ಕರ್ನಾಟಕಕ್ಕೂ ಕಾಲಿಟ್ಟ ಆಮ್ ಆದ್ಮಿ ಪಾರ್ಟಿ ಚುನಾವಣೆಗಳಲ್ಲಿ ಹಣ ಹಂಚುವುದಿಲ್ಲ ಅನ್ನುತ್ತಿದೆ! ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ

ಕರ್ನಾಟಕಕ್ಕೂ ಕಾಲಿಟ್ಟ ಆಮ್ ಆದ್ಮಿ ಪಾರ್ಟಿ ಚುನಾವಣೆಗಳಲ್ಲಿ ಹಣ ಹಂಚುವುದಿಲ್ಲ ಅನ್ನುತ್ತಿದೆ! ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ

ಕರ್ನಾಟಕಕ್ಕೂ ಕಾಲಿಟ್ಟ ಆಮ್ ಆದ್ಮಿ ಪಾರ್ಟಿ ಚುನಾವಣೆಗಳಲ್ಲಿ ಹಣ ಹಂಚುವುದಿಲ್ಲ ಅನ್ನುತ್ತಿದೆ! ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ

ಕರ್ನಾಟಕಕ್ಕೂ ಕಾಲಿಟ್ಟ ಆಮ್ ಆದ್ಮಿ ಪಾರ್ಟಿ
ಚುನಾವಣೆಗಳಲ್ಲಿ ಹಣ ಹಂಚುವುದಿಲ್ಲ ಅನ್ನುತ್ತಿದೆ!
ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ


ಮೊನ್ನೆ ಆಮ್ ಆದ್ಮಿ ಪಾರ್ಟಿಯ ದಿಲ್ಲಿ ಮುಖ್ಯಮಂತ್ರಿ ಹಾಗೂ ಆ ಪಕ್ಷದ ಸದ್ಯದ ಪ್ರಶ್ನಾತೀತ ನಾಯಕ ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ ಬಂದು ಹೋದರು. ನ್ಯಾಶನಲ್ ಕಾಲೇಜು ಮೈದಾನದಲ್ಲಿ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಜೊತೆಗೆ ಇಂಕ್ವಿಲಾಬ್ ಜಿಂದಾಬಾದ್ ಸೇರಿಸಿ ಘೋಷಣೆಗಳನ್ನು ಕೂಗಿ ಭಾಷಣ ಆರಂಭಿಸಿದ ಕೇಜ್ರಿವಾಲ್ ಕನ್ನಡದಲ್ಲಿ ಮಾತನಾಡದ ಕಾರಣಕ್ಕೆ ವಿಷಾದ ವ್ಯಕ್ತಪಡಿಸಿದರೂ, (ಅಮಿತ್ ಶಾ ಕರೆ ಕೊಟ್ಟಿದ್ದಂತೆ ! ) ಹಿಂದಿಯಲ್ಲೇ ಮಾತನಾಡಿದರು. ಕರ್ನಾಟದ ಬಹುಪಾಲು ದೊಡ್ಡ ಹಳ್ಳಿಗಳಲ್ಲಿ ಮುಸ್ಲಿಮರಿರುವ ಹಾಗೂ ಹಿಂದಿ ಸಿನಿಮಾಗಳನ್ನು ನೋಡುತ್ತ ಬಂದಿರುವ ಕಾರಣಕ್ಕೆ ಕನ್ನಡಿಗರಿಗೆ ಹಿಂದಿ ತೀರಾ ಅಪರಿಚಿತವೇನೂ ಅಲ್ಲ ಎಂಬುದು ಕೇಜ್ರಿವಾಲರ ಪಂಚಿAಗ್ ಡಯಲಾಗ್ ಗಳಿಗೆ ಬೀಳುತ್ತಿದ್ದ ಚಪ್ಪಾಳೆ, ಶಿಳ್ಳೆಗಳು ಸಾಕ್ಷಿಯಾಗಿದ್ದವು. ಬರುವ ವಿಧಾನ ಸಭಾ ಚುನಾವಣೆಯಲ್ಲಿ ನಾವು ಇಲ್ಲಿ ಸರ್ಕಾರ ರಚಿಸುತ್ತೇವೆ ಎಂದರು ಕೇಜ್ರಿವಾಲ್! ಜನತಾ ಜಲಧಾರೆ ಹರಿಸುತ್ತಿರುವ ಹೆಚ್‌ಡಿಕೆಯ ಜೆಡಿಎಸ್ ಟಾರ್ಗೆಟ್ ಕೂಡಾ 123 ಸೀಟುಗಳು?
ಇತ್ತೀಚೆಗೆ ಆಮ್ ಆದ್ಮಿಪಾರ್ಟಿ ಸೇರಿಕೊಂಡ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಜೊತೆಗೆ ಅದೇ ತಾನೇ ಪಕ್ಷ ಸೇರ್ಪಡೆಯಾದ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಕೂಡಾ ವೇದಿಕೆಯಲ್ಲಿದ್ದರು. ಕೋಡಿಹಳ್ಳಿ ಮಾತ್ರವಲ್ಲ ಅವರ ಇಡೀ ರೈತಸಂಘ ಮತ್ತು ರೈತ ಸೇನೆಗಳು ಇಡಿಯಾಗಿ ಆಮ್ ಆದ್ಮಿ ಪಾರ್ಟಿ ಸೇರಿದವು ಎನ್ನಲಾಗುತ್ತಿದೆ. 


