ಯಜಮಾನಿಕೆಯ ದಾಹವೂ,  ಅಮಾಯಕರ ಜೀವಗಳೂ

ಹಮಾಸ್ ದಾಳಿಗೊಳಗಾದ ಇಸ್ರೇಲಿಯರ ಬಗ್ಗೆ ಮೂಡುವ ಅನುಕಂಪ ನಮಗೆ ಗುಜರಾತ್ ಗಲಭೆಗಳಲ್ಲಿ, ಮಣಿಪುರದಲ್ಲಿ ಮಾಯವಾಗುತ್ತದೆ. ಪ್ಯಾಲೆಸ್ಟೈನೀಯರ ಅತಂತ್ರ ಬದುಕಿನ ಬಗ್ಗೆ ಮೂಡುವ ಸಹಾನುಭೂತಿ ಕಾಶ್ಮೀರ ಪಂಡಿತರ ಬಗ್ಗೆ ಮೂಡುವುದಿಲ್ಲ. ಅಷ್ಟೇ ಅಲ್ಲ ನಮ್ಮ ನಡುವೆಯೇ ಬಹಿಷ್ಕೃತರಾಗಿ ಬದುಕುತ್ತಿರುವ ತಳಸಮುದಾಯಗಳ ಬಗ್ಗೆ ಮನಸ್ಸು ಮಿಡಿಯುವುದೇ ಇಲ್ಲ. ಏಕೆಂದರೆ ಆಧುನಿಕ ಮಾನವ ಜಗತ್ತು ನಿರ್ಮಿಸಿಕೊಂಡಿರುವ ಅಸ್ಮಿತೆಗಳ ಕೋಶದಲ್ಲಿ ಮಾನವಜೀವಿ ಯಾವುದೋ ಒಂದು ಅಸ್ಮಿತೆಯ ಸಂಕೋಲೆಯಿಂದ ಆವೃತನಾಗಿರುತ್ತಾನೆ ಅಥವಾ ಬಂಧಿತನಾಗಿರುತ್ತಾನೆ. ʼಅನ್ಯರʼ ಸಾವನ್ನು ಸಂಭ್ರಮಿಸುವ ಮನೋಭಾವ ಇಲ್ಲಿಂದಲೇ ಉಗಮಿಸುತ್ತದೆ. 

ಯಜಮಾನಿಕೆಯ ದಾಹವೂ,  ಅಮಾಯಕರ ಜೀವಗಳೂ

ವರ‍್ತಮಾನ 

ನಾ.ದಿವಾಕರ 

      ಪರಮಾಣು ಯುದ್ಧದಲ್ಲಿ ಮೊದಲು ಯಾರು ಗುಂಡಿ ಒತ್ತುತ್ತಾರೆ ಎನ್ನುವ ಪ್ರಶ್ನೆ ಎಷ್ಟು ಅಪ್ರಸ್ತುತವೋ ಅಷ್ಟೇ ಅಸಂಬದ್ಧವಾದುದು ಯಾವುದೇ ಯುದ್ಧದ ಸಂದರ್ಭದಲ್ಲಿ ಯಾರು ಮೊದಲು ದಾಳಿ ಮಾಡಿದರು ಎನ್ನುವುದು. ಎರಡೂ ಸನ್ನಿವೇಶಗಳಲ್ಲಿ ಹತರಾಗುವುದು ಮಾನವರೇ ! ಮೂಲತಃ ಯುದ್ಧ ನಡೆಯುವುದು ಯಾವುದೋ ಒಂದು ಭೂ ಪ್ರದೇಶದ ಮೇಲೆ ಯಜಮಾನಿಕೆ ಸಾಧಿಸುವ ಪ್ರಭುತ್ವವಾದಿ ಧೋರಣೆಯಿಂದ. ರೋಮನ್ ಇತಿಹಾಸದಿಂದ ನಿನ್ನೆ ಮೊನ್ನೆಯ ಹಮಾಸ್-ಇಸ್ರೇಲ್ ಸಮರದವರೆಗೂ ಕಾಣಬಹುದಾದ ಸಮಾನ ಎಳೆ ಎಂದರೆ, ಭೂಮಿ ಮತ್ತು ಅದರೊಳಗಿನ ನಿಸರ್ಗ ಸಂಪತ್ತು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪಾದನೆಯ ಮೂಲಗಳನ್ನು ವಶಪಡಿಸಿಕೊಳ್ಳುವ ಬಲಾಢ್ಯ ಶಕ್ತಿಗಳ ಹಂಬಲ. ವಿಪರ್ಯಾಸ ಎಂದರೆ ಈ ಕಾಳಗದಲ್ಲಿ ಬಲಿಯಾಗುವವರು, ನಿರ್ಗತಿಕರಾಗುವವರು ಅದೇ ಸಂಪತ್ತಿನ ಫಲಾನುಭವಿಗಳಾಗಬೇಕಾದ ಉತ್ಪಾದಕೀಯ ಶಕ್ತಿಗಳು, ಅಮಾಯಕ ಶ್ರೀಸಾಮಾನ್ಯರು ಹಾಗೂ ನೆಲದ ಮಕ್ಕಳು.


