ಡಾ ಬಿ ಆರ್‌ ಅಂಬೇಡ್ಕರ್‌ ಮನುಸ್ಮೃತಿಯನ್ನು ಏಕೆ ಸುಟ್ಟರು ?  

ಮೂಲ ಉಲ್ಲೇಖ : The Social Context of an Ideology, Ambedkar’s Social and Political Thought, MS Gore, Sage Publications

   ಡಾ ಬಿ ಆರ್‌ ಅಂಬೇಡ್ಕರ್‌ ಮನುಸ್ಮೃತಿಯನ್ನು ಏಕೆ ಸುಟ್ಟರು ?   

 

ಡಾ ಬಿ ಆರ್‌ ಅಂಬೇಡ್ಕರ್‌ ಮನುಸ್ಮೃತಿಯನ್ನು ಏಕೆ ಸುಟ್ಟರು ?

 ಕನ್ನಡಕ್ಕೆ  :

ನಾ ದಿವಾಕರ

 

 

88  ವರ್ಷಗಳ ಹಿಂದೆ (ಈಗ 95) ದಲಿತರ ಘನತೆ ಮತ್ತು ಸ್ವಾಭಿಮಾನದ ಚಳುವಳಿಯಲ್ಲಿ ಬೃಹತ್ತಾದ ಹೆಜ್ಜೆಗಳನ್ನು ಇಡಲಾಗಿತ್ತು. ಡಾ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಮುಂದಾಳತ್ವದಲ್ಲಿ, ಮಹಾರಾಷ್ಟ್ರದ ಕರಾವಳಿಯಲ್ಲಿರುವ ಕೊಂಕಣ ಪ್ರಾಂತ್ಯದ ಒಂದು ಸಣ್ಣ ಪಟ್ಟಣ ಮಹಾಡ್‌ ಇತಿಹಾಸವನ್ನೇ ಸೃಷ್ಟಿಸಿತ್ತು.  1927ರ ಡಿಸೆಂಬರ್‌ 25ರಂದು ನಡೆದ ಈ ಆಂದೋಲನದಲ್ಲಿ ಮೇಲ್ಜಾತಿ ಹಿಂದೂಗಳ ಆಧಿಪತ್ಯವನ್ನು ಸ್ಥಾಪಿಸುವ ಹಾಗೂ ದಲಿತರ-ಮ್ಲೇಚ್ಚರ (ಮಹಿಳೆಯನ್ನೂ ಸೇರಿದಂತೆ) ವಿರುದ್ಧ ಕ್ರೌರ್ಯ ಹಾಗೂ ಅಪಮಾನಗಳನ್ನು ಪಡಿಮೂಡಿಸುವ ಮನುಸ್ಮೃತಿಯನ್ನು ಸಾಂಕೇತಿಕ ದಹನ ಮಾಡುವ ಮೂಲಕ ಡಾ ಬಿ ಆರ್‌ ಅಂಬೇಡ್ಕರ್‌ ಮತ್ತು ಸಾವಿರಾರು ಸ್ವಯಂ ಸೇವಕರು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು.

 

ಮಹಾಡ್‌ ಸತ್ಯಾಗ್ರಹವನ್ನು (ಶಾಂತಿಯುತ ಪ್ರತಿಭಟನೆ ಮತ್ತು ಚಳುವಳಿ) ಆಯೋಜಿಸಿದ್ದ ಕಾರಣ, ದಲಿತರಿಗೆ (ಅಸ್ಪೃಶ್ಯರಿಗೆ), ಸಾರ್ವಜನಿಕರಿಗಾಗಿಯೇ ಇದ್ದ  ಮಹಾಡ್‌ (ಚಾವಡಾರ್)‌ ಕೆರೆಯ ನೀರನ್ನು ಕುಡಿಯುವ ಹಕ್ಕನ್ನು ಪ್ರತಿಪಾದಿಸುವುದೇ ಆಗಿತ್ತು. ಇದಕ್ಕೂ ಮುನ್ನ ಜಿಲ್ಲಾಡಳಿತದ ಅಧಿಸೂಚನೆಯ ಮೂಲಕ ಈ ಕೆರೆ ನೀರಿನ ಬಳಕೆ ಎಲ್ಲರಿಗೂ ಮುಕ್ತಗೊಳಿಸಲಾಗಿತ್ತು. ಈ ಆದೇಶದ ಹೊರತಾಗಿಯೂ, ಜಾತಿ ಆಧಿಪತ್ಯ ಮತ್ತು ವಿರೋಧದ ಪರಿಣಾಮ, ಶೋಷಿತ ವರ್ಗಗಳಿಗೆ ಕೆರೆಯ ನೀರನ್ನು ಬಳಸುವಂತಹ ಸನ್ನಿವೇಶ ಸೃಷ್ಟಿಯಾಗಿರಲಿಲ್ಲ. ಪ್ರತಿಭಟನೆಯ ಮುನ್ನಾದಿನ, ಮೇಲ್ಜಾತಿ ಬ್ರಾಹ್ಮಣರು ಸ್ಥಳೀಯ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ಅಸ್ಪೃಶ್ಯರು ಕೆರೆಯ ನೀರನ್ನು ಬಳಸದಂತೆ ತಡೆಹಿಡಿದಿದ್ದರು !

