ಆರ್‍‌ಬಿಎಸ್‌ಕೆ ಅಕ್ರಮ: ರೂ. 23.30 ಕೋಟಿ ಪಾವತಿಗೆ  ಒತ್ತಡ

ಅನುದಾನ-ಅನುಮೋದನೆ ಇಲ್ಲದೇ ಇದ್ದಾಗಲೂ ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆ ?

ಆರ್‍‌ಬಿಎಸ್‌ಕೆ ಅಕ್ರಮ: ರೂ. 23.30 ಕೋಟಿ ಪಾವತಿಗೆ  ಒತ್ತಡ

    ಬೆಂಗಳೂರು:  ಸರ್ಕಾರದ ಅನುಮೋದನೆಯಿಲ್ಲದೇ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‍‌ಬಿಎಸ್‌ಕೆ) ಯೋಜನೆ ವ್ಯಾಪ್ತಿಯನ್ನು ವಿಸ್ತರಣೆ ಮಾಡಿರುವುದು ಮತ್ತು ಅನುದಾನವಿಲ್ಲವಿದ್ದರೂ ಹೆಚ್ಚುವರಿ ಸಂಖ್ಯೆಯ ಚಿಕಿತ್ಸೆಗಳಿಗೆ ಅಂದಾಜು 23.30 ಕೋಟಿ ರು ವೆಚ್ಚ ಮಾಡಿರುವ ಹಗರಣವನ್ನು ದಿ ಫೈಲ್‌ ನ್ಯೂಸ್‌ ಪೋರ್ಟಲ್‌  ಬೆಳಕಿಗೆ ತಂದಿದೆ.

   ಸಿದ್ದರಾಮಯ್ಯ ಅವರು  ಮುಖ್ಯಮಂತ್ರಿಯಾಗಿದ್ದ  ಮೊದಲ ಅವಧಿಯ ಸಂದರ್ಭದಲ್ಲೇ  ಈ ಹಗರಣ ನಡೆದಿತ್ತು. ಆದರೆ ಆಗ ಈ ಹಗರಣವನ್ನು ತನಿಖೆಗೊಳಪಡಿಸದೇ  ಮುಚ್ಚಿಡಲಾಗಿತ್ತು.   ಆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೂ ಈ ಹಗರಣ ಮುಂದುವರೆದಿತ್ತು.

    ಸೂಕ್ತ ಅನುದಾನವಿಲ್ಲದೇ ಇದ್ದರೂ ಸರ್ಕಾರದ ಅನುಮೋದನೆಯಿಲ್ಲದೇ ಮತ್ತು ಹೆಚ್ಚುವರಿ ಚಿಕಿತ್ಸೆಗಳ ಹೆಸರಿನಲ್ಲಿ 23.30 ಕೋಟಿ ರು.ಗಳ ವೆಚ್ಚವನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ  ಪಾವತಿಸುವ ಸಂಬಂಧ ಪ್ರಸ್ತಾವವು  ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ವಿಶೇಷ. ಅಲ್ಲದೇ ಬಾಕಿ ಇರುವ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸಿ, ಇಲ್ಲವಾದಲ್ಲಿ ಕೋರ್ಟ್‌ ಮೊರೆ ಹೋಗಲಾಗುವುದು ಎಂದು ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿವೆ. ಪಾವತಿ ಬಗ್ಗೆ 10 ವರ್ಷಗಳಾದರೂ ಯಾವುದೇ ನಿರ್ಧಾರ ಕೈಗೊಂಡಿಲ್ಲ .ಈ ಹಣವನ್ನು ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ ಭರಿಸಬೇಕೇ ಅಥವಾ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌  ಪಾವತಿಸಬೇಕೇ ಎಂಬ ಸ್ಪಷ್ಟತೆಯಿಲ್ಲ.

    ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಬಳಿ ಯಾವುದೇ ನಿಧಿ ಲಭ್ಯವಿಲ್ಲ. ಹೀಗಾಗಿ ಖಾತೆಗಳ ಹೊಂದಾಣಿಕೆ ಪ್ರಕ್ರಿಯೆ ನಡೆಸಲು ಚಿಂತಿಸುತ್ತಿದೆ. ಅಧಿಕಾರಿಗಳ ಮಟ್ಟದಲ್ಲಿ ಸರಣಿ ಸಭೆಗಳನ್ನು  ನಡೆಸ ಲಾಗುತ್ತಿದೆ.   ಅಲ್ಲದೆ,  ಹೆಚ್ಚುವರಿ ಅನುದಾನಕ್ಕೆ ಆರ್ಥಿಕ ಇಲಾಖೆ ಕದ ತಟ್ಟಲು ಚಿಂತನೆ ನಡೆಸಲಾಗುತ್ತಿದೆ. ಇಡೀ  ಹಗರಣಕ್ಕೆ ಸಂಬಂಧಿಸಿದಂತೆ 38 ಪುಟಗಳನ್ನೊಳಗೊಂಡ ಕಡತವನ್ನು ಪಡೆದುಕೊಂಡು ವಿಸ್ತೃತ ವರದಿಯನ್ನು  ದಿ ಫೈಲ್‌ ಪ್ರಕಟಿಸಿದೆ.

