ರೈತರ ಆತ್ಮಹತ್ಯೆ ಮತ್ತು ಕಟೀಲರ ಬುರುಡೆ ಭಾಷಣ

ರೈತರ ಆತ್ಮಹತ್ಯೆ ಮತ್ತು ಕಟೀಲರ ಬುರುಡೆ ಭಾಷಣ

ರೈತರ ಆತ್ಮಹತ್ಯೆ ಮತ್ತು ಕಟೀಲರ ಬುರುಡೆ ಭಾಷಣ

ರೈತರ ಆತ್ಮಹತ್ಯೆ ಮತ್ತು ಕಟೀಲರ ಬುರುಡೆ ಭಾಷಣ

 

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

ಮೊನ್ನೆ ತುಮಕೂರಿನಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಮೂರು ದಿನ ನಡೆಯಿತು. ಈ ಮೋರ್ಚಾ ಹಾಗೂ ಕಾರ್ಯಕಾರಿಣಿ ಎನ್ನುವ ಪದಗಳು ಹಿಂದಿಯಿಂದ ಹಿಂದಿಗೆ ಸಂಸ್ಕೃತದಿಂದ ಬಂದವು, ಬಿಜೆಪಿ ಹಾಗೂ ಈ ರಾಜಕೀಯ ಪಕ್ಷದ ತಾಯಿ ಬೇರಾಗಿರುವ ಆರ್ ಎಸ್ ಎಸ್ ಅಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಬೇರೇ ಸಂಸ್ಕೃತವಾಗಿರುವಾಗ ಕೊಂಬೆ ರೆಂಬೆಗಳು ಕನ್ನಡವಾಗಿರು ಅಂತ ನಿರೀಕ್ಷಿಸಲಾಗುವುದಿಲ್ಲಅಲ್ವಾ.

ಸರಳವಾಗಿ ಹೇಳುವುದಾದರೆ ಭಾರತೀಯ ಜನತಾ ಪಾರ್ಟಿಯ ರೈತ ವಿಭಾಗದ ರಾಜ್ಯ ಸಮಿತಿ ಸಭೆ ನಡೆಯಿತು ಅನ್ನಬಹುದು. ಎರಡೋ ಮೂರೋ ದಿನ ನಡೆದ ಸಭೆಗೆ ಬಿಜೆಪಿಯ ರಾಜ್ಯಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡುತ್ತ, 20 ನಿಮಿಷಗಳ ಭಾಷಣದಲ್ಲಿ ರೈತರ ಕುರಿತು ಒಂದೆರಡು ನಿಮಿಷ ಮಾತನಾಡಿ ಉಳಿದ ಸಮಯವನ್ನೆಲ್ಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸಲು ಬಳಸಿಕೊಂಡರು. “ ನಿಮಗೆ ರೈತರ ಶಾಪ ತಟ್ಟಿದೆ, ನೀವು ನಿಮ್ಮ ಹೆಸರಿನಲ್ಲಿರುವ ರಾಮನನ್ನು ತೆಗೆದು ರಾವಣಅಂತ ಬದಲಿಸಿಕೊಳ್ಳಿ ಎಂದು ಚೇಂಜ್ ಆಫ್ ನೇಮ್‍ ಗೆ ಸಲಹೆ ಮಾಡಿದರು.

ರೈತರ ಶಾಪ ಸಿದ್ದರಾಮಯ್ಯನವರಿಗೆ ಹೇಗೆ ತಟ್ಟಿದೆ ಅಂತ ವಿವರಿಸುವಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 3000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಆದರೆ ಬಿಜೆಪಿ ಆಡಳಿತದಲ್ಲಿ ಅದು ಯಡಿಯೂರಪ್ಪನವರಿರಲಿ, ಬಸವರಾಜ ಬೊಮ್ಮಾಯಿ ಇರಲಿ ರೈತರ ಆತ್ಮಹತ್ಯೆ ಬಹಳ ಕಡಿಮೆ ಸಂಖ್ಯೆಯಲ್ಲಿ ಸಂಭವಿಸಿದೆ. ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೈತ ಪರ ಯೋಜನೆಗಳೇ ಕಾರಣ ಎಂದು ಘೋಷಿಸಿದರು.

