ಅವರ್ ಬಿಟ್ ಇವರ ಬಿಟ್ ಇವರ‍್ಯಾರು ಎನ್ನುತ್ತಿದೆಯೇ ‘ಬಿಟ್ ಕಾಯಿನ್’!? -ಕುಚ್ಚಂಗಿ ಪ್ರಸನ್ನ
bit coin block chain
ಒಂದು ಗಳಿಗೆ
ಅವರ್ ಬಿಟ್ ಇವರ ಬಿಟ್ ಇವರ‍್ಯಾರು
ಎನ್ನುತ್ತಿದೆಯೇ ‘ಬಿಟ್ ಕಾಯಿನ್’!?
-ಕುಚ್ಚಂಗಿ ಪ್ರಸನ್ನ
ಬಿಟ್ ಕಾಯಿನ್, ಬಿಟ್ ಕಾಯಿನ್ ಅಂತ ಎಲ್ಲರೂ ಮಾತಾಡ್ತಾ ಇದ್ದಾರೆ, ಪತ್ರಿಕೆಗಳಲ್ಲಿ , ಟಿವಿ ಚಾನೆಲ್‌ಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಪುನೀತ್ ನಂತರ ಟ್ರೆಂಡಿಂಗ್‌ನಲ್ಲಿರೋ ಪದ ಬಿಟ್ ಕಾಯಿನ್. ಬಿಟ್ ಕಾಯಿನ್ ಬಗ್ಗೆ ಮಾತಾಡೋವಾಗಲೆಲ್ಲ, ಬರೀವಾಗಲೆಲ್ಲ$ ಚಿಹ್ನೆ ಇರುವ ಚಿನ್ನದ ಬಣ್ಣದ ಕಾಯಿನ್‌ಗಳನ್ನೂ ತೋರಿಸ್ತಾ ಇದ್ದಾರೆ. ಹಂಗಂತ ಅದೊಂದು ನಮ್ಮ ರೂಪಾಯಿ ತರದ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ನಾಣ್ಯ ಅಂತ ಅಂದುಕೊಳ್ಳುವಂತಿಲ್ಲ. ಇದೊಂದು ಡಿಜಿಟಲ್ ಕರೆನ್ಸಿ. ಹಾಗಂತ ಹೇಳಿದ ಕೂಡಲೇ ಅರ್ಥವಾಗುವುದಿಲ್ಲವಾದರೆ ಒಂಚೂರು ಮಾನವನ ಇತಿಹಾಸಕ್ಕೆ ಹೋಗೋಣ.
ಬಿಟ್ ಕಾಯಿನ್ ಅರ್ಥ ಮಾಡಿಕೊಳ್ಳಲು ಹಣ ಮತ್ತು ಅದರ ವಹಿವಾಟಿನ ಕುರಿತ ಇತಿಹಾಸವನ್ನೂ ಗಮನಿಸಬೇಕಾಗುತ್ತದೆ. ನಾವು ಒಂದರಿಂದ ಹತ್ತರವರೆಗೆ ಎಣಿಸಲು ನಮ್ಮ ಕೈಬೆರಳುಗಳನ್ನು ಬಳಸುತ್ತೇವೆ, ಹತ್ತಕ್ಕಿಂತ ಹೆಚ್ಚಿಗೆ ಇದ್ದಾಗ ಬೆರಳುಗಳ ಮೂರು ಗೆರೆಗಳನ್ನೂ ಬಳಸಿಕೊಳ್ಳುತ್ತೇವೆ, ಇನ್ನೂ ಹೆಚ್ಚಿಗೆ ಆದಾಗ ಮಗ್ಗಿಯನ್ನು ಗುಣಗುಣಿತೊಡಗುತ್ತೇವೆ. ಅದೂ ಸಾಲದಾದಾಗ ಕಾಗದ, ಪೆನ್ನು