ಬಿಪಿಎಲ್‌-ಎಪಿಎಲ್‌  ವಿವರ

      ಒಟ್ಟು 4,969 ಪ್ರಕರಣಗಳಲ್ಲಿ 2,424 ಪ್ರಕರಣಗಳು ಬಿಪಿಎಲ್ ವರ್ಗಕ್ಕೆ ಸೇರಿದ್ದವು. ಇದರಲ್ಲಿ ಸುಮಾರು 1,246 ಪ್ರಕರಣಗಳನ್ನು ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕ ಪ್ರೊಸೀಜರ್‌  ಕೋಡ್‌ಗಳಿಗೆ    ನೇರವಾಗಿ ಹೊಂದಿಸಿತ್ತು. ಮತ್ತು 1,125 ಪ್ರಕರಣಗಳನ್ನು ಇದೇ ರೀತಿಯಲ್ಲಿ ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕ ಪ್ರೊಸೀಜರ್‌  ಕೋಡ್‌ಗಳನ್ನು   ಹೊಂದಿಸಿತ್ತು. ಅಲ್ಲದೇ, ಇನ್ನುಳಿದ 53 ಪ್ರಕರಣಗಳನ್ನು ಹೊಂದಾಣಿಕೆ ಮಾಡಿರಲಿಲ್ಲ. ಹಾಗೆಯೇ 2,545 ಬಿಪಿಎಲ್ ಅಲ್ಲದ ವರ್ಗಗಳಲ್ಲಿ ಸುಮಾರು 1,690 ಪ್ರಕರಣಗಳನ್ನು ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕದ ಕಾರ್ಯವಿಧಾನ ಕೋಡ್‌ಗಳಿಗೆ ನೇರವಾಗಿ ಹೊಂದಿಸಲಾಗಿತ್ತು.  ಮತ್ತು 809 ಪ್ರಕರಣಗಳನ್ನು ಇದೇ ರೀತಿಯ ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕದ ಪ್ರೊಸೀಜರ್‌ ಕೋಡ್‌ಗಳಿಗೆ ಹೊಂದಿಸಿತ್ತು. ಮತ್ತು 46 ಪ್ರಕರಣಗಳನ್ನು ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕದ ಕಾರ್ಯವಿಧಾನದೊಂದಿಗೆ ಹೊಂದಾಣಿಕೆ ಮಾಡಿತ್ತು.

     ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ 883 ಕಾರ್ಯವಿಧಾನದಲ್ಲಿ 349  ಪ್ರೊಸೀಜರ್‌ಗಳನ್ನಷ್ಟೇ ಬಳಸಲಾಗಿತ್ತು. ಇದರ ವೆಚ್ಚದ ಮೊತ್ತ 21.49 ಕೋಟಿ ರು ಗಳಷ್ಟಿತ್ತು. ಇದಲ್ಲದೆ 349 ಪ್ರೊಸೀಜರ್‌ಗಳಲ್ಲಿ, 275 ಪ್ರೊಸೀಜರ್‌ಗಳನ್ನು ( ಶೇ.79) ನೇರವಾಗಿ ಆಯುಷ್ಮಾನ್‌ ಭಾರತ್‌, ಪಿಎಂಜೆವೈ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಪ್ಯಾಕೇಜ್‌ ಅಡಿಯಲ್ಲಿ ಮ್ಯಾಪ್‌ ಮಾಡಲಾಗಿತ್ತು. ಇದರ ವೆಚ್ಚದ ಮೊತ್ತ 13.01 ಕೋಟಿಯಷ್ಟಿತ್ತು. ಈ ಪ್ರೊಸೀಜರ್‌ಗಳು ಆಯುಷ್ಮಾನ್‌ ಭಾರತ್‌, ಪಿಎಂಜೆವೈ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಪ್ಯಾಕೇಜ್‌ಗೆ ಸಂಬಂಧಿಸಿದ್ದವು. ಇದಕ್ಕಾಗಿ ಆಯವ್ಯಯದಲ್ಲಿ 8.43 ಕೋಟಿ ರು ಒದಗಿಸಿತ್ತು. ಒಟ್ಟು 330 ಕಾರ್ಯವಿಧಾನಗಳಿಗೆ 21.44 ಕೋಟಿ ರುಪಾಯಿ ಬಳಕೆಯಾಗಿತ್ತು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪ್ರತಿಪಾದಿಸಿರುವುದು ಕಂಡು ಬಂದಿದೆ.

