ಕರ್ನಾಟಕ ಶಿಕ್ಷಣ ನೀತಿ ಮತ್ತು ದ್ವಿಭಾಷಾ ನೀತಿಯ ತುರ್ತು  KP Nataraj

ಕಳೆದ ವಾರ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್ ಮಾಡಿದ ಭಾಷಣದ ಆಯ್ದ ಭಾಗವಿದು. ಕನ್ನಡದ ಮಟ್ಟಿಗೆ ಇನ್ನೆಂದೂ ಕಾಣಲಾರದಂಥ ದೊಡ್ಡ ಮಟ್ಟದ ಭಾಷಾ ಆಂದೋಲನ ಗೋಕಾಕ್ ಚಳವಳಿ ಕೂಡಾ ಕನ್ನಡವನ್ನು ಆದ್ಯ ಭಾಷೆಯನ್ನಾಗಿ ಮಾಡುವಲ್ಲಿ ಯಶಸ್ಸು ಕಾಣಲಿಲ್ಲ. ತ್ರಿಭಾಷಾ ಹಾಗೂ ದ್ವಿಭಾಷಾ ಸೂತ್ರಗಳು ಕನ್ನಡವನ್ನು ಇನ್ನಷ್ಟು ಅಬ್ಬೇಪಾರಿಯನ್ನಾಗಿ ಮಾಡುತ್ತಿವೆ ಎನ್ನುತ್ತಾರೆ ನಟರಾಜ್. 

ಕರ್ನಾಟಕ ಶಿಕ್ಷಣ ನೀತಿ ಮತ್ತು ದ್ವಿಭಾಷಾ ನೀತಿಯ ತುರ್ತು                                                                                                                                    KP Nataraj

ಡಾ.ಕೆ.ಪಿ.ನಟರಾಜ್


************************

    1960ರ ದಶಕದಲ್ಲಿ ದಕ್ಷಿಣ ಭಾರತೀಯ ಭಾಷಿಕ ಸಮುದಾಯಗಳ ಮೇಲೆ ಹೇರಲಾದ ತ್ರಿಬಾಷಾ ಸೂತ್ರವು ಕನ್ನಡದ ಮಹಾಕವಿ ಕುವೆಂಪು ಅವರು ವಿವರಿಸಿದಂತೆ ಉತ್ತರ ಭಾರತ ಕೇಂದ್ರಿತ ಹಿಂದಿ ಪ್ರಭುತ್ವವು ದಕ್ಷಿಣದ ದ್ರಾವಿಡ ಭಾಷಾ ಪರಿವಾರಗಳ ಮೇಲೆ ಹಿಂದಿಯನ್ನು ಹಿಂದಿನ ಬಾಗಿಲಿನಿಂದ ಒಳ ತೂರಿಸುವ ಸಂಚಾಗಿತ್ತು . ತ್ರಿಭಾಷಾ ನೀತಿಯು ಇಡೀ ದೇಶಕ್ಕೆ ಅನ್ವಯವಾಗಬೇಕಿತ್ತಾದರೂ ಉತ್ತರದ ರಾಜ್ಯಗಳು ಮೂರನೆಯ ಭಾಷೆಯಾಗಿ ಯಾವುದೇ ದಕ್ಷಿಣದ ಭಾಷೆಯನ್ನು ಕಲಿಯದೇ ಹೋದವು. 