ದಿಲ್ಲಿಯಲ್ಲಿ ನಿರಂತರ ಎರಡು ಸಲ ಹಾಗೂ ಕಳೆದ ತಿಂಗಳು ಪಂಜಾಬಿನಲ್ಲಿ ಸರ್ಕಾರ ರಚಿಸಿದ ಕಾರಣದಿಂದ ರಾಜಕೀಯ ಆಕಾಂಕ್ಷೆಯುಳ್ಳವರಿಗೆ ಹಾಗೂ ಕಾಂಗ್ರೆಸ್-ಬಿಜೆಪಿಗಳ ಸಾಂಪ್ರದಾಯಕ ರಾಜಕಾರಣ ಮಾಡಲಾಗದವರಿಗೆ ಆಮ್ ಆದ್ಮಿಪಾರ್ಟಿ ಆಕರ್ಷಕವಾಗಿ ಕಾಣುವುದರಲ್ಲಿ ತಪ್ಪೇನೂ ಇಲ್ಲ. ಜೊತೆಗೆ ಪಂಜಾಬ್ ಚುನಾವಣೆ ನಿರ್ವಹಿಸಿದ ಆಮ್ ಆದ್ಮಿಪಾರ್ಟಿಯ ತಂಡವು ಸೀದಾ ಬೆಂಗಳೂರಿಗೆ ಬಂದು ತಳವೂರಿದ್ದು, ಎಲ್ಲ 224 ಕ್ಷೇತ್ರಗಳಿಗೂ ಸೂಕ್ತವೆನಿಸುವ ಅಭ್ಯರ್ಥಿಗಳನ್ನು ಗುರುತಿಸಿಕೊಳ್ಳತೊಡಗಿದೆ. 


ಮತ್ತೊಂದೆಡೆ, ಹಳದಿ ಟವೆಲ್ ಹೊದ್ದು ಹಣೆ ತುಂಬಾ ಗಂಧ,ಕುAಕುಮ ತೀಡಿಕೊಂಡ ಅರವಿಂದ್ ಕೇಜ್ರಿವಾಲರ ಫೋಟೋಗಳು ಹಾಗೂ ಅವರ ನೆರಳಿನಲ್ಲಿ ಚಡ್ಡಿತೊಟ್ಟ ಆರ್ ಎಸ್ ಎಸ್ ಕಾರ್ಯಕರ್ತರ ನಿಲುವನ್ನು ಫೋಟೋಶಾಪ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ. ಇದರ ಸರಳ ಅರ್ಥ ಆಮ್ ಆದ್ಮಿಪಾರ್ಟಿ ಬಲಪಂಥೀಯ ಆರ್ ಎಸ್ ಎಸ್ ಹಾಗೂ ಅದರ ರಾಜಕೀಯ ವಿಭಾಗ ಬಿಜೆಪಿ ಸಾಗಿದ ಹೆಜ್ಜೆಗಳಲ್ಲೇ ಸಾಗುತ್ತಿರುವ ಬಲಪಂಥೀಯ ಉದಾರವಾದಿ ರಾಜಕೀಯ ಪಕ್ಷ ಅಥವಾ ಇನ್ನೂ ನೇರವಾಗಿ ಹೇಳಬೇಕೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಓಟು ವಿಭಜಿಸಲು ಬಂದಿರುವ ಬಿಜೆಪಿಯ ಬಿ ಟೀಮ್ ಎಂದು ಹೇಳಲಾಗುತ್ತಿದೆ.  ಆಮ್ ಆದ್ಮಿಪಾರ್ಟಿ ಪಂಜಾಬಿನಲ್ಲಿ ಕಾಂಗ್ರೆಸ್ ಬದಲಿಗೆ ಸರ್ಕಾರ ರಚಿಸಿರುವುದು ಹಾಗೂ ತನ್ನ ಕೆಲ ಮುಖ್ಯ ನಡವಳಿಕೆಗಳಲ್ಲಿ ಬಿಜೆಪಿಯನ್ನು ಅನುಸರಿಸುತ್ತಿರುವುದು ಈ ಮಾತಿಗೆ ಇಂಬುಕೊಟ್ಟAತೆ ಕಾಣುತ್ತದೆ. ಉದಾಹರಣೆಗೆ ಬಿಜೆಪಿ ಜೈ ಶ್ರೀರಾಮ್ ಘೋಷಣೆ ಕೂಗುತ್ತ, ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಹೊರಟರೆ, ಆಮ್ ಆದ್ಮಿಪಾರ್ಟಿಯ ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರ ವೇದಿಕೆಗಳಲ್ಲಿ ನಿಂತು ಬಾಯಿ ಪಾಠ ಮಾಡಿಕೊಂಡಿರುವ ಉದ್ದನೆಯ ಹನುಮಾನ್ ಚಾಲೀಸಾ ಮಂತ್ರ ಪಠಿಸುತ್ತಾರೆ. ಜೊತೆಗೆ ಮೊನ್ನೆ ದಿಲ್ಲಿಯ ಜಹಂಗೀರ್ ಪುರಿಯಲ್ಲಿ ಒಕ್ಕೂಟ ಸರ್ಕಾರದ ಹತೋಟಿಯಲ್ಲಿರುವ ಪೊಲೀಸರು ಮಸೀದಿ ಹಾಗೂ ಮುಸ್ಲಿಮರ ಗುಡಿಸಲುಗಳನ್ನು ಅಕ್ರಮ ನಿರ್ಮಾಣ ಎಂದು ಕೆಡವತೊಡಗಿದಾಗ ಬೃಹತ್ ಡೋಜರ್ ಯಂತ್ರಗಳಿಗೆ ಅಡ್ಡ ಬಂದು ನಿಲ್ಲಲಿಲ್ಲ, ಬದಲಿಗೆ ಸಿಪಿಎಂನ ವಯಸ್ಸಾದ ನಾಯಕಿ ಬೃಂದಾ ಕಾರಟ್ ಬಂದು ಸುಪ್ರೀಂ ಕೋರ್ಟ್ ಆದೇಶ ತಂದು ನಿಂತ ಘಟನೆಗಳನ್ನು ಗಮನಿಸಿ.