    ಸರ್ಕಾರಿ ಆಸ್ಪತ್ರೆಗಳಲ್ಲಿ , .ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ಒಟ್ಟಾರೆ 538 ಪ್ರಕರಣಗಳಿಗೆ 3,24,36,525 ರು ಅನುಮೋದನೆಯಾಗಿತ್ತು.  ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟಾರೆ 3,436 ಪ್ರಕರಣಗಳಲ್ಲಿ 16,86, 74, 570 ರು ಅನುಮೋದನೆ ದೊರೆತಿತ್ತು. ಈ ಎಲ್ಲಾ ಮಾಹಿತಿಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಸರ್ಕಾರಕ್ಕೆ ನೀಡಿತ್ತು. ಆದರೆ ಚಿಕಿತ್ಸೆ ನೀಡಿದ್ದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ನೀಡಿರಲಿಲ್ಲ. ಬಾಕಿ ಇರುವ 23.35 ಕೋಟಿ ರು ಮೊತ್ತವನ್ನು ಪಾವತಿಸಲು ಸರ್ಕಾರಕ್ಕೆ ಕಡತ ಸಲ್ಲಿಕೆಯಾಗಿತ್ತು. ಈ ಏಕ- ಕಡತವನ್ನು ಪರಿಶೀಲನೆ ನಡೆಸಿದ್ದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕರು 2024ರ ಏಪ್ರಿಲ್‌ 20, ಮೇ 3, ಜೂನ್‌ 24 ಮತ್ತು ಆಗಸ್ಟ್‌ 20ರಂದು ಸಭೆ ನಡೆಸಿದ್ದರು.

    ಸರ್ಕಾರದ ಅನುಮೋದನೆಯಿಲ್ಲದೇ ಮತ್ತು ಅನುದಾನವಿಲ್ಲದಿದ್ದರೂ ವೆಚ್ಚ ಮಾಡಿರುವುದನ್ನು ಎನ್‌ಎಚ್‌ಎಂ ಸಭೆ ಪರಿಶೀಲನೆ ವೇಳೆ ಪತ್ತೆ ಹಚ್ಚಲಾಗಿತ್ತು. ಅಲ್ಲದೇ ಅನುದಾನವನ್ನು ಎನ್‌ಎಚ್‌ಎಂನಿಂದ ಸುವರ್ಣ ಆರೋಗ್ಯ ಟ್ರಸ್ಟ್‌ಗೆ ಬಿಡುಗಡೆ ಮಾಡಲಾಗಿದೆ, ಯಾವುದೇ ಬಾಕಿ ಇರುವುದಿಲ್ಲ ಎಂದೂ ಸರ್ಕಾರಕ್ಕೆ ಎನ್‌ಎಚ್‌ಎಂನ ವ್ಯವಸ್ಥಾಪಕ ನಿರ್ದೇಶಕರು ವರದಿ ಸಲ್ಲಿಸಿದ್ದರು. ಸುವರ್ಣ ಆರೋಗ್ಯ ಟ್ರಸ್ಟ್‌, 2017-18ರ ಅವಧಿಯಲ್ಲಿ ಎಂಒಯುಗಿಂತಲೂ ಹೆಚ್ಚಿನ ಪ್ರೊಸೀಜರ್‌ಗಳನ್ನು ಸಕ್ರಿಯಗೊಳಿಸಿದ್ದರು ಎಂಬ ಅಂಶವೂ ಈ ವರದಿಯಲ್ಲಿತ್ತು. ಅಲ್ಲದೇ ಸರ್ಕಾರದ ಅನುಮೋದನೆಯಿಲ್ಲದೇ ಆರ್‍‌ಬಿಎಸ್‌ಕೆ ಯೋಜನೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಯೋಜನೆಯ ವಿನ್ಯಾಸವನ್ನೂ ಮೀರಿದ ಹೆಚ್ಚುವರಿ ಸಂಖ್ಯೆಯ ಚಿಕಿತ್ಸೆ ನೀಡಲಾಗಿತ್ತು. ಇದಕ್ಕೆ ಅನುದಾನವಿರಲಿಲ್ಲ. ಆದರೂ ಚಿಕಿತ್ಸೆ ನೀಡಿ ವೆಚ್ಚ ಮಾಡಲಾಗಿದೆ. ಇವರುಗಳ ವಿರುದ್ಧ ವಿಚಾರಣೆಯನ್ನು ನಡೆಸಲು ಪರಿಗಣಿಸಬಹುದು ಎಂದು ಎನ್‌ಎಚ್‌ಎಂನ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

      ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌, ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿರುವ ಪ್ರಕಾರ ಈ ಬಾಕಿ ಮೊತ್ತವನ್ನು ಪಾವತಿಸಲು ಯಾವುದೇ ನಿಧಿ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಬಾಕಿ ಇರುವ 23.30 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

      ಹೆಚ್ಚುವರಿ ಅನುದಾನ ಕೋರುವುದು ಅಥವಾ ಪ್ರಸ್ತುತ ದಿನದವರೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಉಳಿತಾಯವಾಗಿರುವ ಬಡ್ಡಿ ಮೊತ್ತ 32.00 ಕೋಟಿ ರು.ಗಳಿಂದ ಈ ಮೊತ್ತವನ್ನು ಬಿಡುಗಡೆ ಮಾಡಬಹುದು ಎಂದು ಕೋರಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.2015-16ರಿಂದ 2018-19ರವರೆಗೆ ಸರ್ಕಾರದ ಅನುಮೋದನೆಯಿಲ್ಲದೇ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‍‌ಬಿಎಸ್‌ಕೆ) ಯೋಜನೆ ವ್ಯಾಪ್ತಿಯ ವಿಸ್ತರಣೆ ಮಾಡಿರುವುದು ಮತ್ತು ಅನುದಾನವಿಲ್ಲವಿದ್ದರೂ ಹೆಚ್ಚುವರಿ ಸಂಖ್ಯೆಯ ಚಿಕಿತ್ಸೆಗಳಿಗೆ ವೆಚ್ಚವಾಗಿದ್ದ ಅವಧಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಒಟ್ಟು ಒಟ್ಟು 10 ಮಂದಿ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದರು. ಈ ಪೈಕಿ ಐಎಎಸ್‌ ಅಧಿಕಾರಿಯೊಬ್ಬರೂ ಸಹ ಸೇರಿದ್ದಾರೆ.

      ವಿಶೇಷವೆಂದರೇ ಈ ಪೈಕಿ ಕೆಲವರು ಗುತ್ತಿಗೆ ಆಧಾರದ ಮೇಲೆ ನೇಮಕಾತಿಯಾಗಿದ್ದರು. ಮತ್ತು ಅವರ ಗುತ್ತಿಗೆ ಅವಧಿಯೂ ಮುಕ್ತಾಯಗೊಂಡಿದೆ. ಒಬ್ಬ ಐಎಎಸ್‌ ಅಧಿಕಾರಿ ಕೇರಳ ಸರ್ಕಾರಕ್ಕೆ ವರ್ಗಾವಣೆಯಾಗಿದ್ದಾರೆ. ಇನ್ನು ಕೆಲವು ವಯೋ ನಿವೃತ್ತಿ ಹೊಂದಿದ್ದಾರೆ.

 

ಏನಿದು ಆರ್‌ ಬಿ ಎಸ್‌ ಕೆ ?

     ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‍‌ಬಿಎಸ್‌ಕೆ) ವು, ಕೇಂದ್ರ ಸರ್ಕಾರದ ಯೋಜನೆಯಾಗಿದೆ. 0 ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿನ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಉಚಿತ ಚಿಕಿತ್ಸೆ ಮತ್ತು ಅನುಸರಣಾ ಆರೈಕೆ ಒದಗಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ. ಜನನ ಸಮಯದಲ್ಲಿನ ದೋಷಗಳು, ನ್ಯೂನತೆಗಳು, ರೋಗಗಳು, ಬೆಳವಣಿಗೆಯಲ್ಲಿನ ವಿಳಂಬ ಕುರಿತು ತಪಾಸಣೆಯೂ ಈ ಯೋಜನೆಯಲ್ಲಿ ಸೇರಿದೆ. ಆರಂಭಿಕ ಪತ್ತೆ, ಉಚಿತ ಚಿಕಿತ್ಸೆ, ನಿರ್ವಹಣೆ, ಶಸ್ತ್ರ ಚಿಕಿತ್ಸೆಗಳೂ ಈ ಯೋಜನೆ ವ್ಯಾಪ್ತಿಯಲ್ಲಿವೆ.ಈ ಯೋಜನೆಯನ್ನು ಕರ್ನಾಟಕದಲ್ಲಿ 2015ರಿಂದ 2019ನೇ ಸಾಲಿನವರೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (SAST) ಮೂಲಕ ಅನುಷ್ಠಾನಗೊಳಿಸಲಾಗಿತ್ತು. ಒಪ್ಪಂದದ ಪ್ರಕಾರ ಕೇವಲ 148 ಚಿಕಿತ್ಸಾ ವಿಧಾನಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕಿತ್ತು.

    ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಹಂತದಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ 538 ಚಿಕಿತ್ಸೆ ವಿಧಾನ, ಯಶಸ್ವಿನಿ ಯೋಜನೆಯ 345 ಚಿಕಿತ್ಸಾ ವಿಧಾನಗಳನ್ನು ಆರ್‍‌ಬಿಎಸ್‌ಕೆ ಯೋಜನೆಯ ಆನ್‌ಲೈನ್‌ ವರ್ಟಿಕಲ್‌ನಲ್ಲಿ ಸೇರಿಸಿ ಅನುಷ್ಠಾನಗೊಳಿಸಿತ್ತು. ಒಟ್ಟಾರೆ 15,532 ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಎಲ್ಲಾ ಚಿಕಿತ್ಸೆಗಳ ವೆಚ್ಚದ ಮೊತ್ತವು ಒಟ್ಟಾರೆ 80.17 ಕೋಟಿ ರು ಗಳಾಗಿತ್ತು

