“ ಸಂಬಳಿಗೋಲು “: ಕತೆಯಲ್ಲ ಕಥನವಲ್ಲ ದುರಂತ ವಾಸ್ತವ ನಾ.ದಿವಾಕರ
(ಸಂಗಾತಿ ಗುರುರಾಜ ದೇಸಾಯಿ ಅವರ ಕಿರು ಕಾದಂಬರಿಯ ಪರಿಚಯಾತ್ಮಕ ಲೇಖನ )
ಓದಿನ ಪ್ರೀತಿಗಾಗಿ
ನಾ ದಿವಾಕರ
ಬದಲಾದ ಭಾರತದಲ್ಲಿ ಸಾಂಸ್ಕೃತಿಕ ರಾಜಕಾರಣ ಬೇರೂರುತ್ತಿರುವ ಹೊತ್ತಿನಲ್ಲಿ, ಧರ್ಮನಿರಪೇಕ್ಷತೆಯ ಮೌಲ್ಯ ಶಿಥಿಲವಾಗುತ್ತಿರುವ ಗಳಿಗೆಯಲ್ಲಿ, ಇತ್ತೀಚೆಗೆ ಹೆಚ್ಚು ಸದ್ದು ಮಾಡಿದ ಒಂದು ವಸ್ತು ʼ ಸೆಂಗೋಲು ʼ. ಒಂದು ನಿರ್ದಿಷ್ಟ ಧಾರ್ಮಿಕ ಅಸ್ಮಿತೆಯನ್ನು ಪ್ರತಿನಿಧಿಸುವ ಈ ಚಾರಿತ್ರಿಕ ವಸ್ತು ಈಗ ಸಂಸತ್ತನ್ನು ಅಲಂಕರಿಸಿದೆ. ಸಹಜವಾಗಿಯೇ ಮಾಧ್ಯಮಗಳ ವೈಭವೀಕರಣ ಮತ್ತು ವಿಶ್ಲೇಷಕರ ಭಿನ್ನ ವ್ಯಾಖ್ಯಾನಗಳ ಪರಿಣಾಮವಾಗಿ ಸೆಂಗೋಲು ಸಾರ್ವಜನಿಕ ಸಂಕಥನದಲ್ಲಿ ಬೆರೆತುಹೋಗಿದೆ. ಆದರೆ 78 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಸಾಂಕೇತಿಕವಾಗಿ ಸದ್ದು ಮಾಡುತ್ತಿರುವ ʼಸಂಬಳಿಗೋಲುʼ ಬಹುಶಃ ಎಲ್ಲಿಯೂ ಗೋಚರಿಸುವುದಿಲ್ಲ. ವರ್ತಮಾನದ ಸಮಾಜದಲ್ಲಿ ಗೆಜ್ಜೆ ಕಟ್ಟಿರುವ ಈ ಕೋಲನ್ನು ಕುಟ್ಟುವ ಸದ್ದು ಕೇಳದೆ ಇದ್ದರೂ, ಈ ಪ್ರಕ್ರಿಯೆಯ ಹಿಂದೆ ಇರುವ ಸಾಮಾಜಿಕ ಕ್ರೌರ್ಯ ಮತ್ತು ದೌರ್ಜನ್ಯಗಳ ರೂಪಾಂತರಕ್ಕೆ ನವ ಭಾರತ ಸಾಕ್ಷಿಯಾಗಿರುವುದು ಕಟು ವಾಸ್ತವ.
