ಸರ್ಕಾರಿ ಶಾಲೆಯಲ್ಲಿ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸುವ ‘ಬಾಸ್’ ಹೆಡ್ ಮಾಸ್ಟರ್!
ಹೋಮ, ಹವನ ನಡೆಸಲು ಆದೇಶ ಕೊಟ್ಟವರು ಯಾರು ಬಿಇಓನಾ ಅಥವಾ ಡಿಡಿಪಿಐನಾ?
99% ಲೋಕಲ್
ಕುಚ್ಚಂಗಿ ಪ್ರಸನ್ನ
ತುಮಕೂರು: ನಗರದ ಶಿರಾ ಗೇಟಿನಲ್ಲಿರುವ ಕ್ಷೇತ್ರದ ಶಾಸಕರು ದತ್ತು ತೆಗೆದುಕೊಂಡಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಕರ್ತವ್ಯ ಲೋಪದ ಆಧಾರದ ಮೇಲೆ ಆ ಶಾಲೆಯ ಇಬ್ಬರು ಶಿಕ್ಷಕಿಯರನ್ನು ತುಮಕೂರು ಬಿಇಓ ಜುಲೈ 10ರಂದು ಸಸ್ಪೆಂಡ್ ಮಾಡಿದ್ದಾರೆ.
ಅಮಾನತಿಗೆ ಒಳಗಾಗುವಂಥ ಯಾವ ಗಂಭೀರ ತಪ್ಪನ್ನು ಆ ಇಬ್ಬರು ಶಿಕ್ಷಕಿಯರು ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಂಥ ಅವಾಂತರಗಳೆಲ್ಲ ನಡೆಯುತ್ತಿವೆಯೇ ಎಂಬ ಆತಂಕಕಾರಿ ಸಂಗತಿ ಬಯಲಿಗೆ ಬಂದಿತು.
ಘಟನೆ ಏನು: ಉತ್ತರ ಬಡಾವಣೆ ಶಾಲೆ ಎಂದು ಕರೆಯಲಾಗುವ ಶಿರಾ ಗೇಟ್ ದಾಟಿ ಶಿರಾ ರಸ್ತೆಯಲ್ಲಿ ಕಾಳಿದಾಸ ಹೈಸ್ಕೂಲು ಮತ್ತು ಕಿರಿಯ ಕಾಲೇಜು ಕಟ್ಟಡಕ್ಕೆ ಲಗತ್ತಾಗಿರುವ ಒಂದರಿಂದ ಎಂಟನೇ ತರಗತಿವರೆಗೆ ಶಿಕ್ಷಣ ನೀಡುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಿರಿಯ ಮುಖ್ಯ ಶಿಕ್ಷಕರ ಹೆಸರು ಶಿವಸ್ವಾಮಿ ಅಂತ. ಇವರು ಜೂನ್ 23ರಂದು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಜೂನ್ 26ರಂದು ಮೇಲಧಿಕಾರಿಗಳಿಗೆ ನೀಡಿದ ದೂರಿನ ಆಧಾರದ ಮೇಲೆ, ಕಸಬಾ-2ರ ಶಿಕ್ಷಣ ಸಂಯೋಜಕರ ಜೂನ್ 30ರ ವರದಿಯ ಮೇರೆಗೆ ಆ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಯಾವುದೇ ದೂರುಗಳಿಲ್ಲದೇ ಪಾಠ ಮಾಡುತ್ತ, ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಶಿಕ್ಷಕರು ಎಂದು ಮೆಚ್ಚುಗೆ ಪಡೆದಿದ್ದ ಇಂಗ್ಲಿಷ್ ಪಾಠ ಮಾಡುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ಸವಿತ.ಹೆಚ್ ಹಾಗೂ ಕನ್ನಡ ಪಾಠ ಮಾಡುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ವತ್ಸಲ ಎಸ್.ಎನ್. ಎಂಬ ಈ ಇಬ್ಬರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.