     ಆದರೆ ಈ ಪೈಕಿ 4,969 ಪ್ರಕರಣಗಳಿಗೆ ಆರ್‍‌ಬಿಎಸ್‌ಕೆ ಯೋಜನೆಯಡಿ ಅನುದಾನ ಬಿಡುಗಡೆಯಾಗಿರಲಿಲ್ಲ. ಆದರೆ ಈ 4,969 ಪ್ರಕರಣಗಳ ಪೈಕಿ 4,870 ಪ್ರಕರಣಗಳ ಚಿಕಿತ್ಸೆಗಳಿಗೆ 21,44, 59,329 ರು.ಗಳ ವೆಚ್ಚಕ್ಕೆ ಅನುಮೋದನೆ ದೊರೆತಿತ್ತು.ಪೀಡಿಯಾಟ್ರಿಕ್‌ ಸರ್ಜರಿ, ಜನರಲ್‌ ಮೆಡಿಸಿನ್‌, ಕಾರ್ಡಿಯಾಲಜಿ, ಜನರಲ್‌ ಸರ್ಜರಿ, ಮೆಡಿಕಲ್‌ ಅಂಕಾಲಜಿ, ಇಎನ್‌ಟಿ, ನ್ಯೂರೋ ಸರ್ಜರಿ, ಸುಟ್ಟ ಗಾಯಗಳು, ಆರ್ಥೋಪೆಡಿಕ್ಸ್‌, ರೇಡಿಯೇಷನ್‌ ಆಂಕಾಲಜಿ, ಆಫ್ತಾಮಾಲಜಿ, ಸರ್ಜಿಕಲ್‌ ಆಂಕಾಲಜಿ, ಅಬ್ಸೆಟ್ರಿಕ್ಸ್‌ ಮತ್ತು ಗೈನೋಕಾಲಜಿ, ದಂತ ಚಿಕಿತ್ಸೆಯೂ ಈ ಪಟ್ಟಿಯಲ್ಲಿ ಸೇರಿತ್ತು. ಈ ಎಲ್ಲಾ ಚಿಕಿತ್ಸೆಗಳಿಗೆ ವೆಚ್ಚ ಪಾವತಿಸುವ ಸಂಬಂಧದ ಕಾರ್ಯವಿಧಾನಗಳು ಹೊಂದಿಕೆಯಾಗಿದ್ದವು

     ಆದರೆ ಇನ್ನುಳಿದ 99 ಚಿಕಿತ್ಸೆಗಳಿಗೆ ವೆಚ್ಚ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನಗಳು ಹೊಂದಿಕೆಯಾಗಿರಲಿಲ್ಲ. ಆದರೂ ವೆಚ್ಚಕ್ಕೆ ಅನುಮೋದನೆ ದೊರೆತಿತ್ತು. ಇದರ ಮೊತ್ತ 5,34,290 ರು ಆಗಿತ್ತು. ಇಎನ್‌ಟಿ ವಿಭಾಗದಲ್ಲಿ 55 ಪ್ರಕರಣ, ಪಾಲಿಟ್ರಾಮಾ 15, ಜನರಲ್‌ ಮೆಡಿಸಿನ್‌ 8, ದಂತ 6, ಒಬ್ಸಟ್ರಿಕ್ಸ್‌ ಮತ್ತು ಗೈನೋಕಾಲಾಜಿ 6, ಪೀಡಿಯಾಟ್ರಿಕ್ಸ್‌ ಸರ್ಜರಿ 6, ಇನ್ವೆಸ್ಟಿಗೇಷನ್ಸ್‌ 2, ಜೆನಿಟೋ ಯೂರಿನೆರಿ ಸರ್ಜರಿ 1 ಪ್ರಕರಣಗಳು ಈ ಪಟ್ಟಿಯಲ್ಲಿದ್ದವು

    ಮತ್ತೊಂದು ವಿಶೇಷವೆಂದರೇ ಇದರಲ್ಲಿ ಕೆಲವು ಪ್ರಕರಣಗಳು ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕ ಯೋಜನೆಯೊಂದಿಗೂ ಸೇರಿದ್ದವು. ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿಯಲ್ಲಿ 530, ಮತ್ತು 345 ದ್ವಿತೀಯ ಹಂತದ ಕಾರ್ಯವಿಧಾನಗಳು ಯಶಸ್ವಿನಿ ಯೋಜನೆಯಲ್ಲಿ ಸೇರಿತ್ತು.ಆ ನಂತರ ಈ ಎಲ್ಲ ಯೋಜನೆಗಳನ್ನು  ವಿಲೀನಗೊಳಿಸಿದ್ದ ಸರ್ಕಾರವು, 883 ಕಾರ್ಯವಿಧಾನಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಆರ್‍‌ಬಿಎಸ್‌ಕೆ ಯೋಜನೆಯನ್ನು ಜಾರಿಗೆ ತಂದಿತ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಜಾರಿಗೊಳಿಸಿದ್ದ ಈ ಎರಡು ಯೋಜನೆಗಳ ಹೊರಗೆ ಶ್ರವಣ ಯಂತ್ರ ಅಳವಡಿಕೆ  (ಕಾಕ್ಲಿಯರ್ ಇಂಪ್ಲಾಂಟ್) ಸರ್ಜರಿ ಎವಿ ಥೆರಪಿ ಕಾರ್ಯವಿಧಾನವೂ ಸೇರಿತ್ತು.