ನಮ್ಮಂಥ ಸುದ್ದಿಗಾರರನ್ನು ಬಿಟ್ಟು ಸಭೆಯಲ್ಲಿದ್ದ ಎಲ್ಲರೂ  ಚಪ್ಪಾಳೆ ತಟ್ಟಿದರು, ತಟ್ಟಲೇ ಬೇಕಲ್ಲವೇ. ಅಲ್ಲಿ ದೊಡ್ಡದೊಂದು ಬಾಯಿ ಮಾತನಾಡುತ್ತಿರುತ್ತದೆ, ಉಳಿದ ಎಲ್ಲರ ತೆರೆದ ಕಿವಿಗಳು ಆಲಿಸುತ್ತವೆ.

ಆ ಸಭೆಯಿಂದ ಹೊರ ಬಂದ ಮೇಲೂ ನಾಲ್ಕೈದು ದಿನ ಕಳೆದರೂ ನಳೀನ್ ಕುಮಾರ್ ಕಟೀಲ್ ಅವರ ಈ ರೈತರ ಆತ್ಮಹತ್ಯೆ ಮಾತುಗಳೇ ಕಾಡುತ್ತಿದ್ದವು. ರೈತಾಪಿ ಕುಟುಂಬ ಹಾಗೂ ರೈತ ಹೋರಾಟದಲ್ಲಿ ತೊಡಗಿದ್ದ ನನಗೆ ಕಟೀಲರ ಮಾತುಗಳು ಕಾಡದೇ ಇರಲು ಸಾಧ್ಯವಿಲ್ಲ. ಹಾಗಾಗಿ, ಕಟೀಲ್ ಮಾತಿನ ಬೇರನ್ನೇ ಹಿಡಿದು ಆಳಕ್ಕಿಳಿಯುವ ಪ್ರಯತ್ನ ಮಾಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಕ್ಕೆ ಬಂದದ್ದು 2013ರ ಮೇ 13ರಂದು, ಅಂದಿನಿಂದ 2018ರ ಮೇ 17ರವರೆಗೆ ಸರಿಯಾಗಿ ಐದು ವರ್ಷ ನಾಲ್ಕು ದಿನಗಳ ಕಾಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಆಡಳಿತದ 5 ವರ್ಷಗಳ ಅವಧಿಯಲ್ಲಿ ರೈತರ ಆತ್ಮಹತ್ಯೆ ಕುರಿತು ರಾಜ್ಯ ಕೃಷಿ ಇಲಾಖೆ ಒದಗಿಸಿರುವ ಮಾಹಿತಿ ಹೀಗಿದೆ.

2013ರ ಏಪ್ರಿಲ್‍ನಿಂದ 2017ರ ನವೆಂಬರ್ ತಿಂಗಳವರೆಗೆ 3515 ರೈತರು ಕರ್ನಾಟಕದಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದು ಇವರಲ್ಲಿ 105 ಪ್ರಕರಣಗಳನ್ನು ಕೃಷಿ ಇಲಾಖೆ ಆತ್ಮಹತ್ಯೆ ಎಂದು ಪರಿಗಣಿಸದೇ ಪೆಂಡಿಂಗ್ ಇಟ್ಟಿತ್ತು. ಈ ಲೆಕ್ಕದಲ್ಲಿ ವರ್ಷವಾರು ಬಗೆ ಮಾಡಿ ನೋಡಿದರೆ, 2013ರ ಏಪ್ರಿಲ್‍ನಿಂದ 2014ರ ಏಪ್ರಿಲ್ ವರೆಗೆ ರಾಜ್ಯದಲ್ಲಿ 106 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು,  2014-15ರಲ್ಲಿ 895 ರೈತರು ಆತ್ಮಹತ್ಯೆ ಹಾಗೂ 2015-16ರಲ್ಲಿ 1483 ಹಾಗೂ 2015ರ ಏಪ್ರಿಲ್‍ನಿಂದ 2017ರ ನವೆಂಬರ್‍ವರೆಗೆ ಈ ಎರಡೂವರೆ ವರ್ಷಗಳಲ್ಲಿ(2014-15ರ 1483 ಸೇರಿ)  ರಾಜ್ಯದಲ್ಲಿ 2514 ರಷ್ಟು ದೊಡ್ಡ ಸಂಖ್ಯೆಯ ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