ಮುಖ್ಯ ಶಿಕ್ಷಕ ಶಿವಸ್ವಾಮಿಯವರು ತುಮಕೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ( ಬಿಇಓ)ಯವರಿಗೆ ಜೂನ್ 23ರಂದು ಪತ್ರ ಬರೆದು ಹಾಲಿ ಅಮಾನತಿಗೆ ಒಳಗಾಗಿರುವ ಇಬ್ಬರು ಶಿಕ್ಷಕಿಯರು ಶಾಲೆಯ ವೇಳಾಪಟ್ಟಿಯ ಹಂಚಿಕೆಯ ಪ್ರಕಾರ ಬೋಧನೆ ಮಾಡುತ್ತಿಲ್ಲ ಎಂದು ದೂರುತ್ತಾರೆ. ವತ್ಸಲ ಎಸ್.ಎನ್ ಅವರಿಗೆ 6,7 ಮತ್ತು 8ನೇ ತರಗತಿಗಳ ಕನ್ನಡ ಹಾಗೂ ಸವಿತ.ಹೆಚ್ ಅವರಿಗೆ ಇದೇ ತರಗತಿಗಳ ಇಂಗ್ಲಿಷ್ ಪಾಠಗಳನ್ನು ಪ್ರತಿ ದಿನ ಆರು ಪಿರಿಯಡ್ ತೆಗೆದುಕೊಳ್ಳುವಂತೆ ವೇಳಾಪಟ್ಟಿಯಲ್ಲಿ ಸೂಚಿಸಲಾಗಿತ್ತು , ಆದರೆ ಅವರು ಶಾಲೆಗೆ ನಿಯಮಿತವಾಗಿ ಹಾಜರಾಗುತ್ತಿದ್ದರೂ ದಿನಕ್ಕೆ ನಾಲ್ಕು ಪಿರಿಯಡ್‌ಗಳನ್ನು ಮಾತ್ರವೇ ತೆಗೆದುಕೊಳ್ಳುತ್ತಿದ್ದು ಉಳಿದ ಎರಡು ಪಿರಿಯಡ್‌ಗಳಲ್ಲಿ ಮಕ್ಕಳಿಗೆ ಬೋಧಿಸದೇ ಕಾಲಹರಣ ಮಾಡುತ್ತಿದ್ದಾರೆಂದು ದೂರಿದ್ದರು.
ಮರು ದಿನವೇ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಸಭೆ ಸೇರಿ ಈ ಇಬ್ಬರು ಶಿಕ್ಷಕಿಯರು ಸಮರ್ಪಕವಾಗಿ ಪಾಠ ಮಾಡದೇ ಹೋದುದರಿಂದ ಕೆಲವು ಮಕ್ಕಳು ಟಿಸಿ ತೆಗೆದುಕೊಂಡು ಶಾಲೆಯಿಂದ ಹೊರ ಹೋಗಿದ್ದಾರೆ ಎಂಬ ಅಂಶವನ್ನೂ ದಾಖಲಿಸಿ, ಜೂನ್ 26ರಂದು ಬಿಇಓ ಅವರಿಗೆ ಪತ್ರ ಬರೆದು ಮೇಲ್ಕಂಡ ಇಬ್ಬರು ಶಿಕ್ಷಕಿಯರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಇವರಿಬ್ಬರನ್ನೂ ಬೇರೆ ಶಾಲೆಗೆ ವರ‍್ಗಾಯಿಸಿ ಬದಲಿ ಶಿಕ್ಷಕರನ್ನು ನೇಮಿಸುವಂತೆ ಕೋರಿದ್ದಾರೆ, ಅಲ್ಲದೇ ತುರ್ತು ಕ್ರಮ ವಹಿಸದಿದ್ದರೆ ಜೂನ್ 30ರಂದು ನಡೆಯಲಿರುವ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವುದಾಗಿಯೂ ಎಚ್ಚರಿಕೆ ನೀಡುತ್ತಾರೆ.
