅನ್ನು ಊಟ ಮಾಡಿದ್ರಿ. ಆಗ ನೀವು ಸಫಾರಿ ಧರಿಸುತ್ತಿದ್ದಿರಿ. ಆ ಸರಳತೆಯೇ ನಮ್ಮಂತಹ ಹುಡುಗರನ್ನು ನಿಮ್ಮೆಡೆಗೆ ಸೆಳೆಯುವಂತೆ ಮಾಡಿತು ಎಂದೆನ್ನಬಹುದು.
1994 ರಲ್ಲಿ ಮೊದಲ ಬಾರಿಗೆ ನೀವು ಹಣಕಾಸು ಮಂತ್ರಿಯಾದ ಸಂದರ್ಭದಲ್ಲಿ ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದ ತುಮಕೂರಿನ ಸಮಾಜವಾದಿ ಮಿತ್ರರು ಹುಟ್ಟು ಹಾಕಿದ್ದ ಸಮತಾ ಸಂಘಟನೆಯ ಅಡಿಯಲ್ಲಿ ನಿಮ್ಮನ್ನು ಅಭಿನಂದಿಸುವ ಸಮಾರಂಭ ಏರ್ಪಡಿಸಲಾಗಿತ್ತು. ನಾನು ಕೂಡಾ ಆ ಕಾರ್ಯಕ್ರಮದ ಭಾಗವಾಗಿ ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗಿದ್ದೆ. ಆ ಕಾರ್ಯಕ್ರಮಕ್ಕೆ ಬಂದಾಗ ನಿಮ್ಮ ಧಿರಿಸು ಬದಲಾಗಿತ್ತು. ಸಫಾರಿ ಬದಲಿಗೆ ಪಂಚೆ, ಬಿಳಿ ಕುರ್ತಾ ಮತ್ತು ಹೆಗಲ ಮೇಲೆ ಶಾಲು ಬಂದಿತ್ತು. ಆದರೆ ಮಾತಿನ ದಾಟಿ, ವರಸೆ ಅಷ್ಟೊಂದು ಬದಲಾದಂತೆ ಕಾಣಲಿಲ್ಲ. ಅಂದಿನಿಂದಲೂ ನಿಮ್ಮನ್ನು "ನಮ್ಮ ನಾಯಕ" ಎಂದು ಒಪ್ಪಿಕೊಂಡು ನೀವು ಮುಖ್ಯಮಂತಿ ಆಗಬೇಕೆಂದು ಕನಸು ಕಂಡವರ ಪೈಕಿ ನಾನೂ ಒಬ್ಬ.
ಅದು 2005-06, ಉಪಮುಖ್ಯಮಂತ್ರಿಯಾಗಿದ್ದ ನಿಮ್ಮನ್ನು ಜನತಾ ದಳ ಪಕ್ಷದಿಂದ ಹೊರ ಹಾಕಲಾಗಿತ್ತು. ನಿಮ್ಮ ಮುಂದಿನ ರಾಜಕೀಯ ನಡೆ ಏನಾಗಿರಬೇಕು? ಎಂದು ಚರ್ಚಿಸಲು ರಾಜ್ಯದ ಸಾಹಿತಿಗಳು ಮತ್ತು ಪ್ರಗತಿಪರರ ಸಭೆಯನ್ನು ನೀವು ವಾಸವಿದ್ದ ಸರ್ಕಾರಿ ನಿವಾಸ "ಕಾವೇರಿ" ಆವರಣದಲ್ಲಿದ್ದ ಹುಲ್ಲುಹಾಸಿನ ಮೇಲೆ ಕರೆಯಲಾಗಿತ್ತು. ಅದರಲ್ಲಿ ನಾನು ಭಾಗವಹಿಸಿದ್ದೆ. ಬೇರೆ ಬೇರೆ ಕಡೆಯಿಂದ ಬಂದಿದ್ದ ಬಹಳಷ್ಟು ಜನ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಮೈಸೂರಿನಿಂದ ಬಂದಿದ್ದ ನಿಮ್ಮ ಮಿತ್ರರೂ ಅಗಿದ್ದ ಪ್ರೊ. ಕೆ. ರಾಮದಾಸ್‌ರವರು ಮಾತನಾಡಿ"ಇಂದು ಕರ್ನಾಟಕವೇ ನಿಮ್ಮ ಕಡೆ ನೋಡುತ್ತಿದೆ, ಇದೊಂದು ಸುಸಂದರ್ಭ, ಈ ಅವಕಾಶವನ್ನು ಬಳಸಿಕೊಂಡು ನೀವು ಸ್ವತಂತ್ರವಾದ ಸ್ವಂತ ಪಕ್ಷವನ್ನು ಕಟ್ಟಬೇಕು, ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬೇಡಿ” ಎಂಬ ಮಾತುಗಳನ್ನಾಡಿದರು.