     ಜಗತ್ತಿನ ಇತಿಹಾಸದುದ್ದಕ್ಕೂ ಕಾಣಬಹುದಾದ ಈ ಸುಡು ವಾಸ್ತವ ಆಧುನಿಕ ಯುಗದ ಅತ್ಯಾಧುನಿಕ ಮಾನವನಿಗೆ ಏಕೆ ಅರ್ಥವಾಗುತ್ತಿಲ್ಲ ? ಜಾತಿ, ಮತ, ಪಂಥ ಹಾಗೂ ಧರ್ಮಗಳ ರಕ್ಷಣೆಯ ನೆಪದಲ್ಲಿ ತಾವು ಆಕ್ರಮಿಸಿಕೊಳ್ಳುವ ಭೂ ಪ್ರದೇಶಗಳಲ್ಲಿ ವಾಸಿಸುವ ಜನರು ಈ ಎಲ್ಲ ಚೌಕಟ್ಟುಗಳನ್ನೂ ಮೀರಿ ಮಾನವ ಜಗತ್ತಿನ ಮುನ್ನಡೆಗೆ ಬೇಕಾದ ಭೌತಿಕ-ಬೌದ್ಧಿಕ-ಆಧ್ಯಾತ್ಮಿಕ ಇಂಧನವನ್ನು ತಮ್ಮ ದುಡಿಮೆಯ ಮೂಲಕವೇ ಒದಗಿಸುತ್ತಿರುತ್ತಾರೆ. ಈ ದುಡಿಮೆಗಾರರ ಶತಮಾನದ ಬೆವರಿನ ಶ್ರಮದಿಂದಲೇ ಇಂದು ಮಾನವ ಸಮಾಜ ಚಂದ್ರನನ್ನು ತಲುಪಲು ಸಾಧ್ಯವಾಗಿದೆ, ಮಂಗಳ ಗ್ರಹದ ಮೇಲೆ ಕಾಲಿಡಲು ಸಾಧ್ಯವಾಗಿದೆ. ಆದರೆ ಈ ಶ್ರಮದ ಫಲಾನುಭವಿಗಳಾಗಿ ತಮ್ಮ ಬದುಕು ಸವೆಸಬೇಕಾದ ತಳಮಟ್ಟದ ಸಮಾಜವು ಪ್ರಭುತ್ವವಾದಿಗಳ, ಸಾಮ್ರಾಜ್ಯಶಾಹಿಗಳ ಹಾಗೂ ಆಧುನಿಕ ಭೌಗೋಳಿಕ ಯಜಮಾನಿಕೆಯ ವಾರಸುದಾರರ ಭೂ ದಾಹಕ್ಕೆ ಬಲಿಯಾಗುತ್ತಿದೆ.


ಬಂಡವಾಳ-ತಂತ್ರಜ್ಞಾನ ಮತ್ತು ಯುದ್ಧ


     ಆಧುನಿಕ ಸಂವಹನ ಮಾಧ್ಯಮಗಳನ್ನೂ ಒಳಗೊಂಡಂತೆ ವಿನಾಶಕಾರಿ ತಂತ್ರಜ್ಞಾನಗಳ ಮೇಲೂ ತಮ್ಮ ನಿಯಂತ್ರಣವನ್ನು ಸಾಧಿಸಿರುವ ಬಂಡವಾಳಶಾಹಿ ಆರ್ಥಿಕತೆಯ ಅಧಿಪತಿಗಳು ತಮ್ಮ ಆಧಿಪತ್ಯದ ವಿಸ್ತರಣೆಗೆ ಪೂರಕವಾದ ಅಭಿಪ್ರಾಯಗಳನ್ನೂ, ನಿರೂಪಣೆಗಳನ್ನೂ ಸೃಷ್ಟಿಸುವಲ್ಲಿ ಯಶಸ್ವಿಯಾಗಿರುವುದರಿಂದಲೇ, ವಿಶ್ವದಾದ್ಯಂತ ಜೀವಪರ ಯುದ್ಧವಿರೋಧಿ ಧ್ವನಿಗಳು ಕ್ಷೀಣಿಸಿದಂತೆ ಕಾಣುತ್ತಿದೆ. ಅಲ್ಲಲ್ಲಿ ಕೇಳಿಬರುವ ಇಂತಹ ಧ್ವನಿಗಳನ್ನು ಹತ್ತಿಕ್ಕಲು ಆಳುವ ವರ್ಗಗಳಿಗೆ ತಮ್ಮದೇ ಆದ ಸೈದ್ಧಾಂತಿಕ ಸಕಾರಣಗಳನ್ನೂ ಶೋಧಿಸಿ, ಪ್ರತಿಪಾದಿಸಲಾಗುತ್ತದೆ. ಹಾಗಾಗಿಯೇ ಭಾರತದಲ್ಲೂ ಇಸ್ರೇಲ್-ಹಮಾಸ್ ಕಾಳಗದಲ್ಲಿ ಬಲಿಯಾಗುತ್ತಿರುವ ಅಮಾಯಕ ಪ್ಯಾಲೆಸ್ಟೈನೀಯರಿಗೆ ಅನುಕಂಪ ತೋರುವುದು ಅಪರಾಧವಾದರೆ, ಹಮಾಸ್ ಬಂಡುಕೋರರ ದಾಳಿಗೆ ತುತ್ತಾದ ಇಸ್ರೇಲಿನ ಸಾಮಾನ್ಯ ಜನರಿಗೆ ಸಹಾನುಭೂತಿ ವ್ಯಕ್ತಪಡಿಸುವುದು ಅಪಥ್ಯವಾಗಿಬಿಡುತ್ತದೆ. 