ಕರ್ನಾಟಕದಲ್ಲಿ ಬಿಜೆಪಿಯ ಬಿ-ಟೀಮ್ ಗಳಾಗಲು ರಾಜಕೀಯ ಪಕ್ಷಗಳ ನಡುವೆ ಪೈಪೋಟಿಯೇ ನಡೆದಿದೆ. ಆಮ್ ಆದ್ಮಿಪಾರ್ಟಿಗೆ ಮೊದಲೇ ದೇವೇಗೌಡ-ಕುಮಾರಸ್ವಾಮಿ ಕಾಂಬಿನೇಶನ್ ನಲ್ಲಿ ಜೆಡಿಎಸ್ ಈ ಕೃತ್ಯದಲ್ಲಿ ತೊಡಗಿದೆ ಎನ್ನುತ್ತಿದ್ದಾರೆ ಜನರು. ಅದಕ್ಕಾಗೇ ಹರಿಕಥೆ ದಾಸರಂತಿರುವ ಸಿಎಂ ಇಬ್ರಾಹಿಂರನ್ನು ಜೆಡಿಎಸ್ ಗೆ ಬರುವಂತೆ ಮಾಡಿ, ಜೆಡಿಎಸ್ ಅಧ್ಯಕ್ಷರನ್ನಾಗಿ ಮಾಡಿರುವುದು ಎನ್ನಲಾಗುತ್ತಿದೆ. ಹೆಚ್. ಡಿ. ಕುಮಾರಸ್ವಾಮಿಯವರ ಹಳೇ ಬಸ್ ಡ್ರೈವರ್ ಚಾಮರಾಜಪೇಟೆಯ ಜಮೀರ್ ಅಹ್ಮದ್ ಕೂಡಾ ತೆನೆ ಹೊತ್ತ ಮಹಿಳೆಯ ಸೆರಗಿನ ಮರೆಯಲ್ಲಿ ಇಣುಕಿ ನೋಡುತ್ತಿದ್ದಾರಂತೆ. ಬರುವ ವಿಧಾನ ಸಭಾ ಚುನಾವಣೆಗೆ ಜೆಡಿಎಸ್ –ಬಿಜೆಪಿಗಳ ನಡುವೆ ನಡೆದಿದೆ ಎನ್ನಲಾದ ಒಳ ಒಪ್ಪಂದದ ವಿವರಗಳೂ ಹೊರಬಿದ್ದಿವೆ. ಒಂದು ಜೆಡಿಎಸ್ ಗೆಲ್ಲಬಲ್ಲ 30-35 ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಹಾಕುವುದು, ಹೀಗೆ 30-35 ಸೀಟು ಗೆಲ್ಲುವ ಜೊತೆಗೆ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಅಭ್ಯರ್ಥಿ ಹಾಕುವ ಜೊತೆಗೆ ಕಾಂಗ್ರೆಸ್ ಓಟುಗಳನ್ನು ತಾನು ಕೀಳುವುದು, ಆ ಮೂಲಕ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವಂತೆ ನೋಡಿಕೊಳ್ಳುವುದು. ಹೀಗೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಹೆಚ್.ಡಿ.ರೇವಣ್ಣನವರನ್ನು ಉಪಮುಖ್ಯಮಂತ್ರಿ ಮಾಡುವುದು, ಜೊತೆಗೆ ಕುಮಾರಣ್ಣನವರನ್ನ ದಿಲ್ಲಿಗೆ ಮಂತ್ರಿಮಾಡಿ ಕಳಿಸುವುದು. ಜೆಡಿಎಸ್ ಅಲ್ಲದೇ ಎಸ್ ಡಿ ಪಿ ಐ ಹಾಗೂ ಓವೈಸಿಯ ಪಕ್ಷ ಕೂಡಾ ಇಂಥದ್ದೇ ರೀತಿಯಲ್ಲಿ ಬಿಜೆಪಿಗೆ ನೆರವಾಗುತ್ತವೆ ಎಂಬುದು ಜನರ ಅಂದಾಜು.
ಆಮ್ ಆದ್ಮಿಪಾರ್ಟಿ ಇಂತದ್ದೆನ್ನೆಲ್ಲ ಮಾಡುವುದಿಲ್ಲ, ನಮ್ಮ ಪಕ್ಷದ ಮುಖ್ಯ ವಿರೋಧಿಯೇ ಬಿಜೆಪಿ, ಮೋದಿ ಈ ದೇಶದಲ್ಲಿ ಯಾರಿಗಾದರೂ ಹೆದರುವುದಿದ್ದರೆ ಅದು ಅರವಿಂದ್ ಕೇಜ್ರಿವಾಲ್ ಗೆ ಎನ್ನುತ್ತಾರೆ ಅ ಪಕ್ಷದವರು. ಜೊತೆಗೆ ಎಂತೆAಥ ಸಾಂಪ್ರದಾಯಿಕ ರಾಜಕಾರಣಿಗಳೇ ಬಂದು ಸೇರಿಕೊಂಡರೂ ಆಮ್ ಆದ್ಮಿಪಾರ್ಟಿಯ ಕಟ್ಟುನಿಟ್ಟಾದ ನಿಯಮಗಳಿಂದಾಗಿ ಉಸಿರುಕಟ್ಟಿ ಹೊರಹೋಗಿಬಿಡುತ್ತಾರೆ ಎನ್ನುತ್ತಾರೆ ಆ ಪಕ್ಷದ ಸ್ಥಳೀಯ ಮುಖಂಡರು.