ಎಲ್ಲರ ಅಭಿಪ್ರಾಯವನ್ನು ಕೇಳಿದ ಮೇಲೆ ಮಾತನಾಡಿದ ನೀವು “ಪಕ್ಷ ಕಟ್ಟುವಷ್ಟು ದುಡ್ಡು ನನ್ನ ಬಳಿ ಇಲ್ಲ, ಪ್ರವಾಹದ ವಿರುದ್ಧ ಈಜುವುದು ಕಷ್ಟ. ನಿಮ್ಮ ಅಭಿಪ್ರಾಯಗಳನ್ನು ಅಳೆದು ತೂಗಿ ಒಂದು ನಿರ್ಧಾರ ಮಾಡುತ್ತೇನೆ” ಎಂದು ಹೇಳಿದಿರಿ ಮತ್ತು ಹಾಗೆ ಹೇಳಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿರಿ. ನಮ್ಮ ನೆಚ್ಚಿನ ಸಿದ್ದರಾಮಯ್ಯನವರು ಹೊಸ ಪ್ರಾದೇಶಿಕ ಪಕ್ಷ ಕಟ್ಟಿ ಕರ್ನಾಟಕದ ರಾಜಕಾರಣದ ದಿಕ್ಕು ಬದಲಿಸುತ್ತಾರೆ ಎಂದು ನಂಬಿ ಕೊಂಡಿದ್ದ ನಮ್ಮಂತವರಿಗೆ ಭ್ರಮನಿರಸನ ಆಗಿದ್ದು ನಿಜ. ಅದಾದ ಕೆಲವೇ ದಿನಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ನೀವು ಕೇವಲ 200 ಮತಗಳಷ್ಟು ಅಂತರದಿಂದ ಗೆದ್ದಾಗ ನಾವೇ ಗೆದ್ದಂತೆ ಬೀಗಿದ್ವಿ. ಅಂದು ಕಾಂಗ್ರೆಸ್ ಸೇರಬೇಡಿ ಎಂದು ವಿರೋಧ ಮಾಡಿದ್ದ ಪ್ರೊ. ಕೆ. ರಾಮದಾಸ್‌ರವರು ತಮ್ಮ ಗೆಳೆಯರೊಂದಿಗೆ ಮನೆ ಮನೆ ಸುತ್ತಿ ನಿಮ್ಮ ಪರವಾಗಿ ಪ್ರಚಾರ ಕೈಗೊಂಡಿದ್ರು. ಆ ಉಪಚುನಾವಣೆ ನಿಮ್ಮ ರಾಜಕೀಯದ ಗತಿಯನ್ನೇ ಬದಲಿಸಿತು ಎಂದು ಹೇಳಬಹುದು. ಬಂಡವಾಳಶಾಹಿಗಳ ತೆಕ್ಕೆಗೆ ಬೀಳದೆ ಕೋಮುವಾದಿಗಳೊಂದಿಗೆ ರಾಜಿಯಾಗದೆ ತತ್ವನಿಷ್ಟರಾಗಿ ಮತ್ತು ಅಹಿಂದ ಸಂಘಟನೆಯನ್ನು ಮಾಡುತ್ತಾ ಹಿಂದುಳಿದವರ ದನಿಯಾಗಿದ್ದ ಕಾರಣಕ್ಕೆ ಇಡೀ ಕರ್ನಾಟಕದ ಪ್ರಜ್ಞಾವಂತ ಮನಸ್ಸುಗಳು ನಿಮ್ಮೊಂದಿಗೆ ಇದ್ದವು ಎಂಬುದು ನನ್ನ ಭಾವನೆ.