    ಗಾಝಾ ಪಟ್ಟಿಯಲ್ಲಿರುವ ಆಸ್ಪತ್ರೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಐನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಆಸ್ಪತ್ರೆ ವಾಸಿಗಳು ಎಂದರೆ ಬದುಕಲು ಹೆಣಗುತ್ತಿರುವವರು ಅಥವಾ ಸಾವನ್ನು ಸಮೀಪಿಸುತ್ತಿರುವವರು ಎಂದೇ ಅರ್ಥ ಅಲ್ಲವೇ ? ಇಲ್ಲಿ ಮಡಿದ ನೂರಾರು ಅಮಾಯಕರ ದಾರುಣ ಅಂತ್ಯಕ್ಕೆ ಕಾರಣ ಯಾರು ಎಂಬ ಪ್ರಶ್ನೆಗೆ ಉತ್ತರ ಶೋಧಿಸುತ್ತಾ ಹೋದರೆ ನಾವು ಮತ್ತೆ ಇತಿಹಾಸಕ್ಕೆ ಮರಳಬೇಕಾಗುತ್ತದೆ. ಇಸ್ರೇಲ್ ಇದು ತನ್ನ ಕೃತ್ಯವಲ್ಲ ಎಂದು ಹೇಳಿಬಿಟ್ಟಿದೆ. ಯುದ್ಧಪರಂಪರೆಯ ಜನಕ ಅಮೆರಿಕದ ಅಧ್ಯಕ್ಷರು ಇದನ್ನು ಅನುಮೋದಿಸಿದ್ದೂ ಆಗಿದೆ. ಹಮಾಸ್ ಬಂಡುಕೋರರು ಸಹ ಇದರಲ್ಲಿ ತಮ್ಮ ಕೈವಾಡ ಇಲ್ಲ ಎಂದು ಹೇಳಿದ್ದಾರೆ. ಆದರೆ ವಿಮಾನದಿಂದ ಉದುರಿದ ಮಾರಣಾಂತಿಕ ಬಾಂಬುಗಳ ಜನಕರು ಯಾರು ? ನಿಯಂತ್ರಕರು ಯಾರು ? ಇಂತಹ ಅಮಾನುಷ ಕೃತ್ಯಗಳಿಗೂ ಆಧುನಿಕ ನಾಗರಿಕತೆಯಲ್ಲಿ ಹೊಸ ವ್ಯಾಖ್ಯಾನ ಪರಿಭಾಷೆಯನ್ನು ಕಂಡುಹಿಡಿಯಲಾಗಿದೆಯಲ್ಲವೇ ?