ಒಂದು ಸಮುದಾಯಕ್ಕೆ ಸೇರಿದ ಸಾಮಾನ್ಯ ಮನುಷ್ಯರ ನೆರಳು, ಅವರ ಧ್ವನಿ, ಅವರ ಚಟುವಟಿಕೆಗಳು ಹಾಗೂ ಹೆಜ್ಜೆ ಗುರುತುಗಳು ಮತ್ತೊಂದು ಸಮಾಜದ ಜನರ ಮೇಲೆ ಬೀಳುವುದೇ ಅಪರಾಧವಾಗಿದ್ದಂತಹ ಒಂದು ಸಮಾಜ ನಮ್ಮ ದೇಶದಲ್ಲಿ ಶತಮಾನಗಳ ಕಾಲ ಚಾಲ್ತಿಯಲ್ಲಿತ್ತು. ಇದನ್ನು ತಾಂತ್ರಿಕವಾಗಿ ಅಸ್ಪೃಶ್ಯತೆ ಅಥವಾ ಬೌದ್ಧಿಕವಾಗಿ ಶ್ರೇಣೀಕೃತ ಜಾತಿ ಪದ್ಧತಿ ಎಂದು ವ್ಯಾಖ್ಯಾನಿಸಲಾದರೂ, ಈ ವಿದ್ಯಮಾನದ ಮೂಲವನ್ನು ಸಮಾಜಶಾಸ್ತ್ರೀಯ ಚೌಕಟ್ಟಿನಲ್ಲಿ ನೋಡಿದಾಗ ಅಲ್ಲಿ ಮನುಷ್ಯ ಸಮಾಜಗಳ ನಡುವೆ ಶಾಶ್ವತವಾದ ಗೋಡೆಗಳನ್ನು ಕಟ್ಟುವ ವಿಕೃತ ಪರಂಪರೆ ಕಾಣುತ್ತದೆ. ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಜಾತಿ ಗೋಡೆಯನ್ನು ಕೆಡವಲಾಗಿದೆ. ಆದರೆ ಜಾತಿ ತಾರತಮ್ಯ ಅಥವಾ ಭೇದವನ್ನು ಅಳಿಸಲಾಗಿದೆಯೇ ?
ವಾಸ್ತವ ಬಿಂಬಿಸುವ ಸಂಕೇತಗಳು
ಈ ಹಿನ್ನೆಲೆಯಲ್ಲಿ ನಮ್ಮ ಮುಂದೆ ʼಸಂಬಳಿಗೋಲುʼ ಸದ್ದು ಮಾಡಿದಾಗ ನಮ್ಮ ಪ್ರಜ್ಞೆಯೊಳಗಿನ ಚರಿತ್ರೆ ಎದ್ದು ಕೂರುತ್ತದೆ. ಗೆಜ್ಜೆ ಕಟ್ಟಿದ ಕೋಲುಗಳನ್ನು ನೆಲಕ್ಕೆ ಬಡಿಯುತ್ತಾ ನಡೆಯುವ ಜನರು, ನಾವು ಬರುತ್ತಿದ್ದೇವೆ ದಾರಿಬಿಡಿ ಎಂದಾಗಲೀ, ನಮ್ಮೆದುರು ಕಾಣಿಸಿಕೊಳ್ಳದಿರಿ ಎಂದಾಗಲೀ ʼ ಕೂಗಿ ಹೇಳುವುದಿಲ್ಲ. ಸಂಬಳಿಗೋಲು ಎನ್ನಲಾಗುವ ಈ ವಸ್ತುವಿನ ಗೆಜ್ಜೆ ಸದ್ದು ಕೇಳಿದಾಕ್ಷಣ, ಇದನ್ನು ಹಿಡಿದಿರುವ ಜನರ ನೆರಳು ನಮ್ಮ ಮೇಲೆ ಬೀಳಕೂಡದು ಎಂದು ಸ್ವಯಂ ಪ್ರೇರಿತರಾಗಿ ಮನೆಯೊಳಗೆ ಸೇರಿಕೊಳ್ಳುವ ಮತ್ತು ತದನಂತರ ಇವರು ಹೆಜ್ಜೆಯೂರಿದ ರಸ್ತೆಯನ್ನು ಸಗಣಿಯಿಂದ ಸಾರಿಸಿ ಶುದ್ದೀಕರಿಸುವ ಒಂದು ಮೇಲ್ಜಾತಿ ಸಮಾಜದ ಚಿತ್ರಣ ನಮಗೆ ಕಾಣುತ್ತದೆ. ಸಹನಶೀಲ ನಾಗರಿಕತೆ ಎಂದು ಬೆನ್ನುತಟ್ಟಿಕೊಳ್ಳುವ ನಾವು, ಮನುಷ್ಯರ ನೆರಳನ್ನೂ ಸಹಿಸಿಕೊಳ್ಳದ ಒಂದು ಸಮಾಜ ಮತ್ತು ವ್ಯವಸ್ಥೆಯನ್ನು ಒಡಲಲ್ಲಿಟ್ಟುಕೊಂಡು ಶತಮಾನಗಳ ಕಾಲ ಬಾಳಿರುವುದು ವಿಡಂಬನೆ ಅಲ್ಲವೇ ?