ನೀವು ರಾಜಕೀಯ ಪ್ರವೇಶ ಮಾಡಿ 40 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಿಮ್ಮನ್ನು ಅಭಿನಂದಿಸುವ ನೆಪದಲ್ಲಿ ಮೈಸೂರಿನಲ್ಲೊಂದು, ಬೆಂಗಳೂರಿನಲ್ಲೊAದು ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ “ಇದು ನನ್ನ ಕೊನೆ ಚುನಾವಣೆ, ಅದಾದ ಮೇಲೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ” ಎಂದು ಹೇಳಿದ್ರಿ. ನಿಮ್ಮ ನಂತರ ಮಾತನಾಡಿದ ನನ್ನ ವೃತ್ತಿ ಗುರುಗಳಾದ ನಾಡಿನ ಹಿರಿಯ ನ್ಯಾಯವಾದಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೊದಲ ಅಧ್ಯಕ್ಷ ಪ್ರೊ.ರವಿವರ್ಮಕುಮಾರ್‌ರವರು ನಿಮ್ಮ ಮಾತುಗಳಿಗೆ ಭಾವುಕವಾಗಿ ಪ್ರತಿಕ್ರಿಯಿಸಿ “ನೀವು ಚುನಾವಣೆಗೆ ನಿಲ್ಲುವುದಿಲ್ಲ ಎಂದg ೆಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ರಥವನ್ನು ಎಳೆಯುವವರು ಯಾರು ಸ್ವಾಮಿ, ಅದಕ್ಕಾಗಿಯಾದರೂ ನೀವು ರಾಜಕೀಯದಲ್ಲಿ ಮುಂದುವರೆಯಬೇಕು” ಎಂಬ ಮಾತುಗಳನ್ನು ಆಡಿದರು.
ನೀವು ಮುಖ್ಯಮಂತ್ರಿಯಾಗಿ ಮೊದಲನೆ ಅವಧಿ ಪೂರೈಸಿ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ನಾನು ಮತ್ತು ನನ್ನ ಕಿರಿಯ ಮಿತ್ರ ನಬೀಲ್ ಸಂಪಾದಿಸಿ ನೆಲಸಿರಿ ಪ್ರಕಾಶನದಿಂದ ಹೊರತಂದಿದ್ದ “ಇಂದಿಗೂ ಬೇಕಾದ ಲೋಹಿಯಾ” ಪುಸ್ತಕವನ್ನು ಗಾಂಧಿ ಭವನದಲ್ಲಿ ನೀವು ನಿಮ್ಮ ಕೈಯಾರೆ ಬಿಡುಗಡೆ ಮಾಡಿದಿರಿ. ಆ ವೇದಿಕೆಯಲ್ಲಿ ಸಮಾಜವಾದಿ ಹಿನ್ನೆಲೆಯ ಮತ್ತೋರ್ವ ರಾಜಕಾರಣಿಯಾz ಕಾಗೋಡು ತಿಮ್ಮಪ್ಪನವರು ಸಹ ಇದ್ದರು. ನಿಮ್ಮಿಂದ ಆ ಪುಸ್ತಕವನ್ನು ಬಿಡುಗಡೆಗೊಳಿಸಲು ಬಹುಮುಖ್ಯ ಕಾರಣ ನೀವು ಸಮಾಜವಾದಿ ಹಾಗೂ ಲೋಹಿಯಾವಾದಿ ಎಂಬುದು. ಈ ಕಾರಣದಿಂದಲೇ ಕಾರ್ಯಕ್ರಮದ ರೂವಾರಿಯೂ ಆಗಿದ್ದ ಪ್ರೊ. ರವಿವರ್ಮಕುಮಾರ್ ನಿಮ್ಮಿಂದ ಬಿಡುಗಡೆಗೊಳಿಸಲು ಶ್ರಮ ಪಟ್ಟಿದ್ದರು.