    ಹಮಾಸ್ ಬಂಡುಕೋರರ ದಾಳಿ ಭಯೋತ್ಪಾದಕ ಕೃತ್ಯ ಎನಿಸಿಕೊಳ್ಳುತ್ತದೆ, ಇಸ್ರೇಲ್ ದಶಕಗಳಿಂದ ನಡೆಸುತ್ತಲೇ ಇರುವ ಮಾರಣಾಂತಿಕ ದಾಳಿಗಳು ಭೌಗೋಳಿಕ ರಾಷ್ಟ್ರವಾದದ ಚೌಕಟ್ಟಿನಲ್ಲಿ ಕೆಲವರಿಗಾದರೂ ಸ್ವೀಕೃತವಾಗಿಬಿಡುತ್ತದೆ. ಆದರೆ ಎರಡೂ ಪ್ರಸಂಗಗಳಲ್ಲಿ ನಡೆಯುವುದು ಅಮಾಯಕ ಜೀವಗಳ ಹತ್ಯೆ, ಸಾವಿರಾರು ಕುಟುಂಬಗಳ ನಿರ್ಗತಿಕತೆ, ಪ್ರಪಂಚಕ್ಕೆ ಕಣ್ಣುಬಿಡದ ಎಳೆ ಹಸುಳೆಗಳ ವಧೆ, ಸಂಧ್ಯಾಕಾಲದಲ್ಲಿರುವ ವೃದ್ಧರ ಅಂತ್ಯ. ಹೀಗೆ ಬಲಿಯಾಗುವವರಿಗೆ ಅಥವಾ ಅವರನ್ನೇ ನಂಬಿ ಬದುಕುವ ಸಾವಿರಾರು ಕುಟುಂಬಗಳಿಗೆ ದಾಳಿ ಯಾರು ನಡೆಸಿದರು ಎನ್ನುವುದು ಮುಖ್ಯವಾಗುವುದಿಲ್ಲ, ಇಂತಹ ಅಮಾನುಷ ದಾಳಿಗಳಿಂದ ಬೀದಿಪಾಲಾಗುವ ತಮ್ಮ ಭವಿಷ್ಯದ ಬದುಕು ಪ್ರಶ್ನೆಯಾಗುತ್ತದೆ. ಯಾವ ಧರ್ಮವೂ, ಸಿದ್ಧಾಂತವೂ ಈ ಅಮಾಯಕ ಜನತೆಯ ಪ್ರಶ್ನೆಗೆ ನೇರವಾಗಿ ಉತ್ತರಿಸಲಾಗುವುದಿಲ್ಲ. ಆಧುನಿಕ ನಾಗರಿಕತೆ ತನಗಾಗಿ ಸೃಷ್ಟಿಸಿಕೊಂಡಿರುವ ಯುದ್ಧಪರಂಪರೆ ಉಂಟುಮಾಡಿರುವ ಬೌದ್ಧಿಕ ಜಿಜ್ಞಾಸೆ ಇದೇ ಅಲ್ಲವೇ ?


ಅನಾಗರಿಕತೆಯಲ್ಲೂ ವೈವಿಧ್ಯತೆ !


    ಹಿಟ್ಲರನ ನಾಝಿ ಆಕ್ರಮಣಕ್ಕೆ ಬಲಿಯಾಗಿ 80 ವರ್ಷಗಳ ಹಿಂದೆ ನಡೆದ ಸಾಮೂಹಿಕ ನರಮೇಧಕ್ಕೆ ಬಲಿಯಾದ ಯಹೂದಿ ಜನಾಂಗ ಇಂದು ಅಷ್ಟೇ ಕ್ರೂರವಾದ ದಬ್ಬಾಳಿಕೆಯನ್ನು ಪ್ಯಾಲೆಸ್ಟೈನೀಯರ ಮೇಲೆ ನಡೆಸುತ್ತಿರುವುದು ಚರಿತ್ರೆಯ ವಿಡಂಬನೆ ಎನ್ನೋಣವೋ ಅಥವಾ ನಾಗರಿಕತೆಯ ಅವಲಕ್ಷಣ ಎನ್ನೋಣವೋ ? ಇದೇ ಪ್ರಶ್ನೆಯನ್ನು ತಿರುಗಮುರುಗ ಮಾಡಿ ಪ್ಯಾಲೆಸ್ಟೈನೀಯರ ಕಡೆಗೆ ಬೊಟ್ಟು ಮಾಡಿದಾಗ, ದಶಕಗಳಿಂದ ತಮ್ಮ ತಾಯ್ನೆಲದಿಂದಲೇ ಉಚ್ಚಾಟಿತರಾಗಿ ಪರಕೀಯರಾಗಿ ನಿರಂತರ ಆಕ್ರಮಣಕ್ಕೆ ತುತ್ತಾಗಿರುವ ಜನಸಮುದಾಯಗಳನ್ನು ಪ್ರತಿನಿಧಿಸುವ ಹಮಾಸ್‌ನಂತಹ ಸಂಘಟನೆಯೊಂದು, ತನ್ನ ಅಮಾನುಷ ಕೃತ್ಯಗಳಿಂದ ತಮ್ಮದೇ ಜನಸಮುದಾಯಗಳ ಬಲಿ ಕೊಡುತ್ತಿರುವುದನ್ನು ಮತ್ತೆ ಹೇಗೆ ವ್ಯಾಖ್ಯಾನಿಸಲು ಸಾಧ್ಯ ? ಈ ಭೀಕರ ಕಾಳಗದಲ್ಲಿ ಜೀವ ತೆತ್ತಿರುವ ಸಾವಿರಾರು ಅಮಾಯಕರಲ್ಲಿ ಯಹೂದಿಗಳನ್ನು, ಅರಬ್ಬರನ್ನು, ಪ್ಯಾಲೆಸ್ಟೈನೀಯರನ್ನು ಶೋಧಿಸುವ ಮುನ್ನ ನಾವು ಶೋಧಿಸಬೇಕಿರುವುದು ಮನುಷ್ಯರನ್ನಲ್ಲವೇ ? ಈ ಮನುಷ್ಯರೊಂದಿಗೇ ಬಲಿಯಾಗುವ ಸಾವಿರಾರು ಜೀವ ಜಂತುಗಳನ್ನಲ್ಲವೇ ? ಯಾವುದೇ ಯುದ್ಧದ ಸುತ್ತಲಿನ ಸಂಕಥನದಲ್ಲಿ ಪ್ರಸ್ತಾಪವಾಗದೆ ಇರುವುದು ನಮ್ಮ ಬದುಕಿಗೆ ನೆರವಾಗುವ ಮೂಕ ಪಶುಗಳು ಮತ್ತು ಬದುಕಿನ ತಳಹದಿಯಾದ ನಿಸರ್ಗ-ಪ್ರಕೃತಿ. ಇದು ದುರಂತ ಅಲ್ಲವೇ ?