ಆಮ್ ಆದ್ಮಿ ಪಾರ್ಟಿ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯೂ ದೇಶದ ರಾಜಕೀಯ ಇತಿಹಾಸದ ಮಟ್ಟಿಗೆ ಮಹತ್ವದ್ದೇ ಆಗಿದೆ. 2011ರ ಏಪ್ರಿಲ್ ನಾಲ್ಕರಂದು ದಿಲ್ಲಿಯಲ್ಲಿ ಅಣ್ಣಾ ಹಜಾರೆ ಹಾಗೂ ಬಾಬಾ ರಾಮ್ ದೇವ್ ಅವರನ್ನು  ಮುಂಚೂಣಿಯಲ್ಲಿ ಇಟ್ಟುಕೊಂಡು ಶುರುವಾದ ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ 13 ವರ್ಷ ಕಾರ್ಯನಿರ್ವಹಿಸಿ ಜಂಟಿ ಆಯುಕ್ತರ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಹಾಗೂ ಜೀ ಟಿವಿಯ ಪತ್ರಕರ್ತ ಮನೀಶ್ ಸಿಸೋಡಿಯಾ ಇಬ್ಬರೂ ಮುಖ್ಯ ಪಾತ್ರ ವಹಿಸಿದ್ದರು. ಜನಪರ ಚಿಂತನೆಯ ವಕೀಲರು, ಪತ್ರಕರ್ತರು, ನಿವೃತ್ತ ಅಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಆಂದೋಲನದ ಪ್ರಧಾನ ಭೂಮಿಕೆಯಲ್ಲಿದ್ದರು. ಸುಪ್ರೀಂ ಕೋರ್ಟ್ನ ಹೆಸರಾಂತ ನ್ಯಾಯವಾದಿ, ಕೇಂದ್ರದ ಮಾಜಿ ಸಚಿವ ಶಾಂತಿ ಭೂಷಣ್ ಹಾಗೂ ಅವರ ಮಗ ನ್ಯಾಯವಾದಿ ಪ್ರಶಾಂತ ಭೂಷಣ್, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ನಿವೃತ್ತ ಪೊಲೀಸ್ ಅಧಿಕಾರಿ ಕಿರಣ್ ಬೇಡಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕರ್ನಾಟಕದ ಸಂತೋಷ್ ಹೆಗ್ಡೆ , ದಿಲ್ಲಿಯ ಕ್ಯಾಥೊಲಿಕ್ ಚರ್ಚಿನ ಆರ್ಚ್ ಬಿಷಪ್ ವಿನ್ಸೆಂಟ್ ಎಂ, ದಿಲ್ಲಿಯಲ್ಲಿ ನೆಲೆಸಿದ್ದ ಆಕ್ಟಿವಿಸ್ಟ್ ಗೋಪಾಲ್ ರಾಯ್, ಸ್ವಾತಿ ಮಲಿವಾಲ್, ಪತ್ರಕರ್ತ ದೇವೀಂದರ್ ಶರ್ಮಾ, ರಂಗಕರ್ಮಿ ಅರವಿಂದ್ ಗೌರ್, ಕವಿ ಕುಮಾರ್ ವಿಶ್ವಾಸ್, ಅರ್ಜುನ್ ಪ್ರಶಸ್ತಿ ವಿಜೇತ ಕ್ರೀಡಾಪಟು ಸುನೀತಾ ಗೋಡಾರ, ಮುಸ್ಲಿಮ್ ನಾಯಕ ಮೌಲಾನ ಶಮೂನ್ ಕಾಸ್ಮಿ, ಆರ್ಟ್ ಆಪ್ ಲಿವಿಂಗ್ ನ ಪ್ರತಿನಿಧಿ ದರ್ಶಕ್ ಹಾಥಿ ಇದ್ದರು. ಜೊತೆಗೆ ಮುಂಬೈನಿAದ ಮಯಾಕ್ ಗಾಂಧೀ, ಚೆನ್ನೆನಿಂದ ಚಂದ್ರಮೋಹನ್, ಗೋವಾದಿಂದ ದಿನೇಶ್ ವಘೇಲಾ, ಮಣಿಪುರಿಂದ ಅಖಿಲ್ ಗೊಗೊಯಿ, ಹರ್ಯಾಣದಿಂದ ನವೀನ್ ಜೈಹಿಂದ್, ಉತ್ತರ ಪ್ರದೇಶದಿಂದ ಸಂಜಯ್ ಸಿಂಗ್ ಹಾಗೂ ಈಗ ಆಮ್ ಆದ್ಮಿ ಪಾರ್ಟಿಯ ಕರ್ನಾಟಕದ ಮುಖ್ಯಸ್ಥರಾಗಿರುವ ಪೃಥ್ವಿ ರೆಡ್ಡಿ ಬೆಂಗಳೂರಿನಿAದ ಈ ಚಳವಳಿಯನ್ನು ಪ್ರತಿನಿಧಿಸಿದ್ದರು. ಒಟ್ಟು 24 ಮಂದಿ ಇದ್ದ ಕೋರ್ ಟೀಮ್ ಇದಾಗಿತ್ತು.