ಹೀಗೆ ಸಿದ್ದರಾಮಯ್ಯನವರ ಅವಧಿಯಲ್ಲಿ ರಾಜ್ಯದಲ್ಲಿ 3000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೈತರ ಶಾಪ ಸಿದ್ದರಾಮಯ್ಯನವರಿಗೆ ತಗುಲಿದೆ ಇನ್ನುಅವರೆಂದೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎನ್ನುವುದು ಕಟೀಲರ ಭಾಷ್ಯ!

ಆದರೆ 2014ರ ಮೇ 26 ರಂದು ಅಂದರೆ ಸಿದ್ಧರಾಮಯ್ಯನವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಒಂದು ವರ್ಷ 13 ದಿನಗಳಲ್ಲೇ, ದಿಲ್ಲಿಯಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಮೈತ್ರಿ ಪಕ್ಷಗಳು ಸೇರಿ ಎನ್‍ಡಿಎ ಹೆಸರಲ್ಲಿ ಸರ್ಕಾರ ರಚಿಸಿದವು. ಬಿಜೆಪಿಯ ನರೇಂದ್ರ ದಾಮೋದರ ದಾಸ್ ಮೋದಿ ಭಾರತ ಸರ್ಕಾರದ ಪ್ರಧಾನಮಂತ್ರಿಯಾದರು. ಅಲ್ಲಿಂದ ಇಲ್ಲಿವರೆಗೆ ಮತ್ತು ಐದು ವರ್ಷದ ಬಳಿಕ ನಡೆದ ಚುನಾವಣೆಯಲ್ಲೂ ಬಿಜೆಪಿಯೇ ಅಧಿಕಾರ ಹಿಡಿದಿದ್ದು ಅದೇ ಸನ್ಮಾನ್ಯ ಮೋದಿಯವರೇ ಪ್ರಧಾನ ಮಂತ್ರಿಯಾಗಿ ಮುಂದುವರೆದಿದ್ದಾರೆ, ಮತ್ತು ಅವರ ರೈತ ಪರ ಕಲ್ಯಾಣ ಯೋಜನೆಗಳೇ ಅನುಷ್ಟಾನದಲ್ಲಿವೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲರಿಗೆ ಮಾತ್ರ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್ ಸರಕಾರದ ಐದು ವರ್ಷಗಳಲ್ಲಿ  ಮೊದಲ ಒಂದು ವರ್ಷ ಹೊರತುಪಡಿಸಿ ನಂತರದ ನಾಲ್ಕು ವರ್ಷ ಇವರ ಪರಮೋಚ್ಚ ನಾಯಕ ಮೋದಿಯವರೇ ಪ್ರಧಾನ ಮಂತ್ರಿಯಾಗಿದ್ದರು ಮತ್ತು ಅವರ ರೈತ ಪರ ಯೋಜನೆಗಳೇ ಅನುಷ್ಟಾನದಲ್ಲಿದ್ದವು, ಹಾಗಿದ್ದಾಗಲೂ 3400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಯಾಕೆ ನೆನಪಿಗೆ ಬರುವುದಿಲ್ಲ .

ಇದು ಹೀಗೇ ಆರ್‍ಎಸ್‍ಎಸ್‍  ನಾಯಕರಿಗಾಗಲೀ ಮತ್ತು ಆ ಸಂಘಟನೆಯ ಬಿಜೆಪಿ ರಾಜಕಾರಣಿಗಳಿಗಾಗಲೀ ಅಬ್ಬರದ ಮಾತುಗಳಿಂದ ಅಬ್ಬರಿಸುವುದು ಗೊತ್ತೇ ಹೊರತು ವಾಸ್ತವವನ್ನು ಹೇಳಲು ಇಷ್ಟವಾಗುವುದಿಲ್ಲ.