ಬಳಸಿ ಕೂಡಿ, ಕಳೆದು, ಗುಣಿಸಿ ಭಾಗಿಸುತ್ತೇವೆ, ಇನ್ನೂ ಹೆಚ್ಚಿನ ಸಂಖ್ಯೆ ಮತ್ತು ಡೆಸಿಮಲ್‌ಗಳು ಬಂದಾಗ ಕ್ಯಾಲುಕಲೇಟರ್ ಹುಡುಕಾಡುತ್ತೇವೆ, ಈಗ ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲೇ ಈ ಕ್ಯಾಲುಕಲೇಟರ್ ಇರುತ್ತದೆ . ಈ ಕ್ಯಾಲುಕಲೇಟರ್ ಪದಕ್ಕೆ ಮೂಲ ಪದ ಕ್ಯಾಲುಕಲಸ್ ಅಂದರೆ ಎಣಿಕೆ ವಿಧಾನ ಅಂತ ಅರ್ಥ, ಮಾನವ ಎಣಿಕೆಯ ಪ್ರಾಥಮಿಕ ಪಾಠಗಳನ್ನು ಕಲಿಯುತ್ತಿದ್ದಾಗ, ಉದಾಹರಣೆಗೆ ಆತನ ಬಳಿ ನೂರು ಕುರಿಗಳಿವೆ ಎಂದರೆ, ಒಂದೊಂದು ಕುರಿಗೆ ಒಂದರಂತೆ ನೂರು ಸಣ್ಣ ಕಲ್ಲಿನ ಹರಳುಗಳನ್ನು ಒಂದು ಕೈ ಚೀಲಕ್ಕೆ ಹಾಕಿ ಇರಿಸಿಕೊಳ್ಳುತ್ತಿದ್ದನಂತೆ, ಒಂದು ಕುರಿ ಎರಡು ಮರಿ ಹಾಕಿದರೆ ಇನ್ನೂ ಎರಡು ಸಣ್ಣ ಕಲ್ಲ ಹರಳುಗಳನ್ನು ಆ ಚೀಲಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದನಂತೆ, ಅಕಸ್ಮಾತ್ ಒಂದು ಕುರಿಯನ್ನು ಯಾರಿಗಾದರೂ ಕೊಟ್ಟಾಗ ಆ ಚೀಲದಿಂದ ಒಂದು ಕಲ್ಲಹರಳನ್ನು ತೆಗೆದು ಅಚೆಗೆ ಎಸೆಯುತ್ತಿದ್ದನಂತೆ, ಈ ಕಲ್ಲ ಹರಳಿಗೆ ಕ್ಯಾಲುಕಲಸ್ ಎಂದು ಲ್ಯಾಟಿನ್ ಭಾಷೆಯಲ್ಲಿ ಕರೆಯುತ್ತಾರೆ. ಈ ಎಣಿಕೆಯ ವಿಧಾನವನ್ನು ಕ್ಯಾಲುಕಲೇಟ್ ಅಂತ ಇಂಗ್ಲಿಷಿನಲ್ಲಿ ನಾವು ಬಳಸುತ್ತಿದ್ದೇವೆ. ಹೀಗೆ ಇಂಥಾ ಅನಾದಿ ಕಾಲದ ಒರಟು ಎಣಿಕೆಯ ವಿಧಾನದಿಂದ ಅಗಣಿತ ಸಂಖ್ಯೆಗಳನ್ನು ಕ್ಷಣಾರ್ಧದಲ್ಲಿ ಗಣಿಸಿ ಉತ್ತರ ಹೇಳುವ ಸೂಪರ್ ಕಂಪ್ಯೂಟರ್ ಸೃಷ್ಟಿಸಿಕೊಂಡ ಮನುಷ್ಯ ಗ್ರೇಟ್ ಅಂತ ಅನಿಸುತ್ತೆ ಅಲ್ವಾ.