ದೇಶದಲ್ಲಿ ರಾಜಕೀಯ ಭ್ರಷ್ಟಾಚಾರ ಹೆಚ್ಚುತ್ತಿದೆ, ಅಧಿಕಾರದಲ್ಲಿರುವ ರಾಜಕಾರಣಿಗಳನ್ನು ಬಂಧಿಸಲು ಅಧಿಕಾರವುಳ್ಳ ರಾಜ್ಯಗಳಲ್ಲಿ ಲೋಕಾಯುಕ್ತ ಇರುವಂತೆ ಕೇಂದ್ರದಲ್ಲಿ ಲೋಕಪಾಲ್ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಬೇಕು, ಅದಕ್ಕಾಗಿ ಮಸೂದೆ ಮಂಡಿಸಬೇಕು, ಕಪ್ಪು ಹಣನಿಯಂತ್ರಿಸಬೇಕು, ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಇರಿಸಿರುವ ಬೃಹತ್ ಮೊತ್ತದ ಕಪ್ಪು ಹಣ ವಾಪಸ್ ತರಬೇಕು(ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ವಾಪಸ್ ತಂದು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಹಾಕುವ ಆಕರ್ಷಕ ಭರವಸೆ ಕೊಟ್ಟೇ ಮೋದಿ ಅಧಿಕಾರಕ್ಕೆ ಬಂದದ್ದು ನೆನಪಿರಲಿ).ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊAಡು ಯೋಗ ಗುರು ಬಾಬಾ ರಾಮ್ ದೇವ್ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಏಪ್ರಿಲ್ ಐದರಿಂದ ಒಂಬತ್ತುದಿನ ಉಪವಾಸ ಮಾಡಿದರು.ಮಾಹಿತಿ ಹಕ್ಕು ನಿಯಮಗಳನ್ನು ಅಸ್ತಿತ್ವಕ್ಕೆ ತರಲು ಮೂಲ ಕಾರಣರಾದ ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಜಂತರ್ ಮಂತರ್ ಮೈದಾನದಲ್ಲಿ 13 ದಿನ ಉಪವಾಸ ನಡೆಸಿದರು. ಬಾಬಾ ರಾಮ್ ದೇವ್ ಆ ಮೈದಾನದಲ್ಲಿ 5000 ಜನರಿಗೆ ಯೋಗ ಹೇಳಿಕೊಡಲೆಂದು ಅನುಮತಿ ಪಡೆದು 50 ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್ ಸರ್ಕಾರ ರಾತ್ರೋರಾತ್ರಿ ಬಲ ಪ್ರಯೋಗ ಮಾಡಿ ಆಂದೋಲವನ್ನು ಒಡೆಯಿತು.ಆದರೂ ಡಿಸೆಂಬರ್ ವರೆಗೆ ದಿಲ್ಲಿಯಲ್ಲಿ ಪ್ರದರ್ಶನ ನಡೆಯಿತು. ಲೋಕ್ ಪಾಲ್ ಕರಡು ರಚನಾ ಸಮಿತಿಯನ್ನು ಸರ್ಕಾರ ರಚಿಸಿ ಈ ಪ್ರತಿಭಟನಾಕಾರರ ನಾಯಕರನ್ನೂ ಆ ಸಮಿತಿಗೆ ಸೇರಿಸಿತು.