ಮಳೆ ಕೊರತೆ, ಬೆಳೆ ವೈಫಲ್ಯ, ಖಾಸಗಿ ಲೇವಾದೇವಿಗಾರ ಮೀಟರ್ ಬಡ್ಡಿಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸರ್ಕಾರದ ಅರಿವಿಗೆ ಬಂದು, ಸುಮಾರು 1300ಕ್ಕೂ ಹೆಚ್ಚು ಖಾಸಗಿ ಲೇವಾದೇವಿಗಾರರ ವಿರುದ್ಧ ಮೊಕದ್ದಮೆ ದಾಖಲಿಸಲಾಯಿತು ಹಾಗೂ ಸಿದ್ದರಾಮಯ್ಯನವರು ಹೀಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸರ್ಕಾರ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ಒಂದು ಲಕ್ಷ ರೂಪಾಯಿಯಿಂದ ಐದು ಲಕ್ಷ ರೂಪಾಯಿಗೆ ಹೆಚ್ಚಿಸಿದರು. ಸಹಕಾರಿ ಸಂಸ್ಥೆಗಳ ಸಾಲ ವಸೂಲಿ ಸಡಿಲ ಮಾಡಿದರು.

( ನಾವು ಸತ್ತರೆ ಹೆಚ್ಚಿನ ಪರಿಹಾರ ನಮ್ಮ ಕುಟುಂಬಕ್ಕೆ ದೊರಕುತ್ತದೆ ಎಂದು ಆತ್ಮಹತ್ಯೆಗೆ ಶರಣಾದವರ ಸಂಖ್ಯೆಯೂ ಇಲ್ಲ ಎನ್ನುವಂತಿಲ್ಲ. ಶಿರಾ ತಾಲೂಕು ಬಂದಕುಂಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದು ಕೇಸಿನಲ್ಲಿ ಆಗ ಶಾಸಕರಾಗಿದ್ದ ದಿ. ಸತ್ಯನಾರಾಯಣ ನೇಣು ಹಾಕಿದ ಸ್ಥಿತಿಯಲ್ಲಿದ್ದ ವೃದ್ಧನ ಶವದ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದರು. ಈ ಚಿತ್ರವನ್ನು ಪ್ರಕಟಿಸಿ ನಾನೇ ಟೀಕಿಸಿದ್ದೂ ಉಂಟು.)

ಇಲ್ಲಿ ಪ್ರಶ್ನೆ ಅದಲ್ಲ, ನಮ್ಮ ಜನಪದರಲ್ಲಿರುವ “ ತನ್ನೂಸು ಹೊನ್ನೂಸು, ಮಗಳೂಸು ಮಾಣಿಕ್ಯ, ಸೊಸೆಯೂಸು ಕಸಿಪಿಸಿ” ಎನ್ನುವ ಬಿಜೆಪಿಯ ಧೋರಣೆ ಇದೆಯಲ್ಲ ಅದು.

ಕೃಷಿ ಮಂತ್ರಿ ಬಿ.ಸಿ.ಪಾಟೀಲರು ಇದೇ ಮಾರ್ಚಿ ಅಂತ್ಯದಲ್ಲಿ ವಿಧಾನ ಸಭೆಯಲ್ಲಿ ಮಂಡಿಸಿದ ರೈತರ ಆತ್ಮಹತ್ಯೆ ಅಂಕಿ ಅಂಶ ಹೀಗಿದೆ.