    ಈ ಸಂಚಿನ ವಿರುದ್ಧ ತಮಿಳುನಾಡು ಜನವರಿ 26, 1968 ರಂದು ವಿಧಾನಸಭೆಯಲ್ಲಿ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸುವ ನಿರ್ಣಯವನ್ನು ಅಂಗೀಕರಿಸಿತು. "ವಿಭಿನ್ನ ಭಾಷೆಗಳು, ಸಂಸ್ಕೃತಿಗಳು ಮತ್ತು ನಾಗರಿಕತೆಗಳ ಭೂಮಿಯಲ್ಲಿ ಭಾರತದ ಅಧಿಕೃತ ಭಾಷೆಯಾಗಿ ಪ್ರಾದೇಶಿಕ ಭಾಷೆಗಳಲ್ಲಿ ಒಂದನ್ನು ಅಳವಡಿಸಿಕೊಳ್ಳುವುದರಿಂದ, ಒಂದು ಪ್ರದೇಶವು ಇತರ ಪ್ರದೇಶಗಳ ಮೇಲೆ ಪ್ರಾಬಲ್ಯ ಸಾಧಿಸುತ್ತದೆ ಎಂದು ನಿರ್ಣಯವು ವಾದಿಸಿತು. ತಮಿಳು ಮತ್ತು ಇತರ ರಾಷ್ಟ್ರೀಯ ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಅಳವಡಿಸಿಕೊಳ್ಳುವವರೆಗೆ,ಇಂಗ್ಲಿಷ್ ಅಧಿಕೃತ ಭಾಷೆಯಾಗಿ ಮುಂದುವರಿಯಬೇಕು ಮತ್ತು ಸಂವಿಧಾನವನ್ನು ಸೂಕ್ತವಾಗಿ ತಿದ್ದುಪಡಿ ಮಾಡಬೇಕು ಎಂದು ಅದು ಪ್ರಸ್ತಾಪಿಸಿತು."1968 ರಲ್ಲಿಯೇ ದ್ವಿಭಾಷಾ ನೀತಿಯನ್ನು ಜಾರಿಮಾಡಿದ ಅಣ್ಣಾದೊರೈ ಅವರ ಮುಂಗಾಣ್ಕೆ ಮತ್ತು ಧೀಮಂತಿಕೆಯನ್ನು ಇದು ತೋರುತ್ತದೆ 

   ಕರ್ನಾಟಕದಲ್ಲಿ ಒಂದೇ ಒಂದು ಭಿನ್ನ ಮತದ ಬಂಡಾಯ ಧ್ವನಿ ಎದ್ದಿತ್ತು ಅದೇ ಕುವೆಂಪು . ತ್ರಿಭಾಷಾ ಸೂತ್ರದ ಅಪಾಯದ ಬಗ್ಗೆ ಕುವೆಂಪು ಅವರದ್ದು ಜೀವಮಾನ ಕಾಲದ ಹೋರಾಟವಾಗಿತ್ತು. ಆದರೆ ಇವತ್ತಿನವರೆಗೂ ಕನ್ನಡಿಗರು ಕುವೆಂಪು ಅವರ ಎಚ್ಚರಿಕೆಯ ಕರೆಗೆ ಓಗೊಡದೆ ದಿವ್ಯ ಮೌನಕ್ಕೆ ಶರಣಾಗಿದ್ದೇವೆ. ಈ ತ್ರಿಭಾಷಾ ಸೂತ್ರದ ಕಾರಣದಿಂದಲೆ ಹಿಂದಿ ಮತ್ತು ಸಂಸ್ಕೃತ ಕರ್ನಾಟಕದ ಹೆಗಲೇರಿದವು . ಈ ಬಗ್ಗೆ ಉದಾಸೀನರಾದ ಕನ್ನಡಿಗರಿಗೆ ಹಿಂದಿ ಮತ್ತು ಸಂಸ್ಕೃತಗಳನ್ನು ರಾಷ್ಟ್ರ ಭಾಷೆ , ದೇವ ಭಾಷೆ ಎಂದೆಲ್ಲ ಹೇಳಿ ಕಳೆದ ಐವತ್ತು ವರ್ಷಗಳುದ್ದಕ್ಕೂ ತಲೆ ತೊಳೆಯಲಾಗಿದೆ 