  ಮತಶ್ರದ್ಧೆ, ಧರ್ಮನಿಷ್ಠೆ ಅಥವಾ ಭೌಗೋಳಿಕ ವ್ಯಾಮೋಹಗಳಿಗೆ ಬಲಿಯಾಗಿ ಮಾನವ ಕುಲ ತನ್ನ ಅಮಾನುಷತೆಯನ್ನು ಬಗೆಬಗೆಯಾಗಿ ತೆರೆದಿಟ್ಟುಬಿಟ್ಟಿದೆ. ಮನುಷ್ಯ ಸಮಾಜವೇ ಸೃಷ್ಟಿಸಿಕೊಂಡಿರುವ ಜಾತಿ ಪ್ರಜ್ಞೆ ಅಥವಾ ಕುಲನಿಷ್ಠೆಗಳು ಭಾರತದಲ್ಲೂ ಸಹ ಇಂತಹುದೇ ಬೌದ್ಧಿಕ ಅಪಸವ್ಯಗಳನ್ನು ಸೃಷ್ಟಿಸಿವೆ. ಜೀವಪ್ರೀತಿ ಎನ್ನುವುದನ್ನು ಮಾನವ ಮತ್ತು ಪ್ರಾಣಿಗಳ ನಡುವೆ ವಿಂಗಡಿಸಿರುವ ಆಧುನಿಕ ನಾಗರಿಕತೆಯೇ, ಮಾನವರ ನಡುವೆಯೇ ಇದನ್ನು ಮರುವಿಂಗಡನೆ ಮಾಡಿ ʼನಮ್ಮವರʼ ಹಾಗೂ ʼಅನ್ಯರ ʼ ನೆಲೆಯಲ್ಲಿ ಪ್ರೀತಿ ವಾತ್ಸಲ್ಯ ಮಮಕಾರಗಳನ್ನು ವಿಭಜನೆಗೊಳಪಡಿಸಿದೆ. ಹಾಗಾಗಿಯೇ ಹಮಾಸ್ ದಾಳಿಗೊಳಗಾದ ಇಸ್ರೇಲಿಯರ ಬಗ್ಗೆ ಮೂಡುವ ಅನುಕಂಪ ನಮಗೆ ಗುಜರಾತ್ ಗಲಭೆಗಳಲ್ಲಿ, ಮಣಿಪುರದಲ್ಲಿ ಮಾಯವಾಗುತ್ತದೆ. ಪ್ಯಾಲೆಸ್ಟೈನೀಯರ ಅತಂತ್ರ ಬದುಕಿನ ಬಗ್ಗೆ ಮೂಡುವ ಸಹಾನುಭೂತಿ ಕಾಶ್ಮೀರ ಪಂಡಿತರ ಬಗ್ಗೆ ಮೂಡುವುದಿಲ್ಲ. ಅಷ್ಟೇ ಅಲ್ಲ ನಮ್ಮ ನಡುವೆಯೇ ಬಹಿಷ್ಕೃತರಾಗಿ ಬದುಕುತ್ತಿರುವ ತಳಸಮುದಾಯಗಳ ಬಗ್ಗೆ ಮನಸ್ಸು ಮಿಡಿಯುವುದೇ ಇಲ್ಲ. ಏಕೆಂದರೆ ಆಧುನಿಕ ಮಾನವ ಜಗತ್ತು ನಿರ್ಮಿಸಿಕೊಂಡಿರುವ ಅಸ್ಮಿತೆಗಳ ಕೋಶದಲ್ಲಿ ಮಾನವಜೀವಿ ಯಾವುದೋ ಒಂದು ಅಸ್ಮಿತೆಯ ಸಂಕೋಲೆಯಿಂದ ಆವೃತನಾಗಿರುತ್ತಾನೆ ಅಥವಾ ಬಂಧಿತನಾಗಿರುತ್ತಾನೆ. ʼಅನ್ಯರʼ ಸಾವನ್ನು ಸಂಭ್ರಮಿಸುವ ಮನೋಭಾವ ಇಲ್ಲಿಂದಲೇ ಉಗಮಿಸುತ್ತದೆ. 