2015-16ರಲ್ಲಿ 1062,

2016-17ರಲ್ಲಿ 932,

2017-18ರಲ್ಲಿ 1052,

2018-19ರಲ್ಲಿ 868,

2019-20ರಲ್ಲಿ 885,

2020-21ರಲ್ಲಿ 647

ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಶರಣಾಗುವ ರೈತರ ಸಂಖ್ಯೆಯಲ್ಲಿಇಳಿಮುಖ ಕಂಡಿದೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದದ್ದೇ 2019ರ ಮಳೆಗಾಲದಲ್ಲಿ ,ಅಲ್ಲಿಂದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿದೆ. 50% ಮಳೆಯಾದರೂ ಸಾಕು ರೈತನಲ್ಲಿ ಆಶಾಭಾವ ಉಳಿದಿರುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ಜೊತೆಗೆ ಕೋವಿಡ್ ಬೇರೆ. ಈ ಅವಧಿಯಲ್ಲಿ ಸಾಲ ವಸೂಲಿಗೆ ಯಾರೂ ಮುಂದಾಗಲಿಲ್ಲ. ಒಂದು ವರ್ಷದ ಮೊದಲು ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲ ಮನ್ನಾ ಮಾಡಿದ್ದರು. ಇವೆಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯನವರ ಕಾಲದಲ್ಲಿ ಕಳಪೆ ಬಿತ್ತನೆ ಬೀಜ ವಿತರಣೆ ಮತ್ತು ಮಾರಾಟದ ವಿರುದ್ಧ ದೊಡ್ಡ ಕಾರ್ಯಾಚರಣೆ ನಡೆದು ಹತ್ತು ಸಾವಿರಕ್ಕೂ ಹೆಚ್ಚು ವರ್ತಕರು ಹಾಗೂ ಉತ್ಪಾದಕರ ವಿರುದ್ಧ ಕೃಷಿ ಇಲಾಖೆ ಮೊಕದ್ದಮೆ ದಾಖಲಿಸಿತು.  ಬಿಜೆಪಿ ರಾಜ್ಯಾಧ್ಯಕ್ಷರಿಗೆ ಇವೆಲ್ಲ ಮಾಹಿತಿ ಬೇಕಿಲ್ಲ. ಕೊಡುವವರಿದ್ದರೂ ಅಗತ್ಯವಿಲ್ಲ. ಒಟ್ಟಾರೆ ಕಾಂಗ್ರೆಸ್ ಮುಕ್ತ ಭಾರತ ಬೇಕು, ಮತ್ತೆ ಅವರೇ ಅದೇ ವೇದಿಕೆಯಲ್ಲಿ ಹೇಳಿದ್ದೇನಪ್ಪಾ ಅಂದರೆ ಸಿದ್ದರಾಮಯ್ಯನವರೇ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುತ್ತಿದ್ದಾರೆ ಅಂತ.

ಇಷ್ಟೆಲ್ಲ ಹೇಳಲು ನಳೀನ್ ಕುಮಾರ್ ಕಟೀಲ್ ಅವರ ಬುರುಡೆ ಭಾಷಣಕ್ಕಿಂತ ಹೆಚ್ಚು ಒತ್ತು ನೀಡಿದ್ದು ಮೊನ್ನೆ ಪ್ರಕಟವಾದ ಯುಪಿಎಸ್‍ಸಿ ಫಲಿತಾಂಶ.