    ಸಂಸ್ಕೃತ ಭಾಷಾ ಕಲಿಕೆ ಎಷ್ಟೊಂದು ಆಕ್ಷೇಪಾರ್ಹದ್ದೂ , ಅನ್ಯಾಯದ್ದೂ ಆಗಿದೆಯೆಂದರೆ , ಕನ್ನಡದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯಲು ಅಖಿಲ ಭಾರತ ಮಟ್ಟದ ಸಂಸ್ಕೃತ ಲಾಬಿ ಸಂಸ್ಕೃತ ಪಠ್ಯಗಳನ್ನು ಸರಳಗೊಳಿಸಿದೆಯಷ್ಟೇ ಅಲ್ಲ , ಸಂಸ್ಕೃತ ತೆಗೆದುಕೊಂಡ ವಿದ್ಯಾರ್ಥಿಗೆ ಪರೀಕ್ಷೆಗಳಲ್ಲಿ ಕನ್ನಡ ಮತ್ತು ಇಂಗ್ಳಿಷ್ ಗಳಲ್ಲಿಯೂ ಉತ್ತರ ಬರೆಯಲು ಅವಕಾಶ ಮಾಡಿಕೊಡಲಾಗಿದೆ . ಹಲವು ದಶಕಗಳಿಂದಲೂ ಸಂಸ್ಕೃತ ವರ್ಣಗಳನ್ನು ಕಲಿಯದೆಯೇ ಇಲ್ಲಿ ಕನ್ನಡ ಅಥವಾ ಇಂಗ್ಲಿಷ್‌ಗಳಲ್ಲಿ ಉತ್ತರ ಬರೆದು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ತೆಗೆದು ಕನ್ನಡದ ವಿರುದ್ಧ ವಿಜಯದ ನಗೆ ಬೀರಬಹುದಾಗಿದೆ ಇದು ಕನ್ನಡ ಸಂಜಾರ‍್ಯಾರಿಗೂ ಪ್ರಶ್ನಿಸಬೇಕಾದ ಮೋಸ ಎಂದು ಅನ್ನಿಸಿಯೇ ಇಲ್ಲ 

    ಇದರ ವೈಪರೀತ್ಯವನ್ನು ಅರ್ಥವಾಗಲು ನಾವು ಕನ್ನಡ ಪ್ರಶ್ನೆಪತ್ರಿಕೆಗೆ ಇಂಗ್ಲಿಷ್‌ನಲ್ಲಿ ಉತ್ತರ ಬರೆಯುವ ಅವಕಾಶ ಕಲ್ಪಿಸಲಾದ ಸನ್ನಿವೇಶವನ್ನು ಊಹಿಸಿ ನೋಡಬೇಕಾಗುತ್ತದೆ . ಕನ್ನಡ ಭಾಷೆಯ ವಿದ್ಯಾರ್ಥಿಗಳು ಕನ್ನಡ ಪ್ರಶ್ನೆಗಳಿಗೆ ಇಂಗ್ಳಿಷ್ ನಲ್ಲಿ ಉತ್ತರ ಬರೆಯಲಾದರೂ ಸಾಧ್ಯವೆ? ಬರೆದರೂ ಕನ್ನಡ ಅಧ್ಯಾಪಕ ಅದನ್ನು ಮೌಲ್ಯಮಾಪನ ಮಾಡಲು ಸಾಧ್ಯವೆ ? ಎಂಬ ಪ್ರಶ್ನೆಗಳನ್ನು ಗೇಲಿಯನ್ನು ಅವಹೇಳನವನ್ನು ,ಆಕ್ರಮಣವನ್ಮು ಘೆರಾವೋಗಳನ್ನು ಮಾಡಲು ವೀರ ಕನ್ನಡಿಗರು ಬೀದಿಗಿಳಿದಿರುತ್ತಿದ್ದರು .ಎಲ್ಲೋ ತಮ್ಮ ಪೊಟರೆಗಳಲ್ಲಿ ವಾಸಿಸುತ್ತ ಕಣ್ಮರೆಯಲ್ಲಿದ್ದಂತೆ ತೋರುವ ನಮ್ಮ ವಿದ್ಯಾರ್ಥಿ ಗಣಂಗಳ ಮಹಾ ಮಹಾ ಪೋಷಕರು ತಮ್ಮ ನಾಲಗೆಗಳನ್ನು ಜಳಪಿಸುತ್ತ ಬೀದಿಗಿಳಿದಿರುತ್ತಿದ್ದರು 