 

ಈ ಪ್ರತಿಭಟನೆಯನ್ನು ವಿಫಲಗೊಳಿಸಲು ಮೇಲ್ಜಾತಿ ಹಿಂದೂಗಳು ಅನೇಕ ರೀತಿಯ ಒತ್ತಡಗಳನ್ನು ಹೇರಲಾರಂಭಿಸಿದ್ದರು. ಉದ್ದೇಶಿತ ಸಭೆಯನ್ನು ನಡೆಸಲು ಅವಶ್ಯವಾಗಿದ್ದ ಸಾರ್ವಜನಿಕ ಮೈದಾನಗಳ ಪ್ರವೇಶಕ್ಕೂ ಹಲವು ಅಡೆತಡೆಗಳನ್ನು ಒಡ್ಡಲಾಗಿತ್ತು. ಅಂತಿಮವಾಗಿ, ಸ್ಥಳೀಯ ವ್ಯಕ್ತಿ ಶ್ರೀಯುತ ಫತ್ತೇಖಾನ್‌ ಪ್ರತಿಭಟನೆಗೆ ತಮ್ಮ ಖಾಸಗಿ ಮೈದಾನವನ್ನು ಬಿಟ್ಟುಕೊಟ್ಟು ಚಳುವಳಿಗೆ ತಮ್ಮ ಐಕಮತ್ಯವನ್ನೂ ಪ್ರದರ್ಶಿಸಿದ್ದರು. ಗ್ರಾಮದಲ್ಲಿ ಬಂಡಾಯದ ಸನ್ನಿವೇಶ ಇದ್ದುದಿಂದ ಕಾರ್ಯಕ್ರಮದ ಸಂಘಟಕರು ಆಹಾರ, ನೀರು ಮತ್ತಿತರ ಅವಶ್ಯ ವಸ್ತುಗಳ ಪೂರೈಕೆಗೆ ಸೂಕ್ತ ವ್ಯವಸ್ಥೆಗಳನ್ನೂ ಮಾಡಿಕೊಳ್ಳಬೇಕಾಗಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಸ್ವಯಂ ಸೇವಕರು ಪ್ರಮಾಣವಚನವನ್ನೂ ಸ್ವೀಕರಿಸಬೇಕಿತ್ತು. ಪ್ರಮಾಣವಚನದಲ್ಲಿ ಈ ಅಂಶಗಳು ಇದ್ದವು :-

  

  • ನಾನು ಜನ್ಮಾಧಾರಿತ ಚಾತುರ್ವರ್ಣವನ್ನು ನಂಬುವುದಿಲ್ಲ.
  • ನಾನು ಜಾತಿ ತಾರತಮ್ಯಗಳನ್ನು ನಂಬುವುದಿಲ್ಲ.
  • ಅಸ್ಪೃಶ್ಯತೆಯು ಹಿಂದೂ ಧರ್ಮಕ್ಕೆ ಒಂದು ಶಾಪವಾಗಿದ್ದು, ಅದನ್ನು ತೊಡೆದುಹಾಕಲು ನಾನು ಪ್ರಾಮಾಣಿಕವಾಗಿ ಅವಿರತ ಶ್ರಮಿಸುತ್ತೇನೆ.
  • ಕನಿಷ್ಠ ಎಲ್ಲ ಹಿಂದೂಗಳ ನಡುವೆ ಆಹಾರ ಮತ್ತು ಪಾನೀಯ ಸೇವನೆಗಳ ಬಗ್ಗೆ ಇರುವ ಯಾವುದೇ ರೀತಿಯ ನಿರ್ಬಂಧಗಳನ್ನು ನಾನು ಅನುಸರಿಸುವುದಿಲ್ಲ.
  • ದೇವಸ್ಥಾನಗಳು, ನೀರಿನ ಮೂಲಗಳು, ಶಾಲೆಗಳು ಮತ್ತು ಇತರ ಸಾರ್ವಜನಿಕ ಸೌಕರ್ಯಗಳಿಗೆ ಅಸ್ಪೃಶ್ಯರ ಸಮಾನ ಹಕ್ಕುಗಳು ಇರಬೇಕೆಂದು ಒತ್ತಾಯಿಸುತ್ತೇನೆ.

ಈ ಸನ್ನಿವೇಶದಲ್ಲಿ ಪ್ರತಿಭಟನೆಯ ಸ್ಥಳಕ್ಕೆ ಡಾ ಅಂಬೇಡ್ಕರ್‌ ಅವರ ಆಗಮನ ಸಂಚಲನ ಮೂಡಿಸಿತ್ತು. ಸಮಾಜದ ಇತರ ವಲಯಗಳಿಂದ ಪ್ರತಿಭಟನೆಯನ್ನು ವಿಫಲಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವ ಸಾಧ್ಯತೆಗಳು ನಿಚ್ಚಳವಾಗಿದ್ದವು. ಡಾ ಅಂಬೇಡ್ಕರ್‌ ಮುಂಬೈನಿಂದ ಪದ್ಮಾವತಿ ಎಂಬ ನಾವೆಯಲ್ಲಿ ದಾಸಗಾಂವ್‌ ಬಂದರಿನ ಮುಖಾಂತರ ಬಂದಿಳಿದಿದ್ದರು. ದೂರ ಪ್ರಯಾಣವಾದರೂ, ಧಾರಾಮತರ್‌ ರಸ್ತೆ ಮಾರ್ಗವನ್ನು ಬಿಟ್ಟು ಈ ಹಾದಿಯನ್ನು ಕ್ರಮಿಸಿದ್ದರು. ಇದು ಪೂರ್ವ ಯೋಜಿತ ಕಾರ್ಯತಂತ್ರವೂ ಆಗಿತ್ತು. ಏಕೆಂದರೆ ಬಸ್‌ ಮಾಲೀಕರು ಬಹಿಷ್ಕಾರ ಹೇರಿದ್ದಲ್ಲಿ, ನಾಯಕರು ಐದು ಮೈಲಿ ದೂರ ನಡೆದು ಮಹಾಡ್‌ ತಲುಪಬಹುದಿತ್ತು.