ದೇಶವನ್ನು ಆಳುವ ಐಎಎಸ್ ಅಧಿಕಾರಿಗಳಾಗಲು ಯುಪಿಎಸ್‍ಸಿ ನಡೆಸುವ ಸಿವಿಲ್ ಸರ್ವೀಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಬೇಕು, ಸಂದರ್ಶನದಲ್ಲೂ ಗೆಲ್ಲಬೇಕು. ಹಾಗೆ ಗೆದ್ದವರಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರೇ ಮೂವರಿದ್ದಾರೆ. ಇವರಲ್ಲಿ 308ನೇ ಸ್ಥಾನ ಪಡೆದ ಎಂ. ಅರುಣಾ ಹೆಚ್ಚು ಗಮನ ಸೆಳೆದಿದ್ದು, ಮಾಧ್ಯಮಗಳಲ್ಲಿ ಈಕೆ ಹೆಚ್ಚು ಸಮಯ ಪಡೆದಿದ್ದಾರೆ. ಶಿರಾ ತಾಲೂಕಿನ ತಡಕಲೂರಿನ ಈಕೆ ನಾಲ್ವರು ಹೆಣ್ಣು ಮತ್ತು ಒಬ್ಬ ಗಂಡು ಮಗ ಇರುವ ದೊಡ್ಡ ಕುಟುಂಬದಲ್ಲಿ ಬೆಳೆದವರು. ಇಂಜಿನಿಯರಿಂಗ್ ಪದವೀಧರೆ, ಅಕ್ಕ ದಾದಿಯಾಗಿದ್ದಾರೆ, ಸೋದರನೂ ಇಂಜಿನಿಯರ್‍. ಒಂದಲ್ಲ ಎರಡಲ್ಲ ಐದು ಪ್ರಯತ್ನಗಳಲ್ಲಿ ಸೋತು, ಅಂತಿಮ ಹಾಗೂ ಆರನೇ ಪ್ರಯತ್ನದಲ್ಲಿ ಗೆಲುವು ಸಾಧಿಸಿದ್ದಾರೆ. ಈ ನಡುವೆ ಸಣ್ಣ ರೈತನಾಗಿದ್ದ ಈಕೆಯ ತಂದೆ ಮಕ್ಕಳನ್ನು ಓದಿಸಲು ಮಾಡಿದ ಸಾಲ ತೀರಿಸಲಾಗದೇ ಮೇಲೆ ಹೇಳಿದ ಎಲ್ಲ ರೈತರಂತೆ ಆತ್ಮಹತ್ಯೆಗೆ ಶರಣಾಗುತ್ತಾರೆ. ತನ್ನ ಅಪ್ಪನಂತೆ ಸಾವಿಗೆ ಶರಣಾದ ಇತರ ರೈತ ಕುಟುಂಬಗಳಿಗೆ ನೆರವಾಗಲು ಐಎಎಸ್ ಅಧಿಕಾರಿಯಾದರೆ ಸಾಧ್ಯ ಎಂಬ ನಂಬುಗೆಯಿಂದ ಇಂಥಾ ಬಿಕ್ಕಟ್ಟಿನಲ್ಲೂ ಅರುಣಾ ದೃತಿಗೆಡದೇ ಹಗಲಿರುಳೂ ಓದಿ ಸಾಧಿಸಿದ್ದಾರೆ. ಇಂಥಾ ಅರುಣಾ ನಮ್ಮ ರೈತರ ಕುಟುಂಬಗಳಿಗೆ ಬೆಳಕಾಗಲಿ.