   ಹೀಗೆ ಕನ್ನಡವನ್ನು ಉದ್ದಕ್ಕೂ ಕೊಲ್ಲುತ್ತ ಬಂದಿರುವ ತ್ರಿಭಾಷಾ ಸೂತ್ರವನ್ನು ಇದುವರೆವಿಗೂ ಪ್ರಶ್ನಿಸದ ಕಾರಣಕ್ಕೆ ನಾವು ಮುಂದೆ ಗೋಕಾಕ್ ಚಳವಳಿಯಂತಹ ಬಹುದೊಡ್ಡ ಭಾಷಾ ಚಳವಳಿಯನ್ನು ಈ ನೆಲದಲ್ಲಿ ಕಂಡರೂ ,ಅ ಚಳವಳಿಯ ಹೋರಾಟದ ಫಲವನ್ನು ದಕ್ಕಿಸಿಕೊಳ್ಳಲಾರದೇಹೋದೆವು 

    1980ರ ದಶಕವನ್ನು ನಾವು ಗೋಕಾಕ್ ಚಳವಳಿಯ ಯುಗ ಎನ್ನಬಹುದಾಗಿದೆ ಕುವೆಂಪು ಮತ್ತು ಡಾ ರಾಜ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಚಳವಳಿ ಕನ್ನಡಿಗರಲ್ಲಿ ಆತ್ಮಾಭಿಮಾನವನ್ನು , ಭಾಷಾಭಿಮಾನವನ್ನು ಜಾಗೃತಗೊಳಿಸಿತಾದರೂ , ಚಳವಳಿಯ ಉದ್ದೇಶಿತ ಗುರಿಯಾದ ಪ್ರೌಢ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯುವ ಆಕಾಂಕ್ಷೆ ಈಡೇರಲಿಲ್ಲ ಯಾಕೆಂದರೆ ಗೋಕಾಕ್ ಚಳವಳಿ ತ್ರಿಭಾಷಾ ನೀತಿಯನ್ನು ತಿರಸ್ಕರಿಸುವ ಚಳವಳಿಯಾಗದೆ ಕೇವಲ ಸಂಸ್ಕೃತದ ಪಾರಮ್ಯವನ್ನು ದ್ವಿತೀಯಗೊಳಿಸುವ ಕಾರಣಕ್ಕೆ ನಡೆದದ್ದಾದ್ದರಿಂದ ಅದರ ಪರಿಣಾಮವಾಗಲಿ ಪ್ರಭಾವವಾಗಲಿ ಬಹುಬೇಗ ಕಣ್ಮರೆಯಾಗಿಹೋಯಿತೆಂದೇ ಹೇಳಬೇಕಾಗುತ್ತದೆ . ಇದರೊಡನೆ ಕರ್ನಾಟಕದ ಕನ್ನಡ ವಿರೋಧಿ ಹಿತಾಸಕ್ತ ಶಕ್ತಿಗಳೇ ಗೋಕಾಕ್ ವರದಿಯ ಜಾರಿಯಾಗದಂತೆ ಕಾನೂನು ಹೋರಾಟದಲ್ಲಿ ಪರಾಭವಗೊಳಿಸುತ್ತವೆ 