    ಇಸ್ರೇಲ್ ಮೇಲಿನ ದಾಳಿಯನ್ನು ಸಂಭ್ರಮಿಸಿ ವಿಜೃಂಭಿಸಿದ ದೃಶ್ಯಗಳು ಮಾಧ್ಯಮಗಳಲ್ಲಿ ಕಾಣುವಂತೆಯೇ ಪ್ಯಾಲೆಸ್ಟೈನೀಯರ ಮೇಲಿನ ಅಮಾನುಷ ದಾಳಿಯನ್ನು ಸಮರ್ಥಿಸಿ ಸಂಭ್ರಮಿಸುವ ಮನಸುಗಳೂ ಕಾಣುತ್ತದೆ. ಈ ವಿದ್ಯಮಾನವನ್ನು ಗುರುತಿಸಲು ಗಾಝಾ ಪಟ್ಟಿಯವರೆಗೂ ಹೋಗಬೇಕಿಲ್ಲ. ನಮ್ಮ ನಡುವೆಯೇ ಬೇಕಾದಷ್ಟಿದೆ. ಗಾಂಧಿ ಹತ್ಯೆಯನ್ನು ಸಂಭ್ರಮಿಸುವವರAತೆಯೇ ವಿಭಜನೆಯ ಹಿಂಸಾಚಾರವನ್ನು ವರ್ತಮಾನದ ರಾಜಕಾರಣಕ್ಕೆ ಬೇಕಾದಂತೆ ಬಳಸಿಕೊಳ್ಳುವ ವಿಕೃತ ಮನಸುಗಳನ್ನೂ ನಮ್ಮ ನಡುವೆ ಕಾಣಬಹುದು. ಇಂತಹ ಆಧುನಿಕ ಚಿಂತನಾ ಕ್ರಮವೇ ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ಹತ್ಯೆ, ದಬ್ಬಾಳಿಕೆ, ಅಸ್ಪೃಶ್ಯತೆ ಮತ್ತಿತರ ಅಮಾನುಷ ಕೃತ್ಯಗಳನ್ನು ಸಂಭ್ರಮಿಸುವ ಹೃದಯಗಳನ್ನು ಸೃಷ್ಟಿಸುತ್ತದೆ.

ಎಲ್ಲವೂ ಆಧಿಪತ್ಯಕ್ಕಾಗಿ !