ಮತ್ತು ಇದೇ ಮುಖ್ಯ ಶಿಕ್ಷಕ ಶಿವಸ್ವಾಮಿ ಜೂನ್ 30ರಂದು ಮತ್ತೆ ಬಿಇಓ ಅವರಿಗೆ ಪತ್ರ ಬರೆದು ಈ ಇಬ್ಬರು ಶಿಕ್ಷಕಿಯರ ವಿರುದ್ಧ ಶಿಸ್ತು ಕ್ರಮ ಜರುಗಿಸದೇ ಹೋದಲ್ಲಿ ತಮ್ಮನ್ನು ಈ ಶಾಲೆಯಿಂದ ನಿಯೋಜನೆ ಅಥವಾ ವರ್ಗಾವಣೆ ಮಾಡಿ ಬೇರೆ ಶಾಲೆಗೆ ಕಳಿಸಿ ಎಂಬ ಒತ್ತಡವನ್ನೂ ಹಾಕುತ್ತಾರೆ.
ಮತ್ತು ಇದೇ ದಿನ(ಜೂನ್ 30ರಂದು) ಕಸಬಾ -2 ಹೋಬಳಿಯ ಶಿಕ್ಷಣ ಸಂಯೋಜಕ ನವೀನ್ ಕುಮಾರ್ ಹಾಗು ಡಯಟ್‌ನ ಸಿಆರ್‌ಪಿಗಳು ಶಾಲೆಗೆ ಭೇಟಿ ನೀಡಿ ಮುಖ್ಯ ಶಿಕ್ಷಕರ ದೂರನ್ನು ಪರಿಶೀಲಿಸಿ ಬಿಇಓರವರಿಗೆ ಅದೇ ದಿನ ವರದಿ ಸಲ್ಲಿಸುತ್ತಾರೆ. ಆ ವರದಿಯಲ್ಲಿ ಶಿಕ್ಷಕಿಯರಾದ ವತ್ಸಲ ಹಾಗೂ ಸವಿತಾ ಅವರು ತಮಗೆ ವೇಳಾಪಟ್ಟಿಯಲ್ಲಿ ಕಾರ್ಯದ ಒತ್ತಡ ಹೆಚ್ಚಿಗೆ ನೀಡಲಾಗಿದೆ, ಉಳಿದ ಶಿಕ್ಷಕರಿಗೆ ಮುಖ್ಯ ಶಿಕ್ಷಕರು ಅತಿಥಿ ಶಿಕ್ಷಕರ ನೆರವನ್ನು ಒದಗಿಸಿದ್ದು ಅದರಂತೆ ನಮಗೂ ಅತಿಥಿ ಶಿಕ್ಷಕರ ನೆರವು ನೀಡಿ ಮುಖ್ಯ ಶಿಕ್ಷಕರಿಗೆ ಲಿಖಿತ ಕೋರಿಕೆ ಸಲ್ಲಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆಂದು ವರದಿಯಲ್ಲಿ ತಿಳಿಸುತ್ತಾರೆ.
ಶಿಕ್ಷಣ ಸಂಯೋಜಕ ಹಾಗೂ ಸಿಆರ್‌ಪಿ ಆ ಶಾಲೆಗೆ ಭೇಟಿ ನೀಡಿದ ದಿನವೇ (ಜೂನ್ 30ರಂದು) ಬಿಇಓಗೆ ವರದಿಯನ್ನೂ ಸಲ್ಲಿಸುತ್ತಾರೆೆ ಹಾಗೂ ಬಿಇಓ ಅವರು ಅದೇ ದಿನ ಡಿಡಿಪಿಐ ಅವರಿಗೆ ಪತ್ರ ಬರೆದು ಈ ಶಿಕ್ಷಕಿಯರ ವಿರುದ್ಧದ ದೂರು ಮೇಲ್ನೋಟಕ್ಕೆ ಸಾಬೀತಾಗಿದ್ದು ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದಾಗಿದೆ ಎಂದು ವರದಿ ಸಲ್ಲಿಸುತ್ತಾರೆ. ಉಪ ನಿರ್ದೇಶಕರು ಜುಲೈ ಮೂರರಂದು ಬಿಇಓ ಅವರಿಗೆ ಪತ್ರ ಬರೆದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀವೇ ಶಿಸ್ತು ಪ್ರಾಧಿಕಾರಿ ಆಗಿರುವುದರಿಂದ ನೀವೇ ಕ್ರಮ ಜರುಗಿಸಿ ಎಂದು ಸೂಚಿಸುತ್ತಾರೆ.