    ಕನ್ನಡದ ಸ್ಥಾನಮಾನವನ್ನು ಸಾರ್ವಭೌಮ ಸ್ಥಾನಕ್ಕೇರಿಸಲು ಉದ್ದೇಶಿಸಿದ್ದ ಗೋಕಾಕ್ ಚಳವಳಿಯ ವಿಫಲತೆಯು ಕನ್ನಡಿಗರಾದ ನಮಗೆ ಆದ ಚಾರಿತ್ರಿಕ ಅವಹೇಳನವಾಗಿದೆ , ಮುಖ ಭಂಗವಾಗಿದೆ ಮತ್ತು ಇವತ್ತಿಗೂ ಅನುಭವಿಸಬೆಕಾಗಿ ಬಂದಿರುವ ಮೂಲಭೂತ ಅನ್ಯಾಯವಾಗಿದೆ . ಶಿಕ್ಷಣದಂತಹ ವಿಷಯವು ರಾಜ್ಯಗಳ ಹಕ್ಕಿಗೆ ಬಿಟ್ಟ ಸಂಬAಧಿಸಿದ ವಿಷಯವಾದರೂ , ಹೊಣೆ ಹೊತ್ತುಕೊಳ್ಳುವ ಯೋಗ್ಯತೆ ಇಲ್ಲದೆ , 1968 ,1986, 1993 ಮತ್ತು 2020 ರ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಅಂದರೆ ಒಕ್ಕೂಟ ಸರ್ಕಾರಗಳ ನೀತಿಗಳನ್ನೇ ಕರ್ನಾಟಕ ವಿಧೇಯವಾಗಿ ಅನುಸರಿಸುತ್ತಬಂದಿದೆ. 1968ರಿಂದಲೇ ತಮಿಳುನಾಡು ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಉದ್ದಕ್ಕೂ ಒಪ್ಪಿಕೊಳ್ಳದೆ ಅವೆಲ್ಲವುಗಳ ಅಂತರ್ಗತ ತ್ರಿಭಾಷಾ ನೀತಿಯನ್ನೂ ಮತ್ತು ಸಾಂಸ್ಕೃತಿಕ ಗುಲಾಮಗಿರಿಯನ್ನೂ ದೂರವಿಡುತ್ತಲೇ ಬಂದಿದೆ . ಬಂಗಾಳ , ಪಂಜಾಬ್ ಮತ್ತು ಗೋವಾದಂತಹ ರಾಜ್ಯಗಳೂ ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿವೆ ..


    ಈ ಮಧ್ಯೆ , 2023 ರಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಒಂದು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿತು . ಕೋವಿಡ್ ಅಂಧ ಯುಗದಲ್ಲಿ ರಾಜ್ಯದ ಮೇಲೆ ಹೇರಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020 ( ಓಇP 2020 )ಯನ್ನು ಕಿತ್ತೆಸೆದು , ರಾಜ್ಯಕ್ಕೆ ತನ್ನದೇ ಆದ ಶಿಕ್ಷಣ ನೀತಿಯನ್ನು ಹೊಂದುವ ಐತಿಹಾಸಿಕ ನಿರ್ಧಾರ ಅದು . 


    12. 8. 2025 ರಂದು ಪ್ರೊ ಸುಖದೇವ್ ಥೋರಟ್ ಅವರ ನೇತೃತ್ವದ ರಾಜ್ಯ ಶಿಕ್ಷಣ ಆಯೋಗವು ಈಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅಧ್ಯಕ್ಷ ಪ್ರೊ ಸುಖದೇವ್ ಥೋರಟ್ ಮತ್ತು ಸದಸ್ಯರಾದ ಪಿವಿ ನಿರಂಜನಾರಾಧ್ಯ ಅವರು ದ್ವಿಭಾಷಾ ನೀತಿ ಮತ್ತು , ವಿದೇಶೀ ಯುನಿವರ್ಸಿಟಿಗಳ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಕೆಲವು ಸ್ಪಷ್ಟನೆಗಳನ್ನು ನೀಡಿದ್ದಾರೆ ..