ಕಾಡಿನಲ್ಲಿ ಬೇಟೆೆಯಾಡುತ್ತಾ, ಯಾರೋ ಮಾಡಿದ ಬೇಟೆಯನ್ನು ಕಿತ್ತುಕೊಳ್ಳುತ್ತಾ, ಹಣ್ಣು ಹಂಪಲನ್ನು ತಿನ್ನುತ್ತಾ ಬೆಳೆದ ಮನುಷ್ಯ ಎಲ್ಲ ಋತುಗಳಲ್ಲೂ ಏಕ ರೂಪದ ಏಕ ಪ್ರಮಾಣದ ಆಹಾರ ಒದಗಿಸಿಕೊಳ್ಳಲು ಸಂಗ್ರಹ ಗುಣವನ್ನು ರೂಡಿಸಿಕೊಂಡ, ಮುಂದುವರೆದು ಯಾರೋ ಸಂಗ್ರಹಿಸಿದ್ದನ್ನು ತೋಳ್ಬಲ ಬಳಸಿ ಕಿತ್ತುಕೊಳ್ಳುವ ಅಥವಾ ದೋಚುವ ಪ್ರವೃತ್ತಿಯನ್ನೂ ಬಳಕೆಗೆ ತಂದ. ಪದಾರ್ಥಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ವ್ಯವಹಾರ ಆರಂಭಿಸಿದ ಮಾನವ, ವಸ್ತುಗಳ ಬದಲಿಗೆ ಬೆಲೆಬಾಳುವ ಚಿನ್ನ,ಹಿತ್ತಾಳೆ,ತಾಮ್ರದ ಲೋಹಗಳನ್ನು ಹಣದ ರೂಪದಲ್ಲಿ ಬಳಸುವುದನ್ನು ಆರಂಭಿಸಿದ. ಈ ಹಣದ ಮೇಲೆ ಆಳುವ ರಾಜನ ಹತೋಟಿ ಆರಂಭವಾಯಿತು. ರಾಜ ಟಂಕಿಸಿದ ನಾಣ್ಯಕ್ಕೆ ಮಾತ್ರ ಬೆಲೆ ಎನ್ನುವ ಕಾಲ ಬಂತು.
ಕಾಲಾನಂತರ ಸರ್ಕಾರಗಳು ಕಾಗದದ ಹಣವನ್ನು ಚಲಾವಣೆಗೆ ತಂದವು. (ತೊಘಲಕ್ ಎಂಬ ದೊರೆ ಚರ್ಮದ ನಾಣ್ಯವನ್ನೂ ಚಲಾವಣೆಗೆ ತಂದಿದ್ದ), ಆಯಾ ದೇಶಗಳ ರಿಸರ್ವ್ಬ್ಯಾಂಕ್‌ಗಳು ಆ ದೇಶಗಳ ಖಜಾನೆಗಳ ಸಂಗ್ರಹದಲ್ಲಿರುವ ಚಿನ್ನದ ಪ್ರಮಾಣ ಅಥವಾ ಮೌಲ್ಯಕ್ಕೆ ಸರಿಸಮಾನವಾದಷ್ಟು ನೋಟುಗಳನ್ನು ಮಾತ್ರವೇ ಮುದ್ರಿಸುವ ಹಂತಕ್ಕೆ ಬಂದವು. ಕರೆನ್ಸಿ ಅಂದರೆ ಚಲಾವಣೆಯಲ್ಲಿರುವ ಹಣ ಎಂದರ್ಥ, ಆದರೆ ಈ ನೋಟುಗಳೇ ಹಣವಲ್ಲ, ಅದೊಂದು ಭರವಸೆ ಮಾತ್ರ. ಯಾವುದೇ ನೋಟನ್ನು ನೋಡಿ, ಅದರಲ್ಲಿ “ ಈ ನೋಟನ್ನು ಹೊಂದಿರುವವರಿಗೆ ನಾನು ---- ರೂಪಾಯಿಗಳನ್ನು ನೀಡುವ ಭರವಸೆ ನೀಡುತ್ತೇನೆ ಎಂದು ಹೇಳಿ ರಿಸರ್ವ್ ಬ್ಯಾಂಕ್ ಗವರ್ನರ್ ಸಹಿಯನ್ನು ಮುದ್ರಿಸಲಾಗಿರುತ್ತದೆ. ಆದರೆ ಈ ಬಿಟ್ ಕಾಯಿನ್‌ಗೆ ಯಾವ ದೇಶದ ಯಾವ ಸರ್ಕಾರವಾಗಲೀ ರಿಸರ್ವ್ ಬ್ಯಾಂಕ್ ಆಗಲೀ ಯಾವುದೇ ಮೊತ್ತವನ್ನು ಪಾವತಿಸುವ ಭರವಸೆಯನ್ನೂ ನೀಡಿಲ್ಲ.