*****

ವರ್ಷದಲ್ಲಿ ಮುನ್ನೂರು ದಿನ ಹಳ್ಳಿಗಳಲ್ಲಿ ಉಳಿದುಕೊಂಡು ಹಗಲೆಲ್ಲ ರೈತರ ಹೊಲಗಳಲ್ಲಿ ಕಾಲಾಡಿಸುತ್ತಾ, ಸಂಜೆ ರೈತರ ಮನೆಗಳ ಜಗುಲಿಗಳಲ್ಲಿ ಕೂತು ವಾಸ್ತವಿಕ ವರದಿಗಳನ್ನು ಬರೆಯುವ ಪಿ.ಸಾಯಿನಾಥ್ ರೈತರ ಆತ್ಮಹತ್ಯೆ ಕುರಿತು ಹೇಳುವ ಸಂಗತಿ ನಮ್ಮನ್ನೆಲ್ಲ ಬೆಚ್ಚಿ ಬೀಳಿಸುತ್ತದೆ.ಬರ, ನಗರೀಕರಣ, ರೈತರ ಆತ್ಮಹತ್ಯೆಗಳು ಭಾರತದ ರೈತರ ಸಂಖ್ಯೆಯನ್ನು ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಕುಗ್ಗಿಸುತ್ತಿದೆ ಎನ್ನುತ್ತಾರೆ ಸಾಯಿನಾಥ್. 2001ರಿಂದ ಈವರೆಗೆ ಸುಮಾರು 90 ಲಕ್ಷದಷ್ಟು ರೈತರು ವ್ಯವಸಾಯವನ್ನು ತೊರೆದಿದ್ದಾರೆ ಎಂದು ಭಾರತ ಸರ್ಕಾರದ ಮಾಹಿತಿಯೇ ಹೇಳುತ್ತದೆ. ಜೊತೆಗೆ ಖುದ್ದು ಉಳುವ, ಬಿತ್ತುವವರನ್ನು ರೈತರು ಎಂದು ಪರಿಗಣಿಸುವುದಾದಲ್ಲಿ ಇಂಥ 11.9 ಕೋಟಿ ಮಂದಿ ಭಾರತದಲ್ಲಿದ್ದಾರೆ. ಅಲ್ಲದೆ, ಸ್ವಂತಕ್ಕೆ ಭೂಮಿ ಇಲ್ಲದೇ ಅನ್ಯರ ಜಮೀನಗಳಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವ ಕೃಷಿ ಕಾರ್ಮಿಕರು 14.4 ಕೋಟಿ ಮಂದಿ ಇದ್ದಾರೆ. 2001ರಿಂದೀಚೆಗೆ ಈ ಕೃಷಿ ಕಾರ್ಮಿಕ ಸಂಖ್ಯೆ 4% ಹೆಚ್ಚಳ ಕಂಡಿದೆ. ಹೀಗೆ ರೈತರ ಪ್ರಮಾಣ ಕಡಿಮೆಯಾಗುತ್ತಿರುವುದು ರಾಷ್ಟ್ರೀಯ ದುರಂತ ಎನ್ನುತ್ತಾರೆ ಸಾಯಿನಾಥ್. ಹೀಗಾಗಿ ಸರಾಸರಿ ದಿನವೊಂದಕ್ಕೆ 2000 ರೈತರು ಕೃಷಿಯನ್ನು ತೊರೆಯುತ್ತಿದ್ದಾರೆ ಎನ್ನುತ್ತಾರೆ ಅವರು. ದೊಡ್ಡ ಸಂಖ್ಯೆಯ ರೈತರು ಅಪಾರ ಮೊತ್ತದ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೂ ಕೃಷಿಕರ ಸಂಖ್ಯೆ ಇಳಿಮುಖ ವಾಗುತ್ತಿರುವುದಕ್ಕೂ ನೇರ ಸಂಬಂಧವಿದೆ. ಹಾಗಾಗಿ 1995ರಿಂದೀಚೆಗೆ ಒಟ್ಟು ಒಂದೂವರೆ ಕೋಟಿ ರೈತರು ವ್ಯವಸಾಯವನ್ನು ತೊರೆದಿದ್ದಾರೆ. 2000ದಿಂದೀಚೆಗೆ ರೈತರ ಆತ್ಮಹತ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾರಂಭಿಸಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರ( ಎನ್‍ಸಿಆರ್‍ಬಿ)ದ ಪ್ರಕಾರ 1995ರಿಂದ 2009ರವರೆಗೆ ಎರಡೂವರೆ ಲಕ್ಷ ರೈತರು ಈ ದೇಶದಲ್ಲಿ ನೇಣು ಹಾಕಿಕೊಂಡೋ, ನೀರಿಗೆ ಬಿದ್ದೋ, ಕೀಟ ನಾಶಕಗಳನ್ನು ಕುಡಿದೋ ಸಾವಿಗೆ ಶರಣಾಗಿದ್ದಾರೆ. ಇದು ಮಾನವನ ಇತಿಹಾಸದಲ್ಲೇ ಅತಿ ದೊಡ್ಡ ಆತ್ಮಹತ್ಯೆಯ ಪ್ರಮಾಣ ಎನ್ನುತ್ತಾರೆ ಸಾಯಿನಾಥ್.

ಮತ್ತು ಇದು ಸರ್ಕಾರಗಳ ಕೃಷಿ ಇಲಾಖೆಗಳು ದಾಖಲಿಸಿರುವ ಲೆಕ್ಕ ಮಾತ್ರ, ಈ ಲೆಕ್ಕವನ್ನೂ ಮೀರಿದ ಸಂಖ್ಯೆಯ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿಯನ್ನು ನಿರಾಕರಿಸಲಾಗುವುದಿಲ್ಲ, ಕುಟುಂಬಗಳು ಆತ್ಮಹತ್ಯೆಯನ್ನು ಅಪಮಾನ ಎಂದು ಭಾವಿಸುವುದರಿಂದಲೂ  ಈ ಸಂಖ್ಯೆ ಕಡಿಮೆ ದಾಖಲಾಗುತ್ತದೆ. ಎನ್ನುತ್ತಾರೆ ತಜ್ಞರು.