ಅಂತರಂಗದಲ್ಲಿ ಅಡಗಿರುವ ಜಾತಿ ಭೇದದ ಸುಳಿಗಳನ್ನು, ಈ ಸಂಬಳಿಗೋಲಿನ ಸದ್ದುಗಳೊಂದಿಗೆ, ವರ್ತಮಾನದ ಸಮಾಜದ ಮುಂದಿರಿಸುವ ಒಂದು ಸಾಹಿತ್ಯಿಕ ಪ್ರಯತ್ನವನ್ನು ಆತ್ಮೀಯ ಸಂಗಾತಿ ಗುರುರಾಜ ದೇಸಾಯಿ ತಮ್ಮ ʼ ಸಂಬಳಿಗೋಲು ʼ ಕಾದಂಬರಿಯ ಮೂಲಕ ಮಾಡಿದ್ದಾರೆ. ಲೇಖಕರೇ ಪ್ರವೇಶಿಕೆಯಲ್ಲಿ ಹೇಳಿರುವಂತೆ ಈ ಕಥಾ ಹಂದರ, ಕತೆಯೋ ನೀಳ್ಗತೆಯೋ ಅಥವಾ ಕಾದಂಬರಿಯೋ ಎಂಬ ಜಿಜ್ಞಾಸೆ ಮೂಡಿಸುವ ಈ ಕೃತಿಯನ್ನು ಈ ಸಾಹಿತ್ಯಿಕ ಪ್ರಕಾರಗಳ ಆವರಣದಿಂದ ಹೊರಗಿಟ್ಟು ಓದಬೇಕಿದೆ. ಏಕೆಂದರೆ ಈ ಗದ್ಯದಲ್ಲಿ ಅಡಗಿರುವ ಮಾನವ ಸಂವೇದನೆ ಮತ್ತು ಸೂಕ್ಷ್ಮತೆಗಳ ಒಂದು ಅನುಭವ ಕಥನ , ಭಾರತ ಸಾಗಿಬಂದಿರುವ ದಾರಿಯ ಸಂಕಟಗಳನ್ನು ತೆರೆದಿಡುವುದಷ್ಟೇ ಅಲ್ಲದೆ, ವರ್ತಮಾನದಲ್ಲಿ ಭಿನ್ನ ರೂಪಗಳಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಂಡಿರುವ ಅಸ್ಪೃಶ್ಯತೆಯಂತಹ ಹೀನಾಚರಣೆಯನ್ನು ನಮ್ಮ ಮುಂದೆ ತೆರೆದಿಡುತ್ತದೆ. ಈಗ ಇದು ಚರಿತ್ರೆ ಎಂದು ಪರಿಗಣಿಸುವ ಆಧುನಿಕ ಸಮಾಜ, ಈ ಚರಿತ್ರೆಯ ಪಳೆಯುಳಿಕೆಗಳನ್ನು ಹೊತ್ತು ಸಾಗುತ್ತಿರುವ ಅಸಂಖ್ಯಾತ ಜನರ ಒಳಸಂಕಟಗಳನ್ನು ಅರಿಯಲಾರದು.
ಅನುಭವಾತ್ಮಕ ಅಭಿವ್ಯಕ್ತಿಯಾಗಿ
ʼ ಸಂಬಳಿಗೋಲು ʼ ಒಂದು ಪ್ರತ್ಯಕ್ಷ ಅನುಭವ ಕಥನ. ಸಾಹಿತ್ಯಿಕ ವರ್ಗೀಕರಣಗಳ ಗೋಜಿಗೆ ಹೋಗದೆ ಈ ಕಥನವನ್ನು ಓದುತ್ತಾ ಹೋದಂತೆ ನಮ್ಮ ಮುಚ್ಚಿದ ರೆಪ್ಪೆಗಳ ನಡುವೆ ಹಾದು ಹೋಗುವ ಸಾಮಾಜಿಕ ದೃಶ್ಯಗಳು , ಭಾರತದ ಶ್ರೇಣೀಕತ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ಶೋಷಣೆ, ದೌರ್ಜನ್ಯ ಮತ್ತು ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿಯ ಪ್ರಯೋಗಾಲಯವನ್ನು ಹೋಲುತ್ತದೆ. ತಾವು ಬಾಲ್ಯದಲ್ಲಿ ಕಂಡಂತಹ ಒಂದು ಸಮಾಜವನ್ನು ಮತ್ತು ಅದರೊಳಗಿನ ಕ್ರೌರ್ಯ-ಹಿಂಸೆ-ಅಮಾನುಷತೆಯನ್ನು ನೆನಪಿನ ಗಣಿಯಿಂದ ಹೊರತೆಗೆದು, ಯಥಾವತ್ತಾಗಿ ಅಕ್ಷರಗಳಿಗೆ ಇಳಿಸಿರುವ ಗುರುರಾಜ ದೇಸಾಯಿ ಅವರ ನೆನಪಿನ ಶಕ್ತಿ ಮತ್ತು ಧಾರಣೆಯ ಸಾಮರ್ಥ್ಯ ಮೆಚ್ಚುವಂತಹುದು ಎಂದರೆ ಅದು ಉತ್ಪ್ರೇಕ್ಷೆಯಾಗಲಾರದು.