 

ಪ್ರತಿಭಟನಾಕಾರರು ನೆರೆದಿದ್ದ ಸ್ಥಳದಲ್ಲಿ ಡಾ ಅಂಬೇಡ್ಕರ್‌ ಆತ್ಮ ಜಾಗೃತಿ ಮಾಡುವಂತಹ ಭಾಷಣವನ್ನು ಮಾಡಿದರು. ಮುಂಚೆಯೇ ಮನುಸ್ಮೃತಿಯನ್ನು ದಹಿಸಲು ಬೇಕಾದ ಅಗ್ನಿಕುಂಡವನ್ನು ಸಿದ್ಧಪಡಿಸಲಾಗಿತ್ತು. ಇದನ್ನು ಸಿದ್ಧಪಡಿಸಲು ಆರು ಜನರು ಎರಡು ದಿನಗಳ ಕಾಲ ಶ್ರಮಪಟ್ಟಿದ್ದರು. ಆರು ಅಂಗುಲ ಆಳ, ಒಂದೂವರೆ ಅಡಿಯ ವಿಸ್ತೀರ್ಣದ ಹಳ್ಳವನ್ನು ತೋಡಿ ಅದರಲ್ಲಿ ಗಂಧದದ ಮರದ ತುಂಡುಗಳನ್ನು ಪೇರಿಸಲಾಗಿತ್ತು. ಅದರ ನಾಲ್ಕೂ ಮೂಲೆಗಳಲ್ಲಿ ಕಂಬಗಳನ್ನು ನೆಟ್ಟು, ಮೂರು ಬದಿಯಲ್ಲಿ ಬ್ಯಾನರ್‌ಗಳನ್ನು ತೂಗಿಹಾಕಲಾಗಿತ್ತು. ಈ ಬ್ಯಾನರ್‌ಗಳಲ್ಲಿ “ ಮನುಸ್ಮೃತಿಯ ಮಸಣ- ಅಸ್ಪೃಶ್ಯತೆಯನ್ನು ನಾಶಪಡಿಸಿ-ಬ್ರಾಹ್ಮಣವಾದವನ್ನು ಕೊನೆಗೊಳಿಸಿ ” ಎಂಬ ಸಂದೇಶವನ್ನು ಬಿಂಬಿಸಲಾಗಿತ್ತು.

1927ರ ಡಿಸೆಂಬರ್‌ 25, ಸಂಜೆಯ ವೇಳೆ ನಡೆದ ಸಮಾವೇಶದಲ್ಲಿ ಮನುಸ್ಮೃತಿಯನ್ನು ದಹನ ಮಾಡುವ ನಿರ್ಣಯವನ್ನು ಮಂಡಿಸಿದ್ದು ಅಂಬೇಡ್ಕರ್‌ ಅವರ ಸಹವರ್ತಿ, ಬ್ರಾಹ್ಮಣ ಸಮುದಾಯದ ಗಂಗಾಧರ್‌ ನೀಲಕಂಠ್‌ ಸಹಸ್ರಬುದ್ಧೆ ಅವರು. ಅದನ್ನು ಅನುಮೋದಿಸಿದವರು ಅಸ್ಪೃಶ್ಯರ ನಾಯಕರಾದ ಪಿ ಎನ್‌ ರಾಜಭೋಜ್‌ ಅವರು. ತದನಂತರ ಮನುಸ್ಮೃತಿಯನ್ನು ಉರುವಲಿನ ರಾಶಿಯ ಮೇಲಿಟ್ಟು ದಹಿಸಲಾಯಿತು. ಅಂಬೇಡ್ಕರರ ಬ್ರಾಹ್ಮಣ ಸಹವರ್ತಿ ಗಂಗಾಧರ್‌ ನೀಲಕಂಠ್‌ ಸಹಸ್ರಬುದ್ಧೆ ಮತ್ತು ಇತರ ಐದಾರು ದಲಿತ ಸಾಧುಗಳು ಈ ಕೆಲಸವನ್ನು ನೆರವೇರಿಸಿದರು. ಸಭಾಂಗಣದಂತಿದ್ದ ಪೆಂಡಾಲಿನಲ್ಲಿ ಮೋಹನ್‌ ದಾಸ್‌ ಕರಮಚಂದ್‌ ಗಾಂಧಿ ಅವರ ಭಾವಚಿತ್ರವನ್ನು ಮಾತ್ರ ಇಡಲಾಗಿತ್ತು. ಈ ಪ್ರಸಂಗವನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ, ಈ ಹಂತದಲ್ಲಿ ದಲಿತ ನಾಯಕತ್ವವು, ಡಾ ಅಂಬೇಡ್ಕರರನ್ನೂ ಒಳಗೊಂಡಂತೆ, ಗಾಂಧಿಯವರಿಂದ ದೂರವಾಗಿರಲಿಲ್ಲ ಎಂದು ಹೇಳಲಾಗುತ್ತದೆ.