   ಅವರ ಸ್ಪಷ್ಟನೆಯನುಸಾರ ಕರ್ನಾಟಕದ 90% ಶಾಲೆಗಳಲ್ಲಿ ಕನ್ನಡ + ಇಂಗ್ಲಿಷ್ ಮಾದರಿಯ ದ್ವಿಬಾಷಾ ನೀತಿ ಜಾರಿಗೆ ಬರುತ್ತದೆ ಆದರೆ /ಮತ್ತು ಇನ್ನು ಉಳಿದ 10% ಶಾಲೆಗಳಲ್ಲಿ ಮಾತ್ರ ತ್ರಿಭಾಷಾ ಸೂತ್ರ ಹಿಂದಿನAತೆ ಮುಂದುವರಿಯುತ್ತದೆ ಎಂದಿದ್ದಾರೆ 

 ಈ ಸ್ಪಷ್ಟನೆಯ ಹಿನ್ನೆಲೆಯಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ : 


ಒಂದು : ಹಾಗಿದ್ದರೆ ದೇಶದಾದ್ಯಂತ ಮಾಧ್ಯಮಗಳಿಗೆ ಬಿಡುಗಡೆಮಾಡಿದ ಶಿಫಾರಸ್ ಪಟ್ಟಿಗಳಲ್ಲಿ "ಕನ್ನಡ / ಮಾತೃ ಭಾಷೆ + ಇಂಗ್ಲಿಷ್ " ಸ್ವರೂಪದ ದ್ವಿಭಾಷಾ ನೀತಿಯನ್ನು ಪ್ರಕಟಣೆಗೆ ಕೊಟ್ಟಿದ್ದೇಕೆ ? ಈ ಗೊಂದಲ ಸೃಷ್ಟಿಯ ಉದ್ದೇಶವಾದರೂ ಏನು ?

ಎರಡು : 
ಬಾಷಾ ಅಲ್ಪ ಸಂಖ್ಯಾತ ಶಾಲೆಗಳಲ್ಲಿ ತ್ರಿಭಾಷಾ ನೀತಿ ಮುಂದುವರಿಯುತ್ತದೆ ಆದರೆ ಮೂರನೆ ಭಾಷೆ ಐಚ್ಛಿಕ ಅದು ಪರೀಕ್ಷೆಗೆ ಇರುವುದಿಲ್ಲ ಎನ್ನುವುದು ಅವರ ಮತ್ತೊಂದು ಸ್ಪಷ್ಟನೆ . ಅದು ಹೀಗಿದೆ : 


"ಆದಾಗ್ಯೂ, ರಾಜ್ಯದಲ್ಲಿ ಉರ್ದು, ತೆಲುಗು, ತಮಿಳು, ಮರಾಠಿ, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಆರು ಭಾಷಾ ಅಲ್ಪಸಂಖ್ಯಾತ ಶಾಲೆಗಳಿವೆ. ಈ ಶಾಲೆಗಳಲ್ಲಿ ಕನ್ನಡವನ್ನು ಮೊದಲ ಅಥವಾ ಎರಡನೇ ಭಾಷೆಯಾಗಿ ಕಡ್ಡಾಯಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಬೋಧನಾ ಮಾಧ್ಯಮವು ಆಯಾ ಮಾತೃಭಾಷೆಯಾಗಿರುತ್ತದೆ.


ಒಂದು ವೇಳೆ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯನ್ನು ಪ್ರಥಮ ಭಾಷೆಯಾಗಿ ಆರಿಸಿಕೊಂಡರೆ, ಆ ಶಾಲೆಗಳಲ್ಲಿ ಕನ್ನಡ ಎರಡನೇ ಭಾಷೆಯಾಗಿರುತ್ತದೆ. ಇಂಗ್ಲಿಷ್ ಅನ್ನು ಮೂರನೇ ಭಾಷೆಯಾಗಿ ಕಲಿಸಲಾಗುತ್ತದೆ.