ಮನುಷ್ಯ ತಾನು ಉಂಡಂತಹ ನೋವುಗಳನ್ನು ಮರೆಯಲಾಗುವುದಿಲ್ಲ. ಆ ಗಾಯಗಳು ಮಾಸಿದರೂ, ಅದರ ಅಮೂರ್ತ ಗುರುತುಗಳು ಗತ ಜೀವನದ ದುರ್ಭರ ಕ್ಷಣಗಳನ್ನು ನೆನಪಿಸುತ್ತಲೇ ಇರುತ್ತವೆ. ಕಣ್ಣಿಗೆ ಕಾಣದಂತಹ, ಹೃದಯದ ಮೇಲೆ ಮೂಡಿರುವ ಮಚ್ಚೆಗಳು ಆ ಭೀಕರ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಗೆ ತರುತ್ತವೆ ಇದು ಸಹಜ. ಆದರೆ ಈ ಕಾದಂಬರಿಯಲ್ಲಿ ವ್ಯಕ್ತವಾಗಿರುವ ನೋವು-ಹಿಂಸೆ-ಕ್ರೌರ್ಯ-ದೌರ್ಜನ್ಯ-ದಬ್ಬಾಳಿಕೆಗಳ ನೋವುಗಳು ಉಂಡಿರುವುದಲ್ಲ, ಕಣ್ಣಾರೆ ಕಂಡಿರುವುದು. ಲೌಕಿಕ ಬದುಕಿಗೆ ಕಣ್ತೆರೆಯುತ್ತಿರುವ ವಯೋಮಾನದಲ್ಲಿ ಅನುಭಾವಾತ್ಮಕವಾಗಿ ಮೂಡುವ ಗಾಯಗಳು ವ್ಯಕ್ತಿಯನ್ನು ಸಂವೇದನಾಶೀಲರನ್ನಾಗಿ ಮಾಡುವುದು ಸಾರ್ವತ್ರಿಕವೇನಲ್ಲ. ಆದರೆ ಈ ಕಾದಂಬರಿಕಾರ ತನ್ನೊಡಲಿನಲ್ಲಿ ಅವಿತಿದ್ದ ನೋವುಗಳನ್ನು ಸಂಬಳಿಗೋಲು ಕಾದಂಬರಿಯ ಮೂಲಕ ತೆರೆದಿಟ್ಟು ತಮ್ಮೊಳಗಿನ ಸಂವೇದನಾಶೀಲ ಸಾಹಿತಿಯನ್ನು ಅನಾವರಣಗೊಳಿಸಿದ್ದಾರೆ.
ʼ ತಪಗಲೂರು ʼ ಎಂಬ ಹಳ್ಳಿಯಲ್ಲಿ ಶೋಷಿತ ಸಮುದಾಯಕ್ಕೆ ಸೇರಿದ ಮಾದರ ಕೆಂಚ ಮತ್ತು ಕುರುಬರ ಬಸ್ಯ , ತಮ್ಮ ಬೆವರನ್ನು ಮಣ್ಣಿನ ಕಣಕಣದಲ್ಲಿ ಹಿಡಿದಿಟ್ಟಿದ್ದ ತೋಟದಲ್ಲಿ, ಸಣ್ಣ ಕಳ್ಳತನ ಮಾಡಿದ್ದನ್ನೇ ಘೋರ ಅಪರಾಧವೆಂದು ಪರಿಗಣಿಸಿ, ಇಬ್ಬರನ್ನೂ ಕ್ರೂರ ಶಿಕ್ಷೆಗೊಳಪಡಿಸುವ ಒಂದು ಕಥನವನ್ನು ಲೇಖಕರು ಕಣ್ಣಿಗೆ ಕಟ್ಟುವ ಹಾಗೆ, ಮನಮುಟ್ಟುವಂತೆ ತೆರೆದಿಟ್ಟಿದ್ದಾರೆ. ಅಪರಾಧ ಮತ್ತು ಶಿಕ್ಷೆ ಪ್ರಮಾಣಾನುಗುಣವಾಗಿರಬೇಕು ಎಂಬ ನ್ಯಾಯಶಾಸ್ತ್ರದ ತತ್ವವನ್ನು ಇಂದಿಗೂ ಅನುಸರಿಸಲಾಗುತ್ತಿಲ್ಲ ಹೀಗಿರುವಾಗ, ದಶಕಗಳ ಹಿಂದಿನ ಭಾರತದಲ್ಲಿ ಹೇಗೆ ನಿರೀಕ್ಷಿಸಲು ಸಾಧ್ಯ ? ಅಪರಾಧ ಎಸಗುವ ವ್ಯಕ್ತಿಯ ಹುಟ್ಟಿನ ಮೂಲ ಅಥವಾ ಜಾತಿ ಆತನ/ಆಕೆಯ ಶಿಕ್ಷೆಯ ಪ್ರಮಾಣವನ್ನೂ ನಿರ್ಧರಿಸುವ ಮನುಸ್ಮೃತಿಯ ಕಟ್ಟಳೆಗಳ ಒಂದು ಪ್ರಾತ್ಯಕ್ಷಿಕೆಯನ್ನು ʼಸಂಬಳಿಗೋಲುʼ ನಮ್ಮ ಮುಂದಿಡುತ್ತದೆ.