 

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಂಬೇಡ್ಕರ್‌, ಚಳುವಳಿಯ ಮೂಲ ಉದ್ದೇಶ ಕೇವಲ ನೀರಿಗೆ ಹಕ್ಕು ಅಥವಾ ದೇವಸ್ಥಾನಕ್ಕೆ ಪ್ರವೇಶ ಅಥವಾ  ಸಹಜೀವಿತ್ವಕ್ಕೆ  ಇರುವ ತಡೆಗೋಡೆಗಳನ್ನು ತೊಡೆದುಹಾಕುವುದಷ್ಟೇ ಅಲ್ಲ. ಬದಲಾಗಿ ಮೂಲತಃ ಸಮಾಜದಲ್ಲಿ ಅಸಮಾನತೆಯನ್ನು ಪೋಷಿಸುವ ವರ್ಣ ವ್ಯವಸ್ಥೆಯನ್ನು ನಿರ್ನಾಮ ಮಾಡುವುದಾಗಿದೆ ಎಂದು ಹೇಳಿದರು. ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ ಫ್ರೆಂಚ್‌ ಕ್ರಾಂತಿಯ ಬಗ್ಗೆ ಪ್ರಸ್ತಾಪಿಸಿದ ಡಾ ಅಂಬೇಡ್ಕರ್‌ ಫ್ರಾನ್ಸ್‌ನ ಕ್ರಾಂತಿಕಾರಿ ಸಮಿತಿಯು ಘೋಷಿಸಿದ್ದ ಮಾನವ ಹಕ್ಕುಗಳ ಸನ್ನದುವಿನಲ್ಲಿರುವ ಮುಖ್ಯಾಂಶಗಳನ್ನು ಓದಿ ಹೇಳಿದರು. ತಾತ್ಕಾಲಿಕವಾದ ಮತ್ತು ಅಸಮಪರ್ಕವಾದ ಪರಿಹಾರಗಳನ್ನು ಅರಸುವುದರ ಅಪಾಯಗಳನ್ನು ಮನದಟ್ಟು ಮಾಡಿದ ಡಾ ಅಂಬೇಡ್ಕರ್‌, ಹೇಗೆ ರೋಮ್‌ನಲ್ಲಿ ಶ್ರೀಸಾಮಾನ್ಯರು ಶ್ರೀಮಂತ ಕುಲೀನರ ವಿರುದ್ಧ ಹೋರಾಟದಲ್ಲಿ ವಿಫಲವಾದುದಕ್ಕೆ ಮೂಲ ಕಾರಣವೆಂದರೆ ಅವರು ತಮ್ಮ ಆಯ್ಕೆಯ ಅನುಸಾರ ಒಂದು ನ್ಯಾಯ ಮಂಡಲಿಯನ್ನು ಪಡೆಯುವ ಉದ್ದೇಶ ಹೊಂದಿದ್ದರೇ ಹೊರತು, ಸಮಾಜವನ್ನು ಕುಲೀನರು ಮತ್ತು ಶ್ರೀಸಾಮಾನ್ಯರ ನಡುವೆ ವಿಭಜಿಸುವ ವ್ಯವಸ್ಥೆಯನ್ನು ನಿಷೇಧಿಸಲು ಆಗ್ರಹಿಸಲಿಲ್ಲ ಎಂದು ಹೇಳಿದ್ದರು.

 

 

ಅಸ್ಪೃಶ್ಯತೆಯ ಮೂಲ ಇರುವುದೇ ಅಂತರ್‌ ಜಾತಿ ವಿವಾಹಗಳ ನಿಷೇಧದಲ್ಲಿ, ಇದನ್ನು ಭಂಜಿಸಬೇಕು ಎಂದು ಅಂಬೇಡ್ಕರ್‌ ತಮ್ಮ ಭಾಷಣದಲ್ಲಿ ಹೇಳಿದ್ದರು. ತಮ್ಮ ಸಾಮಾಜಿಕ ಕ್ರಾಂತಿಯು ಶಾಂತಿಯುತವಾಗಿ ನಡೆಯಲು ಅವಕಾಶ ನೀಡುವಂತೆ ಮೇಲ್ವರ್ಣದವರಿಗೆ ಮನವಿ ಮಾಡಿಕೊಂಡಿದ್ದ ಅಂಬೇಡ್ಕರ್‌ ಶಾಸ್ತ್ರಗಳನ್ನು ಧಿಕ್ಕರಿಸಿ, ನ್ಯಾಯದ ತತ್ವಗಳನ್ನು ಒಪ್ಪಿಕೊಳ್ಳುವಂತೆ ಕೋರಿದ್ದರು. ತಮ್ಮ ಕಡೆಯಿಂದ ಶಾಂತಿಯನ್ನು ಕಾಪಾಡುವುದಾಗಿಯೂ ಭರವಸೆ ನೀಡಿದ್ದರು. ನಾಲ್ಕು ನಿರ್ಣಯಗಳನ್ನು ಅನುಮೋದಿಸಿ ಸಮಾನತೆಯ ಘೋಷಣೆಯನ್ನು ಮಾಡಲಾಗಿತ್ತು. ತದನಂತರ ಮನುಸ್ಮೃತಿಯನ್ನು ದಹನ ಮಾಡಲಾಗಿತ್ತು.