     ಭೌಗೋಳಿಕ ಆಧಿಪತ್ಯಕ್ಕಾಗಿ ಮತ್ತು ಸಂಪತ್ತು ಸಂಪನ್ಮೂಲಗಳ ಒಡೆತನಕ್ಕಾಗಿ ಯಾವುದೇ ಎರಡು ದೇಶಗಳ ನಡುವೆ ನಡೆಯುವ ಯುದ್ಧ ಇಂತಹ ವಿಕೃತ ಹೃದಯಗಳನ್ನು ಪ್ರತಿನಿಧಿಸುತ್ತದೆ. ಹಮಾಸ್ ಇಸ್ರೇಲ್ ನಡುವೆ ನಿಲ್ಲುವ ಅಮೆರಿಕದ ಅಧ್ಯಕ್ಷರಿಗೆ ಅಲ್ಲಿನ ತೈಲಸಂಪತ್ತು ಮತ್ತು ಅದರ ಮೇಲಿನ ಒಡೆತನ ಮುಖ್ಯವಾಗುತ್ತದೆ. ಇರಾನ್ ಒಳಗೊಂಡಂತೆ ಅರಬ್ ದೇಶಗಳಿಗೆ ತಮ್ಮ ಮಾರುಕಟ್ಟೆ ಪ್ರೇರಿತ ವಾಣಿಜ್ಯ ಒಪ್ಪಂದಗಳ ಅಳಿವು ಉಳಿವು ಮುಖ್ಯವಾಗುತ್ತದೆ. ಇಸ್ರೇಲ್‌ನೊಡನೆ ವಾಣಿಜ್ಯ ಒಪ್ಪಂದಗಳಿಗೆ ಮುಂದಾಗಿದ್ದ ಸೌದಿ ಅರೇಬಿಯಾ ಈಗ ಪ್ಯಾಲೆಸ್ಟೀನೀಯರ ಪರ ನಿಲ್ಲಲೇಬೇಕಾದ ಅನಿವಾರ್ಯತೆ ಎದುರಿಸುತ್ತದೆ. ಏಕೆಂದರೆ ರಾಜಕಾರಣ ಮತ್ತು ಧರ್ಮಕಾರಣಗಳ ನಡುವೆ ಮಾರುಕಟ್ಟೆ ಸಂದಿಗ್ಧತೆಯನ್ನು ಸೃಷ್ಟಿಸುತ್ತದೆ. ಪ್ಯಾಲೆಸ್ಟೀನೀಯರ ಅರಬ್ ಅಸ್ಮಿತೆಯನ್ನು ಮಾರುಕಟ್ಟೆ ಅಥವಾ ಬಂಡವಾಳ ಲೆಕ್ಕಿಸುವುದಿಲ್ಲ. ಅಥವಾ ಇಸ್ರೇಲಿನಲ್ಲಿರುವ ಯಹೂದ್ಯರ ಸೆಮಿಟಿಕ್ ಅಸ್ಮಿತೆಯೂ ಗಣನೆಗೆ ಬರುವುದಿಲ್ಲ. ಅಂತಾರಾಷ್ಟ್ರೀಯ ಬಂಡವಾಳ ಮಾರುಕಟ್ಟೆಗೆ ಎರಡೂ ಜನಸಮುದಾಯಗಳು ಬಳಕೆದಾರರಾಗಿ ಮಾತ್ರವೇ ಕಾಣಲು ಸಾಧ್ಯ. ಇದೇ ಮಾರುಕಟ್ಟೆಯ ವಿಸ್ತರಣೆಗೆ ಸದಾ ಸನ್ನದ್ಧವಾಗಿರುವ ಶಸ್ತ್ರಾಸ್ತ್ರ ತಯಾರಿಕೆಯ ಜಾಗತಿಕ ಉದ್ದಿಮೆಗಳಿಗೆ ಈ ಎರಡು ಅಸ್ಮಿತೆಗಳ ನಡುವೆ ಶಾಶ್ವತವಾಗಿ ಲೋಕ ತೊರೆಯುವ ಅಥವಾ ಬದುಕುಳಿದರೂ ತಮ್ಮ ಮೂಲ ನೆಲೆಯನ್ನು ಕಳೆದುಕೊಂಡು ಪರಾವಲಂಬಿಗಳಾಗಿ, ನಿರ್ಗತಿಕರಾಗಿ ಬದುಕುವ ಅಪಾರ ಜನಸ್ತೋಮ ಗೋಚರಿಸುವುದೇ ಇಲ್ಲ. 

      ಯುದ್ಧ, ಯುದ್ಧೋನ್ಮಾದ ಮತ್ತು ಇದರಿಂದ ಸೃಷ್ಟಿಯಾಗುವ ಭೌಗೋಳಿಕ ವ್ಯಾಮೋಹ ಈ ಸುಡು ವಾಸ್ತವಗಳನ್ನು ಜನಮಾನಸದಿಂದ ದೂರ ಮಾಡಿಬಿಡುತ್ತವೆ. ನಮ್ಮ ದೇಶದಲ್ಲೇ ಕಾಣಲಾಗುತ್ತಿರುವ ಮತೀಯ ಅಸ್ಮಿತೆಗಳು, ಜಾತಿ ಶ್ರೇಷ್ಠತೆಯ ಅಹಮಿಕೆಗಳು ಹಾಗೂ ಇವುಗಳಿಂದ ಸೃಷ್ಟಿಯಾಗುವ ಭಾವೋನ್ಮಾದದ ಅಲೆಗಳು ಸಹ ಇದೇ ಕೆಲಸವನ್ನು ಮಾಡುತ್ತವೆ. ವಿದ್ಯಾವಂತರನ್ನೂ, ಸುಶಿಕ್ಷಿತ ನಾಗರಿಕರನ್ನೂ ಭ್ರಮಾಧೀನಗೊಳಿಸುವ ಒಂದು ತಂತ್ರಗಾರಿಕೆಯನ್ನು ಸಾಂಸ್ಥಿಕ ನೆಲೆಯಲ್ಲಿಟ್ಟು ನೋಡಿದಾಗ ನಮ್ಮ ಗಮನ ರೋಮ್‌ನಿಂದ ಇಸ್ರೇಲ್‌ವರೆಗೆ ಪಯಣಿಸಬೇಕಾಗುತ್ತದೆ. ಆದರೆ ಆಧುನಿಕ ಮಾನವ ಸಮಾಜವನ್ನು ಭ್ರಮಾಧೀನಗೊಳಿಸಿರುವ ತಂತ್ರಜ್ಞಾನ ಮತ್ತು ಸಂವಹನ ಸಾಧನಗಳು ಈ ಪಯಣದಲ್ಲಿ ಅಡ್ಡಗೋಡೆಗಳನ್ನು, ಭದ್ರ ಬೇಲಿಗಳನ್ನು ನಿರ್ಮಿಸುವ ಮೂಲಕ ಜನಸಾಮಾನ್ಯರನ್ನು ವರ್ತಮಾನದ ವಾಸ್ತವಗಳಿಂದ ದೂರ ಮಾಡಿ ಆಗಿಹೋದ ಚರಿತ್ರೆಯತ್ತ ಗಮನಹರಿಸುವಂತೆ ಮಾಡುತ್ತವೆ. 