ಅಲ್ಲಿವರೆಗೂ ಕೇವಲ ರಾಜಕೀಯ ರಂಗದ ಶುದ್ದೀಕರಣವೇ ನಮ್ಮ ಗುರಿ ಎನ್ನುತ್ತಿದ್ದ ಕೋರ್ ಟೀಮ್‌ನಲ್ಲಿ ಭಿನ್ನ ಧ್ವನಿಗಳು ಬರತೊಡಗಿದವು.ಬಾಬಾ ರಾಮ್ ದೇವ್ ಬೆನ್ನಿಗೆ ಆರ್ ಎಸ್ ಎಸ್ , ಬಿಜೆಪಿ ಇದೆ ಎಂಧು ಅವರನ್ನು ದೂರವಿಡುವ ತೀರ್ಮಾನ ಮಾಡಿದರು. ಅರವಿಂದ್ ಕೇಜ್ರಿವಾಲ್ ಹೀಗೇ ಹೋರಾಟ ಮಾಡುತ್ತಲೇ ಇದ್ದರೆ ಸಾಲದು ನಾವೇ ಶಕ್ತಿ ರಾಜಕಾರಣ ಮಾಡಬೇಕು ಎಂದು ಘೋಷಿಸಿದರು. ಅಣ್ಣಾ ಹಜಾರೆ ಅವರಿಂದ ದೂರ ಹೋದರು. ಕಡೆಗೆ ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಇನ್ನೂ ಕೆಲವರನ್ನು ಸೇರಿಸಿಕೊಂಡು 2012ರ ಅಕ್ಟೋಬರ್ ಎರಡರಂದು ಆಮ್ ಆದ್ಮಿ ಪಾರ್ಟಿ ರಚಿಸಿದರು. ಪೌರಕಾರ್ಮಿಕರು ರಸ್ತೆ ಸ್ವಚ್ಚಗೊಳಿಸಲು ಬಳಸುವ ತೆಂಗಿನ ಕಡ್ಡಿಯ ಪೊರಕೆಯನ್ನು ಪಕ್ಷದ ಸಿಂಬಲ್ ಆಗಿ ಪಡೆದರು. 


ಅರವಿಂದ್ ಕೇಜ್ರಿವಾಲ್ ರಾಷ್ಟ್ರೀಯ ಸಂಚಾಲಕರಾಗಿರುವ ಆಮ್ ಆದ್ಮಿ ಪಾರ್ಟಿ ಹತ್ತು ವರ್ಷಗಳಷ್ಟು ಕಡಿಮೆ ಅವಧಿಯಲ್ಲೇ ಈ ಪಕ್ಷ ಗಣನೀಯ ಸಾಧನೆ ಮಾಡಿದೆ. 2013ರಲ್ಲಿ ಕಾಂಗ್ರೆಸ್ ನ ಉಕ್ಕಿನ ಮಹಿಳೆ ಎಂದು ಹೆಸರಾಗಿದ್ದ ಶೀಲಾ ದೀಕ್ಷಿತ್ ನಾಯಕತ್ವದ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಿ ದಿಲ್ಲಿಯಲ್ಲಿ ಅಲ್ಪಬಲದ ಅಲ್ಪಾಯುಷಿ ಸರ್ಕಾರ ರಚಿಸಿತು, ಮತ್ತೆ 2015 ಹಾಗೂ 2020ರಲ್ಲಿ ಭಾರೀ ಬಹುಮತದೊಂದಿಗೆ ದಿಲ್ಲಿಯಲ್ಲಿ ನೆಲೆಯೂರಿತು.ಈಗ ಪಂಜಾಬ್ ನಲ್ಲೂ ದಾಖಲೆಯ ಕ್ಷೇತ್ರಗಳನ್ನು ಗೆದ್ದು ಸರ್ಕಾರ ಮಾಡಿದೆ. ಜೊತೆಗೆ ಗೋವಾದಲ್ಲೂ ಇಬ್ಬರು ಶಾಸಕರು ಚುನಾಯಿತರಾದರು. ರಾಜ್ಯಸಭೆಯಲ್ಲೂ ಪ್ರತಿನಿಧಿಗಳಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲೂ ಜನರ ಗಮನ ಸೆಳೆದಿದೆ. ಈಗ ಕರ್ನಾಟಕಕ್ಕೆ ಕಾಲಿಟ್ಟಿದೆ. ಹೀಗೆ ಆಮ್ ಆದ್ಮಿ ಪಾರ್ಟಿ ನಿಧಾನವಾಗಿ ವ್ಯಾಪಿಸುತ್ತಿದೆ.