 

ಇಲ್ಲಿ ಚಳುವಳಿಯನ್ನು ವಿಸ್ತೃತಗೊಳಿಸುವ ಉದ್ದೇಶವನ್ನು ಗುರುತಿಸಬಹುದು. ಸಮಾನತೆಯನ್ನು ಸಾಧಿಸುವ ಅಂತಿಮ ಗುರಿ, ವರ್ಣ ವ್ಯವಸ್ಥೆಯನ್ನು ಕೊನೆಗೊಳಿಸುವ ಉದ್ದೇಶದ ಹಿನ್ನೆಲೆಯಲ್ಲಿ ಮಹಾಡ್‌ ಕೆರೆಯಿಂದ ನೀರು ಕುಡಿಯುವ ಕಾರ್ಯಕ್ರಮ ಸಾಂಕೇತಿಕ ಪ್ರತಿಭಟನೆ ಮಾತ್ರವಾಗಿತ್ತು. ತನ್ಮೂಲಕ ಘನತೆಗಾಗಿ ನಿರಂತರ ಹೋರಾಟ ನಡೆಸುವ ಉದ್ದೇಶ ಸ್ಪಷ್ಟವಾಗಿತ್ತು .

 

ಅಂಬೇಡ್ಕರ್‌ ಅವರ ಭಾಷಣದ ಮುಖ್ಯಾಂಶಗಳು ಹೀಗಿದ್ದವು :

 

“ ವರ್ಣನ ವ್ಯವಸ್ಥೆಯು ಚಾಲ್ತಿಯಲ್ಲಿರುವವರೆಗೂ ಬ್ರಾಹ್ಮಣರ ಉನ್ನತ ಸ್ಥಾನಮಾನಗಳು ನಿಶ್ಚಿತವಾಗಿರುತ್ತದೆ,,,,,ಜಪಾನ್‌ನ ಸಮುರಾಯ್‌ ಅವರ ದೇಶದ ಬಗ್ಗೆ ಹೊಂದಿರುವ ಪ್ರೀತಿಯಂತೆ ಬ್ರಾಹ್ಮಣರು ಹೊಂದಿಲ್ಲ. ಆದ್ದರಿಂದ ಸಾಮಾಜಿಕ ಸಮಾನತೆಯ ದೃಷ್ಟಿಯಿಂದ, ಜಪಾನ್‌ನ ರಾಷ್ಟ್ರೀಯ ಏಕತೆಗಾಗಿ, ಸಮುರಾಯ್‌ ತನ್ನ ವಿಶೇಷ ಸಾಮಾಜಿಕ ಸವಲತ್ತುಗಳನ್ನು ತ್ಯಾಗಮಾಡಿದಷ್ಟು ಸುಲಭವಾಗಿ ಅವರು ತ್ಯಾಗ ಮಾಡುವುದಿಲ್ಲ. ಇದನ್ನು ನಾವು ಬ್ರಾಹ್ಮಣೇತರರಿಂದಲೂ ನಿರೀಕ್ಷಿಸಲಾಗುವುದಿಲ್ಲ. ಮರಾಠರು ಮುಂತಾದ ಬ್ರಾಹ್ಮಣೇತರ ವರ್ಗಗಳು, ಅಧಿಕಾರದ ಗದ್ದುಗೆ ಹಿಡಿದಿರುವ ಮತ್ತು ಅಧಿಕಾರಹೀನರ ನಡುವಿನ ಮಧ್ಯವರ್ತಿ ವರ್ಗಗಳಾಗಿವೆ. ಅಧಿಕಾರ ಚಲಾಯಿಸುವವರು ಕೆಲವೊಮ್ಮೆಯಾದರೂ ತ್ಯಾಗಮಯಿಗಳಾಗಿ, ಉದಾರಿಗಳಾಗಿರುತ್ತಾರೆ. ಅಧಿಕಾರ ಹೀನರು ಆದರ್ಶಗಳನ್ನು ತತ್ವಗಳನ್ನು ಅನುಸರಿಸುತ್ತಾರೆ ಏಕೆಂದರೆ ಅವರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಾದರೂ ಸಹ ಸಾಮಾಜಿಕ ಕ್ರಾಂತಿಯ ಕಡೆಗೆ ಮುನ್ನಡೆಯಬೇಕಾಗುತ್ತದೆ. ಬ್ರಾಹ್ಮಣೇತರ ವರ್ಗಗಳು ಇವೆರಡು ವರ್ಗಗಳ ನಡುವೆ ಇರುತ್ತದೆ. ಅವರು ಉದಾರಿಗಳೂ ಆಗಿರುವುದಿಲ್ಲ ಅಥವಾ ಯಾವುದೇ ತತ್ವಗಳಿಗೆ ಬದ್ಧರಾಗಿರುವುದಿಲ್ಲ. ಆದ್ದರಿಂದ ಅವರು ಬ್ರಾಹ್ಮಣರೊಡನೆ ಸಮಾನತೆ ಸಾಧಿಸುವ ಬದಲಾಗಿ ಅಸ್ಪೃಶ್ಯರಿಂದ ದೂರ ಉಳಿಯಲು ಪ್ರಯತ್ನಿಸುತ್ತಿರುತ್ತಾರೆ. ಈ ವರ್ಗವು ಸಾಮಾಜಿಕ ಕ್ರಾಂತಿಯ ಹಂಬಲ ಹೊಂದಿರುವುದಿಲ್ಲ.,,,, ನಾವು ಈ ವಿಶಾಲ ಸಾಮಾಜಿಕ ಉದ್ದಿಶ್ಯವನ್ನು ಸಾಧಿಸಲೆಂದೇ ಹುಟ್ಟಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಬೇಕಿದೆ. ಅದೇ ನಮ್ಮ ಜೀವನದ ಧ್ಯೇಯ ಎಂದೂ ಭಾವಿಸಬೇಕಿದೆ. ಆ ಧಾರ್ಮಿಕ ಹಿರಿಮೆಯನ್ನು ಸಾಧಿಸಲು ಶ್ರಮಿಸೋಣ. ಅಷ್ಟೇ ಅಲ್ಲದೆ ಈ ಕೈಂಕರ್ಯ ( ಸಾಮಾಜಿಕ ಕ್ರಾಂತಿಯನ್ನು ಸಾಧಿಸುವುದು) ನಮ್ಮ ಹಿತದೃಷ್ಟಿಯಿಂದಲೇ ಇದ್ದು, ನಮ್ಮ ಮಾರ್ಗದಲ್ಲಿ ಎದುರಾಗುವ ಎಲ್ಲ ಅಡೆತಡೆಗಳನ್ನೂ ನಿವಾರಿಸಲು ಅರ್ಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ.”