ದೌರ್ಜನ್ಯದ ಕರಾಳ ಹಂದರ
ಒಂದೇ ಎಳೆಯಲ್ಲಿ ಗುರುರಾಜ ದೇಸಾಯಿ ತಾವು 1992ರಲ್ಲಿ , ಆರು ವರ್ಷದವರಾಗಿದ್ದಾಗ ಕಂಡಂತಹ ಜಾತಿ ದೌರ್ಜನ್ಯ ಮತ್ತು ಊಳಿಗಮಾನ್ಯ ದಬ್ಬಾಳಿಕೆಯ ಒಂದು ಚಿತ್ರಣವನ್ನು ಕಥನ ಶೈಲಿಯಲ್ಲಿ ಹೇಳುತ್ತಾ ಹೋಗುತ್ತಾರೆ. ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಕಂಡಂತಹ ಹಿಂಸೆ ಮತ್ತು ಕ್ರೌರ್ಯ ಸದಾ ಕಾಲ ನೆನಪಿನಲ್ಲುಳಿಯುತ್ತದೆ. ಈ ಕಾದಂಬರಿಯ ಕೇಂದ್ರ ವ್ಯಕ್ತಿಗಳು ಬಸ್ಯಾ ಮತ್ತು ಕೆಂಚ. ಆದರೆ ಕಥನದ ಕೇಂದ್ರ ಬಿಂದು ಬಾಲಕ ಶ್ರೀಧರ. ( ಸ್ವತಃ ಲೇಖಕರು). ತಮ್ಮ ಚಿಕ್ಕಪ್ಪನ ತೋಟದಲ್ಲೇ ಕಳ್ಳತನ ಮಾಡಿ, ಕ್ರೂರ ಶಿಕ್ಷೆಗೊಳಗಾದ ಶೋಷಿತರ ಬದುಕಿನ ಕರಾಳ ಚಿತ್ರಣವನ್ನು ಮೂರು ದಶಕಗಳ ಬಳಿಕ ತೆರೆದಿಡುವುದು ಒಂದು ರೀತಿಯ ಸಾಹಸವೇ ಸರಿ. ಸಂಗಾತಿ ಗುರುರಾಜ ದೇಸಾಯಿ ಈ ಸಾಹಸದಲ್ಲಿ ಯಶಸ್ವಿಯಾಗಿದ್ದಾರೆ.