 

ಹೆಚ್ಚುವರಿ ವೆಚ್ಚ ಮಾಡಿದವರು !

    ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಡಾ ಬೋರೇಗೌಡ (ಗುತ್ತಿಗೆ ಆಧಾರದ ಮೇಲೆ ನೇಮಕಾತಿ), ಐಎಎಸ್‌ ಡಾ ರತನ್‌ ಕೇಲ್ಕರ್‍‌ (ಕೇರಳಕ್ಕೆ ವರ್ಗಾವಣೆ), ಎನ್‌ ಟಿ ಅಬ್ರೂ (ವಯೋ ನಿವೃತ್ತಿ) ಕಾರ್ಯಕಾರಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಹಾಗೆಯೇ ನಿರ್ದೇಶಕರ ಹುದ್ದೆಯಲ್ಲಿ (ಕಾರ್ಯಾಚರಣೆ) ಎಸ್‌ ಆರ್‍‌ ನಾಯಕ್‌ (ಗುತ್ತಿಗೆ), ಡಾ ಬಿ ಮಂಜುನಾಥ್‌ (ಗುತ್ತಿಗೆ), ಡಾ ರಘುನಂದನ್‌ ಕೆ ಆರ್‍‌ (ವಯೋ ನಿವೃತ್ತಿ) ಕಾರ್ಯನಿರ್ವಹಿಸಿದ್ದರು.

    ವೈದ್ಯಕೀಯ ನಿರ್ವಹಣೆ ವಿಭಾಗದಲ್ಲಿ ಡಾ ಸುಧಾ ಚಂದ್ರಶೇಖರ್‍‌ ( ಗುತ್ತಿಗೆ), ಡಾ ಬಿ ಮಂಜುನಾಥ್‌, ಹಣಕಾಸು ವಿಭಾಗದಲ್ಲಿ ಹಾಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಚ್‌ ಬಿ ಪಾರ್ವತಿ ಮತ್ತು ಶಶಿಧರ್‍‌ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

    ಇದೇ ಪ್ರಕರಣದ ಕುರಿತು ಮಹಾಲೇಖಪಾಲರು ಮತ್ತು ಅಕೌಂಟೆಂಟ್‌ ಜನರಲ್‌ ಅವರು ಆಕ್ಷೇಪಣೆ ವ್ಯಕ್ತಪಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಎಲ್ಲಾ ಅಂಶಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.

 

56.88 ಕೋಟಿ ರೂಪಾಯಿ ನಷ್ಟ

    ಆರ್‌ಬಿಎಸ್‌ಕೆ ಯೋಜನೆಯ ನಿರ್ವಹಣೆಯ ಕುರಿತು ಸಿಎಜಿಯೂ ಸಹ ಮೌಲ್ಯಮಾಪನ ಮಾಡಿತ್ತು. ಈ ವೇಳೆ ಯೋಜನೆಯ ಹಣಕಾಸಿನ ಮೇಲ್ವಿಚಾರಣೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸಿತ್ತು. ಚಿಕಿತ್ಸೆಗಳ ಸಂಖ್ಯೆಯನ್ನು 148 ರಿಂದ 883 ಕ್ಕೆ ಅನಧಿಕೃತವಾಗಿ ವಿಸ್ತರಿಸಲಾಗಿತ್ತು. ಇದರಿಂದ ಗಣನೀಯ ಆರ್ಥಿಕ ಪರಿಣಾಮ ಉಂಟಾಗಿತ್ತು. ಹೀಗಾಗಿ ಸರ್ಕಾರಕ್ಕೆ 56.88 ಕೋಟಿ ರೂಪಾಯಿ ನಷ್ಟವಾಯಿತು ಎಂದು ವಿವರಿಸಿತ್ತು.