 

ಪತ್ರಿಕೆಗಳಲ್ಲಿ ಮೇಲ್ಜಾತಿ ಹಿತಾಸಕ್ತಿಗಳ ಪ್ರಾತಿನಿಧ್ಯವೇ ಪ್ರಧಾನವಾಗಿದ್ದುದರಿಂದ, ಈ ಭಾಷಣದ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾದವು. ಡಾ ಅಂಬೇಡ್ಕರರನ್ನು ಒಂದು ಪತ್ರಿಕೆಯು ಭೀಮಾಸುರ ಎಂದು ಬಣ್ಣಿಸಿತ್ತು. ಸತ್ಯಾಗ್ರಹದ ನಂತರದಲ್ಲಿ ತಾವು ಬರೆದ ಹಲವಾರು ಲೇಖನಗಳಲ್ಲಿ ಅಂಬೇಡ್ಕರ್‌ ಮನುಸ್ಮೃತಿ ದಹನವನ್ನು ಸಮರ್ಥಿಸಿಕೊಂಡಿದ್ದರು. 1928ರ ಫೆಬ್ರವರಿ 3ರ ಬಹಿಷ್ಕೃತ ಭಾರತ ( ಅಂಬೇಡ್ಕರರ ಸ್ವಂತ ಪತ್ರಿಕೆ)  ಪತ್ರಿಕೆಯಲ್ಲಿ ಬರೆಯುತ್ತಾ ಡಾ ಅಂಬೇಡ್ಕರ್‌ ಮನುಸ್ಮೃತಿಯು ತಮ್ಮ ಸಾಮಾಜಿಕ ಸಮಾನತೆಯ ಆಲೋಚನೆಯನ್ನು ಕೊಂಚವೂ ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದ್ದರು. ಮನುಸ್ಮೃತಿಯನ್ನು ಓದಿದ ನಂತರ ತಮಗೆ ಅದು ಸಾಮಾಜಿಕ ಸಮಾನತೆಯನ್ನು ಬೆಂಬಲಿಸುವುದಿಲ್ಲ ಎಂದು ಖಾತ್ರಿಯಾಯಿತು ಎಂದು ಹೇಳಿದ್ದರು. ಒಂದು ವಸ್ತುವನ್ನು ದಹನ ಮಾಡುವುದೆಂದರೆ ಅದು ಪ್ರತಿನಿಧಿಸುವ ಚಿಂತನೆಯ ವಿರುದ್ಧ ಪ್ರತಿಭಟಿಸುವುದೇ ಆಗಿರುತ್ತದೆ. ಹೀಗೆ ಮಾಡುವ ಮೂಲಕ, ಅಂತಹ ಚಿಂತನೆಗಳನ್ನು ಅನುಸರಿಸುವವರು ನಾಚಿಕೆಯಿಂದ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳುವಂತಾಗಬೇಕು ಎಂದು ಅಂಬೇಡ್ಕರ್‌ ಪ್ರತಿಪಾದಿಸಿದ್ದರು. ಮನುಸ್ಮೃತಿಯನ್ನು ಆರಾಧಿಸುವ ಯಾವುದೇ ವ್ಯಕ್ತಿಯು ಅಸ್ಪೃಶ್ಯರ ಕಲ್ಯಾಣ ಮತ್ತು ಯೋಗಕ್ಷೇಮದಲ್ಲಿ ಆಸಕ್ತಿ ಹೊಂದಿರುತ್ತಾನೆ ಎಂದು ಅಪೇಕ್ಷಿಸುವುದು ವ್ಯರ್ಥ ಎಂದೂ ಹೇಳಿದ್ದ ಅಂಬೇಡ್ಕರ್ ಮನುಸ್ಮೃತಿಯ ದಹನವನ್ನು ಗಾಂಧಿ ಆಯೋಜಿಸಿದ್ದ ವಿದೇಶಿ ವಸ್ತ್ರಗಳ ದಹನಕ್ಕೆ ಹೋಲಿಸಿದ್ದರು. ‌ ವಿಶ್ವದಾದ್ಯಂತ ಶೋಷಣೆಯನ್ನು ಪ್ರತಿನಿಧಿಸುವ ಒಂದು ವಸ್ತುವಿನ ದಹನದ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗಿತ್ತು. ಇದು ಮನುಸ್ಮೃತಿ ದಹನದ ಮಹತ್ವ.