ಊರ ಧಣಿ ಅಂದರೆ ಯಜಮಾನ, ಶಾನುಭೋಗ , ದಳಪತಿ ಮತ್ತು ಊರಗೌಡರ ತೀರ್ಮಾನಕ್ಕೆ ತಲೆಬಾಗುವ ಇಡೀ ಗ್ರಾಮ ಈ ಅಮಾಯಕರು ಅನುಭವಿಸುವ ಚಿತ್ರಹಿಂಸೆ, ಯಾತನೆ ಮತ್ತು ಅಮಾನುಷ ಕಿರುಕುಳಗಳಿಗೆ ಮೌನ ಪ್ರೇಕ್ಷಕರಾಗಿರುವುದು, ಇಂದಿಗೂ ಕಾಣಬಹುದಾದ ಒಂದು ದೃಶ್ಯ. ಗುಜರಾತ್‌ನ ಊನ ಗ್ರಾಮದಲ್ಲಿ ನಾಲ್ವರು ದಲಿತರ ಮೇಲೆ ನಡೆದ ದೌರ್ಜನ್ಯವನ್ನು ಇದು ನೆನಪಿಸುತ್ತದೆ. ಬಸ್ಯಾ ಮತ್ತು ಕೆಂಚ ಅವರನ್ನು ಬಂಡಿಗೆ ಕಟ್ಟಿ ಎಳೆದೊಯ್ಯುವುದು , ರಸ್ತೆಯಿಡೀ ಈ ಇಬ್ಬರ ರಕ್ತ ಹರಡುವುದು, ಪೊಲೀಸ್ ಠಾಣೆಯವರೆಗೂ ಇವರನ್ನು ಹೀಗೆಯೇ ಪ್ರಾಣಿಗಳಂತೆ ಎಳೆದೊಯ್ಯುವುದು ಈ ದೃಶ್ಯಗಳನ್ನು ಗುರುರಾಜ ದೇಸಾಯಿ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಹೋಗುತ್ತಾರೆ.
ಆದರೆ ಈ ವಿವರಣೆಯಲ್ಲಿ ರೋಚಕತೆ ಎಲ್ಲಿಯೂ ಕಾಣುವುದಿಲ್ಲ. ಅತಿಯಾದ ಅನುಕಂಪವೂ ಕಾಣುವುದಿಲ್ಲ. ಸಹಾನುಭೂತಿ ಹುಟ್ಟಿಸುವ ವಸ್ತುನಿಷ್ಠವಾದ ಕಥನ ಶೈಲಿ ಮೆಚ್ಚುವಂತಹ ಅಂಶ. ಈ ಹಿಂಸೆಯನ್ನು ಓದುತ್ತಾ ಹೋದಂತೆ, ಅನುಕಂಪ ಅಥವಾ ಅಂತಃಕರಣ ಸಹಜವಾಗಿ ಮೂಡಿದರೂ, ಅಂತಿಮವಾಗಿ ಜಾತಿ ದೌರ್ಜನ್ಯದ ಬಗ್ಗೆ ಆಕ್ರೋಶ ಮೂಡುತ್ತದೆ. ಈ ಘಟನೆ ನಡೆದಿರುವುದು 19ನೆ ಶತಮಾನದಲ್ಲಿ ಅಲ್ಲ ಅಥವಾ ವಸಾಹತು ಆಳ್ವಿಕೆಯಲ್ಲಿಯೂ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಸಾಂವಿಧಾನಿಕ ಆಳ್ವಿಕೆಯಲ್ಲಿ, 20ನೆ ಶತಮಾನದ ಅಂತ್ಯದಲ್ಲಿ. ಈ ಅಂಶವೇ ಓದುಗರನ್ನು ಮತ್ತಷ್ಟು ವಿಚಲಿತಗೊಳಿಸುತ್ತದೆ. ಗುರುರಾಜ್ ಅವರ ನಿರೂಪಣೆ ಅಷ್ಟೇ ಪರಿಣಾಮಕಾರಿಯಾಗಿದೆ.
ಬೌದ್ಧಿಕ ಆಘಾತ ಮತ್ತು ಭವಿಷ್ಯದ ಮುಂಗಾಣ್ಕೆ
ಎಳೆಯ ಬಾಲಕ ಶ್ರೀಧರ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳು, ಆ ಎಳೆಯ ಹೃದಯದಲ್ಲಿ ಮೂಡುವ ಆತಂಕಗಳು ಆತನನ್ನು ಸಮಾಜಮುಖಿಯಾಗಿ ಪರಿವರ್ತಿಸುವ ಒಂದು ಕ್ರಿಯಾಶೀಲ ಅಂಶವನ್ನೂ ಲೇಖಕರು ಪರಿಣಾಮಕಾರಿಯಾಗಿ ಸ್ಪಷ್ಟಪಡಿಸಿದ್ದಾರೆ. ಅದೇವೇಳೆ ತಮ್ಮ ದೌರ್ಜನ್ಯ ದಬ್ಬಾಳಿಕೆಗಳಿಗಾಗಿ 12 ವರ್ಷ ಜೈಲು ಶಿಕ್ಷೆ ಅನುಭವಿಸುವ ಧಣಿ, ದಳಪತಿ, ಶಾನುಭೋಗ ಮತ್ತು ಗೌಡ ಮರಳಿ ಊರಿಗೆ ಬರುವ ವೇಳೆಗೆ ತಮ್ಮಿಂದಲೇ ಕ್ರೂರ ಶಿಕ್ಷೆಗೊಳಗಾಗಿದ್ದ ಕೆಂಚ ಮತ್ತು ಬಸ್ಯ ಹೊಸ ಬದುಕು ಕಟ್ಟಿಕೊಂಡಿರುವ ಪ್ರಸಂಗ, ವರ್ತಮಾನದ ಸಮಾಜದಲ್ಲಿ ಗಟ್ಟಿಯಾಗಿರುವ ಸಾಂವಿಧಾನಿಕ ಪ್ರಜ್ಞೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಿಂಬಿಸುವಂತಿದೆ. ಶ್ರೀಧರ ಮತ್ತು ನಾಗ್ಯಾ ಈ ಇಬ್ಬರ ಬಾಂಧವ್ಯ ಸಮನ್ವಯ-ಸೌಹಾರ್ದತೆಯ ಸಂದೇಶವನ್ನು ಸಾರುವಂತೆ ಲೇಖಕರು ಪ್ರಸ್ತುತಪಡಿಸಿದ್ದಾರೆ.