2023 ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದು ಕಾಂಗ್ರೆಸ್ ಜಯಬೇರಿ ಭಾರಿಸಿ ನೀವು ಎರಡನೇ ಅವಧಿಗೆ ಮುಖ್ಯಮಂತ್ರಿಯಾದದ್ದು ಸಹಜವಾಗಿ ನನ್ನಂತವರಿಗೆ ಸಂತೋಷದ ಸಂಗತಿಯಾಗಿತ್ತು. ಈ ಅವಧಿಯಲ್ಲಿ ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪು ಹೊರಬಂದು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಏಕ ಸದಸ್ಯ ಆಯೋಗವನ್ನು ರಚಿಸಿ ವರದಿ ಪಡೆದು ಒಳ ಮೀಸಲಾತಿ ಜಾರಿಗೆ ಕ್ರಮಕೈಗೊಂಡಿದ್ದು ಖುಷಿ ಕೊಟ್ಟಿತ್ತು. ಆದರೆ ಆ ವರದಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸದೆ ಅದನ್ನು ಮಾರ್ಪಾಡು ಮಾಡಿ ಪರಿಶಿಷ್ಟ ಜಾತಿಯಲ್ಲಿಯೇ ಅತ್ಯಂತ ಹಿಂದುಳಿದ ಸಮುದಾಯಗಳೆಂದು ಗುರುತಿಸಿದ್ದ 49 ಅಲೆಮಾರಿ ಮತ್ತು 10 ಸೂಕ್ಷ್ಮ ಸಮುದಾಯಗಳೂ ಸೇರಿ 59 ಜಾತಿಗಳನ್ನು ಮುಂದುವರೆದ ತುಸು ಬಲಿಷ್ಟ ಎನ್ನಬಹುದಾದ ಜಾತಿಗಳಾದ ಲಂಬಾಣಿ, ಬೋವಿ, ಕೊರಚ, ಕೊರಮ ಜಾತಿಗಳೊಂದಿಗೆ ಪ್ರವರ್ಗ-ಸಿ ನಲ್ಲಿ ಸೇರಿಸಿದ್ದು ನಮಗೆ ಆಘಾತವನ್ನೇ ಉಂಟು ಮಾಡಿತ್ತು. ಆದರೆ ಅಲೆಮಾರಿ ಸಮುದಾಯದಿಂದ ಬಂದ ನನ್ನಂತವರು ನಿಮ್ಮ ಮೇಲಿನ ಭರವಸೆಯನ್ನು ಕಳೆದುಕೊಂಡಿರಲಿಲ್ಲ. ಹಾಗಾಗಿ ಅಲೆಮಾರಿ ಸಮುದಾಯದ ಮುಖಂಡರುಗಳೊಂದಿಗೆ ನಿಮ್ಮ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಾನೂ ಭಾಗಿಯಾಗಿದ್ದೆ. ಯಥಾ ಪ್ರಕಾರ ಒಂದು ಗಂಟೆ ಕಾಯಿಸಿದ ನಂತರ ಬಂದ ನೀವು, ನಿಮ್ಮ ಮೊದಲನೇ ಅವಧಿಯಲ್ಲಿ ಮಂತ್ರಿಯಾಗಿದ್ದ ಹೆಚ್. ಆಂಜನೇಯ ಕೊಟ್ಟಂತಹ ಸೀಬೆ ಹಣ್ಣನ್ನು ಕಡಿದು ತಿಂದು “ಚೆನ್ನಾಗಿಲ್ಲ” ಎಂದು ಪಕ್ಕಕ್ಕಿಟ್ಟು ಅಲೆಮಾರಿ ಮುಖಂಡರುಗಳೊಂದಿಗೆ ಮಾತುಕತೆ ಆರಂಭ ಮಾಡಿದ್ರಿ. ಎಲ್ಲರ ಮಾತುಗಳನ್ನು ಆಲಿಸಿದ ನೀವು "ಒಮ್ಮೊಮ್ಮೆ ರಾಜಕೀಯ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಒಳ ಮೀಸಲಾತಿ ವಿಚಾರದಲ್ಲಿ ರಾಜಕೀಯ ತೀರ್ಮಾನ ಮಾಡಿದ್ದೇನೆ. ಸ್ವಲ್ಪ ಕಾಲಾವಕಾಶ ಕೊಡಿ ಎಲ್ಲವೂ ಸರಿ ಹೋಗುತ್ತೆ, ಹೋರಾಟ-ಗೀರಾಟ ಮಾಡುವುದಕ್ಕೆ ಹೋಗಬೇಡಿ” ಎಂಬ ಮಾತುಗಳನ್ನಾಡಿ ಕಳುಹಿಸಿಕೊಟ್ಟಿದ್ರಿ. ಅದಾದ ಮೇಲೆ ಅಲೆಮಾರಿ ಸಮುದಾಯಗಳ ಹೋರಾಟ ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆಯಿತು. ಬೆಂಗಳೂರಿನಲ್ಲಿ ಮರ‍್ನಾಲ್ಕು ತಿಂಗಳು ಟೆಂಟು ಹಾಕಿಕೊಂಡು ಹೋರಾಟ ಮಾಡಿದರೂ ನೀವಾಗಲಿ, ನಿಮ್ಮ ಸರ್ಕಾರವಾಗಲಿ ಸೊಪ್ಪು ಹಾಕದ ಕಾರಣ ಅಲೆಮಾರಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು ಮತ್ತು ಸೋದರ ಸಮುದಾಯಗಳ ಸಿಟ್ಟಿಗೂ ಒಳಗಾಗಬೇಕಾಯಿತು.
ಇದೇ ಹೊತ್ತಿನಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.56 ಕ್ಕೆ ಏರಿಸಿದ್ದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯಲ್ಲಿ ತಡೆಯಾಜ್ಞೆ ನೀಡಲಾಗಿದ್ದರಿಂದ ಪರಿಶಿಷ್ಟ ಜಾತಿಗೆ ಶೇ.15 ರಷ್ಟು ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಸೃಷ್ಟಿಯಾಯಿತು. ಆಗ ಪರಿಶಿಷ್ಟ ಜಾತಿಗಳಲ್ಲಿಯೇ ಅತ್ಯಂತ ಹಿಂದುಳಿದಿರುವ, ಎಲ್ಲ ಬಗೆಯ ಅವಕಾಶಗಳಿಂದ ವಂಚಿತರಾಗಿರುವ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪನ್ನಾಗಿ ಮಾಡಿ ಕನಿಷ್ಟ ಶೇ.1 ರಷ್ಟು ಒಳಮೀಸಲಾತಿ ಒದಗಿಸುವ ಸುವರ್ಣಾವಕಾಶ ನಿಮ್ಮ ಕೈಯಲ್ಲಿತ್ತು. ಆದರೆ ನೀವು ಮತ್ತೆ 59 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ-ಸಿ ನಲ್ಲಿ ಮುಂದುವರೆದ ಬೋವಿ, ಲಂಬಾಣಿ ಮತ್ತಿತರ ಸಮುದಾಯಗಳೊಂದಿಗೆ ಸೇರಿಸಿ ಶೇ.4.5 ರಷ್ಟು ಒಳಮೀಸಲಾತಿ ಕಲ್ಪಿಸಿ ಅದರಲ್ಲಿ ಮೂಗಿಗೆ ತುಪ್ಪ ಸವರುವಂತೆ ಅತ್ಯಂತ ಹಿಂದುಳಿದ 59 ಸಮುದಾಯಗಳಿಗೆ "ಶೇ.4.5 ರಲ್ಲಿ ಶೇ.20"ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ ಎಂದು ಹೇಳಿರುತ್ತೀರಿ. ಇದೊಂದು ರೀತಿ ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳಲು ಮಾಡಿರುವ ಉಪಾಯವೇ ಹೊರತು ಅಲೆಮಾರಿಗಳ ಮೇಲಿನ ಕಾಳಜಿಯಿಂದಾಗಲೀ ಅಥವಾ ಸಾಮಾಜಿಕ ನ್ಯಾಯದ ಬದ್ಧತೆಯಿಂದಾಗಲೀ ಮಾಡಿರುವ ವರ್ಗೀಕರಣ ಅಲ್ಲವೇ ಅಲ್ಲ. ಇದು ದಲಿತರಲ್ಲಿನ ಬಹುಸಂಖ್ಯಾತ ರಾಜಕಾರಣವನ್ನು ಓಲೈಸಲು ಮಾಡಿದ ಕ್ರಮ ಮತ್ತು ಇದು ಮೀಸಲಾತಿ ಹಾಗೂ ಒಳಮೀಸಲಾತಿಯ ಪರಿಕಲ್ಪನೆಯನ್ನೇ ತಲೆಕೆಳಗು ಮಾಡಿ ಸಾಮಾಜಿಕ ನ್ಯಾಯವನ್ನು ಬುಡ ಮೇಲು ಮಾಡುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ನಡೆ.