ಹಣದ ಮುದ್ರಿತ ರೂಪವನ್ನು ನೋಟು ಎನ್ನುತ್ತೇವೆ, ಲೋಹದಲ್ಲಿ ಟಂಕಿಸಿದರೆ ನಾಣ್ಯ ಎನ್ನುತ್ತೇವೆ. ಇವತ್ತು ಅತಿ ಹೆಚ್ಚು ಚರ್ಚೆಗೆ ಒಳಗಾಗಿರುವ ಬಿಟ್ ಕಾಯಿನ್ ಎನ್ನುವುದು ಹಣದ ಇಲೆಕ್ಟಾçನಿಕ್ ಸ್ವರೂಪ, ಯಾವ ದೇಶಗಳ ಯಾವ ರಿಸರ್ವ್ ಬ್ಯಾಂಕುಗಳೂ ಈ ಬಿಟ್ ಕಾಯಿನ್ ಅನ್ನು ಟಂಕಿಸುವುದಿಲ್ಲ ಅಥವಾ ಮುದ್ರಿಸುವುದಿಲ್ಲ. ಅದೇ ರೀತಿ ಯಾವ ದೇಶದ ಯಾವ ಸರ್ಕಾರಕ್ಕೂ ಈ ಬಿಟ್ ಕಾಯಿನ್ ಎಂಬ ಕಾಲ್ಪನಿಕ ಕರೆನ್ಸಿಯ ಮೇಲೆ ಹತೋಟಿ ಇಲ್ಲ. ಇದೊಂದು ವಿಕೇಂದ್ರೀಕೃತ ಪರೋಕ್ಷ ಹಣ ಚಲಾವಣೆ ವಿಧಾನ.
ಬಿಟ್ ಕಾಯಿನ್ ಎಂಬುದೊಂದು ಬ್ರಾಂಡ್‌ನ ಹೆಸರು, ಇದನ್ನು ಕ್ರಿಪ್ಟೋ ಕರೆನ್ಸಿ ಎಂದು ಅಧಿಕೃತವಾಗಿ ಕರೆಯಲಾಗುತ್ತದೆ. ಬಿಟ್ ಕಾಯಿನ್ ತರದಲ್ಲೇ ಸಾವಿರಾರು ಕರೆನ್ಸಿಗಳು ಚಾಲ್ತಿಯಲ್ಲಿವೆ. ಜಗತ್ತಿನ ಎಲ್ಲ ದೇಶಗಳೂ ಈ ಕ್ರಿಪ್ಟೋ ಕರೆನ್ಸಿಗೆ ಮಾನ್ಯತೆ ನೀಡಿಲ್ಲ, ಆದರೆ ಇತ್ತೀಚಗೆ ಕೆಲವು ದೇಶಗಳು ನಿರ್ದಿಷ್ಟ ಕ್ರಿಪ್ಟೋ ಕರೆನ್ಸಿ ಬಳಕೆಗೆ ಅವಕಾಶ ನೀಡಿವೆ, ಇನ್ನೂ ಕೆಲವು ದೇಶಗಳೇ ಇಂಥ ಕ್ರಿಪ್ಟೋ ಕರೆನ್ಸಿ ಸೃಷ್ಟಿಸುತ್ತಿವೆ. ಇಂಥ ಸಾವಿರಾರು ಕ್ರಿಪ್ಟೋ ಕರೆನ್ಸಿಗಳ ಪೈಕಿ ಹೆಚ್ಚಿನ ಮೌಲ್ಯ ಹೊಂದಿರುವ ಮತ್ತು ಹೆಚ್ಚು ಚಲಾವಣೆಯಲ್ಲಿರುವುದು ಬಿಟ್ ಕಾಯಿನ್ ಮಾತ್ರವೇ.