ಕೋವಿಡ್ ಸಾವಿನಲ್ಲೂ ಹೀಗೆ ಆಗಿದೆ, ದೊಡ್ಡ ಮಟ್ಟದ ರಸ್ತೆ ಅಪಘಾತಗಳು ಹಾಗೂ ಕಾರ್ಖಾನೆಗಳಲ್ಲಿಅವಘಡಗಳು ಸಂಭವಿಸಿದಾಗಲೂ ಸಾವಿನ ಪ್ರಮಾಣ ಕಡಿಮೆ ದಾಖಲು ಮಾಡಲಾಗುತ್ತದೆ ಎಂಬುದು ನಿಮಗೂ ಗೊತ್ತು.

ರೈತರ ಆತ್ಮಹತ್ಯೆಗೆ ಕಾರಣವಾಗುವಅಂಶಗಳನ್ನು ನಮ್ಮ ಸಂಶೋಧಕರು ದಾಖಲಿಸಿದ್ದಾರೆ. ಅವುಗಳಲ್ಲಿ ಕೃಷಿ ಉತ್ಪನ್ನಗಳಿಗೆ ದೊರಕುವ ಅವೈಜ್ಞಾನಿಕ ಬೆಲೆಯೂ ಒಂದು. ಕೈಗಾರಿಕೋದ್ಯಮಿಗಳ ರೀತಿಯೇ ರೈತರು ತಮ್ಮ ಉತ್ಪನ್ನಗಳಿಗೆ ಗರಿಷ್ಟ ಮಾರಾಟ ಬೆಲೆ ನಿಗದಿಪಡಿಸಲು ಅವಕಾಶ ಬೇಕು ಎಂಬ ಬೇಡಿಕೆ ರಾಜ್ಯದ ರೈತ ಹೋರಾಟದ್ದಾಗಿತ್ತು. ರಾಜ್ಯದಲ್ಲಿ 1980ರ ದಶಕದಲ್ಲಿ ಶಿಖರ ತಲುಪಿದ ರೈತ ಚಳವಳಿ ಕ್ರಮೇಣ ದುರ್ಬಲಗೊಂಡಿತು. ರೈತರನ್ನೂ ಬಂಡವಾಳ ಮಾಡಿಕೊಂಡ ಕೆಲ ರೈತ ನಾಯಕರು ಬಂಡವಾಳಶಾಹಿಗಳಾದ ತಾಜಾ ಉದಾಹರಣೆ ಇರುವಾಗಲೇ, ವರ್ಷ ಪೂರ್ತಿ ದಿಲ್ಲಿ ಗಡಿಗಳಲ್ಲಿ ಹೆದ್ದಾರಿಗಳಲ್ಲಿ ಧರಣಿ ಕೂತು ಎದ್ದು ಹೋದ ರೈತರು ಆ ತಕ್ಷಣವೇ ಎದುರು ಬಂದ ಚುನಾವಣೆಯಲ್ಲಿ ಯಾವ ಸರ್ಕಾರದ ವಿರುದ್ಧ ಸತ್ಯಾಗ್ರಹ ಮಾಡಿದರೋ ಅದೇ ಸರ್ಕಾರದಲ್ಲಿರುವ ಪಕ್ಷದ ಪರ ಓಟು ಹಾಕಿದ್ದನ್ನು ಎಂಥಾ ವ್ಯಂಗ್ಯ ಎನ್ನುತ್ತೀರಿ. ಈ ಇಂಥಾ ಜನರೇ ಕಟೀಲರ ಬುರುಡೆ ಭಾಷಣಕ್ಕೆ ತಲೆದೂಗುವವರು.