ಡಿಡಿಪಿಐ ಅವರ ಪತ್ರದಲ್ಲಿನ ಸೂಚನೆ ಮೇರೆಗೆ ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಡಾ.ಸೂರ‍್ಯಕಲಾ ಅವರು ಜುಲೈ 10ರಂದು ವತ್ಸಲಾ ಹಾಗೂ ಸವಿತಾ ಅವರಿಗೆ ಪ್ರತ್ಯೇಕವಾಗಿ ಅಮಾನತು ಆದೇಶ ಹೊರಡಿಸುತ್ತಾರೆ.
ಮೇಲ್ನೋಟಕ್ಕೆ ನೋಡಿ ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಚುರುಕಾಗಿದೆ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದೆನಿಸಿದರೂ, ಇಡೀ ಪ್ರಕರಣದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಆನಂತರ ನಡೆದ ಘಟನೆಗಳು ಹಾಗೂ ಆ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು ಎತ್ತಿ ತೋರಿಸುತ್ತಿವೆ.
ಬಿಇಓ ಅವರು ಜುಲೈ 10ರಂದು ಹೊರಡಿಸಿದ ಅಮಾನತು ಆದೇಶಕ್ಕೆ ಅದೇ ದಿನ ಡಿಡಿಪಿಐ ಅವರ ಅನುಸಮರ್ಥನೆ ಕೋರುತ್ತಾರೆ, ಆದರೆ ಡಿಡಿಪಿಐ ಅನುಸಮರ್ಥನೆ ನೀಡುವುದಿಲ್ಲ ಬದಲಿಗೆ ಜುಲೈ 17ರಂದು ಪತ್ರ ಬರೆದು ಪ್ರಕರಣವನ್ನು ಮತ್ತೊಮ್ಮೆ ಕೂಲಂಕಷ ತನಿಖೆ ಮಾಡಿ ಎನ್ನುತ್ತಾರೆ. ಬಿಇಓ ಅದೇ ದಿನ ಒಂದು ಆದೇಶ ಹೊರಡಿಸಿ ಬಿಆರ್‌ಸಿ ಗಾಯಿತ್ರಿ, ಸ್ವಾಂದೇನಹಳ್ಳಿ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಹಾಗೂ ಇನ್ನಿಬ್ಬರು ಸಿಬ್ಬಂದಿಯನ್ನು ಮರುತನಿಖೆ ಮಾಡಿ ವರದಿಕೊಡುವಂತೆ ಸೂಚಿಸುತ್ತಾರೆ. ಮೊದಲಿಗೆ ಅದೇ ದಿನ ಆ ಶಾಲೆಗೆ ಭೇಟಿ ನೀಡಿ ವರದಿ ಕೊಡಿ ಎಂದವರು ಆ ದಿನಾಂಕವನ್ನು ಜುಲೈ 20 ಎಂದು ಕೈಯಲ್ಲಿ ತಿದ್ದುತ್ತಾರೆ. ಅದರಂತೆ ಸಮಿತಿ ಜು.20ರ ಗುರುವಾರ ಶಾಲೆಗೆ ಭೇಟಿ ನೀಡುತ್ತದೆ.