    ಅನಧಿಕೃತವಾಗಿ ಮಾಡಿದ್ದ ಈ ವಿಸ್ತರಣೆ ಮತ್ತು ದರಗಳಲ್ಲಿನ ಹೆಚ್ಚಳ, ಹಾಗೂ ಸಾಲ ಪರಿಹಾರ ಕಾರ್ಯವಿಧಾನಗಳಿಗಾಗಿ ಟ್ರಸ್ಟ್‌ನ ಹೆಸರಿನಲ್ಲಿನ ಖಾತೆಯಲ್ಲಿದ್ದ ಹಣವನ್ನು ಬೇರೆಡೆ ತಿರುಗಿಸಲಾಯಿತು. ಅಂದಾಜು 8.25 ಲಕ್ಷ ರು ಗಳನ್ನು ಬೇರೆ ಉದ್ದೇಶಗಳಿಗೆ ತಿರುಗಿಸಲಾಗಿದೆ. ಈ ಕ್ರಮಗಳು ಆಸ್ಪತ್ರೆಗಳಿಗೆ ಬಾಕಿ ಇರುವ 23.35 ಕೋಟಿ ರೂ. ಪಾವತಿ ಸೇರಿದಂತೆ ಆರ್ಥಿಕ ಹೊಣೆಗಾರಿಕೆಗಳಿಗೆ ಕಾರಣವಾಗಿವೆ. ಇದನ್ನು ಸಮಗ್ರವಾಗಿ ಪರಿಶೀಲಿಸಲು, ಹಣಕಾಸಿನ ಅಕ್ರಮಗಳ ವ್ಯಾಪ್ತಿಯನ್ನು ನಿರ್ಧರಿಸಬೇಕು. ಇದಕ್ಕಾಗಿ ಆರ್‌ಬಿಎಸ್‌ಕೆ ಯೋಜನೆಯ ನಿರ್ವಹಣೆಯಲ್ಲಿನ ಈ ಲೋಪಗಳಿಗೆ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಸಂಪೂರ್ಣ ತನಿಖೆಯನ್ನು ನಡೆಸಬೇಕು ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿತ್ತು.

 

ಸುವರ್ಣ ಆರೋಗ್ಯ ಟ್ರಸ್ಟ್‌ ತಲೆಗೆ?

     ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಉಳಿತಾಯವಾಗಿರುವ 32 ಕೋಟಿ ರು.ಗಳಿಂದ 23.30 ಕೋಟಿ ರು.ಗಳನ್ನು ಬಿಡುಗಡೆ ಮಾಡಬಹುದು ಎಂದು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಾಗಿದೆಯಾದರೂ ಸಹ ಈ 32.00 ಕೋಟಿ ರು. ಮೂಲ ಅನುದಾನ ಯಾವುದು ಎಂಬ ಮಾಹಿತಿಯನ್ನೇ ಸರ್ಕಾರಕ್ಕೆ ನೀಡಿಲ್ಲ. ಹೀಗಾಗಿ ಈ ಹಣದ ಮೂಲ ಅನುದಾನ ಯಾವುದು ಎಂಬ ಬಗ್ಗೆ ಮಾಹಿತಿ ಪಡೆದು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಬಾಕಿ ಇರುವ 23.30 ಕೋಟಿ ರು.ಗಳನ್ನು ನೀಡುವ ಬಗ್ಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ನಿರ್ಧರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

      ಅಲ್ಲದೇ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಹಣ ಪಾವತಿಸಲು ಸುಮಾರು 4ರಿಂದ 5 ವರ್ಷಗಳ ಕಾಲ ವಿಳಂಬವಾಗಿದೆ. ಹೆಚ್ಚುವರಿಯಾಗಿ 883 ಚಿಕಿತ್ಸಾ ವಿಧಾನಗಳನ್ನು ಹೇಗೆ ಅಳವಡಿಸಿಕೊಳ್ಳಲಾಯಿತು, ಇದಕ್ಕೆ ಕಾರಣಗಳೇನು ? ಆರ್‌ಬಿಎಸ್‌ಕೆ ಯೋಜನೆಯಡಿಯಲ್ಲಿ ಅನುಮತಿಸದ ಪ್ರೊಸೀಜರ್‌ಗಳನ್ನು ನಿರ್ವಹಿಸಿದಾಗ ಖಾಸಗಿ ಆಸ್ಪತ್ರೆಗಳ ಹೊಣೆಗಾರಿಕೆ ಏನು ಎಂಬುದರ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಕೂಡ ಈ ಪ್ರಕರಣಗಳ ಕುರಿತು ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿದೆ. ಚಿಕಿತ್ಸೆಗಳಿಗೆ ಟ್ರಸ್ಟ್‌, ಪೂರ್ವಾನುಮತಿಗಳನ್ನು ಅನುಮೋದಿಸಿದೆ. ಹೀಗಾಗಿ ಅಂತಹ ಪ್ರೊಸೀಜರ್‌ಗಳನ್ನು ಕೈಗೊಳ್ಳಲು ಸರ್ಕಾರವು ಅವರಿಗೆ ಬಾಕಿ ಹಣ ಪಾವತಿ ಮಾಡಲು ಬಾಧ್ಯತೆ ಹೊಂದಿದೆ ಎಂದು ಕಾನೂನು ಸಲಹೆಗಾರರು ಅಭಿಪ್ರಾಯಪಟ್ಟಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಟ್ರಸ್ಟ್‌ನಿಂದಲೇ ಲೋಪ