31.10.2009ರಂದು ಅಂತರ್‌ಜಾಲ ತಾಣವೊಂದರಲ್ಲಿ ಜಪಾನ್ ರಾಷ್ಟ್ರೀಯ ಎಂದು ಹೇಳಿಕೊಂಡ 46 ವರ್ಷದ (ಜನನ 5.4.1975) ಸತೋಷಿ ನಕಮೋಟೋ ಎಂಬ ಹೆಸರಿನಲ್ಲಿ ಮೊಟ್ಟ ಮೊದಲ ಬಾರಿಗೆ ಬ್ಲಾಕ್ ಚೈನ್ ಆಧರಿಸಿದ ಬಿಟ್ ಕಾಯಿನ್ ಪರಿಕಲ್ಪನೆಯನ್ನು ವಿವರಿಸಿ, ತಾನೇ ಈ ಬಿಟ್ ಕಾಯಿನ್ ಸೃಷ್ಟಿಕರ್ತನೆಂದೂ ಕಳೆದ ಎರಡು ವರ್ಷಗಳ ಸಂಶೋಧನೆಯ ಫಲವಿದೂ ಎಂದೂ ಹೇಳಿಕೊಂಡ. ಅದಾದ ಒಂದು ವರ್ಷ ಈತ ಅಂತರ್‌ಜಾಲ ತಾಣದಲ್ಲಿ ಸಕ್ರಿಯವಾಗಿದ್ದು ನಂತರ ಈ ಹೆಸರಿನಲ್ಲಿ ಯಾವ ಹೇಳಿಕೆಗಳೂ ಬಂದಿಲ್ಲ. ಆದರೆ ಹಲವಾರು ಮಂದಿ ನಾನೇ ಸತೋಷಿ ನಕಮೊಟೋ ಎಂದು ಹೇಳಿಕೊಂಡಿದ್ದೂ ಉಂಟು. ಈ ಬಿಟ್ ಕಾಯಿನ್ ಸೃಷ್ಟಿಕರ್ತ ಒಬ್ಬ ವ್ಯಕ್ತಿಯೇ ಅಥವಾ ಹಲವಾರು ವ್ಯಕ್ತಿಗಳ ಗುಂಪೇ, ಸಂಸ್ಥೆಯೇ ಎಂಬ ಬಗ್ಗೆಯೂ ಚರ್ಚೆ ಮುಂದುವರೆದಿದೆ. ಬಿಟ್ ಕಾಯಿನ್ ಪರಿಕಲ್ಪನೆಯನ್ನು ಸೃಷ್ಟಿಸಿದವನ ಭಾವ ಚಿತ್ರವನ್ನೂ ಯಾರೂ ಈವರೆಗೆ ನೋಡಿಲ್ಲ. ಒಟ್ಟಾರೆ ಇದೊಂದು ಹುಸಿ ಹೆಸರು ಎಂದು ಎಲ್ಲರೂ ಭಾವಿಸಿದ್ದಾರೆ. ಒಟ್ಟಾರೆ ಬಿಟ್ ಕಾಯಿನ್ ಚಲಾವಣೆ ಎಷ್ಟು ನಿಗೂಢವಾಗಿದೆಯೋ ಅದರ ಸೃಷ್ಟಿಯೂ ಅಷ್ಟೇ ನಿಗೂಢವಾಗೇ ಇದೆ.