ಇಂತಹ ಸಮಯದಲ್ಲಿ ಡಾ. ರಾಮ ಮನೋಹರ್ ಲೋಹಿಯಾ ಇದ್ದಿದ್ದರೆ ಧ್ವನಿ ಇಲ್ಲದ ಅಲೆಮಾರಿಗಳ ಪರ ನಿಲ್ಲುತ್ತಿದ್ದರು. ತನ್ನ ಹೆಸರೇಳಿಕೊಂಡು ರಾಜಕೀಯ ಪ್ರವೇಶ ಮಾಡಿದ ತಮ್ಮ ಶಿಷ್ಯನ ಈ ನೀತಿಯನ್ನು ಅತ್ಯುಗ್ರವಾಗಿ ಖಂಡಿಸುತ್ತಿದ್ದರು ಮತ್ತು ಬೀದಿಗಿಳಿದು ಹೋರಾಟ ಮಾಡಿ ನೀವು ರಾಜೀನಾಮೆ ಕೊಡುವಂತೆ ಪಟ್ಟು ಹಿಡಿಯುತ್ತಿದ್ದರು. ದುರಾದೃಷ್ಟಾವಶಾತ್ ಇಂದು ಅಂತಹ ನೇತಾರ ನಮ್ಮೊಂದಿಗಿಲ್ಲ. "ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲು ಬದ್ಧ" ಎಂದು ಹೇಳಿಕೊಳ್ಳುತ್ತಲೇ ಪರಿಶಿಷ್ಟ ಜಾತಿಗಳಲ್ಲಿಯೇ ಅತ್ಯಂತ ಹಿಂದುಳಿದ ಸಮುದಾಯಗಳಾದ ಅಲೆಮಾರಿ ಸಮುದಾಯಗಳ ಅವಕಾಶಗಳನ್ನು ಕಸಿದುಕೊಂಡು ಶಿಕ್ಷಣ ಕ್ಷೇತ್ರ ಮತ್ತು ಸರ್ಕಾರಿ ಸೇವೆಗಳಲ್ಲಿ ಅವರ ಪ್ರಾತಿನಿಧ್ಯವನ್ನು ಕುಂಠಿತಗೊಳಿಸುವ ವ್ಯವಸ್ಥಿತ ಆದೇಶವನ್ನು ನಿಮ್ಮ ನೇತೃತ್ವದ ಸರ್ಕಾರ ಮಾಡಿದೆ. ಕರ್ನಾಟಕದ ಪ್ರಜ್ಙಾವಂತ ಮನಸ್ಸುಗಳು ಒಕ್ಕೊರಲಿನಿಂದ "ಇದು ಅಲೆಮಾರಿಗಳಿಗೆ ಮಾಡಿದ ಅನ್ಯಾಯ"ಎಂದು ಖಂಡಿಸಿದರೂ ನಿಮ್ಮ ನಡೆಯಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯವಾಗಲಿಲ್ಲ. ಹೋರಾಟದ ರಾಜಕಾರಣದಿಂದ ಬಂದು ಅಧಿಕಾರ ರಾಜಕಾರಣದ ಕಡೆಗಿನ ನಿಮ್ಮ ನಡಿಗೆ ನಿಮ್ಮೊಳಗಿನ ಸೈದ್ದಾಂತಿಕ ಬದ್ದತೆಯನ್ನು ಪ್ರಶ್ನಿಸುವಂತೆ ಮಾಡಿದೆ ಮತ್ತು ಚರಿತ್ರೆಯು ನಿಮ್ಮನ್ನು ರಾಜಕಾರಣಕ್ಕಾಗಿ ಅಲೆಮಾರಿಗಳ ಸಾಂವಿಧಾನಿಕ ಹಕ್ಕುಗಳನ್ನು ತಪ್ಪಿಸಿದ ಮುಖ್ಯಮಂತ್ರಿ ಎಂದೇ ಗುರುತಿಸುತ್ತದೆ.