     ಆದರೆ ಈ ಪ್ರಕರಣದಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ಯೋಜನೆಗಳಲ್ಲಿ ಇಲ್ಲದಿರುವ ಸಂಕೇತ (ಕೋಡ್‌) ಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಪೂರ್ವಾನುಮತಿ ನೀಡಿರುವ ಬಗ್ಗೆಯೇ ಸಮಸ್ಯೆ ಇದೆ. ಆರ್‌ಬಿಎಸ್‌ಕೆಯಲ್ಲಿಲ್ಲದ ಆದರೆ ಎಂಒಯುನ ಭಾಗವಲ್ಲದ ಕಾರ್ಯವಿಧಾನವನ್ನು ಕೈಗೊಳ್ಳಲು ನೆಟ್‌ವರ್ಕ್ ಆಸ್ಪತ್ರೆಗೆ ಅಧಿಕಾರ ಹೊಂದಿರುವ ಕಾರ್ಯವಿಧಾನಗಳಿಗೆ ಪೂರ್ವಾನುಮತಿ ಅನುಮೋದನೆ ನೀಡುವಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಲೋಪವೆಸಗಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ. ಟ್ರಸ್ಟ್‌ ಎಸಗಿರುವ ಈ ಲೋಪದಿಂದಾಗಿಯೇ ಈ ಪ್ರಕರಣದಲ್ಲಿ ಹೊಣೆಗಾರರನ್ನಾಗಿ ಮಾಡುತ್ತದೆ. ಏಕೆಂದರೇ ಆರ್‍‌ಬಿಎಸ್‌ಕೆಯಲ್ಲಿ ಇಲ್ಲದ ಕಾರ್ಯವಿಧಾನಗಳ ವಿರುದ್ಧವಾಗಿ ಪೂರ್ವಾನುಮತಿ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

     ಈ ಎಲ್ಲ ಮಾಹಿತಿ, ಅಂಕಿ ಅಂಶಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರು ಸಮಗ್ರವಾಗಿ ಪರಿಶೀಲಿಸಿದ್ದಾರೆ. ಈ ಪ್ರಕರಣಗಳ ಕುರಿತು ನಿರ್ಧಾರಗಳನ್ನು ಕೈಗೊಳ್ಳುವ ವಿಚಾರವು ಬಹಳಷ್ಟು ವರ್ಷದಿಂದ ಬಾಕಿ ಇರುವ ಬಗ್ಗೆಯೂ ಅವಲೋಕಿಸಿದ್ದಾರೆ.

 

ಕೇವಲ 30% ಪಾವತಿಗೆ ಸರ್ಕಾರದ ಸೂಚನೆ

    ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕದಡಿಯಲ್ಲಿನ ಪ್ರೊಸೀಜರ್‌ಗಳ ಮೂಲಕವೇ ಬಿಪಿಎಲ್‌ ರೋಗಿಗಳಿಗೆ ನೀಡಿರುವ ಚಿಕಿತ್ಸೆ ವೆಚ್ಚವನ್ನು ಪಾವತಿಸಬಹುದು. ಈ ಪ್ರೊಸೀಜರ್‌ಗಳು ಆರ್‌ಬಿಎಸ್‌ಕೆ ಅಡಿಯಲ್ಲಿ ಲಭ್ಯವಿಲ್ಲದಿದ್ದರೂ ಸಹ ಬಿಪಿಎಲ್ ರೋಗಿಗಳಿಗೆ ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕದಡಿಯಲ್ಲಿ ಲಭ್ಯವಿದೆ. ಅದರಂತೆ ಅಸ್ತಿತ್ವದಲ್ಲಿರುವ ನೀತಿಯ ಪ್ರಕಾರ 30 % ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಮರುಪಾವತಿಸಬಹುದು, ಹಾಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ  ರೂ. 1.81 ಕೋಟಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರೂ. 6.44 ಕೋಟಿ ಮೊತ್ತವನ್ನು ಪಾವತಿಸಲು ಅನುಮೋದನೆ ನೀಡಬಹುದು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ್‌ ಗುಪ್ತಾ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.

    ಈ ಪ್ರೊಸೀಜರ್‌ ಗಳಿಗೆ  ಪೂರ್ವ-ಪ್ರಮಾಣೀಕರ ನೀಡಿದವರ  ವಿರುದ್ಧ ಸೂಕ್ತ ಶಿಸ್ತು ಕ್ರಮ ಅಥವಾ ಇತರ ಸಿವಿಲ್ ನ್ಯಾಯಾಲಯದ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕಾಗುತ್ತದೆ. ಈ ಎಲ್ಲಾ ಮೊತ್ತವನ್ನು ನಿರ್ವಹಿಸಲಾದ ಪ್ರೊಸೀಜರ್‌ಗಳ ಸಂಪೂರ್ಣ ಪರಿಶೀಲನೆ ಮತ್ತು ಪರಿಶೀಲನೆಯ ನಂತರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪಾವತಿಸಬೇಕು ಎಂದು ಸರ್ಕಾರ ಶಿಫಾರಸು ಮಾಡಿರುವುದಾಗಿ ತಿಳಿದು ಬಂದಿದೆ.