ಒಂದು ವೇಳೆ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯನ್ನು ಕಲಿಯಬೇಕೆಂದರೆ , ಅವರು ಕನ್ನಡವನ್ನು ಪ್ರಥಮ ಭಾಷೆಯಾಗಿ ಮತ್ತು ಇಂಗ್ಲಿಷ್ ಅನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳಬೇಕು. ಅಥವಾ, ಇಂಗ್ಲಿಷ್ ಅನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡರೆ, ಕನ್ನಡವು ದ್ವಿತೀಯ ಭಾಷೆಯಾಗಿರುತ್ತದೆ. ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯನ್ನು ಮೂರನೇ ಭಾಷೆಯಾಗಿ ಕಲಿಯಲು ಅವಕಾಶ ನೀಡಲಾಗುತ್ತದೆ.”

ಈ ಸ್ಪಷ್ಟನೆಯ ಪ್ರಕಾರ ಈ 'ನೀತಿ '' ಕನ್ನಡ ವನ್ನು ಮೂರನೆಯ ಬಾಷೆಯ ಸ್ಥಾನಕ್ಕೆ ದೂಡದೆ ಮೊದಲ ಅಥವಾ ಎರಡನೆ ಸ್ಥಾನದಲ್ಲಿ ಇರುವ ಹಾಗೆ ನೋಡಿಕೊಳ್ಳುತ್ತದೆ . ಆದರೆ ಹಾಗೆ ತಮ್ಮ ಬಾಷೆಯನ್ನು ಐಚ್ಚಿಕ ಮತ್ತು ಪರೀಕ್ಷೆಗೆ ಕಡ್ಡಾಯವಲ್ಲದ ಜಾಗದಲ್ಲಿ ನೋಡಲು ಸದರಿ ಸಮುದಾಯಗಳ ಜನ ಒಪ್ಪುತ್ತಾರೆಯೆ ? ಎನ್ನುವುದು ಒಂದು ಪ್ರಶ್ನೆ..

ಅಥವಾ ತಮ್ಮ ಭಾಷೆಯನ್ನು ಪ್ರಥಮ ಸ್ಥಾನದಲ್ಲಿ ಕಲಿಯಬಯಸುವವರು ಇಂಗ್ಲಿಷ್ ಅನ್ನು ಮೂರನೆಯ ಭಾಷೆಯಾಗಿ , ಪರೀಕ್ಷೆಗಿಲ್ಲದ ಸ್ಥಾನದಲ್ಲಿ ಇರಿಸಬಯಸುತ್ತಾರೆಯೆ ?ಈ ಗೊಂದಲವನ್ನು ಮೂರೂ ಬಾಷೆಗಳನ್ನೂ ಕಡ್ಡಾಯ ಮಾಡುವ ಮೂಲಕ ಪರಿಹರಿಸಬಹುದಿತ್ತಲ್ಲವೆ ?

ಮೂರನೆ ಭಾಷೆಯನ್ನು ಒಂದು ವಿಷಯವಾಗಿ ಮತ್ತು ಪರೀಕ್ಷೆಗೆ ಕಡ್ಡಾಯ ಮಾಡಿದಾಗ , ಮೂರನೆಯ ಭಾಷೆಯಾಗಿ ಕನ್ನಡವನ್ನು ತೆಗೆದುಕೊಂಡ ವಿದ್ಯಾರ್ಥಿಗಳು ಅದನ್ನು ಗಂಭೀರವಾಗಿ ಓದಲು ಪ್ರಯತ್ನಿಸುತ್ತಾರೆ . ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗ ಉತ್ತರಿಸಲು ಮನವಿ ಮಾಡುತ್ತೇನೆ

 