ಆಮ್ ಆದ್ಮಿ ಪಾರ್ಟಿ ನಡೆ ಮತ್ತು ನುಡಿಯಲ್ಲಿ ತಾದ್ಯಾತ್ಮ ಇರಬೇಕು, ಪಕ್ಷದ ಆಂತರಿಕ ಸಂಗತಿಗಳು ಪಾರದರ್ಶಕವಾಗಿರಬೇಕು ಎನ್ನುತ್ತದೆ. ಎರಡು ಸಾವಿರ ರೂಪಾಯಿ ಮೇಲ್ಪಟ್ಟ ದೇಣಿಗೆ ನೀಡಿದವರ ಮಾಹಿತಿಯನ್ನು ಮಾತ್ರವೇ ಬಹಿರಂಗಪಡಿಸಬೇಕೆAಬ ನಿಯಮವಿದ್ದರೂ ಪಕ್ಷ ಸ್ವೀಕರಿಸಿದ 92% ದೇಣಿಗೆಯ ಮಾಹಿತಿಯನ್ನು ಸ್ವಯಂ ಬಹಿರಂಗಪಡಿಸುತ್ತ ಬಂದಿದ್ದೇವೆ, ಜೊತೆಗೆ ಸಮಾವೇಶಗಳಲ್ಲಿ ಸಂಗ್ರಹವಾಗುವ ಚಿಲ್ಲರೆ ಮೊತ್ತವನ್ನೂ ಲೆಕ್ಕ ಹಾಕಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.. ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ತನ್ನ ದಾರಿ ಮತ್ತು ಗುರಿ ಎನ್ನುತ್ತದೆ ಈ ಪಕ್ಷ . 


ಬಿಜೆಪಿಯೂ 40 ವರ್ಷಗಳ ಹಿಂದೆ ಹೀಗೇ ಎಲ್ಲವನ್ನೂ ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ಮಾಡುವ ಭರವಸೆ ಕೊಟ್ಟಿತ್ತು. ಪಕ್ಷ ವಿಸ್ತಾರ ಮತ್ತು ವ್ಯಾಪಕವಾದಂತೆ ಎಲ್ಲ ರಾಜಕೀಯ ಪಕ್ಷಗಳಿಂದಲೂ ಜನರು ಬಂದು ಸೇರಿಕೊಳ್ಳುತ್ತ ಥೇಟ್ ಗಂಗಾ ಮತ್ತು ಯಮುನಾ ನದಿಗಳಂತೇ ಕಲುಷಿತಗೊಂಡಿದ್ದರೂ ತಾನು ಎಲ್ಲರಿಗಿಂತ ಹೆಚ್ಚು ಪವಿತ್ರ ಎಂದೇ ಕೊಚ್ಚಿಕೊಳ್ಳುತ್ತದೆ. ಆದರೆ ಅಪರಾಧ ಹಿನ್ನೆಲೆಯ ಅತಿಹೆಚ್ಚು ಸಂಖ್ಯೆಯ ಸಂಸದರು ಈ ಪಕ್ಷದಲ್ಲಿದ್ದಾರೆ. ಅದು ಆಳುತ್ತಿರುವ ರಾಜ್ಯಗಳಲ್ಲೂ ಅಷ್ಟೇ. 


ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಮಾಜಿ ಶಾಸಕ ಹೊನ್ನುಡಿಕೆ ನಿಂಗಪ್ಪನವರ ಬಳಿ ಹೋಗಿ ಪಕ್ಷ ಸೇರುವಂತೆ ಆಮ್ ಆದ್ಮಿ ಪಾರ್ಟಿ ಪ್ರಸ್ತಾವನೆ ಸಲ್ಲಿಸಿದೆ, ತಿಪಟೂರಿನಲ್ಲಿ ಮಾಜಿ ಶಾಸಕ ಬಿ.ನಂಜಾಮರಿ ಮಗ ಅಭ್ಯರ್ಥಿ ಆದರೆ ಹೇಗೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ ಎಂಬ ಸುದ್ದಿ ಬಂದಿದೆ. ಜೊತೆ ಜೊತೆಗೇ ಟೀ ಅಡ್ಡೆಗಳಲ್ಲಿ ನಡೆಯುವ ಟೈಮ್ ಪಾಸ್ ಮಾತುಕತೆಗಳಲ್ಲಿ ರಾಜಕೀಯದಲ್ಲಿ ಆಸಕ್ತಿ ಇದ್ದೂ ಮುಖ್ಯವಾಹಿನಿ ರಾಜಕೀಯ ಪಕ್ಷಗಳಲ್ಲಿ ಅವಕಾಶ ದೊರಕದೇ ಇರುವ ಎರಡು,ಮೂರನೇ ಹಂತದ ರಾಜಕಾರಣಿಗಳಿಗೆ “ ಆಮ್ ಆದ್ಮಿಪಾರ್ಟಿ ಸೇರಿಕೊಳ್ಳಮ್ಮಾ” ಎಂಬ ಬಿಟ್ಟಿ ಸಲಹೆಗಳು ಬಂದು ಹೋಗತೊಡಗಿವೆ.


ಮೇಲ್ನೋಟಕ್ಕೆ ಮೃದು ಹಿಂದುತ್ವವನ್ನು ಪ್ರಕಟಿಸುತ್ತಲೇ ತನ್ನ ಪಕ್ಷದ ಹೆಸರೇ ಆಗಿರುವ ಸಾಮಾನ್ಯ ಜನರನ್ನು ಒಲಿಸಿಕೊಳ್ಳುವ ಸಲುವಾಗಿಯೇ ದಿಲ್ಲಿಯಲ್ಲಿ ನೀಡುತ್ತಿರುವ ಉಚಿತ ನೀರು, ಉಚಿತ ವಿದ್ಯುತ್ ಹಾಗೂ ಉಚಿತ ಅತ್ಯುತ್ತಮ ಶಿಕ್ಷಣ ಸಾಧನೆಯನ್ನು ಆಮ್ ಆದ್ಮಿ ಪಾರ್ಟಿ ಇತರ ರಾಜ್ಯಗಳ ಚುನಾವಣಾ ಪ್ರಣಾಳಿಕೆಗಳಲ್ಲೂ ಘೋಷಿಸುತ್ತಿದೆ. ಕರ್ನಾಟಕದಲ್ಲಿ ಬಹಳ ಹಿಂದೆಯೇ ಬಂಗಾರಪ್ಪನವರು ಉಚಿತ ವಿದ್ಯುತ್ ಕೊಟ್ಟರು, ರೈತರ ಸಾಲ ಮನ್ನಾ ಇಲ್ಲಿ ಆಳಿದ ಕಾಂಗ್ರೆಸ್- ಜೆಡಿಎಸ್-ಬಿಜೆಪಿಗಳ ಜನಪ್ರಿಯ ಕಾರ್ಯಕ್ರಮವೇ ಆಗಿಬಿಟ್ಟಿದೆ. ಜೊತೆಗೆ ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಉಚಿತ ಅಕ್ಕಿ,ರಾಗಿ,ಗೋಧಿ,ಬೇಳೆ ಕೊಟ್ಟರು, ಅಗ್ಗದ ದರಕ್ಕೆ ಊಟ, ತಿಂಡಿ ಕೊಡುವ ಇಂದಿರಾ ಕ್ಯಾಂಟೀನ್ ಕೊಟ್ಟರು. ಆದರೆ ಭ್ರಷ್ಟಾಚಾರ ತಡೆಯುವುದು ಈ ಯಾರ ಆದ್ಯತೆಯೂ ಆಗಿರಲಿಲ್ಲ. ಕಮೀಶನ್ ಪ್ರಮಾಣ ಅಧಿಕೃತವಾಗಿ 10%ನಿಂದ 40%ಗೆ ಏರಿತು. ಅನಧಿಕೃತವಾಗಿ 60% ತನಕ ತಲುಪಿದೆ ಎಂದು ಸಣ್ಣ ದನಿಯಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಹೇಳುತ್ತಾರೆ. 


ಚುನಾವಣೆಗಳಲ್ಲಿ ಜನರಿಗೆ ಹಣ ಮತ್ತು ಇತರ ಪದಾರ್ಥಗಳನ್ನು ಹಂಚುವುದು ನಮ್ಮ ಪಾರ್ಟಿಯ ಅಜೆಂಡಾದಲ್ಲೇ ಇಲ್ಲ ಎನ್ನುವ ಆಮ್ ಆದ್ಮಿ ಪಾರ್ಟಿಗೆ ಹಣದ ಹೊಳೆಯನ್ನೇ ಹರಿಸುವ ಕಾಂಗ್ರೆಸ್- ಜೆಡಿಎಸ್-ಬಿಜೆಪಿಗಳ ಎದುರು ಚುನಾವಣೆಯನ್ನು ಎದುರಿಸುವುದು ದೊಡ್ಡ ಸವಾಲೇ ಸರಿ. ಕಾದು ನೋಡುವ.