ಕ್ರಿಪ್ಟೋ ಕರೆನ್ಸಿಯಲ್ಲಿ ಬಳಕೆಯಾಗುವ ಕ್ರಿಪ್ಟೋ ಎಂದರೆ ಸುಭದ್ರ ಅಂಥ ಅರ್ಥ, ವಾಟ್ಸಪ್ ಸಂದೇಶ ಕಳಿಸುವಾಗ “ ಯುವರ್ ಮೆಸೇಜ್ ಈಸ್ ಎನ್‌ಕ್ರಿಪ್ಟೆಡ್” ಅಂತ ಬರುತ್ತೆ ನೋಡಿದ್ದೀರಾ ಅಲ್ವಾ, ಅದರರ್ಥ ನೀವು ಕಳಿಸುವ ಸಂದೇಶ ನೀವು ಯಾರಿಗೆ ಕಳಿಸುತ್ತೀರೋ ಅವರನ್ನು ಬಿಟ್ಟು ಇನ್ನಾರಿಗೂ ಕಾಣುವುದಿಲ್ಲ ಅಂತ. ಆದರೆ ಸರ್ಕಾರ ಅಥವಾ ಪೊಲೀಸರು ಅಪರಾಧ ಪ್ರಕರಣಗಳಲ್ಲಿ ಇಂಥ ರಹಸ್ಯ ವಾಟ್ಸಾಪ್ ಸಂದೇಶಗಳ ಮಾಹಿತಿಯನ್ನು ಆ ಕಂಪನಿಯಿAದಲೇ ಪಡೆಯುತ್ತಾರೆ ಎಂಬುದೂ ನೆನಪಿನಲ್ಲಿರಲಿ.
ಆದ್ದರಿಂದ ಬಿಟ್ ಕಾಯಿನ್ ಎಂದರೆ ಕಣ್ಣಿಗೆ ಕಾಣುವ, ಕೈಯಲ್ಲಿ ಮುಟ್ಟಬಹುದಾದ ನಾಣ್ಯ ಅಥವಾ ನೋಟಲ್ಲ, ಅದು ಇಂಟರ್‌ನೆಟ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಆದ ಎಲ್ಲರೂ ನೋಡಬಹುದಾದ ಸಾರ್ವಜನಿಕ ಲೆಡ್ಜರ್‌ನಲ್ಲಿ ಇರುವ ಮೊತ್ತ ಅಂತ ಹೇಳಬಹುದು.
ಈ ಬಿಟ್ ಕಾಯಿನ್ ನಿಮಗೆ ದಕ್ಕುವುದಾದರೂ ಹೇಗೆ ಎಂಬ ಪ್ರಶ್ನೆಗೆ ‘ಮೈನಿಂಗ್’ ಮಾಡಿ ಎಂಬ ಉತ್ತರ ಬರುತ್ತದೆ. ತೀರಾ ಕ್ಲಿಷ್ಟವಾದ ‘ಬ್ಲಾಕ್ ಚೈನ್’ಗಳೆಂಬ ಗಣಕ ತಂತ್ರಾಂಶ ಲೆಕ್ಕವೊಂದನ್ನು ಬಿಡಿಸುವುದನ್ನು ‘ಮೈನಿಂಗ್’ ಎನ್ನಲಾಗುತ್ತದೆ. ಇಂಥ ಲೆಕ್ಕವನ್ನು ಬಿಡಿಸಲು ಕಂಪ್ಯೂಟಿಂಗ್ ಪರಿಣಿತರೇ ಬೇಕು, ಇಂಥಾ ಪರಿಣಿತರಿಗೆ ‘ಮೈರ‍್ಸ್’ ಎನ್ನುತ್ತಾರೆ. ಒಂದು ಬಿಟ್ ಕಾಯಿನ್‌ನ ಲೆಕ್ಕವನ್ನು ಯಶಸ್ವಿಯಾಗಿ ಬಿಡಿಸಲು ಪರಿಣಿತ ಮೈನರ್‌ಗಳು ಕನಿಷ್ಟ ಹತ್ತು ನಿಮಿಷದಿಂದ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತಾರೆ. ಈ ಲೆಕ್ಕ ಬಿಡಿಸಿದ ಕೂಡಲೇ ಆ ಬಿಟ್ ಕಾಯಿನ್ ನಿಮ್ಮದಾಗುತ್ತದೆ. ಹೀಗೆ ಲೆಕ್ಕ ಬಿಡಿಸಿಕೊಡುವ ಮೈನರ್‌ಗಳಿಗೆ ಶುಲ್ಕವಾಗಿ ಬಿಟ್ ಕಾಯಿನ್‌ಗಳನ್ನೇ ಕೊಡುವುದೂ ಉಂಟು. ಬ್ಲಾಕ್ ಚೈನ್ ತಂತ್ರಾಂಶವನ್ನು ಬಿಟ್ ಕಾಯಿನ್‌ಗಳಿಗೆ ಮಾತ್ರವಲ್ಲದೇ ಇತರ ಕಾರ್ಯಗಳಿಗೂ ಬಳಸಬಹುದು. ಪುಟ್ಟ ದೇಶವೊಂದು ಈ ಬ್ಲಾಕ್ ಚೈನ್ ತಂತ್ರಾಂಶ ಬಳಸಿ ಚುನಾವಣೆಯನ್ನೂ ಇತ್ತೀಚೆಗೆ ನಡೆಸಿದೆ. ಈ ಬ್ಲಾಕ್ ಚೈನ್ ತಂತ್ರಾಂಶದಲ್ಲಿ ನಡೆಸುವ ವಹಿವಾಟುಗಳನ್ನು ಮಾರ್ಪಾಡು ಮಾಡಲು ಅಥವಾ ಹಿಂತೆಗೆದುಕೊಳ್ಳಲು ಬರುವುದಿಲ್ಲವಾದ್ದರಿಂದ ಹಣ ಚಲಾವಣೆ ಖಾತರಿ ಎಂದು ನಂಬಲಾಗಿದೆ.
ಬಿಟ್ ಕಾಯಿನ್‌ಗೆ ಆಯಾ ದೇಶಗಳ ಕರೆನ್ಸಿಗಳಿಗೆ ಹೋಲಿಸಿ ಮೌಲ್ಯ ನಿರ್ಧರಣೆ ಮಾಡಲಾಗುತ್ತದೆ. ಹನ್ನೊಂದು ವರ್ಷಗಳ ಹಿಂದೆ ಒಂದು ಬಿಟ್ ಕಾಯಿನ್‌ಗೆ ಹೆಚ್ಚಿನ ಮೌಲ್ಯವಿರಲಿಲ್ಲವಾದರೂ ಈಗ ಒಂದು ಬಿಟ್ ಕಾಯಿನ್ ಇಂಡಿಯಾದ ಲೆಕ್ಕದಲ್ಲಿ ರೂ. 4,594,113 ಗೆ ಸಮನಾಗಿದೆ. ದಿನವೂ ಅದರ ಮೌಲ್ಯ ಏರಿಳಿತ ಕಾಣುತ್ತದೆ. ಕೆಲವೊಮ್ಮೆ ಇಳಿಯುತ್ತದೆ.