ತ್ರಿಭಾಷಾ ನೀತಿಯ ವಂಚನೆ 


ಭಾರತ ಸರ್ಕಾರದ ಅನುದಾನದಲ್ಲಿ ತಾರತಮ್ಯ 


     2014-15 ಮತ್ತು 2024-25 ರ ನಡುವೆ ಸಂಸ್ಕೃತದ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರ ₹2532.59 ಕೋಟಿ ಖರ್ಚು ಮಾಡಿದೆ, ಇದು ಇತರ ಐದು ಶಾಸ್ತ್ರೀಯ ಭಾರತೀಯ ಭಾಷೆಗಳಾದ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾಗಳ ಒಟ್ಟು ವೆಚ್ಚದ 17 ಪಟ್ಟು ಹೆಚ್ಚಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯ ಮೂಲಕ ಮತ್ತು ಸಾರ್ವಜನಿಕ ದಾಖಲೆಗಳಿಂದ ಪಡೆದ ಮಾಹಿತಿಯ ಪ್ರಕಾರ. ಅಂದರೆ ಸಂಸ್ಕೃತಕ್ಕೆ ಪ್ರತಿ ವರ್ಷ (ಸರಾಸರಿ) ₹230.24 ಕೋಟಿ ಮತ್ತು ಇತರ ಐದು ಭಾಷೆಗಳಿಗೆ ಪ್ರತಿ ವರ್ಷ ₹13.41 ಕೋಟಿ. ಐದು ಶಾಸ್ತ್ರೀಯ ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ಹಣವನ್ನು ಪಡೆದ ತಮಿಳು, ಸಂಸ್ಕೃತದ ಒಟ್ಟು ನಿಧಿಯ 5% ಕ್ಕಿಂತ ಕಡಿಮೆ ಹಣವನ್ನು ಪಡೆದಿದೆ, ಕನ್ನಡ ಮತ್ತು ತೆಲುಗು ತಲಾ 0.5% ಕ್ಕಿಂತ ಕಡಿಮೆ ಹಣವನ್ನು ಪಡೆದಿವೆ ಮತ್ತು ಒಡಿಯಾ ಮತ್ತು ಮಲಯಾಳಂ ತಲಾ ಸಂಸ್ಕೃತದ ಒಟ್ಟು ಹಂಚಿಕೆಯ 0.2% ಕ್ಕಿಂತ ಕಡಿಮೆ ಹಣವನ್ನು ಪಡೆದಿವೆ. 2004 ರಲ್ಲಿ "ಶಾಸ್ತ್ರೀಯ" ಭಾಷೆಯಾಗಿ ಗೊತ್ತುಪಡಿಸಿದ ಮೊದಲ ಭಾಷೆಯಾದ ತಮಿಳು, ಭಾರತೀಯ ಭಾಷೆಗಳ ಪ್ರಚಾರಕ್ಕಾಗಿ (ಜಿಪಿಐಎಲ್) ಯೋಜನೆಯಡಿ ₹113.48 113.48ಕೋಟಿಗಳನ್ನು ಪಡೆದುಕೊಂಡಿದೆ. 2005ರಲ್ಲಿ ಸಂಸ್ಕೃತದ ಪ್ರಚಾರಕ್ಕಾಗಿ ಖರ್ಚು ಮಾಡಿದ ಮೊತ್ತಕ್ಕಿಂತ 22 ಪಟ್ಟು ಕಡಿಮೆ. 2008ಮತ್ತು 2014 ರ ನಡುವೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಪಡೆದ ಉಳಿದ ನಾಲ್ಕು ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೆ ಒಟ್ಟು ₹34.08ಕೋಟಿ ಹಣ ಖರ್ಚಾಗಿದೆ. ಖಚಿತವಾಗಿ ಹೇಳುವುದಾದರೆ, ಸಂಸ್ಕೃತದ ಮೇಲಿನ ಖರ್ಚು ಉರ್ದು, ಹಿಂದಿ ಮತ್ತು ಸಿಂಧಿ ಭಾಷೆಗಳಿಗಿಂತಲೂ ಹೆಚ್ಚಾಗಿದೆ