ಪಿತೃಪ್ರಧಾನ ಮೌಲ್ಯಗಳು ಮತ್ತು ಊಳಿಗಮಾನ್ಯ ದರ್ಪ ಕಾನೂನಾತ್ಮಕ ಶಿಕ್ಷೆಗಳಿಂದ ತಹಬಂದಿಗೆ ಬರುವುದಿಲ್ಲ. ಏಕೆಂದರೆ ಇದು ವ್ಯಕ್ತಿಯ ನೆಲೆಯಲ್ಲಿ ಬೇರೂರಿರುವ ಶತಮಾನಗಳ ಬೌದ್ಧಿಕ ಚಿಂತನೆಯಾಗಿ ಅಸ್ತಿತ್ವ ಕಾಪಾಡಿಕೊಂಡಿರುತ್ತದೆ. ʼ ಸಂಬಳಿಗೋಲು ʼ ಕಥನದಲ್ಲೂ ಇದನ್ನೇ ಲೇಖಕರು ಚಿತ್ರಿಸಿದ್ದಾರೆ. ಪತ್ರಕರ್ತ ರಾಜಣ್ಣ ಪ್ರಜಾಪ್ರಭುತ್ವ ಮೌಲ್ಯಗಳ ಪ್ರತಿನಿಧಿಯಾಗಿ ಹುತಾತ್ಮನಾಗುತ್ತಾನೆ. ಆದರೆ ಗ್ರಾಮದ ಯುವಕರಲ್ಲಿ ಮೂಡಿಸುವ ಹೋರಾಟದ ಛಲ, ಸೈದ್ಧಾಂತಿಕ ಅರಿವು, ಮಾರ್ಕ್ಸ್ ಮತ್ತು ಅಂಬೇಡ್ಕರ್ ಅವರ ತಾತ್ವಿಕ ಪ್ರಜ್ಞೆ ಶ್ರೀಧರನ ಬೆಳವಣಿಗೆಯಲ್ಲಿ ಸಾಕಾರಗೊಳ್ಳುವುದು ಬಹಳ ಸಹಜವಾಗಿ ಮೂಡಿಬಂದಿರುವ ಪಯಣ. ಕಾದಂಬರಿಯ ಕಥಾವಸ್ತು ನಿಜ ಘಟನೆಗಳನ್ನೇ ಆಧರಿಸಿದ್ದರೂ, ಗುರುರಾಜ ದೇಸಾಯಿ ಅವರ ನಿರೂಪಣೆಯ ಶೈಲಿ ಇದನ್ನು ಸಾಮಾಜಿಕ ಚೌಕಟ್ಟಿನಲ್ಲಿ ತಂದು ನಿಲ್ಲಿಸುತ್ತದೆ.