ಆ ದಿನ ಶಾಲೆಯಲ್ಲಿ ಸಮಿತಿಗೆ ತನಿಖೆ ಮಾಡಲು ಸಾರ್ವಜನಿಕರು ಅಡ್ಡಿ ಪಡಿಸಿದ್ದು, ಈ ಸರ್ಕಾರಿ ಶಾಲೆಯು ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ದಿ ಹೊಂದಿದ್ದು, ಪಕ್ಕದ ಖಾಸಗಿ ಶಾಲೆಗೆ(ಕಾಳಿದಾಸ ಶಾಲೆ) ಪ್ರವೇಶ ಕುಸಿದಿರುವ ಕಾರಣಕ್ಕೆ ಗದ್ದಲ ಎಬ್ಬಿಸಲಾಗಿದೆ, ಮರು ತನಿಖೆ ಬೇಕಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯರು ಆರೋಪಿಸುತ್ತಾರೆ. ಮರುತನಿಖಾ ತಂಡ ಬರಿಗೈಯಲ್ಲಿ ಹಿಂದಿರುಗಿದ್ದರಿಂದಾಗಿ, ಮರು ದಿನ ಜುಲೈ 21ರಂದು ಬಿಇಓ ಅವರೇ ಬಿಆರ್‌ಸಿ ಅವರೊಂದಿಗೆ ಈ ಶಾಲೆಗೆ ಬಂದು ಮಾಹಿತಿ ಸಂಗ್ರಹಿಸಿ ಹೋಗಿದ್ದಾರೆ.
ಇದಿಷ್ಟು ಪ್ರಕರಣದ ಸಂಕ್ಷಿಪ್ತ ವರದಿ. ಇಷ್ಟೆಲ್ಲ ಘಟನೆಗಳು ನಡೆದು ಕ್ರಮಗಳನ್ನು ಜರುಗಿಸಿದ್ದರೂ, ತಪ್ಪಿತಸ್ಥರ ಸ್ಥಾನದಲ್ಲಿ ನಿಂತು ಅಮಾನತಿಗೆ ಒಳಗಾಗಿರುವ ವತ್ಸಲ ಹಾಗೂ ಸವಿತ ಎಂಬ ಶಿಕ್ಷಕಿಯರನ್ನು ಬಿಇಓ ಆಗಲೀ, ಡಿಡಿಪಿಐ ಆಗಲೀ ಕರೆಸಿ ವಿಚಾರಣೆ ನಡೆಸಿಲ್ಲ ಹಾಗೂ ಅವರ ಮೇಲಿನ ದೂರಿನ ಸತ್ಯಾಂಶವೇನೆಂದು ತಿಳಿದುಕೊಳ್ಳುವ ಗೋಜಿಗೇ ಹೋಗಿಲ್ಲ. ಮುಖ್ಯಶಿಕ್ಷಕರು ಹಾಗೂ ಎಸ್‌ಡಿಎಂಸಿಗಳ ದೂರನ್ನೇ ಇಡಿಯಾಗಿ ಸತ್ಯಸಂಗತಿ ಎಂದು ನಂಬಿ ಕ್ರಮ ಜರುಗಿಸಿದ್ದಾರೆ. ಇದಿಷ್ಟೇ ಸತ್ಯ ಸಂಗತಿಗಳಾಗಿದ್ದಲ್ಲಿ ಡಿಡಿಪಿಐ ನಂಜಯ್ಯನವರೇಕೆ ಪ್ರಕರಣದ ಮರುತನಿಖೆ ನಡೆಸಿ ಎಂದು ಆದೇಶಿಸುತ್ತಿದ್ದರು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಬಿಇಓ ಅವರು ಹೊರಡಿಸಿರುವ ಅಮಾನತು ಆದೇಶದ ಎರಡನೇ ಕಂಡಿಕೆಯಲ್ಲಿ ಈ ಶಿಕ್ಷಕಿಯರು ಆರನೇ ತರಗತಿಗೆ ಪಾಠ ಮಾಡದ ಕಾರಣದಿಂದಾಗಿಯೇ ಐವರು ವಿದ್ಯಾರ್ಥಿಗಳು ಟಿಸಿ ತೆಗೆದುಕೊಂಡು ಬೇರೆ ಶಾಲೆಗಳಿಗೆ ಹೋಗಿದ್ದಾರೆಂದು ಆಪಾದಿಸಿದ್ದಾರೆ. ಆದರೆ ಈ ವಿದ್ಯಾರ್ಥಿಗಳ ಪೋಷಕರನ್ನು ವಿಚಾರಿಸಲಾಗಿ ಅವರು ಟಿಸಿ ಪಡೆದು ಹೋಗಲು ಅನ್ಯ ಕಾರಣಗಳನ್ನು ನೀಡಿದರೇ ಹೊರತು, ಈ ಶಿಕ್ಷಕರಿಯರು ಪಾಠಕ್ಕೂ ತಾವು ಟಿಸಿ ಪಡೆಯುವುದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗಾದರೆ ಮುಖ್ಯ ಶಿಕ್ಷಕ ಮತ್ತು ದೈಹಿಕ ಶಿಕ್ಷಕ ಸೇರಿ 13 ಶಿಕ್ಷಕರಿರುವ ಮತ್ತು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ 11 ಮಂದಿ ಅತಿಥಿ ಶಿಕ್ಷಕರು ಕಾರ‍್ಯನಿರ್ವಹಿಸುತ್ತಿದ್ದಾರೆಂದು ತಿಳಿದು ಬಂದಿದೆ. ಶಾಸಕ ಜ್ಯೋತಿಗಣೇಶ್ ಅವರು ದತ್ತು ಪಡೆದಿರುವ ಈ ಶಾಲೆಯಲ್ಲಿ 6ನೇ ತರಗತಿ ಬಳಿಕ ಇಂಗ್ಲಿಷ್ ಮಾಧ್ಯಮದ ತರಗತಿಗಳನ್ನು ನಡೆಸಲಾಗುತ್ತಿದೆ ಹಾಗೂ ಕಂಪ್ಯೂಟರ್‌ಗಳನ್ನೂ ಅಳವಡಿಸಿ ಮಕ್ಕಳಿಗೆ ಕಲಿಸಲಾಗುತ್ತಿದೆ, ಹೊಸ ಕೊಠಡಿಗಳನ್ನು ನಿರ‍್ಮಿಸಲಾಗಿದೆ, ಈ ಮೂಲಕ ಶಾಲೆ ಅಭಿವೃದ್ದಿ ಪಡಿಸಲಾಗಿದೆ. ಈ ಪ್ರಗತಿಗೆ ತಾನೇ ಕಾರಣ ಎಂಬುದು ಈ ಶಾಲೆಯ ಪದವೀಧರ ಮುಖ್ಯಶಿಕ್ಷಕ ಶಿವಸ್ವಾಮಿ ಅವರ ಹೇಳಿಕೆ.
ಈ ಸಾಧನೆಯೇ ಅವರ ತಲೆ ತಿರುಗಿಸಿದೆ, ಸಾಧನೆಯನ್ನೇ ಮುಂದಿಟ್ಟುಕೊಂಡು ಇಂಗ್ಲಿಷ್ ಮೀಡಿಯಂಗೆ ಬರುವ ಮಕ್ಕಳ ಪೋಷಕರಿಂದ ಅಭಿವೃದ್ಧಿ ಶುಲ್ಕದ ನೆಪದಲ್ಲಿ ವಸೂಲಿ ಮಾಡುತ್ತಿದ್ದಾರೆಂದು ಕಳೆದ ವರ್ಷವೇ ಇವರ ವಿರುದ್ಧ ಖಾಸಗಿ ಕೇಬಲ್ ವಾಹಿನಿಯೊಂದು ತನಿಖಾ ವರದಿ ಪ್ರಸಾರ ಮಾಡಿದೆ.