 

ಹಿಮ್ಮೆಟ್ಟಿಕೆಯ ತಂತ್ರೋಪಾಯ         

 

ಏತನ್ಮಧ್ಯೆ ಸಾರ್ವಜನಿಕ ಕೆರೆಯಿಂದ ಕುಡಿಯುವ ನೀರನ್ನು ಪಡೆಯುವ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆಯುವಂಥೆ ನ್ಯಾಯಾಲಯದ ಆದೇಶವಾದ ಕಾರಣ, ಅಂಬೇಡ್ಕರ್‌ ಆ ಸಂದರ್ಭದಲ್ಲಿ ಒಂದೆಡೆ ಸರ್ಕಾರ ಹಾಗೂ ಬ್ರಿಟೀಷ್‌ ಕಲೆಕ್ಟರ್‌ ಮತ್ತೊಂದೆಡೆ ಮೇಲ್ಜಾತಿಗಳ ಹಿತಾಸಕ್ತಿಯ ನಡುವೆ ಉಂಟಾದ ಗೊಂದಲವನ್ನು ಸಹ ವಿವರಿಸಿದ್ದರು.

 

1928ರ ಫೆಬ್ರವರಿ 3ರ ಬಹಿಷ್ಕೃತ ಭಾರತ ಪತ್ರಿಕೆಯಲ್ಲಿ “ ಸತ್ಯಾಗ್ರಹವನ್ನು ಏಕೆ ರದ್ದುಪಡಿಸಲಾಯಿತು” ಎಂಬ ಟಿಪ್ಪಣಿಯಲ್ಲಿ ಅಂಬೇಡ್ಕರ್‌ ಹೀಗೆ ಹೇಳಿದ್ದರು : “ಅಸ್ಪೃಶ್ಯರು ಒಂದೆಡೆ ಮೇಲ್ಜಾತಿಯ ಹಿಂದೂಗಳು ಮತ್ತೊಂದೆಡೆ ಸರ್ಕಾರದ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ.  ಇಬ್ಬರ ಮೇಲೆ ಒಂದೇ ವೇಳೆ ಆಕ್ರಮಣ ನಡೆಸುವ ಶಕ್ತಿ ತಮ್ಮಲ್ಲಿಲ್ಲ ಎಂದು ಒಪ್ಪಿಕೊಳ್ಳಲು ನಾಚಿಕೊಳ್ಳಬೇಕಿಲ್ಲ. ಅಸ್ಪೃಶ್ಯರ ನ್ಯಾಯಯುತವಾದ ಹಕ್ಕುಗಳನ್ನು ಮಾನವೀಯ ನೆಲೆಯಲ್ಲಿ ಸ್ವಪ್ರೇರಣೆಯಿಂದ  ಮಾನ್ಯ ಮಾಡಲು ಮೇಲ್ಜಾತಿ ಹಿಂದೂಗಳು ನಿರಾಕರಿಸಿದ್ದರಿಂದ ನಾವು ಸರ್ಕಾರದೊಡನೆ ಶಾಂತಿ ಒಪ್ಪಂದಕ್ಕೆ ಮುಂದಾದೆವು,,,,, ಮೇಲ್ಮಾತಿ ಹಿಂದೂಗಳು ನಡೆಸುವ ಸತ್ಯಾಗ್ರಹಕ್ಕೂ ಅಸ್ಪೃಶ್ಯರ ಸತ್ಯಾಗ್ರಹಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೇಲ್ಜಾತಿ ಹಿಂದೂಗಳು ಸತ್ಯಾಗ್ರಹ ನಡೆಸಿದರೆ ಅದು ಸರ್ಕಾರದ ವಿರುದ್ಧ ಇರುತ್ತದೆ ಅವರಿಗೆ ಸಮುದಾಯದ ಬೆಂಬಲ ಇರುತ್ತದೆ,,, ಅಸ್ಪೃಶ್ಯರು ಸತ್ಯಾಗ್ರಹ ನಡೆಸಿದರೆ ಎಲ್ಲ ಮೇಲ್ಜಾತಿ ಹಿಂದೂಗಳೂ ನಮ್ಮ ವಿರುದ್ಧ ನಿಲ್ಲುತ್ತಾರೆ ”.