ಸಾಹಿತ್ಯಿಕ ಲಕ್ಷಣದ ಜೀವನ ಕಥನ
ಆರಂಭದಲ್ಲೇ ಹೇಳಿದಂತೆ ಸಾಹಿತ್ಯ ಪ್ರಕಾರಗಳ ವರ್ಗೀಕರಣವನ್ನು ಬದಿಗಿಟ್ಟು ಈ ಹೃದಯಂಗಮ ಕಥನವನ್ನು ಓದುವಂತೆ ಮಾಡಿರುವುದು ಸಂಗಾತಿ ಗುರುರಾಜ ದೇಸಾಯಿ ಅವರ ಸಾಹಿತ್ಯಿಕ ಹಿರಿಮೆ. ಇಡೀ ಕಥನದಲ್ಲಿ ಕಾಣುವ ಸಮಾನ ಎಳೆ ಎಂದರೆ, ಭಾರತೀಯ ಸಮಾಜದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಶೋಷಣೆಯ ಕ್ರೌರ್ಯ ಮತ್ತು ದೌರ್ಜನ್ಯದ ಹಿಂಸೆ. ವರ್ತಮಾನದ ಬದಲಾದ ಪರಿಸ್ಥಿತಿಗಳಲ್ಲಿ ಈ ಕಥನ ಕೇವಲ ಚರಿತ್ರೆಯ ಭಾಗವಾಗಿ ಉಳಿಯುತ್ತದೆಯೇ ? ಖಚಿತವಾಗಿಯೂ ಇಲ್ಲ ಎಂದು ಹೇಳಬಹುದು. ಏಕೆಂದರೆ ಇದೇ ರೀತಿಯ ಅಥವಾ ಇದೇ ಮಾದರಿಯ ಭಿನ್ನ ರೂಪದ ಹಿಂಸೆ, ದೌರ್ಜನ್ಯ, ಕ್ರೌರ್ಯ ಮತ್ತು ಅಮಾನುಷತೆಯನ್ನು ಕಂಬಾಲಪಲ್ಲಿಯಿಂದ ಖೈರ್ಲಾಂಜಿ-ಊನ ವರೆಗೂ ಕಂಡಿದ್ದೇವೆ.
ಸಮಾಜದಲ್ಲಿ ನಡೆಯುವ ಇಂತಹ ಕ್ರೂರ ನಡವಳಿಕೆಗಳನ್ನು ಅನುಭವಾತ್ಮಕವಾಗಿ, ಅನುಭಾವದ ನೆಲೆಯಲ್ಲಿ ಕಂಡಾಗ, ಸಂವೇದನಾಶೀಲ ಮನಸ್ಸು ಸಹಜವಾಗಿ ಸಮಾಜಮುಖಿಯಾಗಬೇಕು. ಹಾಗೆಯೇ ಯಾವುದೇ ಸಮಾಜದಲ್ಲಾದರೂ ಅಂತಿಮವಾಗಿ ನ್ಯಾಯ ಗೆಲ್ಲಬೇಕು. ಅನ್ಯಾಯಗಳು ಕೊನೆಯಾಗಬೇಕು. ದೌರ್ಜನ್ಯಗಳು ಅವಸಾನವಾಗಬೇಕು. ವರ್ತಮಾನದ ಭಾರತದಲ್ಲಿ ಈ ಕನಸನ್ನು ಹೊತ್ತುಕೊಂಡೇ ಶೋಷಿತ ಸಮುದಾಯಗಳು ನಿರಂತರ ಹೋರಾಟಗಳಲ್ಲಿ ತೊಡಗಿವೆ. ಈ ಹೋರಾಟಗಳಿಗೆ ʼ ಸಂಬಳಿಗೋಲು ʼ ಒಂದು ನೆನಪಿನ ಭಿತ್ತಿಯಾಗಿ ಕಂಡರೆ ಮತ್ತೊಂದು ಮಗ್ಗುಲಿನಲ್ಲಿ ಭರವಸೆ ಮೂಡಿಸುವ ದರ್ಪಣವಾಗಿಯೂ ಕಾಣಬೇಕಿದೆ. ಈ ದೃಷ್ಟಿಯಿಂದ ಗುರುರಾಜ ದೇಸಾಯಿ ಅವರ ಕಾದಂಬರಿ ʼ ಸಂಬಳಿಗೋಲು ʼ ಒಂದು ಉತ್ತಮ ಸಾಹಿತ್ಯ ಕೃತಿಯಾಗಿ ನಿಲ್ಲುತ್ತದೆ.
ಗುರುರಾಜ ದೇಸಾಯಿ ಅಭಿನಂದನಾರ್ಹರು. ಅವರ ಅನುಭವ, ಅನುಭಾವಗಳ ಪಯಣದಿಂದ ಮತ್ತಷ್ಟು ಕಥನಗಳು ಹೊರಹೊಮ್ಮಲಿ ಎಂದು ಅಪೇಕ್ಷಿಸುತ್ತೇನೆ.
-೦-೦-೦-೦-
bevarahani1