ಅಷ್ಟೇ ಅಲ್ಲದೇ ಈ ಮುಖ್ಯ ಶಿಕ್ಷಕ ಇಡೀ ಶಾಲೆಯನ್ನು ತಮ್ಮ ಖಾಸಗಿ ಆಸ್ತಿ ಎಂಬಂತೆ ಪರಿಗಣಿಸಿ ಕಳೆದ ಜನವರಿಯಲ್ಲಿ ಶಾಲಾ ವಾರ್ಷಿಕೋತ್ಸವ ದಿನ ಜನವರಿ 24ರಂದು ಬೆಳಿಗ್ಗೆ ತಮ್ಮ ಪತ್ನಿ ಹಾಗೂ ಕುಟುಂಬ ಸಹಿತ ಶಾಲಾ ಸಿಬ್ಬಂದಿಯನ್ನೂ ಎದುರಿಗೆ ಕೂರಿಸಿಕೊಂಡು, ಪುರೋಹಿತರನ್ನು ಕರೆಸಿ ಶಾಲೆಯಲ್ಲಿ ಹೋಮ, ಹವನ ಮತ್ತು ವಿಶೇಷ ಪೂಜೆಗಳನ್ನು ನಡೆಸುತ್ತಾರೆ. (ಫೋಟೋ ನೋಡಿ), ವಿಚಿತ್ರವೆಂದರೆ ಅವರು ಯಜ್ಞ ನಡೆಸಿದ ಶಾಲೆಯ ಆ ಮೂರು ಕೊಠಡಿಗಳನ್ನು ಒಂದು ವರ್ಷದ ಹಿಂದೆ ರಿನೋವೇಟ್ ಮಾಡಲಾಗಿತ್ತು ಮತ್ತು ಆ ಕೋಣೆಗಳು ಅದಾಗಲೇ ಬಳಕೆಯಲ್ಲಿದ್ದವು. ಹೀಗೆ ಸರ್ಕಾರಿ ಶಾಲೆಯಲ್ಲಿ ಸಪತ್ನೀಕರಾಗಿ ಕೂತು ವಿಶೇಷ ಹೋಮ, ಹವನ ನಡೆಸಲು ಕರ್ನಾಟಕ ಘನ ಸರ್ಕಾರದ ಯಾವ ಆದೇಶದಲ್ಲಿ ಅಥವಾ ಯಾವ ನಿಯಮಗಳು ಅಥವಾ ಸೇವಾ ನಿಯಮಗಳು ಅಥವಾ ನಡತೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬುದನ್ನು ಈ ಶಿವಸ್ವಾಮಿಯವರೇ ಸ್ಪಷ್ಟೀಕರಣ ನೀಡಬೇಕಿದೆ.
ಇವರ ಉದ್ಧಟತನ ಮತ್ತು ದೊಡ್ಡಸ್ತಿಕೆಯ ಪ್ರದರ್ಶನ ಇಲ್ಲಿಗೇ ಮುಗಿಯುವುದಿಲ್ಲ, ಇದಕ್ಕೂ ತಿಂಗಳು ಮೊದಲು 2022ರ ಡಿಸೆಂಬರ್ 16ರಂದು ಇದೇ ಶಿವಸ್ವಾಮಿ ತಮ್ಮ ಹ್ಯಾಪಿ ಬರ್ತ್ ಡೇಯನ್ನೂ ಇದೇ ಶಾಲೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಭಾರೀ ಹಾರ ಹಾಕಿಸಿಕೊಂಡು ದೊಡ್ಡದೊಂದು ಕೇಕ್ ಕಟ್ ಮಾಡಿಕೊಂಡು ಆಚರಿಸಿಕೊಂಡಿದ್ದಾರೆ. ಹೀಗೆ ಬರ್ತ್ ಡೆ ಆಚರಿಸಿಕೊಳ್ಳಲು ಯಾವ ನಿಯಮಗಳಲ್ಲಿ ಘನ ಸರ್ಕಾರ ಅನುಮತಿ ನೀಡಿತ್ತು ಎಂಬುದನ್ನು ಇದೇ ಬಿಇಓ ಹಾಗೂ ಡಿಡಿಪಿಐ ತಿಳಿಸುವರೇ.