     ಈ ಬೌದ್ಧಿಕ ಸಂಕೋಲೆಗಳೇ ಯುದ್ಧ ಮತ್ತು ಅದರ ಭೀಕರತೆಯ ಬಗ್ಗೆ ನಮ್ಮಲ್ಲಿ ಮೂಡಬೇಕಾದ ಮಾನವೀಯ ಪ್ರಜ್ಞೆಯನ್ನು ನಿಷ್ಕ್ರಿಯಗೊಳಿಸಿಬಿಡುತ್ತವೆ. ಗಾಝಾ ಪಟ್ಟಿಯಲ್ಲಿ ಪೈಶಾಚಿಕ ವಿಮಾನ ದಾಳಿಗೆ ತುತ್ತಾದ ಸಾವಿರಾರು ಮಂದಿ, ಇದರಿಂದ ನಿರ್ಗತಿಕರಾಗುವ ಲಕ್ಷಾಂತರ ಮಂದಿ ಮಾನವ ಸಮಾಜದ ಈ ನಿಷ್ಕ್ರಿಯತೆಯತ್ತ ನೋಡುತ್ತಿರುತ್ತಾರೆ. ಸತ್ತವರಿಗೆ ತಮಗಾಗಿ ಮರುಗುವವರ ಚಿಂತೆ ಇರಲು ಸಾಧ್ಯವಿಲ್ಲ. ನಾಳೆಗಳನ್ನೆಣಿಸುತ್ತಾ ಬದುಕುಳಿದವರಿಗೆ ಹಾಗೆ ಮರುಗುವವರು ಅಲ್ಲಲ್ಲಿ ಕಾಣುತ್ತಾರೆ. ಆದರೆ ಈ ಸಾಂತ್ವನದ ಅಲೆಗಳನ್ನೂ ಮೀರಿದ ದ್ವೇಷದ ಅಲೆಗಳು ಮಾನವ ಸಮಾಜವನ್ನು ಆವರಿಸಿದೆ. ಅಲ್ಲಿ ಅಳಿದುಳಿದವರೂ ಸಹ ಅಸಹಾಯಕರಾಗಿ ಬದುಕುವಂತಾಗುತ್ತದೆ. ಇಂತಹ ಹೃದಯವಿದ್ರಾವಕ ದೃಶ್ಯವನ್ನು ಕಲ್ಪಿಸಿಕೊಂಡಾಗ ನಮ್ಮ ಮನಸುಗಳು ಸುತ್ತಲಿನ ಸಮಾಜವನ್ನು ನೋಡದೆ, ದೂರ ದೇಶದತ್ತ ನೋಡುವುದಾದರೆ ಅದನ್ನು ಬೌದ್ಧಿಕ ದೀವಾಳಿತನ ಎನ್ನಲಡ್ಡಿಯಿಲ್ಲ. ಅಂತಿಮವಾಗಿ ಮಾನವ ಹತ್ಯೆಗಳ ಮೌನ ಸಮ್ಮತಿಗೂ ಸಂಭ್ರಮಿಸುವುದಕ್ಕೂ ಇರುವ ತೆಳು ಅಂತರ ಕೇವಲ ತೋರಿಕೆಯಲ್ಲಷ್ಟೇ ಅಲ್ಲವೇ ?

21ನೆಯ ಶತಮಾನದ ಮಾನವ ಸಮಾಜದ ಮುಂದಿರುವ ಏಕಮೇವ ಪ್ರಶ್ನೆ :


ಮನುಕುಲಘಾತುಕ ಯುದ್ಧ ಬೇಕೋ ಅಥವಾ ಬೇಡವೋ ?


-0-0-0-