 

ಅಸ್ಪೃಶ್ಯರ ಪ್ರತಿಭಟನೆಯು ಮಹಾಡ್‌ ಕೆರೆಗೇ ನಿಲ್ಲುವುದಿಲ್ಲ ಎಂದು ಅಂಬೇಡ್ಕರ್‌ ಸ್ಪಷ್ಟಪಡಿಸಿದ್ದರು. ಈ ಪ್ರತಿಭಟನೆಯನ್ನು ಹಮ್ಮಿಕೊಂಡ ಉದ್ದೇಶವೇ, ಅಸ್ಪೃಶ್ಯರು ತಾವೇ ನಿಗದಿಪಡಿಸಿಕೊಂಡಿದ್ದ ವಿಶಾಲ ಧ್ಯೇಯಗಳನ್ನು ಸಾದಿಸುವ ಸಲುವಾಗಿ ಆಗಿತ್ತು. ಈ ಹೋರಾಟವು ನಿರಂತರತೆಯನ್ನು ಕಾಪಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರವನ್ನು, ಸತ್ಯಾಗ್ರಹದಿಂದ ಉಂಟಾಗಬಹುದಾಗಿದ್ದ ನಷ್ಟ ಮತ್ತು ಘಾಸಿಯನ್ನು ಗಮನಿಸಿ ಹೇಳಬಹುದು. ಹಾಗೆಯೇ ಈ ನಷ್ಟ ಮತ್ತು ಘಾಸಿಯಿಂದ ಜನರನ್ನು ರಕ್ಷಿಸಲು ಇರುವ ಮಾರ್ಗಗಳನ್ನು ಗಮನಿಸಿ ಹೇಳಬಹುದಿತ್ತು. ಒಂದು ಮಹಾಡ್‌ ಸತ್ಯಾಗ್ರಹದಿಂದ ತಮಗೆ ಉಂಟಾದ ನಷ್ಟದಿಂದ ಹೊರಬರಲು ಅಸಾಧ್ಯವಾಗಲಿದೆ ಎಂದು ಜನರಿಗೆ ಮನದಟ್ಟಾದರೆ ಅವರು ಮತ್ತೊಂದು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಮುಂದಾಗುತ್ತಿರಲಿಲ್ಲ. ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

 

ಇಲ್ಲಿ ಮುಖ್ಯವಾಗುವುದು ವಿವೇಕ ಮತ್ತು ವಿವೇಚನೆಯ ಕ್ರಮ ಮತ್ತು ಹೋರಾಟದ ಕಾರ್ಯತಂತ್ರಗಳ ಬಗ್ಗೆ ಅಂಬೇಡ್ಕರ್‌ ಅವರ ಲೆಕ್ಕಾಚಾರದ ಧೋರಣೆ. ಹಾಗೂ ಅದನ್ನು ಹಾಗೆಯೇ ಪ್ರಸ್ತುತಪಡಿಸುವ ಸಮ್ಮತಿ. ಇದನ್ನು ಮರೆಮಾಚುವ ಅಥವಾ ಅಲ್ಲಗಳೆಯು್ ಪ್ರಶ್ನೆಯೇ ಉದ್ಭವಿಸುವುದಿಲ್ಲ.  ಸತ್ಯಾಗ್ರಹವನ್ನು ಹಿಂಪಡೆಯುವ ಮೂಲಕ ಮೇಲ್ಜಾತಿಯ ಹಿಂದೂಗಳಿಗೆ ಅಸ್ಪೃಶ್ಯ ನಾಯಕರನ್ನು ಹೀಯಾಳಿಸುವ ಅವಕಾಶ ನೀಡಿದಂತಾಗುತ್ತದೆ ಎಂಬ ಕಾಳಜಿಗೆ ಪ್ರತಿಕ್ರಯಿಸಿದ್ದ ಅಂಬೇಡ್ಕರ್‌, ತಾವು ಸತ್ಯಾಗ್ರಹವನ್ನು ಆರಂಭಿಸಿದ್ದು ಅವರ ಪ್ರಶಂಸೆ ಪಡೆಯುವ ಉದ್ದೇಶದಿಂದಲ್ಲ ಎಂದಷ್ಟೇ ಹೇಳಿದ್ದರು.

 

ಮೂಲ ಉಲ್ಲೇಖ : The Social Context of an Ideology, Ambedkar’s Social and Political Thought, MS Gore, Sage Publications

(ಈ ಲೇಖನ ಮೂಲತಃ 2016ರ ಜನವರಿ 26ರಂದು ಸಬ್‌ರಂಗ್‌ ಇಂಡಿಯಾ ಬ್ಲಾಗ್‌ನಲ್ಲಿ -–ಸಮಾನತೆಯೆಡೆಗೆ : ಡಾ ಬಾಬಾಸಾಹೇಬ್‌ ಅಂಬೇಡ್ಕರ್‌ 1927ರ ಡಿಸೆಂಬರ್‌ 25ರಂದು ಮನುಸ್ಮೃತಿಯನ್ನು ಏಕೆ ಸುಟ್ಟರು ? – ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿತ್ತು. 2017ರ ಡಿಸೆಂಬರ್‌ 24ರಂದು ಮರುಪ್ರಕಟವಾಗಿತ್ತು. ಈ ಲೇಖನದ ಯಥಾವತ್‌ ಅನುವಾದ ಇಲ್ಲಿದೆ.)

 

-೦-೦-೦-೦-