ಸಾರಿ, ಈ ಹೆಡ್ ಮಾಸ್ಟರ್ ತಮ್ಮ ಬರ್ತ್ ಡೇ ಕೇಕ್ ಮೇಲೆ ದೊಡ್ಡದಾಗಿ ಬಾಸ್ ಎಂದು ಬರೆಸಿಕೊಂಡಿದ್ದರು ಎಂದು ಹೇಳುವುದನ್ನು ಮರೆತೇ ಬಿಟ್ಟಿದ್ದೆ. ಈ ಮುಖ್ಯಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಬರ್ತ್ಡೇ ಆಚರಿಸಿಕೊಳ್ಳುವುದು, ಹೋಮ ಹವನ ಮಾಡಿಕೊಳ್ಳುವುದರ ವಿರುದ್ದವೂ ಡಿಡಿಪಿಐ ಕ್ರಮತೆಗೆದುಕೊಳ್ಳಬೇಕಲ್ಲವೇ ಎಂದು ಪೋಷಕರು ಪ್ರಶ್ನಿಸುತ್ತಾರೆ.
ಮುಖ್ಯ ಶಿಕ್ಷಕರೂ ಶಿಕ್ಷಕರಂತೆಯೇ ವಾರಕ್ಕೆ 12 ಪಿರಿಯಡ್‌ಗಳನ್ನು ತೆಗೆದುಕೊಂಡು ಮಕ್ಕಳಿಗೆ ಪಾಠ ಮಾಡಬೇಕು, ಆದರೆ ಈ ಮುಖ್ಯಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿಲ್ಲ ಮತ್ತು ಹಿಂದೆ ಮಾಡಿದ ದಾಖಲೆಯೂ ಇಲ್ಲ, ಅವರು ವೇಳಾ ಪಟ್ಟಿಯಲ್ಲಿ ಅವರ ಹೆಸರಿಗೆ ಯಾವ ತರಗತಿಗಳನ್ನೂ ಗುರುತು ಮಾಡಿಲ್ಲ ಎಂಬುದನ್ನೇ ಸಾಕ್ಷಿಯಾಗಿ ಪರಿಗಣಿಸಬಹುದು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನಿಗದಿ ಪಡಿಸಿದ 6 ಪಿರಿಯಡ್‌ಗಳಲ್ಲಿ 4 ಪಿರಿಯಡ್ ಪಾಠ ಮಾಡಿ, ತಮಗೆ ಕಾರ‍್ಯದೊತ್ತಡ ಹೆಚ್ಚಾಗಿರುವುದರಿಂದ ಉಳಿದ 2 ಪಿರಿಯಡ್‌ಗಳಿಗೆ ಉಳಿದ ಶಿಕ್ಷಕರಿಗೆ ನೀಡಿರುವಂತೆ ಅತಿಥಿ ಶಿಕ್ಷಕರ ನೆರವು ನೀಡಿ ಎಂದು ಕೋರಿದರೂ ಪರಿಗಣಿಸದೇ ಅಮಾನತು ಆದೇಶ ಹೊರಡಿಸಲು ಕಾರಣರಾಗಿರುವ ಈ ಮುಖ್ಯ ಶಿಕ್ಷಕರ ವಿರುದ್ಧ ಶಾಲೆಯನ್ನು ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ಹೋಮ, ಹವನ ನಡೆಸುತ್ತ , ಬರ್ತ್ ಡೇ ಆಚರಿಸಕೊಳ್ಳುತ್ತ ನಿಯಮಾನುಸಾರ ಪಾಠವನ್ನೂ ಮಾಡದೇ ಬೇಕಾಬಿಟ್ಟಿ ಅಡ್ಡಾಡುತ್ತಿರುವ ಕಾರಣಗಳಿಗಾಗಿ ಅಮಾನತು ಮಾಡಬಾರದೇಕೆ ಎಂದು ಡಿಡಿಪಿಐ ಅವರನ್ನು ಪೋಷಕರು ಕೇಳುತ್ತಿದ್ದಾರೆ.