ಸದ್ಯಕ್ಕೆ ಇಂಡಿಯಾದಲ್ಲಿ ಬಿಟ್ ಕಾಯಿನ್‌ನನ್ನು ಸರ್ಕಾರ ಅಥವಾ ಬ್ಯಾಂಕುಗಳು ಒಪ್ಪದೇ ಹೋಗಿದ್ದರೂ, ನಿರಾಕರಿಸುವ ಪರಿಸ್ಥಿತಿ ಇಲ್ಲ. ಬಿಟ್ ಕಾಯಿನ್ ಚಲಾವಣೆಗೆ ರಿಸರ್ವ್ ಬ್ಯಾಂಕ್ ಒಡ್ಡಿದ್ದ ತಡೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ತಳ್ಳಿಹಾಕಿದ್ದಾಗಿದೆ. ಬಿಟ್ ಕಾಯಿನ್ ಅನ್ನು ಉಳಿತಾಯದ ಹಣವನ್ನು ಹೂಡಿಕೆ ಮಾಡುವ ಮತ್ತು ಲಾಭ ಗಳಿಸುವ ವಿಧಾನವಾಗಿ ಸಾಮಾನ್ಯವಾಗಿ ಬಳಕೆಯಾಗಿದೆ. ಅದಕ್ಕಾಗಿಯೇ ಕೆಲವು ಆಪ್‌ಗಳಿವೆ. ಅದನ್ನು ಬಿಟ್ಟರೆ ಹೊರ ದೇಶಗಳಿಗೆ ಹಣವನ್ನು ಕಳಿಸುವ ಸುಲಭ ವಿಧಾನವಾಗಿ ಬಿಟ್ ಕಾಯಿನ್ ಬಳಕೆಯಾಗುತ್ತಿದೆ. ಹೇಗೆಂದರೆ, ನಿಮ್ಮ ಬ್ಯಾಂಕಿನಲ್ಲಿರುವ ಹಣವನ್ನು ವಿದೇಶದಲ್ಲಿರುವ ನಿಮ್ಮವರಿಗೆ ಕಳಿಸಬೇಕಾದರೆ ಹಣ ವರ್ಗಾಯಿಸುವ ಬ್ಯಾಂಕುಗಳಿಗೆ ದೊಡ್ಡ ಮೊತ್ತದ ಕಮೀಶನ್ ಕೊಡಬೇಕು ಮತ್ತು ಎರಡು ದಿನಕಾಯಬೇಕು. ಬಿಟ್ ಕಾಯಿನ್ ಸ್ವರೂಪದಲ್ಲಿ ಕಳಿಸಲು ಹತ್ತು ನಿಮಿಷ ಸಾಕು ಮತ್ತು ಯಾವ ಶುಲ್ಕವೂ ಇಲ್ಲ.
ಈ ಎಲ್ಲದರ ಹೊರತಾಗಿ ಬಿಟ್ ಕಾಯಿನ್ ವಹಿವಾಟು ಕರ್ನಾಟಕದಲ್ಲಿ ಹಗರಣದ ಸ್ವರೂಪ ತಳೆದಿದೆ. ಸರ್ಕಾರದ ಖಾತೆಗಳಿಂದ ಹಣವನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಗರಣದ ಕೇಂದ್ರ ಬಿಂದುವಾಗಿರುವ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣ ಎಂಬ ಹ್ಯಾಕರ್‌ನನ್ನ ಆಗಾಗ ಶ್ರೀಕೃಷ್ಣ ಜನ್ಮ ಸ್ಥಾನಕ್ಕೆ ಕಳಿಸುವ ಮತ್ತು ಆತನಿಗೇ ಗೊತ್ತಿಲ್ಲದಂತೆ ಯಾರೋ ಜಾಮೀನು ನೀಡಿ ಹೊರಗೆ ಕರೆತರುವ ನಾಟಕಗಳು ನಡೆಯುತ್ತಿವೆ. ಈ ಹಗರಣ ತನಿಖೆ ನಡೆದರೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಾನ ಪಲ್ಲಟವೂ ಆಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಮಗ ಪ್ರಿಯಾಂಕ ಖರ್ಗೆ ಭವಿಷ್ಯ ನುಡಿದಿದ್ದಾರೆ. ಇಲ್ಲಿಂದ ದಿಲ್ಲಿಗೆ ದಿಲ್ಲಿಯಿಂದ ಇಲ್ಲಿಗೆ ಸಿಎಂ ಸಮೇತ ದೌಡಾಯಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕರ್ನಾಟಕದ ಬಿಟ್ ಕಾಯಿನ್ ಹಗರಣ ಕುರಿತು ಪ್ರತ್ಯೇಕವಾಗೇ ಬರೆಯಲಿದ್ದೇನೆ.