ಈಗ ಹೇಳಿ, "ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು ನಮ್ಮ ಧ್ಯೇಯ" ಎಂದು ತುಮಕೂರಿನ ಸಾಧನಾ ಸಮಾವೇಶದಲ್ಲಿ ಮಾತನಾಡಿದ ನೀವು ಅವಕಾಶವಂಚಿತರಾದ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸದೇ ಸಾಮಾಜಿಕ ಅನ್ಯಾಯ ಮಾಡಿ ಅವಕಾಶ ವಂಚಿತರನ್ನಾಗಿ ಮಾಡಿದ್ದು ಎಷ್ಟು ಸರಿ? ಇದು ಎಲ್ಲರಿಗೂ ಅವಕಾಶಗಳನ್ನು ಕಲ್ಪಿಸಿದಂತೆ ಹೇಗಾಗುತ್ತದೆ?. ಸಂವಿಧಾನದ ಆಶಯವಾದ ಸಮಾನತೆಯನ್ನು ಸಾಧಿಸಿದಂತಾಗುತ್ತದೆಯೇ?. ಇದು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಹಿಡಿದಿರುವ ನೀವು ಸಂವಿಧಾನಕ್ಕೆ ದ್ರೋಹ ಎಸಗುವಂತಹ ಮಾತುಗಳನ್ನು ಆಡಿದಂತೆ ಆಗುವುದಿಲ್ಲವೇ?.
ನಿಮ್ಮಿಂದ ಇಂತಹದೊಂದು ನಡೆಯನ್ನು ನಿರೀಕ್ಷಿಸಿರಲಿಲ್ಲ. ಹಾಗಾಗಿಯೇ ನನಗೆ, ನನ್ನಂತ ಬಹು ಜನರಿಗೆ ನೋವಾಗಿದೆ ಮತ್ತು ಆಘಾತವಾಗಿದೆ. ಪದೇ ಪದೇ ಸಂವಿಧಾನ ಮತ್ತು ಸಮಾನತೆಯ ಮಾತುಗಳನ್ನಾಡುವ ನಿಮಗೆ ನಮ್ಮಂತವರ ಸಂಕಟ ಅರ್ಥವಾಗಬಹುದೇನೋ ಎಂದು ಈ ಪತ್ರ ಬರೆದಿದ್ದೇನೆ. ಇದನ್ನು ಬರೆಯುವಾಗ ನಾನು ಎಲ್ಲಿಯಾದರೂ ದುಡುಕಿದ್ದರೆ ಅಥವಾ ನನ್ನ ಮಾತುಗಳು ಅಧಿಕ ಪ್ರಸಂಗಿತನದಿಂದ ಕೂಡಿವೆ ಅನ್ನಿಸಿದರೆ ಕ್ಷಮೆಯಿರಲಿ.
ಇಂತಿ ನಮಸ್ಕಾರಗಳು.
ಎಚ್.ವಿ.ಮಂಜುನಾಥ
bevarahani1